ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಮೌಲ್ವಿ ಅಫ್ಸರ್ ಹನೀಜ್ ಸೇರಿ ಇಬ್ಬರ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್‍ನಲ್ಲಿ ಎಸ್‍ಐಟಿ ಅಧಿಕಾರಿಗಳು ಮೌಲ್ವಿಯನ್ನು ಬಂಧಿಸಿದ್ದರು.
ಹನೀಫ್ ಅಫ್ಸರ್ ಅಜೀಜ್ ಶಿವಾಜಿನಗರ ಒಪಿಎಚ್ ರಸ್ತೆಯ ಬೇಪಾರಿಯನ್ ಮಸೀದಿಯ ಧರ್ಮ ಗುರುವಾಗಿದ್ದು, 2017ರಲ್ಲಿ ಹೆಚ್‍ಬಿಆರ್ ಲೇಔಟ್ ನಲ್ಲಿ ಮೂರು ಕೋಟಿ ರೂ. ಮೌಲ್ಯದ ಮನೆ ಉಡುಗೊರೆ ಪಡೆದಿದ್ದ.
ಮಸೀದಿಗೆ ಬರುವ ಸಾವಿರಾರು ಭಕ್ತರ ಭಾವನೆಗಳ ಜೊತೆ ಆಟವಾಡಿದ್ದ ಹನೀಫ್ ಅಫ್ಸರ್ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ. ನಮಾಜ್‍ಗೆ ಬಂದ ಜನರಿಗೆ ಐಎಂಎನಲ್ಲಿ ಹಣ ಹೂಡುವಂತೆ ಪ್ರಚೋದನೆ ಮಾಡುತ್ತಿದ್ದ. ಈ ಧರ್ಮಗುರು ಮಾತನ್ನು ನಂಬಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿಸಿದ್ದರಿಂದ ಧರ್ಮಗುರುವಿನ ಋಣ ತೀರಿಸಲು ಮೂರು ಕೋಟಿ ರೂ. ಮೌಲ್ಯದ ಮನೆಯನ್ನು ಮನ್ಸೂರ್ ಖಾನ್ ನೀಡಿದ್ದ.
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಇಂದು ಸಿಬಿಐ ಅಧಿಕೃತವಾಗಿ ತನಿಖೆ ಆರಂಭಿಸಿದೆ. ಎಸ್‍ಐಟಿ ಮುಖ್ಯಸ್ಥ ರವಿಕಾಂತೇಗೌಡ ಮತ್ತು ತನಿಖಾಧಿಕಾರಿ ಗಿರೀಶ್ ಭೇಟಿ ಮಾಡಿ ಸಿಬಿಐ ಅಧಿಕಾರಿಗಳು ತನಿಖೆಯ ಫೈಲ್ ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ಎಸ್‍ಐಟಿಯ ಎಫ್‍ಐಆರ್‍ನಲ್ಲಿ ಮನ್ಸೂರ್ ಖಾನ್ ಸೇರಿದಂತೆ ಎಲ್ಲ ನಿರ್ದೇಶಕರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಎಲ್ಲರನ್ನು ಆರೋಪಿಗಳನ್ನಾಗಿಸಿ, ಐಎಂಎಗೆ ಸೇರಿದ ಮೂವತ್ತು ಸಂಸ್ಥೆಗಳ ಮೇಲೆ ಸಿಬಿಐ ಇದೀಗ ಮತ್ತೊಂದು ಹೊಸ ಎಫ್‍ಐಆರ್ ದಾಖಲಿಸಿದೆ.
ಅಲ್ಲದೆ ವಂಚನೆಗೊಳಗಾದ 40 ಸಾವಿರ ಜನರು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರುಗಳನ್ನು ಸಹ ಸಿಬಿಐ ಪಡೆದಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ಪ್ರಾರಂಭಿಸಿದೆ. ಮನ್ಸೂರ್ ಖಾನ್‍ನಿಂದ ಅಕ್ರಮವಾಗಿ ಹಣ ಪಡೆದು ಸದ್ಯ ಜೈಲಿನಲ್ಲಿರುವ ಎಲ್ಲ ಆರೋಪಿಗಳನ್ನು ಸಿಬಿಐ ಹಂತ ಹಂತವಾಗಿ ವಿಚಾರಣೆ ನಡೆಸಲಿದೆ.
ಬೆಂಗಳೂರು ಮತ್ತು ಹೈದ್ರಾಬಾದ್‍ನ ಸಿಬಿಐ ಅಧಿಕಾರಗಳ ತಂಡ ಐಎಂಎ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದ ಮಾಹಿತಿಯನ್ನು ಸಾಕ್ಷಿ ಸಮೇತ ಸಿಬಿಐ ಅಧಿಕಾರಿಗಳಿಗೆ ಹಂತ ಹಂತವಾಗಿ ಎಸ್‍ಐಟಿ ಅಧಿಕಾರಿಗಳು ನೀಡಲಿದ್ದಾರೆ. ತನಿಖೆಯನ್ನು ಸಿಬಿಐಗೆ ವಹಿಸಿರುವುದರಿಂದ ಮನ್ಸೂರ್ ಖಾನ್ ಸೇರಿದಂತೆ ಇತರ ವಂಚಕರಿಗೆ ನಡುಕ ಆರಂಭವಾಗಿದೆ.
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಐಎಂಎ ಮಾಲೀಕ ಮನ್ಸೂರ್ ಖಾನ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಇದರ ಬೆನ್ನಲ್ಲೇ ಇದೀಗ ಮನ್ಸೂರ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಶಾಂತಿ ನಗರದಲ್ಲಿರುವ ಆರೋಪಿ ಮನ್ಸೂರ್ ಖಾನ್ ಮನೆ ಮೇಲೆ ಎಸ್‍ಐಟಿ ದಾಳಿ ನಡೆಸಿದ್ದು, ದಾಳಿಯ ವೇಳೆ 300 ಕೆ.ಜಿ ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮನೆಯ ಕೊನೆಯಲ್ಲಿ ಟೆರೆಸ್ ಮೇಲೆ ಇದ್ದ ಈಜುಕೊಳದಲ್ಲಿ ಈ ನಕಲಿ ಬಿಸ್ಕೆಟ್‍ಗಳನ್ನು ಮನ್ಸೂರ್ ಖಾನ್ ಬಚ್ಚಿಟ್ಟಿದ್ದ ಎಂದು ತಿಳದು ಬಂದಿದೆ. ಮನ್ಸೂರ್ ಖಾನ್‍ನ್ನು ಎಸ್‍ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅನಾರೋಗ್ಯದ ನೆಪವೊಡ್ಡಿದರೂ ಸಹ ಚಿಕಿತ್ಸೆ ಕೊಡಿಸಿ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಮನ್ಸೂರ್ ಖಾನ್ ಭೇಟಿಯಾಗಲು ಯಾರಿಗೂ ಅವಕಾಶ ನೀಡದೆ ವಿಚಾರಣೆ ನಡೆಸಲಾಗುತ್ತಿದ್ದು, ಕುಟುಂಬಸ್ಥರು, ಪ್ರಭಾವಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಯಾರನ್ನೂ ಸಹ ಮನ್ಸೂರ್ ಖಾನ್‍ನನ್ನು ಭೇಟಿಯಾಗಲು ಬಿಡುತ್ತಿಲ್ಲ.
ಈ ಹಿಂದೆ ಎಸ್‍ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಎದೆ ನೋವು ಎಂದು ಮನ್ಸೂರ್ ಖಾನ್ ಕುಂಟು ನೆಪವೊಡ್ಡಿದ್ದ. ಬಳಿಕ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಎಸ್‍ಐಟಿ ಅಧಿಕಾರಿಗಳು ಇತ್ತೀಚೆಗೆ ಮನ್ಸೂರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ರಾರಂಭಿಸಿದ್ದರು. ಡಿಸಿಪಿ ಗಿರೀಶ್ ಹಾಗೂ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ತಡರಾತ್ರಿ ಮತ್ತೆ ಎದೆ ನೋವು ಎಂದು ಮನ್ಸೂರ್ ಖಾನ್ ಹೇಳಿದ್ದು, ನಂತರ ಅಧಿಕಾರಿಗಳು ಮನ್ಸೂರ್ ಖಾನ್ ನನ್ನು ಜಯದೇವ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು.
ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಎಸ್‍ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಮತ್ತೆ ಎದೆ ನೋವು ಎಂದು ಹೇಳಿದ್ದು, ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಎಸ್‍ಐಟಿ ಅಧಿಕಾರಿಗಳು ಶನಿವಾರ ಮನ್ಸೂರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ರಾರಂಭಿಸಿದ್ದರು. ವಿಚಾರಣೆ ವೇಳೆ ತಡರಾತ್ರಿ ಮತ್ತೆ ಎದೆ ನೋವು ಎಂದು ಮನ್ಸೂರ್ ಖಾನ್ ಹೇಳಿದ್ದು, ನಂತರ ಅಧಿಕಾರಿಗಳು ಮನ್ಸೂರ್ ಖಾನ್ ನನ್ನು ಜಯದೇವ ಆಸ್ಪತ್ರೆಗೆ ಸೇರಿದ್ದಾರೆ. ಇದನ್ನೂ ಓದಿ: 14 ದಿನಗಳ ನ್ಯಾಯಾಂಗ ಬಂಧನಕ್ಕೆ ಮನ್ಸೂರ್ ಖಾನ್
ಡಿಸಿಪಿ ಗಿರೀಶ್ ಹಾಗೂ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ವಿಚಾರಣೆ ಮಾಡಲಾಗುತ್ತಿತ್ತು. ವಿಚಾರಣೆ ಮಾಡುವಾಗ ರಾತ್ರಿ ಎದೆ ನೋವು ಎಂದು ಮನ್ಸೂರ್ ಖಾನ್ ಡ್ರಾಮಾ ಮಾಡಿದ್ದಾನೆ. ಬಳಿಕ ಜಯದೇವಕ್ಕೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ಅಧಿಕಾರಿಗಳು ವಾಪಸ್ ಕರೆ ತಂದಿದ್ದಾರೆ. ಸದ್ಯ ಆರೋಪಿ ಮನ್ಸೂರ್ ಖಾನ್ ವಿಶ್ರಾಂತಿ ಪಡೆಯುತಿದ್ದಾನೆ. ಮನ್ಸೂರ್ ಜೊತೆ ತನಿಖಾಧಿಕಾರಿಗಳು ಹೊರತು ಪಡಿಸಿದರೆ ಬೇರೆ ಯಾರೊಬ್ಬರಿಗೂ ಮಾತನಾಡಲು ಅವಕಾಶ ನೀಡಿಲ್ಲ.
ಕೋಲಾರ: ಬಹು ಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸದ್ಯ ಸಂಸ್ಥೆಗೆ ಸೇರಿದ ಜಮೀನುಗಳನ್ನು ಕೋಲಾರ ಜಿಲ್ಲಾಡಳಿತ ವಶಕ್ಕೆ ನೀಡಲಾಗಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಪುರ ಮತ್ತು ಬೈರತನಹಳ್ಳಿ ಗ್ರಾಮದಲ್ಲಿ ಐಎಂಐ ಜಮೀನುಗಳನ್ನು ವಶಕ್ಕೆ ಪಡೆಯಲಾಗಿದೆ. ಪುರ ಗ್ರಾಮದ ಸರ್ವೆ ನಂ.6ರ 0.20 ಗುಂಟೆ ಮತ್ತು ಸರ್ವೆ ನಂ.5 ರ ಗುಂಟೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಬೈರತನಹಳ್ಳಿಯ ಪಾರಂ ಹೌಸನ್ನು ಕೂಡ ಜಿಲ್ಲಾಡಳಿತ ವಶಕ್ಕೆ ನೀಡಲಾಗಿದೆ.
ಇಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ಪ್ರದೇಶಗಳಿಗೆ ಭೇಟಿ ನೀಡಿ ಜಮೀನು ವಶಕ್ಕೆ ಪಡೆದಿದ್ದು, ವಶಪಡಿಸಿಕೊಂಡಿರುವ ಜಮೀನುಗಳ ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ.
ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಜಾರಿ ನಿದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಪ್ರಕರಣದ ಕುರಿತು ಸ್ಫೋಟಕ ಮಾಹಿತಿಯನ್ನು ಮನ್ಸೂರ್ ಬಾಯ್ಬಿಟ್ಟಿದ್ದ. 1000ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಇಡಿ ಅಧಿಕಾರಿಗಳು ಪಡೆದಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಕೆಲ ಪ್ರಭಾವಿಗಳ ಹೆಸರುಗಳನ್ನು ಕೂಡ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.
ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಸ್‍ಐಟಿ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದಲ್ಲೇ ಹಿರಿಯ ಅಧಿಕಾರಿಗಳಿಂದ ಅವರ ವಿಚಾರಣೆ ನಡೆದಿದೆ ಎನ್ನಲಾಗಿದೆ. ಅಂದಹಾಗೇ ರೋಷನ್ ಬೇಗ್ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಎಸ್‍ಐಟಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಎಸ್‍ಐಟಿಯ ಅಧಿಕಾರಿ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆ ಗುರುವಾರ ಫಿಕ್ಸ್ ಆಗಿರುವುದರಿಂದ ಕೊನೆ ಗಳಿಗೆಯಲ್ಲಿ ದೋಸ್ತಿ ನಾಯಕರು ಮನವೊಲಿಕೆಗೆ ಮುಂದಾಗಬಹುದು ಎಂಬ ಉದ್ದೇಶದಿಂದ ರೋಷನ್ ಬೇಗ್ ಮುಂಬೈ ತೆರಳುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.
ಐಎಂಎ ವಂಚನೆ ಬಳಿಕ ಬಿಡುಗಡೆಯಾದ ಆಡಿಯೋದಲ್ಲಿ ಮನ್ಸೂರ್ ಖಾನ್, ರೋಷನ್ ಬೇಗ್ ಹೆಸರು ಪ್ರಸ್ತಾಪ ಆಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್‍ಗೆ ಎಸ್‍ಐಟಿ ನೊಟೀಸ್ ನೀಡಿತ್ತು. ಆದರೆ, ಜುಲೈ 11ರಂದು ರೋಷನ್ ಬೇಗ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕೆ ಎಸ್‍ಐಟಿ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿತ್ತು. ಇಂದು ರೋಷನ್ ಬೇಗ್ ವಿಚಾರಣೆ ಹಾಜರಾಗಬೇಕಿತ್ತು. ಆದರೆ ಸದನದ ಕಾರಣ ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಪರಿಣಾಮ ಜುಲೈ 19 ರಂದು ವಿಚಾರಣೆಗೆ ಹಾಜರಾಗಲು ಎಸ್‍ಐಟಿ ನೋಟಿಸ್ ನೀಡಿತ್ತು ಎಂಬ ಮಾಹಿತಿ ಲಭಿಸಿದೆ. ಆದರೆ ಅವರು ಬೆಂಗಳೂರು ಬಿಟ್ಟು ತೆರಳುವ ಮಾಹಿತಿ ಅನ್ವಯ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ ನಡುವೆ ಅಮಾಯಕರಿಗೆ ಮೊಸ ಮಾಡಿದ ಬಹುಕೋಟಿ ಹಗರಣದ ಸುದ್ದಿ ಕಡಿಮೆಯಾಗಿದೆ. ಆದರೆ ಎಸ್‍ಐಟಿ ಮಾತ್ರ ನಮಗೂ ರಾಜಕೀಯ ವಿಷಯಕ್ಕೂ ಸಂಬಂಧವಿಲ್ಲ ಎಂದು ವಿಚಾರಣೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಜಮೀರ್ ಅಹ್ಮದ್ ಅವರನ್ನ ಇಡಿ ವಿಚಾರಣೆ ನಡೆಸಿತ್ತು. ಈಗ ರೋಷನ್ ಬೇಗ್ ಸರದಿಯಾಗಿದೆ.
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಂಗಳೂರು ಡಿಸಿ ವಿಜಯಶಂಕರ್ ಅವರಿಂದ ಎಸ್‍ಐಟಿ ಅಧಿಕಾರಿಗಳು 2.5 ಕೋಟಿ ರೂ. ವನ್ನು ಶುಕ್ರವಾರ ಜಪ್ತಿ ಮಾಡಿಕೊಂಡಿದ್ದಾರೆ.
ಅಡೋನಿ ಎಂಬ ನಿರ್ಮಾಣ ಸಂಸ್ಥೆಯಿಂದಲೂ 1.5 ಕೋಟಿ ರೂ.ವನ್ನು ಎಸ್‍ಐಟಿ ವಶಕ್ಕೆ ಪಡೆದಿದೆ. ಅಷ್ಟೇ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಮತ್ತು ತಿಲಕನಗರ ರೌಡಿಶೀಟರ್ ಮುನೀರ್ ಅಲಿಯಾಸ್ ಗನ್ ಮುನೀರ್, ಬ್ರಿಗೇಡ್ ಬಾಬು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಿಜಯಶಂಕರ್ ನಗರದ ಬಿಲ್ಡರ್ ಓರ್ವನಿಗೆ ಫ್ಲಾಟ್ ಮತ್ತು ನಿವೇಶನ ಖರೀದಿಸಲು ಕಿಕ್ ಬ್ಯಾಕ್ ಹಣ ನೀಡಿದ್ದರು. ಈ ಲಂಚದ ಹಣ ಹಾಗೂ ಬಿಲ್ಡರ್ ನನ್ನು ಎಸ್‍ಐಟಿ ವಶಕ್ಕೆ ಪಡೆದಿದೆ. ವಿಜಯಶಂಕರ್ ಮತ್ತೊಂದು ಪ್ರಕಣದಲ್ಲಿ 1 ಕೋಟಿ ರೂ. ಲಂಚ ಪಡೆದಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಈ ಹಿನ್ನಲೆ ಆ ಹಣವನ್ನು ಎಸ್‍ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಐಎಂಎ ಸಮೂಹ ಕಂಪನಿಗೆ ಕ್ಲೀನ್ ಚಿಟ್ ನೀಡಲು ವಿಜಯಶಂಕರ್ 1.5 ಕೋಟಿ ರೂ. ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಬಂಧಿತ ಆರೋಪಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ ಎಸ್‍ಐಟಿ ಅಧಿಕಾರಿಗಳು ಸೋಮವಾರ ವಿಜಯಶಂಕರ್ ಅವರನ್ನು ಬಂಧಿಸಿದ್ದರು. ಜೊತೆಗೆ ಬಿಲ್ಡರ್ ಕೃಷ್ಣಮೂರ್ತಿ ಅವರನ್ನು ಕೂಡ ಎಸ್‍ಐಟಿ ತಂಡವು ವಿಚಾರಣೆಗೆ ಒಳಪಡಿಸಿತ್ತು.
ವಿಜಯಶಂಕರ್ ಅವರನ್ನು ಬಂಧಿಸಿದ್ದ ಎಸ್‍ಐಟಿ ಪೊಲೀಸರು ಮಂಗಳವಾರ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ತೆರೆದ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಈ ಮೂಲಕ ಆರೋಪಿಯನ್ನು ಇದೇ 15ರವೆರಗೂ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಕೋರಿಕೆಯನ್ನು ನ್ಯಾಯಾಧೀಶರು ಭಾಗಶಃ ಪುರಸ್ಕರಿಸಿದ್ದರು.
ಬಂಧಿತ ವಿಜಯಶಂಕರ್ ವಿರುದ್ಧ ಕಮರ್ಶಿಯಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 406 (ಅಪರಾಧಿಕ ನಂಬಿಕೆ ದ್ರೋಹಕ್ಕಾಗಿ ದಂಡನೆ), 409 (ಲೋಕನೌಕರರನಿಂದ ಅಪರಾಧಿಕ ನಂಬಿಕೆ ದ್ರೋಹ), 420 (ವಂಚನೆ) ಹಾಗೂ 120 (ಬಿ) (ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಅಪರಾಧ ಬಚ್ಚಿಡುವುದು) ಅಡಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಉತ್ತರ ವಿಭಾಗದ ಸಹಾಯಕ ಆಯುಕ್ತರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಎ.ಸಿ.ನಾಗರಾಜ್ ಬಂಧಿಯ ಅಧಿಕಾರಿ. ಐಎಂಎ ಪರ ಎನ್‍ಓಸಿ ನೀಡಲು 4.5 ಕೋಟಿ ಲಂಚ ಪಡೆದಿದ್ದ ಆರೋಪದ ಮೇಲೆ ಸಹಾಯಕ ಆಯುಕ್ತ ಎ.ಸಿ.ನಾಗರಾಜ್ ಬಂಧನವಾಗಿದೆ. ತನಿಖೆ ನಡೆಸುವಾಗಲೂ ತಪ್ಪು ಮಾಹಿತಿ ನೀಡಿ ನಾಗರಾಜ್ ಸರ್ಕಾರಕ್ಕೆ ವಂಚನೆ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಸರ್ಕಾರದಿಂದ ಎನ್‍ಓಸಿ ನೀಡುವ ಮೊದಲು 10 ಕೋಟಿ ರೂ. ಕೇಳಿದ್ದು, ಸಚಿವರೊಬ್ಬರ ಆದೇಶದ ಮೇರೆಗೆ ಹಣ ಸ್ವೀಕರಿಸಿದ್ದ ನಾಗರಾಜ್ ಕುರಿತು ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಸಹ ಹೇಳಿಕೊಂಡಿದ್ದನು. ಹಣ ನೀಡಲು ತಡವಾಗಿತ್ತು ಎಂದು ವಿಡಿಯೋದಲ್ಲಿ ಮನ್ಸೂರ್ ಖಾನ್ ಹೇಳಿದ್ದಾನೆ.
ಐಎಂಎ ವಂಚನೆ ಪ್ರಕರಣದ ಕರಿತು ಎಸ್‍ಐಟಿ ತಂಡ ಈಗಾಗಲೇ ವಜ್ರ, ಚಿನ್ನ, ಬೆಳ್ಳಿ, ಸೇರಿದಂತೆ ಐಎಂಎನ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಐಎಂಎ ಒಡೆತನದ ಫ್ರಂಟ್ ಲೈನ್ ಫಾರ್ಮಸಿಯ ನೀಲಸಂದ್ರ ಹಾಗೂ ವಿಜಯನಗರದ ಔಷಧಿ ಮಳಿಗೆಗಳ ಮೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 60 ಸಾವಿರ ನಗದು ಹಾಗೂ 40 ಲಕ್ಷ ರೂ. ಮೌಲ್ಯದ ಔಷಧಿ ಹಾಗೂ ವಿದ್ಯುನ್ಮಾನ ಉಪಕರಣಗಳು ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಯುಟ್ಯೂಬ್‍ನಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದು, ಹಗರಣದ ಸಂಬಂಧ ರಾಜಕಾರಣಿಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದಾನೆ.
ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋದಲ್ಲಿ ತನ್ನ ಸಂಸ್ಥೆಯನ್ನು ಮುಚ್ಚಲು ಪ್ರಯತ್ನ ಪಟ್ಟಿದ್ದಕ್ಕೆ ರಾಜಕಾರಣಿಗಳು, ಉದ್ಯಮಿಗಳಿಗೆ ಮನ್ಸೂರ್ ಧನ್ಯವಾದ ತಿಳಿಸಿದ್ದಾನೆ.
ವಿಡಿಯೋದಲ್ಲಿ ಏನಿದೆ?
ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್, ಮೊಹಮದ್ ಉಬೇದುಲ್ಲಾ ಶರೀಫ್, ಪಾಸ್‍ಬನ್ ಪತ್ರಿಕೆ ಸಂಪಾದಕ ಶರೀಫ್, ಟಾಡಾ ಟೆರರಿಸ್ಟ್ ಮುಕ್ತಾರ ಅಹಮದ್, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ಇರ್ಫಾನ್ ಸೇರಿ ನನ್ನನ್ನು ಮುಗಿಸಿದ್ದಾರೆ. ಐಎಂಎ ಮುಗಿಸಲು ಎಲ್ಲರೂ ಸಫಲರಾಗಿದ್ದಕ್ಕೆ ಅವರಿಗೆ ಧನ್ಯವಾದಗಳು.
ರಾಜಕಾರಣಿಗಳು, ಹೂಡಿಕೆದಾರರು ನನ್ನ ಕುತ್ತಿಗೆ ಮೇಲೆ ಬಂದು ಕುಳಿತಿದ್ದರು. ಅವರಿಂದ ತಪ್ಪಿಸಿಕೊಳ್ಳಲು, ನನ್ನ ಸಹಾಯಕ್ಕೆ ಯಾರು ಇಲ್ಲದ ಕಾರಣ ನಾನು ಕುಟುಂಬದ ಜೊತೆ ಹೊರಡಬೇಕಾಯಿತು. ಜೂನ್ 24ರಂದು ಮರಳಿ ಬೆಂಗಳೂರಿಗೆ ಬರುವ ಪ್ಲಾನ್ ಮಾಡಿದ್ದೆ. ಆದರೆ ನನ್ನ ಪಾಸ್‍ಪೋರ್ಟ್, ಟಿಕೆಟ್ ತಡೆ ಹಿಡಿಯಲಾಯಿತು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ನಾನು ಮನವಿ ಮಾಡುತ್ತೇನೆ. ಜನರಿಗೆ ನೀವು ನ್ಯಾಯ ಒದಗಿಸುತ್ತೀರೆಂಬ ನಂಬಿಕೆ ಇದೆ. ಈ ಹಗರಣದ ಹಿಂದೆ ಇರುವ ಸತ್ಯಾಸತ್ಯೆಯನ್ನು ನಾನು ಬಿಚ್ಚಿಡುತ್ತೇನೆ. ಕಾನೂನು ಯಾವುದೇ ಕ್ರಮಕೈಗೊಂಡರೂ ನಾನು ತಲೆಬಾಗುತ್ತೇನೆ. ಭಾರತದಲ್ಲಿದ್ದ ನಂಬರಿನಲ್ಲೇ ನಾನು ಸಂಪರ್ಕದಲ್ಲಿದ್ದೇನೆ.
21 ಸಾವಿರ ಹೂಡಿಕೆದಾರರಿಗೆ ಕಳೆದ 13 ವರ್ಷಗಳಿಂದ ಹಣ ನೀಡಿದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ಭಾರತದಾದ್ಯಂತ ಬಡ ವಿದ್ಯಾರ್ಥಿಗಳಿಗ ಸಹಾಯ ಮಾಡಿದ್ದೇನೆ. 7 ಸಾವಿರ ಮನೆಗಳಿಗೆ ಪಡಿತರ ಕೊಡುತ್ತಿದ್ದೆ. ಇಷ್ಟು ಸಹಾಯ ಮಾಡಿದರೂ ನನಗೆ ಕರುಣೆ ತೋರಿಲ್ಲ. ಇದು ನನಗೆ ಬೇಸರ ತಂದಿದೆ. ಐಎಂಎ 13 ವರ್ಷದಿಂದ 12 ಸಾವಿರ ಕೋಟಿ ಲಾಭಗಳಿಸಿದೆ. 2006ರಿಂದ 2019 ರವರೆಗೆ ಐಎಂಎ ಸಂಸ್ಥೆ ನಡೆದಿದೆ. 2 ಸಾವಿರ ಕೋಟಿ ಕ್ಯಾಪಿಟಲ್ ಇನ್ವೆಸ್ಟ್‍ಮೆಂಟ್‍ನ್ನ ಕೊಟ್ಟಿದ್ದೇವೆ ಎಂದು ಕಂಪನಿ ಬಗ್ಗೆ ಮಾಹಿತಿ ನೀಡಿದ್ದಾನೆ.
ನಾನು ಭಾರತಕ್ಕೆ ಬಂದರೆ ಜೀವ ಬೆದರಿಕೆಯಿದೆ. ಪೊಲೀಸ್ ಕಸ್ಟಡಿಯಲ್ಲಿಯೇ ನನ್ನನ್ನು ಹೊಡೆದು ಹಾಕಲು ಕೆಲವರು ಸಂಚು ರೂಪಿಸಿದ್ದರು. ಹೀಗಾಗಿ ಕುಟುಂಬ ಸಮೇತ ಬೆಂಗಳೂರು ಬಿಟ್ಟು ಬಂದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ. ನಾನು ತಪ್ಪಿತಸ್ಥ ಎನ್ನುವುದಾದರೆ ನನ್ನ ಹಿಂದೆ ಅನೇಕರು ಇದ್ದಾರೆ. ಅವರಿಗೂ ಶಿಕ್ಷೆಯಾಗಲಿ.
ಈಗಾಗಲೇ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. ಅದಾದ ನಂತರ ಇದೇ ಮೊದಲ ನನ್ನ ವಿಡಿಯೋ ಬಿಡುಗಡೆ ಮಾಡುತ್ತಿರುವೆ. ಶೇ.99 ರಷ್ಟು ನನ್ನ ವಿರುದ್ಧ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ. ಹೀಗಾಗಿ ಶೇ.1 ರಷ್ಟು ಜನ ಮಾತ್ರ ನನ್ನ ಬೆಂಬಲಕ್ಕೆ ಇದ್ದಾರೆ. ಐಎಂಎ ಬಿಸಿನೆಸ್ ನಿಜವಾದ ಉದ್ಯಮವಾಗಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಬೇಕು ಅಂತಲೇ ಹಾಳು ಮಾಡುತ್ತಿದ್ದಾರೆ. ಐಎಂಎ ಮುಳುಗಿಸಲು ಯಾರು ಪ್ರಯತ್ನ ಪಟ್ಟಿದ್ದಾರೋ ಅವರ ಪಟ್ಟಿ ನನ್ನ ಬಳಿಯಿದೆ. ಎಲ್ಲರ ಹೆಸರುಗಳನ್ನು ನಿಮ್ಮ ಮುಂದೆ ಬಹಿರಂಗಪಡಿಸುವೆ. ಇದರಲ್ಲಿ ಭಾಗಿಯಾದವರು ಸಣ್ಣಪುಟ್ಟವರಲ್ಲ.
ಈ ಕಂಪನಿ ದೊಡ್ಡ ದೊಡ್ಡವರ ಹೆಸರುಗಳಲ್ಲಿ ನಡೆಯುತ್ತಿತ್ತು. ಅವರ ಹೆಸರುಗಳನ್ನ ಬಹಿರಂಗಪಡಿಸಿದರೆ ನನ್ನ ಕುಟುಂಬಕ್ಕೆ ತೊಂದರೆಯಾಗುತ್ತದೆ. ನನ್ನ ಕುಟುಂಬ ಭಾರತದಲ್ಲೇ ಇದೆ. ನಾನು ದೊಡ್ಡವರ ಹೆಸರುಗಳನ್ನ ತಗೆದುಕೊಂಡರೇ ನನ್ನ ಕುಟುಂಬ ಮುಗಿಸಿಬಿಡುತ್ತಾರೆ. ನಾನು ಭಾರತಕ್ಕೆ ಬಂದರೆ ನನ್ನನ್ನು ಮುಗಿಸುವ ಸಾಧ್ಯತೆಯಿದೆ. ಬಾಯಿ ಮುಚ್ಚಿಸಲು ಎಲ್ಲಾ ಪ್ಲಾನ್‍ಗಳನ್ನ ಮಾಡಲಾಗಿದೆ. ನನಗೊಸ್ಕರ ಭಾರತಕ್ಕೆ ಬರುತ್ತಿಲ್ಲ. ಜನರಿಗೆ ನ್ಯಾಯ ಕೊಡಿಸಲು ಬರುತ್ತಿದ್ದೇನೆ.
ನಾನು ಪೊಲೀಸ್ ಕಸ್ಟಡಿಯಲ್ಲಿ ಇದ್ದರೂ ನನ್ನನ್ನ ಹೊಡೆಯುತ್ತಾರೆ. ನನಗೆ ಗೊತ್ತಿದೆ, ನಾನು ಸಾಯುತ್ತೇನೆ ಅಂತ. ಗೊತ್ತಿದ್ದರೂ ನಾನು ಹೆದರುತ್ತಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ಅಲ್ಲೂ ನನಗೆ ರಕ್ಷಣೆ ಸಿಗಲ್ಲ. ಜಾಮೀನು ತಗೆದುಕೊಂಡು ಬಂದರೂ ರಸ್ತೆಯಲ್ಲಿ ನನ್ನ ಹೊಡೆಯುತ್ತಾರೆ. ಇದು ಸಾರ್ವಜನಿಕರ ಹಣ. ನಾನು ಮರಳಿಸುತ್ತೇನೆ ಎಂದು ಮನ್ಸೂರ್ ಹೇಳಿದ್ದಾನೆ.