Tag: ill

  • ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ಕೋಲಾರ: ದೇವಾಲಯದಲ್ಲಿ ವಿತರಿಸಿದ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀಗರಾಯನಹಳ್ಳಿಯಲ್ಲಿ ನಡೆದಿದೆ.

    ಹಳ್ಳಿಯ ಗಂಗಮ್ಮ ದೇವಾಲಯದಲ್ಲಿ ಶನಿವಾರ ಹೊಸ ವರ್ಷಾಚರಣೆಯ ಅಂಗವಾಗಿ ವಿಶೇಷ ಪೂಜೆ ನಡೆದಿತ್ತು. ನಂತರದಲ್ಲಿ ದೇವಾಲಯದ ಆಡಳಿತ ಮಂಡಳಿ ಮಾಡಿಸಿದ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗಿದೆ.

    ಪ್ರಸಾದದ ರೂಪದಲ್ಲಿ ಚಿತ್ರಾನ್ನ ಹಾಗೂ ಕೇಸರಿಬಾತ್ ಸೇವಿಸಿದ ಭಕ್ತರು ಅಸ್ವಸ್ಥಗೊಂಡಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!

    ಅಸ್ವಸ್ಥತರ ಪೈಕಿ 12 ಜನ ಮಕ್ಕಳು, 30 ಕ್ಕೂ ಹೆಚ್ಚು ಜನ ಪುರುಷರು ಹಾಗೂ ಮಹಿಳೆಯರು ಇದ್ದಾರೆ. ಈಗಾಗಲೇ ಭಕ್ತರು ಗುಣಮುಖರಾಗಿ ಮನೆಗಳತ್ತ ತೆರಳುತ್ತಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೂರು ತಿಂಗಳ ಬಳಿಕ ಸಾವಿರ ಸೋಂಕು – ಬೆಂಗ್ಳೂರಲ್ಲಿ 810 ಕೇಸ್

  • ಬಿಗ್‍ಬಾಸ್ ವೀಕೆಂಡ್ ಎಪಿಸೋಡ್‍ನಲ್ಲಿ ಪಾಲ್ಗೊಳಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ

    ಬಿಗ್‍ಬಾಸ್ ವೀಕೆಂಡ್ ಎಪಿಸೋಡ್‍ನಲ್ಲಿ ಪಾಲ್ಗೊಳಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆ. ಹೀಗಂತ ಸುದ್ದಿಯೊಂದು ನಿನ್ನೆ ಮಧ್ಯಾಹ್ನದಿಂದ ಹರಿದಾಡುತ್ತಲೇ ಇತ್ತು. ಇದೀಗ ಇದೇ ವಿಚಾರವಾಗಿ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ. ಆದರೆ ವೈದ್ಯರು ಇನ್ನೂ ಕೆಲವು ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ ಬಿಗ್‍ಬಾಸ್ ಕನ್ನಡ 8ನೇ ಸೀಸನ್‍ನ ಈ ವೀಕೆಂಡ್‍ನ ಎಪಿಸೋಡ್‍ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ಟ್ವೀಟ್ ಮೂಲಕವಾಗಿ ತಿಳಿಸಿದ್ದಾರೆ.

    ಬಿಗ್ ಬಾಸ್ ಕನ್ನಡದ ಕ್ರಿಯೇಟಿವ್ ಟೀಂ ಈ ವೀಕೆಂಡ್‍ನಲ್ಲಿ ವಾರದ ಕತೆ ಕಿಚ್ಚನ ಜೊತೆ ಬದಲಾಗಿ ಯಾವ ರೀತಿಯ ವಿಭಿನ್ನವಾದ ಪ್ಲಾನ್ ಮಾಡಿಕೊಳ್ಳಲಿದೆ ಎಂಬ ಬಗ್ಗೆ ನನಗೂ ಕುತೂಹಲವಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಹೇಗಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಕಿಚ್ಚ ಸುದೀಪ್ ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಕಿಚ್ಚ ಸುದೀಪ್‍ಗೆ ಹಾರೈಸುತ್ತಿದ್ದಾರೆ. ಜೊತೆಗೆ ನೀವಿಲ್ಲದೆ ಬಿಗ್ ಬಾಸ್ ಊಹಿಸಿಕೊಳ್ಳುವುದು ಕಷ್ಟ ಅಂತಲೂ ಫ್ಯಾನ್ಸ್ ಟ್ವೀಟ್ ಮಾಡುತ್ತಿದ್ದಾರೆ.

    ಒಟ್ಟಾರೆಯಾಗಿ ಈ ವಾರದ ಬಿಗ್‍ಬಾಸ್ ವೀಕೆಂಡ್ ಕಾರ್ಯಕ್ರಮ ಹೇಗೆ ನಡೆಯಲಿದೆ. ಏನೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನು ಕಾದು ನೋಡಬೇಕಿದೆ. ಕಿಚ್ಚ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

  • ಶಾಲೆಯಲ್ಲಿ ವಿತರಿಸಿದ ಮಾತ್ರೆ ಸೇವಿಸಿ 35 ವಿದ್ಯಾರ್ಥಿಗಳು ಅಸ್ವಸ್ಥ

    ಶಾಲೆಯಲ್ಲಿ ವಿತರಿಸಿದ ಮಾತ್ರೆ ಸೇವಿಸಿ 35 ವಿದ್ಯಾರ್ಥಿಗಳು ಅಸ್ವಸ್ಥ

    ತುಮಕೂರು: ಶಾಲೆಯಲ್ಲಿ ವಿತರಿಸಿದ ಐರನ್ ಕಂಟೆಂಟ್ ಮಾತ್ರೆ ಸೇವಿಸಿದ 35 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಎಸ್. ಕೊಡಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೊಡಿಗೆಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ‘ಐರನ್ ಆಂಡ್ ಫಾಲಿಕ್ ಆಸಿಡ್’ ಹೆಸರಿನ ಮಾತ್ರೆಯನ್ನು ಇಂದು ಬೆಳಗ್ಗೆ ಸರ್ಕಾರಿ ಆಸ್ಪತ್ರೆಯಿಂದ ತಂದು ವಿತರಣೆ ಮಾಡಲಾಗಿತ್ತು. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಉಚಿತವಾಗಿ ನೀಡಿರುವ ಈ ಮಾತ್ರೆ 2018ರ ಆಗಸ್ಟ್ ನಲ್ಲಿ ತಯಾರಾಗಿದ್ದು, 2020 ಜುಲೈವರೆಗೆ ಬಳಸಬಹುದಾಗಿದೆ.

    ಈ ಮಾತ್ರೆ ನುಂಗಿದ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಮಾತ್ರೆ ಸೇವಿಸಿದ ಕೆಲ ಸಮಯದ ನಂತರ ವಿದ್ಯಾರ್ಥಿಗಳಿಗೆ ತಲೆ ಸುತ್ತುವುದು, ವಾಂತಿ ಶುರುವಾಗಿ ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುತ್ತಿದ್ದಂತೆ ಗ್ರಾಮಸ್ಥರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ರಿಯಾಕ್ಷನ್ ಆಗಿ 15 ಮಂದಿ ರೋಗಿಗಳು ಕಣ್ಣು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಜುಲೈ 15ರಂದು ಕಣ್ಣಿನ ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳು ಕಣ್ಣು ಕಳೆದುಕೊಂಡಿರುವ ಘಟನೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ನಡೆದಿತ್ತು.

    25 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿತ್ತು. ಅದರಲ್ಲಿ 15 ಜನರಿಗೆ ಕಣ್ಣು ಕಾಣುತ್ತಿಲ್ಲ, 5 ಮಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು.

    ಅವಾಂತರದ ಕುರಿತು ಮಿಂಟೊ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಪ್ರತಿಕ್ರಿಯಿಸಿ, ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾಗ ನಾನು ರಜೆಯಲ್ಲಿದ್ದೆ. ನಮ್ಮ ಸರ್ಜಿಕಲ್ ಟೀಮ್ ಚಿಕಿತ್ಸೆ ನೀಡಿದೆ. ಸೋಮವಾರ 24ಕ್ಕೂ ರೋಗಿಗಳಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆ ರೋಗಿಗಳ ಕಣ್ಣಿನ ಪಟ್ಟಿ ಬಿಚ್ಚಿದಾಗ ರಿಯಾಕ್ಷನ್ ಆಗಿರುವುದು ಕಂಡಬಂದಿದೆ. ಮೇಲ್ನೋಟಕ್ಕೆ ಹೈ ಡ್ರಗ್ ರಿಯಾಕ್ಷನ್‍ನಿಂದ ಅವಾಂತರ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದರು.

    ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಬಳಸಿದ ಔಷಧ ದುಷ್ಪರಿಣಾಮದಿಂದ ರಿಯಾಕ್ಷನ್ ಆಗಿ ಈ ಫಲಿತಾಂಶ ಬಂದಿದೆ ಎಂದು ಆಸ್ಪತ್ರೆ ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಮುಂದಿನ ಆದೇಶ ಬರುವವರೆಗೂ ಅಕ್ಯೂಜೆಲ್ ಆಫ್ತಮಾಲಿಕ್ ವಿಸಿಯೋಸರ್ಜಿಕಲ್ ಡಿವೈಸ್ ಬ್ಯಾಚ್ ನಂ ಒಯುವಿ 1990203 ಔಷಧವನ್ನು ಬಳಸಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.

  • ನಕಲಿ ಮದ್ಯಕ್ಕೆ ಮೂವರು ಬಲಿ, 29 ಮಂದಿ ಅಸ್ವಸ್ಥ!

    ನಕಲಿ ಮದ್ಯಕ್ಕೆ ಮೂವರು ಬಲಿ, 29 ಮಂದಿ ಅಸ್ವಸ್ಥ!

    ಭುವನೇಶ್ವರ: ನಕಲಿ ಮದ್ಯವನ್ನು ಸೇವಿಸಿ 29 ಮಂದಿ ಅಸ್ವಸ್ಥಗೊಂಡು ಮೂವರು ಸಾವನ್ನಪ್ಪಿರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ.

    ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕಾಗಿ ಸ್ಥಳೀಯ ರಾಜಕೀಯ ನಾಯಕರು ಮತ ಹಾಕಲು ಜನರಿಗೆ ಹಣವನ್ನು ನೀಡಿದ್ದರು. ಈ ಹಣವನ್ನು ಬಳಸಿಕೊಂಡು ಅಲ್ಲಿನ ಜನರು ಮದ್ಯ ಖರೀದಿಸಿ ಕುಡಿದಿದ್ದರು. ಬಳಿಕ ಹೀಗೆ ಅಸ್ವಸ್ಥಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಅಂತ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.

    ಭದ್ರಾಕ್ ಜಿಲ್ಲೆಯ ತಿಹಿಡೀ ಪೊಲೀಸ್ ಠಾಣಾ ವ್ಯಾಪ್ತಿಯ ದೌಲತಪುರ ಗ್ರಾಮದ ಜನರು ಮತದಾನದ ಬಳಿಕ ಸ್ಥಳೀಯ ಮಾರುಕಟ್ಟೆಯಿಂದ ಮದ್ಯ ಖರೀದಿಸಿ ತಂದಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.

    ಘಟನೆಯಲ್ಲಿ ಅಸ್ವಸ್ಥರಾದ 29 ಮಂದಿಯನ್ನು ಎಸ್‍ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತರನ್ನು ಸುಧಾ ಚರಣ್ ನಾಯಕ್, ಸರಬೇಸವಾ ದಾಸ್, ರಾಮಚಂದ್ರ ದಾಸ್ ಎಂದು ಗುರುತಿಸಲಾಗಿದೆ.

    ನಕಲಿ ಮದ್ಯವನ್ನು ಸೇವಿಸಿದ ಬಳಿಕ ಕೆಲವರಿಗೆ ಹೊಟ್ಟೆ ನೋವು, ಕಣ್ಣು ಕಾಣದಿದ್ದ ಹಾಗೆ ಆಗಿತ್ತು ಎಂದು ಕೆಲವರು ತಿಳಿಸಿದ್ದಾರೆ. ಹಾಗೆಯೇ ಈ ನಕಲಿ ಮದ್ಯ ಸರಬರಾಜು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಭದ್ರಾಕ್‍ನ ಚಂದಬಲಿ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಬಳಿಕ ಪೊಲೀಸರು ಜನರ ಮನವೊಲಿಸಿ ಪ್ರತಿಭಟನೆಗೆ ತೆರೆ ಎಳೆಯಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಲಸಿಕೆ ಹಾಕಿಸಿಕೊಂಡ ಬಳಿಕ ಮಕ್ಕಳು ಅಸ್ವಸ್ಥ- 1 ಮಗು ಸಾವು, 26 ಮಕ್ಕಳು ಆಸ್ಪತ್ರೆಗೆ ದಾಖಲು

    ಲಸಿಕೆ ಹಾಕಿಸಿಕೊಂಡ ಬಳಿಕ ಮಕ್ಕಳು ಅಸ್ವಸ್ಥ- 1 ಮಗು ಸಾವು, 26 ಮಕ್ಕಳು ಆಸ್ಪತ್ರೆಗೆ ದಾಖಲು

    ಹೈದರಾಬಾದ್: ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದ ಬಳಿಕ ಒಂದು ಮಗು ಸಾವನ್ನಪ್ಪಿದ್ದು, ಸುಮಾರು 26 ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆಂಧ್ರ ಪ್ರದೇಶದ ನಾಮ್‍ಪಲ್ಲಿಯಲ್ಲಿ ನಡೆದಿದೆ.

    ಗುರುವಾರ ನಾಮ್‍ಪಲ್ಲಿಯಲ್ಲಿರುವ ಸಾರ್ವಜನಿಕರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳು ಲಸಿಕೆ ಹಾಕಿಸಿಕೊಂಡ ಬಳಿಕ ಅಸ್ವಸ್ಥರಾಗಿದ್ದಾರೆ. ಲಸಿಕೆ ಪಡೆದ ಮಕ್ಕಳಲ್ಲಿ 26 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಗಂಡು ಮಗು ಮೃತಪಟ್ಟಿದೆ ಹಾಗೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಮಕ್ಕಳಿಗೆ ನೀಲೋಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳ ವಯಸ್ಸು ಹಾಗೂ ಇತರೇ ವಿವರಗಳನ್ನು ಮಾಧ್ಯಮಗಳಿಗೆ ನೀಡಲು ವೈದ್ಯರು ನಿರಾಕರಿಸಿದ್ದಾರೆ.

    ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ. ಇದಕ್ಕೇ ಲಸಿಕೆ ನೀಡಿದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಲ್ಲದೆ ನಾಮ್‍ಪಲ್ಲಿ ಆರೋಗ್ಯ ಕೇಂದ್ರದಲ್ಲಿ ಯಾವೆಲ್ಲ ಮಕ್ಕಳಿಗೆ ಲಸಿಕೆ ಹಾಕಲಾಗಿತ್ತೋ, ಎಲ್ಲಾ ಮಕ್ಕಳ ಪೋಷಕರಿಗೆ ಅವರನ್ನು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಕರೆತರಲು ಸೂಚಿಸಲಾಗಿದೆ. ಅಲ್ಲದೆ ಘಟನೆ ನಡೆದ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಇದಕ್ಕೆ ಸಂಬಂಧ ಪಟ್ಟವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

    ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

    ಚಿಕ್ಕಬಳ್ಳಾಪುರ: ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಲಕ್ಷ್ಮೀದೇವಿಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

    ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಬಿಸಿಯೂಟ ಸೇವಿಸುತ್ತಿದ್ದರು. ಹಾಗೆಯೇ ಇಂದು ಕೂಡ ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳು ಸೇವಿಸಿದ್ದಾರೆ. ಆದ್ರೆ ಊಟ ಸೇವನೆ ಬಳಿಕ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿ ಭೇದಿ ಶುರುವಾಗಿ ಶಾಲೆಯಲ್ಲಿಯೇ ಅಸ್ವಸ್ಥರಾಗಿದ್ದಾರೆ. ಕೂಡಲೇ ಎಚ್ಚೆತ್ತ ಶಿಕ್ಷಕರು ಅಸ್ವಸ್ಥ ವಿದ್ಯಾರ್ಥಿಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಸದ್ಯ ಈ ಘಟನೆಯಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು, ಬಿಸಿಯೂಟ ಸರಬರಾಜು ಮಾಡುವ ಗುತ್ತಿಗೆದಾರ ಶ್ರೀರಾಮರೆಡ್ಡಿ ಅವರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಶಿಕ್ಷಕರು ಹಾಗೂ ಪೋಷಕರು ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳಪೆ ಗುಣಮಟ್ಟದ ಆಹಾರ ಸೇವಿಸಿ 12 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ

    ಕಳಪೆ ಗುಣಮಟ್ಟದ ಆಹಾರ ಸೇವಿಸಿ 12 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ

    ರಾಯಚೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್‍ನಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ರಾಯಚೂರಿನ ಲಿಂಗಸಗೂರಿನಲ್ಲಿ ಇಂದು ನಡೆದಿದೆ.

    ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸಿ ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಮಧ್ಯಾಹ್ನದ ಊಟ ಬಳಿಕ ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಪದೇ ಪದೇ ಮೊರಾರ್ಜಿ ಶಾಲೆಗಳಲ್ಲಿ ಈ ರೀತಿ ಘಟನೆಗಳು ಮರುಕಳಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಈ ಕುರಿತು ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ. ರಾಜ್ಯದಲ್ಲಿ ಹಲವೆಡೆ ಕಳಪೆ ಗುಣಮಟ್ಟದ ಆಹಾರ ಸೇವಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥರಾದರೂ ಕ್ರಮ ತೆಗೆದುಕೊಳ್ಳದ ಅಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv