Tag: illegal electricity connection

  • ವಿದ್ಯುತ್‌ ಕಳ್ಳತನ ಆರೋಪ – ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

    ವಿದ್ಯುತ್‌ ಕಳ್ಳತನ ಆರೋಪ – ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

    ಬೆಂಗಳೂರು: ಜೆ.ಪಿ.ನಗರದಲ್ಲಿರುವ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ವಿದ್ಯುತ್ ಕಳವು ಪ್ರಕರಣದಲ್ಲಿ (Electricity Illegal Connection) ಹೆಚ್‌ಡಿಕೆ ವಿರುದ್ಧ ಬೆಸ್ಕಾಂ ಜಾಗೃತದಳ ಪ್ರಕರಣ ದಾಖಲಿಸಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ವಿದ್ಯುತ್ ಕಲಾಂ 135 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ: ಹೆಚ್‌ಡಿಕೆ ನಿವಾಸಕ್ಕೆ ಅಕ್ರಮ ವಿದ್ಯುತ್‌ – ಮಾಜಿ ಸಿಎಂಗೆ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದ ಕಾಂಗ್ರೆಸ್‌

    ಮಾಜಿ ಸಿಎಂ ವಿದ್ಯುತ್‌ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಗಂಭೀರ ಆರೋಪ ಮಾಡಿತ್ತು. ಒಬ್ಬ ಮಾಜಿ ಸಿಎಂ ವಿದ್ಯುತ್‌ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ. ಇಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿಗೆ ಅರ್ಜಿ ಹಾಕಬಹುದಿತ್ತು ಎಂದು ಕಾಂಗ್ರೆಸ್‌ ಚಾಟಿ ಬೀಸಿತ್ತು.

    ವಿದ್ಯುತ್‌ ಕಳ್ಳತನ ಮಾಡಿದ್ದಾರೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಹೆಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದರು. ಇದು ಅಚಾತುರ್ಯದಿಂದ ಆದ ಘಟನೆ. ದಂಡ ಕಟ್ಟುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ದೀಪಾವಳಿಗೆ ಕರೆಂಟ್‌ ಕಳ್ಳತನ – ಬೆಸ್ಕಾಂ ನೋಟಿಸ್‌ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್‌ಡಿಕೆ

    ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್‌ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್‌ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್‌ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್‌ ಜೋರ್ಡ್‌ನಿಂದಲೇ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನು ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದರು.

  • ಅಕ್ರಮವಾಗಿ ವಿದ್ಯುತ್ ಸಂಪರ್ಕದ ಬಗ್ಗೆ ಪ್ರಶ್ನಿಸಿದ ಲೈನ್‍ಮ್ಯಾನ್ ಮೇಲೆ ಹಲ್ಲೆ

    ಅಕ್ರಮವಾಗಿ ವಿದ್ಯುತ್ ಸಂಪರ್ಕದ ಬಗ್ಗೆ ಪ್ರಶ್ನಿಸಿದ ಲೈನ್‍ಮ್ಯಾನ್ ಮೇಲೆ ಹಲ್ಲೆ

    ಮಂಡ್ಯ: ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಲೈನ್‍ಮ್ಯಾನ್ ಮೇಲೆ ಹಲ್ಲೆ ಮಾಡಿರುವ ಘಟನೆ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ನಡೆದಿದೆ.

    ಹೊಸಗಾವಿ ಗ್ರಾಮದ ನಿವಾಸಿಗಳಾದ ನಿಂಗಯ್ಯ, ರಾಮನಿಂಗಯ್ಯ ಸೇರಿದಂತೆ ಇತರರು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಲೈನ್‍ಮ್ಯಾನ್ ನಾಗರಾಜ್ ಗಾಯಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ನಾಗರಾಜ್ ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    ಲೈನ್‍ಮ್ಯಾನ್ ನಾಗರಾಜ್ ಅವರು ಶುಕ್ರವಾರ ಹೊಸಗಾವಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದನ್ನು ನಾಗರಾಜ್ ಗಮನಿಸಿ, ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದರು. ಇದನ್ನು ಖಂಡಿಸಿದ ನಿಂಗಯ್ಯ, ರಾಮನಿಂಗಯ್ಯ ಮತ್ತು ಇತರರು ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯ ಸಂಬಂಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.