Tag: Illegal liquor sales

  • ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

    ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

    ಚಾಮರಾಜನಗರ: ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಜೂಜಾಟಕ್ಕೆ ಕೂಲಿ ಹಣವನ್ನು ಬಳಸುತ್ತಿದ್ದಾರೆ. ಹೀಗೆ ಬಿಡುವುದು ಸರಿಯಲ್ಲ ಎಂದು ಗ್ರಾಮಸ್ಥರು ದಿಟ್ಟ ನಿರ್ಧಾರ ಕೈಗೊಂಡು ಗ್ರಾಮದಲ್ಲಿ ದಂಡಾಸ್ತ್ರ ಪ್ರಯೋಗ ಮಾಡಿರುವ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಎಂಬ ಊರಲ್ಲಿ ಅಕ್ರಮ ಮದ್ಯ ಮಾರಾಟಗಾರರಿಗೆ, ಕದ್ದುಮುಚ್ಚಿ ಜೂಜಾಟ ಆಡಿಸುತ್ತಿದ್ದವರಿಗೆ ಎಲ್ಲಾ ಸಮುದಾಯದ ಯಜಮಾನರು ಬಿಸಿ ಮುಟ್ಟಿಸಿದ್ದಾರೆ. ಮದ್ಯ ಮಾರಾಟ, ಜೂಜಾಟ ಕಂಡುಬಂದರೆ 50 ಸಾವಿರ ದಂಡ ಕೊಡಬೇಕೆಂಬ ನಿರ್ಣಯ ಕೈಗೊಂಡಿದ್ದಾರೆ. ಗ್ರಾಮದ ದೊಡ್ಡಮ್ಮತಾಯಿ ದೇವಸ್ಥಾನದ ಮುಂಭಾಗ ಸಭೆ ಸೇರಿದ ಉಪ್ಪಾರ ಸಮುದಾಯ, ಪರಿಶಿಷ್ಟ ಜಾತಿ, ಮುಸ್ಲಿಮರು, ವಿಶ್ವಕರ್ಮ, ಕುರುಬ, ಕುಂಬಾರ, ಮಡಿವಾಳ ಹಾಗೂ ಸವಿತ ಸಮಾಜ ಸೇರಿದಂತೆ ಎಲ್ಲಾ ಕೋಮಿನ ಯಜಮಾನರು, ಸ್ವ ಸಹಾಯ ಮಹಿಳಾ ಸಂಘದವರು ಅಕ್ರಮ ಚಟುವಟಿಕೆಗಳು ಗ್ರಾಮದಲ್ಲಿ ನಡೆಯಬಾರದೆಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್ – ಕ್ಷಮೆಯಾಚಿಸಿದ ಕಂಪನಿ 

    ಗ್ರಾಮದಲ್ಲಿ ಸುಮಾರು 8 ರಿಂದ 10 ಮಂದಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಕಾರಣ ಬೆಳಗಿನ ಜಾವ 4 ಗಂಟೆಯಿಂದಲೇ ಯುವಕರು ಮದ್ಯ ಸೇವನೆಗೆ ಮುಂದಾಗುತ್ತಿದ್ದರು. ಕೆಲವರು ಕೂಲಿ ಕೆಲಸಕ್ಕೂ ಹೋಗದೇ ಕುಡಿದ ಮತ್ತಿನಲ್ಲಿ ರಸ್ತೆ ಬದಿ ಹಾಗೂ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು. ಈ ಮಧ್ಯೆ ಕೆಲಸಕ್ಕೆ ಹೋಗುವ ಅನೇಕ ಮಂದಿ ಮದ್ಯ ಸೇವನೆ ಮಾಡಿಯೇ ತೆರಳುತ್ತಿದ್ದರು. ಇದರಿಂದ ದುಡಿದ ಹಣ ಪೋಲಾಗುತ್ತಿತ್ತು. ಸುಮಾರು 4 ರಿಂದ 5 ಕಡೆಗಳಲ್ಲಿ ಅಕ್ರಮವಾಗಿ ಜೂಜಾಟ ಕೂಡ ನಡೆಯುತ್ತಿತ್ತು. ಇದರಿಂದ ಗ್ರಾಮದ ಕೆಲ ಮಂದಿ ಹಗಲು ರಾತ್ರಿ ಎನ್ನದೇ ಜೂಜಾಟದಲ್ಲಿ ತೊಡಗಿದ್ದರಿಂದ ಗ್ರಾಮಸ್ಥರು ಈ ದಿಟ್ಟ ನಿಲುವು ತೆಗೆದುಕೊಂಡಿದ್ದಾರೆ.

    ಗ್ರಾಮದ ಎಲ್ಲಾ ಸಮುದಾಯದ ಜನರು ಒಗ್ಗೂಡಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದ ವಿರುದ್ಧ ಸಮರ ಸಾರಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರಿಗೆ 50 ಸಾವಿರ ರೂ. ದಂಡ, ಜೂಜಾಟ ಆಡಿಸುವವರಿಗೆ 50 ಸಾವಿರ ರೂ. ದಂಡ ಮತ್ತು ಅಕ್ರಮದ ಬಗ್ಗೆ ಮಾಹಿತಿ ಹಾಗೂ ಸಾಕ್ಷಿ ಹೇಳುವವರಿಗೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಟಾಂಟಾಂ ಮಾಡಿದ್ದಾರೆ. ಸಭೆ ಸೇರಿದ ವೇಳೆಯೇ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯದ ಪೌಚುಗಳನ್ನು ಸಭೆಯಲ್ಲೇ ಸುಟ್ಟು ಹಾಕುವ ಮೂಲಕ ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: ದೇವರಿಗೆ ಕೈ ಮುಗಿದು ತಾಳಿ ಕದ್ದ – ಅಡವಿಡಲು ಹೋಗಿ ತಗ್ಲಾಕೊಂಡ

  • ಕೊರೊನಾ ಎಫೆಕ್ಟ್: ಶಾಲೆಗೆ ರಜೆ- ಮದ್ಯ ಮಾರಾಟಕ್ಕಿಳಿದ ವಿದ್ಯಾರ್ಥಿಗಳು!

    ಕೊರೊನಾ ಎಫೆಕ್ಟ್: ಶಾಲೆಗೆ ರಜೆ- ಮದ್ಯ ಮಾರಾಟಕ್ಕಿಳಿದ ವಿದ್ಯಾರ್ಥಿಗಳು!

    -ಕರ್ನಾಟಕ, ಆಂಧ್ರ ಗಡಿಭಾಗಗಳಲ್ಲಿ ಬಾರ್‌ಗಳಾದ ಗುಡಿಸಲು..!
    -ರೈತರ ತೋಟಗಳೇ ರೆಸ್ಟೋರೆಂಟ್‍ಗಳು..!

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ. ಅದರಲ್ಲೂ ಕೊರೊನಾದಿಂದ ಶಾಲೆಗಳಿಗೆ ರಜೆ ಸಿಕ್ಕಿರುವುದರಿಂದ ಅಪ್ರಾಪ್ತ ವಯಸ್ಕಿನ ವಿದ್ಯಾರ್ಥಿಗಳೇ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

    ವಿಶ್ವವೇ ಕೊರೊನಾ ಸೋಂಕಿನ ಆತಂಕದಿಂದ ನಡುಗಿ-ನಲುಗಿ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಮಹಾನಗರವನ್ನು ಮತ್ತೆ ಲಾಕ್ ಡೌನ್ ಮಾಡೋ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಗ್ರಾಮೀಣ ಭಾಗಗಳಿಗೂ ಕೊರೊನಾ ಕಾಲಿಟ್ಟಿದ್ದು, ದಿನೇ ದಿನೇ ಹಳ್ಳಿಗಳಿಗೂ ಕೊರೊನಾ ವ್ಯಾಪಿಸುತ್ತಿದ್ದು ಜನ ಬೆಚ್ಚಿಬೀಳುವಂತೆ ಮಾಡುತ್ತಿದೆ. ಇದರ ನಡುವೆ ಮಕ್ಕಳಿಗೆ ಶಾಲೆ ತೆರೆದಿಲ್ಲ.

    ಕೋವಿಡ್‍ನಿಂದಾಗಿ ಯಾವುದೇ ಆರ್ಥಿಕ ವಹಿವಾಟುಗಳ ವ್ಯಾಪಾರವೂ ಅಷ್ಟಕ್ಕಷ್ಟೇ. ಆದರೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಮಾತ್ರ ಜೋರಾಗಿ ಸಾಗಿದೆ. ಇಡೀ ದೇಶವೇ ಲಾಕ್‍ಡೌನ್ ಮಾಡಿ ಸಂದರ್ಭದಲ್ಲಿ ಮದ್ಯದಂಗಡಿಗಳು ಕೂಡ ಬಂದ್ ಆಗಿದ್ದವು. ಆದ್ರೆ ಈಗ ಎಲ್ಲಾ ಮದ್ಯದಂಗಡಿಗಳ ಬಾಗಿಲು ತೆರೆದಿದೆ. ಮದ್ಯಪ್ರಿಯರಿಗೆ ಯಾವುದೇ ಅಡ್ಡಿ ಇಲ್ಲ. ಈ ನಡುವೆ ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾದ ನಡುವೆಯೂ ಆಕ್ರಮ ಮದ್ಯ ಮಾರಾಟ ಬಲು ಜೋರಾಗಿ ಸಾಗುತ್ತಿದೆ.

    ಕರ್ನಾಟಕ-ಆಂಧ್ರ ಗಡಿಭಾಗದ ಹಳ್ಳಿಗಳಲ್ಲಿ ಅಕ್ರಮ ಮದ್ಯದಂಗಡಿಗಳು ತಲೆ ಎತ್ತಿದ್ದು, ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಸಲಾಗುತ್ತಿದೆ. ರೈತರ ತೋಟ, ಹೊಲಗಳಲ್ಲೇ ತಾತ್ಕಾಲಿಕ ಗುಡಿಸಲುಗಳು, ಶೆಡ್‍ಗಳನ್ನು ನಿರ್ಮಾಣ ಮಾಡಿಕೊಂಡು ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ನೆರೆಯ ಆಂಧ್ರಪ್ರದೇಶದಲ್ಲಿದ್ದ ಮದ್ಯದಂಗಡಿಗಳನ್ನ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಅಲ್ಲದೇ ಮದ್ಯದ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮ ಆಂಧ್ರದಿಂದ ಕರ್ನಾಟಕಕ್ಕೆ ಮದ್ಯಪ್ರಿಯರು ಲಗ್ಗೆ ಇಡುತ್ತಿದ್ದಾರೆ.

    ಇದನ್ನೇ ಅವಕಾಶ ಮಾಡಿಕೊಂಡು ಗಡಿಭಾಗದಲ್ಲಿನ ಗ್ರಾಮದ ಕೆಲವರು ತಮ್ಮ ಹೊಲ ಜಮೀನುಗಳಲ್ಲೇ ತಾತ್ಕಾಲಿಕ ಶೆಡ್, ಗುಡಿಸಲು, ನಿರ್ಮಾಣ ಮಾಡಿ ಮದ್ಯ ಮಾರಾಟಕ್ಕಿಳಿದಿದ್ದಾರೆ. ಅದರಲ್ಲೂ ಬೆಂಗಳೂರಿನಿಂದ ಕೆಲಸ ಇಲ್ಲದೆ ವಾಪಸ್ಸು ಬಂದ ಯುವಕರು ಬೈಕ್‍ನಲ್ಲಿ ಮದ್ಯ ಇಟ್ಟುಕೊಂಡು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಅಪ್ರಾಪ್ತ ವಯಸ್ಕಿನ ಮಕ್ಕಳು ಮದ್ಯ ಮಾರಾಟ ಮಾಡುತ್ತಿದ್ದಾರೆ. ಮನೆಯಲ್ಲಿ ಆಡುಗೆ ಕಾಯಕ, ತೋಟದಲ್ಲಿ ಕೆಲಸ ಮಾಡೋ ಮಹಿಳೆಯರು ಕೂಡ ಮದ್ಯ ಮಾರಾಟಕ್ಕಿಳಿದ್ದಾರೆ.

    ಗೌರಿಬಿದನೂರಿನ ಹುಣೇಸನಹಳ್ಳಿಗೂ ಸಹ ಮದ್ಯಕ್ಕಾಗಿ ಆಂಧ್ರದವರು ಆಗಮಿಸುತ್ತಿದ್ದ ಕಾರಣ ಗ್ರಾಮದ ಹಲವರು ಇದನ್ನು ವಿರೋಧಿಸಿದ್ದರು. ಇದಾದ ಬಳಿಕ ಈಗ ಬಾಗೇಪಲ್ಲಿ ತಾಲೂಕಿನ ಆಂಧ್ರದ ಗಡಿಭಾಗದ ಮುಮ್ಮಡಿವಾರಪಲ್ಲಿ, ನೇಸೆವಾರಪಲ್ಲಿ, ಕೋತ್ತಕೋಟೆ, ಗೊರ್ತಪಲ್ಲಿ, ಡಿ ಕೊತ್ತಪಲ್ಲಿ ಸೇರಿದಂತೆ ಹಲವು ಗಡಿ ಗ್ರಾಮಗಳಲ್ಲಿ ಇದೇ ರೀತಿಯ ಅಕ್ರಮ ಮದ್ಯ ಮಾರಾಟ ಸಾಗುತ್ತಿದೆ.

    ಮತ್ತೊಂದೆಡೆ ಆಂಧ್ರದಲ್ಲೂ ಕೊರೊನಾ ಪ್ರಕರಣಗಳು ಜಾಸ್ತಿಯಾಗಿದ್ದು, ರಾಜಾರೋಷವಾಗಿ ಮದ್ಯಕ್ಕಾಗಿ ಹಲವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಪರಿಣಾಮ ಕೊರೊನಾ ಸೋಂಕು ಆತಂಕವೂ ಕೆಲ ಪ್ರಜ್ಞಾವಂತ ಗ್ರಾಮಸ್ಥರದ್ದಾಗಿದೆ. ಉಳಿದಂತೆ ಕರ್ನಾಟಕದ ಮದ್ಯ ಅಕ್ರಮಮವಾಗಿ ಆಂಧ್ರ ಸೇರುತ್ತಿದ್ದು, ಇತ್ತೀಚೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಆಂಧ್ರದ ಅಬಕಾರಿ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಮದ್ಯ ಸರಬರಾಜು ಆಗಿರೋದು ಕರ್ನಾಟಕದ ಗಡಿಭಾಗದ ಬಾಗೇಪಲ್ಲಿಯ ಬಾರ್ ಗಳಿಂದಲೇ ಆಗಿದ್ದು, ಎಲ್ಲ ಬಾರ್, ವೈನ್ ಶಾಪ್ ಗಳು ರಾಜಕಾರಣಿಗಳದ್ದೇ ಎಂಬ ಮಾಹಿತಿ ಲಭಿಸಿದೆ.

    ದೊಡ್ಡ ದೊಡ್ಡ ರಾಜಕಾರಣಿಗಳು, ಜನಪ್ರತಿನಿಧಿಗಳೇ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಆಂಧ್ರ ಸರ್ಕಾರ ನಿರ್ಣಯದಿಂದ ಮದ್ಯ ದರವನ್ನು ಮೂರು ಪಟ್ಟು ಜಾಸ್ತಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಶಿಕ್ಷಣ ಪಡೆಯಬೇಕಿದ್ದ ವಿದ್ಯಾರ್ಥಿಗಳು ಸಹ ಮದ್ಯ ಮಾರಾಟಕ್ಕಿಳಿತಿರೋದು ದುರಂತ ಸಂಗತಿಯಾಗಿದ್ದು, ಜಿಲ್ಲೆಯ ಅಬಕಾರಿ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳ ಬೇಕಿದೆ.

  • ಹೋಟೆಲ್‍ಗೆಂದು ಲೈಸೆನ್ಸ್ ಪಡೆದು ಮದ್ಯ ಮಾರಾಟ – 63 ಲೀಟರ್ ಮದ್ಯ ವಶ

    ಹೋಟೆಲ್‍ಗೆಂದು ಲೈಸೆನ್ಸ್ ಪಡೆದು ಮದ್ಯ ಮಾರಾಟ – 63 ಲೀಟರ್ ಮದ್ಯ ವಶ

    ಬೆಂಗಳೂರು: ನಗರದ ಲಗ್ಗರೆ ವಾರ್ಡ್ ನ ಹೋಟೆಲ್ ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಪಾಲಿಕೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿ ದಿವ್ಯ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದೆ.

    ಲಗ್ಗೆರೆಯ ಬಾಲಾಜಿ ಹಿಂದೂ ಮಿಲಿಟರಿ ಹೋಟೆಲ್ ಶೋಧಿಸಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 24,840 ಲೀಟರ್ ಮದ್ಯ, 27,950 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಲಗ್ಗೆರೆ ಮುನೇಶ್ವರ ಬಡಾವಣೆಯ ಜೈ ಮಾರುತಿ ಮಿಲಿಟರಿ ಹೋಟೆಲ್ ಮೇಲೆ ದಾಳಿ ಮಾಡಿ 10,800 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇತ್ತ ಶ್ರೀನಿವಾಸ ಮಿಲಿಟರಿ ಹೋಟೆಲ್‍ನಿಂದ 9 ಲೀಟರ್ ಮದ್ಯ, 5.250 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ.

    ದಾಳಿ ನಡೆಸಲಾದ ಹೋಟೆಲ್‍ಗಳಿಗೆ ಆರೋಗ್ಯಾಧಿಕಾರಿಯಿಂದ ನೋಟಿಸ್ ಜಾರಿಯಾಗಿದ್ದು, ನೋಟಿಸ್ ಜಾರಿಗೊಳಿಸಿದ್ದಕ್ಕೆ ಮಾಜಿ ನಾಮನಿರ್ದೇಶಿತ ಸದಸ್ಯ ಸಿದ್ದೇಗೌಡರಿಂದ ನೋಟಿಸ್ ವಾಪಸ್ ಪಡೆಯುವಂತೆ ಒತ್ತಡ ಹಾಕಲಾಗಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಒಟ್ಟು 63,854 ಲೀಟರ್ ಮದ್ಯವನ್ನು ಪಾಲಿಕೆಯ ಆರೋಗ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

  • ಅಕ್ರಮ ಮದ್ಯ ಮಾರಾಟ- ನಗರ ಸಭೆ ಜೆಡಿಎಸ್ ಸದಸ್ಯನ ಬಂಧನ

    ಅಕ್ರಮ ಮದ್ಯ ಮಾರಾಟ- ನಗರ ಸಭೆ ಜೆಡಿಎಸ್ ಸದಸ್ಯನ ಬಂಧನ

    ಮಂಡ್ಯ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಂಡ್ಯದ ನಗರಸಭೆ ಜೆಡಿಎಸ್ ಸದಸ್ಯ ಪೊಲೀಸ ಅತಿಥಿಯಾಗಿದ್ದು, ನಗರದ 12ನೇ ವಾರ್ಡ್‍ನ ನಗರ ಸಭೆಯ ಜೆಡಿಎಸ್ ಸದಸ್ಯ ಭರತೇಶ್ ಬಂಧಿತ ಆರೋಪಿಯಾಗಿದ್ದಾನೆ.

    ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದ ಬಳಿ ಭರತೇಶ್ ಅಕ್ರಮ ಮದ್ಯ ಮಾರಾಟದ ಜೊತೆಗೆ ಜೂಜಾಟ ನಡೆಸುತ್ತಿದ್ದ ಎಂಬ ದೂರುಗಳು ಹಲವು ದಿನಗಳಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇಂದು ಎಎಸ್‍ಪಿ ಕೆ.ಪರಶುರಾಮ್ ಅವರ ಸೂಚನೆ ಮೇರಗೆ ಪೊಲೀಸರು ಕೊಮ್ಮೇರಹಳ್ಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

    ಪೊಲೀಸ್ ಪರಿಶೀಲನೆ ವೇಳೆ ಭರತೇಶ್ ಅಕ್ರಮ ಮದ್ಯ ಮಾರಟ ಮಾಡುತ್ತಿದ್ದು ಕಂಡುಬಂದಿದೆ. ಸ್ಥಳದಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಭರತೇಶ್‍ನನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.