ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿರುವ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗುವ ಮುನ್ನ ಮಹಾನ್ ಕಾರ್ಯವನ್ನು ಮಾಡಿದ್ದು, ತನ್ನ ಮೂರನೇ ಹೆಂಡತಿಗೆ ಮರುಮದುವೆ ಮಾಡಿ ಸೂರು ಕಲ್ಪಿಸಿದ್ದಾನೆ.
ಮನ್ಸೂರ್ ಖಾನ್ ಮೂರನೇ ಹೆಂಡತಿ ತನ್ನ ಮೊದಲ ಗಂಡನನ್ನು ಬಿಟ್ಟು ಬಂದಿದ್ದಳು. ಆದರೆ ದಿನ ಕಳೆಯುತ್ತಾ ಅದೇನಾಯಿತೋ, ವಿದೇಶಕ್ಕೆ ಹಾರುವ ಮುನ್ನ ತನ್ನ ಮೂರನೇ ಹೆಂಡತಿಗೆ ಆಕೆಯ ಮೊದಲ ಗಂಡನ ಜೊತೆಗೆ ತಿಂಗಳ ಹಿಂದಷ್ಟೇ ವಿವಾಹ ಮಾಡಿಸಿದ್ದಾನೆ.
ಇತ್ತ ಮನ್ಸೂರ್ ಖಾನ್ 2ನೇ ವಿಡಿಯೋ ಆಧಾರವಾಗಿಟ್ಟುಕೊಂಡು ಜಾಲಾಡಿದ ಪೊಲೀಸರಿಗೆ ಮತ್ತಷ್ಟು ಚಿನ್ನಾಭರಣ, ಹಣ ಮತ್ತು ಗನ್ ಪತ್ತೆಯಾಗಿದೆ. ಹೂಡಿಕೆದಾರರ ಮನಸ್ಸಲ್ಲಿ ಒಳ್ಳೆಯವನಾಗಲು 2ನೇ ವಿಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್ ಖಾನ್, ಡೈರೆಕ್ಟರ್ಸ್ ಹಾಗೂ ಸಂಬಂಧಿಗಳು ಚಿನ್ನ ಸಾಗಿಸಿದ್ದಾರೆ ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದ. ಇದರಿಂದ ಪುನಃ ಐಎಂಎ ಜ್ಯುವೆಲರ್ಸ್ ಮಳಿಗೆ ಜಾಲಾಡಿ ಪೊಲೀಸರಿಗೆ ಮತ್ತಷ್ಟು ಚಿನ್ನ ಹಾಗೂ ಗನ್ ಪತ್ತೆಯಾಗಿದೆ.
ಇತ್ತ ಎಸ್‍ಐಟಿ ತಂಡದ ವಿಚಾರಣೆ ವೇಳೆ ಮನ್ಸೂರ್ ಖಾನ್ ಬಗ್ಗೆ ಐಎಂಎ ಡೈರೆಕ್ಟರ್ಸ್ ಗೌಪ್ಯತೆ ಕಾಪಾಡಿದ್ದರು ಎನ್ನಲಾಗಿದೆ. ಆದರೆ ಮನ್ಸೂರ್ ಖಾನ್ ಅವರ ಮೇಲೆಯೇ ಆರೋಪ ಮಾಡಿದ್ದ. ಈ ವಿಡಿಯೋವನ್ನ ಪೊಲೀಸರು ಡೈರೆಕ್ಟರ್ಸ್ ಮುಂದೇ ಇಟ್ಟಿದ್ದರು. ವಿಡಿಯೋ ನೋಡಿದ ಡೈರೆಕ್ಟರ್ಸ್ ಐಎಂಎ ಜ್ಯುವೆಲರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರು. ಈ ವೇಳೆ ಮಾಹಿತಿ ಪಡೆದು ದಾಳಿ ನಡೆಸಿದ ಎಸ್‍ಐಟಿ ಅಧಿಕಾರಿಗಳಿಗೆ ಮತ್ತಷ್ಟು ಚಿನ್ನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಮನ್ಸೂರ್ ಖಾನ್ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಸ್ಪಷ್ಟಪಡಿಸಿದ್ದಾರೆ.
ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮನ್ಸೂರ್ ಖಾನ್ ಯಾರೆಂಬುದೇ ಗೊತ್ತಿಲ್ಲ. ಐಎಂಎ ಜ್ಯುವೆಲ್ಲರ್ಸ್ ಮಾತ್ರ ನನಗೆ ಗೊತ್ತು. ಕಳೆದ ಎರಡು ವರ್ಷಗಳಿಂದ ಈ ಅಂಗಡಿಯಲ್ಲಿ ವೇಸ್ಟೇಜ್, ಮೇಕಿಂಗ್ ಚಾರ್ಜ್ ಇಲ್ಲದೆ, ಕೇವಲ ಚಿನ್ನದ ಬೆಲೆಗೆ ಆಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಮ್ಮ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದರು. ಈ ಕುರಿತು ಹೆಚ್ಚಿನ ಮಾಹಿತಿ ನನಗಿಲ್ಲ ಎಂದು ತಿಳಿಸಿದ್ದಾರೆ.
ಐಎಂಎ ಜ್ಯುವೆಲರ್ಸ್‍ನ ಮಾಲೀಕತ್ವದ ಜಯನಗರ ಅಂಗಡಿಯವರು ವೇಸ್ಟೇಜ್, ಮೇಕಿಂಗ್ ಚಾರ್ಜ್ ಇಲ್ಲದೆ, ಕಡಿಮೆ ಬೆಲೆಗೆ ಆಭರಣಗಳನ್ನು ಮಾರುತ್ತಿದ್ದಾರೆ. ಈ ಕುರಿತು ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಜಯಗನರದ ವಿವಿಧ ಜ್ಯುವೆಲ್ಲರಿ ಶಾಪ್‍ನ ಮಾಲೀಕರು ಹಾಗೂ ಸಂಘದ ಸದಸ್ಯರು ನನ್ನ ಬಳಿ ವಿನಂತಿಸಿದ್ದರು. ಈ ಕುರಿತು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವರ ವೈಯಕ್ತಿಕ ಅಂಗಡಿಯಲ್ಲಿ ಅವರವರ ಬೆಲೆಗೆ ಮಾರುತ್ತಾರೆ. ಕ್ವಾಲಿಟಿಯಲ್ಲಿ ಮೋಸವಾದರೆ, ಗ್ರಾಹಕರಿಗೆ ತೊಂದರೆ ಆದರೆ ಮಾತ್ರ ನಾವು ದೂರು ನೀಡಲು ಸಾಧ್ಯ ಎಂದು ಮನವರಿಕೆ ಮಾಡಿದ್ದೆ ಎಂದು ತಿಳಿಸಿದರು.
ಈ ಕುರಿತು ನಮ್ಮ ವಕೀಲರ ಬಳಿ ಚರ್ಚಿಸಿದಾಗ, ಕಡಿಮೆ ಬೆಲೆಗೆ ಮಾರುತ್ತಾರೆಂದು ಏನೂ ಮಾಡಲು ಸಾಧ್ಯವಿಲ್ಲ. ಅವರ ಅಂಗಡಿಯಲ್ಲಿ ಅವರು ಯಾವುದೇ ಬೆಲೆಗೆ ಮಾರಬಹುದು. ಗುಣಮಟ್ಟದಲ್ಲಿ ಮೋಸ ಮಾಡಿದ್ದರೆ ಮಾತ್ರ ನಾವು ಕೇಳಬಹುದು ಎಂದು ಸ್ಪಷ್ಟಪಡಿಸಿದ್ದರು. ಅದೇ ರೀತಿ ನಾನು ಅಸೋಸಿಯೇಷನ್ ಸದಸ್ಯರಿಗೆ ತಿಳಿಸಿದ್ದೆ ಎಂದು ಹೇಳಿದರು.
ನಾವೇನು ಮಾಡಲು ಸಾಧ್ಯವಿಲ್ಲ, ಈ ಹಿಂದೆ ಇದೇ ರೀತಿ ಮಾರಾಟ ಮಾಡಿ ಕೆಲವು ಅಂಗಡಿಗಳು ಮುಚ್ಚಿಕೊಂಡು ಹೋಗಿವೆ ಇದು ಅದೇ ರೀತಿ ಆಗುತ್ತದೆ ಬಿಡಿ ಎಂದು ನಮ್ಮ ಸದಸ್ಯರಿಗೆ ತಿಳಿಸಿದ್ದೆ ಎಂದರು.
ಮನ್ಸೂರ್ ಖಾನ್ ವಿಡಿಯೋದಲ್ಲಿ ನನ್ನ ಹೆಸರನ್ನು ಯಾಕೆ ಉಲ್ಲೇಖಿಸಿದ್ದಾರೆ ಎಂದು ತಿಳಿದಿಲ್ಲ. ಅವರ ಮುಖವನ್ನೂ ನಾನು ಈವರೆಗೆ ನೋಡಿಲ್ಲ. ನಮ್ಮ ಅಂಗಡಿಗೆ ಸಪ್ಲೈ ಮಾಡುವವರೇ ಅವರಿಗೂ ಸಪ್ಲೈ ಮಾಡುತ್ತಾರೆ. ನಮಗೆ ನೀಡಿದ ದರದಲ್ಲೇ ಅವರಿಗೂ ಚಿನ್ನ ನೀಡುತ್ತಾರೆ. ಆದರೆ, ಅವರು ವೇಸ್ಟೇಜ್, ಮೇಕಿಂಗ್ ಚಾರ್ಜ್ ಇಲ್ಲದೆ ಚಿನ್ನದ ದರದಲ್ಲೇ ಆಭರಣವನ್ನು ಮಾರುತ್ತಿದ್ದರು ಎಂದು ಶರವಣ ವಿವರಿಸಿದರು.
ನಮ್ಮ ಸದಸ್ಯರು ದೂರು ನೀಡಿರುವುದನ್ನು ಬಿಟ್ಟರೆ, ಇನ್ನಾವುದು ನನಗೆ ತಿಳಿದಿಲ್ಲ. ಐಎಂಎ ಜ್ಯುವೆಲರ್ಸ್ ಮಾಲೀಕರು ಯಾರೆಂಬುದೇ ನನಗೆ ತಿಳಿದಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ನಂತರ ಗೊತ್ತಾಯಿತು ಎಂದು ಹೇಳಿದರು.
ಬೆಂಗಳೂರು: ಶಿವಾಜಿನಗರ ಶಾಸಕ ರೋಷನ್ ಬೇಗ್ ನನ್ನ ಬಳಿ 400 ಕೋಟಿ ಹಣವನ್ನು ಪಡೆದಿದ್ದಾರೆ. ಹಣ ವಾಪಸ್ ಕೇಳಲು ಹೋದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬೆಂಗಳೂರಿನ ಐಎಂಎ ಜ್ಯೂವೆಲ್ಲರ್ಸ್ ಎಂಡಿ ಮನ್ಸೂರ್ ಆರೋಪಿಸಿದ್ದಾರೆ.
ಬರೋಬ್ಬರಿ 2 ಸಾವಿರ ಕೋಟಿ ರೂ. ವಹಿವಾಟನ್ನು ಮನ್ಸೂರ್ ಹೊಂದಿದ್ದಾರೆ. ಹಾಗೆಯೇ ಕಳೆದ 4 ದಿನಗಳಿಂದ ಕಚೇರಿ ಬಾಗಿಲು ಹಾಕಿದ್ದ ಮನ್ಸೂರ್ ಸೋಮವಾರ ಕಚೇರಿ ಬಾಗಿಲು ತೆರೆಯುವುದಾಗಿ ತನ್ನ ಬಳಿ ಹಣ ಹೂಡಿಕೆ ಮಾಡಿದವರಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ಕಚೇರಿ ತೆರೆಯುವ ಮುನ್ನ ಆಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ. ಸೋಮವಾರ ನಮ್ಮ ಹೂಡಿಕೆ ಹಣ ಸಿಗುತ್ತೆ ಎಂದು ನಂಬಿದ್ದ ಸಾರ್ವಜನಿಕರು ಕಂಗೆಟ್ಟು, ಕಚೇರಿ ಮುಂದೆಯೇ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಹಣ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಆಡಿಯೋ ಸಿಕ್ಕ ಕೂಡಲೇ ಪೊಲೀಸರು ಮನ್ಸೂರ್ ಮನೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಕಚೇರಿ, ಮನೆಗೆ ಬೀಗ ಜಡಿದು ಮನ್ಸೂರ್ ನಾಪತ್ತೆ ಆಗಿದ್ದು, ನಿಜವಾಗಲೂ ಮನ್ಸೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಪೊಲೀಸರು ಮಾನ್ಸೂರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆಡಿಯೋದಲ್ಲಿ ಏನಿದೆ?
ಐಎಂಎ ಅಲ್ಲಿ ಹಣ ಹೂಡಿಕೆ ಮಾಡಲು ನಾನು ಜನರ ಬಳಿ ಹಣ ಸಂಗ್ರಹ ಮಾಡಿದ್ದೆ. ಬಳಿಕ ಅದನ್ನು ರೋಷನ್ ಬೇಗ್‍ಗೆ ನೀಡಿದ್ದೆ. ಉದ್ಯಮಿಯೊಬ್ಬರಿಗೆ 500 ಕೋಟಿ ಹಾಗೂ ರೋಷನ್ ಬೇಗ್ ಅವರಿಗೆ 400 ಕೋಟಿ ರೂ. ಸಾಲದ ರೀತಿಯಲ್ಲಿ ಹಣ ನೀಡಿದ್ದೆ. ಆದರೆ ಹಣ ವಾಪಸ್ ಕೊಡುವ ಮನಸ್ಸು ಮಾಡಲೇ ಇಲ್ಲ. ಹಣ ಕೇಳಲು ಹೋದರೆ ಹೆಂಡತಿ ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಆ ಭಯಕ್ಕೆ ನಾನು ನನ್ನ ಹೆಂಡತಿ ಮಕ್ಕಳನ್ನು ಹಳ್ಳಿಯೊಂದರಲ್ಲಿ ಬಚ್ಚಿಟ್ಟಿದ್ದೆ. ಆದರೆ ನಾನು ಈಗ ಬದುಕಲು ಸಾಧ್ಯ ಆಗುತ್ತಿಲ್ಲ. ನಾನು ಸಾವನ್ನಪ್ಪುತ್ತೇನೆ ಎಂದು ಆಡಿಯೋ ಕ್ಲಿಪ್ಪಿಂಗ್ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ಡಿಸಿಪಿ ರಾಹುಲ್ ಕುಮಾರ್ ಪ್ರತಿಕ್ರಿಯಿಸಿ, ಐಎಂಎ ಜುವೆಲ್ಲರಿ ಮಾಲೀಕ ಮನ್ಸೂರ್ ಆಡಿಯೋ ವೈರಲ್ ಆಗಿದೆ. ಮನ್ಸೂರ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೂಡಿಕೆ ಮಾಡಿದ ಜನರು ಜುವೆಲ್ಲರಿ ಶಾಪ್ ಮುಂದೆ ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಣ ಕಳೆದುಕೊಂಡವರು ದೂರು ನೀಡಿದರೆ ತನಿಖೆ ಮಾಡುತ್ತೇವೆ. ಮನ್ಸೂರ್ ಫೋನ್ ಸ್ವಿಚ್ ಆಫ್ ಆಗಿದ್ದು, ಕುಟುಂಬ ಸದಸ್ಯರೂ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಮನ್ಸೂರ್ ಮೊಬೈಲ್ ಸ್ವಿಚ್ ಆಫ್ ಆಗಿರುವ ಹಿನ್ನೆಲೆ ಟವರ್ ಲೊಕೇಷನ್ ಮೂಲಕ ಮನ್ಸೂರ್‍ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮನ್ಸೂರ್ ದೇಶ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಮಾಹಿತಿ ನೀಡಿ, ಎಮಿಗ್ರೇಷನ್‍ನಲ್ಲೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.