Tag: incident

  • ಮಂಡ್ಯ ಬಸ್ ದುರಂತದ ಕರಾಳ ನೆನಪು- ವಿದ್ಯಾರ್ಥಿಗಳನ್ನು ನೆನೆದು ಕಣ್ಣೀರಿಟ್ಟ ಸಹಪಾಠಿಗಳು

    ಮಂಡ್ಯ ಬಸ್ ದುರಂತದ ಕರಾಳ ನೆನಪು- ವಿದ್ಯಾರ್ಥಿಗಳನ್ನು ನೆನೆದು ಕಣ್ಣೀರಿಟ್ಟ ಸಹಪಾಠಿಗಳು

    ಮಂಡ್ಯ: ಜಿಲ್ಲೆಯಲ್ಲಿ ನಡೆದ ಬಸ್ ದುರಂತದಲ್ಲಿ ಮಡಿದ 30 ಜನರ ಕುಟುಂಬದಲ್ಲೀಗ ಬರೀ ನೋವು, ಕಣ್ಣೀರು, ಸಾಯುವ ಮುನ್ನ ಅವರು ಉಳಿಸಿಹೋದ ಒಂದೊಂದು ನೆನಪುಗಳು ಒಂದೊಂದು ಕಥೆಯಾಗಿ ತಮ್ಮವರನ್ನು ಕಾಡುತ್ತಿದ್ದು, ಮನಕಲಕುತ್ತಿದೆ.

    ನವೆಂಬರ್ 24 ರಾಜ್ಯದ ಪಾಲಿಗೆ ಅದರಲ್ಲೂ ಮಂಡ್ಯದ ಪಾಲಿಗೆ ಕರಾಳ ದಿನವಾಗಿದೆ. ಒಂದೆಡೆ ಅಂಬಿ ಇಹಲೋಕ ತ್ಯಜಿಸಿದರೆ, ಮತ್ತೊಂದೆಡೆ ಮಂಡ್ಯದ ಕನಗನಮರಡಿ ಗ್ರಾಮದಲ್ಲಿ ಬಸ್ ನಾಲೆಗೆ ಉರುಳಿ ಬರೋಬ್ಬರಿ 30 ಜನ ಜಲಸಮಾಧಿಯಾಗಿದ್ದರು. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು, ಪುಟಾಣಿ ಮಕ್ಕಳೆನ್ನದೇ ಯಮರಾಯ ಎಲ್ಲರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡು ಬಿಟ್ಟಿದ್ದ.

    ದುರಂತದಲ್ಲಿ ಕನಗನಮರಡಿ ಸರ್ಕಾರಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಕೂಡ ಮೃತಪಟ್ಟಿದ್ದರು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೃತ ವಿದ್ಯಾರ್ಥಿಗಳಿಗೆ ಸಂತಾಪ ಸಲ್ಲಿಸಿದ್ದರು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ನೆನೆದು ಕಣ್ಣೀರಿಟ್ಟರು.

    ದುರಂತದಲ್ಲಿ ಮಡಿದ 30 ಜನರ ಕುಟುಂಬದಲ್ಲೂ ಈಗ ನೀರವ ಮೌನ ದುಃಖ ಮಡುಗಟ್ಟಿದೆ. ಅದರಲ್ಲೂ ವದೇಸಮುದ್ರ ಗ್ರಾಮವೊಂದರಲ್ಲೇ ಎಂಟು ಜನ ಮೃತಪಟ್ಟಿದ್ದು, ಅವರನ್ನೆಲ್ಲ ಒಂದೇ ಜಾಗದಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಗಿದೆ. ದುರಂತದ ನಂತರ ಎಚ್ಚತ್ತಿರುವ ಸಾರಿಗೆ ಇಲಾಖೆ ದುರಂತ ನಡೆದ ಮಾರ್ಗದಲ್ಲಿ ಸಂಚರಿಸಲು ಎರಡು ಸರ್ಕಾರಿ ಬಸ್ ಬಿಟ್ಟಿದೆ.

    ದುರಂತದ ಮನೆಯಲ್ಲೀಗ ಬರೀ ಕಣ್ಣೀರು ನೋವು ಮಾತ್ರ ತುಂಬಿದೆ. ಇನ್ಮುಂದೆಯಾದರೂ ಈ ಬಗ್ಗೆ ಸರ್ಕಾರ ಎಚ್ಚೆತ್ತು ಕಟ್ಟುನಿಟ್ಟಿನ ಕಾನೂನು ರೂಪಿಸಿ ಅಮಾಯಕರ ಜೀವ ಬಲಿಯಾಗದಂತೆ ನೋಡಿಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ 3 ಕಾರ್ಮಿಕರ ಸಾವು – ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ

    ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ 3 ಕಾರ್ಮಿಕರ ಸಾವು – ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ

    ಬೆಂಗಳೂರು: ನಗರದಲ್ಲಿ ಮ್ಯಾನ್‍ಹೋಲ್ ದುರಂತ ಸಂಭವಿಸಿದ್ದು, ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೂವರು ಕಾರ್ಮಿಕರು ದಾರುಣ ಸಾವನ್ನಪ್ಪಿದ್ದಾರೆ.

    ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ದುರಂತದ ಬಳಿಕ ಎಚ್ಚೆತ್ತ ಜಲಮಂಡಳಿ, ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಮೇಯರ್ ಪದ್ಮಾವತಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಮೇಯರ್, ಜಲಮಂಡಳಿ ಕೆಲವೊಂದು ನಿರ್ದೇಶನಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ. ಆದ್ರೂ ನಿಯಮ ಉಲ್ಲಂಘನೆ ಮಾಡಲಾಗಿದೆ. ಇನ್ಮುಂದೆ ಇಂಥ ದುರ್ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.

    ನಡೆದಿದ್ದೇನು?: ನೀರಿನ ಸಂಪರ್ಕ ಸರಿಪಡಿಸಲು 15 ಅಡಿ ಆಳವಿದ್ದ ಮ್ಯಾನ್‍ಹೋಲ್‍ಗೆ ಇಬ್ಬರು ಕಾರ್ಮಿಕರು ಇಳಿದಿದ್ರು. ಈ ವೇಳೆ ಆಮ್ಲಜನಕದ ಕೊರತೆಯಿಂದ ಉಸಿರಾಟಕ್ಕೆ ತೊಂದರೆಯಾಗಿ ಕಿರುಚಾಡೋಕೆ ಶುರು ಮಾಡಿದ್ರು. ಆಗ ಟ್ರಾಕ್ಟರ್ ಡ್ರೈವರ್, ಕಾರ್ಮಿಕರನ್ನು ರಕ್ಷಿಸಲು ಮ್ಯಾನ್‍ಹೋಲ್‍ಗೆ ಇಳಿದು ಅವರೂ ಜೀವಬಿಟ್ಟಿದ್ದಾರೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ರೂ ಪ್ರಯೋಜನವಾಗ್ಲಿಲ್ಲ.

    ಆಧುನಿಕ ಯಂತ್ರಪೋಕರಣ ಬಳಸಬೇಕೆಂಬ ನಿಯಮ ಇದ್ರೂ ಜಲಮಂಡಳಿ ಅಧಿಕಾರಿಗಳ ಹೊಣೆಗೇಡಿತನಕ್ಕೆ ಮುಗ್ಧ ಜೀವಗಳು ಬಲಿಯಾಗಿವೆ. ಕೆಲಸ ಮಾಡಲು ಬಂದಿದ್ದ ಕಾರ್ಮಿಕರಿಗೆ ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ಒದಗಿಸದೇ ಇರುವುದು, 15 ಅಡಿ ಆಳದ ಮ್ಯಾನ್‍ಹೋಲ್‍ಗೆ ಇಳಿಯುವವರಿಗೆ ಆಮ್ಲಜನಕ ನೀಡದೇ ನಿರ್ಲಕ್ಷ್ಯ ವಹಿಸಿದ್ದೇ ಘಟನೆ ನಡೆಯಲು ಕಾರಣವಾಗಿದೆ. ಮೃತ ಕಾರ್ಮಿಕರು ಆಂಧ್ರ ಮೂಲದವರು ಎಂದು ಹೇಳಲಾಗಿದ್ದು, ಅವರ ಗುರುತಿನ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.

    ಈ ಸಂಬಂಧ ಬೈಯಪ್ಪನಳ್ಳಿ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ.