Tag: illegal money

  • ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

    ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

    ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇ.ಡಿ ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ

    ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ (ಆ.12) ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ನೋಟಿಸ್ ನೀಡಿ, ಬುಧವಾರ (ಆ.13) ವಿಚಾರಣೆ ಹಾಜರಾಗುವಂತೆ ತಿಳಿಸಿತ್ತು. ಅದರಂತೆ ದೆಹಲಿಯಲ್ಲಿರುವ ಇಡಿ ಕಚೇರಿಗೆ ಆಗಮಿಸಿ, ವಿಚಾರಣೆಗೆ ಹಾಜರಾಗಿದ್ದಾರೆ. ಇಡಿ ವಿಚಾರಣೆ ವೇಳೆ ರೈನಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ.

    ಇದಕ್ಕೂ ಮುನ್ನ ನಟ ಪ್ರಕಾಶ್ ರೈ, ವಿಜಯ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರನ್ನು ಇಡಿ ವಿಚಾರಣೆ ನಡೆಸಿದೆ.ಇದನ್ನೂ ಓದಿ: ಪರಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂದಿದ್ದಕ್ಕೆ ನೋಟಿಸ್ ಕಳುಹಿಸಿದ್ದಾರೆ – ಧ್ರುವ ಮ್ಯಾನೇಜರ್ ಸ್ಪಷ್ಟನೆ

  • ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ಹಣವನ್ನು ಜೀವದ ಹಂಗು ತೊರೆದು ಜಪ್ತಿ ಮಾಡಿದ ಪೊಲೀಸರು

    ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ಹಣವನ್ನು ಜೀವದ ಹಂಗು ತೊರೆದು ಜಪ್ತಿ ಮಾಡಿದ ಪೊಲೀಸರು

    ಹಾವೆರಿ: ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 85 ಲಕ್ಷ ರೂ. ಹಣವನ್ನು ಪೊಲೀಸರು ಜೀವದ ಹಂಗು ತೊರೆದು ಜಪ್ತಿ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದಿದೆ.

    ಅಕ್ರಮವಾಗಿ ಹಣವನ್ನು ಸಾಗಾಣಿಕೆ ಮಾಡುತ್ತಿದ್ದ ಖದೀಮರು ಪೊಲೀಸರನ್ನು ಕಂಡು ಕಾರನ್ನು ಸ್ಪೀಡ್ ಆಗಿ ಓಡಿಸಿದ್ದಾರೆ. ಬಳಿಕ ಕಾರ್ ಹಿಂದೆ ಓಡಿ ಹೋಗಿ ಕೆಳಕ್ಕೆ ಬಿದ್ದರೂ ಅವರನ್ನು ಬಿಡದೇ ಪೊಲೀಸರು ಚೇಜ್ ಮಾಡಿ, ಕಾರನ್ನು ನಿಲ್ಲಿಸಿದ್ದಾರೆ.

    ಆರೋಪಿಗಳಾದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್(31), ಇಮ್ರಾನ್ ಖಾನ್(27) ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್(23) ಮತ್ತು ಸಯ್ಯದ ಅಮೀನ್(29)ನನ್ನು ಪೊಲೀರು ಬಂಧಿಸಿದ್ದಾರೆ. ಇವರು ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಅಕ್ರಮವಾಗಿ ಹಣ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

    ಪೊಲೀಸರು ಕಾರಿನ ಬ್ಯಾಗಿನಲ್ಲಿ ತುಂಬಿಟ್ಟ 500, 200, 100 ಹಾಗೂ 50 ರೂ. ಮುಖಬೆಲೆಯ ಒಟ್ಟು 85 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

    ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪಿಗಳನ್ನು ಹಿಡಿಯಲು ಹಾನಗಲ್ ಸಿಪಿಐ ಶಿವಶಂಕರ್ ಗಣಾಚಾರಿ ಹಾಗೂ ಪಿಎಸ್‌ಐ ಶ್ರೀಶೈಲ ಪಟ್ಟಣ ಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಎಸ್‌ಪಿ ಹನುಮಂತರಾಯ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆಯರು- ಶ್ರೀಗಳಿಗೆ ನೋಟಿಸ್ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಅಕ್ರಮವಾಗಿ ಸಾಗಿಸುತ್ತಿದ್ದ 2 ಕೋಟಿ ವಶಕ್ಕೆ ಪಡೆದ ಪೊಲೀಸರು

    ಅಕ್ರಮವಾಗಿ ಸಾಗಿಸುತ್ತಿದ್ದ 2 ಕೋಟಿ ವಶಕ್ಕೆ ಪಡೆದ ಪೊಲೀಸರು

    ಕೋಲಾರ: ಯಾವುದೇ ಬಿಲ್, ಸೂಕ್ತ ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ 2 ಕೋಟಿ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕು ರೋಜೇನಹಳ್ಳಿ ಗೇಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದು, ಹಣ ಕೊಂಡೊಯ್ಯುತ್ತಿದ್ದ ಕೋಲಾರ ಮೂಲದ ಚಂದ್ರು ಹಾಗೂ ಅಮರ್ ನಾಥ್ ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಬರೋಬ್ಬರಿ 2,94,50,000 ರೂ.ಗಳನ್ನು ವಶಕ್ಕೆ ಪಡೆದಿದಿದ್ದಾರೆ. ಅಲ್ಲದೆ ಇಬ್ಬರನ್ನೂ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

    ಕೊರೊನಾ ಸಂಕಷ್ಟ ಕಾಲದಲ್ಲಿ ಇಷ್ಟು ಹಣ ಹೇಗೆ ಬಂತು, ಯಾರಿಗೆ ಸೇರಿದ್ದು, ಉದ್ದೇಶ ಏನು ಎಂಬ ಹತ್ತು ಹಲವು ಅನುಮಾನಗಳು ಪೊಲೀಸರಿಗೆ ಮೂಡಿದ್ದು, ಕೋಲಾರ ಮೂಲದ ಚಂದ್ರು ಹಾಗೂ ಅಮರ್ ನಾಥ್ ಎಂಬ ಇಬ್ಬರು ವ್ಯಕ್ತಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿದ್ದು, ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರದಲ್ಲಿ ದಾಖಲೆಗಳಿಲ್ಲದ 8.50 ಲಕ್ಷ ನಗದು ವಶ

    ಚಿಕ್ಕಬಳ್ಳಾಪುರ: ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ, ರಾಜ್ಯದಲ್ಲಿ ಚುನಾವಣಾ ಪ್ರಚಾರ ಗರಿಗೆದರಿದ್ದು, ಇಂದು ದಾಖಲೆಗಳಿಲ್ಲದ 8.50 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

    ಇಂದು ಎರಡು ಕಡೆ ವಾಹನ ತಪಾಸಣೆ ಮಾಡುತ್ತಿದ್ದ ಚುನಾವಣಾಧಿಕಾರಿಗಳಿಗೆ, ಬಾಗೇಪಲ್ಲಿ ಟೋಲ್ ಗೇಟ್ ಬಳಿ 5 ಲಕ್ಷ ರೂ. ಮತ್ತು ನಂದಿ ಚೆಕ್ ಪೋಸ್ಟ್ ಬಳಿ 3.50 ಲಕ್ಷ ರೂ. ದಾಖಲೆಯಿಲ್ಲದ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಸೀರೆ ವಶ: ಇಂದು ಬೆಳಗ್ಗೆ ಮೈಸೂರಿನಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿದ್ದ 30 ಸಾವಿರ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

    ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಈ ಸೀರೆಗಳನ್ನು ಸಂಗ್ರಹಿಸಲಾಗಿತ್ತು. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್ ಗೆ ಮತ ನೀಡಿ ಎನ್ನುವ ಕರಪತ್ರಗಳಿವೆ.

    ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅನರ್ಹರ ಕುರಿತು ಫಲಿತಾಂಶ ಸುಪ್ರೀಂ ಕೋರ್ಟ್ ಫಲಿತಾಂಶಕ್ಕೂ ಮುನ್ನ ಬಿಜೆಪಿಯಿಂದ ಯೋಗೇಶ್ವರ್ ಸ್ಪರ್ಧಿಸಲು ಎಂದು ಹೇಳಲಾಗಿತ್ತು. ಹೀಗಾಗಿ ಯೋಗೇಶ್ವರ್ ಅವರೇ ಚುನಾವಣೆಗಾಗಿ ಈ ಎಲ್ಲ ಸಿದ್ಧತೆ ನಡೆಸಿದ್ದರಾ ಎಂಬ ಪ್ರಶ್ನೆ ಇದೀಗ ಮೂಡಿದೆ.

  • ನೀರು ಸರ್ಕಾರದ್ದು, ಕಾಸು ಮಾತ್ರ ಖಾಸಗಿಯವರ ಜೇಬಿಗೆ!

    ನೀರು ಸರ್ಕಾರದ್ದು, ಕಾಸು ಮಾತ್ರ ಖಾಸಗಿಯವರ ಜೇಬಿಗೆ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ನೀರಿನಿಂದ ಖಾಸಗಿಯವರ ಜೇಬು ಫುಲ್ ಆಗುತ್ತಿದೆ. ದುಡ್ಡು ಮಾಡೋ ಐಡಿಯಾ ಒಂದಿದ್ದರೆ ಯಾವೆಲ್ಲ ರೀತಿಯಲ್ಲಿ ದುಡ್ಡು ಮಾಡಬಹುದು ಅನ್ನೋದನ್ನು ಈ ಕಿಲಾಡಿಗಳಿಂದ ಕಲಿಯಬೇಕು. 5 ರೂ.ಗೆ 20-25 ಲೀಟರ್ ಕ್ಯಾನ್ ನೀರು ಸಿಗುವ ನೀರು ಶುದ್ಧೀಕರಣ ಘಟಕದಲ್ಲಿ ದುಡ್ಡನ್ನು ಖಾಸಗಿ ವ್ಯಕ್ತಿಗಳು ತಮ್ಮ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

    2 ಲೀಟರ್ ನೀರಿಗೆ 2 ರೂ. ಕೊಡಬೇಕು, 25 ಲೀಟರ್ ನೀರಿಗಾದ್ರೆ 10 ರೂ. ಕೊಡಬೇಕು. ಹೀಗೆ ತರಕಾರಿ ವ್ಯಾಪಾರಕ್ಕೆ ಕೂತ ಹಾಗೆ ವಿಕ್ಟೋರಿಯಾ ಆಸ್ಪತ್ರೆಯ ಅವರಣದಲ್ಲಿ ಸರ್ಕಾರಿ ಬಿಟ್ಟಿ ನೀರನ್ನು ಮಾರಾಟ ಮಾಡೋಕೆ ಕೆಲ ಖಾಸಗಿ ವ್ಯಕ್ತಿಗಳು ಕುಳಿತುಬಿಟ್ಟಿದ್ದಾರೆ. 5 ರೂ. ಶಾಸಕರ ಅನುದಾನದಲ್ಲಿ ಲಕ್ಷಗಟ್ಟಲೆ ವೆಚ್ಚಮಾಡಿ ನೀರಿನ ಶುದ್ಧೀಕರಣ ಘಟಕ ತೆರೆಯಲಾಗಿದೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ಸ್ಪೆಷಲ್ ರೇಟು. ಆಸ್ಪತ್ರೆಗೆ ನೀಡುವ 25 ಲೀಟರ್ ಕ್ಯಾನ್‍ಗೆ 10 ರೂ. ಪಡೆದು ಖಾಸಗಿ ವ್ಯಕ್ತಿಗಳು ನೀರು ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ 2 ಲೀಟರ್ ಕ್ಯಾನ್‍ಗೆ 2 ರೂ. ಆ ಲೆಕ್ಕದಲ್ಲಿ 25 ಲೀಟರ್ ನೀರಿಗೆ ಭರ್ತಿ 25 ರೂಪಾಯಿಯಂತೆ ಖಾಸಗಿ ವ್ಯಕ್ತಿಗಳು ಜೇಬಿಗೆ ದುಡ್ಡು ಬರ್ತಿ ಮಾಡಿಕೊಳ್ಳುತ್ತಿದ್ದಾರೆ.

    ಇಷ್ಟು ದುಡ್ಡು ಸುಲಿಗೆ ಮಾಡೋದಾದರೆ ಇಲ್ಲಿ ಎಂಎಲ್‍ಎ ಜಮೀರ್ ಫೋಟೋ ಯಾಕೆ ಹಾಕಬೇಕು, ಹಾಗಿದ್ದರೆ ಸರ್ಕಾರ ಲಕ್ಷಗಟ್ಟಲೆ ಹಣ ವೆಚ್ಚ ಮಾಡಿ ಈ ನೀರಿನ ಘಟಕ ನಿರ್ಮಿಸಿದ್ದು ಇಂತಹ ದುಡ್ಡು ಮಾಡೋರಿಗೆ ಸಹಾಯ ಮಾಡೋದಕ್ಕಾ ಎಂದು ಪ್ರಶ್ನೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಈ ಘಟಕ ನಿರ್ವಹಣೆ ಮಾಡೋರನ್ನು ಕೇಳಿದರೆ, ಬೇರೆ ಕಡೆಗಳಲ್ಲಿರುವ ನೀರಿನ ಘಟಕಕ್ಕೂ ನಮ್ಮಲ್ಲಿರುವ ನೀರಿನ ಘಟಕಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎನ್ನುವುದನ್ನ ನೋಡಿ. ನಾವು ಇಲ್ಲಿ ಸ್ವಚ್ಚತೆ ಕಾಪಾಡುತ್ತೇವೆ. ಅದಕ್ಕೆ ಅಷ್ಟು ದುಡ್ಡು ಎಂದು ಬಿಂದಾಸ್ ಆಗಿ ಹೇಳುತ್ತಿದ್ದಾರೆ.

    sಹೀಗೆ ಹಣ ಮಾಡಲು ಬಂಡವಾಳನೂ ಹಾಕ್ಬೇಕಾಗಿಲ್ಲ, ಇತ್ತ ಕೆಲಸವೂ ಇಲ್ಲ. ಕೂತಲ್ಲಿಯೇ ಇವರಿಗೆ ಬಿಟ್ಟಿಯಾಗಿ ಕಾಸು ಮಾತ್ರ ಬರುತ್ತಿದೆ. ಆದ್ದರಿಂದ ಈ ಬಗ್ಗೆ ಮಾಜಿ ಸಚಿವ ಜಮೀರ್ ಖಾನ್ ಅವರ ಕ್ಷೇತ್ರದ ವ್ಯಾಪ್ತಿಗೆ ಬರುವ ನೀರಿನ ಘಟಕದಲ್ಲಿ ಹೀಗೆ ದುಡ್ಡು ಮಾಡುತ್ತಿರುವ ಕಿಲಾಡಿಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ನೋಟುಗಳಿಂದ ಕೋಟೆ ಕಟ್ಟಲಾಗದು, ಅಕ್ರಮ ಆಸ್ತಿಯ ಪ್ರಶ್ನೆಗೆ ನಾಲ್ಕು ಗಂಟೆ ಡಿಕೆಶಿ ಮೌನ

    ನೋಟುಗಳಿಂದ ಕೋಟೆ ಕಟ್ಟಲಾಗದು, ಅಕ್ರಮ ಆಸ್ತಿಯ ಪ್ರಶ್ನೆಗೆ ನಾಲ್ಕು ಗಂಟೆ ಡಿಕೆಶಿ ಮೌನ

    – ಮತ್ತೆ ಸುದೀರ್ಘ ವಾದ ಮಂಡಿಸಿದ ನಟರಾಜ್
    – 8 ತಿಂಗಳಲ್ಲಿ ಆಂಜನೇಯನ ಹೇಳಿಕೆ ಮೂರು ಬಾರಿ ಬದಲಾಗಿದೆ
    – ಜಾಮೀನು ನೀಡಿದ್ರೆ ಸಾಕ್ಷ್ಯ ನಾಶ

    ನವದೆಹಲಿ: “ಆರ್ಥಿಕ ಅಪರಾಧ ಉದ್ದೇಶ ಪೂರ್ವಕವಾಗಿ ಇರುತ್ತದೆ. ಮೂಲಗಳನ್ನು ಬಹಿರಂಗ ಪಡಿಸುತ್ತಿಲ್ಲ. ಮೂಲವೇ ಇಲ್ಲ ಎಂದರೆ ಬೆಳೆಯೋದು ಹೇಗೆ? ಅಡಿಪಾಯ ಇಲ್ಲದೆ ಕಟ್ಟಡ ನಿಲ್ಲುವುದಿಲ್ಲ. ಹಣದ ಮೂಲ ಎಂಬುದು ಅಡಿಪಾಯ. ಕೋಟೆ ಕಟ್ಟಲು ಕಲ್ಲುಬೇಕು. ನೋಟುಗಳಿಂದ ಕಟ್ಟಲಾಗದು. ಆದಾಯದ ಮೂಲ ತೋರಿಸದೇ ಆಸ್ತಿ ಮಾಡುವುದು ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ” ಇದು ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದ ಶೈಲಿ

    ಇಂದು ಬೆಳಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟಿನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಇದು ಸಹ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ದೀರ್ಘ ವಾದ ಮಂಡಿಸಿ ಜಾಮೀನು ನೀಡಬೇಡಿ ಎಂದು ಕೋರ್ಟಿನಲ್ಲಿ ಮನವಿ ಮಾಡಿಕೊಂಡರು.

    ನಟರಾಜ್ ವಾದ ಹೀಗಿತ್ತು:
    ಅಕ್ರಮ ಆಸ್ತಿಗೆ ತೆರಿಗೆ ಪಾವತಿಸಿ ಸಕ್ರಮ ಮಾಡಿಕೊಳ್ಳಲಾಗಿದೆ. ಸಕ್ರಮ ಮಾಡಿಕೊಂಡಿರುವ ಆಸ್ತಿಯ ಮೂಲ ಪತ್ತೆಯಾಗಬೇಕಿದೆ. ಈಗಾಗಲೇ ಡಿಕೆಶಿಯವರ ಕೆಲವೊಂದು ಆಸ್ತಿ ಪತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಬೇಕಿದ್ದು, ಸುದೀರ್ಘ ವಿಚಾರಣೆಯ ಅವಶ್ಯಕತೆ ಇದೆ. ಆಸ್ತಿ ಎಷ್ಟಿದೆ ಎನ್ನುವುದು ಮುಖ್ಯವಲ್ಲ. ನಾವು ಆಸ್ತಿಯ ಮೂಲವನ್ನು ತನಿಖೆ ಮಾಡುತ್ತಿದ್ದೇವೆ. ಆಸ್ತಿಯ ಮೂಲದ ತನಿಖೆಗಾಗಿ ನಮಗೆ ಡಿ.ಕೆ.ಶಿವಕುಮಾರ್ ಅವರನ್ನು ನಮ್ಮ ವಶಕ್ಕೆ ನೀಡಬೇಕು.

    ನಾವು ವಶಪಡಿಸಿಕೊಂಡಿರುವ ಆಸ್ತಿಗೆ ಡಿ.ಕೆ.ಶಿವಕುಮಾರ್ ತೆರಿಗೆ ಕಟ್ಟಿದ್ದಾರೆ. ಆಸ್ತಿ ಮೂಲ ಅಕ್ರಮವೋ, ಸಕ್ರಮವೋ ಎಂಬುವುದು ಗೊತ್ತಾಗಬೇಕಿದೆ. ಸೆಕ್ಷನ್ 5ರ ಪ್ರಕಾರ ಅಕ್ರಮ ಆಸ್ತಿ ಸರ್ಕಾರಕ್ಕೆ ಸೇರುತ್ತದೆ. ಅಕ್ರಮ ಆಸ್ತಿಯನ್ನು ವ್ಯಕ್ತಿ ಅನುಭವಿಸುವಂತಿಲ್ಲ. ಅಕ್ರಮ ಆಸ್ತಿ ರಾಷ್ಟ್ರೀಯ ಆಸ್ತಿ ಆಗುತ್ತದೆ. ಅಕ್ರಮ ಆಸ್ತಿಯ ಬಗ್ಗೆ ಪ್ರಶ್ನಿಸಿದಾಗ ಡಿ.ಕೆ.ಶಿವಕುಮಾರ್ ನಾಲ್ಕು ಗಂಟೆ ಮೌನವಾಗಿದ್ದರು. ಮೌನವಾಗಿರೋದು ಡಿಕೆಶಿಯವರ ಹಕ್ಕು, ತನಿಖೆ ಮಾಡೋದು ನಮ್ಮ ಹಕ್ಕು. ನಮ್ಮ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಿದೆ. ಸಾಮಾನ್ಯ ಪ್ರಶ್ನೆಗಳಿಗೂ ಉತ್ತರಿಸದೇ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸಹಕರಿಸಿಲ್ಲ. ಕೇವಲ ಅಪ್ರಸ್ತುತ ಉತ್ತರಗಳನ್ನು ನೀಡುತ್ತಾ ವಿಚಾರಣೆಗೆ ಸಹಕರಿಸಿಲ್ಲ. ಹಾಗಾಗಿ ವಿಚಾರಣೆ ನಮಗೆ ಸುದೀರ್ಘ ಸಮಯ ಬೇಕಿದೆ.

    ಕೃಷಿ ಭೂಮಿ ಮಾತ್ರವಲ್ಲದೇ ಕೃಷಿಯೇತರ ಆಸ್ತಿಗಳ ಬಗ್ಗೆ ತನಿಖೆ ನಡೆಯಬೇಕಿದೆ. ಅಧಿಕಾರಿಗಳು ವಶಕ್ಕೆ ಪಡೆದ ನಗದಿಗೆ ನಮ್ಮ ಇನ್ನು ಉತ್ತರ ಸಿಕ್ಕಿಲ್ಲ. 27 ಆಸ್ತಿ ಖರೀದಿಯಾಗಿದ್ದು, 10 ಆಸ್ತಿ ತಂದೆಯಿಂದ ಸಂಸದ ಡಿ.ಕೆ.ಸುರೇಶ್ ಅವರಿಗೆ ಬಂದಿದೆ. ನ್ಯಾಯಾಲಯ ಎಲ್ಲಾ ಆಯಾಮಗಳಲ್ಲಿ ಸಾಕ್ಷ್ಯಗಳನ್ನು ಪರಿಗಣಿಸಬೇಕಿದೆ. ತನಿಖೆ ಹಂತದಲ್ಲಿ ಎಲ್ಲವನ್ನು ವಿವರಿಸಲು ಸಾಧ್ಯವಿಲ್ಲ. ಒಂದು ವೇಳೆ ಜಾಮೀನು ನೀಡಿದ್ರೆ ಪಿತೂರಿ ನಡೆಯಲಿದ್ದು, ತನಿಖೆಗೆ ಅಡ್ಡಿಯಾಗಲಿದೆ. ಸಾಕ್ಷಿಗಳನ್ನು ತಿರುಚಬಹುದು, ಪ್ರಭಾವ ಬೀರಬಹುದು. ಈಗಾಗಲೇ ಐಟಿ ತನಿಖೆ ವೇಳೆಯ ಕೆಲವು ಸಾಕ್ಷಿಗಳು ತಿರುಗಿ ಬಿದ್ದಿದ್ದು ಜಾಮೀನು ನೀಡಬಾರದು ಎಂದು ನಟರಾಜನ್ ವಾದ ಮಂಡಿಸಿದರು.

    ಐಟಿ ತನಿಖೆ ವೇಳೆ 8 ತಿಂಗಳಲ್ಲಿ ಆಂಜನೇಯ ಮೂರು ಬಾರಿ ಹೇಳಿಕೆ ಬದಲಾಗಿದೆ. ಡಿಕೆ ಶಿವಕುಮಾರ್ ಗೆ ಸಾಕ್ಷಿಗಳನ್ನು ತಿರುಚಿರುವ ಉದಾಹರಣೆಗಳು ನಮ್ಮ ಮುಂದಿವೆ. ತನಿಖೆಯನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿದೆ. ಸಾಕ್ಷ್ಯಗಳು ತಪ್ಪೊಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ತನಿಖೆಯ ನಂತರ ಅಕ್ರಮದ ಪ್ರಮಾಣ ತಿಳಿಯಬೇಕಿದ್ದು, ಡಿ.ಕೆ.ಶಿವಕುಮಾರ್ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಕ್ರಮ 800 ಕೋಟಿಯೋ ಅದಕ್ಕಿಂತ ಹೆಚ್ಚೋ ಎಂಬುದನ್ನು ತನಿಖೆ ಮಾಡಲು ಅವಕಾಶ ನೀಡಬೇಕು.

    ಡಿಕೆ ಶಿವಕುಮಾರ್ 18 ದಿನದಲ್ಲಿ 4 ಗಂಟೆ ಮಾತ್ರ ವಿಚಾರಣೆಗೆ ಸಹಕರಿಸಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಡಿ.ಕೆ.ಶಿವಕುಮಾರ್ ಮೌನದ ಮೂಲಕ ಉತ್ತರಿಸಿದ್ದಾರೆ. ವಿಚಾರಣೆ ವೇಳೆ ಬೇಕಾಬಿಟ್ಟಿಯಾಗಿ ನೀಡಿದ್ದರಿಂದ ತನಿಖೆ ಪೂರ್ಣವಾಗಿಲ್ಲ. ಸೆಕ್ಷನ್ 45ರ ಪ್ರಕಾರ ಚಿದಂಬರಂ ಅವರಿಗೂ ನ್ಯಾಯಾಲಯ ಜಾಮೀನು ಕೊಟ್ಟಿಲ್ಲ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರಿಗೂ ಜಾಮೀನು ನೀಡಬಾರದು.

    ಅಕ್ರಮ ಹಣ ವರ್ಗಾವಣೆ ರಾಷ್ಟ್ರೀಯ ಭದ್ರತೆಗೆ ಸಂಚಕಾರ. ರಾಷ್ಟ್ರೀಯ ಭದ್ರತೆಯಿಂದಲೂ ಈ ಪ್ರಕರಣ ಪರಿಗಣಿಸಬೇಕು. ರಾಷ್ಟ್ರೀಯ ಭದ್ರತೆ ಆರೋಪಿ ದಕ್ಕೆ ತಂದಿದ್ದಾರೆ. ಇದನ್ನು ಉಕ್ಕಿನ ಕೈಗಳಿಂದ ನಿಯಂತ್ರಿಸಬೇಕು. ಕೊಲೆ ತಕ್ಷಣದ ಕೋಪದಿಂದ ಸಂಭವಿಸಬಹುದು. ಆದರೆ ಆರ್ಥಿಕ ಅಪರಾಧ ಉದ್ದೇಶ ಪೂರ್ವಕವಾಗಿ ಇರುತ್ತದೆ. ಮೂಲಗಳನ್ನ ಬಹಿರಂಗ ಪಡಿಸುತ್ತಿಲ್ಲ. ಮೂಲವೇ ಇಲ್ಲ ಎಂದರೆ ಬೆಳೆಯೋದು ಹೇಗೆ. ಅಡಿಪಾಯ ಇಲ್ಲದೆ ಕಟ್ಟಡ ನಿಲ್ಲುವುದಿಲ್ಲ. ಹಣದ ಮೂಲ ಎಂಬುದು ಅಡಿಪಾಯ. ಕೋಟೆ ಕಟ್ಟಲು ಕಲ್ಲುಬೇಕು. ನೋಟುಗಳಿಂದ ಕಟ್ಟಲಾಗದು. ಆದಾಯದ ಮೂಲ ತೋರಿಸದೇ ಆಸ್ತಿ ಮಾಡುವುದು ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ.

    ನ್ಯಾಯಾಲಯದ ಸಮಯ ಮುಗಿತು. ಬೇಗ ನಿಮ್ಮ ವಾದವನ್ನು ಮುಗಿಸಿ, ನಮಗೂ ಸ್ವಲ್ಪ ಟೈಂ ನೀಡಿದರೆ ನಾವು ವಾದ ಮಂಡಿಸುತ್ತೇವೆ. ನೀವೇ ತೀರ್ಪು ನೀಡುತ್ತಿದ್ದೀರಿ ಎಂದು ಅಭಿಷೇಕ್ ಮನುಸಿಂಘ್ವಿ ಇಡಿ ಪರ ವಕೀಲರಿಗೆ ತಮಾಷೆ ಮಾಡಿದರು. ಕೊನೆಗೆ 45 ನಿಮಿಷಗಳ ವಾದವನ್ನು ಮುಗಿಸಿದ ಬಳಿಕ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲು ಆರಂಭಿಸಿದರು.

  • ಎರಡು ಕೈ ಮುಗಿದು ಇಡಿ ಕಚೇರಿ ಪ್ರವೇಶಿಸಿದ ಡಿಕೆಶಿ

    ಎರಡು ಕೈ ಮುಗಿದು ಇಡಿ ಕಚೇರಿ ಪ್ರವೇಶಿಸಿದ ಡಿಕೆಶಿ

    ನವದೆಹಲಿ: ವಿಚಾರಣೆಗೆ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಕಚೇರಿಯನ್ನು ಕೈ ಮುಗಿದು ಒಳ ಪ್ರವೇಶಿಸಿದ್ದಾರೆ.

    ಇಂದು ಸಂಜೆ 4.50ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದರು. ನಾವು ಮನುಷ್ಯರೇ. ಇಡಿ ಅಧಿಕಾರಿಗಳು ಬುದ್ಧಿವಂತರು. ಮೊದಲು ನ್ಯಾಯಾಲಯಕ್ಕೆ ಹೋಗಿದ್ದು ಈಗ ಮತ್ತೆ ನೋಟಿಸ್ ಕೊಟ್ಟಿದ್ದಾರೆ. ನಾನು ಓಡಿ ಹೋಗಲ್ಲ ಎನ್ನುವುದು ಅವರಿಗೂ ತಿಳಿದಿದೆ. ಖಂಡಿತ ಅವರಿಗೆ ಗೌರವ ನೀಡುತ್ತೇನೆ ಎಂದು ತಿಳಿಸಿದರು.  ನಂತರ ಸರ್ದಾರ್ ಪಟೇಲ್ ಮಾರ್ಗದಲ್ಲಿರುವ ಕರ್ನಾಟಕ ಭವನಕ್ಕೆ ತೆರಳಿದರು.

    ಕರ್ನಾಟಕ ಭವನದಿಂದ ಸಹೋದರ ಸುರೇಶ್ ತಮ್ಮ ನಿವಾಸಕ್ಕೆ ಕರೆದುಕೊಂಡು ಹೋದರು. ನಂತರ ಡಿಕೆಶಿ ನೇರವಾಗಿ ಖಾನ್ ಮಾರುಕಟ್ಟೆಯಲ್ಲಿರುವ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿ ತೆರಳಿದರು. ಸಂಜೆ 6.30ರ ವೇಳೆಗೆ ಕಚೇರಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕೈ ಮುಗಿದು ಒಳ ಪ್ರವೇಶಿಸಿದರು.

    ಡಿಕೆಶಿ ಜೊತೆ ಸುರೇಶ್ ಅವರು ಕಚೇರಿಯ ಒಳ ಪ್ರವೇಶಿಲು ಮುಂದಾದಾಗ ಅಧಿಕಾರಿಗಳು ಅವರನ್ನು ತಡೆದರು. ಸಂಜೆ 7 ಗಂಟೆಯಿಂದ ಡಿಕೆ ಶಿವಕುಮಾರ್ ಅವರ ವಿಚಾರಣೆ ಆರಂಭವಾಗಿದೆ.

    ಏನಿದು ಪ್ರಕರಣ?
    2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

    ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.

  • ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಮಾಡು ತೆರಳುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ಚೈತನ್ಯಪುರಿ ಪೊಲೀಸ್ ಮತ್ತು ಎಲ್.ಬಿ. ನಗರ ಸ್ಪಷೆಲ್ ಕಾರ್ಯಾಚರಣೆ ತಂಡವು ಇಬ್ಬರನ್ನು ಬಂಧಿಸಿದೆ. ಜೊತೆಗೆ ಅವರ ಬಳಿ ಇದ್ದ 1.65 ಕೋಟಿ ರೂ. ನಗದು ಮತ್ತು ಎರಡು ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಬಂಧಿತರನ್ನು ಕೋತಪೇಟ್ ನಿವಾಸಿ ಟಿ. ವೆಂಕಟ ಶಿವ ಮಹೇಶ್ವರ ರಾವ್ ಮತ್ತು ಕುಕಟ್ಪಲ್ಲಿಯ ಎಸ್. ವೆಂಕಟೇಶ್ವರ ರಾವ್ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ರಮ ಹಣ ವರ್ಗಾವಣೆ ಮಾಡುವ ಏಜೆಂಟ್‍ರನ್ನು ಭೇಟಿ ಮಾಡಲು ಬಂದಿದ್ದಾರೆ. ಆಗ ಅಕ್ರಮ ವರ್ಗಾವಣೆಯ ಕೆಲಸದಿಂದ ಲಾಭವಿದೆ ಎಂದು ತಿಳಿದುಕೊಂಡು ನಂತರ ಅವರು ಕೂಡ ಅದೇ ಕೆಲಸಕ್ಕೆ ಸೇರಿಕೊಂಡಿದ್ದಾರೆ.

    ಕಾರ್ಯಾಚರಣೆ ತಂಡವು ಕೊಥೆಪೆಟ್ ನಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಸೂರ್ಯ ಮಿತ್ರ ಟ್ರೇಡರ್ಸ್ ಎಕ್ಸ್ ಪೋರ್ಟ್ಸ್ ಮಾಲೀಕ ಮಹೇಶ್ವರ ರಾವ್ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತ ತನ್ನ ಗೆಳೆಯ ಸತ್ಯನಾರಾಯಣ ಎಂಬಾತ 1 ಕೋಟಿ ರೂ. ಹಣ ಹೊಂದಿಸಿಕೊಡುವಂತೆ ಹೇಳಿದ್ದಾನೆ. ಅಲ್ಲದೇ ಆ ಹಣವನ್ನು ಮತ್ತೆ ನಿನಗೆ ಬೇರೆ ಬೇರೆ ಖಾತೆಗಳ ಮೂಲಕ ವಾಪಸ್ ಮಾಡುವುದಾಗಿ ಹೇಳಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ.

    ಸ್ನೇಹಿತ ಕೇಳಿದ್ದಕ್ಕೆ ಸದ್ಯ 85 ಲಕ್ಷ ಹಣ ಹೊಂದಿಸಿಕೊಂಡು ರಾವ್, ತನ್ನ ಕಾರಿನಲ್ಲಿ ದಿಲ್ ಸುಖ್ ನಗರದತ್ತ ಹೊರಟಾಗ ಸ್ಪೆಷಲ್ ಕಾರ್ಯಾಚರಣಾ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನ ಕೈಯಿಂದ ನಗದು ವಶಪಡಿಸಿಕೊಂಡಿರೋ ತಂಡ ತನಿಖೆ ಮುಂದುವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv