Tag: impact

  • ಪಬ್ಲಿಕ್ ಟಿವಿಯಲ್ಲಿ ನೋವು ತೋಡಿಕೊಂಡ ಪದ್ಮಾವತಿಗೆ ಫುಡ್ ಕಿಟ್ ವಿತರಣೆ

    ಪಬ್ಲಿಕ್ ಟಿವಿಯಲ್ಲಿ ನೋವು ತೋಡಿಕೊಂಡ ಪದ್ಮಾವತಿಗೆ ಫುಡ್ ಕಿಟ್ ವಿತರಣೆ

    ಹುಬ್ಬಳ್ಳಿ: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ಶುಕ್ರವಾರ ಹುಬ್ಬಳ್ಳಿಯ ಪದ್ಮಾವತಿಯವರು ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

    ಆಹಾರವಿಲ್ಲದೇ ಜೀವನ ನಡೆಸುವಂತಾಗಿದೆ ಎಂದು ಪಬ್ಲಿಕ್ ಟಿವಿಯ ಕಾರ್ಯಕ್ರಮದ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯುವ ಮುಖಂಡ ದೀಪಕ್ ನಾಯ್ಡು ಅವರು ಪದ್ಮಾವತಿಯವರಿಗೆ ಮನೆಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ಹುಬ್ಬಳ್ಳಿಯ ಆನಂದನಗರದಲ್ಲಿರುವ ಪದ್ಮಾವತಿಯವರ ಸ್ವಗೃಹಕ್ಕೆ ಭೇಟಿ ನೀಡಿದ ದೀಪಕ್ ನಾಯ್ಡು ಅವರು, ಅಕ್ಕಿ, ರವಾ, ಅವಲಕ್ಕಿ, ಬೆಳೆ, ಎಣ್ಣೆ, ತೊಗರಿಬೆಳೆ, ಸಕ್ಕರೆ ಚಹಾಪುಡಿ ಇರುವ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಈ ಮೂಲಕ ಮನೆಯ ಮಂತ್ರಾಲಯ ಕಾರ್ಯಕ್ರಮದಲ್ಲಿ ನೋವನ್ನು ತೋಡಿಕೊಂಡ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ನೆಲಮಂಗಲ: ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಆಟೋ ಡ್ರೈವರ್ ಧನಂಜಯ ಎಂಬವರು ಶುಕ್ರವಾರ ಕರೆ ಮಾಡಿ ತಮ್ಮ ಕಷ್ಟವನ್ನ ಹೇಳಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಬರದೆ ಹಾಗೂ ಬಡತನದ ಬೇಗೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದ ಕುಟುಂಬಕ್ಕೆ ನೆರವು ಸಿಕ್ಕಿದೆ. ಇಂದು ಈ ಬಡ ಕುಟುಂಬದ ಸದಸ್ಯರಿಗೆ ಕರವೇ ಶಿವರಾಮೇಗೌಡ ಬಣದ ನೆಲಮಂಗಲ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಕರವೇ ಸ್ನೇಹಿತರು ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಕರೆಗೆ ಸ್ಪಂದಿಸಿ ಈ ಕುಟುಂಬಕ್ಕೆ 15 ದಿನಕ್ಕೆ ಬೇಕಾಗುವ ಎಲ್ಲಾ ರೀತಿಯ ದಿನಸಿ ಪದಾರ್ಥಗಳು ಹಾಗೂ ತರಕಾರಿ ಹಣ್ಣುಗಳನ್ನು ನೀಡಿ ಸಂಕಷ್ಟದಲ್ಲಿದ್ದ ಆಟೋ ಡ್ರೈವರ್ ಧನಂಜಯ್ ಕುಟುಂಬಕ್ಕೆ ನೆರವು ನೀಡಿದ್ದಾರೆ. ನೆರವಿಗೆ ಧಾವಿಸಿದ ಪಬ್ಲಿಕ್ ಟಿವಿ ತಂಡ ಹಾಗೂ ಕರವೇ ಸ್ನೇಹಿತರಿಗೆ ಆಟೋ ಚಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ನೆಲಮಂಗಲ ಕರವೇ ಅಧ್ಯಕ್ಷ ಸುರೇಶ್, ಇಂತಹ ಸಾಕಷ್ಟು ಜನರು ಈ ಲಾಕ್‍ಡೌನ್ ಸಮಯದಲ್ಲಿ ಸಮಸ್ಯೆ ಎದುರಿಸುತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಿ ಜನರ ಏಳಿಗೆಗೆ ನಮ್ಮ ತಂಡ ಶ್ರಮಿಸುವುದಾಗಿ ತಿಳಿಸಿದ್ದಾರೆ.

     

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಗ್ಳೂರಿಗೆ ಹೊರ ರಾಜ್ಯಗಳಿಂದ ಬರೋ ಮೀನು ಲಾರಿಗಳಿಗೆ ನಿರ್ಬಂಧ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಗ್ಳೂರಿಗೆ ಹೊರ ರಾಜ್ಯಗಳಿಂದ ಬರೋ ಮೀನು ಲಾರಿಗಳಿಗೆ ನಿರ್ಬಂಧ

    ಮಂಗಳೂರು: ಹೊರ ರಾಜ್ಯಗಳಿಂದ ಮಂಗಳೂರಿನ ಬಂದರಿಗೆ ಅನೇಕ ಮೀನು ಲಾರಿಗಳು ಬರುತ್ತಿದ್ದವು. ಈ ವೇಳೆ ಯಾವುದೇ ಸಾಮಾಜಿಕ ಅಂತರ ಇಲ್ಲದೆ ಬಂದರಿನಲ್ಲಿ ಸಾವಿರಾರು ಮಂದಿ ಸೇರುತ್ತಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದೀಗ ಎಚ್ಚೆತ್ತ ಸಚಿವರು ಮಂಗಳೂರಿಗೆ ಹೊರ ರಾಜ್ಯಗಳಿಂದ ಬರುವ ಮೀನು ಲಾರಿಗಳಿಗೆ ನಿರ್ಬಂಧ ಹೇರಿದ್ದಾರೆ.

    ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೊರ ರಾಜ್ಯಗಳಿಂದ ಬರುವ ಮೀನು ಲಾರಿಗಳಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಮಂಗಳೂರು ಬಂದರಿಗೆ ಹೊರ ರಾಜ್ಯದ ಮೀನಿನ ಲಾರಿಗಳು ಬರುತ್ತಿದ್ದವು. ಮೀನು ಅನ್ ಲೋಡಿಂಗ್ ವೇಳೆ ಸಾವಿರಾರು ಜನರು ಮುಗಿಬೀಳುತ್ತಿದ್ದರು. ಈ ವೇಳೆ ಮೀನಿನ ವ್ಯಾಪಾರಿಗಳು ಯಾವುದೇ ಸಾಮಾಜಿಕ ಅಂತರ ಇಲ್ಲದೆ ಮುಗಿಬೀಳುತ್ತಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದೀಗ ಪಬ್ಲಿಕ್ ಟಿವಿ ಸುದ್ದಿಯಿಂದ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರ ರಾಜ್ಯದ ಮೀನಿನ ಲಾರಿಗಳಿಗೆ ಬ್ರೇಕ್ ಹಾಕಿದೆ.

    ಕಳೆದ ನಾಲ್ಕು ದಿನಗಳಿಂದ ಜಿಲ್ಲಾಡಳಿತ ಮೀನು ಸರಬರಾಜಿಗೆ ಅನುಮತಿ ನೀಡಿದ್ದು, ಮಂಗಳೂರಿನ ಮೀನು ವ್ಯಾಪಾರಿಗಳು ಮೀನು ಖರೀದಿಗೆ ಮುಗಿಬಿದ್ದಿದ್ದರು. ಯಾವುದೇ ಸಾಮಾಜಿಕ ಅಂತರ ಇಲ್ಲದೆ 2 ಸಾವಿರಕ್ಕೂ ಹೆಚ್ಚು ಮಂದಿ ಬಂದರಿನಲ್ಲಿ ಸೇರುತ್ತಿದ್ದರು. ಅನ್ ಲೋಡಿಂಗ್ ಮತ್ತು ಏಲಂ ಮೂಲಕ ವಿತರಣೆ ಮಾಡುತ್ತಿದ್ದಾರೆ. ಮಾಸ್ಕ್, ಗ್ಲೌಸ್ ಯಾವುದೇ ರಕ್ಷಾ ಕವಚ ಇಲ್ಲದೆ ಕಾರ್ಮಿಕರು ತೊಡಗಿಸಿಕೊಂಡಿದ್ದರು.

    ದಿನಕ್ಕೆ ನೂರಕ್ಕೂ ಹೆಚ್ಚು ಹೊರ ರಾಜ್ಯದ ಲಾರಿಗಳು ಬರುತ್ತಿದ್ದು, ಇಲ್ಲಿಂದ ಖರೀದಿಸಿದ ಮೀನುಗಳನ್ನು ಮರುದಿನ ಕರಾವಳಿಯಾದ್ಯಂತ ಸರಬರಾಜು ಮಾಡಲಾಗುತ್ತೆ. ಈ ಮೂಲಕ ಉಚಿತವಾಗಿ ಕೊರೊನಾ ಕೂಡ ಗ್ರಾಮ ಗ್ರಾಮಗಳಿಗೆ ಸರಬರಾಜು ಆಗುವ ಅಪಾಯ ಎದುರಾಗಿತ್ತು. ಹಿಂದೆಲ್ಲಾ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಹೊರ ರಾಜ್ಯಕ್ಕೆ ಮೀನು ಸಾಗಾಟ ಆಗುತ್ತಿತ್ತು. ಈಗ ಕರ್ನಾಟಕದಲ್ಲಿ ಆಳಸಮುದ್ರ ಮೀನುಗಾರಿಕೆ ಇಲ್ಲದ ಕಾರಣ ಆಂಧ್ರ ಪ್ರದೇಶ, ತಮಿಳನಾಡು ಕಡೆಯಿಂದ ಮೀನು ಪೂರೈಕೆಯಾಗುತ್ತಿದೆ.

    ಮುಸ್ಲಿಮರಿಗೆ ರಂಜಾನ್ ಆಗಿರುವ ಕಾರಣ ರಾತ್ರಿ ವೇಳೆ ಮೀನು ವಹಿವಾಟು ನಡೆಸಲು ಜಿಲ್ಲಾಡಳಿತ ವಿಶೇಷ ಅನುಮತಿ ನೀಡಿತ್ತು.  ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡದಿರುವುದು ಕೊರೊನಾ ಸೋಂಕು ಹರಡುವ ಸಾಧ್ಯತೆ ಇತ್ತು. ಅಲ್ಲದೇ ಜಿಲ್ಲಾಡಳಿತವೇ ಇಡೀ ಜಿಲ್ಲೆಯ ಜನರಿಗೆ ಕೊರೊನಾ ಸೋಂಕನ್ನು ಹರಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಜಿಲ್ಲಾಡಳಿತ ಹೊರ ರಾಜ್ಯಗಳಿಂದ ಬರುವ ಮೀರು ಲಾರಿಗಳಿಗೆ ಬ್ರೇಕ್ ಹಾಕಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪೊಲೀಸರಿಂದ ರಸ್ತೆ ಬ್ಲಾಕ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪೊಲೀಸರಿಂದ ರಸ್ತೆ ಬ್ಲಾಕ್

    ಯಾದಗಿರಿ: ಕೊರೊನಾ ಗ್ರೀನ್ ಝೋನ್ ಇರುವ ಕಾರಣ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಮರೆತು ಜನರನ್ನು ರಸ್ತೆಗಿಳಿಸಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಯಾದಗಿರಿ ಪೊಲೀಸ್ ಇಲಾಖೆ, ನಗರದ ಪ್ರಮುಖ ರಸ್ತೆಗಳನ್ನೆಲ್ಲ ಬಂಬು ಮತ್ತು ಬ್ಯಾರಿಕೇಡ್ ನಿಂದ ರಸ್ತೆ ಬ್ಲಾಕ್ ಮಾಡಿದೆ. ಇನ್ನೂ ಕೆಲವು ಕಡೆ ರಸ್ತೆಗಳಿಗೆ ಮುಳ್ಳು ಬೇಲಿ ಹಾಕಲಾಗಿದೆ.

    ನಗರದಲ್ಲಿ ಎಲ್ಲಾ ರಸ್ತೆಗಳು ಒನ್ ವೇ ಮಾಡಿ, ಅನಾವಶ್ಯಕವಾಗಿ ರಸ್ತೆಗಿಳಿಯುವ ವಾಹನಗಳನ್ನು ತಪಾಸಣೆ ಮಾಡಿ ಅವುಗಳ ಮೇಲೆ ಪ್ರಕರಣ ದಾಖಲಿಸಿ, ಸೀಜ್ ಮಾಡಲಾಗುತ್ತಿದೆ. ರಸ್ತೆ ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

  • ರಾಯಚೂರಿನ ಸಾರಿಗೆ ಸಿಬ್ಬಂದಿ ಕಷ್ಟಕ್ಕೆ ಸಿಕ್ಕಿತು ಪರಿಹಾರ – ಪಬ್ಲಿಕ್ ಟಿವಿ ವರದಿಗೆ ಅಧಿಕಾರಿಗಳ ಸ್ಪಂದನೆ

    ರಾಯಚೂರಿನ ಸಾರಿಗೆ ಸಿಬ್ಬಂದಿ ಕಷ್ಟಕ್ಕೆ ಸಿಕ್ಕಿತು ಪರಿಹಾರ – ಪಬ್ಲಿಕ್ ಟಿವಿ ವರದಿಗೆ ಅಧಿಕಾರಿಗಳ ಸ್ಪಂದನೆ

    ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಹಾಗೂ ರಾತ್ರಿ ತಂಗುವ ಸಿಬ್ಬಂದಿ ನರಕಯಾತನೆ ಕುರಿತ ಪಬ್ಲಿಕ್ ಟಿವಿ ವರದಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಪಂದಿಸಿದೆ. ಶೀಘ್ರದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ರಾಯಚೂರು ಬಸ್ ನಿಲ್ದಾಣದಲ್ಲಿ ರಾತ್ರಿ ವಸತಿ ಮಾಡುವ ಸಾರಿಗೆ ಸಿಬ್ಬಂದಿಗಳಿಗೆ ಮಲಗಲು ಸುರಕ್ಷಿತ ಸ್ಥಳವಿಲ್ಲದೇ ಬಸ್‍ನಲ್ಲಿಯೇ ಸಿಬ್ಬಂದಿ ಸೊಳ್ಳೆ ಕಾಟದಲ್ಲಿ ಮಲಗುತ್ತಾರೆ. ಪ್ರಯಾಣಿಕರ ಟಿಕೆಟ್ ದುಡ್ಡಿಗೆ ಸುರಕ್ಷತೆಯಿಲ್ಲ. ಕುಡಿಯಲು ನೀರು, ಸ್ನಾನಕ್ಕೆ ಕೋಣೆ, ಶೌಚಾಲಯವೂ ಸರಿಯಾಗಿಲ್ಲ ಎನ್ನುವುದರ ಕುರಿತು ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿನ ರಾತ್ರಿ ವಸತಿಯ ದುಸ್ಥಿತಿ ಬಗ್ಗೆ ವಿವರಿಸಲಾಗಿತ್ತು. ಇದಕ್ಕೆ ಸ್ಪಷ್ಟಿಕರಣ ನೀಡಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಾರಿಗೆ ಸಿಬ್ಬಂದಿ ಘಟಕಕ್ಕೆ ತೆರಳಿ ಸೌಲಭ್ಯವನ್ನು ಉಪಯೋಗಿಸಿಕೊಳ್ಳದೇ ಬಸ್ ನಿಲ್ದಾಣದಲ್ಲಿ ವಸತಿ ಮಾಡುತ್ತಿದ್ದಾರೆ ಹಾಗೂ ಕೆಲವೊಂದು ಸಿಬ್ಬಂದಿ ಬಸ್ ನಿಲ್ದಾಣದ ಮತ್ತು ಘಟಕಗಳು ಸಮೀಪವಿಲ್ಲದ ಕಾರಣದಿಂದ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗೆ ರೆಸ್ಟ್ ರೂಂ ಹಾಗೂ ಇತರೆ ಸೌಲಭ್ಯಗಳು ಇಲ್ಲದೇ ಇರುವುದನ್ನು ಒಪ್ಪಿಕೊಂಡಿದ್ದಾರೆ.

    2018-19ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯ ಹೊಸ ಕಾಮಗಾರಿಗಳ ಕ್ರಿಯಾ ಯೋಜನೆ ಅಡಿಯಲ್ಲಿ ರಾಯಚೂರು ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು 75 ಲಕ್ಷ ಮಂಜೂರಾಗಿತ್ತು. ಮಂಜೂರಾದ ಮೊತ್ತದಲ್ಲಿ ಬಸ್ ನಿಲ್ದಾಣದ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಬಾಕಿ ಉಳಿದ ಆವರಣಕ್ಕೆ ಕಾಂಕ್ರೀಟ್, ಬಸ್ ನಿಲ್ದಾಣ ಮುಖ್ಯ ಕಟ್ಟಡದ ಮೊದಲನೇ ಅಂತಸ್ತಿನ ಎಡಭಾಗದಲ್ಲಿ ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹವನ್ನು ಶೌಚಾಲಯಗಳನ್ನೊಳಗೊಂಡಂತೆ ಮತ್ತು ಬಸ್ ನಿಲ್ದಾಣ ಮುಖ್ಯ ಕಟ್ಟಡಕ್ಕೆ ಸುಣ್ಣ-ಬಣ್ಣ ಹಾಗೂ ಹಾಲಿ ಇರುವ ಸೈಕಲ್ ಸ್ಟಾಂಡ್‍ನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಿದೆ ಮತ್ತು ವಿದ್ಯುತ್ ಕೆಲಸವನ್ನು ನಿರ್ವಹಿಸಲು ಯೋಜಿಸಲಾಗಿದೆ. ಆದರೆ 4 ಬಾರಿ ಟೆಂಡರ್ ಕರೆಯಲಾಗಿದ್ದು, 3 ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗವಹಿಸಿರುವುದಿಲ್ಲ ಕಾರಣ ಕಾಮಗಾರಿ ಕೆಲಸವನ್ನು ಕೈಗೆತ್ತಿಕೊಳ್ಳುವಲ್ಲಿ ವಿಳಂಭವಾಗಿದೆ. ಮತ್ತು 4ನೇ ಟೆಂಡರ್ ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಅಂತಿಮವಾಗುವ ಸಾಧ್ಯತೆಯಿದೆ. ಸದರಿ ಪಕ್ರಿಯೆ ಮುಗಿದ ನಂತರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ವಿಶ್ರಾಂತಿ ಕೋಣೆ, ಶೌಚಾಲಯ, ಸ್ನಾನದ ಕೋಣೆ ಹಾಗೂ ಇನ್ನಿತರ ಕೆಲಸಗಳನ್ನು ಕೈಗೊಳ್ಳುವುದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನೀರು ಕದಿಯುತ್ತಿದ್ದ ಕಾರ್ಖಾನೆ ಪೈಪ್‍ಗಳ ತೆರವು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನೀರು ಕದಿಯುತ್ತಿದ್ದ ಕಾರ್ಖಾನೆ ಪೈಪ್‍ಗಳ ತೆರವು

    ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ ಅಕ್ರಮವಾಗಿ ಕಾರ್ಖಾನೆಗಳು ಪೈಪ್‍ಗಳ ಮೂಲಕ ನೀರು ಕದಿಯುತ್ತಿದ್ದ ಬಗ್ಗೆ ಸೋಮವಾರ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ರೈತರು ಮತ್ತು ಜನಪ್ರತಿನಿಧಿಗಳು ದಾಳಿ ಮಾಡಿ ಕೂಡಲೇ ತೆರವು ಮಾಡುವಂತೆ ಒತ್ತಾಯ ಮಾಡಿದ್ದಾರೆ.

    ಕೊಪ್ಪಳದ ಮುನಿರಬಾದಿನ ಹಿನ್ನೀರಿನಲ್ಲಿ ದೊಡ್ಡ ದೊಡ್ಡ ಪೈಪ್ ಗಳನ್ನು ಹಾಕಿ ಕಾರ್ಖಾನೆಗಳಿಗೆ ನೀರು ಕದಿಯುತ್ತಿದ್ದರು. ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ ಕಂಪನಿಗಳು ಸೇರಿದಂತೆ ಹಲವು ಕಾರ್ಖಾನೆಗಳು ಮೋಟಾರ್ ಪಂಪ್‍ಗಳನ್ನು ಹಾಕಿ ಹಗಲು-ರಾತ್ರಿ ಎನ್ನದೇ ನೀರಿಗೆ ಕನ್ನ ಹಾಕಿದ್ದರು.

    ಸದ್ಯ ಡ್ಯಾಂನಲ್ಲಿ ಕೇವಲ 36 ಟಿಎಂಸಿ ನೀರು ಇದೆ. ಮೊದಲ ಬೆಳೆಯ ನೀರಿಕ್ಷೆಯಲ್ಲಿರುವ ಮೂರು ಜಿಲ್ಲೆಗಳ ರೈತರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಹೀಗಾಗಿ ರೈತರೊಂದಿಗೆ ಜಲಾಶಯಕ್ಕೆ ಭೇಟಿ ನೀಡಿದ ಮಾಜಿ ಸಚಿವ ಶಿವರಾಜ್ ತಂಗಡಿ ಮತ್ತು ಕೊಪ್ಪಳ ಜಿ.ಪಂ. ಅಧ್ಯಕ್ಷ ವಿಶ್ವನಾಥ್ ರೆಡ್ಡಿ ರೈತರೊಂದಿಗೆ ಜಲಾಶಯಕ್ಕೆ ಮುತ್ತಿಗೆ ಹಾಕಿದರು.

    ಜಲಾಶಯದ ಹಿನ್ನೀರಿನ ಪ್ರಮುಖ ಗೇಟ್ ಗೆ ಬೀಗ ಹಾಕಿದ್ದ ಖಾಸಗಿ ಕಂಪನಿಯ ಸಿಬ್ಬಂದಿ ರೈತರನ್ನು ಒಳಗಡೆ ಬಿಡಲು ನಿರಾಕರಿಸಿದರು. ಈ ವೇಳೆ ಆಕ್ರೋಶಗೊಂಡ ಮಾಜಿ ಸಚಿವ ಹಾಗೂ ಜಿ.ಪಂ ಅಧ್ಯಕ್ಷರು ಗೇಟ್ ಹಾರಿ ಒಳಗೆ ನುಗ್ಗಿದರು. ರೈತರ ಆರೋಪದಂತೆ ಜಲಾಶಯದ ಹಿನ್ನೀರನ್ನು ಕಾರ್ಖಾನೆಗಳು 55ಎಚ್.ಪಿ ಮೋಟಾರ್ ಪಂಪ್ ಬಳಸಿ ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.

    ಕೂಡಲೇ ಜಲಾಶಯಕ್ಕೆ ನುಗ್ಗಿದ ಮಾಜಿ ಸಚಿವರು ಮೋಟಾರ್‍ಗಳನ್ನು ಪರಿಶೀಲಿಸಿ ಅಲ್ಲಿಂದಲೇ ಆಡಳಿತ ಅಧಿಕಾರಿಗಳಿಗೆ ಫೋನ್ ಮೂಲಕ ತರಾಟೆಗೆ ತಗೆದುಕೊಂಡರು. ನಂತರ ಮುಖ್ಯ ಅಭಿಯಂತರರ ಕಚೇರಿಗೆ ತೆರಳಿ ಕಾರ್ಖಾನೆಗಳಿಗೆ ನೀರು ಹರಿಸದಿರಲು ಎಚ್ಚರಿಕೆ ನೀಡಿದರು. ಕೂಡಲೇ ಅಕ್ರಮವಾಗಿ ಪೈಪ್‍ಗಳನ್ನು ಹಾಕಿಕೊಂಡಿರುವವರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

  • ‘ಜಲಯುದ್ಧ’ ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಜಿಪಂ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ

    ‘ಜಲಯುದ್ಧ’ ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಜಿಪಂ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ

    ಬೀದರ್: ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿದ್ದ ಸುದ್ದಿಯನ್ನು ಪಬ್ಲಿಕ್ ಟಿವಿ ಬೆಳಗ್ಗೆ ಪ್ರಸಾರ ಮಾಡಿತ್ತು. ‘ಜಲಯುದ್ಧ’ ಶೀರ್ಷಿಕೆಯಲ್ಲಿ ಸುದ್ದಿ ಪ್ರಸಾರ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯತ್ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ ಕೊಟ್ಟಿದ್ದಾರೆ.

    ಜಿಪಂ ಸಿಇಓ ಮಹಾಂತೇಶ ಬೀಳಗಿ ಚಿಮ್ಮೆಗಾಂವ್ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು, ಬಾವಿಯೊಳಗೆ ನೀರು ಬಿಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲದೇ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರನ್ನು ಸರಬರಾಜು ಮಾಡುವಂತೆ ಸೂಚಿಸಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೇಗಾಂವ್ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ನಿಷ್ಕಾಳಜಿ ವಹಿಸಿದ ಅಧಿಕಾರಿಗಳನ್ನು ಪರಿಶೀಲನೆ ಮಾಡಿ  ಅಮಾನತು ಮಾಡುತ್ತೇನೆ. ಚಿಮ್ಮೆಗಾಂವ್ ಗ್ರಾಮಕ್ಕೆ ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಿಇಓ ಮಹಾಂತೇಶ ಬೀಳಗಿ ಹೇಳಿದ್ದಾರೆ.

    ಚಿಮ್ಮೆಗಾಂವ್ ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ವಾಸವಾಗಿದ್ದು, ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಒಂದೇ ಬಾವಿ ಇದೆ. ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದರು. ಜನರು ಬಾವಿ ಸುತ್ತ ನಿಂತುಕೊಂಡು ಹಗ್ಗಕ್ಕೆ ಬಿಂದಿಗೆ ಕಟ್ಟಿಕೊಂಡು ಆಳವಾದ ಬಾವಿಗೆ ಬಿಟ್ಟು ನೀರು ಸೇದುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಚಕ್ಕೆ ಬಾರೇ ಎಂದಿದ್ದ ವಿಂಗ್ ಕಮಾಂಡರ್ ಮೇಲೆ ತನಿಖೆಗೆ ಆದೇಶ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಚಕ್ಕೆ ಬಾರೇ ಎಂದಿದ್ದ ವಿಂಗ್ ಕಮಾಂಡರ್ ಮೇಲೆ ತನಿಖೆಗೆ ಆದೇಶ

    – ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

    ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

    ಮಂಗಳವಾರ ಬೆಳಗ್ಗೆ ಅಮರ್ಜಿತ್ ಸಿಂಗ್ ಕಾಮಕಾಂಡದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬಳಿಕ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಚ್ಚೆತ್ತುಗೊಂಡು ಜಂಟಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ.

    ಅಮರ್ಜಿತ್ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದು, ಪೈಲೆಟ್ ಆಗುವ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡುತ್ತಿದ್ದಾರೆ ಎಂದ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದರು. ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ ಎಂದು ಹೇಳಿ ಬೆಡ್ ರೂಂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಅಮರ್ಜಿತ್ ಸಿಂಗ್ ಮೇಲೆ ಕೇಳಿ ಬಂದಿತ್ತು. ಇದನ್ನೂ ಓದಿ: ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್​ನಿಂದ ಪೋಲಿ ಮೆಸೇಜ್

    ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾತನಾಡಿ, “ದೂರುಗಳು ಬಂದಿದೆ. ಆದರೆ ನಮಗೆ ವಿಡಿಯೋ ದಾಖಲೆ ಹಾಗೂ ಮೆಸೇಜ್ ದಾಖಲೆಗಳು ಇರಲಿಲ್ಲ. ಪಬ್ಲಿಕ್ ಟಿವಿ ವರದಿ ಬಳಿಕ ಈ ದಾಖಲೆ ಪರಿಶೀಲಿಸಿ ಕ್ರಮಗೊಳ್ಳುತ್ತೇವೆ. ಈಗಾಗಲೇ ಬೇರೆ ತರಬೇತುದಾರರಿಗೆ ಟೆಂಡರ್ ಕರೆಯಲಿದ್ದೇವೆ. ಏಕಾಏಕಿ ಅಮರ್ಜಿತ್ ನನ್ನು ವಜಾಗೊಳಿಸಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಪರ್ಯಾಯ ಫ್ಲೈಯಿಂಗ್ ಟ್ರೈನರ್ ಸಿಕ್ಕ ತಕ್ಷಣ ಈತನನ್ನು ಅಮಾನತು ಮಾಡಲಿದ್ದೇವೆ. ಈ ವರದಿಯ ಬಗ್ಗೆ ಉಪಮುಖ್ಯಮಂತ್ರಿ, ಇಲಾಖಾ ಸಚಿವ ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದೇನೆ” ಎಂದು ತಿಳಿಸಿದ್ದಾರೆ.

    ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ಎಂದು ಕರೆದು ಬೆಡ್ ರೂಂ ಫೋಟೋ ಕಳುಹಿಸಿದ್ದರು. ಅಲ್ಲದೇ ವಿದ್ಯಾರ್ಥಿನಿಗೆ ಐದು ತಿಂಗಳಲ್ಲಿ ಬರೋಬ್ಬರಿ 900 ಮೆಸೇಜ್ ಮಾಡಿದ್ದಾರೆ. ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಕಳುಹಿಸಿರುವ ಪೋಲಿ ವಾಟ್ಸಪ್ ಮಸೇಜ್ ಗಳ ಸ್ಕ್ರೀನ್ ಶಾಟ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರ್ಷದ 365 ದಿನವೂ ಕತ್ತಲಲ್ಲೇ ಕಾಲ ಕಳೆಯುತ್ತಿದ್ದ ಗ್ರಾಮದಲ್ಲಿ ಮೂಡಿತು ಬೆಳಕು

    ವರ್ಷದ 365 ದಿನವೂ ಕತ್ತಲಲ್ಲೇ ಕಾಲ ಕಳೆಯುತ್ತಿದ್ದ ಗ್ರಾಮದಲ್ಲಿ ಮೂಡಿತು ಬೆಳಕು

    ರಾಯಚೂರು: ನಿತ್ಯ ರಾತ್ರಿವೇಳೆ ಪರದಾಡುತ್ತಿದ್ದ ಜನ ಈಗ ನೆಮ್ಮದಿಯಿಂದ ನಿದ್ದೆಮಾಡುತ್ತಿದ್ದು, ವಿದ್ಯಾರ್ಥಿಗಳ ಓದಿಗೂ ಈ ಹೊಸ ಬೆಳಕು ಹೊಸ ಹುಮ್ಮಸ್ಸನ್ನು ತಂದಿದೆ. ಹೌದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ರಾಯಚೂರಿನ ಈ ಗ್ರಾಮದಲ್ಲಿ ಬೆಳಕು ಮೂಡಿಸಿದ್ದೇವೆ. ವಿದ್ಯುತ್ ಸಂಪರ್ಕವೇ ಇಲ್ಲದ ಗ್ರಾಮಕ್ಕೆ ಈಗ ಸೋಲಾರ್ ಬೆಳಕನ್ನು ನೀಡಲಾಗಿದೆ.

    ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಂಗಮ್ಮನ ಹಟ್ಟಿ ಗ್ರಾಮದಲ್ಲಿ ಕಣ್ಣು ಹಾಯಿಸಿದಂತೆ ಬೀದಿಯಲ್ಲಿ ಸರ್ಕಾರಿ ಶಾಲೆ, 50ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದೆ. ಅದರಲ್ಲಿ 250ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಸ್ವಾತಂತ್ರ ಬಂದು 70 ವರ್ಷಗಳು ಕಳೆದರೂ ಮನೆಯಲ್ಲಿ ವಿದ್ಯುತ್ ಅಂದರೆ ಏನು ಎಂಬುವುದನ್ನು ತಿಳಿಯದೇ ಕತ್ತಲಲ್ಲಿ ಬದುಕುತ್ತಿದ್ದರು. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದ್ದರೂ ಮಕ್ಕಳು ಓದಲು ದೀಪದ ಬೆಳಕೆ ಗತಿಯಾಗಿತ್ತು. ರಾತ್ರಿ ವೇಳೆ ಹಾವು, ಚೇಳು ಕಾಟ ವಿಪರೀತವಾಗಿದ್ದು ಇಲ್ಲಿನ ಜನ ನಿತ್ಯ ಭಯದಲ್ಲೇ ಬದುಕುತ್ತಿದ್ದರು.

    ಮಂಗಮ್ಮನ ಹಟ್ಟಿ ಗ್ರಾಮಸ್ಥರು ಬೆಳಕನ್ನು ಅರಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಬಳಿಕ ಸೆಲ್ಕೋ ಸೋಲಾರ್ ಕಂಪನಿ ಮೂಲಕ ಪ್ರತಿಯೊಂದು ಮನೆಗೂ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಿ, ಮನೆ ಮನೆಗೂ ಬೆಳಕನ್ನು ನೀಡಲಾಗಿದೆ. ಕತ್ತಲಿನಲ್ಲಿದ್ದ ಜನರು ಬೆಳಕನ್ನು ನೋಡಿ ಬೆರಗಾಗಿದ್ದಾರೆ. ಮಂಗಮ್ಮನಹಟ್ಟಿ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು ಈ ಎರಡು ಗ್ರಾಮಗಳಿಗೂ ಬೆಳಕು ನೀಡಲು ಸೆಲ್ಕೋ ಸೋಲಾರ್ ಕಂಪನಿ ಸಾಥ್ ನೀಡಿತು. ಕಿಸಾನ್ ಭಾರತಿ ಟ್ರಸ್ಟ್ ಗ್ರಾಮಸ್ಥರಿಗೆ ಕೇವಲ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಆಧಾರದ ಮೇಲೆ ಪ್ರತಿಯೊಬ್ಬರಿಗೆ 4 ಸಾವಿರ ರೂಪಾಯಿ ಸಾಲವನ್ನು ನೀಡಿದೆ. ಉಳಿದ ಖರ್ಚನ್ನು ಪಬ್ಲಿಕ್ ಟಿವಿ ಹಾಗೂ ಸೆಲ್ಕೋಸೋಲಾರ್ ಕಂಪೆನಿ ಭರಿಸಿದೆ.

    ಮಂಗಮ್ಮನಹಟ್ಟಿ ಪಕ್ಕದ ಕಂಟೇರಹಟ್ಟಿ ಗ್ರಾಮಕ್ಕೂ ಬೆಳಕು ನೀಡಲು ಮುಂದಾದ ವೇಳೆ ಸರ್ಕಾರ ಎಚ್ಚೆತ್ತು ವಿದ್ಯುತ್ ಸಂಪರ್ಕ ಕಾರ್ಯ ಕಲ್ಪಿಸುವ ಕಾರ್ಯವನ್ನು ಆರಂಭಿಸಿದೆ. ಇಷ್ಟುದಿನ ಸುಮ್ಮನಿದ್ದ ಸರ್ಕಾರ ಸದ್ಯ ಎಚ್ಚೆತ್ತಿದ್ದು ಸಮಾಧಾನ ತಂದಿದೆ. ಪ್ರತಿ ದಿನ ಕತ್ತಲಿನಲ್ಲೇ ಕಾಲ ಕಳೆಯುತ್ತಿದ್ದ ಮಂಗಮ್ಮನ ಹಟ್ಟಿ ಗ್ರಾಮದ ಜನ ಈಗ ನೆಮ್ಮದಿಯ ಬೆಳಕು ಕಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಗದಗ ನ್ಯಾಯಬೆಲೆ ಅಂಗಡಿ ಗುತ್ತಿಗೆದಾರನ ಲೈಸನ್ಸ್ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಗದಗ ನ್ಯಾಯಬೆಲೆ ಅಂಗಡಿ ಗುತ್ತಿಗೆದಾರನ ಲೈಸನ್ಸ್ ರದ್ದು

    ಗದಗ: ನಗರದಲ್ಲಿ ಅನ್ನಭಾಗ್ಯದ ಬದಲು ಹುಳು ಅಕ್ಕಿ ಭಾಗ್ಯ ವಿತರಣೆ ಮಾಡುತ್ತಿದ್ದ ನ್ಯಾಯಬೆಲೆ ಅಂಗಡಿಯ ಗುತ್ತಿಗೆದಾರನ ಲೈಸನ್ಸ್ ರದ್ದಾಗಿದೆ.

    ಇಂದು ಪಬ್ಲಿಕ್ ಟಿವಿ ನ್ಯಾಯ ಬೆಲೆ ಅಕ್ರಮದ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ನಗರದ 46 ನೇ ನ್ಯಾಯಬೆಲೆ ಅಂಗಡಿ ಗುತ್ತಿಗೆದಾರ ಆರ್.ಎಂ ಪುಟ್ಟಿ ಅವರ ಲೈಸನ್ಸ್ ರದ್ದು ಮಾಡಿದೆ. ನಂತರ ಅಲ್ಲಿರುವ ಎಲ್ಲಾ ಅಕ್ಕಿ ಮೂಟೆಗಳನ್ನ ಲಾರಿ ಮೂಲಕ ಮತ್ತೆ ಗೊದಾಮಿಗೆ ಶಿಫ್ಟ್ ಮಾಡಿದೆ.

    ಏನಾಗಿತ್ತು?: ಹಸಿದ ಹೊಟ್ಟೆಗೆ ಅನ್ನ ನೀಡಲು ಅನ್ನಭಾಗ್ಯದಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದ್ರೆ ಅಧಿಕಾರಿಗಳ ಎಡವಟ್ಟಿನಿಂದ ಬಡವರಿಗೆ ಅನ್ನಭಾಗ್ಯದ ಜೊತೆ ಹುಳುಗಳ ಭಾಗ್ಯವೂ ದೊರೆತಂತಾಗಿತ್ತು. ಗದಗ- ಬೆಟಗೇರಿ ನ್ಯಾಯಬೆಲೆ ಅಂಗಡಿ ಸಂಖ್ಯೆ 46 ರಲ್ಲಿ ಕಳಪೆ ಅಕ್ಕಿ ಪೂರೈಕೆಯಾಗಿದ್ದು, ಜನ್ರ ಆಕ್ರೋಶಕ್ಕೆ ಕಾರಣವಾಗಿತ್ತು.

    ಅನ್ನಭಾಗ್ಯಕ್ಕೆ ಪೂರೈಕೆಯಾದ ಅಕ್ಕಿ ತುಂಬ ಹುಳುಗಳು ತುಂಬಿಕೊಂಡಿದ್ದು, ಪೂರೈಕೆಯಾದ ನೂರಾರು ಕ್ವಿಂಟಲ್ ಅಕ್ಕಿಯೂ ಕಳಪೆಯಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ದಾರ ಆರ್.ಎಮ್.ಪುಟ್ಟಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದರು. ಅನ್ನಭಾಗ್ಯದ ನೆಪದಲ್ಲಿ ಮನುಷ್ಯರು ತಿನ್ನೋಕೆ ಯೋಗ್ಯವಲ್ಲದ ಅಕ್ಕಿ ವಿತರಣೆ ಏಕೆ ಎಂದು ಪ್ರಶ್ನಿಸಿದ್ದು, ಅಕ್ಕಿ ತುಂಬ ನುಸಿ, ಬಿಳಿ ಹುಳುಗಳು ತುಂಬಿಕೊಂಡಿತ್ತು. ಅನ್ನಭಾಗ್ಯವನ್ನೆ ನಂಬಿಕೊಂಡ ಬಹುತೇಕ ಕುಟುಂಬದ ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.

    ಖಾದರ್ ಪ್ರತಿಕ್ರಿಯೆ: ಇನ್ನು ಈ ಬಗ್ಗೆ ಆಹಾರ ಸಚಿವ ಯು. ಟಿ ಖಾದರ್ ಪ್ರತಿಕ್ರಿಯಿಸಿದ್ದು, ಗದಗ ಬೆಟಗೇರಿ ನ್ಯಾಯಬೆಲೆ ಅಂಗಯಲ್ಲಿ ಹುಳ ಮಿಶ್ರಿತ ಅಕ್ಕಿಯನ್ನು ಸರಬರಾಜು ಮಾಡಿದ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನ್ಯಾಯಬೆಲೆ ಅಂಗಡಿಯವರು ಹಳೆಯ ಅಕ್ಕಿಯನ್ನು ಪೂರೈಕೆ ಮಾಡಿರುವ ಸಾಧ್ಯತೆ ಇದೆ. ಈ ಅಕ್ಕಿ ಯಾವ ಡಿಪ್ಪೊದಿಂದ ಬಂದಿದೆ ಎಂದು ತನಿಖೆ ನಡೆಸಿ ಡಿಪ್ಪೋ ಮ್ಯಾನೇಜರ್ ಮೇಲೂ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ತಿಂಗಳು ತಿಂಗಳು ಸರಿಯಾಗಿ ಅಕ್ಕಿ ಪೂರೈಕೆ ಮಾಡುತ್ತಿದ್ದರೂ ಈ ರೀತಿ ಹಳೆಯ ಅಕ್ಕಿಯನ್ನು ಕೊಡುವ ಮಾಹಿತಿ ಇದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಈ ರೀತಿ ಆದರೆ ತಕ್ಷಣಕ್ಕೆ ಕ್ರಮಕೈಗೊಳ್ಳಲಾಗುವುದು, ಜನರೂ ಇಂತಹ ಅಕ್ಕಿಗಳನ್ನು ಸ್ವೀಕರಿಸದೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

    ಸಿ.ಟಿ ರವಿ ಖಂಡನೆ: ಅನ್ನಭಾಗ್ಯ ಯೋಜನೆ ಮೂಲಕ ಹುಳು ಹಿಡಿದ ಅಕ್ಕಿಯನ್ನು ಸರ್ಕಾರ ನೀಡುತ್ತಿರುವುದನ್ನು ಬಿಜೆಪಿ ಶಾಸಕ ಸಿ.ಟಿ ರವಿ ತೀವ್ರವಾಗಿ ಖಂಡಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಹುಳು ಹಿಡಿದ ಅಕ್ಕಿ ಭಾಗ್ಯ ಕರುಣಿಸಿ ಬಡವರಿಗೆ ದ್ರೋಹ ಬಗೆಯುತ್ತಿರುವ ನಡೆ ಖಂಡನೀಯ ಅಂತಾ ಟ್ವೀಟ್ ಮೂಲಕ ಸಿಟಿ ರವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.