Tag: illegal

  • ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತು – 7 ಜನ ಪಿಡಿಓಗಳು ಅಮಾನತು

    ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತು – 7 ಜನ ಪಿಡಿಓಗಳು ಅಮಾನತು

    ಬೀದರ್ : ಭಾಲ್ಕಿ ತಾಲೂಕಿನ ವಿವಿಧ ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾದ ಹಿನ್ನಲೆಯಲ್ಲಿ 7 ಜನ ಪಿಡಿಓಗಳನ್ನು ಅಮಾನತು ಮಾಡಲಾಗಿದೆ.

    ಬೀದರ್‍ನ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ 2015 ರಿಂದ 2019ರವರೆಗೆ ಅನುಷ್ಠಾನಗೊಂಡ ವಿವಿಧ ವಸತಿ ಯೋಜನೆಯಲ್ಲಿ ಅಕ್ರಮ ಸಾಬೀತಾಗಿದೆ. ಈ ಹಿನ್ನಲೆ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ್ ಈ ಆದೇಶ ಹೊರಡಿಸಿದ್ದಾರೆ.

    ಬಾಳೂರು ಗ್ರಾಮ ಪಂಚಾಯತಿ ಪಿಡಿಓ ಸಂಗಮೇಶ ಸಾವಳೆ, ಬೀರಿ ಗ್ರಾಮಪಂಚಾಯತಿ ಪಿಡಿಓ ಮಲ್ಲೇಶ್ ಮಾರುತಿ, ಜ್ಯಾಂತಿ ಗ್ರಾಮಪಂಚಾಯತಿ ಪಿಡಿಓ ರೇವಪ್ಪ, ಮೊರಂಬಿ ಗ್ರಾಮಪಂಚಾಯತಿ ಪಿಡಿಓ ರೇಖಾ, ತಳವಾಡ ಕೆ ಗ್ರಾಮಪಂಚಾಯತಿ ಪಿಡಿಓ ಚಂದ್ರಶೇಖರ, ವರವಟ್ಟಿ ಗ್ರಾಮಪಂಚಾಯತಿ ಪಿಡಿಓ ಸಂತೋಷ್, ಎಣಕೂರು ಗ್ರಾಮಪಂಚಾಯತಿ ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

    ವಸತಿ ಯೋಜನೆಯ ಮನೆಗಳನ್ನು ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡದೇ, ತಮ್ಮ ಬೆಂಬಲಿಗರಿಗೆ ಖಂಡ್ರೆ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ವಸತಿ ಯೋಜನೆಯ ಮನೆಗಳ ಹಂಚಿಕೆಯಲ್ಲಿ ಅಕ್ರಮ ಮಾಡಿದ್ದಾರೆ ಎಂದು ಸಂಸದ ಭಗವಂತ್ ಖೂಬಾ ಆರೋಪ ಮಾಡಿದ್ದರು.

    ಸಂಸದರ ಆರೋಪ ಹಿನ್ನೆಲೆ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಭಾಲ್ಕಿಗೆ ಬಂದು ತನಿಖೆ ಮಾಡಿತ್ತು. ಒಟ್ಟು 26 ಸಾವಿರ ವಸತಿಗಳಲ್ಲಿ 9 ಸಾವಿರ ವಸತಿಗಳಲ್ಲಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗಿತ್ತು. ರಾಜ್ಯ ತಂಡ ತನಿಖೆ ಮಾಡಿ 8 ತಿಂಗಳ ಬಳಿಕ ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ಈ ಕ್ರಮ ತೆಗೆದುಕೊಂಡಿದೆ.

  • ನಂದಿಬೆಟ್ಟದ ತಪ್ಪಲಲ್ಲಿ ಎಗ್ಗಿಲ್ಲದೇ ನಡೀತಿದೆ ಅಕ್ರಮ ಬ್ಲಾಸ್ಟಿಂಗ್

    ನಂದಿಬೆಟ್ಟದ ತಪ್ಪಲಲ್ಲಿ ಎಗ್ಗಿಲ್ಲದೇ ನಡೀತಿದೆ ಅಕ್ರಮ ಬ್ಲಾಸ್ಟಿಂಗ್

    – ಗ್ರಾಮಸ್ಥರಿಂದ ಗಂಭೀರ ಆರೋಪ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲು ಕಣಿವೆನಾರಾಯಪುರ ಬಳಿಯ ಸರ್ವೆ ನಂಬರ್ 39 ರ ಮಂಜುನಾಥ ಎಂಟರ್ ಪ್ರೈಸರ್ಸ್ ಕಲ್ಲು ಕ್ವಾರಿಯಲ್ಲಿ ಸ್ಪೋಟಕ ವಸ್ತುಗಳಿರುವುದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ತಿಳಿದಿದೆ.

    ಶಿವಮೊಗ್ಗ ಹುಣಸೋಡು ಗಣಿ ಪ್ರದೇಶದಲ್ಲಾದ ಬ್ಲಾಸ್ಟಿಂಗ್ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಕಲ್ಲು ಕ್ವಾರಿಯಲ್ಲಿ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ಸ್ ಪತ್ತೆಯಾಗಿವೆ. ಇನ್ನೂ ಬ್ಲಾಸ್ಟಿಂಗ್ ನಡೆಸಲು ಕ್ವಾರಿಯಲ್ಲಿ ಸಣ್ಣ ಸಣ್ಣ ರಂಧ್ರಗಳನ್ನ ಕೊರೆದು ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ಸ್ ಇಟ್ಟು ಸಿದ್ದತೆ ನಡೆಸಿದ್ದ ದೃಶ್ಯ ಸಹ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಅಕ್ರಮವಾಗಿ ಪರವಾನಿಗೆ ಪಡೆಯದೆ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಅಂತ ಸುತ್ತ ಮುತ್ತಲಿನ ಗಣಿಭಾಧಿತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕಣಿವೆ ನಾರಾಯಪುರ ಗಣಿ ಪ್ರದೇಶದಲ್ಲಿ ಹತ್ತಾರು ಕಲ್ಲು ಕ್ವಾರಿಗಳಿದ್ದು ಕೆಲವರು ಬ್ಲಾಸ್ಟಿಂಗ್ ನಡೆಸಲು ಅನುಮತಿ ಪಡೆದಿದ್ದಾರೆ ಇನ್ನು ಕೆಲವರು ಪಡೆದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಸಕ್ರಮದವರ ನೆರಳಲ್ಲಿ ಅಕ್ರಮವಾಗಿ ಕೆಲವರು ರಾಜಾರೋಷವಾಗಿ ಬ್ಲಾಸ್ಟಿಂಗ್ ನಡೆಸುತ್ತಿದ್ದಾರೆ. ಪ್ರತಿ ದಿನ ಸಂಜೆ 6 ಗಂಟೆಗೆ ಬ್ಲಾಸ್ಟಿಂಗ್ ನಡೆಸುತ್ತಿದ್ದು ಸುತ್ತ ಮುತ್ತಲ ಗ್ರಾಮಗಳ ಜನ ಬ್ಲಾಸ್ಟಿಂಗ್ ಬೆದರುವಂತಾಗಿದೆ.

    ಅಕ್ರಮವಾಗಿ ನಡೆಯುತ್ತಿರುವ ಬ್ಲಾಸ್ಟಿಂಗ್ ಎಷ್ಟೇ ಮನವಿ ದೂರುಗಳು ಕೊಟ್ಟರು ಸಂಬಂಧಪಟ್ಟ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಗಣಿ ಇಲಾಖೆಯವರು ನಮಗೆ ಸ್ಪೋಟಕಗಳು ಸಂಬಂಧಪಡಲ್ಲ ಅಂದ್ರೆ ಪೆÇಲೀಸ್ ಇಲಾಖೆ ಗಣಿ ಇಲಾಖೆಯವರತ್ತ ಬೊಟ್ಟು ಮಾಡುತ್ತಿದ್ದಾರೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನೋ ಹಾಗೆ ಗಣಿ ಮಾಲೀಕರು ಮಾತ್ರ ರಾಜಾರೋಷವಾಗಿ ಬ್ಲಾಸ್ಟಿಂಗ್ ಮಾಡಿ ಬೆಟ್ಟಗುಡ್ಡಗಳನ್ನು ಕರಗಿಸಿ ನೀರು ಕುಡಿದಷ್ಟೇ ಸಲೀಸಾಗಿ ಪುಡಿ ಪುಡಿ ಮಾಡ್ತಿದ್ದಾರೆ. ಈಗಾಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ತಾರಾ ಕಾದು ನೋಡಬೇಕಿದೆ.

  • ಅಂಗೈಯಲ್ಲಿ ಸಿಕ್ತಾರೆ ಹುಡುಗಿಯರು- ವಾಟ್ಸಪ್, ಫೋನ್‍ನಲ್ಲೇ ಸಿಕ್ತಾರೆ ರೂಪಸಿಯರು

    ಅಂಗೈಯಲ್ಲಿ ಸಿಕ್ತಾರೆ ಹುಡುಗಿಯರು- ವಾಟ್ಸಪ್, ಫೋನ್‍ನಲ್ಲೇ ಸಿಕ್ತಾರೆ ರೂಪಸಿಯರು

    – ಪೊಲೀಸ್ ಮಹಾನಿರ್ದೇಶಕರಿಗೆ ರಾಮಲಿಂಗಾ ರೆಡ್ಡಿ ಪತ್ರ

    ಬೆಂಗಳೂರು: ಮಾಯನಗರಿ ಬೆಂಗಳೂರಿನಲ್ಲಿ ಅಫೀಶಿಯಲ್ ಆಗಿ ಕಾನೂನು ಬಾಹಿರವಾಗಿ ಎಗ್ಗಿಲ್ಲದೆ ಆನ್‍ಲೈನ್ ಮಾಂಸದ ದಂಧೆ ನಡೆಯುತ್ತಿದೆ. ಈ ದಂಧೆಗೆ ಬ್ರೇಕ್ ಹಾಕುವಂತೆ ಮಾಜಿ ಗೃಹ ಮಂತ್ರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

    ಕೋರಮಂಗಲ ಅಫೀಶಿಯಲ್ ವೆಬ್‍ಸೈಟ್‍ವೊಂದರ ಮೂಲಕ ಕಾನೂನು ಬಾಹಿರವಾಗಿ ಬಣ್ಣ-ಬಣ್ಣದ ಹುಡುಗಿಯರ ಫೋಟೋ ಹಾಕಿ ಗಂಟೆ ಲೆಕ್ಕದಲ್ಲಿ ನಿಮ್ಮಲ್ಲಿಗೆ ಕಾಲ್ ಗರ್ಲ್ಸ್ ಗಳನ್ನು ಕಳಿಸಿಕೊಡುತ್ತಾರೆ. ಪ್ರತಿ ಗಂಟೆಗೆ 15 ಸಾವಿರದಿಂದ ಫುಲ್ ನೈಟ್‍ಗೆ 40,000 ಹಣ ಪಡೆದು ನೀವು ಚಾಯ್ಸ್ ಮಾಡಿದ ಸ್ಥಳಕ್ಕೆ ಮಾಡೆಲ್ಸ್ ಗಳನ್ನ ಕಳಿಸಿಕೊಡುತ್ತಿದ್ದಾರೆ.

    ಒಂದು ಚಿಕ್ಕ ಮನೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದರೆ, ಸಿಸಿಬಿ ಪೊಲೀಸರು ಅದನ್ನ ಹುಡುಕಿ ದಾಳಿ ಮಾಡಿ ಬಂಧಿಸುತ್ತಾರೆ. ಕೋರಮಂಗಲ ಅಫೀಶಿಯಲ್ ವೆಬ್‍ಸೈಟ್ ಮುಖಾಂತರ ವ್ಯಾಪಾರ ಮಾಡಿ ದಂಧೆ ನಡೆಸುತ್ತಿದ್ದರೂ ಯಾವುದೇ ದಾಳಿ ನಡೆದಿಲ್ಲ. ಇದು ಮಾಜಿ ಗೃಹ ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ.

    ದಂಧೆಯ ಕಾರಳ ಮುಖದ ಬಗ್ಗೆ ಮಾಹಿತಿ ಪಡೆದ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಕಾನೂನು ಬಾಹಿರವಾಗಿ ದಂಧೆ ನಡೆಸುತ್ತಿರುವವರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

    ಕೋರಮಂಗಲ ಕಾಲ್ ಗರ್ಲ್ಸ್ ಹೆಸರಿನಲ್ಲಿ ದಂಧೆ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಅಕ್ರಮವಾಗಿ ಅಫೀಶಿಯಲ್ ವೆಬ್‍ಸೈಟ್ ಮುಖಾಂತರ ನಡೆಯುತ್ತಿರುವ ಹಗಲು ದರೋಡೆಯನ್ನ ಕೂಡಲೇ ತಡೆಯಬೇಕು. ದಂಧೆ ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವವರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಪೊಲೀಸ್ ಮಹಾನಿರ್ದೇಶಕರಿಗೆ ರಾಮಲಿಂಗಾ ರೆಡ್ಡಿ ಪತ್ರ ಬರೆದಿದ್ದಾರೆ.

    ಕಾನೂನು ಬಾಹಿರ ಚಟುವಟಿಕೆಯನ್ನ ರಾಜೋರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಈ ಆನ್‍ಲೈನ್ ಅಕ್ರಮ ದಂಧೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಇಲ್ವಾ, ಮಾಹಿತಿ ಇದ್ದರೂ ಸುನ್ನಾಗಿದ್ದಾರ ಎಂಬ ಅನುಮಾನ ಮೂಡಿದೆ.

  • ಅಕ್ರಮ ನೇಮಕಾತಿ ಆರೋಪ – ಚಾಮುಲ್ ವಿರುದ್ಧ ಪ್ರತಿಭಟನೆ

    ಅಕ್ರಮ ನೇಮಕಾತಿ ಆರೋಪ – ಚಾಮುಲ್ ವಿರುದ್ಧ ಪ್ರತಿಭಟನೆ

    ಚಾಮರಾಜನಗರ: ಅಕ್ರಮವಾಗಿ ಚಾಮರಾಜನಗರ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ವಿವಿಧ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮದಲ್ಲಿರುವ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮುಂದೆ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ 72 ಹುದ್ದೆಗಳಿಗೆ ಒಕ್ಕೂಟದ ಆಡಳಿತ ಮಂಡಳಿ ಅಕ್ರಮವಾಗಿ ನೇಮಕಾತಿ ಮಾಡಿದೆ ಎಂದು ಆರೋಪಿಸಿ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹ ಆರಂಭಿಸಿದರು.

    ಹಾಲು ಒಕ್ಕೂಟದ ವಿರುದ್ಧ ದಿಕ್ಕಾರದ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈಗಾಗಲೇ ಒಕ್ಕೂಟದಲ್ಲಿ ಖಾಲಿ ಇದ್ದ ವಿವಿಧ ವರ್ಗದ ಹುದ್ದೆಗಳಿಗೆ ಪರೀಕ್ಷೆ ನಡೆಸದೇ ಆಯ್ಕೆ ಮಾಡಿದ ಕ್ರಮ ಸರಿಯಲ್ಲವೆಂದು ಆರೋಪಿಸಿದರು. ಅಲ್ಲದೆ ನೇಮಕಾತಿಯನ್ನ ರದ್ದು ಮಾಡಬೇಕೆಂದು ಒತ್ತಾಯಿಸಿದರು.

    ಈಗಾಗಲೇ ನಡೆದಿರುವ ಪರೀಕ್ಷಾ ಪದ್ಧತಿಯಲ್ಲಿ ಬಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು, ಮರು ಪರೀಕ್ಷೆ ಮಾಡಬೇಕೆಂದು ಆಗ್ರಹಿಸಿದರು. ಚಾಮುಲ್‍ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ದಿಕ್ಕು ಬದಲಾಗಲಿದೆ.

  • ದೇವರ ಹೆಸರಲ್ಲಿ ಕೆಜಿಎಫ್‍ನ 2 ಸಾವಿರ ಎಕರೆ ಗಣಿ ಪ್ರದೇಶ ಗುಳುಂ!

    ದೇವರ ಹೆಸರಲ್ಲಿ ಕೆಜಿಎಫ್‍ನ 2 ಸಾವಿರ ಎಕರೆ ಗಣಿ ಪ್ರದೇಶ ಗುಳುಂ!

    ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಚಿನ್ನದಂತ ಸರ್ಕಾರಿ ಭೂಮಿ ಕಂಡವರ ಪಾಲಾಗುತ್ತಿದೆ. ಕೆಜಿಎಫ್‍ನ ಕೃಷ್ಣಾವರಂನಲ್ಲಿ ಚಿನ್ನದ ಗಣಿಗೆ ಸೇರಿ ಭೂಮಿಯನ್ನೇ ಲೂಟಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

    ರಾತ್ರೋರಾತ್ರಿ ಗಣಿಗೆ ಸೇರಿದ ಭೂಮಿಗೆ ಬೇಲಿ ಹಾಕಿ ಅಲ್ಲಿ ದೇವಸ್ಥಾನ, ಚರ್ಚ್ ಕಟ್ಟುತ್ತಿದ್ದು, ಆ ಹೆಸರಲ್ಲೇ ಭೂಮಿಯನ್ನು ಲಪಟಾಯಿಸುತ್ತಿದ್ದಾರೆ. ಮೈನ್ಸ್‍ಗೆ ಸೇರಿದ 12,500 ಎಕರೆ ಭೂಮಿ ಇದೆ. ಅದರಲ್ಲಿ 2 ಸಾವಿರ ಎಕರೆಯಷ್ಟು ಭೂಮಿಯನ್ನು ಕೆಲ ಪ್ರಭಾವಿ ವ್ಯಕ್ತಿಗಳು ಮತ್ತು ಭೂಗಳ್ಳರು ಕಬಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಕಳೆದ ಎರಡು ತಿಂಗಳಲ್ಲಿ ಕೃಷ್ಣಾಪುರಂ, ಘಟ್ಟಕಾಮದೇನಹಳ್ಳಿ, ಪಿಚ್ಚಹಳ್ಳಿಯಲ್ಲಿ ಅಕ್ರಮ ನಡೆಯುತ್ತಿದೆ. ವಿಚಿತ್ರ ಅಂದರೆ ಕಂದಾಯ ಇಲಾಖೆ ಅಧಿಕಾರಿಗಳಿಗೇ ಈ ಬಗ್ಗೆ ಮಾಹಿತಿ ಇರಲಿಲ್ಲ. ಸದ್ಯ ಕೆಜಿಎಫ್ ತಹಶೀಲ್ದಾರ್ ಗೆ ಸ್ಥಳ ಮಹಜರು ಮಾಡಿ ವರದಿಗೆ ಸೂಚಿಸಲಾಗಿದೆ. ಈ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಅಕ್ರಮ ಪ್ರವೇಶ ಮಾಡಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವ ಎಚ್ಚರಿಕೆ ನೀಡಲಾಗಿದೆ.

  • ಸಸಿಕಾಂತ್ ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಸಸಿಕಾಂತ್ ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಮಂಗಳೂರು: ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ದಕ್ಷಿಣ ಕನ್ನಡ ಹೊಯ್ಗೆ(ಮರಳು) ಲಾರಿ ಮಾಲಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಜೈರಾಜ್ ಶೆಟ್ಟಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

    ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸೆಂಥಿಲ್ ಅವ್ಯವಹಾರ ಮಾಡಿದ್ದಾರೆ. ಒಂದೇ ಪರ್ಮಿಟ್‍ಗೆ ಹಲವೆಡೆ ಅಕ್ರಮ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ. ತುಂಬೆ ಡ್ಯಾಮ್ ಡ್ರೆಜ್ಜಿಂಗ್ ನೆಪದಲ್ಲಿ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪನಿಗೆ ಕಾನೂನು ಉಲ್ಲಂಘಿಸಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಿಸಿ ಜೈರಾಜ್ ದೂರು ನೀಡಿದ್ದಾರೆ.

    ಈ ಎಲ್ಲ ವಿಚಾರದ ಬಗ್ಗೆ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ, ಮರಳು ಮಾರಿದ್ದಾರೆ. ಮೂರು ಸಾವಿರದ ಹೊಯ್ಗೆಯನ್ನು 6 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಉಡುಪಿಯಲ್ಲಿ ಬ್ಲಾಕ್ ಲಿಸ್ಟಲ್ಲಿರುವ ಕಂಪನಿಗೆ ಜಿಪಿಎಸ್ ಟೆಂಡರ್ ಆಗಿದೆ. ಟಿ ಫೋರ್ ಯು ಎಂಬ ಕಂಪನಿಗೆ ಟೆಂಡರ್ ಕೊಟ್ಟಿದ್ದರಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಜೈರಾಜ್ ಆರೋಪಿಸಿದ್ದಾರೆ.

    ಹೊಯ್ಗೆ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿ ಭಾರೀ ಅವ್ಯವಹಾರ ಆಗಿದೆ. ವಶಕ್ಕೆ ಪಡೆದ ಮರಳನ್ನು ಒಂದೇ ಕಂಪನಿಗೆ ಕೊಟ್ಟಿದ್ದರಲ್ಲೂ ಅಕ್ರಮವಾಗಿದೆ ಎಂದು ಜೈರಾಜ್ ಆರೋಪ ಮಾಡಿದ್ದಾರೆ.

  • ಕೊಪ್ಪಳ ಅಬಕಾರಿ ಇಲಾಖೆಯಲ್ಲಿ ರಾತ್ರಿಯೂ ಕೆಲಸ – ಅನುಮಾನ ಮೂಡಿಸಿದ ನಡೆ

    ಕೊಪ್ಪಳ ಅಬಕಾರಿ ಇಲಾಖೆಯಲ್ಲಿ ರಾತ್ರಿಯೂ ಕೆಲಸ – ಅನುಮಾನ ಮೂಡಿಸಿದ ನಡೆ

    – ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಅಬಕಾರಿ ಡಿಸಿ
    – ಸುದ್ದಿ ಮಾಡಿದರೆ ಕೇಸ್ ಹಾಕ್ತಿನಿ ಎಂದು ಬೆದರಿಕೆ

    ಕೊಪ್ಪಳ: ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಹಗಲು ರಾತ್ರಿ ಎನ್ನದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು ಹಲವು ಅನುಮಾನಗಳು ಎದ್ದಿದೆ.

    ಹೌದು. ಜಿಲ್ಲೆಯ ಅಬಕಾರಿ ಡಿ.ಸಿ ವೀಣಾ.ಆರ್ ರಾತ್ರಿ ಆದರೂ ಕೆಲಸ ಮಾಡುತ್ತಿದ್ದಾರೆ. ಈ ವಿಚಾರ ತಿಳಿದ ಪಬ್ಲಿಕ್ ಟಿವಿ ಯಾಕೆ ಇಷ್ಟೊಂದು ಕೆಲಸ ನಡೆಯುತ್ತಿದೆ ಎಂದು ಕೇಳಲು ಹೋಗಿದ್ದಕ್ಕೆ ಡಿ.ಸಿ ಮೇಡಂ ಕಸಿವಿಸಿಯಾಗಿದ್ದಾರೆ.

    ಈ ಹಿಂದೆ ನಾವು ಕೇಳಿದ ಮಾಹಿತಿಯನ್ನು ನೀವು ಈವರೆಗೂ ಕೊಟ್ಟಿಲ್ಲ. ಈಗ ನೀಡಿ ಎಂದು ಕೇಳಿದ್ದಕ್ಕೆ ಗರಂ ಆದ ಮೇಡಂ, ನಾನು ಯಾಕೆ ನಿಮಗೆ ಮಾಹಿತಿ ಕೊಡಬೇಕು. ನಾನು ಪತ್ರಿಕೋದ್ಯಮ ವಿದ್ಯಾರ್ಥಿನಿ ನನಗೂ ಗೊತ್ತು. ನೀವು ಪ್ರೆಸ್ ಆದರೆ ನನಗೇನು? ನಿಮಗೆ ಮಾಹಿತಿ ತಾನೆ ಬೇಕು ಕೊಡುತ್ತೇನೆ. ಆದರೆ ಯಾವಾಗ ಕೊಡುತ್ತೇನೆ ಎನ್ನುವುದು ಗೊತ್ತಿಲ್ಲ ಎಂದು ವೀಣಾ ಉತ್ತರಿಸಿದ್ದಾರೆ.

    ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಎಂಆರ್‌ಪಿ ದರಕ್ಕಿಂತ ಹೆಚ್ಚಿಗೆ ಮದ್ಯ ಮಾರಾಟ, ಹಳ್ಳಿಗಳಲ್ಲಿ, ಗಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟ, ನೀತಿ ನಿಯಮವನ್ನು ಪಾಲಿಸದೆ ಮನಸೋ ಇಚ್ಛೆ ಬಂದಂತೆ ಬಾರ್‌ಗಳಲ್ಲಿ ಮದ್ಯ ಮಾರಾಟ ಇಂತಹ ಅನೇಕ ಸುದ್ದಿಗಳನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಇದರ ಬಗ್ಗೆ ಏನಾದರೂ ಕೇಳಿದರೆ ಮೇಡಂ, ನಾನು ಈಗ ಬಂದಿದ್ದೇನೆ ಎಂದು ನೆಪ ಹೇಳುತ್ತಿದ್ದರು. ಕೊನೆಗೆ ಪಬ್ಲಿಕ್ ಟಿವಿ ಕಾರ್ಯಾಚರಣೆ ಮಾಡಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

    ಪ್ರತಿ ವರ್ಷ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಎಲ್ಲ ರೀತಿಯ ಬಾರ್ ಅಂಡ್ ರೆಸ್ಟೋರೆಂಟ್‍ಗಳು ನವೀಕರಣವಾಗಬೇಕು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಜಿಲ್ಲೆಯಲ್ಲಿ ಒಟ್ಟು 144 ಬಾರ್‌ಗಳಿದ್ದು, ಒಂದೊಂದು ಬಾರ್ ನವೀಕರಣಕ್ಕೆ ಕನಿಷ್ಠ 50,000 ರೂ. ಹಣವನ್ನು ನೀಡಬೇಕಂತೆ. ಈಗಾಗಲೇ ಬಾರ್ ಮಾಲೀಕರ ಒಂದು ಸುತ್ತಿನ ಮಾತುಕತೆ ಮುಗಿದಿದ್ದು, ಇದೇ ತಿಂಗಳು 30ರ ಒಳಗಾಗಿ ಎಲ್ಲಾ ಹಣವನ್ನು ಕೊಡಬೇಕಾಗಿ ಅಬಕಾರಿ ಇಲಾಖೆ ತಾಕಿತು ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ವಿಚಾರ ತಿಳಿಯುತ್ತಿದಂತೆ ಪಬ್ಲಿಕ್ ಟಿವಿ ರಾತ್ರಿ 8 ಗಂಟೆಯ ವೇಳೆ ಅಬಕಾರಿ ಇಲಾಖೆಗೆ ತೆರಳಿದೆ. ಆಗ ಡಿಸಿ ಮೇಡಂ ಒಂದು ಕ್ಷಣ ಆ ಕಡೆಯಿಂದ ಈ ಕಡೆಗೆ ಓಡಾಡಲು ಪ್ರಾರಂಭಿಸಿದ್ದಾರೆ. ಕೊನೆಗೆ ಡಿಸಿ ಮೇಡಂ, ನಾನು ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇನೆ ಎಂದು ಗದರಿಸಿದ್ದಾರೆ. ಅಬಕಾರಿ ಡಿಸಿ ಅವರ ವರ್ತನೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಅವರಿಗೂ ಗೊತ್ತಾಗಿ ಈಗ ಆದೇಶ ಹೊರಡಿಸಿದ್ದಾರೆ.

    ಆದೇಶ ಪ್ರತಿಯಲ್ಲಿ ಏನಿದೆ?
    2019-20ನೇ ಸಾಲಿಗೆ ಸನ್ನದುಗಳ ನವೀಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಸನ್ನದು ನವೀಕರಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಯಾವುದೇ ಆರೋಪಿಗಳಿಗೆ ಅವಕಾಶ ನೀಡದಂತೆ ಜಿಲ್ಲೆಯ ಎಲ್ಲಾ ವಲಯಗಳ ಅಬಕಾರಿ ನಿರೀಕ್ಷಕರು, ಉಪ ವಿಭಾಗದ ಉಪ ಅಧೀಕ್ಷಕರು ಹಾಗೂ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಕಾರ್ಯನಿರ್ವಹಿಸಲು ಸೂಚಿದೆ. ಆರೋಪಗಳು ಬಂದಲ್ಲಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

    ಸಾರ್ವಜನಿಕರ ಪ್ರಶ್ನೆ:
    ಕೊಪ್ಪಳ ಒಂದು ಜಿಲ್ಲೆಯಲ್ಲೇ ಸುಮಾರು 70 ಲಕ್ಷ ರೂ. ಸಂಗ್ರಹ ಆಗುತ್ತದೆ. ಇನ್ನೂ ರಾಜ್ಯಾದ್ಯಂತ ಅಬಕಾರಿ ಇಲಾಖೆ ಅಪಾರ ಹಣವನ್ನು ಲೂಟಿ ಮಾಡಿದೆ ಎಂದು ಅಬಕಾರಿ ಇಲಾಖೆ ಮೇಲೆ ಗಂಭೀರ ಆರೋಪಗಳು ಕೇಳಿಬರುತ್ತಿದೆ. ಅಬಕಾರಿ ಇಲಾಖೆ ವಿರುದ್ಧ ಸಂಘಟನೆಗಳು ಸಾಕಷ್ಟು ಹೋರಾಟಗಳನ್ನು ಇಂದಿಗೂ ಮಾಡುತ್ತಿವೆ. ಅಬಕಾರಿ ಇಲಾಖೆ ಸಿಎಂ ಅವರ ಬಳಿ ಇರುವ ಕಾರಣ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ವಿಚಾರ ತಿಳಿದಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ಅಬಕಾರಿ ಇಲಾಖೆಯಿಂದಲೇ ಬರುತ್ತದೆ. ಹೀಗಿರುವಾಗ ಸರ್ಕಾರಿ ಕಚೇರಿ ಅವಧಿ ಬಿಟ್ಟು ರಾತ್ರಿಯೂ ಕೆಲಸ ಮಾಡುವಂತದ್ದು ಏನಿದೆ? ಅಕ್ರಮ ವ್ಯವಹಾರ ನಡೆಸಲು ರಾತ್ರಿ ಕೆಲಸ ನಡೆಯುತ್ತಿದ್ಯಾ ಎನ್ನು ಪ್ರಶ್ನೆ ಎದ್ದಿದೆ.

    ಸಿಎಲ್2 ಬಾರ್ ನಿಯಮ ಏನು?
    ಸಿಎಲ್2 ಬಾರ್‌ಗಳಲ್ಲಿ ಎಂಆರ್‌ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು. ಯಾವುದೇ ರೀತಿ ಬಾರ್‌ಗಳಲ್ಲೂ ಕುಳಿತು ಕುಡಿಯುವ ವ್ಯವಸ್ಥೆ ಇರಕೂಡದು. ಕಡ್ಡಾಯವಾಗಿ ಮದ್ಯದ ದರಪಟ್ಟಿಯನ್ನು ದೊಡ್ಡ ಅಕ್ಷರಗಳಲ್ಲಿ ಜನರಿಗೆ ಕಾಣುವಂತೆ ಹಾಕಬೇಕು. ಬಾರ್ ಅಲ್ಲಿ ಲೈಸೆನ್ಸ್ ಹೊಂದಿದ ಅಧಿಕೃತ ಮಾರಾಟಗಾರ ಬಿಟ್ಟು ಬೇರೆ ಯಾರು ಇರಬಾರದು. ಅಂಗಡಿಯಲ್ಲಿ ಮದ್ಯ ಬಾಟಲಿ ಬಿಟ್ಟು ಬೇರೇನೂ ಮಾರಲು ಅವಕಾಶ ಇಲ್ಲ. ಶಾಲಾ, ಕಾಲೇಜ್, ದೇವಸ್ಥಾನ, ಆಸ್ಪತ್ರೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಬಾರ್ ಇರಬೇಕು.

    ಸಿಎಲ್7 ಬಾರ್ ನಿಯಮ ಏನು?
    ಸಿಎಲ್ 7 ಅಂದರೆ ಇದು ಬಾರ್ ಅಂಡ್ ರೆಸ್ಟೋರೆಂಟ್. ಇಲ್ಲಿ ಬರುವ ಗ್ರಾಹಕರಿಗೆ ಮದ್ಯದ ಜೊತೆಗೆ ಊಟದ ವ್ಯವಸ್ಥೆ ಇರಬೇಕು. ಬೆಳಗ್ಗೆ 10 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಾತ್ರ ಬಾರ್ ತಗೆದಿರಬೇಕು. ಮದ್ಯವನ್ನು ಯಾವುದೇ ರೀತಿ ಹೊರಗಡೆ ಕೊಡುವಂತಿಲ್ಲ. ಉಳಿದಂತೆ ದರಪಟ್ಟಿ, ಸ್ವಚ್ಛತೆ, ಸನ್ನದುದಾರರ ಹೆಸರು, ಇತ್ಯಾದಿ ನಿಯಮಗಳು ಅನ್ವಯಿಸುತ್ತವೆ.

    ಸಿಎಲ್9 ಬಾರ್ ನಿಯಮ ಏನು?
    ಸಿಎಲ್ 9 ಇದು ಪ್ರವಾಸಿಗರಿಗೆ ಮಾತ್ರ ಅನ್ವಯವಾಗುತ್ತದೆ. ಇಲ್ಲಿ 14 ಸುಸಜ್ಜಿತ ಕೊಠಡಿಗಳು ಇರಲೇಬೇಕು. ಯಾವುದೇ ರೀತಿ ಮದ್ಯವನ್ನು ಹೊರಗಡೆ ನೀಡುವಂತಿಲ್ಲ. ಕೊಠಡಿಯಲ್ಲಿ ತಂಗಲು ಬಂದವರಿಗೆ ಮಾತ್ರ ಮದ್ಯವನ್ನು ನೀಡತಕ್ಕದ್ದು. ಲೂಸ್ ಲಿಕ್ಕರ್ ಅನ್ನು ಇಲ್ಲಿ ಮಾರುವಂತಿಲ್ಲ. ಎಂ.ಎಲ್. ತಕ್ಕಂತೆ ಫುಲ್ ಬಾಟಲ್ ಹೊಂದಿರಬೇಕು.

    ನಮ್ಮ ರಾಜ್ಯದಲ್ಲಿ 3,901 ಸಿಎಲ್.2 ಬಾರ್ ಇದ್ದರೆ, 3,517 ಬಾರ್ ಅಂಡ್ ರೆಸ್ಟೋರೆಂಟ್, 225 ಕ್ಲಬ್, 1915 ಸ್ಟಾರ್ ಹೋಟೆಲ್ ಕ್ಯಾಂಟೀನ್ ಗಳಿವೆ.

  • ಅಕ್ರಮಗಳ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ – ಕೋಟ ಶ್ರೀನಿವಾಸ ಪೂಜಾರಿ

    ಅಕ್ರಮಗಳ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ – ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಅಕ್ರಮಗಳ ವರದಿ ಮಾಡುವುದು ಮಾಧ್ಯಮಗಳ ಜವಾಬ್ದಾರಿ. ಸರ್ಕಾರ ವಾಮಮಾರ್ಗದಲ್ಲಿ ಮಾಧ್ಯಮಗಳ ಬಾಯಿ ಬಂದ್ ಮಾಡಲು ಯತ್ನಿಸುವುದು ಬೇಡ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಳ್ಳಾರಿ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಅಕ್ರಮದ ಬಗ್ಗೆ ಪಬ್ಲಿಕ್ ಟಿವಿ ಸುದ್ದಿ ಮಾಡಿದ್ದಕ್ಕೆ ವರದಿಗಾರನನ್ನು ಬಂಧನ ಮಾಡಿದ್ದನ್ನು ಖಂಡಿಸಿದರು. ಮಾಧ್ಯಮಗಳಿಗೆ ಅವರದ್ದೇ ಆದ ಜವಾಬ್ದಾರಿ ಇದೆ. ಸರ್ಕಾರದ ಲೋಪದೋಷ ಹೇಳುವುದು ಮೀಡಿಯಾಗಳ ಜವಾಬ್ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮಾಧ್ಯಮಗಳ ಧನಿ ಧಮನ ಮಾಡಿದರೆ ಬಿಜೆಪಿ ಸುಮ್ಮನಿರಲ್ಲ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಲು ಪ್ರಯತ್ನಿಸಿದೆ. ಜಿ.ಟಿ ದೇವೇಗೌಡ ಸಚಿವ ಸಂಪುಟ ಸಭೆಯಲ್ಲಿ ಇದ್ದಾರೆ. ವರದಿಗಾರನನ್ನು ಬಂಧಿಸುವ ಬದಲು ಅಕ್ರಮ ಸರಿಪಡಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿ ಎಂದು ತಿಳಿಸಿದರು. ಇದನ್ನು ಓದಿ :ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮದ ವಾಸನೆ – ವರದಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ಮೇಲೆ ಕೇಸ್

    ಸರ್ಕಾರ ಸತ್ಯಾಸತ್ಯತೆ ಅರಿತು ವಿಶ್ವ ವಿದ್ಯಾಲಯದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಬದಲಾಗಿ ವರದಿಗಾರರ ಬಂಧನ ಖಂಡನೀಯವಾದುದು ಎಂದು ಕೋಟ ಶ್ರೀನಿವಾಸ ಪೂಜಾರಿ ಖಂಡನೆ ವ್ಯಕ್ತಪಡಿಸಿದರು.

