ಮಂಗಳೂರು: ದಶಕದ ಕಾಮಗಾರಿಯ ಇತಿಹಾಸ ಹೊಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಂಪ್ ವೆಲ್ ಫ್ಲೈಓವರ್ ಕೊನೆಗೂ ಇಂದು ಉದ್ಘಾಟನೆಗೊಂಡಿತು. ಸಚಿವ ಶ್ರೀನಿವಾಸ ಪೂಜಾರಿ ಅವರು ಬೆಳಗ್ಗೆ ಫ್ಲೈಓವರನ್ನು ಉದ್ಘಾಟನೆ ಮಾಡಿದ್ದು, ಇಂದಿನಿಂದ ರಸ್ತೆ ಸಾರ್ವಜನಿಕ ವಾಹನಗಳಿಗೆ ಮುಕ್ತವಾಗಿದೆ.
2010ರಲ್ಲಿ ನವಯುವ ಕಂಪನಿ ಗುತ್ತಿಗೆ ಪಡೆದು ಆರಂಭಿಸಿದ್ದ 600 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ 2013ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಕಾಮಗಾರಿ 10 ವರ್ಷವಾದರೂ ಪೂರ್ಣಗೊಳ್ಳದೇ ಹತ್ತಾರು ಡೆಡ್‍ಲೈನ್‍ಗಳನ್ನು ಕಂಡಿದ್ದು, ನಿಧಾನಗತಿ ಕಾಮಗಾರಿಯಿಂದ ಫ್ಲೈ ಓವರ್ ಭಾರೀ ಸುದ್ದಿಯಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ನಳಿನ್ ಕುಮಾರ್ ಭಾರೀ ಟ್ರೋಲ್ ಗೆ ಒಳಗಾಗಿದ್ದರು.

ಪೂರ್ಣಗೊಂಡಿರುವ ಪಂಪ್‍ವೆಲ್ ಮೇಲ್ಸೇತುವೆಯ ಕಾಮಗಾರಿಯನ್ನು ಬುಧವಾರದಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಡಿ.31ರಂದು ಸಂಸದ ನಳಿನ್‍ಕುಮಾರ್ ಕಟೀಲು ಅವರ ಅಧ್ಯಕ್ಷತೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಂಪ್‍ವೆಲ್ ಫ್ಲೈಓವರ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಮಗಾರಿಯ ಮೇಲ್ವಿಚಾರಣೆ ಜವಾಬ್ದಾರಿ ಜಿಲ್ಲಾಧಿಕಾರಿಯವರಿಗೆ ನೀಡಲಾಗಿತ್ತು. ಇದನ್ನೂ ಓದಿ:10 ವರ್ಷಗಳಲ್ಲಿ 5 ಡೆಡ್ ಲೈನ್- ಇನ್ನೂ ಪೂರ್ಣಗೊಳ್ಳದ ಪಂಪ್‍ವೆಲ್ ಸೇತುವೆ ಕಾಮಗಾರಿ



























