Tag: Immigrant Workers

  • ವಲಸೆ ಕಾರ್ಮಿಕರ ಅನುಕೂಲಕ್ಕಾಗಿ 7 ಕಡೆ ವಸತಿ ರಹಿತರ ಆಶ್ರಯ ಕೇಂದ್ರ ನಿರ್ಮಾಣ: ಪ್ರಹ್ಲಾದ್ ಜೋಶಿ

    ವಲಸೆ ಕಾರ್ಮಿಕರ ಅನುಕೂಲಕ್ಕಾಗಿ 7 ಕಡೆ ವಸತಿ ರಹಿತರ ಆಶ್ರಯ ಕೇಂದ್ರ ನಿರ್ಮಾಣ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಅವಳಿ ನಗರದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಅಡಿ 7 ನಗರ ವಸತಿ ರಹಿತರ ಆಶ್ರಯ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದ ಹೊಸೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರವನ್ನು ಇಂದು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಉಂಟಾದ ವಲಸೆ ಕಾರ್ಮಿಕ ಸಮಸ್ಯೆಯನ್ನು ನಿವಾರಿಸಲು ಆಶ್ರಯ ಕೇಂದ್ರಗಳು ಅನುಕೂಲವಾಗಲಿವೆ. ಆಶ್ರಯ ಕೇಂದ್ರದಲ್ಲಿ ಗರಿಷ್ಠ 6 ತಿಂಗಳವರೆಗೆ ವಲಸೆ ಕಾರ್ಮಿಕರಿಗೆ ಊಟದೊಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!

    ನಗರದಲ್ಲಿ ಕೈಗೊಳ್ಳಲಾದ ಸಮೀಕ್ಷೆಯಲ್ಲಿ ಕಾರ್ಮಿಕರು ಆಶ್ರಯ ಕೇಂದ್ರದಲ್ಲಿ ಉಳಿದುಕೊಳ್ಳಲು ಒಲವು ತೋರಿಸಿದ್ದಾರೆ. ಈಗ ಉದ್ಘಾಟಿಸಿದ ಆಶ್ರಯ ಕೇಂದ್ರ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಈ ಕೇಂದ್ರದಲ್ಲಿ ಒಬ್ಬ ವ್ಯವಸ್ಥಾಪಕರು, 3 ಜನ ಆರೈಕೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವರು. ಇದು 23 ಜನ ಪುರುಷರು ಹಾಗೂ ಮಹಿಳೆಯರಿಗೆ ಆಶ್ರಯ ನೀಡಲಾಗುವುದು ಎಂದರು. ಇದನ್ನೂ ಓದಿ: ಹೆಚ್ಚಾದ ಭೀಮಾ ನದಿ ಒಳಹರಿವು – ಯಾದಗಿರಿ ವೀರಾಂಜನೇಯ, ಕಂಗಳೇಶ್ವರ ದೇಗುಲ ಜಲಾವೃತ

    ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಜಿಲ್ಲಾ ಕೌಶ್ಯಲ್ಯ ಅಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ, ಅಬ್ದುಲ್ ರಜಾಕ್ ಗಡವಾಲೆ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

