ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ಸಂಬಂಧ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಎಸ್‍ಐಟಿ ಬಂಧಿಸಿದೆ.
ಐಎಂಎ ಹಗರಣದ ಸಂಬಂಧ ಈಗಾಗಲೇ ಬಂಧನದಲ್ಲಿರುವ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ ಎಸ್‍ಐಟಿ ತಂಡವು ವಿಜಯ್ ಶಂಕರ್ ಅವರನ್ನು ಬಂಧಿಸಿದೆ.
ಸೋಮವಾರ ಬೆಳಗ್ಗೆ ವಿಜಯ್ ಶಂಕರ್ ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಲಾಗಿತ್ತು. ಅಷ್ಟೇ ಅಲ್ಲದೆ ಬಿಲ್ಡರ್ ಕೃಷ್ಣಮೂರ್ತಿ ಅವರನ್ನು ಕೂಡ ಎಸ್‍ಐಟಿ ತಂಡವು ವಿಚಾರಣೆ ನಡೆಸಿದೆ.
ಈ ಪ್ರಕರಣದ ಸಂಬಂಧ ಎಲ್.ಸಿ.ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಎಲ್.ಸಿ.ನಾಗರಾಜ್ ಅವರನ್ನು ಶನಿವಾರ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟಿನ ಪ್ರಧಾನ ನ್ಯಾಯಾಧೀಶ ಶಿವಶಂಕರ ಅಮರಣ್ಣವರ ಅವರ ಮುಂದೆ ಹಾಜರಿಪಡಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 12ರವರೆಗೆ ನಾಗರಾಜ್‍ರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದ್ದ ಸುದ್ದಿ ನಿಜವಾಗಿದೆ.
ಮನ್ಸೂರ್ ಖಾನ್ ವಿಮಾನದ ಮೂಲಕ ರಸ್-ಅಲ್-ಖೈಮಾ ಹೋಗಿದ್ದನು. ಈ ಎಲ್ಲ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ಖಚಿತಪಡಿಸಿಕೊಂಡು ಜೂನ್ 18 ರಂದೇ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈಗ ಮನ್ಸೂರ್ ಖಾನ್ ವಿದೇಶದಲ್ಲಿದ್ದುಕೊಂಡೇ ವಿಡಿಯೋ ರಿಲೀಸ್ ಮಾಡಿ ಸ್ಫೋಟಕ ಮಾಹಿತಿಗಳನ್ನು ತಿಳಿಸಿದ್ದಾನೆ.
ಆರೋಪಿ ಮನ್ಸೂರ್ ಖಾನ್ ಬಗ್ಗೆ ರಾ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಅವನು ಎಲ್ಲೂ ಪರಾರಿಯಾಗುತ್ತಿಲ್ಲ, ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವ ಪ್ರಯತ್ನ ಕೂಡ ಮಾಡುತ್ತಿಲ್ಲ. ಸದ್ಯದಲ್ಲಿಯೇ ಬೆಂಗಳೂರಿಗೆ ಕರೆತರಲು ತಯಾರಿ ನಡೆದಿದೆ. ಪೊಲೀಸರು ಬ್ಲೂಕಾರ್ನರ್ ನೋಟೀಸ್ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಇಂದು ಆಗಿದ್ದು, ಈ ವಿಡಿಯೋದಲ್ಲಿ ತನ್ನ ಸಂಸ್ಥೆಯನ್ನು ಮುಚ್ಚಲು ಪ್ರಯತ್ನ ಪಟ್ಟಿದ್ದಕ್ಕೆ ರಾಜಕಾರಣಿಗಳು, ಉದ್ಯಮಿಗಳಿಗೆ ಮನ್ಸೂರ್ ಧನ್ಯವಾದ ತಿಳಿಸಿದ್ದಾನೆ.
ವಿಡಿಯೋದಲ್ಲಿ ಹೇಳಿದ್ದೇನು?
ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್, ಮೊಹಮದ್ ಉಬೇದುಲ್ಲಾ ಶರೀಫ್, ಪಾಸ್‍ಬನ್ ಪತ್ರಿಕೆ ಸಂಪಾದಕ ಶರೀಫ್, ಟಾಡಾ ಟೆರರಿಸ್ಟ್ ಮುಕ್ತಾರ ಅಹಮದ್, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ಇರ್ಫಾನ್ ಸೇರಿ ನನ್ನನ್ನು ಮುಗಿಸಿದ್ದಾರೆ. ಐಎಂಎ ಮುಗಿಸಲು ಎಲ್ಲರೂ ಸಫಲರಾಗಿದ್ದಕ್ಕೆ ಅವರಿಗೆ ಧನ್ಯವಾದಗಳು.
ರಾಜಕಾರಣಿಗಳು, ಹೂಡಿಕೆದಾರರು ನನ್ನ ಕುತ್ತಿಗೆ ಮೇಲೆ ಬಂದು ಕುಳಿತಿದ್ದರು. ಅವರಿಂದ ತಪ್ಪಿಸಿಕೊಳ್ಳಲು, ನನ್ನ ಸಹಾಯಕ್ಕೆ ಯಾರು ಇಲ್ಲದ ಕಾರಣ ನಾನು ಕುಟುಂಬದ ಜೊತೆ ಹೊರಡಬೇಕಾಯಿತು. ಜೂನ್ 24ರಂದು ಮರಳಿ ಬೆಂಗಳೂರಿಗೆ ಬರುವ ಪ್ಲಾನ್ ಮಾಡಿದ್ದೆ. ಆದರೆ ನನ್ನ ಪಾಸ್‍ಪೋರ್ಟ್, ಟಿಕೆಟ್ ತಡೆ ಹಿಡಿಯಲಾಯಿತು.
ನಾನು ಭಾರತಕ್ಕೆ ಬಂದರೆ ಜೀವ ಬೆದರಿಕೆಯಿದೆ. ಪೊಲೀಸ್ ಕಸ್ಟಡಿಯಲ್ಲಿಯೇ ನನ್ನನ್ನು ಹೊಡೆದು ಹಾಕಲು ಕೆಲವರು ಸಂಚು ರೂಪಿಸಿದ್ದರು. ಹೀಗಾಗಿ ಕುಟುಂಬ ಸಮೇತ ಬೆಂಗಳೂರು ಬಿಟ್ಟು ಬಂದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ. ನಾನು ತಪ್ಪಿತಸ್ಥ ಎನ್ನುವುದಾದರೆ ನನ್ನ ಹಿಂದೆ ಅನೇಕರು ಇದ್ದಾರೆ. ಅವರಿಗೂ ಶಿಕ್ಷೆಯಾಗಲಿ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.
– ದೇಶಪಾಂಡೆ ಹೇಳಿಕೆ ಬೆನ್ನಲ್ಲೇ ಬೇಗ್ ಮೊಬೈಲ್ ಸ್ವೀಚ್ಛ್ ಆಫ್!
– ರೆಬೆಲ್ ನಾಯಕರಿಗೆ ಬಿಸಿ ಮುಟ್ಟಿಸಿದ ರಾಜ್ಯ ‘ಕೈ’ ಪಡೆ
ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‍ನಿಂದ ಅಮಾನತು ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಐಎಂಎ ಹಗರಣದಿಂದ ಪಕ್ಷಕ್ಕೆ ಉಂಟಾಗುವ ಮುಜುಗರವನ್ನು ತಪ್ಪಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಮಾತನು ನಿರ್ಧಾರ ಕೈಗೊಂಡಿತಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.
ರೋಷನ್ ಬೇಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದಾಗಲೂ ಮಾಜಿ ಸಚಿವರ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ. ಕೆಪಿಸಿಸಿಯಿಂದ ಕ್ರಮಕ್ಕೆ ಒತ್ತಾಯಿಸಿದಾಗಲೂ, ರೋಷನ್ ಬೇಗ್ ಪಕ್ಷದ ಹಿರಿಯ ನಾಯಕ, ಸಿಟ್ಟಲ್ಲಿ ಮಾತನಾಡಿದ್ದಾರೆ. ಅವರನ್ನು ಕರೆಸಿ ಮಾತನಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು ಎನ್ನಲಾಗಿತ್ತು.
ಐಎಂಎ ಹಗರಣದಲ್ಲಿ ರೋಷನ್ ಬೇಗ್ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಮತ್ತೊಂದು ವರದಿಯನ್ನು ಕೆಪಿಸಿಸಿ ಭಾನುವಾರ ಸಂಜೆ ಕಳುಹಿಸಿತ್ತು. ಈ ವಿಷಯದ ಗಂಭೀರತೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಎಐಸಿಸಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಮುಂದೆ ತನಿಖೆ ನಡೆದು ಪಕ್ಷ ತಲೆ ತಗ್ಗಿಸುವಂತೆ ಆಗುವುದು ಬೇಡ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ದೂರು ಎಐಸಿಸಿ ಮುಂದೆ ಇದೆ. ಅದೇ ಆಧಾರದ ಮೇಲೆ ಅಮಾನತು ಮಾಡುವುದು ಸೂಕ್ತ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದರು. ಎಲ್ಲ ಮೂಲಗಳಿಂದ ಮಾಹಿತಿ ಕಲೆ ಹಾಕಿದ ಹೈಕಮಾಂಡ್ ಅಮಾನತು ಮಾಡಲು ಆದೇಶ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರು ಆರೋಪಿ ಮನ್ಸೂರ್ ಖಾನ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದರು. ಮನ್ಸೂರ್ ನಮ್ಮ ಕ್ಷೇತ್ರದವರು, ಇವರು ಶಾಲೆಗಳನ್ನು ನಡೆಸುತ್ತಿದ್ದಾರೆ. ಒಳ್ಳೆಯ ವ್ಯಕ್ತಿ ಎಂದು ಮನ್ಸೂರ್ ಅವರನ್ನು ರೋಷನ್ ಬೇಗ್ ತಮಗೆ ಪರಿಚಯಿಸಿದ್ದರು ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದರು.
ಮನ್ಸೂರ್ ಅವರ ಸಂಸ್ಥೆಗೆ ಒಂದು ಸಣ್ಣ ಸಮಸ್ಯೆ ಇದೆ. ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿರುವ ಕಾರಣ ಯಾವುದೇ ವ್ಯವಹಾರ ಆಗುತ್ತಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ರೋಷನ್ ಬೇಗ್ ಅವರು ನನ್ನ ಬಳಿ ನೆರವು ಕೋರಿದ್ದು ನಿಜ ಎಂದು ಸಚಿವರು ಒಪ್ಪಿಕೊಂಡಿದ್ದರು.
ಸಚಿವ ಆರ್.ವಿ.ದೇಶಪಾಂಡೆ ಅವರ ಹೇಳಿಕೆ ಬೆನ್ನಲ್ಲೇ ರೋಷನ್ ಬೇಗ್ ಅವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಕಾಂಗ್ರೆಸ್‍ನ ನಾಯಕರ ಸಂಪರ್ಕದಿಂದ ದೂರ ಉಳಿದಿದ್ದರು. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕಾಂಗ್ರೆಸ್ ಪಕ್ಷ ಯಾರ ಪರವಾಗಿಯೂ ನಿಲ್ಲಲ್ಲ. ಐಎಂಎ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ. ವಂಚನೆಗೆ ಒಳಗಾಗದವರಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದ್ದರು.
ಈ ಎಲ್ಲ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಐಎಂಎ ವಂಚನೆ ಪ್ರಕರಣದಿಂದ ಉಂಟಾಗುವ ಮುಜುಗುರವನ್ನು ತಪ್ಪಿಸಿಕೊಳ್ಳಲು ರೋಷನ್ ಬೇಗ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಐಎಂಎ ಹಗರಣ ಪ್ರಕರಣವನ್ನು ಎಸ್‍ಐಟಿಗೆ ವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವಾಗಲೂ ನೊಂದವರ ಪರವಿರುತ್ತದೆ. ಐಎಂಎ ಹಗರಣದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು. ಆರೋಪಿಗಳು ಎಷ್ಟೇ ದೊಡ್ಡವರಿರಲಿ ಮೂಲಾಜಿಲ್ಲದೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಮಾಜಿ ಸಚಿವ ರೋಷನ್ ಬೇಗ್ ಅವರ ವಿರುದ್ಧ ಕ್ರಮಕ್ಕೆ ದಿನೇಶ್ ಗುಂಡೂರಾವ್ ಪರೋಕ್ಷವಾಗಿ ಮನವಿ ಸಲ್ಲಿಸಿದರಾ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಸಾರ್ವಜನಿಕರ ಹೂಡಿಕೆ ಹಣಕ್ಕೆ ಮೋಸವೆಸಗಿರುವ ಐಎಂಎ ಪ್ರಕರಣವನ್ನು ವಿಶೇಷ ತನಿಖಾದಳಕ್ಕೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ.
ಐಎಂಎ ವಂಚನೆಯ ವಿರುದ್ಧ ದಿಟ್ಟ, ನಿಷ್ಠುರ ಕ್ರಮ ಕೈಗೊಂಡ @CMofKarnataka ಅಭಿನಂದನೆಗಳು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಐಎಂಎ ಹಗರಣದ ಸಂಬಂಧ ಸಂಪೂರ್ಣ ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಶನಿವಾರ ಬುಲಾವ್ ನೀಡಿದ್ದರು. ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಸಚಿವರಿಗೆ ವಿಧಾನ ಪರಿಷತ್ ಸದಸ್ಯರುಗಳಾದ ನಜೀರ್ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ನೀಡಿದ್ದರು.
ಪಕ್ಷಕ್ಕೆ ಮುಜುಗರ ಆಗುವ ಸಂಭವ ಇದ್ದರೆ ಎಸ್‍ಐಟಿ ವಿಚಾರಣೆಗೆ ಮೊದಲೇ ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರು, ಸಚಿವ ಜಮೀರ್ ಅಹಮ್ಮದ್ ಹಾಗೂ ಮುಸ್ಲಿಂ ಮುಖಂಡರ ಜೊತೆಗೆ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು.
ದಿನೇಶ್ ಗುಂಡೂರಾವ್ ಅವರ ಭೇಟಿಯ ಬಳಿಕ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಅವರು, ಐಎಂಎ ಹಗರಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ಪ್ರಕರಣದ ಕುರಿತು ಇದುವರೆಗೂ ನಡೆದ ತನಿಖೆಯ ಕುರಿತು ಮಾಹಿತಿ ನೀಡಿದ್ದೇನೆ. ಇದರಲ್ಲಿ ರೋಷನ್ ಬೇಗ್ ಅವರ ಪಾತ್ರವಿದೆ ಎನ್ನುವುಕ್ಕೆ ಸೂಕ್ತ ದಾಖಲೆಗಳು ಬೇಕು. ಆಡಿಯೋದಲ್ಲಿ ಮಾಜಿ ಸಚಿವ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನು ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಮನ್ಸೂರ್ ಧ್ವನಿ ಎನ್ನುವುದು ಸಾಬೀತಾದರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದರು.