Tag: impact

  • ಎಲೆಕ್ಟ್ರಿಕ್ ವಾಹನಗಳು ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತೆ?

    ಎಲೆಕ್ಟ್ರಿಕ್ ವಾಹನಗಳು ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತೆ?

    ಸಾರಿಗೆ ಮತ್ತು ವಾಹನಗಳು ಆಧುನಿಕ ಜೀವನದ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ. ವಾಹನ ಇಲ್ಲದ ಮನೆಗಳು ಕಾಣಸಿಗುವುದು ಬಲು ಅಪರೂಪವೇ ಸರಿ. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಗಾಡಿಗಳು ಚಾಲ್ತಿಯಲ್ಲಿವೆ. ಅದರೊಂದಿಗೆ ಹೊಸದಾಗಿ ಎಲೆಕ್ಟ್ರಿಕ್ ಗಾಡಿಗಳು ಕೂಡಾ ಸೇರಿಕೊಂಡಿವೆ. ಪೆಟ್ರೋಲ್ ಮತ್ತು ಡಿಸೇಲ್‌ ಗಾಡಿಗಳು ಹೆಚ್ಚು ಮಾಲಿನ್ಯವನ್ನು ಉಂಟುಮಾಡುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳು (Electric Vehicles) ಇದಕ್ಕೆ ತದ್ವಿರುದ್ಧವಾಗಿದೆ. ಹಾಗಿದ್ರೆ ಇದರಿಂದಾಗುವ ಪ್ರಯೋಜನಗಳೇನು? ಇದರಲ್ಲಿ ಏನಾದರೂ ದುಷ್ಪರಿಣಾಮಗಳಿವೆಯಾ? ಇದು ಆರ್ಥಿಕತೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಕಿರು ವಿವರಗಳು ಇಲ್ಲಿವೆ.

    ಕಡಿಮೆ ಚಾಲನೆಯ ವೆಚ್ಚಗಳು:
    ಇವಿ ವಾಹನಗಳ ಚಾಲನೆಯ ವೆಚ್ಚ ಪೆಟ್ರೋಲ್ ಮತ್ತು ಡೀಸೆಲ್‌ ವಾಹನಕ್ಕಿಂತ ಕಡಿಮೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬದಲು ಇವಿ ವಾಹನಗಳು ವಿದ್ಯುಚ್ಛಕ್ತಿಯನ್ನು ಬಳಸುತ್ತದೆ. ಇವಿ ವಾಹನಗಳು ಬ್ಯಾಟರಿಗಳನ್ನು ಒಳಗೊಂಡಿದ್ದು, ಇದನ್ನು ವಿದ್ಯುತ್‌ ಮೂಲಕ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಿಂತ ಕಡಿಮೆ ದರದಲ್ಲಿ ಇವಿ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.

    ತೆರಿಗೆ ಮತ್ತು ಆರ್ಥಿಕ ಪ್ರಯೋಜನಗಳು:
    ಇವಿ (EV) ವಾಹನಗಳನ್ನು ಖರೀದಿಸಲು ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆ ಪೆಟ್ರೋಲ್ ಅಥವಾ ಡೀಸೆಲ್‌
    ವಾಹನಗಳಿಗಿಂತ ಕಡಿಮೆಯಾಗಿದೆ. ನೀವು ಯಾವ ರಾಜ್ಯದಲ್ಲಿದ್ದೀರಾ ಎಂಬ ಆಧಾರದ ಮೇಲೆ ಸರ್ಕಾರವು ಅನೇಕ ನೀತಿ ನಿಯಮಗಳನ್ನು ರಚಿಸುತ್ತದೆ. ಕೆಲವು ಪ್ರೋತ್ಸಾಹದ ಕುರಿತು ಕೆಲವು ಅಂಶಗಳನ್ನು ಈ ಕೆಳಗೆ ನೀಡಲಾಗಿದೆ.

    1)ಖರೀದಿ ಪ್ರೋತ್ಸಾಹ:
    ಇವಿ ವಾಹನ ವೆಚ್ಚದಲ್ಲಿ ಬಳಕೆದಾದರಿಗೆ ನೇರ ರಿಯಾಯಿತಿಯನ್ನು ನೀಡಲಾಗುತ್ತದೆ.
    2)ಕೂಪನ್:
    ಮೊತ್ತವನ್ನು ನಂತರ ಮರುಪಾವತಿ ಮಾಡುವ ಹಣಕಾಸಿನ ಪ್ರೋತ್ಸಾಹವನ್ನು ನೀಡಲಾಗುತ್ತದೆ.
    3)ಬಡ್ಡಿ ರಿಯಾಯಿತಿ:
    ಸಾಲವನ್ನು ಪಡೆಯಬೇಕಾದರೆ ಬಡ್ಡಿ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.
    4)ರಸ್ತೆ ತೆರಿಗೆ ವಿನಾಯಿತಿ:
    ವಾಹನ ಖರೀದಿಯ ಸಮಯದಲ್ಲಿ ರಸ್ತೆ ತೆರಿಗೆಯನ್ನು ಮನ್ನಾ ಮಾಡಲಾಗುತ್ತದೆ.
    5)ನೋಂದಣಿ ಶುಲ್ಕ ವಿನಾಯಿತಿ:
    ಹೊಸ ಇವಿ ವಾಹನ ಖರೀದಿ ವೇಳೆ ಅನ್ವಯವಾಗುವ ಒಂದು ಬಾರಿಯ ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.
    6) ಇತರೆ:
    ಇವಿ ವಾಹನಗಳನ್ನು ಖರೀದಿಸುವ ಸಮಯದಲ್ಲಿ ಬಡ್ಡಿ ರಹಿತ ಸಾಲಗಳು, ಟಾಪ್‌ಅಪ್ ಸಬ್ಸಿಡಿಗಳು ಮುಂತಾದವುಗಳ್ನು ಸಹಿತ ಪಡೆದುಕೊಳ್ಳಹುದು.

    ಪೆಟ್ರೋಲ್ ಮತ್ತು ಡೀಸೆಲ್ ದುಷ್ಪರಿಣಾಮಗಳು:
    ಪಳೆಯುಳಿಕೆ ಇಂಧನಗಳು ಇತ್ತೀಚಿಗೆ ಸರಿಯಾಗಿ ಲಭ್ಯವಾಗದಿರುವುದು ಒಂದೆಡೆಯಾದರೆ ಈ ಇಂಧನಗಳು ವಾಹನಗಳಿಂದ ವಿಷಕಾರಿ ಹೊಗೆಯನ್ನು ಹೊರಸೂಸುವುದರಿಂದ ಸಾರ್ವಜನಿಕರ ಮೇಲೆ ದೀರ್ಘಕಾಲೀನ ಪರಿಣಾಮಗಳು ಬೀರುತ್ತದೆ. ಇವಿ ವಾಹನಗಳಲ್ಲಿ ಈ ರೀತಿಯಾದ ವಿಷಕಾರಿ ಹೊಗೆ ಹೊರಸೂಸದಿರುವುದರಿಂದ ಪರಿಸರ ಸ್ನೇಹಿಯಾಗಿದ್ದು, ಜನರ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ ಎಂದು ಹೇಳಬಹುದು. ಪೆಟ್ರೋಲ್ ಮತ್ತು ಡೀಸೆಲ್‌ ವಾಹನಗಳು ಇವಿ ವಾಹನಗಳಿಗಿಂತ ಸುಮಾರು 3ಪಟ್ಟು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ.

    ಇವಿ ವಾಹನಗಳ ಚಾಲನೆ ಸುಲಭ ಮತ್ತು ಸೌಂಡ್ ರಹಿತವಾಗಿರುತ್ತದೆ:
    ಇವಿ ವಾಹನಗಳ ಚಾಲನೆ ಅತ್ಯಂತ ಸುಲಭವಾಗಿದ್ದು, ಈ ವಾಹನಗಳು ಗೇರ್‌ಗಳನ್ನು ಹೊಂದಿರುವುದಿಲ್ಲ. ಆಕ್ಸಿಲರೇಟರ್, ಬ್ರೇಕ್ ಮತ್ತು ಸ್ಟೇರಿಂಗ್ ಅನ್ನು ಹೊಂದಿರುತ್ತದೆ. ಈ ವಾಹನಗಳನ್ನು ನಾವು ಬಯಸಿದಾಗ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದನ್ನು ಸಾರ್ವಜನಿಕ ಸ್ಥಳಗಳಲ್ಲಿಯೂ ಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ವಾಹನಗಳು ಯಾವುದೇ ಶಬ್ಧವನ್ನು ಹೊರಸೂಸುವುದಿಲ್ಲ. ಇದು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

    ಇವಿ ವಾಹನಗಳ ಹೆಚ್ಚಳದಿಂದಾಗಿ ಲಿಥಿಯಂ ಬೇಡಿಕೆ ಹೆಚ್ಚಾಗುತ್ತದೆ. ದೇಶಗಳು ತಮ್ಮ ಗಮನವನ್ನು ಕಚ್ಚಾ ತೈಲದಿಂದ ಲಿಥಿಯಂ ಗಣಿಗಾರಿಕೆಗೆ ಬದಲಾಯಿಸುತ್ತವೆ. ಇದರಿಂದಾಗಿ ತೈಲ ರಫ್ತು ಮತ್ತು ಆಮದು ಮಾಡುವ ದೇಶಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ.

    ತೈಲ ಉತ್ಪಾದನೆ ಮಾಡುವ ದೇಶಗಳ ಮೇಲೆ ಏನು ಪರಿಣಾಮ?
    ತೈಲ ರಫ್ತು ಮಾಡುವ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಕುವೈತ್ ಮುಂತಾದ ದೇಶಗಳಿಗೆ ಇವಿ ವಾಹನ ಖರೀದಿಯಿಂದ ನಕರಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ಆ ದೇಶಗಳ ಆರ್ಥಿಕತೆಯು ತೈಲ ರಫ್ತಿನ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಸೌದಿ ಅರೇಬಿಯಾ ವಿಶ್ವದ 15%ನಷ್ಟು ತೈಲವನ್ನು ಒಳಗೊಂಡಿದೆ. ಇವಿ ವಾಹನಗಳ ಹೆಚ್ಚು ಬಳಕೆಯಿಂದ ತೈಲ ಬೇಡಿಕೆಗಳು ಕಡಿಮೆಯಾಗುತ್ತದೆ. ಹೀಗಾಗಿ ಯುಎಇ ತೈಲ ರಫ್ತಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದು, ಜಿಡಿಪಿಗೆ ಕೊಡುಗೆ ನೀಡುವ ಸಲುವಾಗಿ ಇತರ ಕೈಗಾರಿಕೆಗಳ ಮೇಲೆ ಕೇಂದ್ರಿಕರಿಸುತ್ತಿದೆ. ತೈಲ ಉದ್ಯಮವನ್ನು ಹೊರತುಪಡಿಸಿ ಯುಎಇ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡಿದೆ.

    ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಪರಿಣಾಮ ಏನು?
    ಪ್ರಸ್ತುತ ಹೆಚ್ಚಿನ ದೇಶಗಳು ತೈಲಕ್ಕೆ ಅವಲಂಬಿತವಾಗಿದ್ದು, ತೈಲವನ್ನು ಆಮದು ಮಾಡಿಕೊಳ್ಳುತ್ತಿವೆ. ಇವಿ ವಾಹನಗಳು ಹೆಚ್ಚು ಬಳಕೆಯಾದರೆ ತೈಲ ಆಮದು ಮಾಡಿಕೊಳ್ಳುವ ದೇಶಗಳು ತಮ್ಮ ಹಣಕಾಸಿನ ಕೊರತೆಯನ್ನು ಭರಿಸಬಹುದು. ಅಲ್ಲದೇ ಜಿಡಿಪಿಯನ್ನು ಹೆಚ್ಚಿಸಬಹುದು. ಲಿಥಿಯಂ ಆಮದು ಹೆಚ್ಚಾಗಿದ್ದರೂ, ಪೆಟ್ರೋಲ್ ಆಮದಿಗಿಂತ ಇದು ಉತ್ತಮವಾಗಿದೆ. ಇದರ ಜೊತೆಗೆ ಲಿಥಿಯಂ ಗಣಿಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದರೆ ಭವಿಷ್ಯದಲ್ಲಿ ಲಿಥಿಯಂ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದು.

    ಉದ್ಯೋಗದ ಮೇಲೆ ಪರಿಣಾಮ ಏನು?
    ಇಂಧನ ಉತ್ಪಾದನೆಗಿಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ವಿಭಿನ್ನ ಕೌಶಲ್ಯಗಳ ಅಗತ್ಯವಿರುವುದರಿಂದ ಕಾರ್ಮಿಕರ ಮಾರ್ಕೆಟ್‌ನಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಕಡಿಮೆ ಕಾರ್ಮಿಕರು ಬೇಕಾಗಿರುವುದರಿಂದ ಇದು ಉದ್ಯೋಗದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.

    ಕಾರ್ಪೊರೇಟ್ ವಲಯ ಮತ್ತು ಹಣಕಾಸು ಮಾರುಕಟ್ಟೆಗಳ ಮೇಲೆ ಪರಿಣಾಮ:
    ಇವಿ ವಾಹನ ಬಳಕೆಯಿಂದಾಗಿ ತೈಲ ಮತ್ತು ಅನಿಲ ಪರಿಶೋಧನೆ, ತೈಲ ವ್ಯಾಪಾರ ಮತ್ತು ವಾಹನ ಬಿಡಿಭಾಗಗಳ ಲಾಭವು ಗಮನಾರ್ಹವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಕಂಪನಿಯ ಷೇರು ಬೆಲೆ ಕೂಡ ಕುಸಿಯುತ್ತದೆ. ಹೀಗಾಗಿ ಇದು ಹೂಡಿಕೆದಾರರನ್ನು ಆಕರ್ಷಿಸುವುದಿಲ್ಲ. ಮತ್ತೊಂದೆಡೆ ಎಲೆಕ್ಟ್ರಿಕ್‌ ವಾಹನ ಸಂಬಂಧಿತ ಕಂಪನಿಗಳು ಅದರಲ್ಲೂ ಬ್ಯಾಟರಿ ಕಂಪನಿಗಳು ಲಾಭ ಮತ್ತು ಷೇರು ಬೆಲೆಗಳಲ್ಲಿ ಹೆಚ್ಚಳವನ್ನು ಕಾಣುತ್ತದೆ. ಇಷ್ಟು ಮಾತ್ರವಲ್ಲದೇ ಚಾರ್ಜಿಂಗ್ ಸ್ಟೇಷನ್ ಪ್ರೊವೈಡರ್ ಕಂಪನಿಗಳು ಕೂಡಾ ಗಣನೀಯವಾಗಿ ಬೇಡಿಕೆಯಲ್ಲಿ ಹೆಚ್ಚಳವನ್ನು ಕಾಣುತ್ತದೆ.

    ವಿದ್ಯುತ್ ಬೇಡಿಕೆ:
    ಇವಿ ವಾಹನಗಳನ್ನು ಚಾರ್ಜ್ ಮಾಡುವ ಸಲುವಾಗಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ. ಇದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ವಿದ್ಯುತ್ ಪೂರೈಕೆಯು ಸೌರ, ಗಾಳಿ ಮತ್ತು ಜೈವಿಕ ಅನಿಲಗಳಿಂದ ಪೂರೈಸಿದರೆ ಉತ್ತಮ. ಯಾಕೆಂದರೆ ಹೆಚ್ಚುವರಿ ಪೂರೈಕೆಯನ್ನು ಈಡೇರಿಸಲು ಕಲ್ಲಿದ್ದಲ್ಲನ್ನು ಬಳಸಿದರೆ ಕಾರ್ಬನ್ ಅನ್ನು ಕಡಿಮೆ ಮಾಡುವ ಗುರಿಯನ್ನು ತಲುಪಲು ಸಾಧ್ಯವಿಲ್ಲ.

    ಭಾರತ ಸರ್ಕಾರವು 2030ರ ವೇಳೆಗೆ ದೇಶದ ವಾಹನ ಸಮೂಹದ 30%ನಷ್ಟು ವಿದ್ಯುದ್ದೀಕರಣವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು ಇವಿ ಉದ್ಯಮದ ಬೆಳವಣಿಗೆಯನ್ನು ಬೆಂಬಲಿಸುವ ಸಲುವಾಗಿ ಹಲವಾರು ಪ್ರೋತ್ಸಾಹ ಮತ್ತು ನೀತಿಗಳನ್ನು ಪರಿಚಯಿಸಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಹೈಡ್ರೋಜನ್ ಇಂಧನದ ಅಳವಡಿಕೆ ಮತ್ತು ಬದಲಾಗುತ್ತಿರುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಲುವಾಗಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉದ್ಯಮಕ್ಕೆ ಪ್ರಮುಖ ಉತ್ತೇಜನ ನೀಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ 2070ರ ವೇಳೆಗೆ ಶಕ್ತಿ ಪರಿವರ್ತನೆ ಮತ್ತು ನಿವ್ವಳ ಶೂನ್ಯ ಗುರಿಗಳನ್ನು ಹೊಂದಿರುವ ನಿರ್ಣಾಯಕ ಬಂಡವಾಳ ಹೂಡಿಕೆಗಾಗಿ 35,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್‌ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಡೊಂಗ್ರಿ ಗ್ರಾಮದ ಶಾಲಾ ಮಕ್ಕಳಿಗೆ ಬಸ್ ಸಂಚಾರ ಪ್ರಾರಂಭ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಡೊಂಗ್ರಿ ಗ್ರಾಮದ ಶಾಲಾ ಮಕ್ಕಳಿಗೆ ಬಸ್ ಸಂಚಾರ ಪ್ರಾರಂಭ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗ್ರಾಮದ ಡೊಂಗ್ರಿ ಗ್ರಾಮದ ಮಕ್ಕಳು ತೂಗು ಸೇತುವೆ ಎರಡು ವರ್ಷದ ಹಿಂದೆ ಪ್ರವಾದಲ್ಲಿ ಕೊಚ್ವಿಹೋಗಿದ್ದರಿಂದ ಗಂಗಾವಳಿ ನದಿ ನೀರಿನಲ್ಲಿ ಜೀವ ಕೈಯಲ್ಲಿ ಹಿಡಿದು ಪ್ರತಿ ದಿನ ಶಾಲೆ ಹಾಗೂ ಕಾಲೇಜಿಗೆ ತೆರಳಬೇಕಿತ್ತು. ಈ ಕುರಿತು ಪಬ್ಲಿಕ್ ಟಿವಿ ತುಂಬಿ ಹರಿಯುವ ನದಿಯಲ್ಲಿ ಸಾವಿನ ಸಂಚಾರ ಎಂಬ ಶೀರ್ಷಿಕೆ ಅಡಿ ವರದಿ ಪ್ರಸಾರ ಮಾಡಿತ್ತು.

    ಡೊಂಗ್ರಿ ಗ್ರಾಮಕ್ಕೆ ಹೋಗಬೇಕು ಎಂದರೆ ಯಲ್ಲಾಪುರ ಭಾಗದಿಂದ ಸುತ್ತುವರೆದು 20ಕಿ.ಮೀಟರ್ ಬಸ್ ಸಂಚಾರ ಮಾಡಬೇಕಿತ್ತು. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ಡೊಂಗ್ರಿ ಗ್ರಾಮದ ಮಕ್ಕಳು ಶಾಲೆ ಕಾಲೇಜಿಗೆ ತೆರಳಲು ಹರಿಯುತ್ತಿರುವ ನದಿಯಲ್ಲಿ ಬಿದಿರಿನ ಬೊಂಬಿನಿಂದ ನಿರ್ಮಾಣವಾದ ತೆಪ್ಪದಲ್ಲಿ ಸಾಗುತ್ತಿದ್ದರು. ಸ್ಪಲ್ಪ ಆಯ ತಪ್ಪಿದ್ದರೂ ನೀರಿನಲ್ಲಿ ಬಿದ್ದು ಜೀವ ಕಳೆದುಕೊಳ್ಳುವ ಸ್ಥಿತಿ ಅಲ್ಲಿತ್ತು. ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು.

    ವರದಿ ನಂತರ ಅಂಕೋಲ ತಾಲೂಕಿನ ತಹಶೀಲ್ದಾರ್ ಭೇಟಿ ನೀಡಿ ಗ್ರಾಮದವರಿಗೆ ಹೆದರಿಸಿ ಮಾಧ್ಯಮಗಳಿಗೆ ಹೋದರೆ ನೋಟೀಸ್ ನೀಡುವ ಬೆದರಿಕೆ ಸಹ ಹಾಕಿದ್ದರು. ಈ ಕುರಿತು ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಂಡಿದ್ದರು. ತಕ್ಷಣ ಅಧಿಕಾರಿಗಳ ನಡವಳಿಕೆ ಹಾಗೂ ಗ್ರಾಮದ ನೈಜ ಸಮಸ್ಯೆ ಬಗ್ಗೆ ಇಲ್ಲಿನ ಶಾಸಕ ರೂಪಾಲಿ ನಾಯ್ಕ ಅವರ ಗಮನಕ್ಕೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.

    ಇದಕ್ಕೆ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ ಅವರು ತೂಗು ಸೇತುವೆ ನಿರ್ಮಾಣ ಮಾಡಲು ಎರಡು ಕೋಟಿ ತುರ್ತು ಮಂಜೂರಿಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಜೊತೆಗೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಮಕ್ಕಳಿಗೆ ಶಾಲೆಗೆ ತೆರಳಲು ನಿನ್ನೆಯಿಂದ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಜೀವ ಕೈಯಲ್ಲಿ ಹಿಡಿದು ಶಾಲೆಗೆ ತೆರಳುತಿದ್ದ ಮಕ್ಕಳಿಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಇನ್ನು ತಮ್ಮೂರಿನ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಹಾಗೂ ವರದಿ ಮಾಡಿ ಆಡಳಿತದ ಕಣ್ಣು ತೆರೆಯುವಂತೆ ಮಾಡಿದ ಪಬ್ಲಿಕ್ ಟಿವಿ ಗೆ ಗ್ರಾಮದವರು ಧನ್ಯವಾದ ಅರ್ಪಿಸಿದ್ದಾರೆ.

  • ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ

    ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ

    – ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಗೆ ಮಿಡಿದ ಬಾಲಿವುಡ್ ನಟ

    ಯಾದಗಿರಿ: ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ ಕುಟುಂಬಕ್ಕೆ ಬಾಲಿವುಡ್ ನಟ ಸೋನು ಸೂದ್ ನೆರವಿನ ಹಸ್ತ ಚಾಚಿದ್ದಾರೆ.

    ಯಾದಗಿರಿ ತಾಲೂಕಿನ ರಾಮ ಸಮುದ್ರ ಗ್ರಾಮದ ಪದ್ಮಾ ಆಗಸ್ಟ್ 22 ರಂದು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಪತಿ ನಾಗರಾಜ್ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸ ಬಿಟ್ಟು ವಾಪಸ್ ಊರಿಗೆ ಬಂದಿದ್ದರು. ಊರಲ್ಲಿ ಕೆಲಸ ಸಿಗದೆ ನಾಗರಾಜ್ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ ಡಿಜಿಟಲ್ ಇಂಪ್ಯಾಕ್ಟ್- ತ್ರಿವಳಿ ಮಕ್ಕಳಿಗೆ ಹರಿದು ಬಂತು ನೆರವಿನ ಮಹಾಪೂರ

    ಇಂತಹ ಸಂಕಷ್ಟದ ನಡುವೆ ನಾಗರಾಜ್ ಪತ್ನಿ ಪದ್ಮಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತಾಯಿ ಮಕ್ಕಳು ಆರೋಗ್ಯವಾಗಿರೋದು ನಾಗರಾಜ್‍ಗೆ ಖುಷಿ ತಂದಿದೆ. ಈಗಾಗಲೇ ಪತ್ನಿ ಹೆರಿಗೆ ಖರ್ಚಿಗೆಂದು 30 ಸಾವಿರ ರೂ. ಕೂಡ ಸಾಲ ಪಡೆದಿದ್ದರು. ಹೀಗಾಗಿ ನಾಗರಾಜ್ ಕುಟುಂಬ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ.

    ನಾಗರಾಜ್ ಮೊದಲಿನ ಹೆಣ್ಣು ಮಗು ಸೇರಿದಂತೆ ನಾಲ್ವರು ಮಕ್ಕಳ ಭವಿಷ್ಯದ ಬಗ್ಗೆ ತೀವ್ರ ಚಿಂತೆಯಲ್ಲಿ ಸಹಾಯ ಹಸ್ತ ಕೇಳಿದ್ದರು. ಆಗ ಕೆಲ ಸ್ಥಳೀಯರು ಕೂಡ ಆರ್ಥಿಕ ಸಹಾಯ ಮಾಡಿದರು. ಈ ಸುದ್ದಿ ಪಬ್ಲಿಕ್ ಟಿವಿ ವೆಬ್ ಸೈಟ್‍ನಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಜಿಲ್ಲೆಯ ಹತ್ತಿಕುಣಿ ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ ಎಂಬವರು ವೆಬ್ ಸೈಟ್ ಕಟಿಂಗ್‍ಗಳನ್ನು, ಸೋನು ತಂಡಕ್ಕೆ ಮೆಸೇಜ್ ಮಾಡಿ ನಾಗರಾಜ್ ಪರಿಸ್ಥಿತಿ ಬಗ್ಗೆ ವಿವರಿಸಿದರು.

    ಕೂಡಲೇ ನಾಗರಾಜ್ ಜೊತೆ ಮಾತಾಡಿದ ಸೋನು ಸೂದ್ ತಂಡದ ಸದಸ್ಯ ಗೋವಿಂದ್ ಅಗರ್ವಾಲ್, ಎಲ್ಲಾ ಮಾಹಿತಿ ಪಡೆದು ನೆರವಿನ ಭರವಸೆ ನೀಡಿದ್ದಾರೆ. ಸದ್ಯ ಮೂರು ತಿಂಗಳ ದಿನಸಿ ಪದಾರ್ಥ ನೀಡಲು ಮುಂದಾಗಿರೋ ಸೋನು ತಂಡ, ಭವಿಷ್ಯದಲ್ಲಿ ಮಕ್ಕಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದೆ. ನೆರವು ನೀಡಲು ಮುಂದಾಗಿರುವ ತಂಡಕ್ಕೆ ನಾಗರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಮಲ್ಲಿಕಾರ್ಜುನ ರೆಡ್ಡಿ ಈ ಬಗ್ಗೆ ನಟ ಸೋನು ಸೂದ್ ಜೊತೆ ಮಾತನಾಡಿ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ನಂತರ ಸೋನು ಸೂದ್ ಕೂಡ ಮಲ್ಲಿಕಾರ್ಜುನ ರೆಡ್ಡಿ ಅವರ ಜೊತೆ ಮಾತನಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ತ್ರಿವಳಿ ಮಕ್ಕಳ ಪೋಷಕರ ನೋವಿಗೆ ನಟ ಸೋನು ಸೂದ್ ಕಾಳಜಿ ತೋರಿ ನೆರವಿನ ಭರವಸೆ ನೀಡಿದ್ದು, ಬಡ ಕುಟುಂಬಕ್ಕೆ ಖುಷಿಕೊಟ್ಟಿದೆ.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕ್ಷೌರಿಕನ ಸಹಾಯಕ್ಕೆ ಬಂದ ಶಾಸಕ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕ್ಷೌರಿಕನ ಸಹಾಯಕ್ಕೆ ಬಂದ ಶಾಸಕ

    ಮಂಗಳೂರು: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ್ ಎಂಬವರಿಗೆ ಬೇಕಾದ ದಿನಚರಿ ವಸ್ತುಗಳನ್ನು ಇಂದು ನೀಡಲಾಯಿತು.

    ಮಲ್ಲೇಶ್ ಚಿತ್ರದುರ್ಗ ಮೂಲದವರಾಗಿದ್ದು ಕಳೆದ ಕೆಲವು ವರ್ಷದಿಂದ ಬೆಳ್ತಂಗಡಿಯ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದು ಲಾಕ್ ಡೌನ್ ಬಳಿಕ ಸಲೂನ್ ಓಪನ್ ಆದ್ರೂ ಜನ ಬರದೇ ದಿನಕ್ಕೆ 100 ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗದೆ ಊಟಕ್ಕೂ ಕಷ್ಟವಾಗಿತ್ತು. ಹೀಗಾಗಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಮಲ್ಲೇಶ್ ಕರೆ ಮಾಡಿದ್ದರು.

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ “ಶ್ರಮಿಕ ನೆರವು” ಮೂಲಕ ದಿನ ಬಳಕೆಗೆ ಬೇಕಾದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ಇಂದು ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾತನಾಡಿದ ಮಲ್ಲೇಶ್ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹಾಗೂ ಶಾಸಕ ಹರೀಶ್ ಪೂಂಜಾ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಜಗದೀಶ್ ಲಾಯಿಲಾ, ರಾಜೇಶ್ ಪೆಂರ್ಬುಡ, ಪ್ರತೀಶ್ ಹೊಸಂಗಡಿ, ಸುಪ್ರಿತ್ ಜೈನ್, ಆದೇಶ್ ಶೆಟ್ಟಿ ಜೊತೆಗಿದ್ದರು.

  • ಮತ್ತೊಂದು ಬಿಗ್ ಇಂಪ್ಯಾಕ್ಟ್- ಆನ್‍ಲೈನ್ ಕ್ಲಾಸ್ ಹೆಸ್ರಲ್ಲಿ ಫೀಸ್ ತಗೊಳೋ ಹಾಗಿಲ್ಲ

    ಮತ್ತೊಂದು ಬಿಗ್ ಇಂಪ್ಯಾಕ್ಟ್- ಆನ್‍ಲೈನ್ ಕ್ಲಾಸ್ ಹೆಸ್ರಲ್ಲಿ ಫೀಸ್ ತಗೊಳೋ ಹಾಗಿಲ್ಲ

    – ಮಾನವೀಯತೆ ದೃಷ್ಟಿಯಿಂದ ಅರ್ಧ ಫೀಸ್ ಮಾತ್ರ ತಗೆದುಕೊಳ್ಳಿ
    – ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತೆ
    – ಪ್ರತಿಯೊಬ್ಬ ವಿದ್ಯಾರ್ಥಿಗೆ ಮಾಸ್ಕ್

    ಬೆಂಗಳೂರು: ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚು ಶುಲ್ಕ ತೆಗೆದುಕೊಳ್ಳುವ ಹಾಗಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

    ಕೆಲ ಖಾಸಗಿ ಶಾಲೆಗಳು ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೊಬೈಲ್ ಶಾಲೆಗೆ ಬ್ರೇಕ್, 1ರಿಂದ 5ನೇ ತರಗತಿಯ ಆನ್‍ಲೈನ್ ಕ್ಲಾಸ್ ರದ್ದು

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಆನ್‍ಲೈನ್ ತರಗತಿ ಬಗ್ಗೆ ಚರ್ಚೆ ಆಗುತ್ತಿದೆ. ಈ ವಿಚಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದು, ಮಕ್ಕಳಿಗೆ ವಿವೇಚನ ರಹಿತವಾಗಿ ತರಗತಿ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಜೂನ್ 2ರಂದು ಈ ಕುರಿತು ಸಭೆ ಮಾಡಿದ್ವಿ. ಆದರೆ ಸಭೆ ಅಪೂರ್ಣವಾಗಿತ್ತು. ಇವತ್ತು ಕೂಡ ಸಭೆ ಮಾಡಿದ್ದೇವೆ ಎಂದು ತಿಳಿಸಿದರು.

    ಸಭೆಯಲ್ಲಿ ಜ್ಞಾನ ಆಯೋಗದ ಸದಸ್ಯರಾದ ಪ್ರೊ.ಶ್ರೀಧರ್, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಹೃಷಿಕೇಶ್, ನಿಮ್ಹಾನ್ಸ್ ನ ಪ್ರೊ. ಡಾ.ಜಾನ್ ವಿಜಯ್ ಸಾಗರ್, ಅರ್ಲಿ ಚೈಲ್ ಹುಡ್ ಅಸೋಸಿಯೇಷನ್ ಪ್ರತಿನಿಧಿ ಸೇರಿ ಹಲವರು ಇದ್ದರು. ಎಲ್ಲರ ಅನಿಸಿಕೆ ಆನ್‍ಲೈನ್ ಕ್ಲಾಸ್ ತರಗತಿ ಕಲಿಕೆ ಪರ್ಯಾಯ ಅಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನ ಕಲಿಕೆಯಲ್ಲಿ ತೊಡಗಿಸುವುದು ಹೇಗೆ ಅಂತ ಚರ್ಚೆ ಆಗಿದೆ. ಪಠ್ಯಕ್ರಮ ಮುಗಿಸಲು ಪಾಠ ಆಗಬಾರದು. ಬದಲಾಗಿ ಜ್ಞಾನಾರ್ಜನೆಗೆ ಪಾಠ ಆಗಬೇಕು ಎನ್ನುವ ಅಭಿಪ್ರಾಯ ಬಂದಿದೆ ಎಂದು ಸಚಿವರು ತಿಳಿಸಿದರು.

    ಸಭೆಯಲ್ಲಿ ಎರಡು ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ. ಮೊದಲು ಎಲ್‍ಕೆಜಿ, ಯುಕೆಜಿಗೆ ಆನ್‍ಲೈನ್ ರದ್ದುಗೊಳಿಸುವುದು ಹಾಗೂ 1ರಿಂದ 5ನೇ ತರಗತಿಗಳೂ ಆನ್‍ಲೈನ್ ಕ್ಲಾಸ್ ನಿಲ್ಲಿಸಬೇಕು. ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಆನ್‍ಲೈನ್ ಹೆಸರಲ್ಲಿ ಫೀಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಅಷ್ಟೇ ಅಲ್ಲದೆ ಯಾರು ಕೂಡ ಈ ವರ್ಷದ ಫೀಸ್ ಹೆಚ್ಚಳ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.

    ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಮಾನವೀಯತೆ ದೃಷ್ಟಿಯಿಂದ ಬೇಕಾದರೆ ಅರ್ಧದಷ್ಟು ಫೀಸ್ ತಗೆದುಕೊಳ್ಳಬಹುದು. ಆದರೆ ಆನ್‍ಲೈನ್ ಹೆಸರಿನಲ್ಲಿ ಫೀಸ್ ತಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದರು.

    ಪರೀಕ್ಷೆ:
    ಎಸ್‍ಎಸ್‍ಎಲ್‍ಸಿ ಜೂನ್ 25ರಿಂದ ಪರೀಕ್ಷೆಗಳು ನಡೆಯುತ್ತವೆ. ವಿಶೇಷ ಸನಿವೇಶದಲ್ಲಿ ಪರೀಕ್ಷೆ ನಡೆಸಬೇಕಿದ್ದು, ರಾಜ್ಯದ ಪ್ರಮುಖರ ಅಭಿಪ್ರಾಯ ಪಡೆದಿದ್ದೇನೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಗೆ ತೆರಳಿ ಸಭೆ ಮಾಡಿದ್ದೇನೆ ಎಂದು ತಿಳಿಸಿದರು.

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಸಂಬಂಧ ಚರ್ಚೆಗಾಗಿ ಸುಮಾರು 4 ಸಾವಿರ ಕಿ.ಮೀ ಸಂಚಾರ ಮಾಡಿದ್ದೇನೆ. ಮೈಕ್ರೋ ಲೆವಲ್ ಪ್ಲಾನಿಂಗ್ ಮಾಡಿದ್ದೇವೆ. ಸಾರಿಗೆ, ಆರೋಗ್ಯ, ಗೃಹ ಇಲಾಖೆ ಕೈಜೋಡಿಸುತ್ತಿದೆ. ರಾಜ್ಯದ ಎಲ್ಲಾ ಶಾಸಕರು, ಜಿಲ್ಲಾ ಪಂಚಾಯತ ಸದಸ್ಯರು ಪರೀಕ್ಷೆ ನಡೆಯಬೇಕು ಅಂತ ಸಹಕಾರ ನೀಡಿದ್ದಾರೆ. ಪ್ರತಿಯೊಬ್ಬರಿಗೆ 2-3 ಮಾಸ್ಕ್ ನಂತೆ 8.5 ಲಕ್ಷ ಮಕ್ಕಳಿಗೆ ಮಾಸ್ಕ್ ಕೊಡುತ್ತೇವೆ. ಇದಕ್ಕೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಾಸ್ಕ್ ಸಹಕಾರ ನೀಡಿದೆ ಎಂದು ಮಾಹಿತಿ ನೀಡಿದರು.

    ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅನಾರೋಗ್ಯ ಕಂಡು ಬಂದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಪರೀಕ್ಷೆ ಬರೆಸುತ್ತೇವೆ. ಸಾರಿಗೆ ವ್ಯವಸ್ಥೆಗೆ ಅಗತ್ಯ ಕ್ರಮ ವಹಿಸಿದ್ದೇವೆ. ಖಾಸಗಿ ಶಾಲೆಗಳ ವಾಹನಗಳನ್ನ ಬಳಸಿಕೊಳ್ಳಲಾಗುತ್ತದೆ. ಎಲ್ಲರೂ ಪರೀಕ್ಷೆ ನಡೆಸಲು ಸಹಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೊಬೈಲ್ ಶಾಲೆಗೆ ಬ್ರೇಕ್, 1ರಿಂದ 5ನೇ ತರಗತಿಯ ಆನ್‍ಲೈನ್ ಕ್ಲಾಸ್ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೊಬೈಲ್ ಶಾಲೆಗೆ ಬ್ರೇಕ್, 1ರಿಂದ 5ನೇ ತರಗತಿಯ ಆನ್‍ಲೈನ್ ಕ್ಲಾಸ್ ರದ್ದು

    ಬೆಂಗಳೂರು: ಎಲ್‍ಕೆಜಿ, ಯುಕೆಜಿ ಹಾಗೂ ಸಿಬಿಎಸ್‍ಸಿ ಸೇರಿದಂತೆ ಎಲ್ಲಾ ಮಾದರಿಯ ಶಾಲೆಗಳ 1ರಿಂದ 5ನೇ ತರಗತಿವರೆಗೂ ಆನ್‍ಲೈನ್ ಕ್ಲಾಸ್ ರದ್ದುಗೊಳಿಸಿ ಸರ್ಕಾರ ಮಹತ್ವದ ಆದೇಶ ನೀಡಿದೆ.

    ‘ಪಬ್ಲಿಕ್ ಟಿವಿ’ ಕಳೆದ ಒಂದು ವಾರದಿಂದ ಆಲ್‍ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ.

    ಆನ್‍ಲೈನ್ ತರಗತಿ ರದ್ದುಗೊಳಿಸುವ ವಿಚಾರವಾಗಿ ಪಬ್ಲಿಕ್ ಟಿವಿ ಅಭಿಯಾನ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಅವರು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳು, ತಜ್ಞರು, ಖಾಸಗಿ ಶಾಲೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.

    ಸಭೆಯಲ್ಲಿ ಸಚಿವ ಸುರೇಶ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕ ರಿಜು, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞರು ನಿರಂಜನ ಆರಾಧ್ಯ, ನಿಮ್ಹಾನ್ಸ್ ತಜ್ಞ ವೈದ್ಯರು ಹಾಗೂ ಖಾಸಗಿ ಶಾಲೆಗಳ ಸಂಘಟನೆ ಒಕ್ಕೂಟ (ಕ್ಯಾಮ್ಸ್) ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು.

    ಆನ್‍ಲೈನ್ ಕ್ಲಾಸ್‍ಗಳು ಮಕ್ಕಳ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಬ್ಲಿಕ್ ಟಿವಿ ಸ್ಪಷ್ಟಪಡಿಸಿತ್ತು. ಈ ಹಿಂದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬಂದಲ್ಲಿ ಹೋದಲ್ಲಿ, ಎಲ್‍ಕೆಜಿ, ಯುಕೆಜಿಗೆ ಆನ್‍ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಶಾಲಾ ಮಕ್ಕಳಿಗೂ ಇದು ಅಪಾಯಕಾರಿ. ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಆದರೆ ಖಾಸಗಿ ಶಾಲೆಗಳು ನಡೆಸುತ್ತಿರುವ ಆನ್‍ಲೈನ್ ಕ್ಲಾಸ್‍ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ.

    ಪೋಷಕರಿಂದ ಭಾರೀ ದೂರುಗಳು ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಳೆಯ ಕಂದಮ್ಮಗಳ ಮೇಲೆ ಹೇರಲಾಗುತ್ತಿರುವ ಆನ್‍ಲೈನ್ ತರಗತಿಯ ವಿರುದ್ಧ ಮಹಾ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ಸಿನಿಮಾ ಕಲಾವಿರು ಸಾಥ್ ನೀಡಿದ್ದರು.

    ಆನ್‍ಲೈನ್ ಕ್ಲಾಸ್ ಏನು? ಎತ್ತ?
    1-5 ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಯುತ್ತಿದೆ. ಬಹುತೇಕ ಶಾಲೆಗಳಲ್ಲಿ 9 ಗಂಟೆಯಿಂದ ಆನ್‍ಲೈನ್ ಕ್ಲಾಸ್ ಪ್ರಾರಂಭವಾದರೆ ಕೆಲವು ಶಾಲೆಗಳಲ್ಲಿ ಬೆಳಗ್ಗೆ 8 ರಿಂದಲೇ ಆನ್‍ಲೈನ್ ಕ್ಲಾಸ್ ಶುರುವಾಗುತ್ತಿದೆ. ಮಧ್ಯಾಹ್ನ 3 ರಿಂದ 4, 4 ರಿಂದ 5 ಗಂಟೆಗೆ ಮತ್ತೆ ತರಗತಿ ನಡೆಯುತ್ತಿದೆ.

    ಆನ್‍ಲೈನ್ ಕ್ಲಾಸ್‍ಗೆ ಮೊಬೈಲ್, ಲ್ಯಾಪ್ ಟ್ಯಾಬ್, ಟ್ಯಾಬ್, ಕಂಪ್ಯೂಟರ್ ಪೈಕಿ ಒಂದು ವಸ್ತು ಇರಬೇಕು. ಆನ್‍ಲೈನ್ ಕ್ಲಾಸ್ ಹಾಜರಾಗಲು ಇಂಟರ್ನೆಟ್ ಸೌಲಭ್ಯ ಇರಬೇಕು. ಆನ್‍ಲೈನ್ ತರಗತಿ ಆರಂಭಕ್ಕೆ 10 ನಿಮಿಷ ಮೊದಲು ವಿದ್ಯಾರ್ಥಿಗೆ ಪಾಸ್‍ವರ್ಡ್ ರವಾನೆಯಾಗುತ್ತದೆ. ಆ ಪಾಸ್‍ವರ್ಡ್ ಮೂಲಕ ವಿದ್ಯಾರ್ಥಿ ಲಾಗಿನ್ ಆಗಿ ಪಾಠ ಕೇಳಬೇಕು. ಬಹುತೇಕ ಟೀಚರ್‍ಗಳಿಗೆ ಪಾಠ ಮಾಡುವ ಸೌಲಭ್ಯ ಇರುತ್ತದೆ.

    ಶಿಕ್ಷೆ ಹೇಗೆ?
    ಆನ್‍ಲೈನ್ ಕ್ಲಾಸ್‍ನಿಂದ ಮಕ್ಕಳ ಶೋಷಣೆಯಾಗುತ್ತಿದೆ. 1-5 ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಪಾಠ ಅರ್ಥ ಆಗುವುದಿಲ್ಲ. ಶಿಕ್ಷಕರು ಪಾಠ ಮಾಡೋದು ಬಹುತೇಕ ಮಕ್ಕಳಿಗೆ ಅರ್ಥವೇ ಆಗುತ್ತಿಲ್ಲ. ಈ ವಯಸ್ಸಿನ ಮಕ್ಕಳು ಆನ್‍ಕ್ಲಾಸ್‍ಗೆ ಗಮನ ನೀಡಲು ಸಾಧ್ಯವಿಲ್ಲ. ಆನ್‍ಲೈನ್ ಕ್ಲಾಸ್‍ನಲ್ಲಿ ಚಿತ್ರಗಳನ್ನು ತೋರಿಸಿದಾಗ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಸಿಗುತ್ತದೆ. ಉಳಿದ ವೇಳೆ ಆನ್‍ಲೈನ್ ಕ್ಲಾಸ್ ಎಂಬುದು ಮಕ್ಕಳಿಗೆ ಮೊಬೈಲ್, ಟ್ಯಾಬ್, ಲ್ಯಾಪ್ ಆಟದ ವಸ್ತು. ಆನ್‍ಲೈನ್ ಪಾಠ ಪ್ರಾರಂಭ ಹೇಗೆ ಮಾಡ್ತಾರೆ ಅನ್ನೋದೆ ಮಕ್ಕಳಿಗೆ ಗೊತ್ತಿಲ್ಲ. ಪೋಷಕರು ಮಗುವಿನ ಪಕ್ಕ ಕುಳಿತು ಮೊಬೈಲ್, ಟ್ಯಾಬ್ ಆನ್ ಮಾಡಿಕೊಡಬೇಕು. ಪೋಷಕರು ಕ್ಲಾಸ್ ಕೇಳಿಸಿಕೊಂಡು ಹೇಳಿದರೆ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಬರುತ್ತದೆ.

    ಆನ್‍ಲೈನ್ ‘ಶಿಕ್ಷೆ’ಣ ಬೇಡ ಯಾಕೆ?
    ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರ ಪ್ರಕಾರ ಈ ವಯಸ್ಸು ಸೂಕ್ಷ್ಮ ವಯಸ್ಸು. 10ರೊಳಗಿನ ಮಕ್ಕಳಿಗೆ ಆನ್ ಲೈನ್ ತರಗತಿ ಅಗತ್ಯವೇ ಇಲ್ಲ. ಆಟ ಆಡುವ ವಯಸ್ಸಿನ ಮಕ್ಕಳಿಗೆ ಇದು ಕಿರುಕುಳ ನೀಡಿದಂತಾಗುತ್ತದೆ. ಆನ್‍ಲೈನ್ ಪಾಠವನ್ನು ಗ್ರಹಿಸಲು ಮಕ್ಕಳಿಗೆ ಕಷ್ಟ ಆಗುತ್ತದೆ. ಶಾಲೆಯಲ್ಲಿ ಪ್ರತಿ ಮಗುವಿನ ಮೇಲೆ ಶಿಕ್ಷಕರು ಗಮನ ಕೊಡ್ತಾರೆ. ಆದರೆ ಆನ್‍ಲೈನ್‍ನಲ್ಲಿ ಇದು ಅಸಾಧ್ಯ. ಹೀಗಾಗಿ ಮಗುವಿಗೆ ಪಾಠವೇ ಅರ್ಥ ಆಗುವುದಿಲ್ಲ. ಇದು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತದೆ.

    ಮಕ್ಕಳ ಮೇಲೆ ಆಗೋ ಪರಿಣಾಮ ಏನು?
    ಆನ್‍ಲೈನ್ ಕಲಿಕೆಯಿಂದ ಅನೇಕ ಗೊಂದಲ, ಸಮಸ್ಯೆ ಸೃಷ್ಟಿಯಾಗಿದೆ. ಆನ್‍ಲೈನ್ ಕ್ಲಾಸ್‍ಗೆ ಇಂಟರ್‍ನೆಟ್ ಸೌಲಭ್ಯ ಬೇಕೆಬೇಕು. ಆನ್‍ಲೈನ್ ಕ್ಲಾಸ್ ವೇಳೆ ಮಕ್ಕಳು ಕೈ ತಪ್ಪಿ ಬೇರೆ ಲಿಂಕ್ ಒತ್ತುವ ಸಾಧ್ಯತೆಯಿದೆ. ಅಶ್ಲೀಲ ವಿಡಿಯೋ ಸೇರಿದಂತೆ ಇನ್ನಿತರ ಲಿಂಕ್ ಓಪನ್ ಆಗಬಹುದು. ಇವು ಮಕ್ಕಳನ್ನ ಬೇರೆ ಹಾದಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಈ ವಯಸ್ಸಿನಲ್ಲೇ ಮೊಬೈಲ್, ಟ್ಯಾಬ್, ಲ್ಯಾಪ್‍ನಂತಹ ಪರಿಕರಗಳಿಗೆ ಅಡಿಕ್ಟ್ ಆಗೋ ಸಾಧ್ಯತೆ ಹೆಚ್ಚಿದೆ.

    ಆರೋಗ್ಯದ ಮೇಲೆ ಏನಾಗುತ್ತೆ?
    ಪದೇ ಪದೇ ಮಗು ಮೊಬೈಲ್, ಕಂಪ್ಯೂಟರ್ ನೋಡ್ತಿದ್ರೆ ಕಣ್ಣಿನ ಮೇಲೆ ಪರಿಣಾಮ ಬೀಳುತ್ತದೆ. ಆನ್‍ಲೈನ್ ಕ್ಲಾಸ್ ಒತ್ತಡದಿಂದ ಮಕ್ಕಳ ಮೆದುಳಿನ ಮೇಲೂ ಅಡ್ಡ ಪರಿಣಾಮವಾಗುತ್ತದೆ. ಆನ್‍ಲೈನ್ ಪಾಠ ಅರ್ಥ ಆಗದೇ, ಮಕ್ಕಳಿಗೆ ಕೋಪ, ಆವೇಶ, ಸಿಟ್ಟು ಬರಬಹುದು. ಪುಟ್ಟ ಪುಟ್ಟ ಮಕ್ಕಳು ಮಾನಸಿಕ ಖಿನ್ನತೆಗೆ ತುತ್ತಾಗಬಹುದು. ಪೋಷಕರು, ಶಿಕ್ಷರ ಮಾತು ಕೇಳದೇ ವಿಚಿತ್ರವಾಗಿ ವರ್ತಿಸಬಹುದು.

    ಪೋಷಕರಿಗೆ ಆನ್‍ಲೈನ್ ‘ಶಿಕ್ಷೆ’..!
    ಆನ್‍ಲೈನ್ ಕ್ಲಾಸ್‍ಗಳಿಂದ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ, ಪೋಷಕರಿಗೂ ತೊಂದರೆ ಆರಂಭವಾಗಿದೆ. ಇರುವ ಎಲ್ಲಾ ಕೆಲಸ ಕಾರ್ಯ ಬಿಟ್ಟು ಮಕ್ಕಳ ಮುಂದೆ ಕ್ಲಾಸ್ ಮುಗಿಯುವರೆಗೂ ಇರಬೇಕು. ಮಕ್ಕಳು ಮೊಬೈಲ್‍ನಲ್ಲಿ ಏನೇನು ಓಪನ್ ಮಾಡ್ತಾರೋ ಎಂಬ ಭಯ. ಆನ್‍ಲೈನ್ ಕ್ಲಾಸ್ ವೇಲೆ ಬೇರೆ ಯಾವುದೇ ಕೆಲಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿಯೂ ಎರಡೆರಡು, ಮೂರುಮೂರು ಮೊಬೈಲ್ ಇರಲ್ಲ (ಇದ್ದರೂ ಇಂಟರ್ನೆಟ್ ಸೌಲಭ್ಯ ಎಲ್ಲಾ ಮೊಬೈಲ್‍ಗಳಿಗೂ ಇರಲ್ಲ).

    ಈ ಹಿಂದೆ ಆಫೀಸಿಗೆ ತೆರಳಿದ್ದಾಗ ಮನೆಯಲ್ಲಿ ಮಕ್ಕಳನ್ನು ಹಿರಿಯರು ನೋಡುತ್ತಿದ್ದರು. ಆದರೆ ಈಗ ಅವರಿಗೆ ಕಂಪ್ಯೂಟರ್/ ಮೊಬೈಲ್ ಆಪರೇಟಿಂಗ್ ಮಾಡಲು ಬರುವುದಿಲ್ಲ. ಹೀಗಾಗಿ ಪೋಷಕರೇ ಮನೆಯಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಕಂಪನಿ/ ಕಾರ್ಖಾನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಫೀಸ್‍ನಲ್ಲಿ/ಕಾರ್ಖಾನೆಗಳಲ್ಲಿ ಲೇಟಾದ್ರೆ ಅಲ್ಲೂ ಬೈಸಿಕೊಳ್ಳಬೇಕು. ಆನ್‍ಲೈನ್ ಕ್ಲಾಸ್ ಹೆಸರೇಳಿ ಪೋಷಕರಿಂದ ದುಬಾರಿ ಶುಲ್ಕ ವಸೂಲಿಯಾಗುತ್ತಿದೆ. ಟ್ಯಾಬ್, ಲ್ಯಾಪ್‍ಟಾಪ್ ತೆಗೆದುಕೊಳ್ಳಿ ಅಂತ ಆಡಳಿತ ಮಂಡಳಿಗಳಿಂದ ಒತ್ತಡ. ಅವಿದ್ಯಾವಂತ ತಂದೆ-ತಾಯಿಯರಿಗೆ ಆನ್‍ಲೈನ್ ಶಿಕ್ಷಣ ಎಂಬುದು ನರಕಯಾತನೆಯಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹಸಿದ ಮಹಿಳೆಯ ಸಹಾಯಕ್ಕೆ ಬಂದ ಕೆಪಿಸಿಸಿ ಕಾರ್ಯದರ್ಶಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹಸಿದ ಮಹಿಳೆಯ ಸಹಾಯಕ್ಕೆ ಬಂದ ಕೆಪಿಸಿಸಿ ಕಾರ್ಯದರ್ಶಿ

    ಶಿವಮೊಗ್ಗ: ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ಸಮಸ್ಯೆ ಹೇಳಿಕೊಂಡಿದ್ದ ಶಿವಮೊಗ್ಗದ ಹೊಸಮನೆ ಬಡಾವಣೆ ನಿವಾಸಿ ರೂಪ ಎಂಬುವರಿಗೆ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಸ್ಪಂದಿಸಿ ತಾವೇ ಸ್ವತಃ ಮಹಿಳೆ ಮನೆಗೆ ತೆರಳಿ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಶಿವಮೊಗ್ಗದ ಹೊಸಮನೆ ಬಡಾವಣೆ ನಿವಾಸಿ ರೂಪ ಎಂಬ ಮಹಿಳೆ ಲಾಕ್‍ಡೌನ್ ನಿಂದಾಗಿ ಕೆಲಸವಿಲ್ಲದ ಕಾರಣ ಊಟಕ್ಕೂ ಸಮಸ್ಯೆ ಆಗಿದೆ ಎಂದು ಕಾರ್ಯಕ್ರಮದ ಮೂಲಕ ಮನವಿ ಮಾಡಿಕೊಂಡಿದ್ದರು.

    ತಮ್ಮೂರಿನ ಮಹಿಳೆಯೊಬ್ಬರು ಊಟದ ಸಮಸ್ಯೆ ಎಂದು ಪಬ್ಲಿಕ್ ಟಿವಿಯಲ್ಲಿ ಮನವಿ ಮಾಡಿಕೊಂಡಿದ್ದನ್ನು ಗಮನಿಸಿದ ದೇವೇಂದ್ರಪ್ಪ ಅವರು ಮಹಿಳೆಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ನೀಡಿ ಸಹಾಯ ಹಸ್ತ ಚಾಚಿದ್ದಾರೆ.

  • ಹೋಟೆಲ್ ಕಾರ್ಮಿಕನಿಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಹೋಟೆಲ್ ಕಾರ್ಮಿಕನಿಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಕಾರ್ಮಿಕರೊಬ್ಬರಿಗೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ನೆರವಾಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಳೇ ಚಂದಾಪುರದಲ್ಲಿ ವಾಸವಿದ್ದ ರವಿ ಫೋನ್ ಮಾಡಿ ಅಳಲನ್ನು ತೋಡಿಕೊಂಡಿದ್ದರು. ಅವರಿಗೆ ಇಂದು ನೆರವು ಸಿಕ್ಕಿದೆ.

    ರವಿ ಅವರು ಲಾಕ್‍ಡೌನ್‍ನಿಂದಾಗಿ ಕೆಲಸ, ಆಹಾರ ಪದಾರ್ಥವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಭಾನುವಾರ ಪಬ್ಲಿಕ್ ಟಿವಿಗೆ ಕರೆ ಮಾಡಿ ಆಹಾರ ಪದಾರ್ಥ ಒದಗಿಸುವಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಎಣ್ಣೆ, ಧವಸ ಧಾನ್ಯದ ಜೊತೆಗೆ ತರಕಾರಿ ನೀಡಿ ಮಾನವೀಯತೆ ಮೆರೆಸಿದ್ದಾರೆ.

    ನೆರವು ಪಡೆದ ರವಿ ಮಾತನಾಡಿ, ಲಾಕ್‍ಡೌನ್ ಆಗಿದ್ದರಿಂದ ಕೆಲಸ ಇಲ್ಲವಾಯಿತು. ಕೈಯಲ್ಲಿದ್ದ ಹಣದಲ್ಲಿ ಇಷ್ಟು ದಿನ ಜೀವನ ನಡೆಸಿದೆ. ಆದರೆ ತುತ್ತು ಅನ್ನಕ್ಕೂ ಕಾಸಿಲ್ಲದಗ ಪಬ್ಲಿಕ್ ಟಿವಿಗೆ ಕರೆ ಮಾಡಿದೆ. ಇದೀಗ ಒಂದು ತಿಂಗಳ ರೇಷನ್ ದೊರೆತಿರುವುದು ಖುಷಿಯಾಗಿದೆ ಎಂದರು.

    ಗಂಧದ ನಾಡು ಜನಪರ ವೇದಿಕೆಯ ಕಾರ್ಯಕರ್ತ ಮಂಜುನಾಥ್ ಮಾತನಾಡಿ, ಭಾನುವಾರ ಮನೆಯೇ ಮಂತ್ರಾಲಯ ಕಾರ್ಯಕ್ರಮ ನೋಡುವಾಗ ರವಿ ಕರೆ ಮಾಡಿದ್ದು ನೋಡಿದೆ. ನಮ್ಮ ಊರಿನವರೆ ತೊಂದರೆಯಲ್ಲಿರುವುದು ತಿಳಿಯಿತು. ಆನೇಕಲ್ ವರದಿಗಾರರ ಮೂಲಕ ರವಿ ಅವರ ವಿಳಾಸ ಪಡೆದು ನೆರವು ನೀಡಿದ್ದೇವೆ ಎಂದರು.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಉಪವಾಸ ಇದ್ದ ದಂಪತಿಗೆ ಸಹಾಯ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಉಪವಾಸ ಇದ್ದ ದಂಪತಿಗೆ ಸಹಾಯ

    ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ನೇಕಾರಿಕೆ ಕೆಲಸ ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ ದಂಪತಿಗೆ ದಿನಸಿ ಆಹಾರ ಪದಾರ್ಥಗಳ ಕಿಟ್ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ.

    ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಸುಖ್‍ರಾಜ್ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಚಂದ್ರಶೇಖರ್ ಹಾಗೂ ಅವರ ಸ್ನೇಹಿತರು ಸುಖ್‍ರಾಜ್ ಮನೆಗೆ ಹೋಗಿ ದಿನಸಿ ಕಿಟ್ ಕೊಟ್ಟು ಸಹಾಯ ಮಾಡಿದರು.

    ದಂಪತಿ ಹುಬ್ಬಳ್ಳಿ ಮೂಲದವರಾಗಿದ್ದು, ಸದ್ಯ ಲಾಕ್‍ಡೌನ್‍ನಿಂದ ನೇಕಾರಿಕೆ ಕೆಲಸವೂ ಇಲ್ಲದಂತಾಗಿದೆ. ಸುಖ್‍ರಾಜ್ ಫೈಂಟಿಂಗ್ ಕೆಲಸ ಮಾಡುವುದಾಗಿ ಹೇಳಿದ್ದು, ನಾಳೆಯಿಂದ ಫೈಂಟಿಂಗ್ ಕೆಲಸ ಸಹ ಕೊಡಿಸುವ ಭರವಸೆ ನೀಡಿದ್ದಾರೆ. ಇದಲ್ಲದೇ ಯುವಕ ಕಾರ್ತಿಕ್ ಎಂಬಾತ ಧನಸಹಾಯ ಸಹ ಮಾಡಿದ್ದಾರೆ. ಪಬ್ಲಿಕ್ ಟಿವಿ ಹಾಗೂ ದಾನಿಗಳಿಗೆ ಸುಖ್‍ರಾಜ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಮಹಿಳೆ ಮನವಿಗೆ ಸ್ಪಂದಿಸಿದ ಶಾಸಕ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಮಹಿಳೆ ಮನವಿಗೆ ಸ್ಪಂದಿಸಿದ ಶಾಸಕ

    ಶಿವಮೊಗ್ಗ: ಮನೆಯ ಮಂತ್ರಾಲಯ ಕಾರ್ಯಕ್ರಮದಲ್ಲಿ ಸಮಸ್ಯೆ ಹೇಳಿಕೊಂಡಿದ್ದ ಮಹಿಳೆಗೆ ಶಾಸಕ ಬಿ.ಕೆ.ಸಂಗಮೇಶ್ ಸ್ಪಂದಿಸಿ ದಿನಸಿ ಮತ್ತು ಹಣ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

    ಲಾಕ್‍ಡೌನ್ ಆರಂಭವಾದ ದಿನದಿಂದ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರು ನಡೆಸಿಕೊಡುತ್ತಿರುವ ಕಾರ್ಯಕ್ರಮ ಮನೆಯೇ ಮಂತ್ರಾಲಯ ರಾಜ್ಯದಲ್ಲಿ ಮನೆ ಮಾತಾಗಿದ್ದು, ರಾಜ್ಯದ ಜನರು ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳುವ ಮೂಲಕ ಪರಿಹಾರ ಸಹ ಕಂಡುಕೊಳ್ಳುತ್ತಿದ್ದಾರೆ.

    ಅದರಂತೆಯೇ ಜಿಲ್ಲೆಯ ಭದ್ರಾವತಿ ಪಟ್ಟಣದ ಜನ್ನಾಪುರ ನಿವಾಸಿ ಶಾಂತಮ್ಮ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದ ಕಾರಣ ಊಟಕ್ಕೂ ಸಮಸ್ಯೆ ಆಗಿದೆ ಎಂದು ಮನವಿ ಮಾಡಿಕೊಂಡಿದ್ದರು. ಕ್ಷೇತ್ರದ ಮಹಿಳೆಯೊಬ್ಬರು ಊಟದ ಸಮಸ್ಯೆ ಎಂದು ಪಬ್ಲಿಕ್ ಟಿವಿಯಲ್ಲಿ ಮನವಿ ಮಾಡಿಕೊಂಡಿದ್ದನ್ನು ಗಮನಿಸಿದ ಶಾಸಕ ಬಿ.ಕೆ.ಸಂಗಮೇಶ್ ಅವರು ಮಹಿಳೆಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಹಾಗೂ 1 ಸಾವಿರ ರೂಪಾಯಿ ಹಣವನ್ನು ನೀಡಿ ಸಹಾಯ ಹಸ್ತ ಚಾಚಿದ್ದಾರೆ.

    ಅಲ್ಲದೇ ಮುಂದೆಯೂ ಸಹ ಲಾಕ್‍ಡೌನ್ ಮುಂದುವರಿದು ಸಮಸ್ಯೆಯಾದರೆ ತನ್ನನ್ನು ಭೇಟಿಯಾಗಿ ದಿನಸಿ ಕಿಟ್ ಪಡೆದುಕೊಳ್ಳುವಂತೆ ಶಾಸಕರು ತಿಳಿಸಿದ್ದಾರೆ. ಅಲ್ಲದೇ ಕ್ಷೇತ್ರದ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂದಿರುವ ಶಾಸಕರು ಪಬ್ಲಿಕ್ ಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.