Tag: IMA scam

  • ಐಎಂಎ ಹಗರಣ | ರಂಜಾನ್ ಹಬ್ಬಕ್ಕೂ ಮುನ್ನ ಹಣ ಕಳೆದುಕೊಂಡವರಿಗೆ ಪರಿಹಾರ: ಕೃಷ್ಣ ಬೈರೇಗೌಡ

    ಐಎಂಎ ಹಗರಣ | ರಂಜಾನ್ ಹಬ್ಬಕ್ಕೂ ಮುನ್ನ ಹಣ ಕಳೆದುಕೊಂಡವರಿಗೆ ಪರಿಹಾರ: ಕೃಷ್ಣ ಬೈರೇಗೌಡ

    ಬೆಂಗಳೂರು: ಐಎಂಎ (ಐ-ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಿಂದಾಗಿ ಹಣ ಕಳೆದುಕೊಂಡ ಎಲ್ಲಾ ಠೇವಣಿದಾರರಿಗೂ ರಂಜಾನ್ (Ramzan) ಹಬ್ಬಕ್ಕೂ ಮುನ್ನ ನಿಗದಿತ ಪರಿಹಾರದ ಹಣವನ್ನು ನೀಡಲು ಸೂಕ್ತ ಕ್ರಮವಹಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಭರವಸೆ ನೀಡಿದ್ದಾರೆ.

    ಐಎಂಎ ಹಗರಣದ (IMA Scam) ಮೊತ್ತ ಎಷ್ಟು? ಈ ವರೆಗೆ ಈ ಸಂಸ್ಥೆಯ ಎಷ್ಟು ಕೋಟಿ ಮೌಲ್ಯದ ಸ್ಥಿರಾಸ್ತಿ/ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ? ಕಳೆದ ಏಳು ವರ್ಷದಲ್ಲಿ ಈ ಕಂಪೆನಿಯಲ್ಲಿ ಹಣ ಹೂಡಿ ಕಳೆದುಕೊಂಡ ಎಷ್ಟು ಜನರಿಗೆ ಎಷ್ಟು ಪ್ರಮಾಣದಲ್ಲಿ ಹಣ ಹಿಂತಿರುಗಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಯಾವಾಗ ಮತ್ತು ಹೇಗೆ ಹಣ ಹಿಂತಿರುಗಿಸಬೇಕು? ಎಂಬ ಕುರಿತು ಸೋಮವಾರ ವಿಕಾಸಸೌಧ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ.

    ಈ ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ಐಎಂಎ ಹಗರಣದಿಂದ ಹಣ ಕಳೆದುಕೊಂಡ ಹಲವರು ಭಾಗಿಯಾಗಿದ್ದರು. ಈ ವೇಳೆ ಸಂತ್ರಸ್ತರಿಗೆ ಭರವಸೆ ನೀಡಿದ ಅವರು, ರಂಜಾನ್ ಹಬ್ಬಕ್ಕೂ ಹತ್ತು ದಿನ ಮೊದಲೇ ಐಎಂಎ ನಲ್ಲಿ ಹಣ ಹೂಡಿ ಮೋಸ ಹೋದವರಿಗೆ ಅವರ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

    ಹಣ ಡಬ್ಲಿಂಗ್ ಆಸೆಯಿಂದಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರ ಖಾತೆಗಳ ಮೂಲಕ 3213.58 ಕೋಟಿ ರೂ.ಗಳನ್ನು ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಕಂಪೆನಿಯ ಒಟ್ಟು ಠೇವಣಿದಾರರ ಸಂಖ್ಯೆ 69069. ಈ ಪೈಕಿ 1400 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯಲ್ಲಿ ಐಎಂಎ ಕಾಲಕಾಲಕ್ಕೆ ಠೇವಣಿದಾರರಿಗೆ ನೀಡುತ್ತಾ ಬಂದಿದೆ. ಹಗರಣ ಬೆಳಕಿಗೆ ಬಂದ ನಂತರ ವಿಶೇಷ ನ್ಯಾಯಾಲಯದ ಆದೇಶದಂತೆ ಕಂಪೆನಿ ಖಾತೆಯಲ್ಲಿದ್ದ 19.12 ಕೋಟಿ ರೂ.ಗಳನ್ನು 50,000 ರೂ.ಗಳಂತೆ 6858 ಜನ ಸಂತ್ರಸ್ತರ ಖಾತೆಗಳಿಗೆ 2022 ಏಪ್ರಿಲ್‌ನಲ್ಲಿ ಜಮೆ ಮಾಡಲಾಗಿತ್ತು.

    66.66 ಕೋಟಿ ರೂ.ಗಳನ್ನು 53,142 ಜನ ಸಂತ್ರಸ್ತರ ಖಾತೆಗಳಿಗೆ 8/11/2023 ರಂದು ಜಮೆ ಮಾಡಲಾಗಿತ್ತು. 1.28 ಕೋಟಿ ರೂ.ಗಳನ್ನು 626 ಸಂತ್ರಸ್ತರ ಖಾತೆಗಳಿಗೆ 23/5/2024 ರಂದು ಜಮೆ ಮಾಡಲಾಗಿತ್ತು. 276 ಜನ ಸಂತ್ರಸ್ತರಿಗೆ 36.14 ಲಕ್ಷ ರೂ.ಗಳನ್ನು 7/11/2024 ರಂದು ಜಮೆ ಮಾಡಲಾಗಿತ್ತು. ಒಟ್ಟಾರೆ ಈವರೆಗೆ 87.43 ಕೋಟಿ ರೂ.ಗಳನ್ನು 60902 ಜನ ಸಂತ್ರಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು.

    ಐಎಂಎ ಕಂಪೆನಿಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಆಸ್ತಿಗಳನ್ನು ಈಗಾಗಲೇ ಸರ್ಕಾರ ವಶಕ್ಕೆ ಪಡೆದಿದೆ. ಚರಾಸ್ಥಿಗಳ ಮೌಲ್ಯ 106.92 ಕೋಟಿ ಹಾಗೂ ಸ್ಥಿರಾಸ್ತಿಗಳ ಮೌಲ್ಯ 401.92 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕಂಪೆನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂ., ನಗದು ಹಣ 11.72 ರೂ. ಹೂಡಿಕೆ ಪತ್ರ 11.06 ಕೋಟಿ ರೂ. ಸೇರಿದಂತೆ ಒಟ್ಟಾರೆ 534.5 ಕೋಟಿ ರೂ.ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿದೆ. ನ್ಯಾಯಮೂರ್ತಿ ಜಸ್ಟೀಸ್ ನಾಗಪ್ರಸನ್ನ ಪೀಠದ ಆದೇಶದಂತೆ ಶೀಘ್ರವೇ ಈ ಆಸ್ತಿಗಳನ್ನು ಹರಾಜಿಗೊಳಪಡಿಸಿ ಇದರಿಂದ ಬಂದ ಹಣವನ್ನು ಹೂಡಿಕೆದಾರರಿಗೆ ಹಿಂತಿರುಗಿಸಲಾಗುವುದು ಎಂದು ತಿಳಿಸಿದ್ದಾರೆ.

    ಅರ್ಹ ಸಂತ್ರಸ್ತರಿಗೆ ಹರಿಹಾರ: ಐಎಂಎ ಹಗರಣ ಬೆಳಕಿಗೆ ಬಂದಾಗಲೇ ಸರ್ಕಾರ ಸಂತ್ರಸ್ತರನ್ನು ಗುರುತಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಿತ್ತು. ಈ ವೇಳೆ ಐಎಂಎ ಜೊತೆ ಆರ್ಥಿಕ ವ್ಯವಹಾರ ಮಾಡಿದ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದರೆ ಅದನ್ನೇ ಅಧಿಕೃತ ಎಂದು ಪರಿಗಣಿಸಲಾಯಿತು. ಒಂದು ವೇಳೆ ಖಾತೆ ನಿಷ್ಕ್ರಿಯವಾಗಿದ್ದರೆ ಠೇವಣಿಪತ್ರ, ಷೇರುಪ್ರಮಾಣ ಪತ್ರದಂತಹ ದಾಖಲಾತಿಗಳನ್ನು ಕೋರಿತ್ತು.

    ಅರ್ಜಿ ಸಲ್ಲಿಸುವವರ ಮಾಹಿತಿಗಳನ್ನು ಐಎಂಎ ಸಂಸ್ಥೆಯಲ್ಲಿರುವ ದತ್ತಾಂಶಗಳೊಂದಿಗೆ ಹೊಂದಾಣಿಕೆ ಮಾಡಿ ಹಾಗೂ ಆಧಾರ್ ಕಾರ್ಡ್, ಇತರ ಮಾಹಿತಿಗಳನ್ನು ಸಮೀಕರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಒಂದು ವೇಳೆ ಫಲಾನುಭವಿಗಳು ಮೃತಪಟ್ಟಿದ್ದರೆ ಠೇವಣಿದಾರರು ಸೂಚಿಸಿರುವ ನಾಮನಿರ್ದೇಶಿತ ವ್ಯಕ್ತಿಗಳಿಗೆ ಆ ಹಣವನ್ನು ನೀಡಲು ಕ್ರಮವಹಿಸಲಾಗಿದೆ.

  • ಐಎಂಎ ಪ್ರಕರಣದಲ್ಲಿ ಯಾವುದೇ ತನಿಖೆಗೂ ಸಿದ್ಧ: ಹೆಚ್‍ಡಿಕೆ

    ಐಎಂಎ ಪ್ರಕರಣದಲ್ಲಿ ಯಾವುದೇ ತನಿಖೆಗೂ ಸಿದ್ಧ: ಹೆಚ್‍ಡಿಕೆ

    ಹಾಸನ: ಐಎಂಎ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಶಾಸಕರೊಬ್ಬರು ಇಫ್ತಿಯಾರ್ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಹಾಕಿ ಆದಾಯ ತೆರಿಗೆ ಕಟ್ಟಿದ್ದೇನೆ ಎಂದಿದ್ದರು. ದಾಳಿ ನಡೆದ ಬಳಿಕ ಫೋಟೋವನ್ನು ತೆಗೆದಿರಬಹುದು. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಯಾವುದೇ ತನಿಖೆಗೆ ನಾನು ಸಿದ್ಧವಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯದೇ ಕೆಳಸ್ತರಗಳಲ್ಲಿ ಇರುವಂತಹ ಸಮುದಾಯಕ್ಕೆ ಮೀಸಲಾತಿ ಕೊಡುವುದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವನ್ನಾಗಿ ಮಾಡುವಂತಹ ಕಾರ್ಯ. ಸಮಾಜದ ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಚಿಂತನೆ ನಡೆಸಿ ಮೀಸಲಾತಿ ಕೊಡುವುದು ಸರ್ಕಾರದ ಜವಾಬ್ದಾರಿ. ಆದರೆ ಮಠಾಧೀಶರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತಹ ಪರಿಸ್ಥಿತಿಗೆ ತಂದುಕೊಂಡಿದ್ದು ತಪ್ಪು ಎನ್ನುವುದು ನನ್ನ ಅಭಿಪ್ರಾಯ ಎಂದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಹಿಂದ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ಈಗ ಮೀಸಲಾತಿಗಾಗಿ ಹೋರಾಟ ಮಾಡುತ್ತೇನೆ ಎನ್ನುವುದು ಎಷ್ಟು ಸರಿ ಎನ್ನುವುದನ್ನು ಅವರೇ ಚಿಂತನೆ ಮಾಡಬೇಕು ಎಂದು ಟಾಂಗ್ ನೀಡಿದರು.

  • ರೋಷನ್ ಬೇಗ್‍ಗೆ ಜಾಮೀನು – ಪರಪ್ಪನ ಅಗ್ರಹಾರದತ್ತ ಬೆಂಬಲಿಗರು

    ರೋಷನ್ ಬೇಗ್‍ಗೆ ಜಾಮೀನು – ಪರಪ್ಪನ ಅಗ್ರಹಾರದತ್ತ ಬೆಂಬಲಿಗರು

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

    2018 ರ ಆರೋಪಕ್ಕೆ ಈಗ ರೋಷನ್ ಬೇಗ್ ಅವರನ್ನ ಬಂಧಿಸಲಾಗಿದೆ. ಕಕ್ಷಿದಾರರು ಸಿಬಿಐ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಹುರುಳಿಲ್ಲ. ಈಗಾಗಲೇ 36ರ ಪೈಕಿ 35 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದ, ಜಾಮೀನು ನೀಡುವಂತೆ ಬೇಗ್ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು. ವಾದ -ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಇಂದು ಆದೇಶ ಕಾಯ್ದಿರಿಸಿತ್ತು.

    ರೋಷನ್ ಬೇಗ್ ಜಾಮೀನು ಹಿನ್ನೆಲೆ ಅವರ ಬೆಂಬಲಿಗರು ಪರಪ್ಪನ ಅಗ್ರಹಾರದತ್ತ ಆಗಮಿಸುತ್ತಿದ್ದಾರೆ. ಇಂದು ಸಂಜೆ 6 ರಿಂದ 7 ಗಂಟೆಯ ಅವಧಿಯಲ್ಲಿ ರೋಷನ್ ಬೇಗ್ ಜಜೈಲಿನಿಂದ ಹೊರ ಬರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರ ಆಗಮನ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನವೆಂಬರ್ 22ರಂದು ರೋಷನ್ ಬೇಗ್ ಅವರ ಬಂಧನವಾಗಿತ್ತು.

  • ಐಎಂಎ ಕೇಸ್‌ –  3 ದಿನ ಸಿಬಿಐ ಕಸ್ಟಡಿಗೆ ರೋಷನ್‌ ಬೇಗ್‌

    ಐಎಂಎ ಕೇಸ್‌ – 3 ದಿನ ಸಿಬಿಐ ಕಸ್ಟಡಿಗೆ ರೋಷನ್‌ ಬೇಗ್‌

    ಬೆಂಗಳೂರು: ಐ ಮಾನಿಟರಿ ಅಡ್ವೈಸರಿ(ಐಎಂಎ) ಸಮೂಹ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ರೋಷನ್‌ ಬೇಗ್‌ ಅವರನ್ನು ಕೋರ್ಟ್‌ 3 ದಿನ ಸಿಬಿಐ ಕಸ್ಟಡಿಗೆ ನೀಡಿದೆ.

    ನ.22ರಂದು ಸಿಬಿಐ ಅಧಿಕಾರಿಗಳು ಮನೆಗೆ ಹೋಗಿ ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದು ಗಂಗಾನಗರದ ಕಚೇರಿಗೆ ವಿಚಾರಣೆಗೆ ಕರೆ ತಂದಿದ್ದರು. ಅರೆಸ್ಟ್‌ ಬಳಿಕ ಕೋರ್ಟ್‌ ಬೇಗ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು.

    ಪರಪ್ಪನ ಅಗ್ರಹಾರ ಸೇರಿದ್ದ ಬೇಗ್‌ರನ್ನು ಈ ಪ್ರಕರಣದಲ್ಲಿ ವಿಚಾರಣೆ ನಡೆಸಬೇಕು ಎಂದು ಇಂದು ಸಿಬಿಐ ಕೋರ್ಟ್‌ಗೆ ಮನವಿ ಮಾಡಿತ್ತು. ವಾದವನ್ನು ಪುರಸ್ಕರಿಸಿದ ಕೋರ್ಟ್‌ ಮೂರು ದಿನ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಬೇಗ್‌ ಬಿಜೆಪಿ ಸೇರ್ಪಡೆಗೆ ಕೊಕ್ಕೆ ಹಾಕಿದ್ದ ಹೈಕಮಾಂಡ್‌

    ಬಂಧನ ಯಾಕೆ?
    ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್‌ ನೀಡಿ ರೋಷನ್‌ ಬೇಗ್‌ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ.

    ಈ ನಡುವೆ ಮನ್ಸೂರ್‌ ಖಾನ್‌ ನಾನು ರೋಷನ್‌ ಬೇಗ್‌ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್‌ ಬೇಗ್‌ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್‌ ಖಾನ್‌ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ರೋಷನ್‌ ಬೇಗ್‌ರಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ

    ರೋಷನ್‌ ಬೇಗ್‌ರಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ

    ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿರುವ ರೋಷನ್‌ ಬೇಗ್‌ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು.

    ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರೋಷನ್‌ ಬೇಗ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ವಕ್ಫ್‌ ಖಾತೆಯ ಸಚಿವರಾಗಿದ್ದರು. ಐಎಂಎ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ ತಾನು ಯಾವುದೇ ಅಕ್ರಮ ಎಸಗಿಲ್ಲ ಹೇಳಿದ್ದರು. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಸರ್ಕಾರದ ಎಸ್‌ಐಟಿ ತನಿಖೆಗಿಂತ ಸಿಬಿಐ ತನಿಖೆ ನಡೆಸುವುದೇ ಸೂಕ್ತ ಎಂದು ಹೇಳಿದ್ದರು.

    ಈ ನಡುವೆ 2019ರಲ್ಲಿ ಕಾಂಗ್ರೆಸ್‌ ಶಾಸಕರ ಜೊತೆ ರೋಷನ್‌ ಬೇಗ್‌ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಬಿಜೆಪಿ ಸೇರ್ಪಡೆಗೆ ರಾಜ್ಯ ನಾಯಕರು ಒಲವು ವ್ಯಕ್ತಪಡಿಸಿದ್ದರೂ ಹೈಕಮಾಂಡ್‌ ನಾಯಕರು ಒಪ್ಪಿಗೆ ನೀಡಿರಲಿಲ್ಲ.

    ಎರಡ್ಮೂರು ಬಾರಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ರೋಷನ್‌ ಬೇಗ್‌ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ರೋಷನ್ ಬೇಗ್ ಸೇರ್ಪಡೆಗೆ ರಾಜ್ಯ ನಾಯಕರು ಒಪ್ಪಿ‌ದ್ದರೂ ಆ ಬಳಿಕ ಹೈಕಮಾಂಡ್ ಕೊಕ್ಕೆ ಹಾಕಿತ್ತು

    ಶಿವಾಜಿನಗರ ಉಪಚುನಾವಣೆಯಲ್ಲಿ ಬಿಜೆಪಿ ತನಗೆ ಟಿಕೆಟ್‌ ನೀಡಬಹುದು ಎಂದು ನಿರೀಕ್ಷೆಯಲ್ಲಿ ರೋಷನ್‌ ಬೇಗ್‌ ಇದ್ದರು. ಆದರೆ ಬಿಜೆಪಿ ಸರವಣ ಅವರಿಗೆ ಟಿಕೆಟ್‌ ನೀಡಿತ್ತು. ಹೀಗಿದ್ದರೂ ಬಿಜೆಪಿ ಪರ ಒಳಗೊಳಗೆ ರೋಷನ್‌ ಬೇಗ್‌ ಕೆಲಸ ಮಾಡಿದ್ದರು.

    ಐಎಂಎ ಪ್ರಕರಣದಲ್ಲಿ ಸಿಬಿಐನಿಂದ ಪಾರಾಗಲು ರೋಷನ್‌ ಬೇಗ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಗಂಭೀರ ಆರೋಪ ಮಾಡಿದ್ದರು. ಆದರೆ ಬಿಜೆಪಿಗೆ ರೋಷನ್‌ ಬೇಗ್‌ ಸೇರ್ಪಡೆಯಾಗಿರಲಿಲ್ಲ. ಇತ್ತ ಕಾಂಗ್ರೆಸ್‌ ನಾಯಕರ ಬೆಂಬಲವು ಸಿಗಲಿಲ್ಲ.

    ಒಂದು ಕಾಲದಲ್ಲಿ ಮುಸ್ಲಿಮರ ಪ್ರಬಲ ನಾಯಕನಾಗಿ ಮೆರೆದಿದ್ದ ರೋಷನ್ ಬೇಗ್ ರಾಜೀನಾಮೆ ಬಳಿಕ ಯಾರ ಬೆಂಬಲ ಇಲ್ಲದ ಕಾರಣ ಒಂಟಿಯಾಗಿದ್ದರು. ಈಗ ಈ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಮೂಲಕ ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮೊದಲ ರಾಜಕಾರಣಿ ರೋಷನ್‌ ಬೇಗ್‌ ಆಗಿದ್ದಾರೆ.  ಇದನ್ನೂ ಓದಿ: ಎರಡು ಬಾರಿ ವಿಚಾರಣೆ ನಡೆಸಿದ್ದ ಸಿಬಿಐ ಇಂದು ಬಂಧಿಸಿದ್ದು ಯಾಕೆ? ಇಲ್ಲಿದೆ ಎಕ್ಸ್‌ಕ್ಲೂಸಿವ್‌ ವರದಿ ಓದಿ

    ಬೇಗ್‌ ಮೇಲಿರುವ ಆರೋಪ ಏನು?
    ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್‍ನಿಂದ ಸುಮಾರು 200 ಕೋಟಿಗೂ ಹೆಚ್ಚು ಹಣದ ಜೊತೆ ಬೆಲೆಬಾಳುವ ಐಷಾರಾಮಿ ವಸ್ತುಗಳು, ಕಾರುಗಳನ್ನು ಗಿಫ್ಟ್ ಪಡೆದಿರುವ ಗಂಭೀರ ಆರೋಪ ರೋಷನ್‌ ಬೇಗ್‌ ಮೇಲಿದೆ.

    ಐಎಂಎ ತನಿಖೆಗಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಿತ್ತು. ಐಎಂಎ ನಿರ್ದೇಶಕರು ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಎಸ್‍ಐಟಿ ಬಂಧಿಸಿತ್ತು. ಈ ಪ್ರಕರಣದಲ್ಲೇ ಬೆಂಗಳೂರಿನ ಅಂದಿನ ಜಿಲ್ಲಾಧಿಕಾರಿ ಶಂಕರ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಕೂಡ ಅರೆಸ್ಟ್ ಆಗಿದ್ದರು.

    ಕಾರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ಬಳಿಕ ಒಂದು ದಿನ ಪೂರ್ತಿ ರೋಷನ್ ಬೇಗ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

    ಅಧಿವೇಶನ ನಡೆಯುತ್ತಿದ್ದರಿಂದ ರೋಷನ್ ಬೇಗ್ ಅವರನ್ನು ಎಸ್‌ಐಟಿ ಬಿಟ್ಟು ಕಳಿಸಿತ್ತು. ಆ ಬಳಿಕ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಐಎಂಎ ತನಿಖೆಯನ್ನು ಯಡಿಯೂರಪ್ಪ ಸರ್ಕಾರ ಸಿಬಿಐಗೆ ವಹಿಸಿತ್ತು.

  • ಮನ್ಸೂರ್‌ ಖಾನ್‌ ಒತ್ತಡ – ರೋಷನ್‌ ಬೇಗ್‌ ಅರೆಸ್ಟ್‌, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ಮನ್ಸೂರ್‌ ಖಾನ್‌ ಒತ್ತಡ – ರೋಷನ್‌ ಬೇಗ್‌ ಅರೆಸ್ಟ್‌, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ಬೆಂಗಳೂರು: ಐಎಂಎ ಕಂಪನಿಯ ಸಂಸ್ಥಾಪಕ ಮನ್ಸೂರ್‌ ಖಾನ್‌ ಒತ್ತಡದಿಂದಾಗಿ ಸಿಬಿಐ ಇಂದು ಮಾಜಿ ಮಂತ್ರಿ, ಶಿವಾಜಿ ನಗರದ ಮಾಜಿ ಶಾಸಕ ರೋಷನ್‌ ಬೇಗ್‌ ಅವರನ್ನು ಬಂಧಿಸಿದೆ.

    ರೋಷನ್‌ ಬೇಗ್‌ ಅವರನ್ನು ಬಂಧಿಸಿದ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈಗ ರೋಷನ್‌ ಬೇಗ್‌ ಅವರನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

    ಬಂಧನ ಯಾಕೆ?
    ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್‌ ನೀಡಿ ರೋಷನ್‌ ಬೇಗ್‌ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ.

    ಈ ನಡುವೆ ಮನ್ಸೂರ್‌ ಖಾನ್‌ ನಾನು ರೋಷನ್‌ ಬೇಗ್‌ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್‌ ಬೇಗ್‌ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್‌ ಖಾನ್‌  ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ರೋಷನ್‌ ಬೇಗ್‌ ಅವರಿಗೆ ಮನ್ಸೂರ್‌ ಖಾನ್‌ 200 ಕೋಟಿ ಸೇರಿದಂತೆ ಐಷಾರಾಮಿ ಕಾರು, ಉಡುಗೊರೆ ನೀಡಿದ್ದ ಆರೋಪ ಈ ಪ್ರಕರಣ ಬೆಳಕಿಗೆ ಬಂದಾಗಲೇ ಬಂದಿತ್ತು. ಆದರೆ ಈಗ ಮನ್ಸೂರ್‌ ಖಾನ್‌ ಒತ್ತಡ ಹಾಕಿದ್ದ ಕಾರಣ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮನೆಗೆ ತೆರಳಿ ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ  ಸಂಜೆಯ ವೇಳೆ ಬಂಧಿಸಿದೆ. ಇದನ್ನೂ ಓದಿ: ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಗ್ರಾಹಕರಿಗೆ ವಂಚನೆ ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷಕ್ಕೆ 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ 2019ರ ಏಪ್ರಿಲ್, ಮೇ ತಿಂಗಳಿನಲ್ಲಿ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಬಹುಕೋಟಿ ಐಎಂಎ ಕೇಸ್‌- ಸಿಬಿಐ ವಶಕ್ಕೆ ರೋಷನ್‌ ಬೇಗ್‌

    ಬಹುಕೋಟಿ ಐಎಂಎ ಕೇಸ್‌- ಸಿಬಿಐ ವಶಕ್ಕೆ ರೋಷನ್‌ ಬೇಗ್‌

    ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್‌ ಬೇಗ್‌ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.

    ಸಂಜಯ್‌ನಗರದ ಸಿಬಿಐ ಕಚೇರಿಯಲ್ಲಿ ರೋಷನ್‌ ಬೇಗ್‌ ಅವರನ್ನು ಬೆಳಗ್ಗೆಯಿಂದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್‌ ಬೇಗ್‌ ಹೆಸರು ಮೊದಲು ಕೇಳಿ ಬಂದಿತ್ತು. ಆರೋಪಿ ಮನ್ಸೂರ್ ಖಾನ್ ನಿಂದ ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ರೋಷನ್‌ ಬೇಗ್‌ ಪಡೆದಿದ್ದಾರೆ. ಐಷಾರಾಮಿ ಕಾರು ಸೇರಿದಂತೆ ಬಹುತೇಕ ಬೆಲೆ ಬಾಳುವ ವಸ್ತುಗಳನ್ನು ಮನ್ಸೂರ್ ಖಾನ್ ಉಡುಗೊರೆ ನೀಡಿದ್ದ ಎಂಬ ಆರೋಪ ಕೇಳಿ ಬಂದಿತ್ತು.

    ಶಿವಾಜಿನಗರದ ಕಾಂಗ್ರೆಸ್‌ ಶಾಸಕರಾಗಿದ್ದ ರೋಷನ್‌ ಬೇಗ್‌ ದಿಢೀರ್‌ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ಸಿಬಿಐ ತನಿಖೆಯಿಂದ ಪಾರಾಗಲು ರೋಷನ್‌ ಬೇಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು.

    ಗ್ರಾಹಕರಿಗೆ ವಂಚನೆ ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ ಕಳೆದ ಏಪ್ರಿಲ್, ಮೇ ತಿಂಗಳಿನಲ್ಲಿ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ 2019ರ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಐಎಂಎ ಪ್ರಕರಣ: ಓರ್ವ ಆರೋಪಿಗೆ ಜಾಮೀನು, ಮೂವರ ಅರ್ಜಿ ತಿರಸ್ಕರಿಸಿದ ಕೋರ್ಟ್

    ಐಎಂಎ ಪ್ರಕರಣ: ಓರ್ವ ಆರೋಪಿಗೆ ಜಾಮೀನು, ಮೂವರ ಅರ್ಜಿ ತಿರಸ್ಕರಿಸಿದ ಕೋರ್ಟ್

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಓರ್ವ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಮೂವರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ.

    ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು, ಆರೋಪಿಗಳಾದ ನಿಜಾಮುದ್ದೀನ್, ಅಫ್ಸರ್ ಪಾಶಾ, ಮೊಹಮ್ಮದ್ ಹನೀಫ್ ಅಫ್ಸರ್ ಅಜೀಜ್‍ಗೆ ಜಾಮೀನು ನಿರಾಕರಿಸಿದೆ. ಪ್ರಕರಣದ ಮತ್ತೊರ್ವ ಆರೋಪಿ ಸೈಯ್ಯದ್ ಮುಜಾಹಿದ್‍ಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

    ಮತ್ತೊಂದು ಕಡೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಸಂಸ್ಥೆಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ರಾಜ್ಯ ಸರ್ಕಾರ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004 (ಕೆಪಿಐಡಿ) ಅನುಸಾರ ಸಕ್ಷಮ ಪ್ರಾಧಿಕಾರ ನೇಮಕ ಮಾಡಿತ್ತು. ಸರ್ಕಾರದ ಈ ಆದೇಶ ರದ್ದು ಮಾಡುವಂತೆ ಕೋರಿ ಐಎಂಎ ಕಂಪನಿ ಮನ್ಸೂರ್ ಖಾನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

    ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐನಿಂದ ಮೌಲ್ವಿ ಅಫ್ಸರ್ ಹನೀಜ್ ಸೇರಿ ಇಬ್ಬರ ಮೇಲೆ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್ ನಲ್ಲಿ ಎಸ್‍ಐಟಿ ಅಧಿಕಾರಿಗಳು ಮೌಲ್ವಿಯನ್ನು ಬಂಧಿಸಿದ್ದರು.

    ಹನೀಫ್ ಅಫ್ಸರ್ ಅಜೀಜ್ ಶಿವಾಜಿನಗರ ಒಪಿಎಚ್ ರಸ್ತೆಯ ಬೇಪಾರಿಯನ್ ಮಸೀದಿಯ ಧರ್ಮ ಗುರುವಾಗಿದ್ದು, 2017ರಲ್ಲಿ ಹೆಚ್‍ಬಿಆರ್ ಲೇಔಟ್ ನಲ್ಲಿ ಮೂರು ಕೋಟಿ ರೂ. ಮೌಲ್ಯದ ಮನೆ ಉಡುಗೊರೆ ಪಡೆದಿದ್ದ.

    ಮಸೀದಿಗೆ ಬರುವ ಸಾವಿರಾರು ಭಕ್ತರ ಭಾವನೆಗಳ ಜೊತೆ ಆಟವಾಡಿದ್ದ ಹನೀಫ್ ಅಫ್ಸರ್ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ. ನಮಾಜ್‍ಗೆ ಬಂದ ಜನರಿಗೆ ಐಎಂಎನಲ್ಲಿ ಹಣ ಹೂಡುವಂತೆ ಪ್ರಚೋದನೆ ಮಾಡುತ್ತಿದ್ದ. ಈ ಧರ್ಮಗುರು ಮಾತನ್ನು ನಂಬಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿಸಿದ್ದರಿಂದ ಧರ್ಮಗುರುವಿನ ಋಣ ತೀರಿಸಲು ಮೂರು ಕೋಟಿ ರೂ. ಮೌಲ್ಯದ ಮನೆಯನ್ನು ಮನ್ಸೂರ್ ಖಾನ್ ನೀಡಿದ್ದ.

  • ಅತ್ತ ಡಿಕೆಶಿಗೆ ಜೈಲು, ಇತ್ತ ಜಮೀರ್ ಅಹ್ಮದ್‍ಗೆ ಸಿಬಿಐ ನೋಟಿಸ್

    ಅತ್ತ ಡಿಕೆಶಿಗೆ ಜೈಲು, ಇತ್ತ ಜಮೀರ್ ಅಹ್ಮದ್‍ಗೆ ಸಿಬಿಐ ನೋಟಿಸ್

    ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿಗೆ ಶಿಫ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‍ನ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.

    ಜಮೀರ್ ಅಹ್ಮದ್ 90 ಕೋಟಿ ರೂ. ಬೆಲೆಬಾಳುವ ನಿವೇಶನವನ್ನು ಐಎಂಎಗೆ 9.38 ಕೋಟಿ ರೂ.ಗಳಿಗೆ ಮಾರಾಟ ಮಾಡಿ, ಬಾಕಿ 80 ಕೋಟಿ ರೂ.ಗಳನ್ನು ಹವಾಲಾ ರೂಪದಲ್ಲಿ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಜಮೀರ್ ಅಹ್ಮದ್ ಅವರಿಗೆ ನೋಟಿಸ್ ನೀಡಿದೆ. ಇದನ್ನೂ ಓದಿ: ಡಿಕೆಶಿಗೆ ತಿಹಾರ್ ಜೈಲೇ ಗತಿ – ಶನಿವಾರಕ್ಕೆ ವಿಚಾರಣೆ ಮುಂದೂಡಿಕೆ

    ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮೊನ್ನೆಯಷ್ಟೇ ಹೈಕೋರ್ಟ್ ಸಿಬಿಐ ವಿರುದ್ಧ ಚಾಟಿ ಬೀಸಿತ್ತು. ಈ ಪ್ರಕರಣವು ತನಿಖೆ ಕುಂಠಿತವಾಗುತ್ತಿದೆ. ತನಿಖೆ ಪ್ರಗತಿಯಲ್ಲಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿತ್ತು. ಹೀಗಾಗಿ ತನಿಖೆ ಚುರುಕುಗೊಳಿಸಿರುವ ಸಿಬಿಐ, ಪ್ರಮುಖ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    ನೋಟಿಸ್ ಹಿನ್ನೆಲೆಯಲ್ಲಿ ಮಾಜಿ ಸಚಿವರು ಗುರುವಾರ ಬೆಳಗ್ಗೆ 11:30 ಗಂಟೆಗೆ ಸಿಬಿಐ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಅವರು, ಶುಕ್ರವಾರ ವಿಚಾರಣೆಗೆ ಬರುವುದಕ್ಕೆ ಆಗುವುದಿಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮವಿದೆ. ದೇವರ ಕಾರ್ಯದ ನಿಮಿತ್ತ ರಾಜಸ್ಥಾನದ ಜೈಪುರಕ್ಕೆ ತೆರಳಬೇಕಿದೆ. ವಿಚಾರಣೆಗೆ ಕಾಲಾವಕಾಶ ನೀಡಿ ಎಂದು ಕೇಳಿದ್ದಾರೆ ಎನ್ನಲಾಗಿದೆ.

    ಜಮೀರ್ ವಿರುದ್ಧದ ಆರೋಪವೇನು?:
    ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಜೂನ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಿಜೆಪಿ ಮುಖಂಡ ಎನ್. ರಮೇಶ್ ಅವರು, 90 ಕೋಟಿ ರೂ. ಮೌಲ್ಯದ ನಿವೇಶನವನ್ನು ಕೇವಲ 9.38 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಉಳಿದ 80 ಕೋಟಿ ರೂ.ಗಳನ್ನು ಕಪ್ಪು ಹಣ ಹವಾಲಾ ರೂಪದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪಡೆದಿದ್ದಾರೆ. ವಿವಾದಿತ ನಿವೇಶನವನ್ನು ಅಕ್ರಮ ಮಾರಾಟ ಮಾಡಿ ಉಳಿದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 2001ರಲ್ಲಿ ಕೇವಲ ಎರಡೂವರೆ ಕೋಟಿ ರೂ.ಗೆ ನಿವೇಶನವನ್ನು ಖರೀದಿಸಿ ಅಕ್ರಮವಾಗಿ ಐಎಂಎಗೆ ಮಾರಾಟ ಮಾಡಿದ್ದಾರೆ ಎಂದು ದೂರಿದ್ದರು.

    ಭೂ ಮಾಲೀಕನಿಗೆ ಕೇವಲ ಎರಡೂವರೆ ಕೋಟಿ ರೂ.ಗಳನ್ನು ನೀಡಿ ಜಮೀನು ಖರೀದಿಸಿದ್ದು, ಅದೇ ಜಮೀನನ್ನು 9 ಕೋಟಿ ರೂ.ಗೆ ಐಎಂಎ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಆದರೆ ಆ ಜಮೀನಿನ ಸದ್ಯದ ಮಾರುಕಟ್ಟೆ ಬೆಲೆ ಕನಿಷ್ಟ 90 ಕೋಟಿ ರೂ.ಗಳಾಗಿದ್ದು, 2018ರಲ್ಲಿ ಮನ್ಸೂರ್ ಖಾನ್‍ಗೆ ಕೇವಲ 9.38 ಕೋಟಿ ರೂ.ಗೆ ಜಮೀರ್ ಅಹ್ಮದ್ ಖಾನ್ ಮಾರಾಟ ಮಾಡಿದ್ದಾರೆ. ಉಳಿದ 80 ಕೋಟಿ ರೂ. ಕಪ್ಪು ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

    9 ವರ್ಷಗಳಿಂದ ರಿಚ್ಮಂಡ್ ಟೌನ್‍ನ ಸರ್ಪಟೈನ್ ಸ್ಟ್ರೀಟ್‍ನಲ್ಲಿರುವ ವಿವಾದಿತ ನಿವೇಶನ ಕೋರ್ಟ್ ಅಂಗಳದಲ್ಲಿದ್ದು, 2014ರಲ್ಲಿ ಆಸ್ತಿ ಪ್ರಕರಣ ಕೋರ್ಟಿನಲ್ಲಿರುವಾಗಲೇ ಜಮೀರ್ ಪಾಲಿಕೆಗೆ ಪತ್ರ ಬರೆದು ಆಸ್ತಿಯನ್ನು ನಾನು ಖರೀದಿಸಿದ್ದೇನೆ ಖಾತೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಆಗಲೇ ಪಾಲಿಕೆ ನೌಕರರು ಈ ಆಸ್ತಿ ವ್ಯಾಜ್ಯ ಕೋರ್ಟ್ ನಲ್ಲಿದೆ. ಹೀಗಾಗಿ ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹೀಗಿದ್ದರೂ ಸಹ ಹತ್ತು ಹಲವು ಬಾರಿ ಪತ್ರ ವ್ಯವಹಾರ ನಡೆಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ರಮೇಶ್ ಹೇಳಿದ್ದರು.

    ತಾವು ಖಾತೆ ಮಾಡಿಸಿದ ನಂತರ ಮನ್ಸೂರ್ ಖಾನ್‍ಗೆ ಮಾರಾಟ ಮಾಡಿರುವ ಜಮೀನಿಗೆ ಖಾತೆ ಮಾಡಿಸಲು ಜಮೀರ್ ಕಸರತ್ತು ಮಾಡಿದ್ದಾರೆ. ಸಚಿವ ಜಮೀರ್ ಸುಳ್ಳು ಲೆಕ್ಕ ಕೊಡುವುದರಲ್ಲಿ ಎಕ್ಸ್‍ಪರ್ಟ್. ಚುನಾವಣಾ ಪ್ರಮಾಣಪತ್ರದಲ್ಲೇ ತಪ್ಪು ಮಾಹಿತಿ ನೀಡಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ಮಾಜಿ ಶಾಸಕ ಚೆಲುವರಾಯ ಸ್ವಾಮಿಯಿಂದ 42 ಲಕ್ಷ ಸಾಲ ಪಡೆದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಚೆಲುವರಾಯ ಸ್ವಾಮಿ ಅದೇ 2018ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಸಾಲ ನೀಡಿರುವ ಮಾಹಿತಿಯನ್ನೇ ನೀಡಿಲ್ಲ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದರು.

  • ಐಎಂಎ ವಂಚನೆ – ಶಿವಾಜಿನಗರದ ಕಾರ್ಪೋರೇಟರ್ ಪತಿ ಬಂಧನ

    ಐಎಂಎ ವಂಚನೆ – ಶಿವಾಜಿನಗರದ ಕಾರ್ಪೋರೇಟರ್ ಪತಿ ಬಂಧನ

    ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಸಂಬಂಧ ಬಿಬಿಎಂಪಿ ಪಾಲಿಕೆಯ ಸದಸ್ಯರೊಬ್ಬರ ಪತಿಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ.

    ಶಿವಾಜಿನಗರದ ಕಾರ್ಪೋರೇಟರ್ ಪರೀಧಾ ಅವರ ಪತಿ ಇಸ್ತಿಯಾಕ್ ಅಹಮದ್ ಬಂಧಿತ ಆರೋಪಿ. ಇಸ್ತಿಯಾಕ್ ಅಹಮದ್ ಶಿವಾಜಿನಗರದ ರೌಡಿಶೀಟರ್ ಹಾಗೂ ಶಾಸಕ ರೋಷನ್ ಬೇಗ್ ಆಪ್ತನಾಗಿದ್ದ. ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್‍ನಿಂದ ಎರಡು ಕೋಟಿ ರೂ. ಪಡೆದಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಆರೋಪಿಯನ್ನು ಬಂಧಿಸಿದ ಎಸ್‍ಐಟಿ ಅಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

    ಎಸ್‍ಐಟಿ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಇಸ್ತಿಯಾಕ್ ಅಹಮದ್‍ನನ್ನು ವಿಚಾರಣೆಗೆ ಒಳಪಡಿಸಿದ್ದರು. ಇದರಿಂದಾಗಿ ಆರೋಪಿ, ತಾನು ಮನ್ಸೂರ್ ಖಾನ್‍ನಿಂದ 2 ಕೋಟಿ ರೂ. ಹಣ ಪಡೆದಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

    ಈ ಪ್ರಕರಣದ ಮುಖ್ಯ ಆರೋಪಿ, ಐಎಂಎ ಮಾಲೀಕ ಮನ್ಸೂರ್ ಖಾನ್, ಬೆಂಗಳೂರು ಜಿಲ್ಲಾಧಿಕಾರಿ ವಿಜಯಶಂಕರ್, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಸೇರಿದಂತೆ ಅನೇಕರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

    ಮನ್ಸೂರ್ ಖಾನ್ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ 15 ರಾಜಕೀಯ ನಾಯಕರ ಹೆಸರನ್ನು ಮನ್ಸೂರ್ ಹೇಳಿದ್ದ ಎಂದು ಮೂಲಗಳು ತಿಳಿಸಿದ್ದವು.