  • ಬಳ್ಳಾರಿ ವಿವಿಯಲ್ಲಿ ಅಕ್ರಮ- ಲಕ್ಷ ಲಕ್ಷ ಲಂಚ ಪಡೆದು ನೇಮಕಾತಿ

    ಬಳ್ಳಾರಿ ವಿವಿಯಲ್ಲಿ ಅಕ್ರಮ- ಲಕ್ಷ ಲಕ್ಷ ಲಂಚ ಪಡೆದು ನೇಮಕಾತಿ

    ಬಳ್ಳಾರಿ: ನಗರದಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿ ಈಗ ಅಕ್ರಮದ ಆರೋಪವೊಂದು ಕೇಳಿಬಂದಿದೆ.

    ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಲಂಚಾವತಾರದ ಆಡಿಯೋ ಬಹಿರಂಗವಾಗಿದೆ. 10-15 ಲಕ್ಷ ರೂಪಾಯಿಗೆ ಪಡೆದು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಗ್ರಂಥಪಾಲಕ ಕಟ್ಟಿಮನಿ ಹಾಗೂ ಅಭ್ಯರ್ಥಿ ಚಿದಾನಂದರ ನೇಮಕಾತಿಗೆ ಹಣ ಕೇಳಿದ ಆಡಿಯೋ ವೈರಲ್ ಆಗಿದೆ.


    ಈ ಹಿಂದೆ ಚುನಾವಣಾ ನೀತಿ ಸಂಹಿತೆ ಇದ್ದಾಗ ನೇಮಕಾತಿ ನಡೆಸದಂತೆ ಸ್ವತ: ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಕುಲಪತಿ ಸುಭಾಷ್ ನೇಮಕಾತಿ ಪ್ರಕ್ರಿಯೆ ಮುಂದುವರಿಸಿದ್ದು, ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಇದೀಗ ಅವ್ಯವಹಾರ ಬಯಲಿಗೆ ಬರುತ್ತಿದ್ದಂತೆಯೇ ಗ್ರಂಥಪಾಲಕ ಕಟ್ಟಿಮನಿಯನ್ನು ಕುಲಪತಿ ಸುಭಾಷ್ ಅಮಾನತುಗೊಳಿಸಿದ್ದಾರೆ.

    ಈ ಬಗ್ಗೆ ದೂರು ನೀಡದಂತೆ ಕುಲಪತಿಗಳ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆಡಿಯೋದಲ್ಲಿ ಮಾತನಾಡಿರುವ ಚಿದಾನಂದ್ ಆರೋಪಿಸಿದ್ದಾರೆ.

  • ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ನವದೆಹಲಿ: ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗುತ್ತಿದ್ದ ಹಾನಿಕಾರಕ ಮದ್ಯವನ್ನು ಗ್ರಾಹಕರಿಗೆ ಕೇವಲ 40 ರೂ.ಗೆ ಮಾರುತ್ತಿದ್ದ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ದೆಹಲಿಯ ರಘುಬೀರ್ ನಗರದಲ್ಲಿ ಶುಕ್ರವಾರ ಪೊಲೀಸರು ಎರಡು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮೇಲ್ನೊಟಕ್ಕೆ ದಿನಸಿ ಅಂಗಡಿ ಅಂತ ಬೋರ್ಡ್ ಹಾಕಿಕೊಂಡು ಅಕ್ರಮವಾಗಿ ಡ್ರಮ್‍ಗಟ್ಟಲೆ ಸಾರಾಯಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ಸತ್ಯಾಂಶ ಹೊರಬಿದ್ದಿದೆ.

    ಅಂಗಡಿಯಲ್ಲಿ ಪತ್ತೆಯಾದ ಸಾರಾಯಿ ತಯಾರಿಕೆಯ ಸಾಮಾಗ್ರಿ ಪಟ್ಟಿಯಲ್ಲಿ ಈ ಮದ್ಯಕ್ಕೆ ಯಾವ್ಯಾವ ಸಾಮಾಗ್ರಿ ಬಳಕೆಯಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಆಗ ಸಾರಾಯಿ ತಯಾರಿಸಲು ಆರೋಪಿಗಳು ಹಾನಿಕಾರಕ ಸೋಪಿನ ಪುಡಿ ಹಾಗೂ ಶ್ಯಾಂಪುಗಳನ್ನು ಬಳಕೆ ಮಾಡುತ್ತಾರೆ ಎಂಬುದು ಬಯಲಾಗಿದೆ. ಅಲ್ಲದೆ ಗ್ರಾಹಕರಿಗೆ ಪ್ರತಿ ಬಾಟಲಿಗೆ ಕೇವಲ 40 ರೂ.ಗೆ ಈ ಸಾರಾಯಿಯನ್ನು ಅಂಗಡಿಯವರು ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಕೂಡ ಸಾಕ್ಷಿಗಳು ದೊರಕಿದೆ.

    ಆರೋಪಿಗಳಾದ ಜಿಜಾರ್ ಸಿಂಗ್ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿದ್ದ ಅಕ್ರಮ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಹಿಂದೆ 2009ರಲ್ಲಿ ಇದೇ ಪ್ರದೇಶದಲ್ಲಿ ಸಾರಾಯಿ ಸೇವಿಸಿ 17ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಜಿಜಾರ್ ಸಿಂಗ್‍ನ ಮಾವನೇ ಆರೋಪಿಯಾಗಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv