Tag: inauguration

  • ಸಮ್ಮಿಶ್ರ ಸರ್ಕಾರದ ಗೊಂದಲದಿಂದ ಅಭಿವೃದ್ಧಿಗೆ ಹಿನ್ನೆಡೆ ಆಗಲ್ಲ: ಪರಮೇಶ್ವರ್

    ಸಮ್ಮಿಶ್ರ ಸರ್ಕಾರದ ಗೊಂದಲದಿಂದ ಅಭಿವೃದ್ಧಿಗೆ ಹಿನ್ನೆಡೆ ಆಗಲ್ಲ: ಪರಮೇಶ್ವರ್

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಂದರೆ ಗೊಂದಲ ಸರ್ವೆ ಸಾಮಾನ್ಯ. ಅದನ್ನು ಬಗೆಹರಿಸಿಕೊಂಡು ಹೋಗಲು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಗೊಂದಲದಿಂದ ರಾಜ್ಯದ ಅಭಿವೃದ್ಧಿ ಹಿನ್ನೆಡೆಗೆ ಅವಕಾಶ ಕೊಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

    ನೆಲಮಂಗಲ ಸಮೀಪದ ಮಾದವಾರದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ‘ವಿಶ್ವ ಬಸ್ ಪ್ರದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ನಾವು ಐದು ವರ್ಷ ಪೂರ್ಣವಾಗಿ ಸರ್ಕಾರ ನಡೆಸುತ್ತೇವೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.

    ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದ ಅವರು, ಇನ್ನು ಸಿದ್ದರಾಮಯ್ಯ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕುರಿತು ಅವರನ್ನೇ ಹೇಳಬೇಕು. ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ನೀವೇ ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಿ, ಮುಖ್ಯಮಂತ್ರಿಯಾಗಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಡಿಸಿಎಂ ಪರಮೇಶ್ವರ್ ಆಫರ್ ಕೊಟ್ಟು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

    ಆಧುನಿಕ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಇಂತಹ ಪ್ರದರ್ಶನ ಸಹಾಯವಾಗುತ್ತದೆ. ಬೆಂಗಳೂರಿನಲ್ಲಿ ಪ್ರದರ್ಶನ ಆಯೋಜಿಸಿರುವುದರಿಂದ ಕೈಗಾರಿಕೋದ್ಯಮ ಬೆಳವಣಿಗೆಗೆ ಹಾಗೂ ಸಣ್ಣ ಉದ್ಯಮಿಗಳ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಡಾ.ಸುಧಾಮೂರ್ತಿ

    ದಸರ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಡಾ.ಸುಧಾಮೂರ್ತಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಈ ಬಾರಿ ಇನ್ಫೋಸಿಸ್ ಮಾಜಿ ಅಧ್ಯಕ್ಷ ನಾರಾಣಮೂರ್ತಿ ಅವರ ಪತ್ನಿ ಡಾ. ಸುಧಾ ಮೂರ್ತಿ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

    ಇಂದು ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಸಂಕಷ್ಟದಲ್ಲಿದೆ, ಕೆಲವೆಡೆ ಬರದ ವಾತಾವರಣ ಉಂಟಾಗಿದೆ. ಮಾಹಿತಿ ಪ್ರಕಾರ 65 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕಾದ ಸ್ಥಿತಿಯಿದೆ. ಹೀಗಾಗಿ ಈ ಬಾರಿ ವೈಭವೀಕರಿಸುವ ದಸರಾ ಸಾಧ್ಯವಿಲ್ಲ. ಬದಲಾಗಿ ಸಂಪ್ರದಾಯಿಕ ದಸರಾ ನಡೆಯಲಿದೆ. ಈ ಕುರಿತು ದಸರ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಉತ್ಸವದಲ್ಲಿ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಜೊತೆಗೆ ಪ್ರವಾಸಿಗರ ಆರ್ಕಷಿಸುವ ದಸರಾ ನಡೆಸಲಾಗುತ್ತದೆ. ಮೆರವಣಿಗೆಯ ಉದ್ದಕ್ಕೂ ಎಲ್‍ಸಿಡಿ ಪರದೆ ಹಾಕಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಏಷ್ಯಾ ಜ್ಯೂವೆಲ್ಸ್ ಫೇರ್-18′ ಆಕರ್ಷಕ ಆಭರಣಗಳ ಪ್ರದರ್ಶನ ಉದ್ಘಾಟಿಸಿದ ಹರ್ಷಿಕಾ ಪೂಣಚ್ಚ

    `ಏಷ್ಯಾ ಜ್ಯೂವೆಲ್ಸ್ ಫೇರ್-18′ ಆಕರ್ಷಕ ಆಭರಣಗಳ ಪ್ರದರ್ಶನ ಉದ್ಘಾಟಿಸಿದ ಹರ್ಷಿಕಾ ಪೂಣಚ್ಚ

    ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ಈ ಸಂದರ್ಭದಲ್ಲಿ ನಗರದಲ್ಲಿ ಆಭರಣ ಪ್ರದರ್ಶನವನ್ನು ಆಯೋಜಿಸಲಾಗಿದೆ. ನೂತನವಾಗಿ ಪ್ರಾರಂಭವಾಗಿರುವ ಪ್ರದರ್ಶನವನ್ನು ನಟಿ ಹರ್ಷಿಕಾ ಪೂಣಚ್ಚ ಅವರು ಉದ್ಘಾಟನೆ ಮಾಡಿದ್ದಾರೆ.

    `ಏಷ್ಯಾ ಜ್ಯೂವೆಲ್ಸ್ ಫೇರ್-18′ ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಕರ್ಷಕ ಆಭರಣಗಳ ಪ್ರದರ್ಶನವನ್ನು ಆಯೋಜಿಸಿದೆ. ಈ ಪ್ರದರ್ಶನವನ್ನು ನಗರದ ಶಾಂಗ್ರಿ-ಲಾ ಹೋಟೆಲ್‍ ನಲ್ಲಿ ಆಯೋಜಿಸಲಾಗಿದ್ದು, ನಟಿ ಹರ್ಷಿಕಾ ಪೂಣಚ್ಚ ಅವರು ಈ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. ನಟಿ ಹರ್ಷಿಕಾ ಕೂಡ ಉದ್ಘಾಟನೆ ಮಾಡಿ ಆಭರಣ ತೊಟ್ಟು ಮಿಂಚಿದ್ದು, ಎಲ್ಲರನ್ನು ಸೆಳೆದಿದ್ದಾರೆ.

    `ಏಷ್ಯಾ ಜ್ಯೂವೆಲ್ಸ್ ಫೇರ್-18′ ವಿಶೇಷ ಕಾರ್ಯಕ್ರಮವಾಗಿದ್ದು, ವಿಶಿಷ್ಟ ಮತ್ತು ಹೈ-ಎಂಡ್ ಬ್ರಾಂಡೆಡ್ ಚಿನ್ನ ಮತ್ತು ವಜ್ರಾಭರಣಗಳನ್ನು ಕೂಡಾ ಪ್ರದರ್ಶಿಸಲಿದೆ. ಜೊತೆಗೆ ಒಂದೇ ಸೂರಿನಡಿ ಬೇರೆ ಬೇರೆ ದೇಶದಿಂದ ಬಂದಿರುವ ಬಗೆ ಬಗೆಯ ವಿನ್ಯಾಸಗಳ ಆಭರಣವನ್ನು ಪ್ರದರ್ಶಿಸಲಾಗುತ್ತಿದೆ. ಈ ಪ್ರದರ್ಶನ ಇಂದಿನಿಂದ 19 ರವರೆಗೆ ನಡೆಯಲಿದೆ.


    ಈ ಪ್ರದರ್ಶನದಲ್ಲಿ ಚಿನ್ನಾಭರಣ, ವಜ್ರಾಭರಣ, ಪ್ಲಾಟಿನಂ ಆಭರಣ, ಸಾಂಪ್ರದಾಯಿಕ ಆಭರಣ, ವಿವಾಹದ ಆಭರಣ, ಅಮೂಲ್ಯ ಹರಳಿನ ಆಭರಣ, ಕುಂದನ್ ಮತ್ತು ಜಡೌ ಆಭರಣಗಳನ್ನು ನೋಡಬಹುದಾಗಿದೆ. ಈ ಪ್ರದರ್ಶನ ಬೆಂಗಳೂರು, ನವದೆಹಲಿ, ಮುಂಬೈ, ಜೈಪುರ, ಕೋಲ್ಕತಾಗಳ ಬ್ರಾಂಡೆಡ್ ಆಭರಣಕ್ಕೆ ಅತ್ಯುತ್ತಮ ವೇದಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲಿ ಎಷ್ಟು ಸುಭದ್ರ ಕಟ್ಟಡ ಇರುತ್ತದೆಯೋ, ಅಷ್ಟೇ ಸುಭದ್ರ ಕಾನೂನು ಇರುತ್ತದೆ: ನ್ಯಾ. ದೀಪಕ್ ಮಿಶ್ರಾ

    ದೇಶದಲ್ಲಿ ಎಷ್ಟು ಸುಭದ್ರ ಕಟ್ಟಡ ಇರುತ್ತದೆಯೋ, ಅಷ್ಟೇ ಸುಭದ್ರ ಕಾನೂನು ಇರುತ್ತದೆ: ನ್ಯಾ. ದೀಪಕ್ ಮಿಶ್ರಾ

    ಹುಬ್ಬಳ್ಳಿ: ದೇಶದಲ್ಲಿ ಎಷ್ಟು ಸುಭದ್ರವಾದ ಕಟ್ಟಡ ಇರುತ್ತವೆಯೋ, ಅಷ್ಟೇ ಸುಭದ್ರವಾದ ಕಾನೂನು ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾರವರು ಹೇಳಿಕೆ ನೀಡಿದ್ದಾರೆ.

    ಏಷ್ಯಾದಲ್ಲಿಯೇ ವಿಶೇಷವಾದ ಕೋರ್ಟ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಇದು ಕೇವಲ ಸಮಾರಂಭ ಅಲ್ಲ, ಇದು ಒಂದು ಕುಟುಂಬದ ಸಮಾರಂಭ. ನ್ಯಾಯದ ಮುಂದೆ ಎಲ್ಲರು ಸಮಾನರು, ಇಲ್ಲಿ ಬಡವ-ಶ್ರೀಮಂತ, ಮೇಲು-ಕೀಳೆಂಬ ಭಾವನೆ ಇಲ್ಲ. ಇದು ಎಲ್ಲರಿಗೂ ಒಂದೇ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ ಎಂದು ತಿಳಿಸಿದರು.

    ನ್ಯಾಯಾಲಯಕ್ಕೆ ಸುಭದ್ರ ಕಟ್ಟಡ ಎಂಬುದು ಕಟ್ಟಡ ಅಲ್ಲ. ಅದು ಸುಭದ್ರ ಕಾನೂನಿನ ಸಂಕೇತ. ಹೀಗಾಗಿ ದೇಶದಲ್ಲಿ ಎಷ್ಟು ಸುಭದ್ರ ಕಟ್ಟಡ ಇರುತ್ತದೆಯೋ, ಅಷ್ಟೇ ಸುಭದ್ರ ಕಾನೂನು ಇರುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಉತ್ತಮ ಕಾಳಜಿಯನ್ನು ಹೊಂದಿದ್ದಾರೆ. ರಾಜ್ಯದ ಎಲ್ಲಾ ನ್ಯಾಯಾಲಯಗಳು ಸ್ವಂತ ಕಟ್ಟಡಗಳು ಹೊಂದಲಿ ಎನ್ನುವ ಅವರ ಕಾಳಜಿಯು ನನಗೆ ತುಂಬಾ ಸಂತೋಷ ತಂದಿದೆ. ದೇಶದಲ್ಲಿ ಎಲ್ಲಾ ನ್ಯಾಯಾಲಯಗಳು ಉತ್ತಮ ಕಟ್ಟಡವನ್ನು ಹೊಂದಬೇಕು. ಇದರ ಜೊತೆಗೆ ಉತ್ತಮ ನ್ಯಾಯ ಕೊಡುವ ಕೆಲಸಗಳು ಆಗಬೇಕು ಎಂದರು.

    ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಇದು ಗಂಡು ಮೆಟ್ಟಿದ ನಾಡು, ನನಗೆ ಅಧಿಕಾರಿಗಳು ಇಂಗ್ಲೀಷಿನಲ್ಲಿ ಭಾಷಣ ಬರೆದುಕೊಟ್ಟಿದ್ದರು, ಆದರೆ ಮುಖ್ಯನ್ಯಾಯಾಧೀಶರುಗಳೇ ಕನ್ನಡದಲ್ಲಿ ಮಾತನಾಡಿದ ಮೇಲೆ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಈ ಕಟ್ಟಡಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ಈ ಹಿಂದೆ ಕಲಬುರಗಿ ಹಾಗೂ ಧಾರವಾಡದಲ್ಲಿ ಹೈಕೋರ್ಟ್ ಆಗಲು ನಾನು ಶ್ರಮಪಟ್ಟಿದ್ದೆ. ನನ್ನ ಈ ಹಿಂದಿನ ಇಪ್ಪತ್ತು ತಿಂಗಳ ಅವಧಿಯಲ್ಲಿ ನ್ಯಾಯಾಲಯಗಳಿಗೆ ಅತೀ ಹೆಚ್ಚು ಮೂಲಭೂತ ಸೌಕರ್ಯ ಕೊಟ್ಟಿದ್ದೆ ಎಂದು ಹೇಳಿದರು.

    ರಾಜ್ಯದಲ್ಲಿ ಕೇವಲ 20 ನ್ಯಾಯಾಲಯದ ಕಟ್ಟಡಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಮತ್ತು ನ್ಯಾಯಾಂಗ ಇಲಾಖೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಲು ನಾನು ಸಿದ್ದನಿದ್ದೇನೆ. ಫ್ಲೆಕ್ಸ್ ತೆರವು ಮಾಡಲು ನ್ಯಾಯಮೂರ್ತಿಗಳ ಆದೇಶ ನನಗೆ ಹೆಚ್ಚು ಸಂತೋಷ ಕೊಟ್ಟಿದೆ. ನಾವು ಹೇಳಿದರೆ ಅಧಿಕಾರಿಗಳು ಕೇಳುವುದಿಲ್ಲ, ಆದರೆ ಕೋರ್ಟ್ ಆದೇಶ ನೀಡಿದಾಗ ಅಧಿಕಾರಿಗಳು ಎದ್ದು-ಬಿದ್ದು ಕೆಲಸ ಮಾಡುತ್ತಾರೆ ಎಂದರು.

    ನಮ್ಮ ಸರ್ಕಾರ ಅಖಂಡ ಕರ್ನಾಟಕದ ಸರ್ಕಾರವಾಗಿದೆ. ಯಾವುದೇ ಮಾತಿಗೂ ಕಿವಿ ಕೊಡಬೇಡಿ. ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿದಾಗ ನಮ್ಮ ಸರ್ಕಾರದ ನಿಲುವನ್ನು ನಿಮ್ಮ ಮುಂದಿಡುತ್ತೇನೆ ಎಂದು ಅವರು ತಿಳಿಸಿದರು.

    ಹುಬ್ಬಳ್ಳಿ ನ್ಯಾಯಾಲಯದ ವಿಶೇಷವೇನು?
    122 ಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಕಟ್ಟಡವು ಸುಮಾರು 5 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ. ನ್ಯಾಯಾಲಯದ ಕಟ್ಟಡವು ಒಟ್ಟು 7 ಮಹಡಿಗಳನ್ನು ಹೊಂದಿದ್ದು, ಎಲ್ಲಾ ಕಟ್ಟಡವು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಒಟ್ಟು ಏಳು ಅಂತಸ್ತಿನ ಕಟ್ಟದಲ್ಲಿ ಮೊದಲೆರಡು ಅಂತಸ್ತುಗಳನ್ನು ನ್ಯಾಯಧೀಶರು ಹಾಗೂ ವಕೀಲರಿಗೆ ಪಾರ್ಕಿಂಗ್ ಗೆ ಮೀಸಲಿಡಲಾಗಿದೆ. ಮೊದಲ ಮಹಡಿಯಲ್ಲಿ ಹಾಲ್ ನಲ್ಲಿ ವಾದಿ – ಪ್ರತಿವಾದಿ ಹಾಗೂ ಸರಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.

    ಮೊದಲನೇ ಮಹಡಿಯಲ್ಲಿ 3 ಕೋರ್ಟ್, ಒಂದು ಕಾನ್ಫರೆನ್ಸ್ ಹಾಲ್, ಇನ್ನುಳಿದ 4 ಮಹಡಿಗಳಲ್ಲಿ ತಲಾ 4 ನ್ಯಾಯಾಲಯಗಳಿದ್ದು, 1 ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ, 4 ಸಿವಿಲ್ ಜ್ಯೂನಿಯರ್ ಡಿವಿಜನ್, 2 ಜೆಎಂಎಫ್‍ಸಿ, 3 ಸಿನಿಯರ್ ಡಿವಿಜನ್ ಕೋರ್ಟ್‍ಗಳಿವೆ. ಅಲ್ಲದೇ ದೊಡ್ಡದಾಗ ಕಾನ್ಫರೆನ್ಸ್ ಹಾಲ್, 2 ಕೋರ್ಟ್‍ಗಳಲ್ಲಿ ಬಾರ್ ಅಸೋಸಿಯೇಶನ್, ಲೈಬ್ರರಿ, ಮಹಿಳಾ ವಕೀಲರ ಕೊಠಡಿಗಳು ಇವೆ.

    ನ್ಯಾಯಾಧೀಶರ ಧ್ವನಿ ಕೇಳಿಸಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ. ಸಂಪೂರ್ಣ ನ್ಯಾಯಾಲಯದ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ. ಕೈದಿಗಳಿಗೆ ಲಾಕಪ್ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಂಪೂರ್ಣ ನ್ಯಾಯಾಲಯದಲ್ಲಿ ಒಟ್ಟು ಒಂದು ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ನ್ಯಾಯಾಲಯದಲ್ಲಿ ಅತ್ಯಾಧುನಿಕ ಕ್ಯಾಂಟೀನ್ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಮಹಿಳೆಯರ ಅನುಕೂಲಕ್ಕಾಗಿ ಮಗುವಿಗೆ ಹಾಲುಣಿಸುವ ಕೊಠಡಿಯನ್ನು ಸಹ ನಿರ್ಮಿಸಲಾಗಿದೆ.

    ಮುನ್ನೆಚ್ಚರಿಕಾ ಕ್ರಮಗಳು:
    ಕಟ್ಟಡವು ಭೂಕಂಪ ನಿರೋಧಕ ಶಕ್ತಿಯನ್ನು ಹೊಂದಿದ್ದು, ಭೂಮಿ ಕಂಪನದ ಮುನ್ಸೂಚನೆಯನ್ನು ತಿಳಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಲ್ಲದೇ ಸಂಕೀರ್ಣದ ಯಾವುದೇ ಭಾಗದಲ್ಲಿ ಹೊಗೆ ಕಾಣಿಸಿಕೊಂಡರೆ, ತಕ್ಷಣವೇ ಮುನ್ಸೂಚನೆನೀಡುವ ವ್ಯವಸ್ಥೆ ಸಿದ್ದಪಡಿಸಲಾಗಿದೆ. ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಫೈರ್‍ವಾಟರ್‍ಗಳು ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುವಂತೆ ಸಿದ್ಧಪಡಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಏಷ್ಯಾದಲ್ಲಿಯೇ ವಿಶೇಷವಾದ ಕೋರ್ಟ್ ಎಂದು ಹುಬ್ಬಳ್ಳಿಯ ನ್ಯಾಯಾಲಯ ಸಂಕೀರ್ಣ ಗುರುತಿಸಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಹುಬ್ಬಳ್ಳಿಯಲ್ಲಿ ಹೈಟೆಕ್ ಕೋರ್ಟ್ ಸಂಕೀರ್ಣ ಉದ್ಘಾಟನೆ

    ಹುಬ್ಬಳ್ಳಿಯಲ್ಲಿ ಹೈಟೆಕ್ ಕೋರ್ಟ್ ಸಂಕೀರ್ಣ ಉದ್ಘಾಟನೆ

    ಹುಬ್ಬಳ್ಳಿ: ವಾಣಿಜ್ಯ ನಗರಿಯ ಹೈಟೆಕ್ ಕೋರ್ಟ್ ಸಂಕೀರ್ಣ ಉದ್ಘಾಟನೆ ಮಾಡಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಇಂದು ಆಗಮಿಸಿದ್ದಾರೆ.

    ದೆಹಲಿಯಿಂದ ವಿಶೇಷ ವಿಮಾನ ನಿಲ್ದಾಣದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಸಿಜೆ ದೀಪಕ್ ಮಿಶ್ರಾ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೇ ಗೇಟ್ ನಿಂದ ನಗರದ ಖಾಸಗಿ ಹೋಟೆಲ್‍ಗೆ ಆಗಮಿಸಿದ್ದಾರೆ. ದಿನೇಶ್ ಮಾಹೇಶ್ವರಿ ಹಾಗೂ ಜಿಲ್ಲಾಡಳಿತದಿಂದ ದೀಪಕ್ ಮಿಶ್ರಾರವರನ್ನು ರಾಜ್ಯ ಉಚ್ಛ ನ್ಯಾಯಲಯದ ನ್ಯಾಯಮೂರ್ತಿ ಸ್ವಾಗತಿಸಿ ಬರಮಾಡಿಕೊಂಡರು.

    ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ದೀಪಕ್ ಮಿಶ್ರಾ ಜೊತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಮೋಹನ್ ಶಾಂತನಗೌಡರ್, ಎಸ್ ಅಬ್ದುಲ್ ನಜೀರ್ ಕೂಡಾ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದಾರೆ.  ಇದನ್ನು ಓದಿ: ಏಷ್ಯಾದ ವಿಶಿಷ್ಟ ನ್ಯಾಯಾಲಯ ಸಂಕೀರ್ಣ ಭಾನುವಾರ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಏಷ್ಯಾದ ವಿಶಿಷ್ಟ ನ್ಯಾಯಾಲಯ ಸಂಕೀರ್ಣ ಭಾನುವಾರ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ

    ಏಷ್ಯಾದ ವಿಶಿಷ್ಟ ನ್ಯಾಯಾಲಯ ಸಂಕೀರ್ಣ ಭಾನುವಾರ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆ

    ಹುಬ್ಬಳ್ಳಿ: ಏಷ್ಯಾ ಖಂಡದಲ್ಲಿಯೇ ವಿಶಿಷ್ಟ ಮತ್ತು ವಿಭಿನ್ನವಾದ ನ್ಯಾಯಾಲಯ ಸಂಕೀರ್ಣವು ಭಾನುವಾರ ನಗರದ ವಿದ್ಯಾನಗರದ ತಿಮ್ಮ ಸಾಗರದಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.

    ಭಾನುವಾರ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮೀಶ್ರಾರವರು ನೂತನ ನ್ಯಾಯಾಲಯ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಸೇರಿದಂತೆ 30 ನ್ಯಾಯಾಧೀಶರುಗಳು ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಕಟ್ಟಡದ ವಿಶೇಷತೆ ಏನು?
    ಸುಮಾರು 5 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಸುವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣಗೊಂಡಿದೆ. ನ್ಯಾಯಾಲಯದ ಕಟ್ಟಡವು ಒಟ್ಟು 7 ಮಹಡಿಗಳನ್ನು ಹೊಂದಿದ್ದು, ಎಲ್ಲಾ ಕಟ್ಟಡವು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಒಟ್ಟು ಏಳು ಅಂತಸ್ತಿನ ಕಟ್ಟದಲ್ಲಿ ಮೊದಲೆರಡು ಅಂತಸ್ತುಗಳನ್ನು ನ್ಯಾಯಧೀಶರು ಹಾಗೂ ವಕೀಲರಿಗೆ ಪಾರ್ಕಿಂಗ್ ಗೆ ಮೀಸಲಿಡಲಾಗಿದೆ. ಮೊದಲ ಮಹಡಿಯಲ್ಲಿ ಹಾಲ್ ನಲ್ಲಿ ವಾದಿ- ಪ್ರತಿವಾದಿ ಹಾಗೂ ಸರಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.

    ನ್ಯಾಯಾಧೀಶರ ಧ್ವನಿ ಕೇಳಿಸಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ. ಸಂಪೂರ್ಣ ನ್ಯಾಯಾಲಯದ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ. ಪ್ರತಿ ಮಹಡಿಯಲ್ಲಿ 4 ನ್ಯಾಯಾಲಯ ಕಲಾಪದ ಸಭಾಂಗಣಗಳನ್ನು ಹೊಂದಿದೆ. ಅಲ್ಲದೇ ಕೈದಿಗಳಿಗೆ ಲಾಕಪ್ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಂಪೂರ್ಣ ನ್ಯಾಯಾಲಯದಲ್ಲಿ ಒಟ್ಟು ಒಂದು ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ನಾಯಾಲಯದಲ್ಲಿ ಅತ್ಯಾಧುನಿಕ ಕ್ಯಾಂಟೀನ್ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಮಹಿಳೆಯರ ಅನುಕೂಲಕ್ಕಾಗಿ ಮಗುವಿಗೆ ಹಾಲುಣಿಸುವ ಕೊಠಡಿಯನ್ನು ಸಹ ನಿರ್ಮಿಸಲಾಗಿದೆ.

    ಈ ಮೂಲಕ ದೇಶಮಾತ್ರವಲ್ಲದೇ ಏಷ್ಯಾದಲ್ಲಿಯೇ ವಿಶಿಷ್ಟ ಕೋರ್ಟ್ ಎನ್ನುವ ಹೆಸರಿಗೆ ಹುಬ್ಬಳ್ಳಿಯ ನ್ಯಾಯಾಲಯ ಪಾತ್ರವಾಗಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕ ನೋಯ್ಡಾದಲ್ಲಿ ಲೋಕಾರ್ಪಣೆ – ವಿಶೇಷತೆ ಏನು? ಎಷ್ಟು ಮಂದಿಗೆ ಉದ್ಯೋಗ ಸಿಗುತ್ತೆ?

    ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕ ನೋಯ್ಡಾದಲ್ಲಿ ಲೋಕಾರ್ಪಣೆ – ವಿಶೇಷತೆ ಏನು? ಎಷ್ಟು ಮಂದಿಗೆ ಉದ್ಯೋಗ ಸಿಗುತ್ತೆ?

    ಲಕ್ನೋ: ಪ್ರತಿಷ್ಠಿತ ಸ್ಯಾಮ್‍ಸಂಗ್ ಕಂಪೆನಿಯು ಜಗತ್ತಿನಲ್ಲಿಯೇ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿಯನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಿರ್ಮಿಸಿದ್ದು, ಇಂದು ಇದರ ಉದ್ಘಾಟನೆಯು ಸೋಮವಾರ ಅದ್ಧೂರಿಯಾಗಿ ನಡೆಯಿತು.

    ನೋಯ್ಡಾದ 81ನೇ ವಿಭಾಗದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಸ್ಯಾಮ್‍ಸಂಗ್ ಎಲೆಕ್ಟ್ರಾನಿಕ್ಸ್ ಫೆಸಿಲಿಟೀಸ್ ಘಟಕ ತಲೆ ಎತ್ತಿದೆ. ಈ ಘಟಕದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್-ಜಿ-ಇನ್ ರವರು ನೆರವೇರಿಸಿದರು.

    https://twitter.com/PIB_India/status/1016308942534656000

    ಏನಿದರ ವಿಶೇಷತೆ?
    ಪ್ರಪಂಚದಲ್ಲಿಯೇ ಅತಿದೊಡ್ಡ ಎಲೆಕ್ಟ್ರಾನಿಕ್ ಉಪಕರಣ ಉತ್ಪಾದಕ ಘಟಕವಾಗಿದ್ದು, ಸುಮಾರು 35 ಎಕರೆ ಪ್ರದೇಶದಲ್ಲಿ ತಯಾರಿಕಾ ಘಟಕ ನಿರ್ಮಾಣವಾಗಿದೆ. ಈ ಘಟಕದಲ್ಲಿ ಉತ್ಪನ್ನಗಳಾದ, ಸ್ಮಾರ್ಟ್ ಫೋನ್, ಏರ್ ಕಂಡೀಷನರ್, ರೆಫ್ರಿಜರೇಟರ್, ಫ್ಲ್ಯಾಟ್ ಪ್ಯಾನೆಲ್ ಟಿವಿ, ವಾಷಿಂಗ್ ಮೆಷಿನ್ ಹಾಗೂ ಅನೇಕ ಉತ್ಪನ್ನಗಳು ತಯಾರಾಗಲಿದೆ.

    ಪ್ರತಿ ತಿಂಗಳಿಗೆ ಸುಮಾರು 1.2 ಕೋಟಿ ಮೊಬೈಲ್ ಫೋನ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಪ್ರಸ್ತುತವಾಗಿ ಸ್ಯಾಮ್‍ಸಂಗ್ ಕಂಪನಿಯು ಭಾರತದಲ್ಲಿ 67 ಲಕ್ಷ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ.

    ಭಾರತದಲ್ಲಿ ಸ್ಯಾಮ್‍ಸಂಗ್ ಹಿನ್ನೆಲೆ ಏನು?
    ಮೂಲತಃ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಸಂಸ್ಥೆ 1995 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಿತ್ತು. ನೋಯ್ಡಾ ಹಾಗೂ ಪೆರಂಬದೂರ್ ನಲ್ಲಿ ತನ್ನ ಎರಡು ಉತ್ಪಾದನಾ ಘಟಕಗಳನ್ನು ನಿರ್ಮಿಸಿತ್ತು.

    1997 ರಲ್ಲಿ ಟಿವಿ, 2003 ರಲ್ಲಿ ರೆಫ್ರೇಜರೇಟರ್, 2005 ರಲ್ಲಿ ಫ್ಲ್ಯಾಟ್ ಟಿವಿ, 2007ರಲ್ಲಿ ಮೊಬೈಲ್ ಫೋನ್‍ಗಳನ್ನು ತಯಾರಿಸಿ ಹಾಗೂ 2012 ರಲ್ಲಿ ಸ್ಯಾಮ್‍ಸಂಗ್ ನೋಯ್ಡಾ ಘಟಕವು ಗೆಲಾಕ್ಸಿ ಎಸ್3 ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಭಾರತದಲ್ಲಿ ಸುಮಾರು 70 ಸಾವಿರ ಜನರಿಗೆ ಉದ್ಯೋಗ ನೀಡಿರುವ ಸ್ಯಾಮ್‍ಸಂಗ್ ಹೊಸ ಘಟಕದಿಂದ 35 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ.

    2017ರ ಜೂನ್ ನಲ್ಲಿ ನೋಯ್ಡಾದ ಘಟಕದ ಮೇಲೆ ಸುಮಾರು 4,915 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ದಕ್ಷಿಣ ಕೊರಿಯಾ ಮುಂದಾಗಿತ್ತು. ಈ ವರ್ಷ ಹೊಸ ಘಟಕವು ಹೂಡಿಕೆಗಿಂತ ದುಪ್ಪಟ್ಟು ವೆಚ್ಚದಲ್ಲಿ ನಿರ್ಮಾಣವಾಗಿದೆ.

    ಸದ್ಯ ಕಂಪನಿಯು ಭಾರತದಲ್ಲಿ ಸುಮಾರು 10%ರಷ್ಟು ಸಾಧನಗಳನ್ನು ತಯಾರಿಕೆ ಮಾಡುತ್ತಿದೆ. ಮುಂದಿನ ಮೂರು ವರ್ಷದಲ್ಲಿ ಅಂದಾಜು 50% ರಷ್ಟು ತಯಾರಿಕೆ ಮಾಡುವ ಗುರಿಯನ್ನು ಹೊಂದಿದೆ. ಸ್ಯಾಮ್‍ಸಂಗ್ ಇಂಡಿಯಾ ಆರ್ಥಿಕ ವರ್ಷ 2016-17 ರಲ್ಲಿ ಶೇ. 27ರಷ್ಟು ಮೊಬೈಲ್ ವ್ಯವಹಾರ ನಡೆಸಿದೆ.

    ಸ್ಯಾಮ್‍ಸಂಗ್ ಘಟಕವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ದಕ್ಷಿಣ ಕೊರಿಯಾ ಅಧ್ಯಕ್ಷರು ಹಾಗೂ ಸ್ಯಾಮ್ಸಂಗ್ ಮುಖ್ಯಸ್ಥರಾದ ಎಚ್.ಸಿ.ಹಾಂಗ್‍ರವರು ಅಭಿನಂದನೆ ಸಲ್ಲಿಸಿ, ಅತಿದೊಡ್ಡ ಮೊಬೈಲ್ ಉತ್ಪಾದಕ ಘಟಕವನ್ನು ಭಾರತದಲ್ಲಿ ಸ್ಥಾಪಿಸಿದಕ್ಕೆ ಸಂತಸ ವ್ಯಕ್ತಪಡಿಸಿದರು. ಭಾರತದ ಇಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿಯೇ ಮತ್ತೊಮ್ಮೆ ಗುರುತಿಸಿಕೊಳ್ಳುವಂತಾಗಿದೆ. 2014ರಿಂದ ಉತ್ಪಾದನಾ ವಲಯದಲ್ಲಿ ಒಟ್ಟು 4 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ .ಈ ಘಟಕದಿಂದಾಗಿ ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಬಂಧ ಮತ್ತಷ್ಟು ವೃದ್ಧಿವಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಈ ಘಟಕ ಪ್ರಾರಂಭವಾಗಿದೆ. ಈ ಘಟಕದಿಂದ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗಲಿದ್ದು, ಮುಕ್ತ ಮಾರುಕಟ್ಟೆ ಅವಕಾಶವನ್ನು ಪಡೆಯಬಹುದಾಗಿದೆ ಎಂದರು.

     

  • ಹಂಸಲೇಖಾರಿಂದ ರೇವಾ ವಿವಿ ಮಾಧ್ಯಮ ಕೇಂದ್ರ ಉದ್ಘಾಟನೆ

    ಹಂಸಲೇಖಾರಿಂದ ರೇವಾ ವಿವಿ ಮಾಧ್ಯಮ ಕೇಂದ್ರ ಉದ್ಘಾಟನೆ

    ಬೆಂಗಳೂರು: ರೇವಾ ವಿಶ್ವವಿದ್ಯಾಲಯ ಹಚ್ಚ ಹಸಿರಿನ ನಿತ್ಯ ತೋರಣದ ವಿದ್ಯಾ ದೇವಾಲಯ ಎಂದು ನಾದಬ್ರಹ್ಮರೆಂದು ಪ್ರಖ್ಯಾತಿ ಹೊಂದಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರು ಬಣ್ಣಿಸಿದ್ದಾರೆ.

    ರೇವಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಮಾಧ್ಯಮಕೇಂದ್ರ(ಮೀಡಿಯಾ ಸೆಂಟರ್)ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಒತ್ತಡದ ಮತ್ತು ಸಂಚಾರ ದಟ್ಟಣೆಯ ಕಿಷ್ಕಿಂದೆ ಎಂದು ಹೆಸರಾಗುತ್ತಿದೆ. ಅಂತಹ ಆಲೋಚನೆಗಳಿಂದ ಹೊರ ಬರಲು ಬೆಂಗಳೂರಿನಿಂದ ಕೊಂಚ ಹೊರವಲಯದಲ್ಲಿ ರೇವಾ ವಿದ್ಯಾದೇವಾಲಯವಿದೆ. ಇದರ ಮಾಧ್ಯಮಕೇಂದ್ರದ ಉದ್ಘಾಟನೆಗೆ ನನ್ನನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಇದು ನನ್ನ ಪುಣ್ಯ. ಈ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದೆ ಆದರೆ ಇವತ್ತು ನೋಡುವಂತಹ ಭಾಗ್ಯ ಲಭಿಸಿದೆ. ಒಳಗೆ ಬಂದು ನೋಡಿದಾಗ ಇದೊಂದು ಹಚ್ಚ ಹಸಿರಿನ ನಿತ್ಯ ತೋರಣವೆಂದು ಭಾಸವಾಯಿತು ಎಂದರು.

    ಈ ರೇವಾ ವಿಶ್ವವಿದ್ಯಾಲಯದಲ್ಲಿ ಮಾಧ್ಯಮಕೇಂದ್ರವನ್ನು ವೃತ್ತಿಪರವಾಗಿ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರ ಉದ್ಘಾಟನೆಗೊಳ್ಳುವ ಮೂಲಕ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ. ಶ್ಯಾಮರಾಜು ಅವರ ಕನಸು ನನಸಾಗಿದೆ.

    ವಿದ್ಯಾರ್ಥಿಗಳು ಕೊಡುಗೆ ನೀಡಲಿ
    ಇವತ್ತು ಸುದ್ದಿಯಿಂದ ಜೀವನ. ಆದರೆ ಶಿಕ್ಷಕರಾದ ನಾವು ಸುದ್ದಿ ಒಳಗಿನ ವೈಬ್ರೆಂಟ್‍ನಿಂದ ಜೀವನ ಎನ್ನುತ್ತೇವೆ. ಪ್ರತಿಯೊಂದು ವೈಬ್ರೆಷನ್ ಒಂದು ಮೆಸೇಜ್ ಇದ್ದಂತೆ. ಇವತ್ತಿನಿಂದ ಮೀಡಿಯಾ ಸೆಂಟರ್ ನಲ್ಲಿ ಪಾಸಿಟಿವ್ ವೈಬ್ರೆಷನ್ ಪ್ರಾರಂಭವಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಐದು ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೊರ ಹೋಗುತ್ತಿದ್ದಾರೆ. ಅವರೆಲ್ಲ ಈ ನಾಡಿಗೆ ಕೊಡುಗೆಯನ್ನು ನೀಡಲಿ ಎಂದು ಹಾರೈಸಿದರು.

    ಈ ಸ್ಟುಡಿಯೋದಲ್ಲಿ ಪ್ರದರ್ಶನ ಕಲೆಗೆ ಒಂದು ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಜೊತೆಗೆ ಇದಕ್ಕೆ ಪ್ರತಿಭಾನ್ವಿತ ಸಿಬ್ಬಂಧಿಯನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವಾಗ ನಾನು ಇವರ ಜೊತೆ ಕೈಜೋಡಿಸುತ್ತೇನೆ ಎಂದರು.

    ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪಿ. ಶ್ಯಾಮರಾಜುರವರು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ 15 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವತ್ತು ಉದ್ಘಾಟನೆಗೊಂಡಿರುವ ಸ್ಟುಡಿಯೋದಿಂದ ಪತ್ರಿಕೋದ್ಯಮ ಮತ್ತು ಇತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ತರಗತಿಯಲ್ಲಿ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಲೆ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪದವಿಯ ಜತೆಗೆ ತಂತ್ರಜ್ಞಾನಗಳ ಬಗ್ಗೆಯೂ ತಿಳಿದು ಹೊರಜಗತ್ತಿಗೆ ಕಾಲಿಡಲಿ ಎಂಬ ಉದ್ದೇಶದಿಂದ ಈ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

    1 ಕೋಟಿ ವೆಚ್ಚದಲ್ಲಿ ಮಾಧ್ಯಮ ಕೇಂದ್ರ:
    ಮಲ್ಟಿ ಮೀಡಿಯಾ, ಮೀಡಿಯಾ ಎಡಿಟಿಂಗ್, ಅನಿಮೇಶನ್ ತಂತ್ರಜ್ಞಾನ, ಕಂಪ್ಯೂಟರ್ ಗ್ರಾಫಿಕ್ಸ್, ಆನ್‍ಲೈನ್ ವಿಡಿಯೋ ಎಡಿಟಿಂಗ್, ಕ್ಯಾಂಪಸ್ ಟಿ.ವಿ., ಕ್ಯಾಂಪಸ್ ರೇಡಿಯೋ, ವೆಬ್ ರೇಡಿಯೋ ಹಾಗೂ ವಾರ್ತಾ ನಿರೂಪಣೆ, ಚರ್ಚೆಗೆ ಸಂಬಂಧಿಸಿದ ಸ್ಟುಡಿಯೋಗಳು ಮಾಧ್ಯಮ ಕೇಂದ್ರದಲ್ಲಿದ್ದು, ಒಂದು ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ.

    ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ ಡಾ. ಎಸ್. ವೈ ಕುಲಕರ್ಣಿ, ಕುಲಸಚಿವರಾದ ಡಾ. ಧನಂಜಯ್, ವಿಭಾಗದ ಮುಖ್ಯಸ್ಥರಾದ ಡಾ. ಬೀನಾ ಜಿ., ಡಾ. ಪಾಯಲ್ ದತ್ತ ಚೌದರಿ ಮತ್ತು ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ದೇಶದ ಮೊದಲ 14 ಪಥಗಳ ಎಕ್ಸ್ ಪ್ರೆಸ್‍ವೇ ಉದ್ಘಾಟನೆ: ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ದೇಶದ ಮೊದಲ 14 ಪಥಗಳ ಎಕ್ಸ್ ಪ್ರೆಸ್‍ವೇ ಉದ್ಘಾಟನೆ: ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಮೀರತ್ ಗೆ ಸಂಪರ್ಕ ಕಲ್ಪಿಸುವ ಎಕ್ಸ್ ಪ್ರೆಸ್ ವೇಯ ಮೊದಲ ಹಂತವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

    ದೆಹಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ಬಳಿಕ ಸುಮಾರು 6 ಕಿಮೀ ದೂರದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೋದಿ ಅವರನ್ನು ಕಂಡು ಸಂತಸ ಪಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು.

    ಸದ್ಯ ನಿರ್ಮಾಣವಾಗಿರುವ 9 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯು ದೇಶದ ಮೊದಲ 14 ಪಥಗಳ ರಸ್ತೆ ಎಂಬ ಹೆಗ್ಗಳಿಕೆ ಪಡೆದಿದ್ದು, ಸಿಗ್ನಲ್ ಫ್ರೀ ಮಾರ್ಗವನ್ನು ಹೊಂದಿದೆ. ಮೊದಲ ಹಂತದ ಮಾರ್ಗಕ್ಕೆ ಸುಮಾರು 842 ಕೋಟಿ ರೂ. ವೆಚ್ಚವಾಗಿದೆ. ಉಳಿದಂತೆ ನಿರ್ಮಾಣವಾಗಿರುವ ಹೆದ್ದಾರಿ 6 ಹಾಗೂ 4 ಪಥವನ್ನು ಹೊಂದಿರಲಿದೆ.

    ಯೋಜನೆಯ ಮೊತ್ತ: ಸದ್ಯ ಎಕ್ಸ್ ಪ್ರೆಸ್ ವೇ ನ ಮೊದಲ ಹಂತ ಮಾತ್ರ ಪೂರ್ಣಗೊಂಡಿದ್ದು, 84 ಕಿಮೀ. ದೂರದ ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗವನ್ನು ಸುಮಾರು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ.

    ವಿಶೇಷತೆ ಏನು?
    ದೆಹಲಿ ಹಾಗೂ ಮಿರತ್ ಎಕ್ಸ್ ಪ್ರೆಸ್ ಮಾರ್ಗ ಸ್ಮಾರ್ಟ್ ಅಂಡ್ ಗ್ರೀನ್ ರಾಷ್ಟ್ರೀಯ ಹೆದ್ದಾರಿ ಎಂಬ ಹೆಗ್ಗಳಿಕೆ ಹೊಂದಿದ್ದು, ಈಗಾಗಲೇ ನಿರ್ಮಾಣ ಮಾಡಲಾಗಿರುವ ಯಮುನಾ ನದಿ ಸೇತುವೆಯ ಮಾರ್ಗದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ಗಾರ್ಡನ್ ಸಹ ನಿರ್ಮಾಣ ಮಾಡಲಾಗಿದೆ. ಈ ಗಾರ್ಡನ್‍ಗೆ ಸೋಲಾರ್ ನಿಂದ ಉತ್ಪಾದನೆಯಾದ ವಿದ್ಯುತ್ ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಸಂಪೂರ್ಣ ಗಾರ್ಡನ್ ನಲ್ಲಿ ಹನಿ ನೀರಾವರಿ ಸೌಲಭ್ಯವಿದೆ. ಈ ಮೂಲಕ ಸೋಲಾರ್ ವ್ಯವಸ್ಥೆ ಪಡೆದ ಭಾರತದ ಮೊದಲ ಸೇತುವೆ ಎಂಬ ಹೆಗ್ಗಳಿಕೆಗೆ ಯಮುನಾ ನದಿ ಸೇತುವೆ ಪಾತ್ರವಾಗಿದೆ.

     

    17 ತಿಂಗಳಿನಲ್ಲಿ ನಿರ್ಮಾಣ:
    30 ತಿಂಗಳ ಅವಧಿಯಲ್ಲಿ ನಿರ್ಮಾಣವಾಗಬೇಕಿದ್ದ ಈ ಯೋಜನೆಯನ್ನು ಕೇವಲ 17 ತಿಂಗಳಿನಲ್ಲಿ ನಿರ್ಮಾಣ ಮಾಡಲಾಗಿದೆ. 2015ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು.

    ಈ ಯೋಜನೆಯ ನಿರ್ಮಾಣದಿಂದ ಪ್ರತಿ ದಿನ 2 ಲಕ್ಷ ವಾಹನಗಳು ರಾಜಧಾನಿ ದೆಹಲಿ ನಗರವನ್ನು ಪ್ರವೇಶ ಮಾಡದೇ ಸಾಗಬಹುದಾಗಿದ್ದು, ದೆಹಲಿಯ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಅಲ್ಲದೇ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಸುಮಾರು 50 ಸಾವಿರ ವಾಹನಗಳನ್ನು ದೆಹಲಿಯ ಪ್ರವೇಶವನ್ನು ತಪ್ಪಿಸಬಹುದಾಗಿದೆ.

    ಎಲೆಕ್ಟ್ರಾನಿಕ್ ಟೋಲ್: ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಹಾಗೂ ಸುಗಮ ಪ್ರಯಾಣಕ್ಕೆ ವೇಗದ ಟೋಲ್ ಸಂಗ್ರಹಣೆ ಕೇಂದ್ರ ಆರಂಭಿಸಲಾಗಿದ್ದು, ಇಲ್ಲಿ ಟೋಲ್ ಸಂಗ್ರಹಿಸಲು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವ್ಯವಸ್ಥೆ (ಇಟಿಸಿ) ಅಳವಡಿಸಲಾಗಿದೆ.

    ಸ್ಮಾಟ್ ಟ್ರಾಫಿಕ್ ಕಂಟ್ರೋಲ್: ಹೆದ್ದಾರಿಗಳ ಇಕ್ಕೆಲಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ವಾಹನಗಳ ವೇಗ ಹಾಗೂ ಅವುಗಳ ಸ್ಥಳವನ್ನು ತಿಳಿಯಬಹುದಾಗಿದೆ. ಹೆದ್ದಾರಿಯಲ್ಲಿ ಸ್ಮಾರ್ಟ್ ವೇ ಟ್ರಾಫಿಕ್ ಮ್ಯಾನೇಜ್‍ಮೆಂಟ್ (ಎಚ್‍ಟಿಎಂಎಸ್) ಮತ್ತು ವಿಡಿಯೋ ಇನ್ಸಿಡೆಂಟ್ ಡಿಟೆಕ್ಷನ್ (ವಿಐಡಿಎಸ್) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

    ನೈಸರ್ಗಿಕ ರಕ್ಷಣೆಗೆ ಹೆಚ್ಚಿನ ಪ್ರಮುಖ್ಯತೆ ನೀಡಿರುವ ಹೆದ್ದಾರಿಯಲ್ಲಿ ಸುಮಾರು 2.5 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೇ ಹೆದ್ದಾರಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಹೊಂದಿದೆ. ಒಟ್ಟು 82 ಕಿಮೀ ಉದ್ದದ ದೆಹಲಿ ಎಕ್ಸ್ ಪ್ರೆಸ್‍ವೇ ಮೊದಲ 27.74 ಕಿಮೀ 14 ಪಥ ಹೊಂದಿದ್ದು, ಉಳಿದ ಮಾರ್ಗ 6 ಪಥವನ್ನು ಹೊಂದಿರಲಿದೆ.

    ಅನುಕೂಲವೇನು?
    ಹೆದ್ದಾರಿಯ ನಿರ್ಮಾಣದಿಂದ ದೆಹಲಿ ಹಾಗೂ ನೋಯ್ಡಾ ನಗರಗಳ ನಡುವಿನ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೇ ಇರುವರೆಗೂ ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣದ ಅವಧಿ 40 ನಿಮಿಷಕ್ಕೆ ಇಳಿಯಲಿದೆ.

    ಸೈಕಲ್ ಟ್ರ್ಯಾಕ್:
    ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಪಡೆದಿರುವ ಈ ಮಾರ್ಗ, ಸೈಕಲ್ ಪಥ ಮತ್ತು ಪದಚಾರಿ ಮಾರ್ಗವನ್ನು ಹೊಂದಿದೆ. ಸೈಕಲ್ ಟ್ರ್ಯಾಕ್ 2.5 ಮೀಟರ್ ಅಗಲ ಹೊಂದಿದ್ದರೆ, ಪಾದಚಾರಿ ಮಾರ್ಗ ಒಂದೂವರೆ ಮೀಟರ್ ಅಗಲ ನಿರ್ಮಾಣ ಮಾಡಲಾಗಿದೆ.

    ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಉದ್ಘಾಟನೆ: ಈಗಾಗಲೇ ನಿರ್ಮಾಣ ಮಾಡಲಾಗಿರುವ ದೆಹಲಿ, ಎಕ್ಸ್ ಪ್ರೆಸ್ ವೇ ಮಾರ್ಗ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗವನ್ನು ಕಾಮಗಾರಿಗೆ ಚಾಲನೆ ನೀಡಿದರು. ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗ 135 ಕಿಮೀ ದೂರವಿದ್ದು, ಘಜಿಯಾಬಾದ್, ಗ್ರೇಟರ್ ನೋಯ್ಡಾ, ಫರಿದಾಬಾದ್, ಮತ್ತು ಪಾಲ್ವಾಲ್ ನಗರಗಳಿಗೆ ಮುಕ್ತ ಸಂಚಾರವನ್ನು ನೀಡಲಿದೆ. ದೆಹಲಿಯ ಪೂರ್ವ ನಿಜಾಮುದ್ದೀನ್ ಸೇತುವೆಯಿಂದ ಆರಂಭವಾಗುವ ಈ ಎಕ್ಸ್ ಪ್ರೆಸ್ ವೇ 135 ಕಿಮೀ ಉದ್ದವಿದ್ದು, ಉತ್ತರ ಪ್ರದೇಶದ ಗಡಿಯವರೆಗೂ ಸಾಗುತ್ತದೆ.

    ಒಟ್ಟಾರೆ ಹೆದ್ದಾರಿಯಲ್ಲಿ ಒಟ್ಟು 406 ರಸ್ತೆ ತಿರುವುಗಳು, 4 ದೊಡ್ಡ ಸೇತುವೆಗಳು, 46 ಸೇತುವೆಗಳು, 3 ತೂಗು ಸೇತುವೆಗಳು, 221 ಅಂಡರ್ ಪಾಸ್‍ಗಳು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಹೆದ್ದಾರಿ ಪಕ್ಕದಲ್ಲಿ ಹಲವು ರಾಷ್ಟ್ರೀಯ ಸ್ಮಾರಕ ಮಾದರಿಗಳು, ಹೋಟೆಲ್, ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

  • ಮೈಸೂರು ರಾಜರುಗಳ ನಂತ್ರ ಯಾವುದಾದರೂ ಸರ್ಕಾರ ಕೆಲಸ ಮಾಡಿದ್ರೆ ಅದು ನಮ್ಮದು ಮಾತ್ರ: ಸಿಎಂ

    ಮೈಸೂರು ರಾಜರುಗಳ ನಂತ್ರ ಯಾವುದಾದರೂ ಸರ್ಕಾರ ಕೆಲಸ ಮಾಡಿದ್ರೆ ಅದು ನಮ್ಮದು ಮಾತ್ರ: ಸಿಎಂ

    ಮೈಸೂರು: ರಾಜ್ಯದಲ್ಲಿ ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ ಎಂದರೇ ಅದು ನಮ್ಮ ಸರ್ಕಾರ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದ ಜಯದೇವ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಗೆ ನಮ್ಮ ಸರ್ಕಾರದಿಂದ 5 ಸಾವಿರ ಕೋಟಿ ರೂ. ಹಣ  ನೀಡಿದ್ದೇವೆ. ಸ್ವಾತಂತ್ರ್ಯ ಭಾರತದಲ್ಲಿ ಇಷ್ಟು ಹಣ ಕೊಟ್ಟ ಸರ್ಕಾರ ಇಲ್ಲವೇ ಇಲ್ಲ. ಮೈಸೂರಿನ ಪರಂಪರೆ ಉಳಿಸಿಕೊಂಡು ಕಟ್ಟಡಗಳನ್ನ ನಿರ್ಮಿಸಿದ್ದೇವೆ ಎಂದರು.

    ಮೈಸೂರಿನ ಲಲಿತಮಹಾಲ್ ಪ್ಯಾಲೇಸ್ ಮಾದರಿಯಲ್ಲೇ ಜಿಲ್ಲಾಧಿಕಾರಿ ಕಚೇರಿ ಕಟ್ಟಿದ್ದೇವೆ. ಇಡೀ ದೇಶದಲ್ಲೇ ಅತ್ಯಂತ ಬೃಹತ್ ಹೃದ್ರೋಗ ಆಸ್ಪತ್ರೆ ನಿರ್ಮಿಸಿದ್ದೇವೆ. ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಮ್ಮ ಸರ್ಕಾರದಲ್ಲಿ ಮಾಡಿದ್ದೇವೆ. ಆದರೆ ಬೇರೆಯವರಂತೆ ಬರುತ್ತೇವೆ, ಮಾಡುತ್ತೇವೆ ಎಂದು ಹೇಳುತ್ತಿಲ್ಲ ಎಂದು ತಮ್ಮ ಸರ್ಕಾರದ ಸಾಧನೆಯನ್ನ ವೈಭವಿಕರಿಸಿ ಭಾಷಣ ಮಾಡಿದರು.