  • ಗರ್ಲ್‍ಫ್ರೆಂಡ್ ಭೇಟಿಗೆ ಸಹಾಯ ಮಾಡಿ ಎಂದ ಭೂಪ- ತಕ್ಕ ಉತ್ತರ ನೀಡಿದ ನಟ ಸೋನು ಸೂದ್

    ಗರ್ಲ್‍ಫ್ರೆಂಡ್ ಭೇಟಿಗೆ ಸಹಾಯ ಮಾಡಿ ಎಂದ ಭೂಪ- ತಕ್ಕ ಉತ್ತರ ನೀಡಿದ ನಟ ಸೋನು ಸೂದ್

    ಮುಂಬೈ: ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ಈ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು ಸಹ. ಆದರೆ ವ್ಯಕ್ತಿಯೊಬ್ಬ ಇದನ್ನೇ ದುರುಪಯೋಗಪಡಿಸಿಕೊಂಡು ತನ್ನ ಗರ್ಲ್‍ಫ್ರೆಂಡ್ ಭೇಟಿ ಮಾಡಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಸೋನು ಸೂದ್ ತಕ್ಕ ಉತ್ತರ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ವಲಸೆ ಕಾರ್ಮಿಕರು ಪರದಾಡುವಂತಾಗಿದ್ದು, ಸಹಾಯ ಬೇಡುತ್ತಿದ್ದಾರೆ. ನಟ ಸೋನು ಸೂದ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ಅರಿವಿಗೆ ಬಂದ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಅಭಿಮಾನಿಗಳ ಬಹುತೇಕ ಟ್ವೀಟ್‍ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಇತ್ತೀಚೆಗೆ ಸೋನು ಸೂದ್ ನೂರಾರು ವಲಸೆ ಕಾರ್ಮಿಕರಿಗಾಗಿ ಬಸ್ ವ್ಯವಸ್ಥೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರಲ್ಲಿ ಕರ್ನಾಟಕದ ಕಾರ್ಮಿಕರೂ ಸೇರಿದಂತೆ ಬಹುತೇಕರು ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿದ್ದರು. ಇದನ್ನು ಕಂಡ ಸೋನು ಸೂದ್, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಜೊತೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಅಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದರು. ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು. ಈ ಮೂಲಕ ಮಾನವೀಯತೆ ಮೆರೆದಿದ್ದರು.

    ಇದೀಗ ವ್ಯಕ್ತಿಯೊಬ್ಬ ಇದೇ ಅವಕಾಶವನ್ನು ಬಳಸಿಕೊಂಡು ಸೋನು ಸೂದ್ ಅವರ ಬಳಿ ಅನಗತ್ಯ ಸಹಾಯ ಕೇಳಿದ್ದಾನೆ. ಇದಕ್ಕೆ ನಟ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಈ ಪ್ರಶ್ನೆ ಕೇಳಿದರೆ ನೀವೂ ನಗ್ತೀರಾ, ಹೌದು ಟ್ವಿಟ್ಟರ್‍ಲ್ಲಿ ವ್ಯಕ್ತಿಯೊಬ್ಬ ಈ ಪ್ರಶ್ನೆ ಕೇಳಿದ್ದು, ಭಯ್ಯಾ ಗರ್ಲ್‍ಫ್ರೆಂಡ್ ಭೇಟಿಯಾಗಲು ದಯವಿಟ್ಟು ನನಗೆ ಸಹಾಯ ಮಾಡಿ, ಬಿಹಾರಕ್ಕೆ ಮಾತ್ರ ಹೋಗಬೇಕಿದೆ ಎಂದು ಕೇಳಿದ್ದಾನೆ.

    ಇದಕ್ಕೆ ನಟ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ, ನಿಜವಾದ ಪ್ರೀತಿಯ ಕುರಿತು ಪಾಠ ಮಾಡಿದ್ದಾರೆ. ನಿಮ್ಮ ಗರ್ಲ್‍ಫ್ರೆಂಡ್ ಇಂದ ಕೆಲವು ದಿನವಾದರೂ ದೂರ ಇರಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ನಿಜವಾದ ಪ್ರೀತಿಯ ಪರೀಕ್ಷೆಯೂ ಆಗುತ್ತದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ಸಾಲು ಮುಗಿದ ಮೇಲೆ ನಗುವಿನ ಎಮೋಜಿಯನ್ನು ಹಾಕಿದ್ದಾರೆ.

    ಸೋನು ಸೂದ್ ಅವರ ಸಮಯ ಪ್ರಜ್ಞೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಊಹಿಸಲಾಗದ ಉತ್ತರಕ್ಕೆ ಫಿದಾ ಆಗಿದ್ದಾರೆ. ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇತ್ತೀಚೆಗೆ ಇಂತಹದ್ದೇ ಮತ್ತೊಂದು ಘಟನೆ ನಡೆದಿತ್ತು. ಮದ್ಯದ ಅಂಗಡಿಗೆ ಹೋಗಲು ಸಹಾಯ ಮಾಡಿ ಎಂದು ಕೇಳಿದ್ದಕ್ಕೆ ನಟ ತಕ್ಕ ಉತ್ತರ ನೀಡಿದ್ದರು.

  • ಮುಂಬೈ ವಲಸಿಗರಿಗೆ ಸ್ವಂತ ಗೆಸ್ಟ್‌ಹೌಸ್‌ನಲ್ಲಿ ಆಶ್ರಯ ಕಲ್ಪಿಸಿದ ಸತೀಶ್ ಜಾರಕಿಹೊಳಿ

    ಮುಂಬೈ ವಲಸಿಗರಿಗೆ ಸ್ವಂತ ಗೆಸ್ಟ್‌ಹೌಸ್‌ನಲ್ಲಿ ಆಶ್ರಯ ಕಲ್ಪಿಸಿದ ಸತೀಶ್ ಜಾರಕಿಹೊಳಿ

    ಬೆಳಗಾವಿ/ಚಿಕ್ಕೋಡಿ: ಮುಂಬೈನಿಂದ ಬಂದ 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಗೆಸ್ಟ್ ಹೌಸ್‍ನಲ್ಲೇ ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

    ಮಹಾಮಾರಿ ಕೊರೊನಾದಿಂದ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಂದಂತಾಗಿದೆ. ಕೊರೊನಾ ಭೀತಿಯಿಂದ ದುಡಿಮೆ ಇಲ್ಲದೇ ತಮ್ಮ ಗ್ರಾಮಗಳಿಗೆ ವಾಪಸ್ ಆಗುತ್ತಿರುವ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ತಮ್ಮ ಗ್ರಾಮಗಳಿಗೆ ಬರುವ ಕಾರ್ಮಿಕರನ್ನು ಯಾವುದೋ ಸರ್ಕಾರಿ ಕಟ್ಟಡದಲ್ಲಿ ಇಟ್ಟು ಕ್ವಾರಂಟೈನ್ ಮಾಡುವ ಬದಲು ಸತೀಶ್ ಜಾರಕಿಹೊಳಿ ಅವರು ವಲಸೆ ಕಾರ್ಮಿಕರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಲದಾಳ ಗ್ರಾಮದಲ್ಲಿರುವ ತಮ್ಮ ಗೆಸ್ಟ್ ಹೌಸ್‍ನಲ್ಲಿ ಕ್ವಾರಂಟೈನ್ ಮಾಡಿಸಿ ಮಾದರಿಯಾಗಿದ್ದಾರೆ.

    ಗೆಸ್ಟ್ ಹೌಸ್‍ನಲ್ಲಿ ಇರುವ ಎಲ್ಲ ಕಾರ್ಮಿಕರು ಮುಂಬೈನಿಂದ ಬಂದವರಾಗಿದ್ದಾರೆ. ದಿನನಿತ್ಯ ಎಲ್ಲ ಕಾರ್ಮಿಕರಿಗೂ ತಮ್ಮ ಸ್ವಂತ ಹಣದಿಂದ 2 ಬಾರಿ ಊಟ, 2 ಬಾರಿ ಉಪಹಾರ ಸೇರಿದಂತೆ ಹಣ್ಣು ಹಂಪಲ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಕ್ಷೇತ್ರದಲ್ಲಿ ವಿವಿಧ ಕಡೆ ಕ್ವಾರಂಟೈನ್ ಇರುವ 1 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಊಟ ಉಪಹಾರ ತಲುಪಿಸುತ್ತಿದ್ದಾರೆ. ಅಲ್ಲದೇ ಎಲ್ಲ ಕಾರ್ಮಿಕರಿಗೆ ಕಾಲ ಕಳೆಯಲು ಆಟಿಕೆ ಸಾಮಾನುಗಳನ್ನು ವಿತರಿಸಿದ್ದಾರೆ.

    ದೇಶದಲ್ಲಿ ಕೊರೊನಾ ಕೇಂದ್ರವೆಂದೇ ಬಿಂಬಿತವಾಗಿರುವ ಮುಂಬೈನಿಂದ ತಮ್ಮ ಊರುಗಳಿಗೆ ಆಗಮಿಸಿದ ಯಮಕನಮರಡಿ ಕ್ಷೇತ್ರದ ವಲಸೆ ಕಾರ್ಮಿಕರನ್ನು ಕೊರೊನಾ ಭಯದಿಂದ ಗ್ರಾಮಸ್ಥರು ಊರಿನೊಳಗೆ ಸೇರಿಸಿಕೊಳ್ಳಲಿಲ್ಲ. ಕ್ವಾರಂಟೈನ್‍ನಲ್ಲಿ ವ್ಯವಸ್ಥೆಯೂ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತನ್ನ ಕ್ಷೇತ್ರದವರು ಎಂದು ಅರಿತ ಸತೀಶ್ ಜಾರಕಿಹೊಳಿ ಹೆಚ್ಚು ಯೋಚನೆ ಮಾಡದೆ, ಸುಮಾರು 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ತಮ್ಮ ಸಹಾಯಕ್ಕೆ ನಿಂತಿರುವ ಸತೀಶ್ ಜಾರಕಿಹೊಳಿ ಸೇವೆಗೆ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆಯೂ ಸತೀಶ್ ಜಾರಕಿಹೊಳಿ ಕೊರೊನಾ ದಾಳಿಗೆ ಸಿಲುಕಿದ ರೈತರ, ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದ್ದರು. ರೈತರು ಬೆಳೆದ ತರಕಾರಿ ಮಾರಾಟಕ್ಕೆ ಸಾಧ್ಯವಾಗದೆ ಹೊಲದಲ್ಲಿಯೇ ಕೊಳೆತು ಹೋಗುವ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಸ್ವತಃ ಹೊಲಗದ್ದೆಗಳಿಗೆ ಇಳಿದು, ರೈತರ ತರಕಾರಿಗಳನ್ನು ಖರೀದಿಸಿ, ಬಡವರಿಗೆ, ಅಸಹಾಯಕರಿಗೆ ಉಚಿತವಾಗಿ ಹಂಚುವುದರ ಮೂಲಕ ಸಹಾಯ ಮಾಡಿದ್ದರು. ಈಗ ಮತ್ತೆ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

  • ನಮ್ಮನ್ನು ಊರಿಗೆ ಕಳುಹಿಸಿಕೊಡಿ- ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು

    ನಮ್ಮನ್ನು ಊರಿಗೆ ಕಳುಹಿಸಿಕೊಡಿ- ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು

    – ಹಾಟ್‍ಸ್ಪಾಟ್ ಆಗಿದ್ದ ಕಾಸರಗೋಡಿನಲ್ಲಿಲ್ಲ ಒಂದೇ ಒಂದು ಪ್ರಕರಣ

    ತಿರುವನಂತಪುರಂ: ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಸುಮಾರು 700 ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಅಕ್ಕಲಂ ಬಳಿಯ ಒರುವತಿಲ್ಕೋಟದಲ್ಲಿ ಭಾನುವಾರ ತಡರಾತ್ರಿ ಸುಮಾರು 700 ವಲಸೆ ಕಾರ್ಮಿಕರು ಸೇರಿಕೊಂಡು ನಮ್ಮನ್ನು ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಎಂದು ಪ್ರತಿಭಟಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದು ಪ್ರತಿಭಟನೆ ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಈ ಎಲ್ಲ ಕಾರ್ಮಿಕರು ದೇಶದ ವಿವಿಧೆಡೆಯಿಂದ ಬಂದು ಕೇರಳದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಇವರು ಲಾಕ್‍ಡೌನ್ ಆದ ಮೇಲೆ ಎಲ್ಲ ಕೆಲಸಗಳು ನಿಂತು ಹೋಗಿದೆ. ನಮ್ಮ ಬಳಿ ಊಟ ತಿನ್ನಲು ದುಡ್ಡು ಇಲ್ಲ, ಮಾಡಲು ಕೆಲಸವಿಲ್ಲ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಮಾರ್ಚ್ 24ರಂದು ದೇಶ ಲಾಕ್‍ಡೌನ್ ಆದ ಬಳಿಕ ಇವರು ತಿನ್ನಲು ಊಟವಿಲ್ಲದೇ ಪರದಾಡುವ ಸ್ಥಿತಿ ತಲುಪಿದ್ದಾರೆ.

    ಈ ಕಾರಣದಿಂದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆ ಪೊಲೀಸರು ಸ್ಥಳಕ್ಕೆ ಜಮಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ನಿಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕೆ ಕಾರ್ಮಿಕರು ಅಲ್ಲಿಂದ ತೆರೆಳಿದ್ದಾರೆ.

    ಕೇರಳದಲ್ಲಿ ಹಿಡಿತಕ್ಕೆ ಬಂದ ಕೊರೊನಾ:
    ದೇಶದಲ್ಲಿ ಮೊದಲು ಕೊರೊನಾ ಕಾಣಿಸಿಕೊಂಡಿದ್ದ ಕೇರಳದಲ್ಲಿ ಈಗ ಹಿಡಿತಕ್ಕೆ ಬಂದಿದೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಈಗ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಈ ನಡುವೆ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದರ ಜೊತೆಗೆ ಕೆಕೆ ಶೈಲಾಜ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

  • ವದಂತಿ ನಂಬಿ ಮಂಗ್ಳೂರು ಟೌನ್‍ಹಾಲ್ ಎದುರು ಜಮಾಯಿಸಿದ ವಲಸೆ ಕಾರ್ಮಿಕರು

    ವದಂತಿ ನಂಬಿ ಮಂಗ್ಳೂರು ಟೌನ್‍ಹಾಲ್ ಎದುರು ಜಮಾಯಿಸಿದ ವಲಸೆ ಕಾರ್ಮಿಕರು

    ಮಂಗಳೂರು: ಎರಡು ವಾರಗಳ ಹಿಂದೆ ವದಂತಿ ನಂಬಿ ಮುಂಬೈನಲ್ಲಿ ಸಾವಿರಾರು ವಲಸೆ ಕಾರ್ಮಿಕರು ರೈಲ್ವೇ ಸ್ಟೇಷನ್‍ಗೆ ಬಂದಿದ್ದರು. ಆ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹೆಣಗಾಡಿದರು. ಇಂತದ್ದೆ ಸನ್ನಿವೇಶ ಇಂದು ಮಂಗಳೂರಿನಲ್ಲಿ ಕಂಡು ಬಂತು.

    ಜಿಲ್ಲಾಡಳಿತ ತಮ್ಮನ್ನು ಸ್ವಗ್ರಾಮಗಳಿಗೆ ಕಳಿಸಲಿದೆ ಎಂಬ ವದಂತಿ ನಂಬಿದ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮಂಗಳೂರಿನ ಟೌನ್‍ಹಾಲ್‍ನಲ್ಲಿ ಕಾಣಿಸಿಕೊಂಡರು. ಸಾಮಾಜಿಕ ಅಂತರಪಾಲಿಸದೆ ಗುಂಪು ಸೇರಿದ್ದರು. ಇದು ವದಂತಿ ಹೋಗಿ ಎಂದರೂ ಯಾರೂ ಕೇಳಲಿಲ್ಲ.

    ಕಾರ್ಮಿಕರು ಊರಿಗೆ ಹೋಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ದುಡಿಯುತ್ತಿದ್ದ ಸುಮಾರು 1 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಬಂದು ಸೇರಿದ್ದರು. ಕೆಲ ಕಾರ್ಮಿಕರು ಊರಿಗೆ ಹೋಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

    ಬಹುತೇಕರು ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರಾಗಿದ್ದು, ಕಳೆದ ಎರಡು ದಿನಗಳಲ್ಲಿ 60 ಬಸ್ ಗಳಲ್ಲಿ 780 ಕಾರ್ಮಿಕರನ್ನು ಕಳುಹಿಸಲಾಗಿತ್ತು. ಹೀಗಾಗಿ ಇನ್ನುಳಿದ ಕಾರ್ಮಿಕರು ತಮ್ಮ ತಮ್ಮ ಊರಿಗೆ ಹೋಗಲೆಂದು ಜಿಲ್ಲಾಡಳಿತದ ನೆರವಿಗಾಗಿ ಕಾಯುತ್ತಿದ್ದಾರೆ. ಬಳಿಕ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೊನೆಗೂ ಕಾರ್ಮಿಕರ ಮನವಿಗೆ ಸ್ಪಂಧಿಸಿದ ಜಿಲ್ಲಾಡಳಿತ ಕಾರ್ಮಿಕರನ್ನು ಊರಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.