Tag: Illegal Business

  • ಹುಷಾರಪ್ಪೋ ಹುಷಾರು – ಇದು ‘ಆಪರೇಷನ್ ಡರ್ಟಿ ಸ್ಟಿಚ್’ ಕಥೆ

    ಹುಷಾರಪ್ಪೋ ಹುಷಾರು – ಇದು ‘ಆಪರೇಷನ್ ಡರ್ಟಿ ಸ್ಟಿಚ್’ ಕಥೆ

    – ಶಸ್ತ್ರ ಚಿಕಿತ್ಸೆಗೆ ಬಳಸುವ ದಾರ ತಯಾರಿಸುವ ಫ್ಯಾಕ್ಟರಿಯ ನೈಜ ಚಿತ್ರಣ
    – ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ದಂಧೆ ಬಯಲು

    ಬೆಂಗಳೂರು: ಸಿಲಿಕಾನ್ ಸಿಟಿಯ ಅಂದ್ರಳ್ಳಿಯಲ್ಲಿ ನಡೆಯುತ್ತಿರುವ ಆಪರೇಷನ್‍ಗೆ ಬಳಸೋ ದಾರದ ಭಯಾನಕ ದಂಧೆ ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಅಂದ್ರಳ್ಳಿಯ ಕಾಡು ದಾರಿ ರೀತಿ ಕಾಣುವ ಮಾರ್ಗದಲ್ಲಿ ಒಂದು ಫ್ಯಾಕ್ಟರಿ ಇದೆ. ಈ ಫ್ಯಾಕ್ಟರಿಯಲ್ಲಿ ಆಪರೇಷನ್‍ಗೆ ಬಳಸುವ ದಾರವನ್ನು ತಯಾರಿಸಲಾಗುತ್ತದೆ. ಇದರ ಕರಾಳ ಮುಖವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿ ಬಟಾಬಯಲು ಮಾಡಿದೆ.

    ಈ ಫ್ಯಾಕ್ಟರಿ ಹತ್ತಿರ ಹೋದರೆ ಸತ್ತ ಹೆಣದ ವಾಸನೆ ಮೂಗಿಗೆ ಅಪ್ಪಳಿಸುತ್ತೆ. ಕೇವಲ 30-40 ಸೈಟಲ್ಲಿ ಕಟ್ಟಿಕೊಂಡಿರುವ ಈ ಗೋಡನ್ ಒಳಗೆ ಹೋದರೆ ಕಾಣಸಿಗೋದು ಉತ್ತರ ಭಾರತದ ಕೆಲಸಗಾರರು, ಕೊಳಕು ಕೊಳಕಾದ ನೀಲಿ ಬಣ್ಣದ ಡ್ರಂಗಳು. ಇವೆಲ್ಲದರ ನಡುವೆಯೇ ಇಲ್ಲಿರುವ ಕೆಲಸಗಾರರು ದಾರಗಳ ಗೊಂಚಲಲ್ಲಿ ಒಂದೊಂದೆ ದಾರವನ್ನ ಎಳೆದು ಹಾಕುತ್ತಿದ್ದರು. ಈ ದಾರಗಳು ವೈದ್ಯರು ಆಪರೇಷನ್ ಮಾಡುವಾಗ ಹೊಲಿಗೆ ಹಾಕಲು ಬಳಸುವ ದಾರಗಳಿದ್ದು, ಇದು ತಯಾರಾಗುವ ಪರಿ ನಿಜಕ್ಕೂ ಭಯಾನಕವಾಗಿದೆ.

    ಕೊಳಕು ಫ್ಯಾಕ್ಟರಿಯಲ್ಲಿ ದಾರಗಳನ್ನು ಕುರಿ, ಮೇಕೆಗಳ ಕರುಳಿನಿಂದ ತಯಾರಿಸಲಾಗುತ್ತಿದೆ. ಕರುಳಿನಿಂದ ತಯಾರಾದ ದಾರವನ್ನೇ ವೈದರು ಹಿಂದಿನಿಂದಲೂ ರೋಗಿಗೆ ಆಪರೇಷನ್ ಮಾಡಿದ ಬಳಿಕ ಹೊಲಿಗೆ ಹಾಕಲು ಬಳಸುತ್ತಾ ಬಂದಿದ್ದಾರೆ. ಆದರೆ ಇದನ್ನು ತಯಾರು ಮಾಡುವ ಕೆಲಸ ಪ್ರಮಾಣೀಕೃತ ಫಾರ್ಮಾಸಿಗಳು ಮಾತ್ರ ಮಾಡಬೇಕು. ಆದರೆ ಬೆಂಗಳೂರಿನ ಅಂದ್ರಳ್ಳಿಯ ತಯಾರಾಗುತ್ತಿರುವ ಆಪರೇಷನ್ ದಾರದ ಫ್ಯಾಕ್ಟರಿಗೆ ಯಾವುದೇ ಪರವಾನಿಗೆ ಇಲ್ಲ.

    ಈ ದಾರಗಳನ್ನು ತಯಾರಿಸುವ ಗೋಡಾನ್ ಒಳಗೆ ಹೋದರೆ ಕೆಲಸಗಾರರು ಕರುಳನ್ನ ಕೈಗಳಲ್ಲಿ ತೊಳೆದು, ಒಂದೊಂದೆ ಏಳೆಯನ್ನ ಬಿಡಿಸುತ್ತಿರುವುದು ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆಪರೇಷನ್ ದಾರಗಳನ್ನು ತಯಾರಿಸುವಾಗ ಇಲ್ಲಿನ ಕೆಲಸಗಾರರು ಸ್ವಚ್ಛತೆ ಮಾಡಲು ಒಂದು ಗ್ಲೌಸ್ ಕೂಡ ಹಾಕಿಕೊಳ್ಳುವುದಿಲ್ಲ. ಅಲ್ಲದೆ ಕೆಲಸಗಾರರನ್ನು ಮಾತನಾಡಿಸಿದಾಗ ಅವರ ಮುಖದಲ್ಲಿನ ಗಾಬರಿಯೇ ಅವರು ಮಾಡುವ ದಂಧೆ ಏನು ಎನ್ನುವುದನ್ನು ಸಾರಿ ಹೇಳುವಂತಿತ್ತು.

    ನಮ್ಮ ಪ್ರತಿನಿಧಿ ಕೆಲಸಗಾರೊಬ್ಬರನ್ನು ಪ್ರಶ್ನಿಸಿದಾಗ, ನಾನು ಇಲ್ಲಿ ಕೆಲಸ ಮಾಡ್ತೀನಿ ಓನರ್ ಬಗ್ಗೆ ಗೊತ್ತಿಲ್ಲ ಎಂದರು. ಬಳಿಕ ಇದು ಆಪರೇಷನ್ ಗೆ ಬಳಸುವ ದಾರವೇ ಎಂದು ಕೇಳಿದಾಗ ಮೊದಲು ಹೌದು ಎಂದ ಕೆಲಸ ಮಾಡುತ್ತಿದ್ದ ಮಹಿಳೆ ಬಳಿಕ ಇದು ಆಪರೇಷನ್ ದಾರವಲ್ಲ, ಇದು ಬ್ಯಾಡ್ಮಿಂಟನ್ ನೆಟ್‍ಗೆ ಬಳಸುವ ದಾರ ಎಂದು ವರಸೆ ಬದಲಿಸಿದರು. ಇದು ಕುರಿ ಕರುಳಿನಿಂದ ತಯಾರಾಗುತ್ತೆ. ಪೂರ್ತಿ ಇಲ್ಲೇ ತಯಾರಾಗುವುದಿಲ್ಲ. ನಾವು ದಾರಗಳನ್ನು ಮಾಡಿ ಬೇರೆಯವರಿಗೆ ಕಳುಹಿಸುತ್ತೇವೆ. ಅವರು ಕೆಲಸ ಪೂರ್ತಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

    ಆದರೆ ಇಲ್ಲಿ ಕೆಲಸ ಮಾಡುವ ಇತರೇ ಕೆಲಸಗಾರರು ಇದು ಆಪರೇಷನ್ ದಾರ ಅಂತ ನಿಜ ಬಾಯಿಬಿಟ್ಟಿದ್ದಾರೆ. ಆದರೆ ಮಹಿಳೆ ಮಾತ್ರ ಬ್ಯಾಡ್ಮಿಂಟನ್ ನೆಟ್‍ಗೆ ಬಳಸುವ ದಾರ ಎಂದಿದ್ದಾಳೆ. ಮಹಿಳೆ ಇಲ್ಲಿ ಮಾಡೋ ದಂಧೆಯನ್ನ ಮುಚ್ಚಿಕೊಳ್ಳೊಕೆ ಸರ್ಕಸ್ ಮಾಡಿದ್ದಾಳೆ. ಆದರೆ ಈ ಗೋಡನ್‍ಗೆ ನೀರು ಸರಬರಾಜು ಮಾಡುತ್ತಿದ್ದ ವ್ಯಕ್ತಿ ಪಬ್ಲಿಕ್ ಟಿವಿಗೆ ಇಲ್ಲಿನ ದಂಧೆಯ ಬಗ್ಗೆ ವಿವರಿಸಿದರು.

    ನಾನು ಇಲ್ಲಿಗೆ ನೀರು ಸರಬರಾಜು ಮಾಡುತ್ತೇನೆ. ಮೇಕೆ, ಕುರಿ ಕರುಳುಗಳನ್ನು ತಂದು ಆಪರೇಷನ್ ದಾರ ತಯಾರು ಮಾಡುತ್ತಾರೆ. ಇಲ್ಲಿ 15 ರಿಂದ 20 ಜನ ಕೆಲಸ ಮಾಡ್ತಾರೆ. ಕರುಳು ತೊಳೆದ ನೀರನ್ನು ಈ ಹಿಂದೆ ಚರಂಡಿಗೆ ಬಿಡುತ್ತಿದ್ದರು. ಆದ್ದರಿಂದ ಜಿಕೆಡಬ್ಲ್ಯು ಲೇಔಟ್‍ನಲ್ಲಿದ್ದ ಫ್ಯಾಕ್ಟರಿಯನ್ನು ಸ್ಥಳೀಯರು ಗಲಾಟೆ ಮಾಡಿ ಕ್ಲೋಸ್ ಮಾಡಿಸಿದರು. ಮೊದಲು ಈ ದಾರವನ್ನು ಸ್ಯಾಂಟ್ ಫ್ರಾನಿಕ್ ಅನ್ನೊ ಕಂಪನಿ ತಯಾರಿಸುತಿತ್ತು. ಈಗ ಇದು ಯಾವುದು ಎನ್ನುವ ಬಗ್ಗೆ ಗೊತ್ತಿಲ್ಲ. ಇಲ್ಲಿಗೆ ನೀರು ಸರಬರಾಜು ಮಾಡೋವಾಗಲೇ ಇದು ಅಕ್ರಮ ವ್ಯವಹಾರ ಅಂತ ಅನಿಸುತ್ತಿತ್ತು. ಹಾಗೆಯೇ ಇಲ್ಲಿ ಮಹಿಳೆಯರು ಜಾಸ್ತಿ ಕೆಲಸ ಮಾಡುತ್ತಾರೆ ಎಂದು ವ್ಯಕ್ತಿ ದಂಧೆಯ ಬಗ್ಗೆ ಮಾಹಿತಿ ನೀಡಿದರು.

    ಈ ರೀತಿ ಯಾವುದೇ ಭಯವಿಲ್ಲದೆ ಆಪರೇಷನ್ ದಾರದ ದಂಧೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಆರೋಗ್ಯ ಇಲಾಖೆಗೆ, ಮಾಲಿನ್ಯ ನಿಯಂತ್ರಣ ಮಂಡಳಿಗೂ ಮಾಹಿತಿ ಇಲ್ಲವೇ? ಅಥವಾ ಎಲ್ಲಾ ಗೊತ್ತಿದ್ದು ಸುಮ್ಮನಿದ್ದಾರಾ ಎನ್ನುವ ಅನುಮಾನಗಳು ಹುಟ್ಟುಕೊಂಡಿದೆ. ಯಾವುದೇ ಅನುಮತಿಯಿಲ್ಲದೆ ತಮಗಿಷ್ಟ ಬಂದ ಹಾಗೆ ಈ ದಂಧೆಯನ್ನ ನಡೆಸಲಾಗುತ್ತಿದೆ. ಯಾವುದೇ ಬೋರ್ಡ್ ಹಾಕದೇ, ಅನುಮತಿ ಪಡೆಯದೆ ಸಾವು ಬದುಕಿನ ಮಧ್ಯೆ ಹೋರಾಡುವ ಜೀವಗಳಿಗೆ ಕುತ್ತು ತರೋ ರೀತಿಯಲ್ಲಿದೆ ಈ ದಂಧೆ. ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಈ ದಂಧೆಗೆ ಮೊದಲು ಬ್ರೇಕ್ ಹಾಕಿ, ಅಕ್ರಮದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.

  • ರಾಯಚೂರಿನಲ್ಲಿ ನಿಲ್ಲದ ಅಕ್ರಮ ಕಲಬೆರಕೆ ಸೇಂದಿ ಮಾರಾಟ- 1500 ಲೀಟರ್ ಸಿಎಚ್ ಪೌಡರ್ ಜಪ್ತಿ

    ರಾಯಚೂರಿನಲ್ಲಿ ನಿಲ್ಲದ ಅಕ್ರಮ ಕಲಬೆರಕೆ ಸೇಂದಿ ಮಾರಾಟ- 1500 ಲೀಟರ್ ಸಿಎಚ್ ಪೌಡರ್ ಜಪ್ತಿ

    ರಾಯಚೂರು: ನಗರದಲ್ಲಿ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆ ಜೋರಾಗಿ ನಡೆಯುತ್ತಿದ್ದು, ಅಬಕಾರಿ ಇಲಾಖೆ ನಿರಂತರ ದಾಳಿ ನಡೆಸಿದರೂ ಕ್ಯಾರೇ ಎನ್ನದ ದಂಧೆಕೋರರು ಸೇಂದಿ ಮಾರಾಟ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.

    ನಗರದ ಮೈಲಾರ ನಗರದಲ್ಲಿ ಆರೋಪಿ ಬ್ರೂಸ್ಲಿ ಅಲಿಯಾಸ್ ನರಸಿಂಹಲು ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು ಒಂದೇ ತಿಂಗಳಲ್ಲಿ ನಾಲ್ಕನೇಯ ಬಾರಿ ದಾಳಿ ನಡೆಸಿದ್ದಾರೆ. ಈ ಬಾರಿ 1500 ಲೀಟರ್ ಸಿಎಚ್ ಪೌಡರ್ ಕಲಬೆರಕೆ ಸೇಂದಿ ಜಪ್ತಿ ಮಾಡಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮುಖ್ಯ ಆರೋಪಿ ಬ್ರೂಸ್ಲಿ ಪರಾರಿಯಾಗಿದ್ದು, ಹಾಜಿ, ಮಲ್ಲಯ್ಯ, ಮಲ್ಲೇಶ್ ನಾಯಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ಕಲಬೆರಕೆ ಸೇಂದಿ ತಯಾರಿಕೆಯನ್ನು ಬ್ರೂಸ್ಲಿ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾನೆ. ಎಷ್ಟೇ ಬಾರೀ ಆರೋಪಿಗೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದರೂ, ಆತನ ಅಡ್ಡೆ ಮೇಲೆ ದಾಳಿ ಮಾಡಿದ್ದರೂ ಆರೋಪಿ ಕ್ಯಾರೆ ಎನ್ನುತ್ತಿಲ್ಲ. ಆದ್ದರಿಂದ ಬ್ರೂಸ್ಲಿ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಮುಂದಾಗಿದೆ ಎಂದು ಅಬಕಾರಿ ಇಲಾಖೆ ಪ್ರಭಾರಿ ಅಧೀಕ್ಷಕ ಹನುಮಂತ ಗುತ್ತೇದಾರ್ ಹೇಳಿದ್ದಾರೆ.

    ಮೊಹರಂ ಹಾಗೂ ಗಣೇಶ ಚತುರ್ಥಿ ವೇಳೆ ಮದ್ಯ ಮಾರಾಟಕ್ಕೆ ನಿಷೇಧವಿದ್ದ ಸಂದರ್ಭದಲ್ಲೂ ಎಗ್ಗಿಲ್ಲದೆ ನಗರದಲ್ಲಿ ಕಲಬೆರಕೆ ಸೇಂದಿ ಮಾರಾಟ ನಡೆದಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ದಂಧೆಕೋರರನ್ನ ನಿಯಂತ್ರಣ ಮಾಡಲು ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ.

  • ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    -ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಕ್ರಮ ದಂಧೆ

    ಚಿತ್ರದುರ್ಗ: ವೈದ್ಯೋ ನಾರಾಯಣೋ ಹರಿ ಅಂತಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ದೊಡ್ಡ ಅಕ್ರಮ ದಂಧೆ ನಡೆಯುತ್ತಿದೆ.

    ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯ ಆಯುಷ್ ಡಾಕ್ಟರ್ ಎ.ಎನ್ ಸುರೇಶ್ ಎಂಬ ಆಸಾಮಿ, ಹಣಕ್ಕಾಗಿ ತಾನೊಬ್ಬ ವೈದ್ಯ ಅನ್ನೋದನ್ನೇ ಮರೆತು ಕ್ಯಾನ್ಸರ್ ರೋಗಿಗಳಿಗೆ ಪಾರಂಪರಿಕಚಿಕಿತ್ಸೆ ಕೊಡುತ್ತೇವೆ ಎಂದು ಅವರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಕುಣಿಗಲ್‍ನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೆಸರಲ್ಲಿ ಖಾಸಗಿ ವಾಹಿನಿಗಳಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ತಾ, ಕ್ಯಾನ್ಸರ್ ರೋಗಿಗಳನ್ನು ಚಿತ್ರದುರ್ಗದ ಯೋಗಾವನ ಬೆಟ್ಟಕ್ಕೆ ಸೆಳೆಯುತ್ತಾನೆ. ಅಲ್ಲದೇ ಇವರ ಅಕ್ರಮ ಬಯಲಾಗದಿರಲಿ ಎಂದು ನಕಲಿ ಖಾವಿಧಾರಿಗಳ ಬೆಂಗಾವಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡುತ್ತಿದ್ದಾನೆ ಆರೋಪಗಳು ಕೇಳಿ ಬಂದಿವೆ.

    ಯೋಗದಿಂದ ಕ್ಯಾನ್ಸರ್ ಗುಣಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳೋ ಈ ದಂಧೆಕೋರರ ಮಾತಿಗೆ ಮರುಳಾದ ಹುಬ್ಬಳ್ಳಿ ಮೂಲದ ಬಾಲರಾಜ್ ಕುಮಾರ್ ಎಂಬ ರೋಗಿಯಿಂದ 30 ಸಾವಿರ ರೂಪಾಯಿ ಹಣ ಪಡೆದು, ಆರು ತಿಂಗಳಿಂದ ಅಲ್ಲೇ ಉಳಿದರೂ ರೋಗ ಗುಣವಾಗದೇ ಆತ ಸಾವಿನಂಚಿಗೆ ತಲುಪಿದ್ದಾನೆ. ಈ ಬಗ್ಗೆ ಕೇಳಲು ಬಂದಿದ್ದ ಬಾಲರಾಜ್ ಕುಟುಂಬದ ಮೇಲೆ ಡಾಕ್ಟರ್ ಸುರೇಶನ ಚೇಲಗಳು ದೌರ್ಜನ್ಯವೆಸಗಲು ಮುಂದಾಗಿದ್ದರು. ಆಗ ಆಕ್ರೋಶಗೊಂಡ ಕ್ಯಾನ್ಸರ್ ರೋಗಿ ಅಲ್ಲಿನ ನಕಲಿ ಖಾವಿಧಾರಿಗಳಿಗೆ ಭರ್ಜರಿ ಗೂಸಕೊಟ್ಟು ತನ್ನ ಕೋಪವನ್ನು ಈಡೇರಿಸಿಕೊಂಡಿದ್ದಾನೆ.

    ಈ ಅಕ್ರಮ ಸುಮಾರು ನಾಲ್ಕು ವರ್ಷಗಳಿಂದ ನಡೆಯುತಿದ್ದರೂ ಸಹ ಆರೋಗ್ಯ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇನ್ನಾದರೂ ಆರೋಗ್ಯ ಸಚಿವರು ಈ ಅಕ್ರಮಕ್ಕೆ ಹಾಕುತ್ತಾರ ಬ್ರೇಕ್ ಕಾದು ನೋಡಬೇಕಿದೆ.

  • ಮಾಂಸಪ್ರಿಯರೇ ಚಿಕನ್ ಕಬಾಬ್ ತಿನ್ನೋ ಮೊದಲು ಎಚ್ಚರ

    ಮಾಂಸಪ್ರಿಯರೇ ಚಿಕನ್ ಕಬಾಬ್ ತಿನ್ನೋ ಮೊದಲು ಎಚ್ಚರ

    – ಬೆಂಗ್ಳೂರಿನ ಕರಾಳ ಮಾಂಸ ಮಾರಾಟ ದಂಧೆ ಬಯಲು
    – ತಾಜಾ ಕೋಳಿ ಜೊತೆ ಸತ್ತ ಕೋಳಿ ಸೇರಿಸಿ ಮಾರಾಟ

    ಬೆಂಗಳೂರು: ಮಾಂಸ ಪ್ರಿಯರೇ ನೀವು ತಿನ್ನೋ ಕೋಳಿ ಬಗ್ಗೆ ಗೊತ್ತಾದರೆ ಅಯ್ಯೋ ಇಷ್ಟು ದಿನ ಇದನ್ನ ನಾವು ತಿಂದಿದ್ದು ಎಂದು ಶಾಕ್ ಆಗುತ್ತೀರ. ಸಿಲಿಕಾನ್ ಸಿಟಿಯಲ್ಲಿ ಸತ್ತ ಕೋಳಿಗಳ ಕರಾಳ ಮಾರಾಟ ದಂಧೆ ನಡೆಯುತ್ತಿರುವ ವಿಚಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ರಾಜ್ಯ ರಾಜಧಾನಿಯ ಹಲವು ಕಡೆ ನಿಮಗೆ ಗೊತ್ತಿಲ್ಲದೆ ಸತ್ತು ಒಂದೆರಡು ದಿನ ಆಗಿರುವ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ನಡೆಸಿತ್ತು. ಆಗ ಈ ದಂಧೆಯ ಕರಾಳ ಮುಖ ಅನಾವರಣಗೊಂಡಿದೆ.

    ಪಬ್ಲಿಕ್ ಟಿವಿ ತಂಡ ಮೊದಲಿಗೆ ಮಾಹಿತಿಯಂತೆ ಹೆಗ್ಗನಹಳ್ಳಿಯ ಚಿಕನ್ ಸೆಂಟರ್‌ಗೆ ಹೋಗಿದ್ದು, ನಮ್ನ ಪ್ರತಿನಿಧಿ ಕಬಾಬ್ ಅಂಗಡಿ ಹೊಸದಾಗಿ ಪ್ರಾರಂಭ ಮಾಡ್ತಿದ್ದೀವಿ, ಚಿಕನ್ ಬೇಕಿತ್ತು, ಎಷ್ಟು ರೇಟ್ ಎಂದು ವಿಚಾರಿಸಿದ್ದಾರೆ. ಆಗ ಅಲ್ಲಿದ್ದ ಚಿಕನ್ ಅಂಗಡಿ ವ್ಯಾಪಾರಿ ಕೂಡಲೇ 50 ರೂಪಾಯಿ ಎಂದು ಹೇಳಿದ. ಬಳಿಕ 200 ರೂಪಾಯಿ ಆಸುಪಾಸಿನಲ್ಲಿರುವ ಚಿಕನ್ ಬೆಲೆ ಹೇಗೆ 50 ರೂಪಾಯಿಗೆ ಸಿಗುತ್ತೆ ಅಂದಾಗ ಅನುಮಾನ ಬಂದು, ವಿಚಾರವನ್ನು ಕೆದುಕುತ್ತಾ ಹೋದಾಗ ಒಂದೊಂದೆ ಸತ್ತ ಕೋಳಿ ದಂಧೆ ಬಯಲಾಯಿತು.

    ಮೊದಲಿಗೆ ಅಂಗಡಿಯವನು ಮಾಂಸ ತೆಗೆದು ಕೋಳಿ ಬಾಡಿ 50 ರೂಪಾಯಿ, ನಮಗೆ ಅದೇ ರೀತಿ ಬರುತ್ತೆ ಎಂದಿದ್ದಾನೆ. ಅಲ್ಲಿಗೆ ಈ ಸತ್ತ ಕೋಳಿ ಮಾರಾಟದ ಜಾಲ ದೊಡ್ಡದಿದೆ ಅನ್ನೊದು ಗೊತ್ತಾದ ಬಳಿಕ ಅಲ್ಲಿಂದ ನೇರವಾಗಿ ಸಿಟಿ ಮಾರುಕಟ್ಟೆಯ ಮಾಂಸದ ಅಂಗಡಿಗೆ ತಂಡ ತೆರಳಿತು.

    ಕೆ.ಆರ್ ಮಾರ್ಕೆಟಿನಲ್ಲಿರುವ ಮಾಂಸದ ಮಾರುಕಟ್ಟೆಯಿಂದ ಹಲವು ಕಡೆಗಳಿಗೆ ದೊಡ್ಡ ಮಟ್ಟದಲ್ಲಿ ಮಾಂಸ ಸರಬರಾಜಾಗುತ್ತದೆ. ಅಲ್ಲಿಯೂ ಕಬಾಬ್ ಅಂಗಡಿಗೆ ಚಿಕನ್ ಬೇಕು ಎಂದು ಕೇಳಿದಾಗ, ಅಲ್ಲಿ ಒಬ್ಬೊಬ್ಬರು ಒಂದೊಂದು ದರ ಹೇಳಿದರು. ಯಾವಾಗ ನಾವು 50 ರೂಪಾಯಿಗೆ ಚಿಕನ್ ಸಿಗುತ್ತೆ ಎಂದು ಹೇಳಿದಾಗ, ಓ ಅಲ್ಲಿ ಸಿಗುತ್ತೆ ನೋಡಿ ಎಂದು ವಿಳಾಸ ತೋರಿಸಿದರು. ಆಗ ವಿಳಾಸಕ್ಕೆ ತೆರಳಿ, ವಿಧವಿಧ ಮಾಂಸದ ತುಂಡು ಮಾಡುತ್ತಿದ್ದ ವ್ಯಕ್ತಿಯನ್ನ ಮಾತನಾಡಿಸಿದಾಗ ಆತ ನಾಜೂಕಾಗಿ ಎಲ್ಲವನ್ನೂ ಹೇಳಲು ಶುರು ಮಾಡಿದ. “40 ರೂಪಾಯಿಗೆ ಒಂದು ಕೆಜಿ ಕೋಳಿ ಮಾಂಸ ಸಿಗುತ್ತೆ. ನಾಳೆ ಬೆಳಗ್ಗೆ ಬನ್ನಿ. ನೂರಾರು ಕೆಜಿ ಸತ್ತ ಕೋಳಿಯ ಮಾಂಸಕ್ಕೆ ಬೇಡಿಕೆ ಇದೆ. ಒಂದೊಂದು ಹೋಟೆಲಿಗೂ 50-60 ಕೆಜಿ ಕೊಡುತ್ತೇವೆ” ಎಂದು ಹೇಳಿದ್ದಾನೆ.

    ಪ್ರತಿದಿನ 300, 400 ಕೆಜಿ ಬರುತ್ತೆ. ಬೋಗ್ ರಾಜ್ ಫ್ಯಾಕ್ಟರಿಯಿಂದ, ಕೋಲಾರ್ ರಸ್ತೆಯಿಂದ ಈ ಕೋಳಿಗಳು ಬರುತ್ತೆ. ಕೋಳಿ ಬಾಡಿ 40 ರೂಪಾಯಿಗೆ ಒಂದು ಕೆಜಿ ಸಿಗುತ್ತೆ. ಕಟ್ ಮಾಡಿ ತೋರಿಸ್ತೀನಿ ನೋಡಿ. ನೋಡೋಕೆ ಸತ್ತ ಹಾಗೆ ಕಾಣುತ್ತೆ ಕಟ್ ಮಾಡಿದ ಬಳಿಕ ಗೊತ್ತಾಗಲ್ಲ. ಬೇಕಿದ್ದರೆ ಈ ಮಾಂಸದ ಜೊತೆಗೆ ಸ್ವಲ್ಪ ತಾಜಾ ಮಾಂಸವನ್ನು ಮಿಕ್ಸ್ ಮಾಡಿ ಏನೂ ಗೊತ್ತಾಗಲ್ಲ. 300 ಕೆಜಿ ಏನು ಎಷ್ಟು ಬೇಕಾದರು ಮಾಂಸ ಸಿಗುತ್ತೆ ಎಂದಿರುವುದು ರಹಸ್ಯ ಕಾರ್ಯಾಚರಣೆ ವಿಡಿಯೋದಲ್ಲಿ ಸೆರೆಯಾಗಿದೆ.

    ಅಷ್ಟೇ ಅಲ್ಲದೆ ಸತ್ತ ಕೋಳಿ ಎಂದು ಜನರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಏನೂ ತಿಳಿಯಲ್ಲ, ಸತ್ತ ಕೋಳಿ ಮಾಂಸದ ಜೊತೆ ತಾಜಾ ಕೋಳಿ ಮಾಂಸ ಸೇರಿಸಿ ಮಾರಾಟ ಮಾಡುತ್ತೇವೆ. ನಿಮಗೆ ಎಷ್ಟು ಕೆ.ಜಿ ಮಾಂಸವಾದರೂ ಸಿಗುತ್ತೆ. ಹೀಗೆ ಮಿಶ್ರಣ ಮಾಡಿ ಕೊಟ್ಟರೆ ಯಾರಿಗೂ ತಿಳಿಯುವುದಿಲ್ಲ. ರುಚಿಯಲ್ಲಿ ಏನು ವ್ಯತ್ಯಾಸ ಬರಲ್ಲ. ಶೇ.10 ಬೇರೆ ರೀತಿ ಅನಿಸಬಹುದು. ಅದಕ್ಕೆ ವೆನಿಗರ್ ಅಲ್ಲಿ ಚಿಕನ್ ತೊಳೆದು, ಉಪ್ಪು ಖಾರ ಚೆನ್ನಾಗಿ ಹಾಕಿದರೆ ಗೊತ್ತಾಗಲ್ಲ. ಬೆಳಗ್ಗೆ ಬಂದು ನೋಡಿ ಒಬ್ಬೊಬ್ರು 50ರಿಂದ 60 ಕೆಜಿ ಸತ್ತ ಕೋಳಿ ಮಾಂಸ ತೆಗೆದುಕೊಂಡು ಹೋಗುತ್ತಾರೆ ಎಂದು ಸತ್ಯಾಂಶ ಬಾಯಿಬಿಟ್ಟಿದ್ದಾನೆ.

    ಯಾವ ಭಯವೂ ಇಲ್ಲದೇ ನಮಗೆ ಮಾರಾಟ ಆಗಬೇಕಷ್ಟೇ ಎಂದು ವ್ಯಾಪಾರಿಗಳು, ದಂಧೆ ನಡೆಸುವವರು ಸತ್ತು ಒಂದೆರಡು ದಿನ ಆದ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಇನ್ನು ಅಂಗಡಿಯವರು ಕಡಿಮೆ ಹಣಕ್ಕೆ ಕೋಳಿ ಸಿಗುತ್ತೆ ಅಂತ ತಂದು ಮಾರುತ್ತಾರೆ. ಕೂಡಲೇ ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಿ, ಈ ರೀತಿ ಜನರ ಆರೋಗ್ಯಕ್ಕೆ ಮಾರಕವಾಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

    https://www.youtube.com/watch?v=ru7PDerT2bM

  • ಬೆಂಗ್ಳೂರಿನಲ್ಲಿ ನಡೀತಿದೆ ವಾಟರ್ ಮಾಫಿಯಾ- ಹಿಂದಿವಾಲಾನಿಂದ ಕಾವೇರಿ ನೀರಿಗೆ ಕನ್ನ

    ಬೆಂಗ್ಳೂರಿನಲ್ಲಿ ನಡೀತಿದೆ ವಾಟರ್ ಮಾಫಿಯಾ- ಹಿಂದಿವಾಲಾನಿಂದ ಕಾವೇರಿ ನೀರಿಗೆ ಕನ್ನ

    ಬೆಂಗಳೂರು: ಕಾವೇರಿ ನೀರು ಕುಡಿಯೋಕೂ ಬೇಕು, ಮಾರೋಕು ಬೇಕು ಎಂದು ಹಿಂದಿವಾಲನೊಬ್ಬ ಗಾಂಚಲಿ ಮಾಡುತ್ತಾ ಕಾವೇರಿಗೆ ಕನ್ನ ಹಾಕಿದ್ದಾನೆ. ಇದನ್ನ ಕೇಳೋಕೆ ಹೋದರೆ ಅವಾಜ್ ಹಾಕುತ್ತಾನೆ. ಈ ವಾಟರ್ ಮಾಫಿಯಾವನ್ನು ಪಬ್ಲಿಕ್ ಟಿವಿ ತನ್ನ ರಹಸ್ಯ ಕಾರ್ಯಾಚಾರಣೆಯ ಮೂಲಕ ಬಯಲು ಮಾಡಿದೆ.

    ಹೌದು. ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೆ ವಾಟರ್ ಮಾಫಿಯಾ ನಡೆಯುತ್ತಿದೆ. ಇದಕ್ಕೆ ಪಾಲಿಕೆ ಹಾಗೂ ಜಲ ಮಂಡಳಿಯ ಅಧಿಕಾರಿಗಳ ಶ್ರೀರಕ್ಷೆ ಕೂಡ ಇದೆಯಂತೆ. ಪಾಲಿಕೆಯ ಬೋರ್‍ವೆಲ್‍ನಿಂದ ರಾತ್ರೋ ರಾತ್ರಿ ಅಕ್ರಮವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ ಅನ್ನೋ ಆರೋಪ ಇದೀಗ ಕೇಳಿ ಬಂದಿದೆ.

    ಲಗ್ಗೆರೆಯ ರಾಜೇಶ್ವರಿ ನಗರದ ಫ್ರೆಂಡ್ಸ್ ಸರ್ಕಲ್ ಬಳಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಇದನ್ನ ರಾಜಸ್ಥಾನ ಮೂಲದ ಅನೂಪ್ ಕುಮಾರ್ ನಡೆಸುತ್ತಿದ್ದಾರೆ. ಪಾಲಿಕೆಯಿಂದ ಅನುಮತಿ ಪಡೆದು ತನ್ನ ಸ್ವಂತ ಬೋರ್‍ವೆಲ್‍ನಿಂದನೇ ನೀರು ಮಾರಾಟ ಮಾಡುತ್ತಿದ್ದಾರೆ. ಆದರೆ ತನ್ನ ಮನೆಯ ಮುಂದೆಯೇ ಬಿಬಿಎಂಪಿಯ ಬೋರ್‍ವೆಲ್ ಕೂಡ ಇದೆ. ಹೀಗಾಗಿ ರಾತ್ರೋ ರಾತ್ರಿ ಬಿಬಿಎಂಪಿಯ ಬೋರ್‍ವೆಲ್‍ನಿಂದ ಅಕ್ರಮವಾಗಿ ನೀರನ್ನ, ತನ್ನ ಮನೆಯ ಸಂಪ್‍ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಅಂತ ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಸತ್ಯಾಂಶ ಬಯಲು ಮಾಡಲು ಹೋದ ಪಬ್ಲಿಕ್ ಟಿವಿ ತಂಡಕ್ಕೆ ಅನೂಪ್ ಕುಮಾರ್ ಹೆಂಡತಿ ಅವಾಜ್ ಹಾಕಿದ್ದಾರೆ. ಯಾರ ಅನುಮತಿ ತೆಗೆದುಕೊಂಡು ಬಂದಿದ್ದೀರಿ? ಯಾರು ನಿಮಗೆ ಮಾಹಿತಿ ಕೊಟ್ಟವರು? ಆ ಮಗನ ನಂಬರ್ ಕೊಡಿ ಎಂದು ಫುಲ್ ಗರಂ ಆದರು.

    ಹಲವು ದಿನಗಳಿಂದ ಅಕ್ರಮವಾಗಿ ಕಾವೇರಿ ನೀರನ್ನ ಸಂಗ್ರಹಿಸಿ, ಮನೆಗಳಿಗೆ, ಮದ್ವೆ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಅನೂಪ್ ನೀರು ಮಾರಾಟ ಮಾಡುತ್ತಿದ್ದಾರೆ. ಪಾಲಿಕೆಯಿಂದಲೂ ಇದಕ್ಕೆ ಅನುಮತಿ ಸಿಕ್ಕಿದ್ದು, ತಿಂಗಳಿಗೆ 20ರಿಂದ 30 ಸಾವಿರ ವಾಟರ್ ಬಿಲ್ ಕಟ್ಟುತ್ತಾರಂತೆ. ಆದರೆ ಯಾರಿಗೂ ಅನುಮಾನ ಬಾರದಂತೆ ಪಾಲಿಕೆಯ ಬೋರ್‍ವೆಲ್‍ಗೆ ಎಕ್ಸ್ಟ್ರಾ ಪೈಪ್ ಚರಂಡಿಯೊಳಗೆ ಬಿಟ್ಟಿದ್ದಾರೆ. ಇದು ಬೆಳಕಿರುವ ತನಕ ಪಾಲಿಕೆಯ ಬೋರ್‍ವೆಲ್‍ಗೆ ಕನೆಕ್ಷನೇ ಇರಲ್ಲ. ಆದರೆ ರಾತ್ರಿ ಆಗುತ್ತಿದ್ದಂತೆ ಪೈಪ್ ಕನೆಕ್ಷನ್ ಕೊಟ್ಟು ನೀರನ್ನ ಸಂಗ್ರಹಿಸಿಟ್ಟುಕೊಳ್ದಳುತ್ತಿದ್ದಾರೆ. ಈ ಬಗ್ಗೆ ಖುದ್ದು ಪಬ್ಲಿಕ್ ಟಿವಿ ತಂಡ ಚರಂಡಿಯೊಳಗೆ ಇಳಿದಾಗ ಎಕ್ಸ್ಟ್ರಾ ವಾಟರ್ ಪೈಪ್ ಇರೋದು ಬೆಳಕಿಗೆ ಬಂದಿದೆ.

    ಈ ಬಗ್ಗೆ ನೀರಿನ ಘಟಕ ನಡೆಸುತ್ತಿರುವ ಮಾಲೀಕ ಅನೂಪ್ ಕುಮಾರ್, ನಾವು ಕಾನೂನಾತ್ಮಕವಾಗಿಯೇ ಇದನ್ನು ನಡೆಸುತ್ತಿದ್ದೇವೆ. ಯಾರು ನಿಮಗೆ ಹೇಳಿದ್ದಾರೋ ಅವರ ವಿಡಿಯೋ ಮಾಡಿ ನಮಗೆ ಕೊಡಲಿ. ಆಗ ನಾನು ಉತ್ತರ ಕೊಡುತ್ತೇನೆ ಎಂದು ರಾಜಾರೋಷವಾಗಿ ಹೇಳುತ್ತಿದ್ದಾರೆ.

    ಸಾವಿರಾರು ಲೀಟರ್ ಕಾವೇರಿ ನೀರನ್ನ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಬಿಬಿಎಂಪಿ, ಜಲಮಂಡಳಿಯನ್ನ ಯಾಮಾರಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ. ಆದರೆ ಈ ಬಗ್ಗೆ ತಿಳಿದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕುಡಿಯುವ ನೀರಿನ ಘಟಕಕ್ಕೆ ಬಂದು ವಿಚಾರಿಸದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಂದ ಕಿಸೆಗೆ ಕಾಸು ತುಂಬಿಸಿಕೊಳ್ಳುವಲ್ಲಿ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳು ಶಾಮಿಲಾಗಿದ್ದಾರಾ ಅನ್ನೋ ಸಂಶಯ ಸದ್ಯ ಎಲ್ಲರಲ್ಲಿ ಹುಟ್ಟಿಕೊಂಡಿದೆ.

  • ರಾಜ್ಯಕ್ಕೂ ಕಾಲಿಟ್ಟಿದೆ ಗೋವಾದಲ್ಲಿ ನಡೀತ್ತಿದ್ದ ಭಯಾನಕ ದಂಧೆ- ಏನಿದು ಕಲರ್ ಬೋರ್ಡ್?

    ರಾಜ್ಯಕ್ಕೂ ಕಾಲಿಟ್ಟಿದೆ ಗೋವಾದಲ್ಲಿ ನಡೀತ್ತಿದ್ದ ಭಯಾನಕ ದಂಧೆ- ಏನಿದು ಕಲರ್ ಬೋರ್ಡ್?

    ಕೊಪ್ಪಳ: ಗೋವಾದಲ್ಲಿ ನಡೆಯುತ್ತಿದ ಭಯಾನಕ ಕಲರ್ ಬೋರ್ಡ್ ಜೂಜಾಟ ದಂಧೆ ಕೊಪ್ಪಳಕ್ಕೂ ಕಾಲಿಟ್ಟಿದೆ. ಗಂಗಾವತಿಯಲ್ಲಿ ಕಳೆದ ಒಂದು ವಾರದಿಂದ ಕಲರ್ ಬೋರ್ಡ್ ಜೂಜಾಟ ಆರಂಭವಾಗಿದೆ.

    ವರಲಕ್ಷ್ಮಿ ಕ್ರಿಯೇಷನ್ ಅಸೋಶಿಯೇಷನ್ ನಿಂದ ಈ ಜೂಜಾಟ ನಡೆಯುತ್ತಿದೆ. ಗಂಗಾವತಿ ನಗರದಲ್ಲಿ ನಿಷೇಧಿತ ಕಲರ್ ಬೋರ್ಡ್ ಜೂಜಾಟವನ್ನು ಲಾಟ್ರಿ ಬಸವ ಮತ್ತು ಯಮನೂರ ಕುಲಂ ಕುಲ್ಲಾಗಿ ಆಟ ನಡೆಸುತ್ತಿದ್ದು, ಇದಕ್ಕೆ ಯುವಕರು ಬಲಿಯಾಗ್ತಿದ್ದಾರೆ.

    ಈ ಜೂಜಾಟ, ಇಸ್ಪೀಟ್ ಅಂದರ್- ಬಾಹರ್ ಗಿಂತಲೂ ಡೆಂಜರ್ ಎಂಬುದು ಹಣ ಕಳೆದುಕೊಂಡವರ ಮಾತಾಗಿದೆ. ಇಂಥ ಜೂಜಾಟ ಬಹಿರಂಗವಾಗಿಯೇ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಜೂಜಾಟ ದಂಧೆಗೆ ಪೊಲೀಸ್ ಇಲಾಖೆಯೇ ಬೆಂಗಾವಲಾಗಿ ನಿಂತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಏನಿದು ದಂಧೆ?:
    ಕೌಂಟರ್ ನಲ್ಲಿ ಹಣ ಕೊಟ್ಟು, 20, 50, 100 ರೂಪಾಯಿಯ ವೋಚರ್ ಪಡೆಯುವ ಯುವಕರು ಜೂಜಾಟದಲ್ಲಿ ಭಾಗಿಯಾಗುತ್ತಾರೆ. ಒಟ್ಟು 6 ಬಣ್ಣದ ದೊಡ್ಡ ಬೋರ್ಡ್ ಗೆ ಮೂರು ಬಾಣ ಎಸೆಯಲಾಗುತ್ತದೆ. ಬಾಣ ಬಿದ್ದ ಕಲರ್ ಗೆ ಹಣ ಕಟ್ಟಿದವರಿಗೆ ಹಣ, ಬಾಕಿ ಹಣ ಕಂಪನಿಗೆ ಎಂಬ ನಿಯಮವಿದೆ. ಈ ಡೆಂಜರ್ ಗೇಮ್ ನ ವಿಡಿಯೋ ಮಾಡಲು ಮುಂದಾದ ಮಾಧ್ಯಮದವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv