Tag: Illegal mining

  • ಇನ್ನೂ ಸಮಯ ಇದೆ, ಅರ್ಜೆಂಟ್ ಏನೂ ಇಲ್ಲ: ಹೆಚ್‍ಡಿಕೆ

    ಇನ್ನೂ ಸಮಯ ಇದೆ, ಅರ್ಜೆಂಟ್ ಏನೂ ಇಲ್ಲ: ಹೆಚ್‍ಡಿಕೆ

    ಮಂಡ್ಯ: ಇನ್ನೂ ಸಮಯ ಇದೆ, ಅರ್ಜೆಂಟ್ ಏನೂ ಇಲ್ಲ ಎನ್ನುವ ಮೂಲಕ ಕಲಬುರಗಿ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ ಎಂಬ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೌಪ್ಯತೆ ಕಾಪಾಡಿದ್ದಾರೆ.

    ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಲೇಟ್ ಮಂಚೇಗೌಡ ಕುಟುಂಬದಲ್ಲಿ ರಾಸುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಪಾಲಿಕೆಯಲ್ಲಿ ಮೇಯರ್ ಚುನಾವಣೆಗೆ ಇನ್ನೂ ಸಮಯವಿದೆ. ಈಗಲೇ ಏನು ಹೇಳುವುದಿಲ್ಲ ಎಂದು ಸುದ್ದಿಗಾರರಿಗೆ ಯಾವುದೇ ಮಾಹಿತಿ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ:  ಮೀನು ಹಿಡಿಯಲು ಹೋದ ಯುವಕ ನೀರುಪಾಲು

    ಇಂದಿನಿಂದ ಅಧಿವೇಶನ ಪ್ರಾರಂಭವಾಗಿದೆ. ಇಂದು ಅಧಿವೇಶನದಲ್ಲಿ ಯಾವುದೇ ಚರ್ಚೆಗಳು ನಡೆಯುವುದಿಲ್ಲ. ಕೇವಲ ಸಂತಾಪ ಸೂಚಕ ಸಭೆ ಮಾತ್ರ ಇದೆ. ನಾಳೆಯಿಂದ ಚರ್ಚೆಗಳು ಪ್ರಾರಂಭವಾಗಲಿದೆ. ಇಂದು ಜೆಡಿಎಸ್ ಶಾಸಕಾಂಗ ಸಭೆ ಕರೆದಿದ್ದು, ಅಧಿವೇಶನದಲ್ಲಿ ಯಾವ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಇಎಸ್‍ಐಯಿಂದ ಹೃದ್ರೋಗ ವಿಭಾಗದ ಸ್ಥಳಾಂತರ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು: ಬಿ.ಟಿ.ನಾಗಣ್ಣ

    ಮಂಡ್ಯದಲ್ಲಿ ಅಕ್ರಮ ಜತೆಗೆ ಸಕ್ರಮ ಗಣಿಗಾರಿಕೆ ಸ್ಥಗಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ಶಾಸಕರು ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ನಾನು ಮೂಗು ತೂರಿಸುವುದಿಲ್ಲ. ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ದೊಡ್ಡ ಸಾಮಥ್ರ್ಯ ಇರೋರು ಇದ್ದಾರೆ. ಈ ಗೊಂದಲದಲ್ಲಿ ನಾನು ಮೂಗು ತೂರಿಸುವುದು ಸರಿಯಲ್ಲ. ಸಮರ್ಥರು ಈ ಜಿಲ್ಲೆಯಲ್ಲಿ ಇದ್ದಾರೆ ಅವರೇ ಸರಿಪಡಿಸಿಕೊಳ್ಳುತ್ತಾರೆ ಎಂದು ಸಂಸದೆ ಸುಮಲತಾ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ:  ಗುಜರಾತ್‍ನ 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕಾರ

  • ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದ ಸುಮಲತಾ ಅಂಬರೀಶ್

    ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದ ಸುಮಲತಾ ಅಂಬರೀಶ್

    ನವದೆಹಲಿ:  ಕೆಆರ್‌ಎಸ್‌ ಆಣೆಕಟ್ಟು ಸುತ್ತ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಲೋಕಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಧ್ವನಿ ಎತ್ತಿದ್ದಾರೆ.

    ಲೋಕಸಭೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡಿದ ಸುಮಲತಾ ಅಂಬರೀಶ್ ಅವರು, ಕೆಆರ್‍ಎಸ್ ಸುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದಕ್ಕಾಗಿ ರಾಸಾಯನಿಕ ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲದ ಗುಣಮಟ್ಟ ಕುಸಿದಿದೆ. ಬೆಳೆಗಳ ಮೇಲೆ ಪರಿಣಾಮ ಬೀರಿದೆ. ವಾಯುಮಾಲಿನ್ಯದಿಂದ ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: KRS ಸುತ್ತಮುತ್ತಲಿನ ಗಣಿಗಾರಿಕೆ ಬಗ್ಗೆ ತನಿಖೆಗೆ ಅಮಿತ್ ಶಾಗೆ ಸುಮಲತಾ ಮನವಿ

    ಕೇಂದ್ರ ಸರ್ಕಾರ ಕೂಡಲೇ ಅಕ್ರಮ ಗಣಿಗಾರಿಕೆ ನಿಲ್ಲಿಸಿ ಗ್ರಾಮಗಳನ್ನು ಉಳಿಸಬೇಕು ಮತ್ತು ಇವುಗಳ ಮೇಲ್ವಿಚಾರಣೆ ಮಾಡಬೇಕೆಂದು ಸುಮಲತಾ ಅವರು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವ ಭೂಪೇಂದ್ರ ಯಾದವ್ ಅವರು, 34 ರಾಜ್ಯಗಳಲ್ಲಿ 1,140 ವಾಯು ನಿಯಂತ್ರಣ ಕೇಂದ್ರಗಳು ಸ್ಥಾಪಿಸಿದ್ದು, ಮಂಡ್ಯ ಕ್ಷೇತ್ರದ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು ಎಂದು ಉತ್ತರ ನೀಡಿದರು. ಇದನ್ನೂ ಓದಿ: ಸುಮಲತಾ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ

    ಈ ಹಿಂದೆ ಮಂಡ್ಯ ರಾಜಭವನದಲ್ಲಿ ಮತನಾಡಿದ್ದ ಸುಮಲತಾ ಅಂಬರೀಶ್ ಅವರು ನನ್ನ ಹೋರಾಟ ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿದೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತಷ್ಟೇ ನಾನು ಸಮಸ್ಯೆ ಸೃಷ್ಟಿಸಿಲ್ಲ, ಯಾರು ಸಮಸ್ಯೆ ಸೃಷ್ಟಿಸಿದಾರೋ ಅವರು ಅರ್ಥ ಮಾಡ್ಕೊಂಡ್ರೆ ಸಾಕು. ಅಕ್ರಮ ಗಣಿಗಾರಿಕೆ ನಿಲ್ಲಿಸುವ ವಿಚಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಕಷ್ಟ ಅಂತ ನನಗೂ ಗೊತ್ತು. ಆದರೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಸಂಸತ್ ನಲ್ಲೂ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪ ಮಾಡ್ತೇನೆ. ಅಕ್ರಮ ಗಣಿಗಾರಿಕೆ ಬಗ್ಗೆ ಎಲ್ಲರ ಗಮನಕ್ಕೆ ತಂದಿದ್ದೇನೆ. ನನ್ನ ಹೋರಾಟ ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿದೆ. ನನ್ನ ಹೋರಾಟದತ್ತ ನನ್ನ ಗಮನ ಇರುತ್ತದೆ. ನಾನು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ ಎಂದು ಹೇಳಿದ್ದರು.

     

     

  • ಕೆಆರ್‌ಎಸ್‌ ಸುತ್ತಲಿನ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ- ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ಕೆಆರ್‌ಎಸ್‌ ಸುತ್ತಲಿನ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ- ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ನವದೆಹಲಿ: ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿರುವ ಸಂಸದೆ, ಡ್ಯಾಂ ಸುತ್ತಮುತ್ತಲ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅತಿರೇಕದ ಅಕ್ರಮ ಗಣಿಗಾರಿಕೆಯಿಂದ ಸಮಸ್ಯೆಯಾಗುತ್ತಿದೆ. ಗಣಿಗಾರಿಕೆಯಿಂದ ಡ್ಯಾಂ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ಮುಂದೆ ಸಂಭವಿಸಬಹುದಾದ ಅಪಾಯ ಕುರಿತ ಅಂಶಗಳನ್ನು ಸಚಿವರಿಗೆ ತಿಳಿಸಿದ್ದಾರೆ.

    ಗಣಿಗಾರಿಕೆ ಕುರಿತು ತನಿಖೆ ನಡೆಸಲು ಮತ್ತು ಪರಿಹರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ಇಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ, ಕೆಆರ್‌ಎಸ್‌ ಅಣೆಕಟ್ಟೆಗೆ ಅಕ್ರಮ ಗಣಿಗಾರಿಕೆಯಿಂದ ಬಂದೊದಗಿರುವ ಅಪಾಯವನ್ನು ಅವರ ಗಮನಕ್ಕೆ ತಂದು, ಈ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ ಎಂದು ಬರೆದುಕೊಂಡಿದ್ದಾರೆ.

  • ಕನ್ನಂಬಾಡಿ ಕಟ್ಟೆ, ಬೇಬಿ ಬೆಟ್ಟದ ಸರಹದ್ದಿನಲ್ಲಿ ಸ್ಪೋಟಕಗಳು ಪತ್ತೆ

    ಕನ್ನಂಬಾಡಿ ಕಟ್ಟೆ, ಬೇಬಿ ಬೆಟ್ಟದ ಸರಹದ್ದಿನಲ್ಲಿ ಸ್ಪೋಟಕಗಳು ಪತ್ತೆ

    ಮಂಡ್ಯ: ಕನ್ನಂಬಾಡಿ ಕಟ್ಟೆ ಹಾಗೂ ಬೇಬಿ ಬೆಟ್ಟದ ಸರಹದ್ದಿನಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬರುವ ಕನ್ನಂಬಾಡಿ ಕಟ್ಟೆ ಹಾಗೂ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಡುವೆ ಜಿಲೆಟಿನ್ ಕಡ್ಡಿಗಳು ಸೇರಿದಂತೆ ಇತರೆ ಸ್ಪೋಟಕ ವಸ್ತಗುಳು ಪತ್ತೆಯಾಗಿವೆ. ದನ ಮೇಯಿಸಲು ವ್ಯಕ್ತಿಯೊಬ್ಬ ತೆರಳಿದಾಗ ಈ ಸ್ಫೋಟಕ ವಸ್ತುಗಳಿರುವುದ ಪತ್ತೆಯಾಗಿದೆ. ಇದನ್ನೂ ಓದಿ: ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

    ಈ ಸ್ಪೋಟಕಗಳನ್ನು ಕಲ್ಲು ಗಣಿಗಾರಿಕೆಗೆ ಉಪಯೋಗಿಸಲಾಗುತ್ತದೆ. ಒಂದಯ ಕಡೆ ಅಧಿಕಾರಿಗಳು ಹಾಗೂ ಗಣಿ ಮಾಲೀಕರು ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಸ್ಪೋಟಕಗಳು ಬಳಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ಸ್ಪೋಟಕಗಳು ಇಲ್ಲಿ ಹೇಗೆ ಬಂತು ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಂಬಾಡಿ ಕಟ್ಟೆಯ ಸರಹದ್ದಿನಲ್ಲಿ ಇಂತಹ ಸ್ಫೋಟಕ ವಸ್ತಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿವೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹ ಪಡಿಸುತ್ತಿದ್ದಾರೆ. ಈ ಕುರಿತು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ: ಸುರೇಶ್‍ಗೌಡ

    ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ: ಸುರೇಶ್‍ಗೌಡ

    ಮಂಡ್ಯ: ನಮ್ಮ ಕ್ಷೇತ್ರದಲ್ಲೂ ಒಂದೆರಡು ಹೊರತುಪಡಿಸಿ ಉಳಿದೆಲ್ಲವೂ ಅಕ್ರಮ ಗಣಿಗಾರಿಕೆ. ಹೀಗಾಗಿ ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ನಾನೂ ನಿಮಗೆ ಸಹಕಾರ ನಿಡುತ್ತೇನೆ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ ಎಂದು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಶಾಸಕ ಸುರೇಶ್‍ಗೌಡ ಆಹ್ವಾನ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ತಡೆಯುವಂತೆ ಸುಮಲತಾ ಅವರನ್ನು ಆಹ್ವಾನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ. ಶ್ರೀರಂಗಪಟ್ಟಣ ಹಾಗೂ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡುತ್ತಿರುವ ಸಂಸದೆ ಸುಮಲತಾ ಅಂಬರೀಶ್ ನಾಗಮಂಗಲದ ಕ್ಷೇತ್ರದ ಕಡೆಯು ಸ್ವಲ್ಪ ಬರಬೇಕು‌. ಅಕ್ಕ ದಯಮಾಡಿ ನನ್ನ ಕ್ಷೇತ್ರ ನಾಗಮಂಗಲದಲ್ಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ. ನಾನು ಸ್ಥಳೀಯನಾಗಿರುವುದರಿಂದ ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ಹೀಗಾಗಿ ನೀವೇ ಬಂದು ನಿಲ್ಲಿಸಿಕೊಡಿ, ನಿಮಗೆ ನಾನೂ ಬೆಂಬಲ ನೀಡುತ್ತೇನೆ, ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

    ಸ್ವತಃ ನಾನೇ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇನೆ. ಈ ಹಿಂದೆ ನಾನು ಆ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ವಿಧಾನ ಸಭೆ, ಕೆಡಿಪಿ ಸಭೆಗಳಲ್ಲಿ ಅಕ್ರಮ ಗಣಿಗಾರಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಯಡಿಯೂರಪ್ಪನವರೇ ಅಕ್ರಮವನ್ನು ಸಕ್ರಮ ಮಾಡಿ ಎಂದಿದ್ದಾರೆ. ನಾನು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಸಂಸದೆ ಅಕ್ಕ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ಧ್ವನಿಯಾಗಿದ್ದಾರೆ. ಅವರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ, ಬಂದು ನಿಲ್ಲಿಸಲಿ. ನಾಗಮಂಗಲದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆದರೆ ವೈಕ್ತಿಕವಾಗಿ ಕೃತಜ್ಞನಾಗಿರುತ್ತೇನೆ ಎಂದಿದ್ದಾರೆ.

  • ಸುಮಲತಾ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ

    ಸುಮಲತಾ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ

    ಮಂಡ್ಯ: ಸಂಸದೆ ಸುಮಲತಾ ದಾಳಿ ಬೆನ್ನಲ್ಲೇ ಅಕ್ರಮ ಗಣಿಗಳ ಮೇಲೆ ತಹಶೀಲ್ದಾರ್ ದಾಳಿ ಮಾಡಿ ಗಣಿಗಳನ್ನು ಬಂದ್ ಮಾಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣದ ಚೆನ್ನನಕೆರೆ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಕ್ವಾರೆ ಹಾಗೂ ಶ್ರೀರಂಗಪಟ್ಟಣ ಕ್ವಾರೆಗಳ ಮೇಲೆ ತಹಶೀಲ್ದಾರ್ ರೂಪಾ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಆಗಬೇಕು – ಮಂಡ್ಯ ಸಂಸದೆ ಸುಮಲತಾ ಆಗ್ರಹ

    ಚೆನ್ನನಕೆರೆ ಸಮೀಪದಲ್ಲಿ ಅಕ್ರಮವಾಗಿ ಕಲ್ಲು ಕ್ವಾರೆ ನಡೆಯುತ್ತಿದ್ದು, ಅಕ್ರಮ ಕ್ವಾರೆ ಪ್ರದೇಶಗಳಿಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪ ಪೊಲೀಸರ ಜೊತೆ ದಾಳಿ ನಡೆಸಿ ಅಕ್ರಮ ಕ್ವಾರೆಗಳಿಗೆ ಬೀಗ ಜಡಿದಿದ್ದಾರೆ. ಇತ್ತೀಚೆಗಷ್ಟೇ ಈ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದ ಸಂಸದೆ ಸುಮಲತಾ ಅವರು ಅಕ್ರಮ ಕಲ್ಲು ಕ್ವಾರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳು ಅಕ್ರಮ ಕಲ್ಲು ಕ್ವಾರೆಗಳ ಮೇಲೆ ದಾಳಿ ಮಾಡಿದ್ದಾರೆ. ಕಠಿಣ ಕ್ರಮಕ್ಕೆ ಮುಂದಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ

    ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಮತ್ತು ಹಂಗರಹಳ್ಳಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವೀಕ್ಷಣೆಗೆ ಹೋಗದಂತೆ ಅಡ್ಡಿಪಡಿಸಿದ್ದನ್ನು ನೋಡಿ ಸುಮಲತಾ, ಇದೇನ್ ಭಾರತ-ಪಾಕಿಸ್ತಾನ ಗಡಿನಾ ಎಂದು ಆಘಾತ ವ್ಯಕ್ತಪಡಿಸಿದ್ದರು. ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಊರವರ ಮನೆಗಳನ್ನು ನೋಡಿ ಶಾಕ್ ಆಗಿದ್ದರು. ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡುವ ವೇಳೆ ವಿಷಯವನ್ನು ಬೇರೆಡೆಗೆ ತಿರುಗಿಸುವ ಯತ್ನ ಮಾಡಲಾಗ್ತಿದೆ. ಶಾಸಕರಿಗೆ ನಿಮ್ಮ ಕೊಡುಗೆ ಏನು..? ನಿಮ್ಮ ಕಣ್ಣ ಮುಂದೆಯೇ ಇಷ್ಟು ಭ್ರಷ್ಟಾಚಾರ, ಅನ್ಯಾಯ ನಡೆಯುತ್ತಿದ್ದರೂ ಏಕೆ ಸುಮ್ಮನಿದ್ದೀರಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಸುಮಲತಾ ತಿರುಗೇಟು ನೀಡಿದ್ದರು.

    ಮಾಜಿ ಶಾಸಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಭೇಟಿ ನೀಡುವಂತೆ ಘೋಷಣೆ ಕೂಗಿದರು. ಆ ಬಳಿಕ ಬಂಡಿಸಿದ್ದೇಗೌಡ ಮಾಲೀಕತ್ವದ ಗಣಿಗಾರಿಕೆಗೂ ಸುಮಲತಾ ಭೇಟಿ ನೀಡಿ ಪರಿಶೀಲಿಸಿದ್ದರು.

  • ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯ: ಅಕ್ರಮ ಗಣಿಗಾರಿಕೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವುದರ ಮಧ್ಯೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಕ್ರಮ ಮಾಡಲು ಅನುಮತಿ ಕೊಡಬೇಕೆಂದು ಶ್ರೀರಂಗಪಟ್ಟಣ ತಾಲೂಕು ಚನ್ನನಕೆರೆ, ಜಕ್ಕನಹಳ್ಳಿ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಈ ಎರಡು ಗ್ರಾಮದಲ್ಲಿ ಸುಮಾರು 300 ರಿಂದ 400 ಕುಟುಂಬ ವಾಸವಾಗಿವೆ. ಗ್ರಾಮಗಳಲ್ಲಿ 20 ವರ್ಷದಿಂದ ಹಿಡುವಳಿ ಜಮೀನಿನಲ್ಲಿ ಕಲ್ಲು ಬಂಡೆ ಇದ್ದು, ಕೈಯಲ್ಲಿ ಜಲ್ಲಿ, ಸೈಜು ಮತ್ತು ಬೋಡ್ರಸ್‍ಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಸ್ಥಳೀಯ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಸಣ್ಣ ಪುಟ್ಟ ಟ್ರ್ಯಾಕ್ಟರ್, ಲಾರಿಗಳನ್ನು ತೆಗೆದುಕೊಂಡು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮನೆ ಕಟ್ಟಲು ಸಾಮಗ್ರಿಗಳನ್ನು ಒದಗಿಸಿಕೊಡುತ್ತಿದ್ದೇವೆ. ಹೀಗಾಗಿ ಸಕ್ರಮ ಮಾಡಿಕೊಂಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಗ್ರಾಮಗಳ ವ್ಯಾಪ್ತಿಯಲ್ಲಿ ಕ್ರಷರ್‍ಗಳನ್ನು ಎಂ ಸ್ಯಾಂಡ್, ಜಲ್ಲಿಪುಡಿ ಮಾಡಲು ಸರ್ಕಾರದಿಂದ ಪರವಾನಗಿ ನೀಡಲಾಗಿದೆ. ಕಾವೇರಿ ಸ್ಟೋನ್ ಕ್ರಷರ್, ಧನಲಕ್ಷ್ಮೀ ಸ್ಟೋನ್ ಕ್ರಷರ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್, ಜೆ.ಜೆ.ಸ್ಟೋನ್ ಕ್ರಷರ್ ಮಾಲೀಕರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಇದನ್ನೇ ನಂಬಿ ನೂರಾರೂ ಕುಟುಂಬ ಜೀವನ ನಡೆಸುತ್ತಿವೆ. ಆದ್ದರಿಂದ ಗಣಿಗಾರಿಕೆ ಸಕ್ರಮ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

    ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದೇವೆ. ಕೋವಿಡ್ ಕಾರಣದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಇದೀಗ ಉದ್ಯೋಗ ಕಳೆದುಕೊಂಡು ಗ್ರಾಮೀಣ ಭಾಗಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಬಾರದೇ ನಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

  • ಅಕ್ರಮ ಕಲ್ಲು ಗಣಿಗಾರಿಕೆಗೆ ಹೆಚ್‍ಡಿಕೆಯೇ ಪ್ರಮುಖ ರೂವಾರಿ: ಎಎಪಿ ಆರೋಪ

    ಅಕ್ರಮ ಕಲ್ಲು ಗಣಿಗಾರಿಕೆಗೆ ಹೆಚ್‍ಡಿಕೆಯೇ ಪ್ರಮುಖ ರೂವಾರಿ: ಎಎಪಿ ಆರೋಪ

    ಬೆಂಗಳೂರು: ರಾಜ್ಯದ ಹಳೇ ಮೈಸೂರು ಭಾಗದ ವಿವಿಧೆಡೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಆಪ್ತರಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರವು ಇದಕ್ಕೆ ಬೆಂಬಲವಾಗಿ ನಿಂತಿದೆ ಎಂದು ಇಂದಿಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದರು.

    ಕೆಆರ್‍ಎಸ್ ನಿರ್ಮಾಣದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮುಂತಾದ ಮಹನೀಯರ ಶ್ರಮವಿದೆ. ಲಕ್ಷ ಎಕರೆಗೂ ಅಧಿಕ ಭೂಮಿಗೆ ಕೆಆರ್‍ಎಸ್ ನೀರುಣಿಸುತ್ತಿದೆ. ಕೆಆರ್‍ಎಸ್ ಸಮೀಪ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರಿಂದ ಅಣೆಕಟ್ಟೆ ಒಡೆದು ಹೋದರೆ ಭಾರೀ ಅನಾಹುತ ಸಂಭವಿಸಲಿದೆ. ಇದನ್ನು ಅರ್ಥ ಮಾಡಿಕೊಳ್ಳದ ಕುಮಾರಸ್ವಾಮಿಯವರು ಅಕ್ರಮದ ವಿರುದ್ಧ ಧ್ವನಿ ಎತ್ತಿರುವ ಸುಮಲತಾ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ನಾಚಿಕೆಗೇಡು.

    ಕೆಆರ್‍ಎಸ್‍ನಿಂದ ಕೇವಲ ಹತ್ತು ಕಿಮೀ ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಸದ್ಯ 80ಕ್ಕೂ ಹೆಚ್ಚು ಕ್ರಷರ್ ಗಳಿದ್ದು, ಈ ಪೈಕಿ 50 ಕ್ರಷರ್ ಅನಧಿಕೃತ. ಹಂಗರಹಳ್ಳಿಯಿಂದ ಪ್ರತಿದಿನ 500ಕ್ಕೂ ಹೆಚ್ಚು ಲಾರಿಗಳಲ್ಲಿ ಕಲ್ಲುಗಳು ಹೋಗುತ್ತಿವೆ. ಅಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ ಅನೇಕ ಮುಖಂಡರು ಶಾಮೀಲಾಗಿದ್ದಾರೆ. ದಂಧೆಯ ಪ್ರಮುಖ ರೂವಾರಿಯಾಗಿ ಕುಮಾರಸ್ವಾಮಿ ಇವೆಲ್ಲದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಸಹಾಯಕರಾಗಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಪುಟ್ಟರಾಜು ಇದ್ದಾರೆ ಎಂದು ಜಗದೀಶ್ ವಿ .ಸದಂ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪಕ್ಷದ ಕಾನೂನು ವಿಭಾಗದ ರಾಜ್ಯಾಧ್ಯಕ್ಷ ನಂಜಪ್ಪ ಕಾಳೇಗೌಡ ರವರು ಮಾತನಾಡಿ ಬೆಂಗಳೂರು ಗ್ರಾಮಾಂತರ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಮೈಸೂರು, ಕನಕಪುರ ಭಾಗಗಳಲ್ಲಿ ರಾಜ್ಯದ ನೈಸರ್ಗಿಕ ಸಂಪತ್ತು ಅವ್ಯಾಹತವಾಗಿ ಲೂಟಿಯಾಗುತ್ತಿದ್ದು, ಸರ್ಕಾರದ ಬೊಕ್ಕಸ ಸೇರಬೇಕಾಗಿದ್ದ ಸಾವಿರಾರು ಕೋಟಿ ರೂಪಾಯಿ ರಾಜಸ್ವ ಧನವು ರಾಜಕಾರಣಿಗಳು ಹಾಗೂ ಉದ್ಯಮಿಗಳ ಪಾಲಾಗುತ್ತಿದೆ. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

    ಈ ಹಿಂದೆ ಎಎಪಿಯ ತಂಡವು ಸ್ವತಃ ಬೇಬಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ನಮ್ಮ ಒತ್ತಡಕ್ಕೆ ಮಣಿದು ಬೇಬಿ ಬೆಟ್ಟದಲ್ಲಿನ ಅಕ್ರಮ ಗಣಿಗಾರಿಕೆಗೆ ಸರ್ಕಾರ ತಕ್ಷಣವೇ ಬ್ರೇಕ್ ಹಾಕಿತ್ತು. ಆದರೆ ಕೆಲ ದಿನಗಳ ನಂತರ ಮತ್ತೆ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ನಾವು ಸರ್ಕಾರಕ್ಕೆ ಅನೇಕ ಪತ್ರಗಳನ್ನು ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಕ್ರಮಕ್ಕೆ ಸಹಕಾರ ನೀಡುತ್ತಾ ಆಡಳಿತ ನಡೆಸುವ ಬದಲು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ, ಇಲ್ಲವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

  • ಸುಮಲತಾ ನಟೋರಿಯಸ್, ಸಂಸದ ಸ್ಥಾನಕ್ಕೆ ಅರ್ಹರಲ್ಲ: ರವೀಂದ್ರ ಶ್ರೀಕಂಠಯ್ಯ

    ಸುಮಲತಾ ನಟೋರಿಯಸ್, ಸಂಸದ ಸ್ಥಾನಕ್ಕೆ ಅರ್ಹರಲ್ಲ: ರವೀಂದ್ರ ಶ್ರೀಕಂಠಯ್ಯ

    – ಅಂಬರೀಶ್ ಕಾಲದಲ್ಲಿಯೇ ಅಕ್ರಮ ಗಣಿಗಾರಿಕೆ ನಡೆದಿರೋದು

    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ನಟೋರಿಯಸ್, ಅವರು ಸಂಸದ ಸ್ಥಾನಕ್ಕೆ ಆರ್ಹರಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಸುಮಲತಾ ಅವರು ತಮ್ಮ ಕ್ರಿಮಿನಲ್ ಮೈಂಡ್ ಅನ್ನು ಚಿತ್ರರಂಗದಲ್ಲಿ ಬಳಸಲಿ. ರಾಜಕಾರಣಕ್ಕೆ ಕ್ರಿಮಿನಲ್ ಮೈಂಡ್ ಅಪ್ಲೇ ಮಾಡಬೇಡಿ. ಸುಮಲತಾ ಅವರು ಡ್ಯಾಂ ಬಿರುಕು ಬಿಟ್ಟಿದೆ ಅಂತಾ ನೂರು ಬಾರಿ ಹೇಳಿ ಆಣೆಕಟ್ಟಿಗೆ ದೃಷ್ಟಿಯಾಗಿಸಿದ್ದಾರೆ. ಎಂಪಿಯವರ ಕೆಟ್ಟು ಕಣ್ಣು ನಮ್ಮ ಆಣೆಕಟ್ಟೆಗೆ ತಾಗಿದೆ. ಹಾಗಾಗಿ ಡ್ಯಾಂನಲ್ಲಿ ಪೂಜೆ ಮಾಡಿಸೋದಕ್ಕೆ ಹೇಳಿದ್ದೇನೆ ಎಂದು ವ್ಯಂಗ್ಯ ಮಾಡಿದರು.

    1995-2008ರಲ್ಲಿ ಅಂಬರೀಶ್ ಸಂಸದರಾಗಿದ್ದಾಗಲೇ ಮಂಡ್ಯ ಹಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ಶುರುವಾಗಿತ್ತು. ಈಗ ಅದೇ ಅಂಬರೀಶ್ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡ್ತಾ ಇದ್ದೀರಾ? ನೀವು ಮೊದಲು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಿನ್ನೆ ನೋಡಿದ ಹಳ್ಳ-ಕೊಳ್ಳಗಳೆಲ್ಲ ಅಂಬರೀಶ್ ಅವರ ಕಾಲದಲ್ಲಿ ಆಗಿರೋದು. ಹಂಗರಹಳ್ಳಿಯಲ್ಲಿ 2007ರ ಹಿಂದೆ ಅಕ್ರಮ ಗಣಿಗಾರಿಕೆ ನಡೆದಿದೆ. ಅಂಬರೀಶ್ ಅವರ ಕಾಲದಲ್ಲಿಯೇ ಅಕ್ರಮ ದಾಳಿ ನಡೆದಿರೋದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಸಂಸದರ ಎಲ್ಲ ಡೀಲ್ ಗಳ ಸಾಕ್ಷಿಗಳು ನಮ್ಮ ಬಳಿಯಲ್ಲಿದ್ದು, ಸಮಯ ಬಂದಾಗ ಬಿಡುಗಡೆ ಮಾಡೋದಾಗಿ ಹೇಳಿದರು.

    ಅದು ಸಂಸದರ ವ್ಯಕ್ತಿತ್ವವನ್ನು ತೋರಿಸುತ್ತೆ:
    ಈ ಹಿಂದೆ ಸುನಂದಾ ಜಯರಾಂನಂತಹ ರೈತ ಮಹಿಳೆಯರು ಅಹೋರಾತ್ರಿ ಧರಣಿ ಮಾಡಿ ಆಣೆಕಟ್ಟು ಕಾಪಾಡಿಕೊಂಡಿದ್ದರು. ಆ ರೀತಿ ರೈತ ಭಾಷೆಯಲ್ಲಿ ಕುಮಾರಣ್ಣ ಮಾತಾನಾಡಿದ್ರೆ, ಇವರೇ ಬೇರೆ ವ್ಯಾಖ್ಯಾನಿಸಿಕೊಂಡಿದ್ದಾರೆ. ಸಂಸದರು ಇಷ್ಟು ನೀಚಮಟ್ಟದಲ್ಲಿ ಅರ್ಥೈಸಿಕೊಂಡಿರುವ ಕಲ್ಪನೆ ಕುಮಾರಣ್ಣನಿಗೆ ಇರಲಿಲ್ಲ. ಅವರೇ ಬೇರೆ ಅರ್ಥೈಸಿಕೊಂಡು ಮಾತಾಡ್ತಿರೋದು ಅದು ಸಂಸದರ ವ್ಯಕ್ತಿತ್ವವನ್ನು ತೋರಿಸುತ್ತೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

    ಆಣೆಕಟ್ಟಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಮೈನಿಂಗ್ ಮಾಡಬಾರದು ಅಂತ ಕುಮಾರಸ್ವಾಮಿ ಅವರು ಕಾನೂನು ಮಾಡಿದ್ದರು. ಆದ್ರೆ ನಿನ್ನೆ ಸಂಸದರು 30 ಕಿಲೋ ಮೀಟರ್ ದೂರದಲ್ಲಿರುವ ಗಣಿಗಾರಿಕೆಗಳಿಗೆ ಭೇಟಿ ನೀಡಿದ್ದಾರೆ. ಮೊದಲು 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಅಕ್ರಮ ಗಣಿಗಾರಿಕೆ ಬಂದು ನೋಡಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

    ನಾನು ನಮ್ಮ ಬಳಿ ರಾಜಕೀಯದಲ್ಲಿ ಪ್ರಜ್ವಲ್, ನಿಖಿಲ್ ಎಂಬ ಮಿಸೈಲ್ ಇವೆ ಅಂತಾ ಹೇಳಿದ್ದೆ. ಆದ್ರೆ ಅದನ್ನು ನೀವು ನಿಮ್ಮ ನಟೋರಿಯಸ್ ಬುದ್ಧಿ ಮೂಲಕ ತಿರುಚಿದ್ದಿರಿ. ನೀವು ಸಂಸದ ಸ್ಥಾನಕ್ಕೆ ಅರ್ಹರಲ್ಲ. ನೀವು ಬೆಂಗಳೂರಿನ ಹೋಟೆಲ್ ಗೆ ನಿಮ್ಮ ಇಬ್ಬರು ಬೆಂಬಲಿಗರನ್ನು ಯಾವ ಡೀಲ್ ಕಳಿಸಿದ್ರಿ ಎಂಬ ಸಾಕ್ಷಿ ನಮ್ಮ ಬಳಿ ಇದೆ ಎಂದು ಆರೋಪಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ಕುಮಾರಸ್ವಾಮಿ – ಹೆಚ್‍ಡಿಕೆ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

     

  • ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

    ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

    – ಸುಮಲತಾ ಹೇಳಿಕೆ ಬೆನ್ನಲ್ಲೇ ಫೋಟೋ ಹರಿಬಿಟ್ಟ ಫ್ಯಾನ್ಸ್

    ಮಂಡ್ಯ: ನಟ ಅಂಬರೀಶ್ ಮುಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಂಸದೆ ಸುಮಲತಾ ಮತ್ತು ಅಂಬರೀಶ್ ಬೆಂಬಲಿಗರು ಪೇಜ್ ಗಳಲ್ಲಿ ವಿವಿಧ ಬರಹಗಳಡಿ ಈ ಫೋಟೋ ಶೇರ್ ಮಾಡಲಾಗಿದೆ.

    ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಮಲತಾ, ನಮ್ಮ ಪಕ್ಷ ನಿಮ್ಮಂತಹ ಸಾವಿರಾರೂ ಲೀಡರ್ ಗಳನ್ನು ತಯಾರು ಮಾಡಿದೆ ಅಂತ ಹೇಳುತ್ತಾರೆ. ನೀವು ಸಾವಿರಾರರು ಜನರನ್ನು ತಯಾರು ಮಾಡಿಸಿರಬಹುದು. ಆದ್ರೆ ನಿಮ್ಮ ಈ ರೀತಿಯ ನಡವಳಿಕೆ, ಮಾತುಗಳಿಂದಲೇ ಎಷ್ಟೋ ಒಳ್ಳೆಯ ಜನ ಬೇರೆ ಪಕ್ಷ ಸೇರಿಕೊಂಡಿದ್ದಾರೆ. ನಿಮ್ಮ ಮಾತುಗಳಿಂದಲೇ ಅವರೆಲ್ಲ ನಿಮ್ಮ ಪಕ್ಷ ತೊರೆದಿರೋದು. ನೀವು ತಯಾರು ಮಾಡಿರುವ ಸಾವಿರಾರರು ಜನ, ಅದಕ್ಕಿಂತ ದೊಡ್ಡವರು ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಮ್ಮ ಮನೆಯಲ್ಲಿ ನಿಂತಿರೋದನ್ನು ಹಲವು ವರ್ಷ ನೋಡಿದ್ದೇನೆ ಎಂದು ಹೇಳಿದ್ದರು.

    ಈ ಹೇಳಿಕೆ ಬೆನ್ನಲ್ಲೇ ಫೋಟೋ ವೈರಲ್ ಮಾಡುವ ಮೂಲಕ ಸುಮಲತಾ ಬೆಂಬಲಿಗರು ದಳಪತಿಗಳಿಗೆ ಟಕ್ಕರ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿನ್ನೆ ಅಂಬರೀಶ್ ಎದುರು ಕೈಕಟ್ಟಿ ನಿಲ್ಲುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

    ಚೈಲ್ಡಿಶ್ ಹೇಳಿಕೆ:
    ಸ್ಥಳೀಯ ಜೆಡಿಎಸ್ ಶಾಸಕರುಗಳು ಕಳೆದ ಎರಡು ವರ್ಷದಿಂದ ನಾನು ಏನು ಮಾಡಿದರೂ ಅದನ್ನು ವಿರೋಧ ಮಾಡಿಕೊಂಡು ಬಂದಿದ್ದಾರೆ. ಅವರಿಂದ ಸಹಕಾರವನ್ನ ಬಯಸುವುದು ಕನಸಿನ ಮಾತು. ಯಾರಾದರೂ ಒಳ್ಳೆ ಕೆಲಸ ಮಾಡಿದರೆ ಅದನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ. ಕೊರೊನದ ಸಂದರ್ಭದಲ್ಲಿ ಆಕ್ಸಿಜನ್ ಹಾಗೂ ಐಸಿಯು ಅಂಬ್ಯುಲೆನ್ಸ್ ನಾನು ಪರ್ಸನಲ್ ಆಗಿ ಕೊಡಿಸಿದ್ದೇನೆ. ಒಂದೊಂದು ಜೀವಕ್ಕೂ ಬೆಲೆ ಇಲ್ವಾ? ಅವರು ಎಲ್ಲವನ್ನು ತಿರುಚಿ ತಿರುಗಿಸಿ ಹೇಳ್ತಾರೆ. ಕಳೆದ ಲೋಕ ಸಭೆ ಚುನಾವಣೆ ಸೋಲು ಇದುವರೆಗೆ ಡೈಜೆಸ್ಟ್ ಮಾಡಿಕೊಳ್ಳೋಕೆ ಅವರಿಗೆ ಆಗಿಲ್ಲ. ಈ ಬೆಳವಣಿಗೆಯೆ ಅದಕ್ಕೆಲ್ಲಾ ದೊಡ್ಡ ಕಾರಣ. ಅವರು ಮಂಡ್ಯಕ್ಕೆ ಬಂದಾಗಲೆಲ್ಲಾ ಆ ನೋವನ್ನು ಹೊರ ಹಾಕ್ತಿದಾರೆ. ಆದರೆ ಜನ ಒಂದು ಸರಿ ತೀರ್ಪು ಕೊಟ್ಟ ನಂತರ ಅದನ್ನ ಒಪ್ಪಿಕೊಳ್ಳಬೇಕು. ಮುಂದಿನ ಬಾರಿ ಪ್ರಯತ್ನ ಪಡೋಣ ಅನ್ನಬೇಕು ಎರೆಡು ಬಾರಿ ಸಿಎಂ ಆದವರು ಅದನ್ನ ಸ್ವೀಕರಿಸಬೇಕು ಹೊರತು ಈ ರೀತಿಯ ಚೈಲ್ಡಿಶ್ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದರು. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

    ಡೀಲ್ ಗಳಲ್ಲಿ ಮಾಸ್ಟರ್ ಯಾರು ಅಂತ ಕರ್ನಾಟಕದ ಜನರಿಗೆ ಗೊತ್ತು. ನಾನು ಜಾಸ್ತಿ ಮಾತನಾಡಿದರೆ ಅವರಿಗೆ ಹೇಸಿಗೆ ಆಗುತ್ತೆ. ಡೀಲ್ ಅವರಿಗೆ ಪ್ರಧಾನ ಅಜೆಂಡ ರೀತಿ ಆಗಿದೆ. ಪ್ರತಿ ಒಂದು ಕೆಲಸದಲ್ಲೂ ಡೀಲ್ ಮಾಡ್ತಾರೆ. ಆಡಿಯೋ, ವೀಡಿಯೋ ಏನೇ ಇದ್ರೂ ರಿಲೀಸ್ ಮಾಡಲಿ ಅದನ್ನ ಫೇಸ್ ಮಾಡ್ತೀನಿ ಅವರಿಗೆ ಚಾಲೆಂಜ್ ಮಾಡ್ತೀನಿ. ಅಂಬರೀಶ್ ಮನೆಯಲ್ಲಿ ನಾನೇ ಆಗಲಿ, ನನ್ನ ಮಗನಾಗಲಿ ಭ್ರಷ್ಟಾಚಾರದ ದಾರಿಯಲ್ಲಿ ಹೋಗುವ ಕರ್ಮ ನಮಗೆ ಇಲ್ಲ ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಆಗಬೇಕು – ಮಂಡ್ಯ ಸಂಸದೆ ಸುಮಲತಾ ಆಗ್ರಹ