Tag: Immersion

  • ಗಣೇಶ ಮೂರ್ತಿ ವಿಸರ್ಜನೆ ಸ್ಥಳದಲ್ಲಿ ವ್ಯಕ್ತಿ ಆತ್ಮಹತ್ಯೆ- ಸಿಸಿಟಿವಿ ಕ್ಯಾಮೆರಾದಲ್ಲಿ ಸತ್ಯ ಬಯಲು

    ಗಣೇಶ ಮೂರ್ತಿ ವಿಸರ್ಜನೆ ಸ್ಥಳದಲ್ಲಿ ವ್ಯಕ್ತಿ ಆತ್ಮಹತ್ಯೆ- ಸಿಸಿಟಿವಿ ಕ್ಯಾಮೆರಾದಲ್ಲಿ ಸತ್ಯ ಬಯಲು

    ರಾಯಚೂರು: ನಗರದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಸ್ಥಳದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಬಾಬು(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಾಬು ನಗರದ ಖಾಸಬಾವಿಯಲ್ಲಿ ಗಂಗಾ ನಿವಾಸ ಪ್ರದೇಶದ ನಿವಾಸಿ ಆಗಿದ್ದು, ಈತ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಇಡೀ ನಗರವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

    ಗಣೇಶ ವಿಸರ್ಜನೆ ವೇಳೆ ದುರಂತ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ರಾತ್ರಿ ವೇಳೆ ಬಾಬು ಖಾಸಬಾವಿಗೆ ಇಳಿದು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

    ಸುಮಾರು ಮೂರು ಗಂಟೆ ಕಾಲ ಖಾಸಬಾವಿಯಲ್ಲಿ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ. ಮಾನಸಿಕ ಅಸ್ವಸ್ಥನಾಗಿದ್ದ ಬಾಬು ಮನೆಯಿಂದ ನೇರವಾಗಿ ಖಾಸಬಾವಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

    ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೂಜೆಗೂ ಮುನ್ನ ವಿಸರ್ಜನೆಗೊಂಡ ಗಣಪ

    ಪೂಜೆಗೂ ಮುನ್ನ ವಿಸರ್ಜನೆಗೊಂಡ ಗಣಪ

    ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪೂಜೆಗೂ ಮುನ್ನ ಗಣಪತಿ ವಿಸರ್ಜನೆಗೊಂಡಿದ್ದು, ನೂರಾರು ಜನರ ಬದುಕು ಬೀದಿಗೆ ಬಿದ್ದಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಗಣಪತಿ ಹಬ್ಬ ಬಂದರೆ ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬಂದು ಗಣಪತಿ ಮೂರ್ತಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಉಲ್ಟಾ ಆಗಿದೆ. ತಯಾರಾಗಿ ಮನೆ ಮನೆಗೆ ಹೋಗಿ ಪೂಜೆ ಸಲ್ಲಿಸಿಕೊಂಡು ವಿಸರ್ಜನೆಯಾಗುತ್ತಿದ್ದ ಗಣಪತಿ ಇದೆಲ್ಲದಕ್ಕೂ ಮುನ್ನವೇ ವಿಸರ್ಜನೆಯಾಗಿದ್ದಾನೆ.

    ಕಳೆದ 25 ದಿನಗಳ ಹಿಂದಷ್ಟೇ ಘಟಪ್ರಭಾ ನದಿಯಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಕ್ಕೆ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕೂಡ ನೀರು ನುಗ್ಗಿ 30ಕ್ಕೂ ಅಧಿಕ ಮನೆಗಳು ಧರೆಗುರುಳಿದರೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಗ್ರಾಮದಲ್ಲಿ ಗಣಪತಿ ತಯಾರಿಸುತ್ತಿದ್ದ ಘಟಕಗಳು ಮುಳುಗಿ ದೇವರೇ ಕರಗಿದ ಸ್ಥಿತಿ ನಿರ್ಮಾಣವಾಗಿದೆ. ಕೊಣ್ಣೂರು ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಗಣಪತಿಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ತಲೆತಲಾಂತರದಿಂದ ಅನೇಕ ಕುಟುಂಬಗಳು ಇದನ್ನೇ ವೃತ್ತಿ ಮಾಡಿಕೊಂಡಿದ್ದು ಗಣಪತಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. 1962ರಲ್ಲಿ ಎಲ್ಲ ಕುಂಬಾರರು ಸೇರಿಕೊಂಡು ಕಾಡಸಿದ್ದೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳು ಉತ್ಪಾದಕ ಸಹಕಾರಿ ಸಂಘ ಮಾಡಿಕೊಂಡು ಈ ಸಂಘದ ಮೂಲಕ ಗಣಪತಿಗಳನ್ನು ತಯಾರಿಸಿಕೊಂಡು ಬರುತ್ತಿದ್ದು ಜಲಪ್ರವಾಹಕ್ಕೆ ಈಗ ಎಲ್ಲವೂ ಹಾನಿಯಾಗಿ ಕಂಗಾಲಾಗಿದ್ದಾರೆ.

    ಪ್ರತಿ ವರ್ಷ ಇಲ್ಲಿ 6 ಲಕ್ಷ ಗಣಪತಿಗಳನ್ನು ತಯಾರು ಮಾಡುತ್ತಾರೆ. ಈ ವರ್ಷ ಜಲಪ್ರವಾಹಕ್ಕೆ ಸಿಲುಕಿ ಸುಮಾರು 5 ಲಕ್ಷ ಗಣಪತಿಗಳು ನೀರಿನಲ್ಲಿ ಕರಗಿ ಮಣ್ಣಾಗಿವೆ. ಉಳಿದ ಒಂದು ಲಕ್ಷ ಗಣಪತಿಗೆ ಕಲರಿಂಗ್ ಮಾಡಿಕೊಂಡು ಗ್ರಾಮದವರಿಗೆ ಹಾಗೂ ಅಕ್ಕಪಕ್ಕದವರಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ 5 ಲಕ್ಷ ಗಣಪತಿಗಳು ಹಾಳಾಗಿದ್ದಕ್ಕೆ ಸುಮಾರು 3 ಕೋಟಿಗೂ ಅಧಿಕ ಹಾನಿ ಇವರದ್ದಾಗಿದೆ. ನೀರು ಬಂದ ದಿನಾಂಕದಿಂದಲೇ ಇಲ್ಲಿ ಗಣಪತಿಗಳು ಮಾರಾಟವಾಗುತ್ತಿದ್ದವು. ಆದರೆ ದುರಾದೃಷ್ಟವಶಾತ್ ಆ ದಿನವೇ ಇಡೀ ಗ್ರಾಮಕ್ಕೆ ನೀರು ನುಗ್ಗಿ ಎಂಟು ದಿನಗಳ ಕಾಲ ನೀರು ನಿಂತಿದ್ದಕ್ಕೆ ಎಲ್ಲಾ ಗಣಪತಿಗಳು ನೀರಲ್ಲೇ ಕರಗಿ ಮಣ್ಣಾಗಿ ಬಿಟ್ಟಿವೆ. 50 ರೂ. ಸಣ್ಣ ಗಣಪತಿಯಿಂದ ಹಿಡಿದು 30 ಸಾವಿರ ರೂ.ವರೆಗೂ ಇಲ್ಲಿ ಗಣಪತಿಗಳನ್ನು ಸಿದ್ಧಪಡಿಸುತ್ತಾರೆ.

    ಇಲ್ಲಿ ಪಿಒಪಿ ಗಣಪತಿಗಳನ್ನು ನಿರ್ಮಾಣ ಮಾಡುವುದಿಲ್ಲ. ಎಲ್ಲವೂ ಮಣ್ಣಿನಿಂದಲೇ ಸಿದ್ಧಪಡಿಸುತ್ತಾರೆ. ಸರ್ಕಾರ ಪರಿಸರ ಸ್ನೇಹಿ ಗಣಪತಿ ಕಡ್ಡಾಯ ಮಾಡಿದ ಮೇಲೆ ಅತೀ ಹೆಚ್ಚು ಪರಿಸರ ಸ್ನೇಹಿ ಗಣಪತಿಗಳನ್ನು ನಿರ್ಮಾಣ ಮಾಡುವ ಏಕೈಕ ಗ್ರಾಮ ಇದಾಗಿದೆ. ಸರ್ಕಾರ ಕಡ್ಡಾಯ ಮಾಡಿದ ಮೇಲೆ ಈ ಗಣಪತಿಗಳಿಗೆ ಹೆಚ್ಚಿನ ಗಣಪತಿಗಳನ್ನ ಇದೇ ವರ್ಷ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಈ ಬಾರಿಯೇ ನೆರೆ ಬಂದು ಎಲ್ಲ ಗಣಪತಿಗಳು ಹಾಳಾಗಿದ್ದು, ಈ ಕುಂಬಾರರ ಬದುಕು ಬೀದಿಗೆ ಬಂದಿದೆ.

    ಇಷ್ಟೆಲ್ಲಾ ಸಂಕಷ್ಟದಲ್ಲಿ ಜನರಿದ್ದರೂ ಅನರ್ಹ ಹಾಗೂ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಮಾತ್ರ ಇತ್ತ ತಿರುಗಿಯೂ ನೋಡಿಲ್ಲ. ತಮಗೆ ಆಗಿರುವ ಹಾನಿ ಹಾಗೂ ಅದಕ್ಕೆ ಬೇಕಾದ ಪರಿಹಾರ ನೀಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಎಲ್ಲ ಕುಂಬಾರರು ಸೇರಿಕೊಂಡು ಮನವಿ ಕೂಡ ನೀಡಿದ್ದಾರೆ. ಇಷ್ಟಾದರೂ ಇಲ್ಲಿವರೆಗೂ ಜಿಲ್ಲಾಡಳಿತ ಇವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.

  • ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ 137 ಸಾರ್ವಜನಿಕ ಗಣೇಶ ವಿಗ್ರಹ ವಿಸರ್ಜನೆ

    ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ 137 ಸಾರ್ವಜನಿಕ ಗಣೇಶ ವಿಗ್ರಹ ವಿಸರ್ಜನೆ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ 137 ಸಾರ್ವಜನಿಕ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು.

    ಗಣೇಶ ಪ್ರತಿಷ್ಠಾಪಿಸಿ 11ನೇ ದಿನವಾದ ಭಾನುವಾರ ಬೆಳಗ್ಗೆಯಿಂದಲೇ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ಹುಬ್ಬಳ್ಳಿಯ 137 ಗಣಪತಿಗಳನ್ನು ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಾವಿ ಹಾಗೂ ಹಳೇಹುಬ್ಬಳ್ಳಿ ಶ್ರೀನಗರದ ಕಪಿಲಾ ಭಾವಿಯಲ್ಲಿ ವಿಸರ್ಜನೆ ಮಾಡಲಾಯಿತು.

    ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಗಣೇಶನಿಗೆ ವಿದಾಯ ಹೇಳಲಾಯಿತು.

    ಮತ್ತೊಂದೆಡೆ ಬಮ್ಮಾಪುರ ಏಣಿಯಲ್ಲಿ ಒಂದೇ ವೇದಿಕೆಯಲ್ಲಿ ಗಣೇಶ ಮೂರ್ತಿ ಹಾಗೂ ಪಾಂಚಾ (ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪನೆ ಮಾಡುವ ಮುಸ್ಲಿಂ ದೇವರು) ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಂರು ಏಕತೆಯನ್ನು ಸಾರಿದ್ದರು. ವಿಘ್ನೇಶ್ವರ ಉತ್ಸವ ಸಮಿತಿ ಹಾಗೂ ಸೈಯದ್ ಸಾದಾತ್ ಜಮಾತ ವತಿಯಿಂದ ಆಚರಣೆ ಮಾಡಿದ್ದಾರೆ. 36 ವರ್ಷಗಳ ಹಿಂದೆ ಗಣೇಶೋತ್ಸವ ಹಾಗೂ ಮೊಹರಂ ಹಬ್ಬ ಏಕಕಾಲದಲ್ಲಿ ಬಂದಾಗ, ಇದೇ ರೀತಿಯಲ್ಲಿ ಹಬ್ಬ ಆಚರಣೆ ಮಾಡಲಾಗಿತ್ತು. ಆದಾದ ನಂತರ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಏಕ ಕಾಲದಲ್ಲಿ ಬಂದಿರೋದರಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ವಿಘ್ನೇಶ್ವರ ಉತ್ಸವ ಸಮಿತಿಯವರು ಹೇಳಿದ್ದರು.

    ಅಂದಹಾಗೆ ಮುಂಜಾನೆ ಹಾಗೂ ಸಂಜೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಪೂಜೆ ಪುರಸ್ಕಾರಗಳು ನಡೆಯಿತು. ಗಣೇಶನನ್ನು ನೋಡಲು ಬಂದವರು ಪಾಂಚಾ ದೇವರ ದರ್ಶನ ಪಡೆಯುತ್ತಾರೆ ಹಾಗೇ ಪಾಂಚಾ ದೇವರ ದರ್ಶನಕ್ಕೆ ಬಂದವರು ಗಣೇಶ ದರ್ಶನ ಪಡೆದರು. ಎರಡು ಹಬ್ಬಗಳು ಏಕಕಾಲದಲ್ಲಿ ಬಂದಿರುವುದು ಎರಡು ಸಮುದಾಯದ ಜನರ ಸಂಭ್ರಮ ಇಮ್ಮಡಿಗೊಳಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv