Tag: illness

  • ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ ಯತ್ನಾಳ್

    ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ ಯತ್ನಾಳ್

    ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ್ದಾರೆ.

    ಮಂಗಳವಾರದಿಂದ ಯತ್ನಾಳ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ವೈದ್ಯರು ಯತ್ನಾಳ್ ಅವರಿಗೆ ಡ್ರಿಪ್ ಹಾಕಿ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ವೈದ್ಯರ ಮಾತನ್ನು ಲೆಕ್ಕಿಸದೇ ಯತ್ನಾಳ್ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

    ಯತ್ನಾಳ್ ಮೊದಲು ವಿಜಯಪುರ ನಗರದ ವಾರ್ಡ್ ಸಂಖ್ಯೆ 4ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಪುರಾತನ ಬಾವಿ ಜೀರ್ಣೋದ್ಧಾರ ಹಾಗೂ ಗಂಗಾ ಪೂಜೆಯಲ್ಲಿ ಯತ್ನಾಳ್ ಭಾಗವಹಿಸುವ ಮೂಲಕ ಜನಸೇವೆಯಲ್ಲಿ ತೊಡಗಿಕೊಂಡರು.

    ವೈದ್ಯರು ಯತ್ನಾಳ್ ಅವರ ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿದ್ದಾರೆ. ಹೀಗಿದರೂ ಯತ್ನಾಳ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

  • ಜೀವ ಉಳಿಸಿಕೊಳ್ಳಲು ಪ್ರತಿ 8 ಗಂಟೆಗೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ – ಸುಶ್ಮಿತಾ ಸೇನ್

    ಜೀವ ಉಳಿಸಿಕೊಳ್ಳಲು ಪ್ರತಿ 8 ಗಂಟೆಗೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ – ಸುಶ್ಮಿತಾ ಸೇನ್

    ಮುಂಬೈ: ನನ್ನ ಜೀವವನ್ನು ಉಳಿಸಿಕೊಳ್ಳಲು ಪ್ರತಿ 8 ಗಂಟೆಗೊಮ್ಮೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ ಎಂದು ಸ್ವತಃ ಮಾಜಿ ಭುವನ ಸುಂದರಿ, ನಟಿ ಸುಶ್ಮಿತಾ ಸೇನ್ ತಮ್ಮ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.

    ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. 2014ರಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್‍ನಿಂದ ಮೂತ್ರ ಜನಕಾಂಗದ(ಆ್ಯಡ್ರಿಯಲ್) ಕಾಯಿಲೆಯಿಂದ ಬಳಲುತ್ತಿದ್ದೆ. ಆಗ ನಾನು ಜೀವವನ್ನು ಉಳಿಸಿಕೊಳ್ಳಲು ಹೈಡ್ರೋಕಾರ್ಟಿಸೋನ್ ಔಷಧಿ ತೆಗೆದುಕೊಳ್ಳುತ್ತಿದ್ದೆ. ಅದು ಸ್ಟೀರಾಯ್ಡ್ ಆಗಿತ್ತು. ನಾನು ಜೀವಂತವಾಗಿ ಇರಬೇಕಾದರೆ ಪ್ರತಿ 8 ಗಂಟೆಗೆ ಒಮ್ಮೆ ಅದನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದರು.

    ನಾನು ಸೆಲೆಬ್ರೆಟಿ ಆಗಿದ್ದರಿಂದ ಈ ಕಾಯಿಲೆಯಿಂದ ಚೇತರಿಕೊಂಡು ಹೊರಬಂದ ಬಳಿಕ ತುಂಬಾ ಕಷ್ಟ ಪಟ್ಟೆ. ನಾನು ಮಾಜಿ ಭುವನ ಸುಂದರಿ, ಸುಂದರ ಮಹಿಳೆ ಕೂಡ ಹೌದು. ಆದರೆ ಈ ಕಾಯಿಲೆಗೆ ತುತ್ತಾದಾಗ ನನ್ನ ಕೂದಲುಗಳು ಉದುರಲು ಆರಂಭಗೊಂಡಿತ್ತು. ಆಗ ಪ್ರತಿ ನಿತ್ಯ ನಾನು ಕೂದಲನ್ನು ನೋಡಿ ಬೇಸರ ಪಡುತ್ತಿದ್ದೆ. ಸ್ವೀರಾಯ್ಡ್ ತೆಗೆದುಕೊಂಡಿದ್ದರಿಂದ ದೇಹದಲ್ಲಿ ಬಹಳ ಬದಲಾವಣೆಯಾಗಿತ್ತು ಎಂದು ತಿಳಿಸಿದರು.

    ನಾನು ತೆಗೆದುಕೊಳ್ಳುತ್ತಿದ್ದ ಸ್ಟೀರಾಯ್ಡ್ ವರ್ಕ್ ಔಟ್ ಮಾಡುವವರು ತೆಗೆದುಕೊಳ್ಳುವ ಡ್ರಗ್ ಆಗಿರಲಿಲ್ಲ. ಇದು ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು. ಇದು ನಿಮ್ಮ ತೂಕ ಹೆಚ್ಚು ಮಾಡುತ್ತದೆ. ಹಾಗೂ ಮೂಳೆಗಳ ಬಲವನ್ನು ಕಡಿಮೆ ಮಾಡುತ್ತಾ ಬರುತ್ತದೆ. ಇದು ಬಿಪಿ ಹೆಚ್ಚು ಮಾಡುತ್ತದೆ. ಆಗ ನಾನು ಬಹಳ ಅನಾರೋಗ್ಯಕ್ಕೆ ತುತ್ತಾಗಿದ್ದೆ. ನನ್ನ ಎಬ್ಬರು ಮಕ್ಕಳನ್ನು ಒಬ್ಬಳೆ ನೋಡಿಕೊಳ್ಳಬೇಕಿತ್ತು ಎಂದು ತಮ್ಮ ನೋವನ್ನು ಹೇಳಿಕೊಂಡರು.

    ನನಗಿದ್ದ ಅನಾರೋಗ್ಯದ ಸಮಸ್ಯೆ ನನಗೆ ಹುಚ್ಚು ಹಿಡಿಯುವಂತೆ ಮಾಡುತಿತ್ತು. ಆದರೆ ಶತ್ರುಗಳು ನಮ್ಮಿಂದ ದೂರ ಹೋದರೆ ನಮ್ಮ ಸಾಮರ್ಥ್ಯವೇನು ಎಂದು ನಮಗೆ ತಿಳಿಯುವುದಿಲ್ಲ. ಹಾಗೆಯೇ 2014 ಹಾಗೂ 2016ರಲ್ಲಿ ನಾನಿದ್ದ ಇದ್ದ ಪರಿಸ್ಥಿತಿಗೂ ಇಂದು ಇರುವ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಇದರಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ವಿವರಿಸಿದರು.

    ಆ ಎರಡು ವರ್ಷದಲ್ಲಿ ನಾನು ಅನಾರೋಗ್ಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದೆ. ವೈದ್ಯರಿಗೆ ನನ್ನ ವೃತ್ತಿಯನ್ನು ಬದಲಿಸುತ್ತೇನೆ ಎಂದಿದ್ದೆ. ವೈದ್ಯರು ನಿರಾಕರಿಸಿದ್ದರೂ ಆ್ಯಟಿ ಗ್ರಾವಿಟಿ ಜಿಮ್ನಾಸ್ಟಿಕ್ ಮಾಡಲು ಆರಂಭಿಸಿದೆ. ಯೋಗ ಮಾಡುವುದನ್ನು ಶುರುಮಾಡಿದೆ. ಆದರೆ 2016ರ ಅಕ್ಟೋಬರ್ ನಲ್ಲಿ ಮತ್ತೆ ನಾನು ಅನಾರೋಗ್ಯಕ್ಕೆ ಗುರಿಯಾದೆ. ಆಗ ನನ್ನನ್ನು ಅಬುಧಾಬಿನಲ್ಲಿದ್ದ ಕ್ಲೇವ್ ಲ್ಯಾಂಡ್ ಆಸ್ಪತ್ರಗೆ ದಾಖಲಿಸಲಾಗಿತ್ತು. ಅಲ್ಲಿ ನನ್ನನ್ನು ವೈದ್ಯರು ಪರೀಕ್ಷಿಸಿ, ಚಿಕಿತ್ಸೆ ನೀಡಿ ವಾಪಸ್ ದುಬೈಗೆ ಕಳುಹಿಸಿದರು. ಬಳಿಕ ವೈದ್ಯರು ಕರೆ ಮಾಡಿ ಮತ್ತೆ ನಿಮ್ಮ ದೇಹದಲ್ಲಿ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ನನ್ನ 35 ವರ್ಷಗಳ ಅನುಭವದಲ್ಲಿ ಈ ಕಾಯಿಲೆ ಇದ್ದವರು ಚೇತರಿಸಿಕೊಂಡು ಬಳಿಕ ಅವರಲ್ಲಿ ಮತ್ತೆ ಕಾರ್ಟಿಸೋಲ್ ಹಾರ್ಮೋನ್ ಉತ್ಪತ್ತಿಯಾಗಿದ್ದನ್ನ ನೋಡಿಲ್ಲ ಎಂದಿದ್ದರು ಅಂತ ತಮ್ಮ ಕಾಯಿಲೆ ಬಗ್ಗೆ ಹಂಚಿಕೊಂಡರು.

    ಈ ಬಗ್ಗೆ ಹಿಂದೆ ಯಾರಿಗೂ ನಾನು ಪ್ರತಿಕ್ರಿಯಿಸಿರಲಿಲ್ಲ. ಆದರೆ 2016ರಲ್ಲಿ ನಾನು ಸ್ಟೀರಾಯ್ಡ್ ತೆಗೆದುಕೊಳ್ಳುವುದನ್ನ ನಿಲ್ಲಿಸಿದೆ. ಆದಾದ ಬಳಿಕ 2018ರ ಆಗಸ್ಟ್ ವರೆಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಿರಲಿಲ್ಲ. ಆದರೆ ಬಳಿಕ ಮತ್ತೆ ಕಾಯಿಲೆಯ ಗುಣಲಕ್ಷಣ ಆರೋಗ್ಯದಲ್ಲಿ ಏರುಪೇರು ಮಾಡಿತ್ತು ಎಂದು ಸುಶ್ಮಿತಾ ತಿಳಿಸಿದ್ದಾರೆ.

    ಸದ್ಯ ತಮಗಿದ್ದ ಕಾಯಿಲೆಯನ್ನು ಎದುರಿಸಿ ಈಗ ಸುಶ್ಮಿತಾ ಅವರು ಆರೋಗ್ಯವಾಗಿದ್ದಾರೆ. ನನಗೆ ಧೈರ್ಯ ತುಂಬಿ, ನನ್ನ ಜೊತೆ ಇದ್ದ ಕೆಲ ಮಂದಿಗೆ ತಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂದರ್ಶನದಲ್ಲಿ ಸುಶ್ಮಿತ ಸೇನ್ ಹೇಳಿಕೊಂಡಿದ್ದಾರೆ.

  • ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ನಟಿ ಅನುಷ್ಕಾ ಶರ್ಮಾ

    ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ನಟಿ ಅನುಷ್ಕಾ ಶರ್ಮಾ

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.

    ಅನುಷ್ಕಾ ಶರ್ಮಾ ಸುಮಾರು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಅವರಿಗೆ ಈ ನೋವು ಹೆಚ್ಚಾಗಿದೆ. ಅಲ್ಲದೆ ಇತ್ತೀಚೆಗೆ ಅನುಷ್ಕಾ ಆಸ್ಪತ್ರೆಗೆ ಹೋಗುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಈ ಫೋಟೋ ನೋಡಿ ಅನುಷ್ಕಾ ಗರ್ಭಿಣಿ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

    bulging disc ಬೆನ್ನಿಗೆ ಸಂಬಂಧಪಟ್ಟಿದ್ದ ಕಾಯಿಲೆ. ಈ ಕಾಯಿಲೆ ಇದ್ದರೆ ಸೊಂಟದ ಮೂಳೆ ನೋವಾಗುತ್ತದೆ. ಅಲ್ಲದೆ ಒಂದು ಕಡೆ ಕೂರಲು ಕಷ್ಟವಾಗುತ್ತದೆ. ಯಾವುದೇ ವ್ಯಕ್ತಿ ಹೆಚ್ಚು ಸಮಯ ಒಂದೇ ಕಡೆ ಕುಳಿತಿದ್ದರೆ ಈ ಸಮಸ್ಯೆ ಬರುತ್ತದೆ. ಅನುಷ್ಕಾಗೆ ಎರಡನೇ ಬಾರಿ ಈ ಸಮಸ್ಯೆ ಕಾಡುತ್ತಿದೆ.

    ಬೆನ್ನು ನೋವು ಇದ್ದರೂ ಅನುಷ್ಕಾ ಮೇ 30ರಿಂದ ಆರಂಭವಾಗಲಿರುವ ವಿಶ್ವ ಕಪ್ ಪಂದ್ಯದಲ್ಲಿ ತಮ್ಮ ಪತಿ ವಿರಾಟ್ ಕೊಹ್ಲಿ ಜೊತೆ ಭಾಗಿಯಾಗಲಿದ್ದಾರೆ. ತನ್ನ ಕಾಯಿಲೆಯಿಂದ ವಿರಾಟ್ ಗಮನ ಕ್ರಿಕೆಟ್ ಪಂದ್ಯದಿಂದ ಹೊರಬರುವುದು ಬೇಡ ಎಂದು ಅನುಷ್ಕಾ ತಮ್ಮ ಪತಿ ಜೊತೆ ಹೋಗುತ್ತಿದ್ದಾರೆ.

    ಅನುಷ್ಕಾ ಶರ್ಮಾ ಕೊನೆಯದಾಗಿ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನಟಿಸಿದ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಅವರು ಬೇರೆ ಯಾವ ಚಿತ್ರ ಕೂಡ ಒಪ್ಪಿಕೊಂಡಿಲ್ಲ. ಈ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಕೂಡ ಅಭಿನಯಿಸಿದ್ದು, ಬಾಕ್ಸ್ ಆಫೀಸ್‍ನಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ.

  • ಪತಿಯ ಅಗಲಿಕೆಯ 1 ಗಂಟೆಯ ನಂತ್ರ ಪತ್ನಿಯೂ ಸಾವು

    ಪತಿಯ ಅಗಲಿಕೆಯ 1 ಗಂಟೆಯ ನಂತ್ರ ಪತ್ನಿಯೂ ಸಾವು

    ಬಳ್ಳಾರಿ: ಪತಿ ಮತ್ತು ಪತ್ನಿ ಇಬ್ಬರೂ ಒಂದೇ ದಿನ ಸಾವು ಕಂಡಿರುವ ಘಟನೆ ಬಳ್ಳಾರಿ ತಾಲೂಕು ಬಿಸಲಳ್ಳಿಯಲ್ಲಿ ನಡೆದಿದೆ.

    ಬೆಳ್ಳಿ ಕಟ್ಟೆಪ್ಪ (86) ಮತ್ತು ಪತ್ನಿ ಲಕ್ಷ್ಮಮ್ಮ (80) ಮೃತ ದಂಪತಿ. ಬೆಳ್ಳಿ ಕಟ್ಟೆಪ್ಪ ನಿವೃತ್ತ ಶಿರಸ್ತೇದಾರರಾಗಿದ್ದು, ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಇಂದು ನಸುಕಿನ ಜಾವ ಕಟ್ಟೆಪ್ಪ ಮೃತಪಟ್ಟಿದ್ದಾರೆ.

    ಪತಿಯ ಸಾವಿನ ನೋವಿಂದ ಪತ್ನಿ ಲಕ್ಷ್ಮಮ್ಮ ಒಂದು ಗಂಟೆಯ ನಂತರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಹೀಗಾಗಿ ಮದುವೆಯಾದಗಿನಿಂದ ಒಟ್ಟಾಗಿ ಸಾಂಸಾರಿಕ ಜೀವನ ಮಾಡುತ್ತಿದ್ದ ಬೆಳ್ಳಿ ಕಟ್ಟೆಪ್ಪ ಮತ್ತು ಲಕ್ಷ್ಮಮ್ಮ ಸಾವಿನಲ್ಲೂ ಒಂದಾಗಿದ್ದಾರೆ. ಒಂದೇ ದಿನ ದಂಪತಿಯ ಸಾವಿನ್ನಪ್ಪಿದ್ದರಿಂದ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

    ಸಾವಿನಲ್ಲೂ ಒಂದಾದ ದಂಪತಿಯ ಅಂತ್ಯಕ್ರಿಯೆಯನ್ನೂ ಅಕ್ಕಪಕ್ಕದಲ್ಲಿಯೇ ಮಾಡಬೇಕೆಂದು ಮಕ್ಕಳು ತೀರ್ಮಾನಿಸಿದ್ದಾರೆ.

  • ಕಳೇಬರ ಪತ್ತೆ – ರಾಮನಗರಕ್ಕೂ ಮಂಗನ ಕಾಯಿಲೆ ಎಂಟ್ರಿ?

    ಕಳೇಬರ ಪತ್ತೆ – ರಾಮನಗರಕ್ಕೂ ಮಂಗನ ಕಾಯಿಲೆ ಎಂಟ್ರಿ?

    ರಾಮನಗರ: ಮಲೆನಾಡಿಗರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ರಾಮನಗರಕ್ಕೂ ಕಾಲಿಟ್ಟಿರುವ ಸಂಶಯ ಮೂಡಿದೆ.

    ರಾಮನಗರ ಹೊರವಲಯದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರುವ ಮಂಗದ ದೇಹ ಪತ್ತೆಯಾಗಿದ್ದು, ಮಂಗನ ಕಾಯಿಲೆ ಶಂಕೆ ಹಿನ್ನೆಲೆಯಲ್ಲಿ ಮೃತ ಮಂಗದ ಮರಣೋತ್ತರ ಪರೀಕ್ಷೆ ನಡೆಸಿ ದೇಹದ ಕೆಲ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ರಾಮನಗರ ಹೊರವಲಯದ ಕಾಮತ್ ಹೋಟೆಲ್ ಬಳಿ ಮಂಗ ಮೃತಪಟ್ಟಿದ್ದು, ಸುಮಾರು 5 ವರ್ಷದ ಹೆಣ್ಣು ಮಂಗ ಸಾವನ್ನಪ್ಪಿದೆ. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಮಂಗ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಪಶುವೈಧ್ಯಾಧಿಕಾರಿಗಳ ಮೂಲಕ ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಮಂಗನ ದೇಹದಲ್ಲಿ ಗೆಡ್ಡೆಯೊಂದು ಕಾಣಿಸಿಕೊಂಡಿದೆ. ಅದು ಮೇಲ್ನೋಟಕ್ಕೆ ಅನಾರೋಗ್ಯದಿಂದ ಆಹಾರ ಸೇವಿಸದೇ ಸಾವನ್ನಪ್ಪಿರುವ ಸಂದೇಹವನ್ನು ವೈದ್ಯಾಧಿಕಾರಿಗಳು ಹೊರಹಾಕಿದ್ದಾರೆ.

    ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನ ಪುಣೆ ಹಾಗೂ ಬೆಂಗಳೂರಿನ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ. ರಾಮನಗರ ಹೊರವಲಯದ ಕಾಮತ್ ಹೋಟೆಲ್, ಜನಪದಲೋಕ, ಕೆಂಗಲ್ ಆಂಜನೇಯ ದೇವಾಲಯದ ಬಳಿ ಸುಮಾರು ಐನೂರಕ್ಕು ಹೆಚ್ಚು ಮಂಗಗಳು ವಾಸ ಮಾಡುತ್ತಿದ್ದು, ಇತ್ತೀಚೆಗೆ ಕೆಲವು ಮಂಗಗಳು ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ರಾಜ್ಯದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಹಲವರು ಸಾವನ್ನಪ್ಪಿರುವ ಬಗ್ಗೆ ಇದೀಗ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಸಾವನ್ನಪ್ಪಿರುವ ಕೋತಿಯ ಮರಣೋತ್ತರ ಪರೀಕ್ಷೆಯನ್ನ ಮುಂಜಾಗ್ರತಾ ಕ್ರಮವಾಗಿ ನಡೆಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರಕ್ತ ಹಾಗೂ ದೇಹದ ಕೆಲವು ಭಾಗಗಳನ್ನು ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆಯ ಎಸಿಎಫ್ ರಾಮಕೃಷ್ಣಪ್ಪ ಮಾಹಿತಿ ನೀಡಿದ್ದಾರೆ. ಇತ್ತ ಮಂಗನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹೋಟೆಲ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪೂಜೆ ಪುನಸ್ಕಾರ ನಡೆಸಿ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಾಜಿ ಶಾಸಕ ಎಂ.ಪಿ.ರವೀಂದ್ರ ಇನ್ನಿಲ್ಲ

    ಮಾಜಿ ಶಾಸಕ ಎಂ.ಪಿ.ರವೀಂದ್ರ ಇನ್ನಿಲ್ಲ

    ಬೆಂಗಳೂರು: ಮಾಜಿ ಶಾಸಕ ಎಂ.ಪಿ. ರವೀಂದ್ರ ಇಂದು ಬೆಳಗಿನ ಜಾವ 3.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

    ಮೂರು ದಿನಗಳ ಹಿಂದೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರವೀಂದ್ರ ಅವರನ್ನು ನಗರದ ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಪುತ್ರರಾಗಿದ್ದ ರವೀಂದ್ರ ದಾವಣಗೆರೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ರವೀಂದ್ರ ಗುರುತಿಸಿಕೊಂಡಿದ್ದರು.

    ಶಾಸಕರಾಗಿದ್ದಲೇ ರವೀಂದ್ರ ಅವರ ಆರೋಗ್ಯದ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಕ್ರಮ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಎಂ.ಪಿ.ರವೀಂದ್ರರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ಹೂವಿನಹಡಗಲಿಯಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆರೋಗ್ಯವಂತ ಮಗುವಿಗಾಗಿ ಸ್ವಂತ ಮಗಳನ್ನೇ ಕೊಂದು ಮನೆಯಲ್ಲೇ ಹೂತಿಟ್ರು!

    ಆರೋಗ್ಯವಂತ ಮಗುವಿಗಾಗಿ ಸ್ವಂತ ಮಗಳನ್ನೇ ಕೊಂದು ಮನೆಯಲ್ಲೇ ಹೂತಿಟ್ರು!

    ಲಕ್ನೋ: ಆರೋಗ್ಯವಂತ ಮಗುವನ್ನು ಪಡೆಯಲು ಮಂತ್ರವಾದಿಯ ಮಾತು ಕೇಳಿ ದಂಪತಿಯು ತಮ್ಮ 6 ವರ್ಷದ ಮಗಳನ್ನು ಕೊಂದು ಮನೆಯಲ್ಲಿ ಹೂತು ಹಾಕಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರದಬಾದ್ ನಲ್ಲಿ ನಡೆದಿದೆ.

    6 ವರ್ಷದ ಬಾಲಕಿ ತಾರಾ ತನ್ನ ಪೋಷಕರಿಂದಲೇ ಹತ್ಯೆಗೀಡಾದ ದುರ್ದೈವಿ. ತಾರಾ ಹುಟ್ಟಿನಿಂದಲೂ ಅಪೌಷ್ಟಿಕತೆ ಹಾಗೂ ರಿಕೆಟ್ಸ್ ಕಾಯಿಲೆಯಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿಗೆ ಹಲವು ವರ್ಷಗಳಿಂದಲೂ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ. ಇದರಿಂದ ರೋಸಿಹೋದ ಪೋಷಕರು ಕೊನೆಗೆ ಮಂತ್ರವಾದಿಯ ಮೊರೆ ಹೋಗಿದ್ದರು.

    ಮಂತ್ರವಾದಿಯು ದಂಪತಿಗೆ ನಿಮ್ಮ ಬದುಕಿರುವ ಮಗಳನ್ನು ಕೊಂದು ಮನೆಯಲ್ಲಿಯೇ ಹೂತು ಹಾಕಿದರೆ, ಮುಂದೆ ನಿಮಗೆ ಆರೋಗ್ಯವಂತ ಮಗು ಹುಟ್ಟುತ್ತದೆ ಎಂದು ಸಲಹೆ ನೀಡಿದ್ದಾನೆ. ಈತನ ಸಲಹೆಯಿಂದ ಪ್ರಭಾವಿತರಾದ ದಂಪತಿ ತಮ್ಮ 6 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ಅಲ್ಲದೇ ಬಾಲಕಿಯನ್ನು ಹೂತುಹಾಕುವ ವೇಳೆ ನೆರೆಮನೆಯ ಸದಸ್ಯರು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಾಲಕಿಯು ಮೃತಪಟ್ಟಾಗ ಆಕೆ ಯಾವುದೇ ಆಹಾರವನ್ನು ಸೇವಿಸಿರಲಿಲ್ಲ ಹಾಗೂ ತುಂಬಾ ಒದ್ದಾಡಿ ಮೃತಪಟ್ಟಿದ್ದಾಳೆಂದು ವರದಿ ಬಂದಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ರವೀಂದ್ರ ಗೌರ್, ಬಾಲಕಿಯು ಅಪೌಷ್ಠಿಕ ಖಾಯಿಲೆಯಿಂದ ಬಳಲುತ್ತಿದ್ದರಿಂದ ಮಂತ್ರವಾದಿಯ ಮಾತನ್ನು ಕೇಳಿ, ಪೋಷಕರೆ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರನ್ನು ಬಂಧಿಸಿದ್ದು, ಕೃತ್ಯಕ್ಕೆ ಸಹಕರಿಸಿದ ಆಕೆಯ ಅಜ್ಜಿಯನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅನಾರೋಗ್ಯ, ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆಗೆ ಶರಣು

    ಅನಾರೋಗ್ಯ, ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆಗೆ ಶರಣು

    ಕೋಲಾರ: ಅನಾರೋಗ್ಯ ಹಾಗೂ ಸಾಲಬಾಧೆ ತಾಳಲಾರದೆ ದಂಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮಂಡಿಕಲ್ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೆಂಕಟರಮಣಪ್ಪ (57), ಪಾರ್ವತಮ್ಮ (45) ಆತ್ಮಹತ್ಯೆಗೆ ಶರಣಾದ ದಂಪತಿ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಗಂಡನ ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಸತಿ-ಪತಿ ನೇಣಿಗೆ ಶರಣಾಗಿದ್ದಾರೆ ಎಂದು ಮಗ ನರೇಶ್ ದೂರಿನಲ್ಲಿ ತಿಳಿಸಿದ್ದಾರೆ.

    ಕಳೆದ 5 ವರ್ಷಗಳಿಂದ ವೆಂಕಟರಮಣಪ್ಪ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದರು. ಸಾಲಬಾಧೆ ತಾಳಲಾರದೆ ಸಾವಿಗೆ ಶರಣಾಗಿದ್ದಾರೆ ಎಂದು ಮಗ ನರೇಶ್ ಮುಳಬಾಗಿಲು ಪೊಲೀಸರಿಗೆ ತಿಳಿಸಿದ್ದಾರೆ.

    ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಶಶಿಕಲಾ ಪತಿಗೆ ತೀವ್ರ ಅನಾರೋಗ್ಯ- ಜಾಮೀನು ಅರ್ಜಿ ಸಲ್ಲಿಕೆಗೆ ಚಿನ್ನಮ್ಮ ಪ್ಲಾನ್

    ಶಶಿಕಲಾ ಪತಿಗೆ ತೀವ್ರ ಅನಾರೋಗ್ಯ- ಜಾಮೀನು ಅರ್ಜಿ ಸಲ್ಲಿಕೆಗೆ ಚಿನ್ನಮ್ಮ ಪ್ಲಾನ್

    ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪತಿ ಎಂ ನಟರಾಜನ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಶಿಕಲಾ ಪತಿ ನಟರಾಜನ್‍ಗೆ ಯಕೃತ್ ಹಾಗು ಮೂತ್ರಪಿಂಡಗಳು ವಿಫಲವಾಗಿದ್ದು ಆರೋಗ್ಯ ಗಂಭೀರವಾಗಿದೆ. ಸದ್ಯ ಚೆನ್ನೈನ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಪತಿಯ ಆರೋಗ್ಯ ಚಿಂತಾಜನಕ ಸ್ಥಿತಿ ತಲುಪಿರೋ ಬೆನ್ನಲ್ಲೇ ಇವತ್ತು ಅಥವಾ ನಾಳೆ ಜಾಮೀನು ಕೋರಿ ಶಶಿಕಲಾ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ.

    74 ವರ್ಷದ ನಟರಾಜನ್‍ಗೆ ಭಾನುವಾರ ಸುಮಾರು 8 ಗಂಟೆಗಳ ಕಾಲ ನಿರಂತರವಾಗಿ ಡಯಾಲಿಸಿಸ್ ಮಾಡಲಾಗಿದ್ದು, ಕಿಡ್ನಿ ಹಾಗು ಲಿವರ್ ದಾನಿಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

  • ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು: ಹಸಿರು ಬಣ್ಣದ ಪಾಚಿಗಟ್ಟಿದ ಕೊಳಚೆ ನೀರನ್ನ ಕನಿಷ್ಠ ಪ್ರಮಾಣದ ಶುದ್ಧೀಕರಣವನ್ನೂ ಮಾಡದೇ ನಗರ ಸಭೆ ಕೊಳಾಯಿಗೆ ನೇರವಾಗಿ ಬಿಡುಗಡೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ರಾಂಪುರ ಕೆರೆಯಿಂದ ನಗರಕ್ಕೆ ಹರಿಸುವ ನೀರನ್ನ ಶುದ್ದೀಕರಿಸುವ ಕನಿಷ್ಠ ಕೆಲಸವನ್ನೂ ನಗರಸಭೆ ಮಾಡುತ್ತಿಲ್ಲ. ಶುದ್ಧೀಕರಣ ಘಟಕ ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದು ಹೋಗಿದೆ. ಇಲ್ಲಿನ ಯಂತ್ರೋಪಕರಗಳು ತುಕ್ಕು ಹಿಡಿದಿದ್ದು ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಕೆಲಸದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಕೊಳಚೆ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.

    ನೀರಿನಲ್ಲಿ ಹುಳು, ಕಸಕಡ್ಡಿ ಬರುವುದರಿಂದ ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜಲ ಮೂಲದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ ಕೃಷ್ಣ, ತುಂಗಾಭದ್ರ ಎರಡು ನದಿಗಳಿದ್ದರೂ ಕೊಳಚೆ ನೀರನ್ನ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವತಃ ವೈದ್ಯರಾಗಿದ್ದರೂ ಜನರಿಗೆ ಶುದ್ಧ ನೀರನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಾಯಿಕೊಡೆಯಂತೆ ತಲೆಎತ್ತಿಕೊಳ್ಳುತ್ತಿವೆ.

    ಒಟ್ನಲ್ಲಿ ರಾಯಚೂರಿನ ಜನತೆ ನಿತ್ಯ ನರಕವನ್ನ ನೋಡುತ್ತಿದ್ದು, ಇದೇ ಸ್ವರ್ಗ ಅಂತ ಆಸ್ಪತ್ರೆಯ ಬಿಲ್ಲು ಕಟ್ಟುತ್ತಾ ಬದುಕುತ್ತಿದ್ದಾರೆ. ಇಲ್ಲಿನ ಜನ ಇನ್ನೂ ಬದುಕಿದ್ದಾರೆ ಅಂತ ನಗರಸಭೆ ಹಾಗೂ ಜಿಲ್ಲಾಡಳಿತ ಮಲೀನವಾದ ನೀರನ್ನೇ ಕುಡಿಯಲು ಸರಬರಾಜು ಮಾಡುತ್ತಿವೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನ ಒದಗಿಸಬೇಕಿದೆ.