Tag: iftar

  • ಮುಸ್ಲಿಂ ಯುವತಿಯನ್ನ ಪ್ರೀತಿಸಿದ್ದಕ್ಕೆ ಕೊಲೆಯಾಗಿದ್ದ ಯುವಕನ ಮನೆಯಲ್ಲಿ ಇಫ್ತಾರ್ ಕೂಟ

    ಮುಸ್ಲಿಂ ಯುವತಿಯನ್ನ ಪ್ರೀತಿಸಿದ್ದಕ್ಕೆ ಕೊಲೆಯಾಗಿದ್ದ ಯುವಕನ ಮನೆಯಲ್ಲಿ ಇಫ್ತಾರ್ ಕೂಟ

    ನವದೆಹಲಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆಯಾಗಿದ್ದ ಫೋಟೋಗ್ರಾಫರ್ ಅಂಕಿತ್ ಸಕ್ಸೆನಾ ಮನೆಯಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.

    ಫೆಬ್ರವರಿ 1ರಂದು ಪಶ್ಚಿಮ ದೆಹಲಿಯಲ್ಲಿ ಅಂಕಿತ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಅಂಕಿತ್ ತನ್ನದೇ ನಗರದ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು.

    ಈ ಹಿನ್ನೆಲೆಯಲ್ಲಿ ಅಂಕಿತ್ ತಂದೆ ಯಶ್‍ಪಾಲ್ ಸಕ್ಸೆನಾ, ರಂಜಾನ್ ತಿಂಗಳಲ್ಲಿ ಉಪವಾಸವಿರುವ ಮುಸ್ಲಿಂ ಸಮುದಾಯದ ಜನರಿಗೆ ಇಫ್ತಾರ್ ಆಯೋಜನೆ ಮಾಡುವ ಮೂಲಕ ಐಕ್ಯತೆಯಿಂದ ಕೂಡಿ ಬಾಳೋಣ ಎಂಬ ತತ್ವವನ್ನು ಸಾರಿದ್ದಾರೆ. ಇದನ್ನೂ ಓದಿ: ಹೌದು, ನನ್ನ ಮಗನ ಕೊಲೆಯಾಗಿದೆ, ಅದನ್ನ ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ: ಅಂಕಿತ್ ತಂದೆ

    ಇಫ್ತಾರ್ ನಡೆದ ಮರುದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್‍ಪಾಲ್, ನನ್ನ ಮಗನ ಕೊಲೆ ಕೇವಲ ದ್ವೇಷದಿಂದ ನಡೆದಿತ್ತು. ನನ್ನ ಮಗನ ಸಾವಿನ ಮೊದಲು ನಾನು ಯುವತಿಯ ಪೋಷಕರನ್ನು ಭೇಟಿಯಾಗಿ ಸಮಾಧಾನದಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಅಂತಾ ಮನವಿ ಮಾಡಿಕೊಂಡಿದ್ದೆ. ಆದ್ರೆ ಆ ವೇಳೆ ಯುವತಿಯ ಮನೆಯವರು ತುಂಬಾ ಕೋಪದಲ್ಲಿದ್ದರಿಂದ ನನ್ನ ಮಾತನ್ನು ಅವರು ಕೇಳಿಸಿಕೊಳ್ಳಲಿಲ್ಲ ಎಂದು ದುಃಖ ವ್ಯಕ್ತಪಡಿಸಿದರು.

    ಯಶ್‍ಪಾಲ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಾಕಷ್ಟು ಮುಸ್ಲಿಂ ಜನರು ಭಾಗಿಯಾಗಿದ್ದರು. ಒಂದು ರೀತಿಯಲ್ಲಿ ಯಶ್‍ಪಾಲ್‍ರ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಎರಡೂ ಸಮುದಾಯದ ಜನರು ಪರಸ್ಪರ ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಕೋರಿದ್ರು.

    ನನ್ನ ಪ್ರಕಾರ ಇಂದಿನ ಯುವ ಸಮುದಾಯ ಕೋಪದಲ್ಲಿ ಅಹಿತಕರ ಘಟನೆಗಳಲ್ಲಿ ಭಾಗಿಯಗ್ತಾರೆ. ಹಾಗಾಗಿ ಎಲ್ಲ ಯುವಕರು ಎದುರಾಗುವ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ನಾವೆಲ್ಲರೂ ಒಂದೇ ಸಮಾಜದಲ್ಲಿ ಬದುಕುತ್ತಿದ್ದು, ಪರಸ್ಪರ ಹೊಂದಾಣಿಕೆ, ಐಕ್ಯತೆ, ಒಗ್ಗಟ್ಟಿನಿಂದ ಬಾಳಬೇಕು ಎಂಬುವುದು ನನ್ನ ಆಶಯವಾಗಿದೆ ಅಂತಾ ತಿಳಿಸಿದ್ರು.

  • Exclusive: ಹಿಂದೂಗಳಿಗೆ ಮೋಸ ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

    Exclusive: ಹಿಂದೂಗಳಿಗೆ ಮೋಸ ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

    ಸುನೀಲ್ ಜಿಎಸ್
    ಬೆಂಗಳೂರು: ಹನುಮ ಜಯಂತಿ ಆಚರಣೆ ಮಾಡುತ್ತಿದ್ದವರಿಗೆ ಲಾಠಿ ಏಟು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂಗಳಿಗೆ ಮೋಸ ಆಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

    ಹೌದು. ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿಗಳ ಸಚಿವಾಲಯ ನೀಡಿದ ಉತ್ತರದಿಂದಾಗಿ ಆರೋಪ ಕೇಳಿ ಬಂದಿದೆ. ಆರ್ ಟಿಐ ಕಾರ್ಯಕರ್ತ ಭಾಸ್ಕರನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಯಾವ ಧರ್ಮದವರಿಗೆ 2017 ಅಕ್ಟೋಬರ್ 31 ರವರೆಗೆ ಎಷ್ಟು ಬಾರಿ ಭೋಜನ/ಉಪಹಾರ ಕೂಟವನ್ನು ಆಯೋಜಿಸಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಕೇವಲ ಮುಸ್ಲಿಮರಿಗೆ ಹೊರತು ಪಡಿಸಿ ಬೇರೆ ಯಾವುದೇ ಧರ್ಮದವರಿಗೆ ಸಿದ್ದರಾಮಯ್ಯ ಭೋಜನ ಕೂಟವನ್ನು ಆಯೋಜಿಸಿಲ್ಲ ಎಂದು ಸಚಿವಾಲಯ ಉತ್ತರ ನೀಡಿದೆ.

    ಸಚಿವಾಲಯದ ಉತ್ತರ ಇಲ್ಲಿದೆ:
    ಮುಖ್ಯಮಂತ್ರಿಯಾಗಿ 2013 ಮೇ 13ರಂದು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೆ ಸಿದ್ದರಾಮಯ್ಯನವರು ಪವಿತ್ರ ರಂಜನ್ ಮಾಸದ ಸಂದರ್ಭದಲ್ಲಿ ಇಫ್ತಿಯಾರ್ ಭೋಜನ ಕೂಟವನ್ನು ಅರಮನೆ ಮೈದಾನದಲ್ಲಿ ಮುಸ್ಲಿಮ್ ಬಾಂಧವರಿಗೆ ಸ್ವಂತ ಖರ್ಚಿನಲ್ಲಿ ಆಯೋಜಿಸಿದ್ದರು. ಇದನ್ನು ಹೊರತು ಪಡಿಸಿ ಮುಸ್ಲಿಮ್ ಸಮುದಾಯದ ಇತರೇ ಹಬ್ಬಗಳ ಸಂದರ್ಭದಲ್ಲಿ ಸರ್ಕಾರಿ ಅಥವಾ ಸ್ವಂತ ವೆಚ್ಚದಲ್ಲಿ ಯಾವುದೇ ಭೋಜನ ಕೂಟವನ್ನು ಆಯೋಜಿಸಿಲ್ಲ. ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯ ಮುಸಲ್ಮಾನ ಬಂಧುಗಳು, ರಾಜ್ಯ ಸರ್ಕಾರ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸ್ವಾಮಿ ವಿವೇಕಾನಂದ ಜಯಂತಿ, ಬಸವ ಜಯಂತಿ ಇನ್ನಿತರ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯವರು ಸರ್ಕಾರದ ವತಿಯಿಂದ ಮಾಡಿರುತ್ತಾರೆ. ಇಲಾಖೆಯ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಭೋಜನ/ ಲಘು ಉಪಹಾರವನ್ನು ಏರ್ಪಾಡು ಮಾಡಿಲ್ಲ.

    ಬೇರೆಯವರಿಗೆ ಯಾಕಿಲ್ಲ?:
    ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ. ಇಲ್ಲಿ ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು, ಕ್ರೈಸ್ತರು, ಜೈನರು, ಬೌದ್ಧರು ಹಲವು ಧರ್ಮದವರು ನೆಲೆಸಿದ್ದು ಎಲ್ಲರೂ ತೆರಿಗೆಯನ್ನು ಪಾವತಿಸುತ್ತಾರೆ. ಇವರಿಗೆಲ್ಲ ನೀಡದ ವಿಶೇಷ ಉಪಹಾರ ಕೇವಲ ಮುಸ್ಲಿಮರಿಗೆ ಮಾತ್ರ ನೀಡುತ್ತಿರುವುದು ಯಾಕೆ? ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯೇ? ಭೋಜನ ಕೂಟವನ್ನು ಆಯೋಜಿಸಿದರೆ ಯಾವ ಧರ್ಮದವರಿಗೆ ತಾರತಮ್ಯ ಮಾಡದೇ ಆಯೋಜಿಸಬೇಕು. ಹಿಂದೂಗಳು ಗಣೇಶ ಚತುರ್ಥಿ, ದೀಪಾವಳಿ ಆಚರಿಸುತ್ತಾರೆ. ಕ್ರೈಸ್ತರು ಕ್ರಿಸ್‍ಮಸ್ ಆಚರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಉಪಹಾರ ಕೂಟವನ್ನು ಆಯೋಜಿಸದ ಸಿಎಂ ಸಿದ್ದರಾಮಯ್ಯ ಮುಸ್ಲಿಮರ ವೋಟ್ ಬ್ಯಾಂಕಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಆರ್ ಟಿಐ ಕಾರ್ಯಕರ್ತ ಭಾಸ್ಕರನ್ ಪ್ರಶ್ನೆ ಮಾಡಿದ್ದಾರೆ.

    ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದ್ದಕ್ಕೆ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಈಗ ಹನುಮ ಜಯಂತಿ, ದತ್ತ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಸರ್ಕಾರ ನಿರ್ಬಂಧ ಹೇರಿದ್ದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಹನುಮ ಜಯಂತಿ ವೇಳೆ ಪಾಲ್ಗೊಂಡಿದ್ದವರನ್ನು ಸರ್ಕಾರ ಕ್ಷಣ ಮಾತ್ರದಲ್ಲೇ ಬಂಧಿಸುತ್ತದೆ. ಹಿಂದೂ ಮುಖಂಡರ ಬಂಧನಕ್ಕೆ ಕ್ಷಣಾರ್ಧದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆದರೆ ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಹೇಳಿಕೆ ನೀಡಿದ ಮೌಲ್ವಿಯನ್ನು ಕೂಡಲೇ ಬಂಧಿಸುವುದಿಲ್ಲ ಯಾಕೆ? ಮತಬ್ಯಾಂಕ್‍ಗಾಗಿ ಹಿಂದುಗಳ ಕಡೆಗಣನೆ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    https://youtu.be/HP6PMNpDDbg

  • ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು

    ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು

    ಉಡುಪಿ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ 75ನೇ ಸ್ಮರಣಾ ಕಾರ್ಯಕ್ರಮದಲ್ಲಿ ಸ್ವಾಮೀ ವಿವೇಕಾನಂದರ ಹಿಂದೂ ಧರ್ಮದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ನನ್ನ ಧಿಕ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು.

    ಕರಾವಳಿಗರು ಬುದ್ಧಿವಂತರೆಂಬ ಪ್ರತೀತಿ ಇತ್ತು. ಆದರೆ ಇಂದು ಕೋಮುವಾದಿ- ತಾಲಿಬಾನಿಗಳೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಧರ್ಮಗುರುಗಳು ಮತ್ತು ಧರ್ಮಪೀಠಗಳು ಕೋಮುವಾದಿಗಳ ರಿಕ್ರೂಟ್‍ಮೆಂಟ್ ಸೆಂಟರ್ ಆಗುತ್ತಿವೆ. ಧರ್ಮಗುರುಗಳು ರಾಜಕೀಯ ಪಕ್ಷ ಸೇರಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಪೇಜಾವರಶ್ರೀಗಳು ಉಡುಪಿ ಕೃಷ್ಣಮಠದಲ್ಲಿ ನಡೆಸಿದ ಇಫ್ತಾರ್ ಕೂಟಕ್ಕೆ ಪರೋಕ್ಷ ಟಾಂಗ್ ನೀಡಿದರು.

    ಇಫ್ತರ್ ಕೂಟ ಮಾಡಿದಾಗ ನಮಗೆ ರೋಮಾಂಚನ ಆಯ್ತು. ಆದ್ರೆ ಮರುದಿನ ಉಮಾಭಾರತಿ ಬಂದು ಆಶೀರ್ವಾದ ಪಡೆಯುತ್ತಾರೆ. ರಾಮಮಂದಿರ ನಿರ್ಮಾಣದ ಬಗ್ಗೆಯೂ ಅಲ್ಲೇ ಮಾತುಕತೆಯಾಯ್ತು. ಮಾದಿಗರ ಸ್ವಾಮೀಜಿಗೆ ಪೇಜಾವರಶ್ರೀಗಳ ಸಂಪರ್ಕವಾದ ಮೇಲೆ ಅವರೂ ಬಿಜೆಪಿ ಸ್ವಾಮೀಜಿಯಾದರು ಎಂದರು.

    ನಾನು ಕಾಂಗ್ರೆಸ್ ಪಕ್ಷ ಸೇರಿಲ್ಲ. ಮುಂದೆ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಸಿದ್ಧಾಂತ ನನಗೆ ಒಪ್ಪಿಗೆ ಇದೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಂಘ ಪರಿವಾರದ ಯಾವ ನರಪಿಳ್ಳೆಯೂ ಇರಲಿಲ್ಲ. ವಾಜಪೇಯಿ ಈ ಬಗ್ಗೆ ಕ್ಷಮಾಪಣಾ ಪತ್ರ ಬರೆದಿದ್ದಾರೆ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಬ್ರಿಟೀಷರ ಜೊತೆ ಸೇರಿಕೊಳ್ಳಲು ತಯಾರಾಗಿದ್ದರು. ಮುಖವಾಡದ ದೇಶದ್ರೋಹಿಗಳನ್ನು ಬೆತ್ತಲು ಮಾಡಬೇಕು ಎಂದು ಅಮೀನ್ ಮಟ್ಟು ಕರೆ ನೀಡಿದರು.

    ಬಿಜೆಪಿ ಅಧಿಕಾರಕ್ಕೆ ಬರಲು ರಾಜೀವ್ ಗಾಂಧಿ ಕಾರಣ. 18ನೇ ವಯಸ್ಸಿಗೆ ಮತ ಚಲಾಯಿಸುವ ಹಕ್ಕು ನೀಡಿದರು. 21 ವಯಸ್ಸಿನ ಮಿತಿ ಇದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಪ್ರಧಾನಿ ಮೋದಿ ದೊಡ್ಡ ಜಾದೂಗಾರ. ಮೋಸ ಮಾಡುತ್ತಾರೆಂದು ಗೊತ್ತಿದ್ದರೂ ನಮಗೆ ಏನೂ ಮಾಡಲಾಗುತ್ತಿಲ್ಲ ಎಂದು ಹರಿಹಾಯ್ದರು.

     

  • ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್

    ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್

    ಬೆಂಗಳೂರು: ಉಡುಪಿ ಮಠದಲ್ಲಿ ನಡೆದ ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಫೇಸ್‍ಬುಕ್‍ನಲ್ಲಿ ವಿವಾದಾತ್ಮಕವಾಗಿ ಬರಹವನ್ನು ಪೋಸ್ಟ್ ಮಾಡಿದ್ದಾರೆ.

    ದಲಿತರು ಉಡುಪಿ ಚಲೋ ಮಾಡಿದ್ದ ಸಂದರ್ಭದಲ್ಲಿ ಮಠದ ಶುದ್ಧೀಕರಣಕ್ಕೆ ಅನುಮತಿ ನೀಡಿದ್ದ ಪೇಜಾವರ ಶ್ರೀಗಳು ಇದೀಗ ಮಠದಲ್ಲಿ ನಡೆದ ಇಫ್ತಾರ್ ಕೂಟವನ್ನು ಬೆಂಬಲಿಸುತ್ತಿದ್ದಾರೆ. ಹಾಗಾದರೆ ದಲಿತರು ಮುಸ್ಲಿಂಮರಿಗಿಂತಲೂ ಕೀಳಾದರೆ ಎಂದು ಅಮೀನ್ ಮಟ್ಟು ಪ್ರಶ್ನಿಸಿದ್ದಾರೆ.

    ಈ ಎಫ್‍ಬಿ ಪೋಸ್ಟ್ ಗೆ ಇಫ್ತಾರ್ ಕೂಟದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ ರಹೀಂ ಉಚ್ಚಿಲ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಅಮೀನ್ ಮಟ್ಟು ಯಾಕೆ ಈ ರೀತಿ ಹೇಳ್ತಿದ್ದಾರೆ ಅಂತ ನನಗೆ ಅರ್ಥವಾಗ್ತಿಲ್ಲ. ಇಲ್ಲಿ ದಲಿತರು ಮುಸ್ಲಿಮರು ಎಂಬ ಪ್ರಶ್ನೆ ಇಲ್ಲ. ಈ ಹಿಂದೆ ದಲಿತ ಸಮುದಾಯದ ಕೆಲವು ಮಂದಿ ಅಲ್ಲಿಗೆ ಹೋಗಿದ್ದು ಸ್ವಾಮೀಜಿ ವಿರುದ್ಧವಾಗಿ, ಮಠದ ವಿರುದ್ಧವಾಗಿ. ಮಠದ ವಿರುದ್ಧ ಹೋರಾಟ ಮಾಡಲು. ಆದ್ರೆ ನಾವು ಮುಸ್ಲಿಮರು ಹೋಗಿದ್ದು ಸ್ವಾಮೀಜಿಯ ಆಹ್ವಾನದ ಮೇಲೆ. ಆದ್ದರಿಂದ ಮಠದ ವಿರುದ್ಧ ಹೋದವರ ಮನಸ್ಸು ಶುದ್ಧಿ ಮಾಡುವ ಕೆಲಸ ಆಗಿದೆ. ಅದು ಕೂಡ ಮಠದಿಂದ ಆಗಿದ್ದಲ್ಲ. ಮಠದ ವಿಶ್ವಾಸವಿದ್ದವರಿಂದ ಆಗಿದ್ದು. ನಾವು ಪರಿಶುದ್ಧವಾದ ಮನಸ್ಸಿನಿಂದ ಹೋಗಿದ್ದರಿಂದ ಆ ರೀತಿ ಮಾಡೋ ಪ್ರಶ್ನೆಯೇ ಇಲ್ಲ. ಶುದ್ಧ ಮನಸ್ಸಿನಿಂದ ಹೋಗಿದ್ದೇವೆ. ಇಲ್ಲಿ ಹಿಂದೂ, ಮುಸ್ಲಿಂ, ದಲಿತ ಎಂಬ ವಿಚಾರವೇ ಬರುವುದಿಲ್ಲ. ಅಮೀನ್ ಮಟ್ಟು ಈ ರೀತಿ ಹೇಳಿಕೆ ನೀಡಿ ದಲಿತರ ಓಲೈಕೆ ಮಾಡಲು ಹೊರಟಿದ್ದು, ಇದರಲ್ಲಿ ಖಂಡಿತ ಯಶಸ್ವಿಯಾಗಲ್ಲ ಎಂದಿದ್ದಾರೆ.

    ಚುನಾವಣೆ ಉದ್ದೇಶ ಇಟ್ಕೊಂಡು ಅಮೀನ್ ಮಟ್ಟು ಈ ರೀತಿ ಹೇಳಿದ್ದಾರೆ. ಮೊದಲು ಅಮೀನ್ ಮಟ್ಟು ಅಂತವರ ಮನಸ್ಸನ್ನು ಶುದ್ಧಿ ಮಾಡ್ಬೇಕು. ಕರ್ನಾಟಕ ರಾಜ್ಯದ ಜನತೆ ಕಾಂಗ್ರೆಸ್‍ಗೂ ಹಾಗೂ ಅಮೀನ್ ಮಟ್ಟು ಮನಸ್ಸನ್ನು ಶುದ್ಧಿ ಮಾಡಬೇಕಿದೆ. ಮುಸ್ಲಿಂ ಸಮುದಾಯ ಆಕ್ರೋಶಗೊಳ್ಳುವ ರೀತಿಯಲ್ಲಿ ಮಟ್ಟು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

    ಈ ಬಗ್ಗೆ ಉಡುಪಿ ಚಲೋದಲ್ಲಿ ಪಾಲ್ಗೊಂಡ ಜಿಲ್ಲೆಯ ದಲಿತ ಮುಖಂಡ ಸುಂದರ್ ಮಾಸ್ಟರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಸ್ವಾಮೀಜಿಯದ್ದು ದ್ವಂದ್ವ ನಿಲುವು. ಶ್ರೀಗಳ ನಡವಳಿಕೆ ಡೋಂಗಿತನ. ಆಗ ದಲಿತರು ರಸ್ತೆಯಲ್ಲಿ ನಡೆದ ಕೂಡಲೇ ಇಡೀ ಉಡುಪಿ ಮಲಿನವಾಗಿದೆ. ಈಗ ಇಫ್ತಾರ್ ಕೂಟ ನಡೆದಾಗ ಮಠದ ಒಳಗಡೆ ಹೋದಾಗ ಮಲಿನವೇ ಆಗಿಲ್ಲ. ಗೋಮೂತ್ರ ಹಾಕಿ ಶುದ್ಧೀಕರಣ ಮಾಡುವ ಅಗತ್ಯವಿಲ್ಲ. ದಲಿತರು ಬಂದಾಗ ಏನಾಗಿತ್ತು ಅವರಿಗೆ? ಸ್ವಾಮೀಜಿ ದಲಿತರು ಮತ್ತು ಮುಸ್ಲೀಮರ ಬಗ್ಗೆ ಇಬ್ಬಗೆ ನೀತಿ ಅನುಸರಿಸಿದ್ದಾರೆ ಎಂದು ದೂರಿದ್ದಾರೆ.

    ಅಮಿನ್ ಮಟ್ಟು ಅವರ ಫೇಸ್‍ಬುಕ್ ಪೋಸ್ಟ್,

  • ಕೃಷ್ಣಮಠದಲ್ಲಿ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ: ಮುತಾಲಿಕ್

    ಕೃಷ್ಣಮಠದಲ್ಲಿ ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ: ಮುತಾಲಿಕ್

    ಉಡುಪಿ: ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಶ್ರೀಕೃಷ್ಣಮಠದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಇಂದು ಭೇಟಿ ಮಾಡಿದರು.

    ಇದೇ ವೇಳೆ ಮಾತನಾಡಿದ ಮುತಾಲಿಕ್, ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ. ಈ ಬಗ್ಗೆ ಪೇಜಾವರ ಸ್ವಾಮೀಜಿ ಜೊತೆ ಚರ್ಚಿಸಲು ಉಡುಪಿಗೆ ಬಂದಿದ್ದೇನೆ. ಗೋ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಆದ್ರೆ ಗೋ ಭಕ್ಷಕರಿಗೆ ಮಠದ ಆವರಣದಲ್ಲಿ ನಮಾಜ್ ಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಹೇಳಿದರು.

    ಪೇಜಾವರ ಸ್ವಾಮೀಜಿಯವರು ಈ ಬಗ್ಗೆ ಸಮರ್ಥನೆ ಮಾಡುತ್ತಿದ್ದಾರೆ. ಸ್ವಾಮೀಜಿ ಸಮರ್ಥನೆಯಿಂದ ನಮಗೆ ತೃಪ್ತಿಯಾಗಿಲ್ಲ. ಈ ಬಗ್ಗೆ ಮುಂದೇನು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ. ಸಂಘಟನೆಯ ಒಳಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿ ಮಠದಿಂದ ಮುತಾಲಿಕ್ ತೆರಳಿದರು.

    ಇದೇ ವಿಚಾರವಾಗಿ ಪೇಜಾವರಶ್ರೀ ಪ್ರತಿಕ್ರಿಯೆ ನೀಡಿದ್ದು, ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಇದು ನನ್ನ ತತ್ವ. 1955ರಿಂದ ಸ್ನೇಹ ಸೌಹಾರ್ಧಕ್ಕೆ ಪ್ರಯತ್ನಿಸುತ್ತಾ ಬಂದಿದ್ದೇನೆ. ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ. ಇಫ್ತಾರ್ ಕೂಟದಿಂದ ಹಿಂದೂಗಳು ಉದಾರಿಗಳು ಎಂಬ ಸಂದೇಶ ಹೋಗುತ್ತೆ. ಕೃಷ್ಣಮಠದ ಒಳಗೆ ನಮಾಜು ಮಾಡಿಲ್ಲ. ಸಾರ್ವಜನಿಕ ಭೋಜನ ಶಾಲೆಯಲ್ಲಿ ನಮಾಜು ನಡೆದಿದೆ. ಮಧ್ವಾಚಾರ್ಯರ ಕಾಲದಿಂದ ಮುಸ್ಲಿಮರ ಜೊತೆ ಉತ್ತಮ ಭಾಂದವ್ಯವಿದೆ. ಉಡುಪಿ ಚಲೋ ಸಂದರ್ಭದಲ್ಲಿ ಮುಸ್ಲಿಮರು ಮಠಕ್ಕೆ ಸಹಕಾರ ನೀಡಿದ್ದಾರೆ ಅಂದ್ರು.

    ಜನರ ಮನಸ್ಸು ಕದಡಿಸುವ ಕೆಲಸ ಯಾರೂ ಮಾಡಬೇಡಿ. ನನ್ನದು ಸ್ವತಂತ್ರ ವ್ಯಕ್ತಿತ್ವ. ಹಿಂದೂ ಧರ್ಮ ಏನು ಎಂಬುದು ಚೆನ್ನಾಗಿ ನನಗೆ ಗೊತ್ತು. ಇದೊಂದು ಸಹಜ ಕಾರ್ಯಕ್ರಮ. ಇದನ್ನು ದೊಡ್ಡ ವಿಷಯ ಮಾಡಬೇಡಿ ಅಂತ ಹೇಳಿದ್ರು.