Tag: ILI

  • ಕೊರೊನಾ ವೈರಸ್‍ಗೆ ಇಂದು 7 ಬಲಿ- 292 ಸೋಂಕಿತರ ಸ್ಥಿತಿ ಗಂಭೀರ

    ಕೊರೊನಾ ವೈರಸ್‍ಗೆ ಇಂದು 7 ಬಲಿ- 292 ಸೋಂಕಿತರ ಸ್ಥಿತಿ ಗಂಭೀರ

    – ರಾಜ್ಯದಲ್ಲಿ 253ಕ್ಕೇರಿದ ಸಾವಿನ ಸಂಖ್ಯೆ

    ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರಣಾರ್ಭಟ ಮುಂದುವರಿದಿದೆ. ಇಂದು ಕೂಡ 7 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 253ಕ್ಕೇರಿದೆ. ಕಳೆದ 48 ಗಂಟೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿಗೆ 27 ಮಂದಿ ಸಾವನ್ನಪ್ಪಿದ್ದಾರೆ.

    ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ, ಬೆಂಗಳೂರು, ಬೀದರ್ ನಲ್ಲಿ ತಲಾ 2, ದಕ್ಷಿಣ ಕನ್ನಡ, ಹಾಸನ, ಬೆಳಗಾವಿಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು 292 ಸೋಂಕಿತ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 191 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಾವನ್ನಪ್ಪಿದವರ ವಿವರ:
    1) ರೋಗಿ-12726: ಬೆಂಗಳೂರಿನ 50 ವರ್ಷದ ಪುರುಷ. ತೀವ್ರ ಉಸಿರಾಟ ತೊಂದರೆ (ಸಾರಿ), ಜ್ವರ ಲಕ್ಷಣಗಳು ಕಾಣಿಸಿಕೊಂಡಿತ್ತು. ಅಲ್ಲದೇ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಇವರನ್ನು ಜೂನ್ 27 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 1 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

    2) ರೋಗಿ-13261: ಬೆಂಗಳೂರಿನ 50 ವರ್ಷದ ಮಹಿಳೆ. ವಿಷಮ ಶೀತ ಜ್ವರದ (ಐಎಲ್‌ಐ), ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಜೂನ್ 29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ತಮಾ ಸಮಸ್ಯೆ ಎದುರಿಸುತ್ತಿದ್ದ ಮಹಿಳೆ ಜೂನ್ 30 ರಂದು ಸಾವನ್ನಪ್ಪಿದ್ದರು.

    3) ರೋಗಿ-14344: ದಕ್ಷಿಣ ಕನ್ನಡದ 72 ವರ್ಷದ ವೃದ್ಧ. ತೀವ್ರ ಉಸಿರಾಟ ತೊಂದರೆ (ಸಾರಿ), ಜ್ವರ, ಕೆಮ್ಮನಿಂದ ಬಳಲುತ್ತಿದ್ದರು. ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆ ಎದುರಿಸುತ್ತಿದ್ದವರನ್ನು ಜೂನ್ 30 ಆಸ್ಪತ್ರೆ ದಾಖಲಿಸಲಾಗಿತ್ತು. ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

    4) ರೋಗಿ-15272: ಬೆಳಗಾವಿಯ 72 ವರ್ಷದ ವೃದ್ಧ. ವಿಷಮ ಶೀತ ಜ್ವರದ (ಐಎಲ್‌ಐ), ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 1 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

    5) ರೋಗಿ-15471: ಬೀದರ್‌ನ 80 ವರ್ಷದ ವೃದ್ಧ. ತೆಲಂಗಾಣ ಪ್ರಯಾಣದ ಹಿನ್ನೆಲೆ. ಜ್ವರ ಮತ್ತು ಕೆಮ್ಮು, ಮಧುಮೇಹದ ಸಮಸ್ಯೆಯಿಂದ ಜೂನ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಜುಲೈ 1 ರಂದು ಸಾವನ್ನಪ್ಪಿದ್ದರು.

    6) ರೋಗಿ-15474: ಬೀದರ್‌ನ  63 ವರ್ಷದ ವೃದ್ಧ. ತೆಲಂಗಾಣದ ಪ್ರಯಾಣದ ಹಿನ್ನೆಲೆ. ತೀವ್ರ ಉಸಿರಾಟ ತೊಂದರೆ (ಸಾರಿ)ಯಿಂದ ಜೂನ್ 20 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 1 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

    7) ರೋಗಿ-15639: ಹಾಸನದ 30 ವರ್ಷದ ಪುರುಷ. ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ. ಜೂನ್ 29 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೆ ಜೂನ್ 30 ರಂದು ಸಾವನ್ನಪ್ಪಿದ್ದರು.

  • ಬೆಂಗ್ಳೂರಿಗರೇ ಎಚ್ಚರ, 6 ದಿನಕ್ಕೆ19 ಮಂದಿ ಬಲಿ

    ಬೆಂಗ್ಳೂರಿಗರೇ ಎಚ್ಚರ, 6 ದಿನಕ್ಕೆ19 ಮಂದಿ ಬಲಿ

    – ನಿಗೂಢ ಹೆಜ್ಜೆ ಇಡುತ್ತಿದೆ ಕೊರೊನಾ
    – ಹೆಚ್ಚಾಗುತ್ತಿದೆ ವಿಷಮ ಶೀತ ಜ್ವರ, ಸಾರಿ ಪ್ರಕರಣ
    – ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದು ಬೆಂಗಳೂರಿನಲ್ಲಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಈಗ ನಿಗೂಢ ಹೆಜ್ಜೆಯನ್ನು ಇಡುತ್ತಿದೆ. ಇಲ್ಲಿಯವರೆಗೆ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕದಿಂದ ಕೊರೊನಾ ಬರುತ್ತಿತ್ತು. ಆದರೆ ಈಗ ಯಾವುದೇ ಸಂಪರ್ಕ ಇಲ್ಲದೇ ಕೊರೋನಾ ಗುಪ್ತಗಾಮಿನಿಯಂತೆ ದೇಹ ಸೇರುತ್ತಿದೆ.

    ಲಾಕ್‌ಡೌನ್‌ ಸಮಯದಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ ಅನ್‌ಲಾಕ್‌ ಆಗುತ್ತಿದ್ದಂತೆ ಜನರ ಓಡಾಟದ ಜಾಸ್ತಿಯಾಗಿದ್ದು, ಅಂತರಾಜ್ಯ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಹೀಗಾಗಿ ಈಗ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಕೊರೊನಾ ಬಗ್ಗೆ ಜನರಲ್ಲಿ ಸ್ವಲ್ಪವಾದರೂ ಭಯವಿತ್ತು. ಆದರೆ ಈಗ ಭಯ ಇಲ್ಲದಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧನವಾಗಿ ಹೆಚ್ಚಾಗುತ್ತಿದೆ.

    ಶೀತ, ಕೆಮ್ಮು, ಜ್ವರ ಬಂದಿದೆ ಎಂದು ಸುಮ್ಮನಾದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. 5 ದಿನಗಳಲ್ಲಿ ಬೆಂಗಳೂರಿನಲ್ಲಿ ವಿಷಮ ಶೀತ ಜ್ವರ(Influenza Like Illness -ಐಎಲ್‌ಐ) ಉಸಿರಾಟದ(ಸಾರಿ) ಪ್ರಕರಣ ಹೆಚ್ಚಾಗಿದೆ.

    ಯಾವ ದಿನ ಎಷ್ಟು?
    ಜೂನ್‌ 9 ರಂದು ಒಟ್ಟು 29 ಪ್ರಕರಣಗಳು ಬಂದಿದ್ದು ಇದರಲ್ಲಿ 2 ಐಎಲ್‌ಐ, ಜೂನ್‌ 10 ರಂದು ಬಂದ 42 ಪ್ರಕರಣಗಳಲ್ಲಿ 21 ಐಎಲ್‌ಐ ಆಗಿತ್ತು. ಜೂನ್‌ 11ರಂದು ಒಟ್ಟು 17 ಪ್ರಕರಣಗಳು ಬಂದಿದ್ದು 6 ಐಎಲ್‌ಐ ಆಗಿದ್ರೆ 1 ಸಾರಿ ಆಗಿತ್ತು. ಜೂನ್‌ 12 ರಂದು ಬಂದ 36 ರಲ್ಲಿ 11 ಮಂದಿಗೆ ಐಎಲ್‌ಐ, 5 ಮಂದಿಗೆ ಸಾರಿ ಬಂದಿತ್ತು. ಜೂನ್‌ 13 ರಂದು ಒಟ್ಟು 31 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 12 ಮಂದಿಗೆ ವಿಷಮಶೀತ ಜ್ವರ ಇದ್ದರೆ ಇಬ್ಬರಿಗೆ ಉಸಿರಾಟ ತೊಂದರೆಯಿದೆ.

    6 ದಿನಕ್ಕೆ 19 ಬಲಿ:
    ಬೆಂಗಳೂರಿನಲ್ಲಿ ಬರೋಬ್ಬರಿ 6 ದಿನಕ್ಕೆ 19 ಜನ ಮೃತಪಟ್ಟಿದ್ದಾರೆ. ಜೂ.8 ರಿಂದ 13ನೇ ತಾರೀಖಿನವರೆಗೆ ಬಲಿಯಾದ 19 ಮಂದಿ ಸಾರಿ, ಐಎಲ್‌ಐ ಕಾರಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹೃದಯ ಸಂಬಂಧಿ ಖಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಾ ಇದ್ದವರಿಗೆ ಐಎಲ್‌ಐ, ಸಾರಿ ಹೆಚ್ಚು ಬರುತ್ತಿರುವುದು ದೊಡ್ಡ ತಲೆನೋವಾಗಿದೆ.

    ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇವರಿಗೆ ಹೇಗೋ ಕೊರೊನಾ ವೈರಸ್‌ ತಗುಲಿ ಮತ್ತಷ್ಟು ಸಮಸ್ಯೆ ತಂದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಸದ್ಯ ಈಗ ಬೆಂಗಳೂರಿನಲ್ಲಿ 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿ ಒಟ್ಟು 648 ಮಂದಿಗೆ ಸೋಂಕು ಬಂದಿದ್ದು, ಒಟ್ಟು 29 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಬೆಂಗಳೂರಿನಲ್ಲೇ  ಬಲಿಯಾಗಿದ್ದಾರೆ. 648ರ ಪೈಕಿ 319 ಸಕ್ರಿಯ ಪ್ರಕರಣಗಳಿದ್ದು, 299 ಮಂದಿ ಬಿಡುಗಡೆಯಾಗಿದ್ದಾರೆ.