Tag: Immunity

  • ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಜ್ಯೂಸ್‍ಗಳನ್ನು ಕುಡಿಯಿರಿ

    ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಜ್ಯೂಸ್‍ಗಳನ್ನು ಕುಡಿಯಿರಿ

    ದಿನೇ ದಿನೇ ಬಿಸಿಲಿನ ತಾಪ ಅಧಿಕವಾಗುತ್ತಿದೆ. ಇದರ ಜೊತೆಗೆ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇವರೆಡರ ಮಧ್ಯೆ ನಮ್ಮ ಆರೋಗ್ಯದ ಕಡೆ ಗಮನ ಕೊಡುವುದು ಪ್ರಮುಖವಾಗಿರುತ್ತದೆ. ದೇಹಕ್ಕೆ ತಂಪನ್ನೂ ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಜ್ಯೂಸ್‍ಗಳಿವೆ. ಕೆಳಕಂಡಂತೆ ತಿಳಿಸಿರುವ ಜ್ಯೂಸ್‍ಗಳನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

    ನಿಂಬು ಶರಬತ್: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ದೇಹದ ಆರೋಗ್ಯವು ಸುಧಾರಿಸುತ್ತದೆ. ಇದರಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.

    ಬೇಲದ ಹಣ್ಣು: ಬೇಲದ ಹಣ್ಣು ಬೇಸಿಗೆ ಕಾಲಕ್ಕೆ ಸರಿಯಾದ ಆಹಾರವಾಗಿದೆ. ಅದರಲ್ಲೂ ಬಿಸಿಲಿನ ತಾಪ ಹೆಚ್ಚಿದಾಗ ಈ ಶರಬತ್‍ನ್ನು ಮಾಡಿ ಕುಡಿಯುವುದು ದೇಹಕ್ಕೂ ಒಳ್ಳೆಯದು. ಇದರಲ್ಲಿ ಫೈಬರ್ ವಿಟಮಿನ್ ಸಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಅನೇಕ ಪೋಷಕಾಂಶಗಳು ಹೇರಳವಾಗಿರುತ್ತವೆ. ಇದರಿಂದಾಗಿ ಮೊಡವೆ, ಚರ್ಮದಲ್ಲಿ ಸುಕ್ಕಾಗುವುದು ಹಾಗೂ ಬಿಳಿ ಕೂದಲಿನಂತಹ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಸೋರೆಕಾಯಿ ಜ್ಯೂಸ್: ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಪ್ರಮುಖವಾಗಿ ಪೋಷಕಾಂಶಗಳ ಅಗತ್ಯವಿರುತ್ತದೆ. ಇದರಿಂದಾಗಿ ಹಸಿರು ತರಕಾರಿಗಳನ್ನು ಸೇವಿಸಬೇಕು. ಸೋರೆಕಾಯಿ, ಪುದಿನಾ ಎಲೆಗಳಿಂದ ತಯಾರಿಸಿದ ಜ್ಯೂಸ್‍ನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ನೆಲ್ಲಿಕಾಯಿ ಜ್ಯೂಸ್: ಇದು ಸಾಂಪ್ರದಾಯಿಕ ರೋಗ ನಿರೋಧಕ ಜ್ಯೂಸ್ ಆಗಿದೆ. ಇದರಲ್ಲಿ ವಿಟಾಮಿನ್ ಸಿ ಹೇರಳವಾಗಿರುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಮಜ್ಜಿಗೆ: ಮಜ್ಜಿಗೆಯನ್ನು ಸೇವಿಸುವುದರಿಂದ ಕರುಳಿನ ಆರೋಗ್ಯ ಹೆಚ್ಚುತ್ತದೆ. ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಜ್ಜಿಗೆಗೆ ಪುದೀನ ಎಲೆ ಸೇರಿಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

  • ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

    ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿದ್ದು, ಅವರ ಆರೋಗ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನೆ ಸಂಬಂಧ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಸಂಭವನೀಯ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದು, ಈವರೆಗೆ 148 ಪ್ರಕರಣ ಕಂಡುಬಂದಿದೆ. ಹೆಚ್ಚಿನವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಬೇಕು, ಪರೀಕ್ಷೆ ಕಡಿಮೆ ಮಾಡುವುದು ಬೇಡ ಎಂದು ಸೂಚಿಸಲಾಗಿದೆ. ಹಲವು ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಅವರಲ್ಲಿ ಶ್ವಾಸಕೋಶದ ತೊಂದರೆ, ರಕ್ತಹೀನತೆ, ಮೂತ್ರಪಿಂಡದ ಸಮಸ್ಯೆ, ಅಪೌಷ್ಠಿಕತೆ ಕಂಡುಬಂದಿದೆ. ಹೀಗೆ ಗುರುತಿಸಿದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಇನ್ನು ಒಂದೇ ವಾರದಲ್ಲಿ ‘ಆರೋಗ್ಯ ನಂದನ’ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದು, ರಾಜ್ಯದ ಒಂದೂವರೆ ಕೋಟಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವಿಶೇಷ ಆರೈಕೆ, ಚಿಕಿತ್ಸೆ ನೀಡಿ ಅವರನ್ನು ರಕ್ಷಿಸುವ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ 48% ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಹೆಚ್ಚು ಲಸಿಕೆಯನ್ನು ಇಲ್ಲಿಗೆ ಪೂರೈಕೆ ಮಾಡಿ ವೇಗ ನೀಡಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

    ಈ ಜಿಲ್ಲೆಯಲ್ಲಿ ಹೊಸ ಜಿಲ್ಲಾಕೇಂದ್ರ ಇನ್ನೂ ಅಂತಿಮ ಆಗಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಆದಷ್ಟು ಬೇಗ ನಿಗದಿಪಡಿಸಲಾಗುವುದು. ಹಾಗೆಯೇ ಜಿಲ್ಲಾಸ್ಪತ್ರೆಯನ್ನೂ ನಿರ್ಮಿಸಲಾಗುವುದು. ಒಂದು ಅಥವಾ ಎರಡು ತಾಯಿ ಮತ್ತು ಶಿಶು ಆಸ್ಪತ್ರೆಯನ್ನು ಇದೇ ವರ್ಷ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. 142 ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಈಗಾಗಲೇ 29 ವೈದ್ಯರನ್ನು ಜಿಲ್ಲೆಗೆ ನೀಡಲಾಗಿದೆ. ಆದ್ದರಿಂದ ಯಾವುದೇ ವೈದ್ಯರ ಕೊರತೆ ಇಲ್ಲ. ಇನ್ನಷ್ಟು ಆರೋಗ್ಯ ಮೂಲಸೌಕರ್ಯಕ್ಕೆ ಭೂಮಿ ಮೀಸಲಿಟ್ಟಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಲಸಿಕಾ ಆಂದೋಲನದಲ್ಲಿ ಕೈ ಜೋಡಿಸುವಂತೆ ಉದ್ದಿಮೆಗಳಿಗೆ ಸಚಿವ ಸುಧಾಕರ್ ಮನವಿ

    ಹಬ್ಬ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರಬಾರದು. ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಎಚ್ಚರವಾಗಿರಬೇಕು. ಶಾಲೆ ಆರಂಭ ಸಂಬಂಧ ಮಾರ್ಗಸೂಚಿ ನೀಡಲಾಗಿದೆ. ಶಿಕ್ಷಣ ಇಲಾಖೆ ಇದನ್ನು ಆಯಾ ಜಿಲ್ಲಾಡಳಿತಕ್ಕೆ ನೀಡಿದೆ. ಮಕ್ಕಳ ಆರೋಗ್ಯ ಕಾಪಾಡುವುದರ ಜೊತೆಗೆ ಭವಿಷ್ಯ ರೂಪಿಸುವುದು ಕೂಡ ಮುಖ್ಯ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಶಾಲಾ ಸಿಬ್ಬಂದಿಗೆ ಲಸಿಕೆಯನ್ನೂ ನೀಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ BMTCಯಿಂದ ಉಚಿತ ಸೇವೆ

  • ಕೊರೊನಾ ಎರಡನೇ ಅಲೆ ನಮ್ಮ ಇಮ್ಯುನಿಟಿಯನ್ನು ಎದುರಿಸುವಷ್ಟು ಶಕ್ತಿ ಪಡೆದಿದೆ – ಬೊಮ್ಮಾಯಿ

    ಕೊರೊನಾ ಎರಡನೇ ಅಲೆ ನಮ್ಮ ಇಮ್ಯುನಿಟಿಯನ್ನು ಎದುರಿಸುವಷ್ಟು ಶಕ್ತಿ ಪಡೆದಿದೆ – ಬೊಮ್ಮಾಯಿ

    ಹಾವೇರಿ: ಕೊರೊನಾ ಎರಡನೇ ಅಲೆ ನಮ್ಮ ಇಮ್ಯುನಿಟಿಯನ್ನು ಎದುರಿಸುವಷ್ಟು ಶಕ್ತಿ ಪಡೆದಿದೆ. ಜನರು ಸಹ ಪ್ರಾರಂಭದಲ್ಲೇ ಇದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೋಂ ಐಸೋಲೇಶನ್ ನಲ್ಲಿದ್ದವರು ಏನಾದರೂ ತೊಂದರೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆಗೆ ಒಳಗಾಗಬೇಕು ಎಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

    ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಕೊರೊನಾ ಎರಡನೇ ಅಲೆ ಬಗ್ಗೆ ಜನರು ಹೊರಗಡೆ ಓಡಾಡೋವಾಗ ಗಂಭೀರವಾಗಿ ವಿಚಾರ ಮಾಡಬೇಕು. ಬಲಪ್ರಯೋಗ ಇಲ್ಲದೆ ನಿಯಂತ್ರಣ ಮಾಡಬೇಕು ಎಂಬ ಆದೇಶವಿದೆ. ಪೊಲೀಸ್ ಇಲಾಖೆ ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದೆ. ಮೊದಲನೇ ಅಲೆಯ ಸಮಯದಲ್ಲಿ ಉಪಚಾರದಿಂದ ಸಾವಿನ ದವಡೆಗೆ ಹೋಗದಂತೆ ತಡೆಗಟ್ಟಲು ಸಾಧ್ಯವಿತ್ತು. ಎರಡನೆ ಅಲೆ ವೇಗವಾಗಿ ಹರಡುತ್ತಿದೆ. ಇದು ನಮ್ಮ ಔಷಧಿಯನ್ನು ಮೀರಿಸುವಂತಿದೆ ಎಂದು ಅಭಿಪ್ರಾಯಪಟ್ಟರು.

    ಕೊರೊನಾದ ಮಧ್ಯೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಎಲ್ಲ ಸ್ಥಿತಿ ಎದುರಿಸೋ ತರಬೇತಿ ಇರುತ್ತೆ. ಲಾಕ್‍ಡೌನ್‍ಗೆ ಜನರು ಸ್ವಯಂಪ್ರೇರಿತವಾಗಿ ಸಹಕಾರ ಕೊಡಬೇಕು. ಜನರ ಸಹಕಾರದಿಂದ ಲಾಕ್‍ಡೌನ್ ಸಂಪೂರ್ಣ ಯಶಸ್ವಿ ಆಗುತ್ತದೆ. ಹಗಲು ರಾತ್ರಿ ಎನ್ನದೆ ಆಕ್ಸಿಜನ್ ಪೂರೈಕೆ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲೆಲ್ಲಿಂದ ಸಾಧ್ಯವೋ ಅಲ್ಲಿಂದ ಆಕ್ಸಿಜನ್ ತರಿಸೋ ವ್ಯವಸ್ಥೆ ಮಾಡುತ್ತಿದ್ದೇವೆ. ಲಾಕ್‍ಡೌನ್ ಆದ್ಮೇಲೆ ಸೋಂಕಿತರ ಸಂಖ್ಯೆ ಕನಿಷ್ಠ ಹೆಚ್ಚಾಗುತ್ತಿಲ್ಲ. ಹದಿನಾಲ್ಕು ದಿನಗಳ ನಂತರ ಇದರ ಫಲಿತಾಂಶ ಗೊತ್ತಾಗಲಿದೆ. ಕಡಿಮೆ ಆಗುತ್ತದೆ ಎಂಬ ವಿಶ್ವಾಸವಿದೆ, ತಜ್ಞರು ಕೂಡ ಅದನ್ನೆ ಹೇಳುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

  • ಕೊರೊನಾ ವಿರುದ್ಧ ಸಮರ- 8 ಉತ್ಪನ್ನ ಲೋಕಾರ್ಪಣೆ

    ಕೊರೊನಾ ವಿರುದ್ಧ ಸಮರ- 8 ಉತ್ಪನ್ನ ಲೋಕಾರ್ಪಣೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಿವಿಧ ಪ್ರಯತ್ನಗಳಿಗೆ ಸರ್ಕಾರ ಮುಂದಾಗುತ್ತಿದೆ. ಇದೀಗ ಹೊಸ ತಂತ್ರಜ್ಞಾನ, ಹೊಸ ಮಾದರಿಯ ಸಲಕರಣೆಗಳ ಮೊರೆ ಹೋಗುತ್ತಿದೆ. ಇಂದು ವಿವಿಧ ಉತ್ಪನ್ನಗಳನ್ನು ಉಪಮುಖ್ಯಮಂತ್ರಿ ಡಾ.ಸಿ.ಅಶ್ವಥ್ ನಾರಾಯಣ್ ಬಿಡುಗಡೆಗೊಳಿಸಿದ್ದಾರೆ.

    ಕರ್ನಾಟಕ ನಾವೀನ್ಯ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ವ್ಯಾಪ್ತಿಯ ಬೆಂಗಳೂರು ಜೈವಿಕ ನಾವೀನ್ಯತೆ ಕೇಂದ್ರ (ಬಿಬಿಸಿ) ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ವಿಧಾನಸೌಧದಲ್ಲಿ ಡಾ.ಅಶ್ವಥ್ ನಾರಾಯಣ್ ಬಿಡುಗಡೆ ಮಾಡಿದ್ದಾರೆ. ಪದ್ಮ ವೈಟಲ್ಸ್, ಮಲ್ಲೀಸ್ ಕಾರ್ಡಿಟೀ, ಸಿಡಿ 4 ಷೀಲ್ಡ್, ಭೀಮ್ ರೋಟಿ, ಇಮ್ಯೂನ್ ಬೂಸ್ಟರ್- ಡೈಲಿ ಡ್ರಾಪ್ಸ್, ವೆಜ್ ಫಲ್ ಸ್ಯಾನಿಟೈಸರ್, ವಾಟರ್ ಸ್ಯಾನಿಟೈಸರ್, ಆ್ಯಂಟಿ- ಮೈಕ್ರೋಬಿಯಲ್ ಎಚ್‍ವಿಎಸಿ ಮಾಡ್ಯೂಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಐಐಬಿಎಂ-ಬಿಬಿಸಿ ಯಿಂದ ಎಂಒಯುಗೆ ಸಹಿ ಹಾಕಲಾಗಿದೆ.

    ಪದ್ಮ ವೈಟಲ್ಸ್: ಕಾರ್ಡಿಯಾಕ್ ಡಿಸೈನ್ ಲ್ಯಾಬ್ಸ್ ನ ಡಾ.ಮದನ್ ಗೋಪಾಲ್ ಈ ಕೇಂದ್ರೀಕೃತ ಆರೋಗ್ಯ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ರೋಗಿಯ ಇಸಿಜಿ, ಉಸಿರಾಟ, ಎಸ್‍ಪಿಒ 2 ಮತ್ತು ದೇಹದ ಉಷ್ಣತೆ ಮೇಲೆ ನಿರಂತರವಾಗಿ ನಿಗಾ ಇರಿಸುವುದರ ಜೊತೆಗೆ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಟೆಲಿಮೆಟ್ರಿ ಮೂಲಕ ರವಾನಿಸುತ್ತದೆ. ಮುನ್ನೆಚ್ಚರಿಕೆ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ರೋಗಿಗಳ ಶರೀರವನ್ನು ಮುಟ್ಟದೇ ನಿಗಾ ವಹಿಸಬಹುದಾಗಿದೆ. ಹೀಗಾಗಿ ಕೋವಿಡ್-19 ಸೋಂಕಿನ ಚಿಕಿತ್ಸೆ ಸಂದರ್ಭದಲ್ಲಿ ಉಪಯುಕ್ತವಾಗಲಿದೆ. ಇದನ್ನು ನಾರಾಯಣ ಹೃದಯಾಲಯದಲ್ಲಿ ದೃಢೀಕರಿಸಲಾಗಿದೆ.

    ಐಸಿಯು ಪೇಷೆಂಟ್ ಮಾನಿಟರ್ ಒದಗಿಸುವ ಬಹುತೇಕ ಅಂಶಗಳು ಇದರಲ್ಲಿವೆ. ಇದನ್ನು ಬಳಸಿ ಯಾವುದೇ ಸಾಮಾನ್ಯ ಹಾಸಿಗೆಯನ್ನು ಮಾನಿಟರ್ಡ್ ಬೆಡ್ ಆಗಿ ಬದಲಾಯಿಸಬಹುದು. ಬೆಲೆ ಕಡಿಮೆ ಇದ್ದು, ಹಗುರವಾಗಿರುವುದರಿಂದ ರೋಗಿಯ ಮೇಲಿಡುವ ನಿಗಾ ಸಾಮಥ್ರ್ಯ ಹೆಚ್ಚಾಗುತ್ತದೆ. ರೋಗಿಯ ಇಸಿಜಿ, ಉಸಿರಾಟ, ಎಸ್‍ಪಿಒ2 ಮತ್ತು ದೇಹದ ಉಷ್ಣತೆಯನ್ನು ದಾಖಲಿಸಲು ಬೇಕಾಗುವ ನರ್ಸ್ ಗಳ ಸಂಖ್ಯೆಯನ್ನು ತಗ್ಗಿಸುತ್ತದೆ.

    ಮಲ್ಲೀಸ್ ಕಾರ್ಡಿಟೀ: ರೋಗ ನಿರೋಧಕ ಶಕ್ತಿ ಉದ್ದೀಪಕವಾದ ಇದನ್ನು ಮಲ್ಲಿಪಾತ್ರ ನ್ಯೂಟ್ರಾಸ್ಯೂಟಿಕಲ್ಸ್ ನ ಡಾ.ಮೌಷ್ಮಿ ಮೊಂಡಲ್ ಅಭಿವೃದ್ಧಿಪಡಿಸಿದ್ದಾರೆ. ಔಷಧೀಯ ಗುಣವುಳ್ಳ ಅಣಬೆಯಾದ `ಕಾರ್ಡಿಸೆಪ್ಸ್’ ಬಳಸಿ ಇದನ್ನು ತಯಾರಿಸಲಾಗಿದೆ. ಪ್ರಯೋಗಾಲಯ ಪರಿಸ್ಥಿತಿಗಳಲ್ಲಿ ಬೆಳೆಯಲಾಗುವ ಈ ಅಣಬೆ ತಳಿಯು ವೈರಾಣು ನಿರೋಧಕ ಗುಣಸ್ವಭಾವ ಹೊಂದಿದೆ. ಕೋವಿಡ್-19 ಸನ್ನಿವೇಶದಲ್ಲಿ ವ್ಯಕ್ತಿಯ ರೋಗ ನಿರೋಧಕ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದು ಪೇಟೆಂಟ್ ಹೊಂದಿದ್ದು, ಎಸ್‍ಎಸ್‍ಎಸ್‍ಎಐನಿಂದ ಅನುಮೋದನೆಗೊಂಡಿದೆ.

    ಈ ಕಾರ್ಡಿಯೋಸೆಪ್‍ಗಳ ಸಕ್ರಿಯ ಸಂಯೋಜನೆ ನೈಸರ್ಗಿಕವಾಗಿ ಬೆಳೆದ ಕಾರ್ಡಿಯೋಸೆಪ್ ಗಳಂತೆಯೇ ಇರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಇದು ದೇಹದಲ್ಲಿ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುತ್ತದೆ. ದೇಹದಲ್ಲಿನ ನಂಜುಕಾರಕಗಳನ್ನು ನಿವಾರಿಸಿ ದೇಹ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದನ್ನು 2-3 ಗ್ರಾಂ. ನಂತೆ 15 ದಿನಗಳ ಕಾಲ ಬಳಸಿದರೆ ಉತ್ತಮ ಫಲಿತಾಂಶ ಕಾಣಬಹುದು. ನೂತನ ವಿಧಾನ ಬಳಸಿ ಇದರ ಸಕ್ರಿಯ ಘಟಕಾಂಶವನ್ನು 20 ಮಿ.ಗ್ರಾಂ.ಗೆ ಸಂವರ್ಧಿಸಲಾಗಿದೆ. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಮಾಡಿದ ಪ್ರಯೋಗದಲ್ಲಿ ಇದು ಅತ್ಯುತ್ತಮ ಫಲಿತಾಂಶ ನೀಡಿದೆ. ಇದರ ಬೆಲೆ 30 ಗ್ರಾಂ. ಗೆ 2400 ರೂ. ಆಗಿದೆ.

    ಸಿಡಿ 4 ಷೀಲ್ಡ್: ಬಾಯಲ್ಲಿರಿಸಿಕೊಂಡು ಚೀಪಬಹುದಾದ ಈ ಮಾತ್ರೆಯನ್ನು ಸ್ಟೇಬಿಕಾನ್ ಕಂಪನಿಯ ಡಾ.ವಿಜಯ್ ಲಂಕಾ ಮತ್ತು ತಂಡದವರು ಅಭಿವೃದ್ಧಿಪಡಿಸಿದ್ದಾರೆ. ಇದು ಉರಿಯೂತ ಮತ್ತು ಸೋಂಕಿನ ವಿರುದ್ಧ ಹೋರಾಡುವ ಕ್ಯೂರ್ ಕ್ಯುಮಿನ್ ಮತ್ತು ವಿಟಮಿನ್ ಬಿ 12 ಅನ್ನು ಒಳಗೊಂಡಿದೆ. ದೇಹದೊಳಗೆ ವೈರಾಣು ಬೀರುವ ಪ್ರಭಾವಕ್ಕೆ ಅನುಗುಣವಾಗಿ ಸಿಡಿ4+, ಸಿಡಿ8+ ಮತ್ತು ಐಎಫ್‍ಎನ್ ಗಳನ್ನು ಸಕ್ರಿಯಗೊಳಿಸುವ ಮೂಲಕ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ರೋಗ ನಿರೋಧಕತೆಯನ್ನು ಮಾರ್ಪಾಡುಗೊಳಿಸುವ ಗುಣಸ್ವಭಾವಗಳನ್ನು ಹೊಂದಿರುವುದರ ಜೊತೆಗೆ ವೈರಾಣು ಸೋಂಕಿಗೆ ಪ್ರತಿಕ್ರಿಯೆಯಾಗಿ ಸೈಟೋಕೈನ್ ದಾಳಿಯನ್ನು ತಗ್ಗಿಸುತ್ತದೆ. ಇದು ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣಗಳ ಪ್ರಾಧಿಕಾರ ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿದೆ.

    ಭೀಮ್ ರೋಟಿ: ಚಪಾತಿ ರೂಪದಲ್ಲಿರುವ ಈ ರೋಗ ನಿರೋಧಕ ಉದ್ದೀಪಕವನ್ನು ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರು ಅಭಿವೃದ್ಧಿಪಡಿಸಿದ್ದಾರೆ. ಆಯುಷ್ ಸಚಿವಾಲಯವು ಶಿಫಾರಸು ಮಾಡಿದ ಗಿಡಮೂಲಿಕೆಗಳ ಮಿಶ್ರಣಗಳನ್ನು ಒಳಗೊಂಡಿರುವುದು ಇದರ ವಿಶೇಷ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ಇದು, ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಈ ಚಪಾತಿಗಳು ಹೆಚ್ಚಿನ ಬಾಳಿಕೆ ಅವಧಿಯನ್ನು ಹೊಂದಿದ್ದು, ಸಂಗ್ರಹಿಸಿಡುವುದು ಕೂಡ ಸುಲಭವಾಗಿದೆ.

    ಪ್ರತಿ ಚಪಾತಿ 40 ಗ್ರಾಂ. ಇದ್ದು, 200 ಮೈಕ್ರೋಗ್ರಾಂ ಗಿಡಮೂಲಿಕೆ ಸಾರವನ್ನು ಒಳಗೊಂಡಿರುತ್ತದೆ. ಇದು `ರೆಡಿ ಟು ಈಟ್’ ಆಗಿದ್ದು, ತವಾ ಮೇಲೆ ಬಿಸಿ ಮಾಡಿಕೊಂಡು ತಿನ್ನಬಹುದು. ಕೊಠಡಿ ತಾಪಮಾನದಲ್ಲಿ 6 ತಿಂಗಳು ಬಾಳಿಕೆ ಅವಧಿ ಹೊಂದಿರುತ್ತದೆ. ಶುಂಠಿ, ಕರಿಮೆಣಸು, ಅರಿಶಿನ, ಲವಂಗ, ಕಪ್ಪು ಜೀರಿಗೆ, ಜೀರಿಗೆಗಳ ಮಿಶ್ರಣದಿಂದ ಹೊರತೆಗೆಯಲಾದ ಸಾರ ಇದರಲ್ಲಿರುತ್ತದೆ. ಇದಕ್ಕೆ ಯಾವುದೇ ಪ್ರಿಸರ್ವೇಟಿವ್ ಬಳಸುವುದಿಲ್ಲ. ಜೊತೆಗೆ ಬೇಯಿಸಿದ ನಂತರವೂ ಇದರ ಸಕ್ರಿಯ ಘಟಕಾಂಶಗಳು ಸತ್ವ ಕಳೆದುಕೊಳ್ಳುವುದಿಲ್ಲ ಎಂಬುದು ತಯಾರಕರ ವಿವರಣೆ. ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿರುವ ಈ ಉತ್ಪನ್ನದ ಪೇಟೆಂಟ್ ಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

    ಇಮ್ಯೂನ್ ಬೂಸ್ಟರ್(ಡೈಲಿ ಡ್ರಾಪ್ಸ್): ರೋಗ ಪ್ರತಿರೋಧ ಶಕ್ತಿ ಉದ್ದೀಪಿಸುವ ಈ ಹನಿಯನ್ನು ಕೂಡ ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರೇ ಅಭಿವೃದ್ಧಿಪಡಿಸಿದ್ದಾರೆ. ಇದು ಸಹ ಆಯುಷ್ ಸಚಿವಾಲಯ ಶಿಫಾರಸು ಮಾಡಿರುವ ಗಿಡಮೂಲಿಕೆ ಮಿಶ್ರಣಗಳನ್ನು ಒಳಗೊಂಡಿದೆ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಒಂದು ಲೋಟ ಬಿಸಿ ನೀರಿಗೆ ಇದರ ಒಂದೇ ಒಂದು ಹನಿಯನ್ನು ಸೇರಿಸುವ ಮೂಲಕ ಪರಿಣಾಮ ಪಡೆಯಬಹುದು.

    250 ಮಿ.ಲೀ. ಬಿಸಿ ನೀರು ಹಾಗೂ 100 ಮಿ.ಲೀ. ಹಾಲಿಗೆ ಸೇರಿಸಿಕೊಂಡು ಕುಡಿಯಬಹುದು. ಇದರ ಬಾಳಿಕೆ ಅವಧಿ 3 ವರ್ಷಗಳು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಒಪ್ಪಿತವಾದ `ಗೋಲ್ಡನ್ ಮಿಲ್ಕ್’ ನ ಸುಧಾರಿತ ರೂಪ ಇದಾಗಿದೆ. ಅರಿಶಿನ, ಶುಂಠಿ, ಕಪ್ಪು ಜೀರಿಗೆ, ಜೀರಿಗೆ, ಲವಂಗ, ಕರಿ ಮೆಣಸಿನ ಸಕ್ರಿಯ ಘಟಕಾಂಶಗಳನ್ನು ಇದು ಒಳಗೊಂಡಿದೆ ಎಂಬುದು ಕಂಪನಿಯ ವಿವರಣೆ. ಇದೂ ಸಹ ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿದೆ.

    ವೆಜ್ ಫಲ್ (ಹಣ್ಣು ಮತ್ತು ತರಕಾರಿ ಸ್ಯಾನಿಟೈಸರ್): ಕ್ರಿಮ್ಮಿ ಬಯೋಟೆಕ್ ನ ದೀಪಕ್ ಭಜಂತ್ರಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಮೈಕ್ರೋಬ್ ಗಳ (ಸೂಕ್ಷ್ಮಾಣುಜೀವಿಗಳ) ವಿರುದ್ಧ ಪರಿಣಾಮಕಾರಿಯಾದ ಮತ್ತು ಕೀಟನಾಶಕಗಳನ್ನು ಹೊರಸೆಳೆಯಬಲ್ಲ ಈ ಸ್ಯಾನಿಟೈಸರ್ ನ್ನು ಖಾದ್ಯ ಘಟಕಾಂಶಗಳನ್ನು ಬಳಸಿ ತಯಾರಿಸಲಾಗಿದೆ. ಇದು ಕ್ಲೋರಿನ್ ಹಾಗೂ ಆಲ್ಕೋಹಾಲ್ (ಮದ್ಯಸಾರ) ಮುಕ್ತ ಎಂಬುದು ಗಮನಾರ್ಹ ಅಂಶ.

    1 ಲೀಟರ್ ನೀರಿಗೆ 10 ಮಿ.ಲೀ. ದ್ರಾವಣ ಹಾಕಿ ಅದರಲ್ಲಿ 3 ನಿಮಿಷ ಕಾಲ ಹಣ್ಣು ಮತ್ತು ತರಕಾರಿಗಳನ್ನು ನೆನೆಸಬೇಕು. ನಂತರ, ಕೈಯಿಂದ ಹಣ್ಣು ಹಾಗೂ ತರಕಾರಿಗಳನ್ನು ಉಜ್ಜಿ ಹೊರತೆಗೆದು ಅವನ್ನು ಬಳಕೆ ಯೋಗ್ಯ ನೀರಿನಿಂದ ತೊಳೆಯಬೇಕು. ಇದು ಹಣ್ಣು ಹಾಗೂ ತರಕಾರಿಗಳನ್ನು ವೈರಾಣು ಮತ್ತು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ ಎನ್ನಲಾಗಿದೆ. ಇದರ ಬೆಲೆ 500 ಎಂ.ಎಲ್.ಗೆ 150 ರೂ. ಆಗಿದೆ.

    ವಾಟರ್ ಸ್ಯಾನಿಟೈಸರ್- ಕಿಚನ್ ಟ್ಯಾಪ್: ಯುವಿ ಪ್ಯೂರಿಫೈಯರ್ ನ ಕಿರುರೂಪವಾದ ಇದನ್ನು ಬಯೋಫೈ ಕಂಪನಿಯ ರವಿಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ನೀರಿನ ನಲ್ಲಿಗೆ ಇದನ್ನು ಅಳವಡಿಸಬಹುದು. ಫೇಜಸ್ ನಂತಹ ವೈರಾಣು ಸೇರಿದಂತೆ ಶೇ.99ರಷ್ಟು ಮೈಕ್ರೋಬ್ ಗಳನ್ನು ಇದು ಯಶಸ್ವಿಯಾಗಿ ಕೊಲ್ಲಲಿದೆ.

    ಆ್ಯಂಟಿ- ಮೈಕ್ರೋಬಿಯಲ್ ಎಚ್‍ವಿಎಸಿ ಮಾಡ್ಯೂಲ್: ಎಚ್‍ವಿಎಸಿ ಸಿಸ್ಟಮ್ ಗೆ ಅಳವಡಿಸಬಹುದಾದ ಈ ಮಾಡ್ಯೂಲ್ (ಘಟಕ) ನ್ನು ಬಯೋಫೈ ನ ರವಿ ಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ಒಳಬರುವ ಗಾಳಿಯನ್ನು ನಿರ್ಮಲಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. ಪ್ರದೂಷಣೆಯಿಂದ ಕೂಡಿರುವ ಸಾಧ್ಯತೆಯಿರುವ ಹವಾನಿಯಂತ್ರಿತ ಗಾಳಿ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇದು ಸಹಕಾರಿ. ಹೀಗಾಗಿ, ಕೋವಿಡ್-19 ಸನ್ನಿವೇಶದಲ್ಲಿ ಇದರಿಂದ ಹೆಚ್ಚಿನ ಉಪಯೋಗವಿದೆ. ಯುವಿ=ಟೈಟಾನಿಯಂ ಡೈಯಾಕ್ಸೈಡ್ ತಾಂತ್ರಿಕತೆ ಆಧರಿಸಿ ಇದನ್ನು ರೂಪಿಸಲಾಗಿದೆ. ಪೇಟೆಂಟ್ ಹೊಂದಿರುವ ಈ ಉತ್ಪನ್ನವು ದೃಢೀಕರಣಗೊಂಡಿದೆ.

  • ಶಿವಮೊಗ್ಗದಲ್ಲಿ ಆಯುಷ್ ಕಿಟ್ ವಿತರಣೆಗೆ ಸಚಿವ ಈಶ್ವರಪ್ಪ ಚಾಲನೆ

    ಶಿವಮೊಗ್ಗದಲ್ಲಿ ಆಯುಷ್ ಕಿಟ್ ವಿತರಣೆಗೆ ಸಚಿವ ಈಶ್ವರಪ್ಪ ಚಾಲನೆ

    – ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿಟ್ ಸಹಕಾರಿ

    ಶಿವಮೊಗ್ಗ: ಕೊರೊನಾ ಸೋಂಕು ತಡೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಕಿಟ್ ವಿತರಣೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

    ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಶ್ರೀಸೀತಾರಾಮ ದೇವರಿಗೆ ಪೂಜೆ ಸಲ್ಲಿಸಿ, ನಂತರ ಕಿಟ್ ವಿತರಣೆಗೆ ಚಾಲನೆ ನೀಡಿದರು. ಇದೇ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ರಾಮ್ ಚರಣ್ ಅವರಿಗೆ ಆಯುಷ್ ಕಿಟ್ ವಿತರಿಸಿದರು. ನಂತರ ಹಿರಿಯರಾದ ನಾಗಭೂಷಣ ಭಟ್ಟರಿಗೆ ಮೊಬೈಲ್ ನಲ್ಲಿದ್ದ ಆಧಾರ್ ಕಾರ್ಡ್ ಪರಿಶೀಲಿಸಿ ಕಿಟ್ ವಿತರಣೆ ಮಾಡಿದರು.

    ದೇವಸ್ಥಾನದ ಎದುರಿನ ಕಾಂಡಿಮೆಂಟ್ಸ್ ಗೆ ತೆರಳಿ ಅಲ್ಲಿನ ಎಲ್ಲ ನಿವಾಸಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಕಿಟ್ ನೀಡಲಾಯಿತು. ನಂತರ ಪುತ್ರ ಜಿ.ಪಂ.ಸದಸ್ಯ ಕಾಂತೇಶ್, ಪಾಲಿಕೆ ಆಡಳಿ ಪಕ್ಷದ ನಾಯಕ ಚನ್ನಬಸಪ್ಪ ಆಯುರ್ವೇದಿಕ್ ಕಿಟ್ ಹಂಚಿಕೆಯನ್ನು ಮುಂದುವರೆಸಿದರು. ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಿ.ಎಸ್.ಅರುಣ್, ಪಾಲಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್ ಉಪಸ್ಥಿತರಿದ್ದರು.

  • ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು

    ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು

    ಬೆಂಗಳೂರು: ಕೊರೊನಾ ತಡೆಗಾಗಿ ಮುಂಜಾಗ್ರತ ಕ್ರಮಗಳ ಜೊತೆಯಲ್ಲಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಬಳಸುವುದು ಉತ್ತಮ. ಸೋಂಕಿಕತರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನೇ ನೀಡಲಾಗುತ್ತದೆ. ಮಕ್ಕಳು, ಗರ್ಭಿಣಿ ಮತ್ತು ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರೋದರಿಂದ ಉತ್ತಮ ಆಹಾರ ಸೇವನೆ ಮಾಡಬೇಕು. ಸೋಂಕಿತರು ಗುಣಮುಖರಾಗಿ ಬಂದ ಮೇಲೆಯೂ ವೈದ್ಯರ ಸಲಹೆಯ ಮೇರೆಗೆ ಆಹಾರ ಸೇವಿಸಬೇಕು.

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು:
    * ಕುಡಿಯಲು ಯಾವಾಗ ಬಿಸಿನೀರು ಉಪಯೋಗಿಸುವುದು.
    * ಪ್ರತಿದಿನ ಯೋಗಾಸನ, ಪ್ರಾಣಾಯಾಮವನ್ನು ಕನಿಷ್ಠ 30 ನಿಮಿಷಗಳವರೆಗೆ ಮಾಡುವುದು.
    * ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಮತ್ತು ಧನಿಯಾಗಳನ್ನು ಆಹಾರದಲ್ಲಿ ಬೆಳೆಸುವುದು.
    * ಗಿಡಮೂಲಿಕೆಯ ಟೀಗಳನ್ನು ಕುಡಿಯುವುದು (ವೈದ್ಯರ ಸಲಹೆಯ ಮೇರೆಗೆ)
    * ಪುದೀನ ಎಲೆಗಳನ್ನು ಬಿಸಿನೀರಿಗೆ ಹಾಕಿ ಹಬೆಯನ್ನು ತೆಗೆದುಕೊಳ್ಳುವುದು.
    * ಕೆಮ್ಮು ಅಥವಾ ಗಂಟಲಿನ ಕಿರಿಕಿರಿ ಇದ್ದರೆ ಸಕ್ಕರೆ ಅಥವಾ ಜೇನು ತುಪ್ಪವನ್ನು ಎರಡು ಮೂಗಿನ ಹೊಳ್ಳೆಗಳಿಗೆ ದಿನಕ್ಕೆರಡು ಬಾರಿ ಸವರಿಕೊಳ್ಳುವುದು.
    * 1 ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನಕಾಯಿ ಎಣ್ಣೆಯನ್ನು 2-3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು. ನಂತರ ಬಿಸಿನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದನ್ನು ದಿನಕ್ಕೆರಡು ಬಾರಿ ಮಾಡಬೇಕು.

    ಒಣಕೆಮ್ಮು ಹಾಗೂ ಗಂಟಲು ಕೆರತವಿದ್ದರೆ:
    * ಪುದಿನ ಎಲೆ ಅಥವಾ ಓಮದ ಕಾಳುಗಳನ್ನು ಕುದಿಯುವ ನೀರಿಗೆ ಹಾಕಿ ಹಬೆ (ಆವಿ)ಯನ್ನು ದಿನಕ್ಕೊಂದು ಬಾರಿ ತೆಗೆದುಕೊಳ್ಳುವುದು.
    * ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2-3 ಬಾರಿ ಸೇವಿಸುವುದು.
    (ಇವೆಲ್ಲ ಕೇವಲ ಸಾಮನ್ಯ ಜ್ವರ, ಕೆಮ್ಮು, ನೆಗಡಿಗೆ ಶಮನ ನೀಡುತ್ತವೆ. ಒಂದು ವೇಳೆ ಈ ಲಕ್ಷಣಗಳು ಮುಂದುವರಿದ್ರೆ ವೈದ್ಯರನ್ನು ಸಂಪರ್ಕಿಸಬೇಕು)

  • ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ್ಯವೇ ಭಾಗ್ಯ ಎನ್ನುವ ಹಿರಿಯರ ಮಾತು ಸುಳ್ಳಲ್ಲ. ಯಾಕೆಂದರೆ ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ. ಈಗಿನ ಜೀವನಶೈಲಿಯಲ್ಲಿ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡಲ್ಲ. ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ಕೂಡ ಕೆಲವರಿಗೆ ಆಗೋದಿಲ್ಲ.

    ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗಿ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಆರೋಗ್ಯವಾಗಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳಬೇಕು. ಪೌಷ್ಠಿಕ ಆಹಾರದ ಜೊತೆಗೆ ಆರೋಗ್ಯಕ್ಕೆ ಹಿತವಾದ ಕಷಾಯಗಳನ್ನು ದಿನನಿತ್ಯ ಕುಡಿದರೆ ಸುಲಭವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧೀಯ ಸಸ್ಯಗಳು, ಬೇರುಗಳು, ಕಾಳುಗಳು ಇವೆ. ಅವುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಕೆಲವು ಕಷಾಯಗಳನ್ನು ಸೇವಿಸಿದರೆ ಅದು ದೇಹದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಮ್ಮು, ಶೀತ, ಜ್ವರ ಇಂಥ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಇತರ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡಿ ಆರೋಗ್ಯ ಕಾಪಾಡುತ್ತದೆ.

    ಆರೋಗ್ಯಕರ ಕಷಾಯಗಳು ಯಾವುದು?

    1. ಅರಿಶಿಣ ಮತ್ತು ಹಾಲು ಕಷಾಯ
    ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅರಶಿಣ ಮಿಶ್ರಿತ ಹಾಲು ಕುಡಿದರೆ ಕೆಮ್ಮು, ಗಂಟಲು ಕೆರೆತ ಕಡಿಮೆ ಆಗುತ್ತದೆ. ಬೇಕಾದರೆ ರುಚಿಗೆ ಹಾಲಿಗೆ ಅರಿಶಿಣ ಜೊತೆಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯಬಹುದು.

    2. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯ
    ನಿಂಬೆ ರಸದಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಏಲಕ್ಕಿ, ಮತ್ತು ಕಾಳು ಮೆಣಸು ಮಿತವಾಗಿ ಬಳಸಬೇಕು. ಯಾಕೆಂದರೆ ತುಂಬಾ ಬಳಸಿದರೆ ಉಷ್ಣವಾಗುತ್ತದೆ. ನೀರಿಗೆ ಕಾಳುಮೆಣಸು(ಪುಡಿ ಮಾಡಿದ್ದು), ಏಲಕ್ಕಿ, ನಿಂಬೆರಸ ಹಾಕಿ ಕುದಿಸಿ ಕುಡಿಯುವುದರಿಂದ ಸಾಮಾನ್ಯ ಶೀತ ನಿವಾರಣೆಯಾಗುತ್ತದೆ.

    3. ತುಳಸಿ ಮತ್ತು ಕಾಳು ಮೆಣಸಿನ ಕಷಾಯ
    ತುಳಸಿ ದೇಹದ ಆರೋಗ್ಯವನ್ನು ಕಾಡುವುವಲ್ಲಿ ಪರಿಣಾಮಕಾರಿಯಗಿದ್ದು, ತುಳಿಸಿ ಎಲೆಗಳನ್ನು ನೀರಿಗೆ ಹಾಕಿ ಕುಡಿದರೆ ಒಳ್ಳೆಯದು. ಕೆಮ್ಮು ಇದ್ದರೆ ತುಳಸಿ, ಕಾಳು ಮೆಣಸು, ಶುಂಠಿ ಜಜ್ಜಿ ಎರಡು ಲೋಟ ನೀರಿಗೆ ಹಾಕಿ, ಅದು ಅರ್ಧ ಲೋಟದಷ್ಟು ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ. 2 ಲೀಟರ್ ನೀರಿಗೆ 5-6 ತುಳಸಿ ಎಲೆ, 3-4 ಕಾಳು ಮೆಣಸು ಹಾಕಿ ಕುದಿಸಿ, ಈ ಕಷಾವನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

    4. ಅಶ್ವಗಂಧ ಕಷಾಯ ಮತ್ತು ಅಣಬೆ ಸೂಪ್
    ಅಶ್ವಗಂಧದಲ್ಲಿ ರೋಗ ನಿರೋಧಕ ಗುಣ ಅಡಕವಾಗಿದೆ. ಹೀಗಾಗಿ ಆಯುರ್ವೇದದಲ್ಲಿ ಅನೇಕ ಆರೋಗ್ಯ ಸಮಸ್ಯೆ ನಿವಾರಿಸಲು ಇದನ್ನು ಬಳಸುತ್ತಾರೆ. ಅಣಬೆ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಅಣಬೆ ಸೂಪ್ ಹಾಗೂ ಅಶ್ವಗಂಧ ಹಾಕಿ ಕಷಾಯ ಕುಡಿದರೆ ಒಳ್ಳೆದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಆರೋಗ್ಯ ಚೆನ್ನಾಗಿರುತ್ತದೆ.

    5. ಪುದೀನಾ ಮತ್ತು ರೋಸ್‍ಮೆರಿ ಕಷಾಯ
    ಪುದೀನಾದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಅಂಶವಿದೆ. ಪುದೀನಾ ಮತ್ತು ರೋಸ್‍ಮೆರಿ ಎರಡನ್ನು ಮಿಶ್ರಣ ಮಾಡಿದ ಕಷಾಯ ಸೇವನೆಯಿಂದ ಹವಾಮಾನ ಬದಲಾವಣೆಯಿಂದ ಕಾಣಿಸುವ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಬಹುದು.

  • ನಾನು ನಾನ್‍ವೆಜ್, ಕೊರೊನಾಗೂ ಚಿಕನ್‍ಗೂ ಸಂಬಂಧವಿಲ್ಲ: ಸಿಟಿ ರವಿ

    ನಾನು ನಾನ್‍ವೆಜ್, ಕೊರೊನಾಗೂ ಚಿಕನ್‍ಗೂ ಸಂಬಂಧವಿಲ್ಲ: ಸಿಟಿ ರವಿ

    – ನಾನ್‍ವೆಜ್ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

    ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದ ಸಮೀಪವಿರುವ ಕತ್ರಿಮಾರಮ್ಮ ದೇವಸ್ಥಾನದ ಬಳಿಯ ಟೆಂಡರ್ ಚಿಕನ್ ಸೆಂಟರ್ ನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಎರಡು ಕೆಜಿ ಚಿಕನ್ ಖರೀದಿಸಿದ್ದಾರೆ.

    ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕನ್‍ಗೂ ಕೊರೊನಾಗೂ ಯಾವುದೇ ಸಂಬಂಧವಿಲ್ಲ. ನಾನು ಬೇಸಿಕಲಿ ನಾನ್ ವೆಜ್. ಆದರೆ ಕಡಿಮೆ ತಿನ್ನುತ್ತೇನೆ. ನಾನ್ ವೆಜ್‍ನವರು ಚಿಕನ್, ಫಿಶ್ ಹಾಗೂ ಕೋಳಿ ಮೊಟ್ಟೆಯನ್ನು ತಿನ್ನಬಹುದು ಎಂದರು.

    ಇವುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಆಹಾರ ತಜ್ಞರೇ ಹೇಳಿದ್ದಾರೆ. ಹಾಗಾಗಿ ಯಾವುದೇ ಆತಂಕವಿಲ್ಲದೆ ಇವುಗಳನ್ನು ತಿಂದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.

    ಮಾಂಸಾಹಾರಿಗಳು ಚಿಕನ್, ಫಿಶ್, ಕೋಳಿ ಮೊಟ್ಟೆ ತಿಂದರೆ, ಸಸ್ಯಾಹಾರಿಗಳು ಬಾಳೆಹಣ್ಣು, ತರಕಾರಿ ತಿನ್ನಬಹುದು ಎಂದಿದ್ದಾರೆ.