Tag: Inayat Khan

  • ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳನ್ನು ದತ್ತು ಪಡೆದ ಜಿಲ್ಲಾಧಿಕಾರಿ

    ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳನ್ನು ದತ್ತು ಪಡೆದ ಜಿಲ್ಲಾಧಿಕಾರಿ

    ಪಾಟ್ನಾ: ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸಿನಿಮಾ ಸ್ಟಾರ್ ಸೇರಿದಂತೆ ಇನ್ನೂ ಅನೇಕರು ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಇವರ ಜೊತೆ ಬಿಹಾರದ ಜಿಲ್ಲಾಧಿಕಾರಿಯೊಬ್ಬರು ಹುತಾತ್ಮ ಯೋಧರ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ.

    ಬಿಹಾರದ ಶೇಕ್‍ಪುರ್ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರು ಇಬ್ಬರು ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ. ಪಾಟ್ನಾದ ಹುತಾತ್ಮ ಯೋಧ ಸಂಜಯ್ ಕುಮಾರ್ ಸಿಂಗ್ ಮತ್ತು ಬಾಗಲ್ಪುರ್ ನ ರತನ್ ಕುಮಾರ್ ಠಾಕೂರ್ ಅವರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣವನ್ನು ಭರಿಸುವುದಾಗಿ ಇನಾಯತ್ ಖಾನ್ ಹೇಳಿದ್ದಾರೆ.

    ದತ್ತ ಪಡೆದಿರುವ ಎರಡು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ಅಗತ್ಯವಾದ ಹಣ ಒದಗಿಸುತ್ತೇನೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುತ್ತೇನೆ ಎಂದು ಇನಾಯತ್ ಖಾನ್ ಅವರು ಭರವಸೆ ನೀಡಿದ್ದಾರೆ. ಎರಡು ದಿನದ ಸಂಬಳವನ್ನು ನೀಡಿದ ಅವರು ಈ ಕುಟುಂಬಗಳಿಗೆ ನೆರವಾಗಲು ಒಂದು ದಿನದ ವೇತನವನ್ನು ದಾನ ಮಾಡುವಂತೆ ತಮ್ಮ ಜಿಲ್ಲೆಯ ಸರ್ಕಾರಿ ಸಿಬ್ಬಂದಿಯ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಎರಡು ಕುಟುಂಬಗಳಿಗೂ ಸಹ ಹಣವನ್ನು ಸಂಗ್ರಹಿಸಲು ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಮುಂದಿನ ತಿಂಗಳು ಮಾರ್ಚ್ 10ರ ಒಳಗೆ ಹಣ ನೀಡುವಂತೆ ಹೇಳಿದ್ದಾರೆ. ಅಷ್ಟರಲ್ಲಿ ಎಷ್ಟು ಹಣ ಸಂಗ್ರಹವಾಗಿರುತ್ತದೆಯೂ ಅಷ್ಟು ಹಣವನ್ನು ಸೈನಿಕರ ಕುಟುಂಬಕ್ಕೆ ನೀಡಲಾಗುವುದು ಎಂದು ಖಾನ್ ತಿಳಿಸಿದ್ದಾರೆ.

    ಈಗಾಗಲೇ ಸರ್ಕಾರ, ಸೇನೆ, ರಾಜಕಾರಣಿಗಳು ಹುತಾತ್ಮ ಯೋಧರ ಕುಟುಂಬದವರಿಗೆ ಪರಿಹಾರ  ನಿಧಿಯ ರೂಪದಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv