Tag: ifthar

  • ಉಡುಪಿ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಬೆಂಬಲಿಸ್ತೀವಿ: ಪರಮೇಶ್ವರ್

    ಉಡುಪಿ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಬೆಂಬಲಿಸ್ತೀವಿ: ಪರಮೇಶ್ವರ್

    ಉಡುಪಿ: ಸಮಾಜದಲ್ಲಿ ಸಾಮರಸ್ಯ ಇರಬೇಕು ಎಂದು ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ನಾವು ಬೆಂಬಲಿಸುತ್ತೇವೆ. ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ.

    ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಅಂದ್ರು. ಮುಂದಿನ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ನಾವು ಎಲ್ಲಾ ಸಚಿವರನ್ನು ಗಮನಿಸಿ ವರದಿಯನ್ನು ತರಿಸಿಕೊಳ್ತೇವೆ. ಬಳಿಕ ಸರ್ವೇಗಳನ್ನು ನಡೆಸುತ್ತೇವೆ. ಅದರ ಆಧಾರದ ಮೇಲೆ ವಸ್ತುಸ್ಥಿತಿ ತಿಳ್ಕೊಂಡು ಮುಂದಿನ ತೀರ್ಮಾನ ಮಾಡ್ತೇವೆ ಅಂತಾ ಹೇಳಿದ್ರು.

    ಕಲ್ಲಡ್ಕ ಗಲಭೆ ಬಗ್ಗೆ ಮಾತನಾಡಿದ ಅವರು, ಇಂತಹ ಘಟನೆ ಆಗಬಾರದು. ಕರಾವಳಿಯಲ್ಲಿ ಇತ್ತೀಚೆಗೆ ಇದು ಹೆಚ್ಚಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಇದಕ್ಕೆ ಪ್ರಚೋದನೆ ಮಾಡುತ್ತಿದ್ದಾರೆ ಅಂದ್ರು.

    ಇದೇ ಸಂದರ್ಭದಲ್ಲಿ ಯುಡಿಯೂರಪ್ಪ ದಲಿತರ ಮನೆಗೆ ಭೇಟಿ ವಿಚಾರ ಕುರಿತು ಮಾತನಾಡಿ, ನಾಟಕೀಯ ರಾಜಕಾರಣಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಸರ್ಕಾರ ಇರೋವಾಗ ದಲಿತರ ಸಮಸ್ಯೆಗೆ ಸ್ಪಂದಿಸಿಲ್ಲ. ಇದು ಕೇವಲ ರಾಜಕಾರಣ ಅಂತಾ ಇಡೀ ಜಗತ್ತಿಗೆ ಗೊತ್ತಾಗ್ತಾ ಇದೆ ಎಂದು ಪರಮೇಶ್ವರ್ ಹೇಳಿದರು.

  • ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

    ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ಮತ್ತು ನಮಾಜ್ ಕಾರ್ಯಕ್ರಮವನ್ನು ಖಂಡಿಸಿ ಉಡುಪಿಯಲ್ಲಿ ಶ್ರೀರಾಮಸೇನೆ ಭಜನೆ- ಪೂಜೆ ಮಾಡಿ ಪ್ರತಿಭಟನೆ ನಡೆಸಿದೆ. ನಗರದ ಸರ್ವೀಸ್ ಬಸ್ ನಿಲ್ದಾಣ ಸಮೀಪದ ಕ್ಲಾಕ್ ಟವರ್ ಮುಂಭಾಗ ಈ ಪ್ರತಿಭಟನೆ ನಡೆಯಿತು.

    ಶ್ರೀರಾಮಸೇನೆ ಸಂಘಟನೆಗೆ ಹಿಂದೂ ಜನಜಾಗೃತಿ ಸಮಿತಿ ಬೆಂಬಲಿಸಿತು. ಕ್ಲಾಕ್ ಟವರ್ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ದೇವರ ನಾಮ ಮತ್ತು ಭಜನೆಗಳನ್ನು ಹಾಡುವ ಮೂಲಕ ಇಫ್ತಾರ್ ಕೂಟ ಮತ್ತು ನಮಾಜ್ ಪ್ರಕ್ರಿಯೆಯನ್ನು ತೀವ್ರವಾಗಿ ಖಂಡಿಸಿದರು.

    ಈ ಸಂದರ್ಭ ಮಾತನಾಡಿದ ಶ್ರೀರಾಮ ಸೇನೆಯ ಮಂಗಳೂರು ಪ್ರಾಂತ್ಯ ಪ್ರಮುಖ್, ಇಫ್ತಾರ್ ಕೂಟಕ್ಕೆ ನಮ್ಮ ವಿರೋಧವಿಲ್ಲ. ಮುಂದೆ ನಮಾಜ್ ಮಠದ ವ್ಯಾಪ್ತಿಯಲ್ಲಿ ನಡೆಯಬಾರದು. ಪೇಜಾವರ ಶ್ರೀಗಳು ನಮ್ಮ ಅತ್ಯುನ್ನತ ಗುರುಗಳು. ಅವರಿಗೆ ಸಮಾನವಾದ ಗುರುಗಳು ಮತ್ತೊಬ್ಬರಿಲ್ಲ. ಆದ್ರೆ ನಮಾಜ್ ಮಾಡಿದ್ದು ಸರಿಯಲ್ಲ ಎಂದರು. ಮುಂದಿನ ಬಾರಿ ಬೇರೆ ಕಡೆಯಲ್ಲಿ ಇಫ್ತಾರ್ ಆಯೋಜಿಸಿ. ಆವಾಗ ಶ್ರೀರಾಮ ಸೇನೆ ಕೂಡಾ ಪಾಲ್ಗೊಳ್ಳುತ್ತದೆ ಎಂದು ಹೇಳಿದರು.

    ಮಠದಲ್ಲಿ ನಡೆದ ಇಫ್ತಾರ್‍ಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ಮನಸ್ಸಿಗೆ ಆದ ನೋವನ್ನು ಈ ಮೂಲಕ ತೋರ್ಪಡಿಸಿದ್ದೇವೆ. ಹಿಂದೂ ಸಮಾಜಕ್ಕಾದ ನೋವನ್ನು ಈ ರೀತಿಯಲ್ಲಿ ತೋಡಿಕೊಂಡಿದ್ದೇವೆ ಎಂದು ವಕ್ತಾರ ಜಯರಾಮ ಅಂಬೇಕಲ್ ಹೇಳಿದರು.

    ಪರಧರ್ಮ ದ್ವೇಷದ ಪರಮಾವಧಿ: ಶ್ರೀರಾಮ ಸೇನೆಯ ಪ್ರತಿಭಟನೆಯ ವಿರುದ್ಧ ಗರಂ ಆಗಿ ಪೇಜಾವರ ಶ್ರೀ ಪ್ರತಿಕ್ರಿಯಿಸಿ, ಇದು ಪರಧರ್ಮ ದ್ವೇಷದ ಪರಮಾವಧಿ ಎಂದು ಚಾಟಿ ಬೀಸಿದರು. ಮುತಾಲಿಕ್ ನೀಡಿದ ಹಿಂಸಾತ್ಮಕ- ರಕ್ತಪಾತದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ನನ್ನ ಧೋರಣೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇಫ್ತಾರ್ ಮಾಡಿದ್ದರಿಂದ ಧರ್ಮಕ್ಕೆ ಏನು ನಷ್ಟವಾಯ್ತು, ಏನು ಹಾನಿಯಾಯ್ತು..? ಎಂದು ಪ್ರಶ್ನೆ ಹಾಕಿದ್ದಾರೆ. ಇದನ್ನೆಲ್ಲ ವಿರೋಧಿಸುವವರಿಗೆ ಶಾಸ್ತ್ರವೇ ಗೊತ್ತಿಲ್ಲ. ಪ್ರತಿಭಟನೆಗಳಿಂದ ನಾನು ವಿಚಲಿತನಾಗಿಲ್ಲ ಎಂದರು.

    ಇದನ್ನೂ ಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಕೃಷ್ಣಮಠವನ್ನು ಶುದ್ಧೀಕರಿಸುವ ಪ್ರಶ್ನೆಯೇ ಇಲ್ಲ ಎಂದ ಪೇಜಾವರ, ದೇವರ ಪ್ರಾರ್ಥನೆ ಮಾಡಿದರೆ ಅದು ತಪ್ಪಾ..? ಅದಕ್ಕೆ ಶುದ್ಧ ಮಾಡಬೇಕಾ. ಧರ್ಮಶಾಸ್ತ್ರಗಳ ವಿರೋಧ ನಾನು ಮಾಡಿಲ್ಲ. ಮಠವನ್ನು ಶುದ್ಧ ಮಾಡಲು ಕಾರಣ ಬೇಕಲ್ಲ. ಹಿಂದೂ ಧರ್ಮದಲ್ಲಿ ದ್ವೈತ- ಅದ್ವೈತ- ವಿಶಿಷ್ಟಾದ್ವೈತದ ಸಹಬಾಳ್ವೆ ಇದ್ದಂತೆ, ಬೇರೆ ಧರ್ಮಗಳ ನಡುವೆ ಸಹಿಷ್ಣುತೆ ಇದ್ದರೇನು ತಪ್ಪು ಎಂದು ಪ್ರಶ್ನಸಿದ್ದಾರೆ. ಧೈರ್ಯ ಇದ್ದರೆ ನನ್ನಲ್ಲಿ ಈ ಬಗ್ಗೆ ಚರ್ಚೆ ಮಾಡಲು ಬನ್ನಿ ಎಂದು ಪೇಜಾವರಶ್ರೀ ಮುತಾಲಿಕ್ ಗೆ ಹಾಗೂ ಶ್ರೀರಾಮ ಸೇನೆಗೆ ಶ್ರೀಗಳು ಬಹಿರಂಗ ಸವಾಲು ಹಾಕಿದ್ದಾರೆ.

    ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಶ್ರೀಗಳ ಮಾತಿಗೆ ದನಿಗೂಡಿಸಿ, ರಕ್ತಪಾತ ಮಾಡುವುದಾದರೆ ಮೊದಲು ನಮ್ಮ ಮೇಲೆ ಮಾಡಲಿ. ನಾವು 2 ಸಾವಿರ ಮಂದಿ ಮುಸ್ಲಿಮರು ಮಠದ ಪರ ಇದ್ದೇವೆ. ವಿಶ್ವಮಟ್ಟದಲ್ಲಿ ಉಡುಪಿಗೆ ಪ್ರಖ್ಯಾತಿ ಇದೆ. ರಕ್ತಪಾತ ಎಂದು ಮುತಾಲಿಕ್ ಯಾರ ವಿರುದ್ಧ ಮಾತನಾಡುತ್ತಿದ್ದಾರೆ..? ಉಳ್ಳಾಲದ ದರ್ಗಾದ ಗರ್ಭಗುಡಿಯ ಒಳಗೆ ಬರುವಂತೆ ಪ್ರಮೋದ್ ಮುತಾಲಿಕ್‍ಗೆ ಸವಾಲು ಹಾಕಿದ್ರು.

  • ಶ್ರೀರಾಮಸೇನೆಯಿಂದ ಪ್ರತಿಭಟನೆಗೆ ಡೇಟ್ ಫಿಕ್ಸ್, ಕೃಷ್ಣ ಮಠಕ್ಕೆ ರಕ್ಷಣೆ ನೀಡ್ತೀವಿ ಎಂದ ಯುವ ಕಾಂಗ್ರೆಸ್

    ಶ್ರೀರಾಮಸೇನೆಯಿಂದ ಪ್ರತಿಭಟನೆಗೆ ಡೇಟ್ ಫಿಕ್ಸ್, ಕೃಷ್ಣ ಮಠಕ್ಕೆ ರಕ್ಷಣೆ ನೀಡ್ತೀವಿ ಎಂದ ಯುವ ಕಾಂಗ್ರೆಸ್

    ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮ ಸೇನೆ ಈಗಾಗಲೇ ಡೇಟ್ ಫಿಕ್ಸ್ ಮಾಡಿದೆ. ಈ ನಡುವೆ, ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾದ್ರೆ ಮಠಕ್ಕೆ ಭದ್ರತೆ ಕೊಡಲು ಸಿದ್ಧ ಅಂತಾ ಯುವ ಕಾಂಗ್ರೆಸ್ ಹೇಳಿದೆ. ಈ ಮೂಲಕ ಘಟನೆಗೆ ರಾಜಕೀಯ ಬಣ್ಣ ಬಂದಿದೆ.

    ಉಡುಪಿ ಶ್ರೀಕೃಷ್ಣಮಠದಲ್ಲಿ ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಇಫ್ತಾರ್ ಸಭೆ ವಿರುದ್ಧ ಶ್ರೀರಾಮ ಸೇನೆ ತಗಾದೆ ಎತ್ತಿತ್ತು. ಪ್ರಮೋದ್ ಮುತಾಲಿಕ್ ಸ್ವಾಮೀಜಿಯವರನ್ನು ಭೇಟಿಯಾಗಿ ಈ ಬಗ್ಗೆ ಸ್ಪಷ್ಟನೆ ಕೇಳಿದ್ರು. ವಿಶ್ವೇಶತೀರ್ಥರ ಉತ್ತರದಿಂದ ಸಂತುಷ್ಟರಾಗದ ಮುತಾಲಿಕ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆ ನಡೆಸದಂತೆ ಹಿಂದೂ ಮುಖಂಡರು ಮುತಾಲಿಕ್ ಗೆ ಒತ್ತಡ ಹೇರಿದ್ದರು. ಆದ್ರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವ ಪ್ರಮೇಯವೇ ಇಲ್ಲ ಅಂತ ಶ್ರೀರಾಮಸೇನೆ ಸ್ಪಷ್ಟಪಡಿಸಿದೆ.

    ಇದನ್ನೂಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಶ್ರೀರಾಮ ಸೇನೆ ಜಿಲ್ಲಾ ವಕ್ತಾರ ಜಯರಾಂ ಮಾತನಾಡಿ, ಪ್ರತಿಭಟನೆಯಿಂದ ನಾವು ಹಿಂದೆ ಸರಿಯಲ್ಲ. ಪ್ರತಿಭಟನೆ ನಡೆಸಿಯೇ ಸಿದ್ಧ ಎಂದಿದ್ದಾರೆ. ನಾವು ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಯುವ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿವೆ. ಪೇಜಾವರ ಶ್ರೀಗಳು ನಮ್ಮ ಗುರುಗಳು- ನಾವೆಲ್ಲಾ ಅವರ ಶಿಷ್ಯರು. ನಾವು ಯಾವತ್ತೂ ಸ್ವಾಮೀಜಿಗಳ ಬೆಂಬಲಕ್ಕೆ ಇದ್ದೇವೆ. ಇಫ್ತಾರ್ ಕೂಟ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ. ನಮ್ಮ ವಿರೋಧವೇನಿದ್ದರೂ ಕೃಷ್ಣಮಠದಲ್ಲಿ ನಡೆದ ನಮಾಜ್ ವಿಚಾರಕ್ಕೆ ಮಾತ್ರ ಎಂದರು. ಜುಲೈ 2ರಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡುತ್ತೆವೆ. ಪ್ರತಿಭಟನೆ ಶಾಂತ ರೀತಿಯಲ್ಲಿ ನಡೆಯಲಿದೆ ಎಂದರು.

    ಮಠಕ್ಕೆ ಭದ್ರತೆ: ಜುಲೈ 2ರಂದು ರಾಜ್ಯದಾದ್ಯಂತ ಶಾಂತ ರೀತಿಯ ಪ್ರತಿಭಟನೆ ನಡೆಸಲು ಶ್ರೀರಾಮ ಸೇನೆ ನಿರ್ಧರಿಸಿದೆ. ಈ ನಡುವೆ ಶ್ರೀರಾಮ ಸೇನೆ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಗುಲ್ಲೆದ್ದಿದೆ. ಮಠಕ್ಕೆ ಮುತ್ತಿಗೆ ಹಾಕುವುದಾದರೆ ಯುವ ಕಾಂಗ್ರೆಸ್ ಮಠಕ್ಕೆ ಭದ್ರತೆ ನೀಡುವುದಾಗಿ ಹೇಳಿದೆ. ಶ್ರೀರಾಮಸೇನೆಯ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೃಷ್ಣಮಠವನ್ನು ಶ್ರೀರಾಮ ಸೇನೆ ಗುತ್ತಿಗೆಗೆ ಪಡೆದಿಲ್ಲ. ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದೇವೆ, ಅವರಿಗೆ ಧೈರ್ಯ ಹೇಳಿದ್ದೇವೆ. ಶ್ರೀರಾಮಸೇನೆ ಮುತ್ತಿಗೆ ಹಾಕಿದ್ರೆ ಮಠದ ಸುತ್ತಲೂ ಮಾನವ ಸರಪಳಿ ರಚಿಸಿ ಭದ್ರತೆ ಕೊಡುವುದಾಗಿ ಹೇಳಿದರು.

    ಇದನ್ನೂ ಓದಿ: ನವೆಂಬರ್‍ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

    ಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಭಾರೀ ವಿವಾದ ಎಬ್ಬಿಸಿದ ಬೆನ್ನಲ್ಲೇ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಸೌಹಾರ್ದ ಈದ್ ಆಚರಣೆ ನಡೆದಿದೆ. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ, ಶೀರೂರು ಲಕ್ಷ್ಮೀವರಶ್ರೀ, ಮುಸ್ಲೀಂ ಧರ್ಮಗುರು ಮೌಲಾನ ಅಬ್ದುಲ್ ರಹೀಮಾನ್ ರಜ್ವೀ ಕಲ್ಕಟ್ ಜೊತೆ ಸೇರಿ ಈದ್ ಸೌಹಾರ್ದ ಕೂಟ ಆಯೋಜಿಸಿದ್ದಾರೆ.

    ಇದನ್ನೂ ಓದಿ: ರಾಮಮಂದಿರಕ್ಕೆ ಉಡುಪಿಯಲ್ಲಿ ಮುಹೂರ್ತ!?- ಪೇಜಾವರಶ್ರೀ ಹೇಳಿದ್ದಿಷ್ಟು

  • ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

    – ಮುಸ್ಲಿಮರಿಗೆ ಇಫ್ತಾರ್ ಕೂಟ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸದಾ ಶ್ರೀಕೃಷ್ಣನ ಪೂಜೆ-ಭಜನೆ ನಡೆಯುವ ಉಡುಪಿ ಮಠದಲ್ಲಿ ಶನಿವಾರ ರಂಜಾನ್ ಹಬ್ಬದ ಕಾರ್ಯಕ್ರಮ ನಡೆಯಿತು. ಒಂದು ತಿಂಗಳು ಉಪವಾಸ ಮಾಡಿದ್ದ ಮುಸ್ಲಿಮರು ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳಿಂದ ಕರ್ಜೂರ ಪಡೆದು ತಿಂಗಳ ಉಪವಾಸಕ್ಕೆ ತೆರೆ ಎಳೆದರು.

    ಉಡುಪಿ ಶ್ರೀಕೃಷ್ಣ ಮಠದಲ್ಲಿ 800 ವರ್ಷಗಳಿಂದ ನಿರಂತರ ಕೃಷ್ಣನ ಪೂಜೆ-ಭಜನೆ ಆರಾಧನೆ ನಡೆಯುತ್ತಾನೆ ಬಂದಿದೆ. ಆದ್ರೆ ಇಂದು ಕೃಷ್ಣನ ಪೂಜೆಯ ಜೊತೆ ಅಲ್ಲಾಹ್‍ನ ಆರಾಧನೆಯೂ ನಡೆಯಿತು. ರಂಜಾನ್ ತಿಂಗಳ ಉಪವಾಸ ಮುಗಿಸಿದ ಮುಸ್ಲಿಮರು ಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಕೊನೆಯ ನಮಾಜ್ ಮಾಡಿ ಉಪವಾಸ ಅಂತ್ಯ ಮಾಡಿದರು. ಕೃಷ್ಣ ಮಠದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಪೇಜಾವರಶ್ರೀ ಆಯೋಜನೆ ಮಾಡಿದ್ದರು.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಹಿಂದೂ- ಮುಸಲ್ಮಾನರು ಸೌಹಾರ್ದವಾಗಿ ಬಾಳಬೇಕು, ಬದುಕಬೇಕು. ಆದ್ರೆ ಇತ್ತೀಚೆಗೆ ಹಿಂಸೆಯ ಮಾರ್ಗದಲ್ಲಿ ಸಮಾಜ ನಡೆಯುತ್ತಿದೆ. ಹೀಗಾಗಿ ಸೌಹಾರ್ದದ ಕಾರ್ಯಕ್ರಮವನ್ನು ಮಠದಲ್ಲಿ ಇಟ್ಟುಕೊಳ್ಳಲಾಗಿದೆ. ಮಂಗಳೂರು- ಕಾಸರಗೋಡು- ಭಟ್ಕಳದಲ್ಲಿ ನಡೆದ ಇಸ್ಲಾಂ ಸಮ್ಮೇಳನಗಳಲ್ಲಿ ಕರೆಸಿ ನನ್ನನ್ನು ಆತ್ಮೀಯತೆಯಿಂದ ನೋಡಿಕೊಂಡಿದ್ದಾರೆ. ಪರ್ಯಾಯ ಸಂದರ್ಭ ಹೊರೆಕಾಣಿಕೆ ನೀಡಿದ್ದರು. ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ಬರುತ್ತೇವೆ ಎಂದಾಗ ಅದಕ್ಕೆ ವಿರುದ್ಧ ನಿಂತವರಲ್ಲಿ ಮುಸ್ಲಿಮರೂ ಇದ್ದರು. ಹಿಂದೂಗಳಿಗೆ ಹಿಂಸೆಯಾದಾಗ ಮುಸ್ಲಿಮರು- ಮುಸ್ಲಿಮರಿಗೆ ಸಮಸ್ಯೆಯಾದಾಗ ಹಿಂದೂಗಳು ಸಹಾಯಕ್ಕೆ ಮುಂದಾಗಬೇಕು ಎಂದು ಕರೆ ನಿಡಿದರು. ಭಾರತ ಶಾಂತಿಯ- ಸೌಹಾರ್ದತೆಯ ತಾಣವಾಗಬೇಕು. ಕರಾವಳಿಯಲ್ಲಿ ಶಾಂತಿ ಬೆಳೆಯುವ-ಬೆಳೆಸುವ ಅಗತ್ಯವಿದೆ. ನಮಃ- ನಮಾಜ್ ಒಂದೇ ಎಂದು ಶ್ರೀಗಳು ಹೇಳಿದರು.

    ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉಪವಾಸವಿದ್ದ ಮುಸ್ಲಿಮರಿಗೆ ಕರ್ಜೂರ ನೀಡಿ ಉಪವಾಸ ಬಿಡಿಸಿದರು. ನಂತರ ಸ್ವತಃ ಸ್ವಾಮೀಜಿ ಫಲಾಹಾರವನ್ನ ಬಡಿಸಿದರು. ಅನ್ನಬ್ರಹ್ಮ ಛತ್ರದಲ್ಲಿ ಹಣ್ನು ಹಂಪಲು-ಸಮೋಸ ನೀಡಿ ಉಪವಾಸ ಬಿಡುವ ಕ್ರಮ ನಡೆಯಿತು. ಇದಾಗಿ ಎಲ್ಲಾ ಮುಸ್ಲಿಮರಿಗೆ ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಛತ್ರದಲ್ಲೇ ಸಾಮೂಹಿಕ ನಮಾಜ್ ಮಾಡಿದ ಮುಸ್ಲಿಂ ಧರ್ಮೀಯರಿಗೆ ಆದೇಶ ಬಂದಿತ್ತು. ಕಾರವಾರ ಜಿಲ್ಲೆಯ ಭಟ್ಕಳದಲ್ಲಿ ಚಂದ್ರ ಕಾಣಿಸಿಕೊಂಡ ಕಾರಣ ನಾಳೆಯೇ ಈದುಲ್ ಫಿತ್ರ್ ಎಂದು ಖಾಜಿಯವರು ಘೋಷಿಸಿದ್ದಾರೆ. ಈ ಎರಡು ಸಂತಸಗಳು ಒಟ್ಟೊಟ್ಟಿಗೆ ಆದವು.

    ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಮಾತನಾಡಿ, ಪೇಜಾವರಶ್ರೀ ಇಡೀ ವಿಶ್ವಕ್ಕೆ ಸ್ವಾಮೀಜಿ, ಇದು ಉಡುಪಿ ಕೃಷ್ಣಮಠದಿಂದ ವಿಶ್ವಕ್ಕೆ ಸಂದೇಶ ರವಾನೆಯಾಗಿದೆ. ಇಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಇಫ್ತಾರ್‍ಗಳಿಗೆ ರಾಜಕೀಯ ಬಣ್ಣ ಬರುತ್ತಿದೆ. ಆದ್ರೆ ಮಠದಲ್ಲಿ ನಡೆದ ಇಫ್ತಾರ್ ವಿಭಿನ್ನ. ಮಾನವ ಜನಾಂಗ ಬೆಸೆಯುವ ಕೆಲಸ ಉಡುಪಿ ಮಠದಲ್ಲಿ ಆಗಿದೆ. ಸ್ವಾಮೀಜಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ದೇಶ ಮೂಲೆ ಮೂಲೆಗೆ ಇಂತಹ ಶಾಂತಿ ಸಂದೇಶ ತಲುಪಬೇಕು. ರಂಜಾನ್ ತಿಂಗಳ ಉಪವಾಸದ ಕೊನೆಯ ಉಪವಾಸವನ್ನು ಮಠದಲ್ಲಿ ಬಿಟ್ಟಿದ್ದೇವೆ ಎಂಬೂದು ದೈವೇಚ್ಛೆ. ಸಮಸ್ತ ಮುಸಲ್ಮಾನ ಸಮುದಾಯದಿಂದ ಪೇಜಾವರ ಮಠಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

    ದಲಿತ ಕೇರಿಗೆ ಭೇಟಿ ಕೊಡುವುದನ್ನು ಆರಂಭಿಸಿದ ಪೇಜಾವರಶ್ರೀಗೆ ತಮ್ಮದೇ ಸಮಾಜದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ರೆ ಹಿರಿಯ ಗುರುಗಳು ಅಂತ ಯಾರೂ ಬಹಿರಂಗವಾಗಿ ಈ ಬಗ್ಗೆ ಚಕಾರ ಎತ್ತಲ್ಲ. ಇದೀಗ ಪೇಜಾವರಶ್ರೀಗಳು ಕೃಷ್ಣಮಠದಲ್ಲೇ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ. ಈ ಬಗ್ಗೆ ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಏನೆಲ್ಲಾ ಅಭಿಪ್ರಾಯ ಬರುತ್ತೋ,..!? ಪ್ರಗತಿಪರರು ಈ ಬಗ್ಗೆ ಏನೆಂದು ಟೀಕಿಸುತ್ತಾರೋ ಎಂಬ ಕುತೂಹಲವಿದೆ.