Tag: Illegal Weapons

  • ಉಗ್ರರ ಸಂಚು ವಿಫಲ – ಟ್ರಕ್ ಜಪ್ತಿ, 6 ಅಕ್ರಮ ಎಕೆ 47 ಗನ್ ಪತ್ತೆ

    ಉಗ್ರರ ಸಂಚು ವಿಫಲ – ಟ್ರಕ್ ಜಪ್ತಿ, 6 ಅಕ್ರಮ ಎಕೆ 47 ಗನ್ ಪತ್ತೆ

    ಶ್ರೀನಗರ: ಭಾರತದಲ್ಲಿ ಕೃತ್ಯ ಎಸಗಲು ಪಾಕಿಸ್ತಾನ ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎನ್ನುವ ಗುಪ್ತಚರ ವರದಿಯ ಬೆನ್ನಲ್ಲೇ ಟ್ರಕ್ ಮೂಲಕ ಅಕ್ರಮವಾಗಿ ಜಮ್ಮು ಕಾಶ್ಮೀರಕ್ಕೆ ಸಾಗಿಸಲಾಗುತ್ತಿದ್ದ 6 ಎಕೆ 47 ಗನ್ ಗಳನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಭಾರತದ ಮೇಲೆ ದಾಳಿ ಮಾಡಲು ಪಾಕ್ ಪ್ರೇರಿತ ಉಗ್ರರು ಕೃತ್ಯ ಎಸಗಲು ಭಾರೀ ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿ ಇರುವಾಗಲೇ ಟ್ರಕ್‍ನಲ್ಲಿ ಅಕ್ರಮ ರೈಫಲ್‍ಗಳು ಪತ್ತೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಅಮೃತಸರದಿಂದ ಜಮ್ಮು ಕಾಶ್ಮೀರ ಕಣಿವೆ ಪ್ರದೇಶಕ್ಕೆ ತೆರಳುತ್ತಿದ್ದ ಟ್ರಕ್ ಒಂದನ್ನು ಕಾಶ್ಮೀರ ಪೊಲೀಸರು ಲಖನ್ಪುರ ಪಟ್ಟಣದ ಬಳಿ ತಡೆ ಹಿಡಿದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6 ಸ್ವಯಂಚಾಲಿತ ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಲಾರಿಯಲ್ಲಿ ಇದ್ದ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಈ ಲಾರಿ ಕಾಶ್ಮೀರದ ಜಮ್ಮುವಿನ ನಂಬರ್ ಪ್ಲೇಟ್ ಹೊಂದಿದ್ದು, ಸುಹಿಲ್ ಲಟೂ ಎಂಬ ಮಾಲೀಕನ ಹೆಸರಿನಲ್ಲಿ ನೋಂದಣಿಯಾಗಿದೆ. ಸದ್ಯ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಲಾರಿ ಚಾಲಕ ಹೆಸರು ಜಾವಿದ್ ದಾರ್ ಆಗಿದ್ದು, ಆತ ಕಾಶ್ಮೀರದ ಪುಲ್ವಾಮ ಜಿಲ್ಲೆಯ ನಿವಾಸಿ ಆಗಿದ್ದಾನೆ.

    ಉಳಿದ ಮಾಹಿತಿಗಾಗಿ ಪೊಲೀಸರು ತನಿಖೆ ಮಾಡುತ್ತಿದ್ದು, ಈ ಲಾರಿ ಎಲ್ಲಿಗೆ ಹೋಗುತಿತ್ತು? ಲಾರಿಯಲ್ಲಿ ಸಿಕ್ಕಿರುವ ಎಕೆ-47 ರೈಫಲ್‍ಗಳು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತಿತ್ತು ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ. ಇತ್ತೀಚೆಗೆ ಈ ರೀತಿ ಎರಡು ಬಾರಿ ಲಾರಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು.