Tag: IDF

  • ಹಮಾಸ್​​ ಮುಖ್ಯಸ್ಥ ​ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್‌

    ಹಮಾಸ್​​ ಮುಖ್ಯಸ್ಥ ​ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್‌

    ಟೆಲ್‌ ಅವಿವ್‌: ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್‌ (Isreal) ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ (Hamas Leader) ಯಾಹ್ಯಾ ಸಿನ್ವಾರ್(Yahya Sinwar) ಇಸ್ರೇಲ್‌ ನಡೆಸಿದ ದಾಳಿಗೆ ಬಲಿಯಾಗಿದ್ದಾನೆ.

    ಗುರುವಾರ ಗಾಜಾದಲ್ಲಿ (Gaza) ಇಸ್ರೇಲಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಸಾಮೂಹಿಕ ಕೊಲೆಗಾರ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಲಾಗಿದೆ. ಇದು ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದು ಇಸ್ರೇಲ್ ವಿದೇಶಾಂಗ ಸಚಿವ ಕಾಟ್ಜ್ ಬಣ್ಣಿಸಿದ್ದಾರೆ.

    ಇಸ್ರೇಲಿ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳು ಮೃತಪಟ್ಟ ವ್ಯಕ್ತಿಯ ದೇಹವು ಸಿನ್ವಾರ್‌ನದೇ ಎಂದು ಡಿಎನ್‌ಎ ಪರಿಶೀಲನೆ ನಡೆಸಿದ ಬಳಿಕ ಆತ ಮೃತಪಟ್ಟಿರುವುದನ್ನು ಅಧಿಕೃತವಾಗಿ ತಿಳಿಸಿವೆ.

    ಗಾಜಾದ ಕಟ್ಟಡದ ನೆಲ ಮಹಡಿಯಲ್ಲಿ ನೆಲೆಗೊಂಡಿದ್ದ ಹಮಾಸ್‌ ಉಗ್ರರ ವಿರುದ್ಧ ಇಸ್ರೇಲ್‌ ದಾಳಿ ನಡೆಸಿತ್ತು. ಕಾರ್ಯಾಚರಣೆ ನಡೆಸಿದ್ದ ಕಟ್ಟಡದಲ್ಲಿ ಈತ ನೆಲೆಸಿದ್ದ ವಿಚಾರ ಇಸ್ರೇಲ್‌ಗೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ.


    ಯಾಹ್ಯಾ ಸಿನ್ವಾರ್ ಯಾರು?
    ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್‌ ನಡೆಸಿದ ದಾಳಿ ಬಳಿಕ ಯಾಹ್ಯಾ ಸಿನ್ವಾರ್ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಆಗಸ್ಟ್‌ನಲ್ಲಿ ಇರಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಇಸ್ಮಾಯಿಲ್ ಹನಿಯೆಹ್ ಹತನಾದ ನಂತರ ಹಮಾಸ್ ಮುಖ್ಯಸ್ಥನಾಗಿದ್ದ. 1962 ರಲ್ಲಿ ಜನಿಸಿದ ಸಿನ್ವಾರ್ 1987 ರಲ್ಲಿ ಹಮಾಸ್ ಅನ್ನು ಸ್ಥಾಪಿಸಿದಾಗ ಅದರ ಆರಂಭಿಕ ಸದಸ್ಯರಲ್ಲಿ ಒಬ್ಬನಾಗಿದ್ದ.

     

  • ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

    ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

    ಇಸ್ರೇಲ್‌ ಮೇಲಿನ ದಾಳಿಗೆ ಒಂದು ವರ್ಷ ಪೂರೈಸಿದೆ. ಗಾಜಾಪಟ್ಟಿಯಲ್ಲಿದ್ದ ಹಮಾಸ್‌ ಬಂಡುಕೋರರ ಗುಂಪು 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ನಡೆಸಿದ ಅಪ್ರಚೋದಿತ ದಾಳಿ ಇಂದು ಲಕ್ಷಾಂತರ ಜನರ ನೆಮ್ಮದಿ ಕಸಿದಿದೆ. ಸಾವಿರಾರು ಜನರ ಜೀವ ತೆಗೆದಿದೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್‌, ಹಮಾಸ್‌ ಹಾಗೂ ಹಿಜ್ಬುಲ್ಲಾ ನಡುವಿನ ಭೀಕರ ಯುದ್ಧದಲ್ಲಿ ಸುಮಾರು 50 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.

    ಆ ದಿನ ಕೇವಲ 20 ನಿಮಿಷದ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಪುಂಖಾನುಪುಂಖವಾಗಿ 5 ಸಾವಿರ ರಾಕೆಟ್‌ಗಳನ್ನು ಹಾರಿಸಿದ್ದರು. ಇಸ್ರೇಲ್‌ನ ಬಲಾಢ್ಯ ಕ್ಷಿಪಣಿ ವಿರೋಧಿ ವ್ಯವಸ್ಥೆ ಐರನ್‌ ಡೋಮ್‌ ಇಷ್ಟು ಅಗಾಧ ಪ್ರಮಾಣದ ರಾಕೆಟ್‌ ಮಳೆಗೆ ನಿಷ್ಪರಿಣಾಮಕಾರಿ ಎನ್ನಿಸಿಕೊಂಡಿತು. ಅಲ್ಲದೇ, ಹಮಾಸ್‌ 1,000ಕ್ಕೂ ಅಧಿಕ ಉಗ್ರರೊಂದಿಗೆ ದಕ್ಷಿಣ ಇಸ್ರೇಲ್‌ನ ಅನೇಕ ಪ್ರದೇಶಗಳಲ್ಲಿ ಭೂದಾಳಿ ನಡೆಸಿತು. ಬುಲ್ಡೋಜರ್‌ನಿಂದ ಇಸ್ರೇಲ್‌ನ ಗಡಿಯನ್ನು ಛಿದ್ರಗೊಳಿಸಿತು. ಇನ್ನೂ ಹಲವು ಉಗ್ರರು ಸಮುದ್ರ ಮಾರ್ಗದಲ್ಲಿ ಸ್ಪೀಡ್‌ ಬೋಟ್‌ಗಳ ಮೂಲಕ ಇಸ್ರೇಲನ್ನು ನುಸುಳಿದರು ಕೆಲವರು ಪ್ಯಾರಾಗ್ಲೈಡಿಂಗ್‌ ಮೂಲಕ ಇಸ್ರೇಲೊಳಗಿಳಿದು ರಂಪಾಟ ಎಬ್ಬಿಸಿದರು. ಈ ಏಕಕಾಲದ ಆಕ್ರಮಣ ನಿಲ್ಲಿಸಲು ಇಸ್ರೇಲ್‌ಗೆ ಆ ಕ್ಷಣಕ್ಕೆ ಸಾಧ್ಯವಾಗಲೇ ಇಲ್ಲ.

    ಪರಿಣಾಮ, ಇಸ್ರೇಲ್‌ ತನ್ನ 1200 ಪ್ರಜೆಗಳನ್ನು ಕಳೆದುಕೊಂಡಿತು. ಹಮಾಸ್‌ನ ಜೀಪುಗಳಲ್ಲಿ ಕೈಕಾಲು ಕಟ್ಟಿ ಕರೆದೊಯ್ದ 250 ಇಸ್ರೇಲಿಗರನ್ನು ಬಿಡಿಸಿಕೊಳ್ಳಲು ಇಸ್ರೇಲ್‌ ಅಂದು ಶುರುಮಾಡಿದ ಯುದ್ಧ ಇಂದಿಗೂ ಮುಗಿದಿಲ್ಲ. ಸದ್ಯಕ್ಕೆ ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಹಮಾಸ್‌ ಒಬ್ಬರಲ್ಲ ಅದರ ಹಿಂದೆ ಪ್ಯಾಲೆಸ್ತೀನ್‌, ಹಿಜ್ಬುಲ್ಲಾ, ಲೆಬನಾನ್‌, ಇರಾಕ್‌ ಹಾಗೂ ಸಿರಿಯಾದ ಉಗ್ರ ಸಂಘಟನೆಗಳು, ಹೌತಿ ಬಂಡುಕೋರರು… ಇಸ್ರೇಲನ್ನು ಕಟ್ಟಿಹಾಕಲು ಶತ್ರುಗಳೆಲ್ಲ ಒಗ್ಗೂಡುತ್ತಲೇ ಇದ್ದಾರೆ. ಇರಾನ್‌ನ ಸುಪ್ರೀಂ ಲೀಡರ್‌ ಕೂಡ ಇಸ್ರೇಲ್‌ ಸೋಲಿಸಲು ಇತ್ತೀಚೆಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಈಗ ಇಸ್ರೇಲ್‌ ದಿನದಿಂದ ದಿನಕ್ಕೆ ತನ್ನ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಭಾನುವಾರ (ಅ.6) ಕೂಡ ಕೇವಲ ಒಂದು ಗಂಟೆ ಅವಧಿಯಲ್ಲಿ 120 ಹಿಜ್ಬುಲ್ಲಾ ಉಗ್ರ ನೆಲೆಗಳನ್ನು ಧ್ವಂಸಮಾಡಿದೆ.

    ಇರಾನ್‌ ಯುದ್ಧಕ್ಕೆ ಎಂಟ್ರಿಯಾಗಿದ್ದು ಹೇಗೆ?

    ಹಿಜ್ಬುಲ್ಲಾ ಸೇನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾನನ್ನೂ ಇಸ್ರೇಲ್‌ ಹತ್ಯೆಗೈದಾಗ ಪರೋಕ್ಷವಾಗಿ ಇವರನ್ನೆಲ್ಲ ಬೆಂಬಲಿಸುತ್ತಿದ್ದ ಇರಾನ್‌ ನೇರವಾಗಿ ಇಸ್ರೇಲ್‌ ವಿರುದ್ಧ ತೊಡೆ ತಟ್ಟಿತ್ತು. ಏಕಾಏಕಿ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿ, ಇಸ್ರೇಲನ್ನು ಗಾಬರಿಗೊಳಿಸಲೂ ಇರಾನ್‌ ಯತ್ನಿಸಿದ್ದು ಸ್ವತಃ ಇಸ್ರೇಲನ್ನು ಮತ್ತಷ್ಟು ಕೆರಳಿಸಿದೆ. ಆದ್ರೆ ಇಸ್ರೇಲ್‌ ಕ್ಷಿಪಣಿ ಹಾರಿಸುವುದಕ್ಕೆ 2 ಗಂಟೆ ಮುಂಚಿತವಾಗಿಯೇ ಅಮೆರಿಕ ದಾಳಿಯ ಸುಳಿವು ಕೊಟ್ಟಿತ್ತು ಎಂಬುದು ಗಮನಾರ್ಹ. ಹಾಗಾಗಿ ಈ ಯುದ್ಧದ ಬೆಂಕಿಗೆ ತುಪ್ಪ ಸವರುವಂತೆ ಅತ್ತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ʻಇರಾನ್‌ನ ಅಣ್ವಸ್ತ್ರ ಕೇಂದ್ರದ ದಾಳಿ ಮಾಡಿ,ʼ ಎಂಬ ಸಲಹೆಯನ್ನು ಇಸ್ರೇಲ್‌ಗೆ ಕೊಟ್ಟಿರುವುದು ಯುದ್ಧದ ತೀವ್ರತೆಯನ್ನು ತೆರೆದಿಟ್ಟಿದೆ.

    ಸ್ನೇಹಿತರಾಗಿದ್ದವರೀಗ ಬದ್ಧ ವೈರಿಗಳು

    ಹೌದು. 1948ರ ಮೇ 14. ಪ್ಯಾಲೆಸ್ತೀನ್‌ನಿಂದ ಇಸ್ರೇಲ್‌ ಬೇರ್ಪಟ್ಟು ಹೊಸ ಯಹೂದಿ ದೇಶ ಉದಯವಾಯಿತು. ಆ ಸಮಯದಲ್ಲಿ ಇಸ್ರೇಲ್‌ ಎಂಬ ಶಿಶುವಿನ ಜತೆಗೆ ನಿಂತ ಏಕೈಕ ಇಸ್ಲಾಮಿಕ್‌ ರಾಷ್ಟ್ರ ಇರಾನ್‌. 1948ರಲ್ಲಿ ಅರಬ್‌ ರಾಷ್ಟ್ರಗಳು ಇಸ್ರೇಲ್‌ ವಿರುದ್ಧ ಯುದ್ಧ ಆರಂಭಿಸಿದರೂ, ಆ ಯುದ್ಧದಲ್ಲಿ ಇರಾನ್‌ ಭಾಗವಹಿಸಲಿಲ್ಲ. ಇಸ್ರೇಲ್‌ ಗೆದ್ದ ಬಳಿಕ ಇರಾನ್‌ ಅದರೊಂದಿಗೆ ಸಂಬಂಧ ಬೆಸೆಯಿತು. ಇರಾನ್‌ನಲ್ಲಿ ಮೊಹಮ್ಮದ್‌ ರಜಾ ಶಾ ಪಹ್ಲವಿ ಆಳ್ವಿಕೆಯಲ್ಲಿ ಈ ಎರಡೂ ರಾಷ್ಟ್ರಗಳು ಮಿತ್ರರು. ಆ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್‌ ಅತಿದೊಡ್ಡ ಯಹೂದಿ ಸಮುದಾಯಕ್ಕೆ ನೆಲೆ ಕಲ್ಪಿಸಿದ್ದ ರಾಷ್ಟ್ರ. ಉಭಯ ದೇಶಗಳ ನಡುವೆ ಆಮದು ಮತ್ತು ರಫ್ತು ವ್ಯವಹಾರ ಜೋರಾಗಿತ್ತು. ಇಸ್ರೇಲ್‌ ತನ್ನಲ್ಲಿನ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಇರಾನ್‌ಗೆ ಕಳುಹಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಇರಾನ್‌ ಶೇ.40ರಷ್ಟು ತೈಲವನ್ನು ಇಸ್ರೇಲ್‌ಗೆ ನೀಡುತ್ತಿತ್ತು. ಇಷ್ಟೇ ಅಲ್ಲ, ಇರಾನ್‌ನ ಗುಪ್ತಚರ ಸಂಸ್ಥೆ SAVAK, ತರಬೇತಿ ಪಡೆದಿದ್ದೇ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ನ ಕೈಯಲ್ಲಿ ಅನ್ನೋದು ವಿಶೇಷ.

    ಆದ್ರೆ 1960ರ ದಶಕದಲ್ಲಿ, ಇರಾನ್‌ನಲ್ಲಿ ಇಸ್ಲಾಮಿಕ್‌ ರಾಷ್ಟ್ರದ ಬೇಡಿಕೆ ತೀವ್ರವಾಯಿತು. ಧಾರ್ಮಿಕ ನಾಯಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನ್‌ ಅನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೋರಾಟ ತೀವ್ರಗೊಳಿಸಿದ. 1964ರಲ್ಲಿ ಈ ಧ್ವನಿಗೆ ಅಪಾರ ಜನಬೆಂಬಲ ವ್ಯಕ್ತವಾದಾಗ ರಜಾ ಶಾ ಪಹ್ಲವಿಗೆ ಇರಾನನ್ನು ತೊರೆಯುವಂತೆ ಖಮೇನಿ ಆದೇಶಿಸಿದ. ಕಡೆಗೂ 1969ರಲ್ಲಿ ಪಹ್ಲವಿಯನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರೊಂದಿಗೆ ಇರಾನ್‌ನಲ್ಲಿ ಇಸ್ಲಾಮಿಕ್‌ ರಾಜ್ಯ ಸ್ಥಾಪನೆಯಾಯಿತು. ಷರಿಯಾ ಕಾನೂನೂ ಜಾರಿಗೆ ಬಂತು. ಇದರೊಂದಿಗೆ ಇರಾನ್‌ನ ಖಮೇನಿ ಸರ್ಕಾರವು ಯಹೂದಿ ರಾಜ್ಯವಾದ ಇಸ್ರೇಲ್‌ನೊಂದಿಗೆ ಎಲ್ಲನಂಟನ್ನೂ ಕಡಿದುಕೊಂಡಿತು. ಉಭಯ ದೇಶಗಳ ನಡುವಿನ ವಿಮಾನ ಮಾರ್ಗವನ್ನೇ ಸಂಪೂರ್ಣವಾಗಿ ಮುಚ್ಚಲಾಯಿತು.

    ಇಸ್ರೇಲ್‌-ಇರಾನ್‌ ಸೇನಾಬಲ ಮೈ ನಡುಗಿಸುತ್ತೆ

    ಇಸ್ರೇಲ್‌ ಶಕ್ತಿಶಾಲಿ ರಾಷ್ಟ್ರವೇ ಆದರೂ ಇರಾನ್‌ ಸಹ ಸರಿಸಮನಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಾಗಾಗಿ ಮಿಲಿಟರಿ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆಯೇನಿಲ್ಲ ಅಂತಲೇ ಹೇಳಬಹುದು. ಇತ್ತೀಚಿನ ಗ್ಲೋಬಲ್‌ ಫೈರ್‌ ವರದಿ ಪ್ರಕಾರ, ವಾಯು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇರಾನ್‌ 14ನೇ ಸ್ಥಾನದಲ್ಲಿದ್ದರೆ, ಇಸ್ರೇಲ್‌ 17ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

    ರಕ್ಷಣಾ ಬಲ ಹೇಗಿದೆ ನೋಡಿ?

    ಇರಾನ್‌ 1996 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1397 ಪ್ರಸ್ತುತ ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲ್ 1,370 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1,096 ಯುದ್ಧಕ್ಕೆ ಸಿದ್ಧವಾಗಿವೆ. ಇರಾನ್ 65,765 ಮಿಲಿಟರಿ ವಾಹನಗಳನ್ನು ಹೊಂದಿದ್ದು, ಅದರಲ್ಲಿ 46 ಸಾವಿರಕ್ಕೂ ಹೆಚ್ಚು ಸಕ್ರಿಯವಾಗಿವೆ. ಇನ್ನೂ ಇಸ್ರೇಲ್ 43,407 ಮಿಲಿಟರಿ ವಾಹನಗಳನ್ನು ಹೊಂದಿದೆ, ಅದರಲ್ಲಿ 34,736 ಸಕ್ರಿಯವಾಗಿವೆ. ಸ್ವಯಂ ಚಾಲಿತ ಪಿರಂಗಿಗಳ ಬಗ್ಗೆ ನೋಡಿದ್ರೆ, ಇರಾನ್‌ 580 ಫಿರಂಗಿ ಹೊಂದಿದ್ದು, ಅದರಲ್ಲಿ 406 ಸಕ್ರಿಯ ಸೇವೆಯಲ್ಲಿವೆ. ಇಸ್ರೇಲ್ 650 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದ್ದು, ಅದರಲ್ಲಿ 540 ಯುದ್ಧಕ್ಕೆ ಸಿದ್ಧವಾಗಿದೆ. ಸ್ವಯಂಚಾಲಿತವಲ್ಲದ ಫಿರಂಗಿಗಳಲ್ಲಿ ಇರಾನ್ 2050, ಇಸ್ರೇಲ್ ಕೇವಲ 300 ಹೊಂದಿದೆ. ಇಲ್ಲದೇ ಮಲ್ಟಿ ರಾಕೆಟ್‌ ಲಾಂಚರ್‌ಗಳ ಪೈಕಿ ಇರಾನ್‌ ಬಳಿ 775 ಮಲ್ಟಿ ಲಾಂಚರ್‌ ಇದ್ದರೆ, ಇಸ್ರೇಲ್‌ ಬಳಿ ಕೇವಲ 150 ರಾಕೆಟ್‌ ಲಾಂಚರ್‌ಗಳಿವೆ.

    ಸೈನಿಕರ ಬಲದಲ್ಲಿ ಇರಾನ್‌ 11.80 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 3.50 ಲಕ್ಷ ಮೀಸಲು ಸೇನಾ ಪಡೆ, 2.20 ಲಕ್ಷ ಸೈನಿಕರ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದೆ. ಇಸ್ರೇಲ್‌ 6.70 ಲಕ್ಷ ಸೈನಿಕರ ಬಲ ಹೊಂದಿದೆ. ಈ ಪೈಕಿ ಇಸ್ರೇಲ್ 4.65 ಲಕ್ಷ ಮೀಸಲು ಪಡೆ, 35 ಸಾವಿರ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ಹೊಂದಿದೆ. ಇದಲ್ಲದೇ ಇರಾನ್‌ ಬಳಿ 42 ಸಾವಿರ ಜೆಟ್‌ಮೆನ್‌ಗಳಿದ್ದರೆ, ಇಸ್ರೇಲ್‌ 89 ಸಾವಿರ ಜೆಟ್‌ಮೆನ್‌ ಬಲ ಹೊಂದಿದೆ. ಜೊತೆಗೆ ಇರಾನ್ ಒಟ್ಟು 18,500 ನೌಕಾ ಸಿಬ್ಬಂದಿ ಹೊಂದಿದ್ದರೆ, ಇಸ್ರೇಲ್ 19,500 ನೌಕಾದಳ ಸಿಬ್ಬಂದಿಯನ್ನು ಹೊಂದಿದೆ.

    ವಾಯುಪಡೆಯಲ್ಲಿ ಆನೆ ಬಲ

    ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲ್‌ ಇರಾನ್‌ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಇರಾನ್‌ ಬಳಿ 551 ವಿಮಾನಗಳನ್ನು ಹೊಂದಿದ್ದು, ಅದರಲ್ಲಿ 358 ಸಕ್ರಿಯವಾಗಿವೆ. ಆದ್ರೆ ಇಸ್ರೇಲ್ 612 ಮೀಸಲು ಹೊಂದಿದ್ದು, 490 ವಿಮಾನ ಸಕ್ರಿಯವಾಗಿದೆ. ಇರಾನ್ 186 ಯುದ್ಧ ವಿಮಾನ ಹೊಂದಿದ್ದು, ಈ ಪೈಕಿ 121 ಮಂದಿ ಸದಾ ದಾಳಿಗೆ ಸಿದ್ಧರಾಗಿದ್ದಾರೆ. ಇಸ್ರೇಲ್ 241 ಯುದ್ಧವಿಮಾನಗಳನ್ನು ಹೊಂದಿದ್ದು, ಅದರಲ್ಲಿ 193 ದಾಳಿಗೆ ಸಿದ್ಧವಾಗಿವೆ.

    ಇಸ್ರೇಲ್‌ನ ಸೈಬರ್‌ ಅಸ್ತ್ರಗಳೇ ಇರಾನ್‌ಗೆ ಸವಾಲು

    * 2010ರ ಸುಮಾರಿಗೆ ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದನ್ನು ಗಮನಿಸಿದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌, ಶತ್ರುರಾಷ್ಟ್ರದ ಒಂದೊಂದು ಹೆಜ್ಜೆಯನ್ನು ವಿಫಲಗೊಳಿಸತೊಡಗಿತು. ಮುಖ್ಯವಾಗಿ ಇಸ್ರೇಲ್‌ ನೀಡಿದ ಸೈಬರ್‌ ದಾಳಿಯ ಏಟುಗಳಿಗೆ ಇರಾನ್‌ ಹೈರಾಣಾಯಿತು.
    * 2010, ಜೂನ್‌: ಬುಶೆಹರ್‌ ಪರಮಾಣು ಸ್ಥಾವರ ಕಂಪ್ಯೂಟರ್‌ಗಳು ಸ್ಟಕ್ಸ್ನೆಟ್ ವೈರಸ್‌ನ ದಾಳಿಗೆ ಗುರಿಯಾದವು. ಇದು 14 ಸ್ಥಾವರಗಳ 30 ಸಾವಿರಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಮೇಲೆ ಪರಿಣಾಮ ಬೀರಿತು. ಇದರ ಹಿಂದೆ ಮೊಸಾದ್‌ ಕೈವಾಡ ಇದೆಯೆನ್ನುವುದು ಇರಾನ್‌ ಆರೋಪ.
    * 2011, ಏಪ್ರಿಲ್‌: ಇರಾನ್‌ನ ಭದ್ರತಾ ಸಂಸ್ಥೆಯ ಮುಖ್ಯಸ್ಥ ಘೋಲಮ್ರೆಜಾ ಜಲಾಲಿ ಪ್ರಕಾರ, ಇಸ್ರೇಲ್‌ ಸೃಷ್ಟಿಸಿದ ‘ಸ್ಟಾರ್ಸ್‌’ ಹೆಸರಿನ ವೈರಸ್‌ ಇರಾನ್‌ನ ಸರ್ಕಾರಿ ದಾಖಲೆಗಳನ್ನೇ ನಕಲು ಮಾಡಿತು.
    * 2012, ಏಪ್ರಿಲ್‌: ವೈಪರ್‌ ಮಾಲ್ವೇರ್‌ ಇರಾನ್‌ನ ಪೆಟ್ರೋಲಿಯಂ ಸಚಿವಾಲಯ ಮತ್ತು ನ್ಯಾಷನಲ್‌ ಇರಾನಿಯನ್‌ ಆಯಿಲ್‌ ಕಂಪನಿಯ ಕಂಪ್ಯೂಟರ್‌ಗಳಲ್ಲಿದ್ದ ಡೇಟಾವನ್ನೆಲ್ಲ ಅಳಿಸಿಹಾಕಿತ್ತು. ಹೀಗೆ ಇನ್ನೂ ಅನೇಕ ಉದಾಹರಣೆಗಳಿವೆ.

    ಕದನ ವಿರಾಮಕ್ಕೂ ಕ್ಯಾರೆ ಎನ್ನದೇ ಯುದ್ಧದಲ್ಲಿ ಮುನ್ನುಗ್ಗುತ್ತಿರುವ ಇಸ್ರೇಲ್‌ ಒಂದು ಕಡೆಯಾದ್ರೆ, ಇಸ್ರೇಲ್‌ ಅನ್ನೂ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಅದರ ಶತ್ರು ರಾಷ್ಟ್ರಗಳು ಮತ್ತೊಂದು ಕಡೆ ಇದೆ. ಇದರ ತಾರ್ಕಿತ ಅಂತ್ಯ ಎಲ್ಲಿಗೆ ಒಯ್ಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  • 120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

    120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

    ಬೈರೂತ್: ಒಂದು ವರ್ಷ ಕಳೆದರೂ ಇಸ್ರೇಲ್‌-ಹಮಾಸ್‌-ಹಿಜ್ಬುಲ್ಲಾ (Israel Hezbollah War) ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್‌ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್‌ ಸುಪ್ರೀಂ ಲೀಡರ್‌ ಇಸ್ರೇಲ್‌ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್‌ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

    ಅದರಂತೆ ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಲಾಜಿಸ್ಟಿಕ್‌ ಘಟಕದ ಮುಖ್ಯಸ್ಥ ಸುಹೇಲ್‌ ಹುಸೇನ್‌ ಹುಸೇನಿ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ರಕ್ಷಣಾ ಪಡೆ ಮಂಗಳವಾರ (ಇಂದು) ಹೇಳಿಕೊಂಡಿದೆ. ಇದನ್ನೂ ಓದಿ: ಒಂದೇ ಗಂಟೆಯೊಳಗೆ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಇಸ್ರೇಲ್

    ಸೇನಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್‌, ಸೋಮವಾರ ಅಂದ್ರೆ ಅಕ್ಟೋಬರ್‌ 7ರಂದು ಯುದ್ಧದ ವರ್ಷಾಚರಣೆ ವೇಳೆ ಬೈರೂತ್‌ನಲ್ಲಿ ನಡೆಸಿದ ದಾಳಿಯಲ್ಲಿ ಹುಸೇನಿಯನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದೆ. ಆದ್ರೆ ಹಿಜ್ಬುಲ್ಲಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ತಾಂತ್ರಿಕ ದೋಷದಿಂದ ಯಡವಟ್ಟು; ಏಕಕಾಲಕ್ಕೆ ಕ್ವಾಂಟಾಸ್ ಫ್ಲೈಟ್‌ನ ಎಲ್ಲಾ ಟಿವಿ ಸ್ಕ್ರೀನ್‌ನಲ್ಲಿ ಸೆಕ್ಸ್‌ ವೀಡಿಯೋ ಪ್ರಸಾರ!

    ಸೋಮವಾರ (ಅ.7) ಇಸ್ರೇಲ್‌ ಒಂದು ಗಂಟೆ ಅವಧಿಯಲ್ಲಿ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ನೆಲೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿತ್ತು.

    ಇದಕ್ಕೂ ಮುನ್ನಾದಿನ ಗಾಜಾದಲ್ಲಿನ (Gaza) ಮಸೀದಿಯ (Mosque) ಮೇಲೆ ಇಸ್ರೇಲ್‌ (Israel) ವಾಯುಪಡೆ ನಡೆಸಿದ್ದ ವೈಮಾನಿಕ ದಾಳಿಯಿಂದ 26 ಮಂದಿ ಸಾವಿಗೀಡಾಗಿದ್ದರು. ಈ ಬೆನ್ನಲ್ಲೇ ಹಮಾಸ್‌ ಕೂಡ ಕೌಂಟರ್‌ ಅಟ್ಯಾಕ್‌ ಮಾಡಿತ್ತು. ಇಸ್ರೇಲ್‌ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು (Rocket Fired) ಹಾರಿಸಿತ್ತು. ಇದನ್ನೂ ಓದಿ: ವಾಯುದಾಳಿಗೆ ಕೌಂಟರ್‌ ಅಟ್ಯಾಕ್‌ – ದಕ್ಷಿಣ ಇಸ್ರೇಲ್‌ ಕಡೆಗೆ ಹೊರಟ ಸ್ಫೋಟಕ ತುಂಬಿದ ರಾಕೆಟ್‌

  • ಲೆಬನಾನ್‌ ಮೇಲೆ ಇಸ್ರೇಲ್‌ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!

    ಲೆಬನಾನ್‌ ಮೇಲೆ ಇಸ್ರೇಲ್‌ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!

    – ಗಾಜಾದಲ್ಲಿ ಹಮಾಸ್‌ ಮುಖ್ಯಸ್ಥನ ರೈಡ್‌ಹ್ಯಾಂಡ್‌ ಸೇರಿ ಮೂವರ ಹತ್ಯೆ

    ಬೈರೂತ್‌: ದಕ್ಷಿಣ ಲೆಬನಾನ್ ಮೇಲೆ ನಡೆಸಿದ ವಾಯು ದಾಳಿಯಲ್ಲಿ (IDF Airstrike) ಹಿಜ್ಜುಲ್ಲಾ (Hezbollah) ಸಂಘಟನೆಯ 15 ಮಂದಿಯನ್ನು ಹತ್ಯೆ ಮಾಡಲಾಗಿದೆ. ಇರಾನ್ ಬೆಂಬಲಿತ ಹಿಜ್ಜುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

    ಬೈರೂತ್‌ ಮೇಲೆ ಬಾಂಬ್ ದಾಳಿ:
    ಮತ್ತೊಂದುಕಡೆ ಲೆಬನಾನ್ ರಾಜಧಾನಿ ಹಾಗೂ ಅತಿ ದೊಡ್ಡ ನಗರ ಬೈರೂತ್ ಮೇಲೆ ʻಎನಿಮಿʼ ಜೆಟ್‌ ಮೂಲಕ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿವೆ.

    ಲೆಬನಾನ್‌ನ (Lebanon) ರಾಜಧಾನಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಹಮಾಸ್ ಮತ್ತು ಹಿಬ್ಬುಲ್ಲಾ ಸಂಘಟನೆಗಳನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರಿಸಿದೆ. ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಆದರೆ ಇಸ್ರೇಲ್ ದಾಳಿ ನಡೆಸಿದರೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಪ್ರತಿದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಸಿದೆ.

    ಗಾಜಾದಲ್ಲಿ ಹಮಾಸ್‌ ಮುಖ್ಯಸ್ಥನ ರೈಟ್‌ಹ್ಯಾಂಡ್‌ ಹತ್ಯೆ:
    ಇಸ್ರೇಲ್‌-ಇರಾನ್‌ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಇಸ್ರೇಲ್‌ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದೆ. ಮೂರು ತಿಂಗಳ ಹಿಂದೆ ಗಾಜಾದ ಮೇಲೆ ನಡೆಸಿದ ವಾಯುದಾಳಿಯಲ್ಲಿ ಹಮಾಸ್‌ ಮುಖ್ಯಸ್ಥನ ರೈಟ್‌ಹ್ಯಾಂಡ್‌ ರಾವ್ಹಿ ಮುಶ್ತಾಹಾ ಇತರ ಇಬ್ಬರು ಲೀಡರ್‌ಗಳನ್ನ ಹತ್ಯೆಗೈದಿರುವುದಾಗಿ ಘೋಷಿಸಿದೆ.

  • ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ ಉಡೀಸ್‌ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್‌

    ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ ಉಡೀಸ್‌ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್‌

    ಬೈರುತ್‌: ಲೆಬನಾನ್‌ನಲ್ಲಿ ಪೇಜರ್‌, ವಾಕಿಟಾಕಿ ಸ್ಫೋಟಗೊಂಡ ಬೆನ್ನಲ್ಲೇ ಹಿಜ್ಜುಲ್ಲಾ ಸಂಘಟನೆ ಇಸ್ರೇಲ್ ಮೇಲೆ ಪ್ರತಿ ದಾಳಿಗೆ ಸಿದ್ಧತೆ ನಡೆಸಿತ್ತು. ಆದ್ರೆ ಹಿಜ್ಜುಲ್ಲಾದ (Hezbollah) ಸಿದ್ಧತೆಗೆ ಆರಂಭದಲ್ಲೇ ಇಸ್ರೇಲ್ (Israel) ಪೆಟ್ಟು ಕೊಟ್ಟಿದೆ.

    ಇಸ್ರೇಲ್‌ ರಕ್ಷಣಾ ಪಡೆ (IDF) ಯುದ್ಧವಿಮಾನಗಳು ಸುಮಾರು 1000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು (Hezbollah Rocket launcher) ಹೊಡೆದುರುಳಿಸಿವೆ. ಅಲ್ಲದೇ ಹಿಜ್ಬುಲ್ಲಾದ ರಕ್ಷಣಾ ಘಟಕವನ್ನೂ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಈ ಕ್ಷಿಪಣಿ ಲಾಂಚರ್‌ಗಳು ಇಸ್ರೇಲ್‌-ಲೆಬನಾನ್‌ ಗಡಿಯಲ್ಲಿ ಸಿದ್ಧವಾಗಿದ್ದವು ಎಂದು ಇಸ್ರೇಲಿ ಮಿಲಿಟರಿ ಪಡೆ ಹೇಳಿಕೊಂಡಿದೆ.

    ಇಸ್ರೇಲ್ ರಕ್ಷಣಾ ಪಡೆ ತನ್ನ ಎಕ್ಸ್ ಖಾತೆಯಲ್ಲೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹಿಜ್ಬುಲ್ಲಾದವರು ಸುಮ್ಮನಿರದಿದ್ದರೇ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸಹ ಎಚ್ಚರಿಸಿದೆ. ಇದೇ ವೇಳೆ ಗಾಜಾ ಯುದ್ಧ ಮುಗಿಯುವವರೆಗೂ ಇಸ್ರೇಲ್ ಉತ್ತರದ ಕಡೆ (ಲೆಬನಾನ್ ಗಡಿಯತ್ತ) ಬರುವುದಿಲ್ಲ ದಾಳಿ ನಡೆಸಿ ಎಂದು ಹಿಜ್ಜುಲ್ಲಾ ಮುಖಂಡರು ತಮ್ಮ ಸಂಘಟನೆಯನ್ನು ಪ್ರಚೋದಿಸಿದ್ದಾರೆ. ಇನ್ನೊಂದೆಡೆ ತಕ್ಷಣವೇ ಕದನ ವಿರಾಮ ಘೋಷಿಸಿ ಎಂದು ಬ್ರಿಟನ್ ಇಸ್ರೇಲ್ ಹಾಗೂ ಲೆಬನಾನ್‌ಗೆ ಕರೆ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮಿಡಲ್ ಈಸ್ಟ್‌ನಲ್ಲಿ ಅಮೆರಿಕದ ಸೇನಾಪಡೆಗಳು ಅಲರ್ಟ್ ಸ್ಥಿತಿಯಲ್ಲಿವೆ ಎಂದು ಪೆಂಟಗಾನ್ ವಕ್ತಾರೆ ಸರ್ಬಿನಾ ಸಿಂಗ್ ಹೇಳಿದ್ದಾರೆ

    ಇತ್ತೀಚೆಗೆ ಉತ್ತರ ಗಡಿ ಭಾಗದಲ್ಲಿ ಇಸ್ರೇಲ್ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಗಾಜಾ ಗಡಿಯಿಂದ ಸೇನಾ ಪಡೆಗಳನ್ನು ಉತ್ತರದ ಗಡಿ ಭಾಗಕ್ಕೆ ಸ್ಥಳಾಂತರಿಸುವುದರಲ್ಲಿ ತೊಡಗಿದೆ. ಇದರ ನಡುವೆ ಅಧಿಕಾರಿಗಳು ವಾಗ್ದಾಳಿಯನ್ನೂ ಹೆಚ್ಚಿಸಿದ್ದಾರೆ. ಈ ಹಿಂದೆಯೂ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟವು ಹಲವು ಭಾರಿ ಉಲ್ಬಣಗೊಂಡಿದ್ದಿದೆ.

    ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ-ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂಬುದು ಹಿಜ್ಜುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಜುಲ್ಲಾ ಶಪಥ ಕೂಡ ಮಾಡಿದೆ.

  • ರಫಾದಲ್ಲಿ ವಿನಾಶಕಾರಿ ಸ್ಫೋಟ; 8 ಇಸ್ರೇಲಿ ಸೈನಿಕರು ಸಾವು

    ರಫಾದಲ್ಲಿ ವಿನಾಶಕಾರಿ ಸ್ಫೋಟ; 8 ಇಸ್ರೇಲಿ ಸೈನಿಕರು ಸಾವು

    ಟೆಲ್‌ ಅವೀವ್‌: ದಕ್ಷಿಣ ಗಾಜಾದ (Gaza) ರಫಾದಲ್ಲಿ (Rafah) ವಿನಾಶಕಾರಿ ಸ್ಫೋಟ ಸಂಭವಿಸಿ ಎಂಟು ಮಂದಿ ಇಸ್ರೇಲಿ (Israeli Soldiers) ಸೈನಿಕರು ಮೃತಪಟ್ಟಿದ್ದಾರೆ.

    ಮೃತರಲ್ಲಿ ಬೀಟ್ ಜಾನ್‌ನಿಂದ ಯುದ್ಧ ಎಂಜಿನಿಯರಿಂಗ್ ಕಾರ್ಪ್ಸ್‌ನ 601 ನೇ ಬೆಟಾಲಿಯನ್‌ನ ಡೆಪ್ಯೂಟಿ ಕಂಪನಿ ಕಮಾಂಡರ್ ಸಿಪಿಟಿ ವಾಸೆಮ್ ಮಹಮೂದ್ (23) ಕೂಡ ಒಬ್ಬರು ಎಂದು ಗುರುತಿಸಲಾಗಿದೆ. ಉಳಿದ ಏಳು ಸೈನಿಕರ ಹೆಸರನ್ನು ಕುಟುಂಬದವರಿಗೆ ಮಾಹಿತಿ ನೀಡಿದ ನಂತರ ಬಹಿರಂಗಪಡಿಸಲಾಗುವುದು ಎಂದು ಐಡಿಎಫ್‌ ತಿಳಿಸಿದೆ. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ

    IDF ತನಿಖೆಯ ಆರಂಭಿಕ ಸಂಶೋಧನೆಗಳು, ಸ್ಫೋಟ ಸಂಭವಿಸಿದಾಗ ಸೈನಿಕರು ನೇಮರ್ ಶಸ್ತ್ರಸಜ್ಜಿತ ಯುದ್ಧ ಎಂಜಿನಿಯರಿಂಗ್ ವಾಹನ (CEV) ಒಳಗೆ ಇದ್ದರು ಎಂದು ತಿಳಿಸಿದೆ. ರಫಾದ ಟೆಲ್ ಸುಲ್ತಾನ್ ನೆರೆಹೊರೆಯಲ್ಲಿ ಹಮಾಸ್ ವಿರುದ್ಧ ತಡರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು. ನಂತರ ಬೆಳಗ್ಗೆ 5 ಗಂಟೆಗೆ ಈ ಘಟನೆ ಸಂಭವಿಸಿದೆ.

    ಬೆಂಗಾವಲು ಪಡೆಯಲ್ಲಿ ಐದನೇ ಅಥವಾ ಆರನೇ ವಾಹನವಾಗಿ ಇರಿಸಲಾದ ನೇಮರ್ ಸಿಇವಿ ಸ್ಫೋಟಕ್ಕೆ ಒಳಗಾಗಿದೆ. ಸ್ಫೋಟವು ಪೂರ್ವ-ಸ್ಥಾಪಿತ ಬಾಂಬ್‌ನಿಂದ ಉಂಟಾಗಿದೆಯೇ ಅಥವಾ ಹಮಾಸ್ ಉಗ್ರರು ನೇರವಾಗಿ ವಾಹನದ ಮೇಲೆ ಸ್ಫೋಟಕ ಸಾಧನವನ್ನು ಇರಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ತನಿಖಾಧಿಕಾರಿಗಳು ಸಿಇವಿ ಹೊರಗೆ ಸಂಗ್ರಹಿಸಲಾದ ಸ್ಫೋಟಕಗಳು ಸ್ಫೋಟದ ತೀವ್ರತೆಗೆ ಕಾರಣವಾಗಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕಕ್ಕೆ ಸೌದಿ ಶಾಕ್‌, ಪೆಟ್ರೋಡಾಲರ್ ಒಪ್ಪಂದಕ್ಕೆ ಗುಡ್‌ಬೈ – ಡಾಲರ್‌ ವಿಶ್ವದ ಕರೆನ್ಸಿಯಾದ ಕಥೆ ಓದಿ

    ಘಟನೆಯ ಸಮಯದಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ. ಸ್ಫೋಟದ ಸಮಯದಲ್ಲಿ ವಾಹನವು ಚಲಿಸುತ್ತಿತ್ತು ಎಂದು ಐಡಿಎಫ್‌ ತಿಳಿಸಿದೆ. ಹಮಾಸ್‌ ಬಂಡುಕೋರರ ವಿರುದ್ಧ ಇದುವರೆಗೆ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲಿ ಸೈನಿಕರ ಸಾವಿನ ಸಂಖ್ಯೆ 307 ಕ್ಕೆ ಏರಿಕೆಯಾಗಿದೆ.

  • ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು

    ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು

    ಟೆಲ್‌ ಅವೀವ್‌: ಕಳೆದ ಒಂದು ವಾರದಿಂದ ಇಸ್ರೇಲ್‌-ಹಮಾಸ್‌ (Israel Hamas War) ನಡುವೆ ಕದನ ವಿರಾಮ ಏರ್ಪಟ್ಟಿದೆ. ಒತ್ತೆಯಾಳುಗಳ (Hostages) ಬಿಡುಗಡೆಯಾಗಿ 4 ದಿನಗಳಿಗೆ ಸೀಮಿತವಾಗಿದ್ದ ಕದನ ವಿರಾಮ ಅವಧಿ ವಿಸ್ತರಣೆಗೊಂಡಿದೆ. ಈ ನಡುವೆಯೂ ಗಾಜಾಪಟ್ಟಿಯಲ್ಲಿ ಐವರು ಒತ್ತೆಯಾಳುಗಳು ಮೃತಪಟ್ಟಿದ್ದಾರೆ.

    ಐವರು ಒತ್ತೆಯಾಳುಗಳು ಸಾವನ್ನಪ್ಪಿರುವುದಾಗಿ ಇಸ್ರೇಲ್‌ ಸೇನೆ (Israel Army) ಖಚಿತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಒತ್ತೆಯಾಳುಗಳಾದ ಎಲಿಯಾಹು ಮಾರ್ಗಲಿಟ್, ಮಾಯಾ ಗೊರೆನ್, ರೋನೆನ್ ಎಂಗಲ್ ಮತ್ತು ಆರ್ಯೆ ಜಲ್ಮನೋವಿಟ್ಜ್ ಅವರ ಸಾವಿನ ಬಗ್ಗೆ ಕುಟುಂಬದವರಿಗೆ ಇಸ್ರೇಲ್‌ ರಕ್ಷಣಾ ಪಡೆ ಹಾಗೂ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸೇನಾ ವಕ್ತಾರ ಡೇನಿಯಲ್ ಹಗರಿ ತಿಳಿಸಿದ್ದಾರೆ. ಒಫಿರ್‌ ತ್ಸರ್ಪಾತಿ ಎಂದು ಗುರುತಿಸಲಾದ 5ನೇ ವ್ಯಕ್ತಿಯ ಮೃತದೇಹವನ್ನು ಇಸ್ರೇಲ್‌ ಸೇನೆ ಮರಳಿ ಪಡೆದಿದೆ.

    ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದು, 3 ಬ್ಯಾಚ್‌ನಲ್ಲಿ 40ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ಹಮಾಸ್‌ ಬಿಡುಗಡೆ ಮಾಡಿದೆ. ಇನ್ನಷ್ಟು ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ವಿಸ್ತರಿಸಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ

    ಇಸ್ರೇಲ್ ಮತ್ತು ಹಮಾಸ್ (Israel- Hamas) ನಡುವಿನ ಒಪ್ಪಂದದ ಅಡಿಯಲ್ಲಿ 50 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರೆ, 150 ಪ್ಯಾಲೆಸ್ತೀನ್‌ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಹಾಗಾಗಿ ದಿನಗಳ ಕದನ ವಿರಾಮಕ್ಕೆ ಹಮಾಸ್ ಹಾಗೂ ಇಸ್ರೇಲ್ ಒಪ್ಪಿಗೆ ಸೂಚಿಸಿತ್ತು. ಇದನ್ನೂ ಓದಿ: 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್

    ಹಮಾಸ್‌ ಉಗ್ರರ ಗುಂಪು ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್‌ 7 ರಂದು ಗಾಜಾಪಟ್ಟಿಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೂ ದಾಳಿ ಮಾಡಿ ಸುಮಾರು 240 ಒತ್ತೆಯಾಳುಗಳನ್ನು ಅಪಹರಿಸಿದ್ದರು. ಆದ್ರೆ ಇಸ್ರೇಲ್‌ ದಾಳಿಗೆ 15 ಸಾವಿರ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಅದರಲ್ಲಿ 6,150 ಮಕ್ಕಳೂ ಸೇರಿದ್ದಾರೆ. ಅಲ್ಲದೇ 36,000 ಮಂದಿ ಗಾಯಗೊಂಡಿದ್ದು, 7 ಸಾವಿರಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವುದಾಗಿ ಹಮಾಸ್‌ ಹೇಳಿದೆ. ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿ ನೇಮಕ

  • ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ಮಹಿಳಾ ಯೋಧೆ‌ ದಾರುಣ ಸಾವು

    ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ಮಹಿಳಾ ಯೋಧೆ‌ ದಾರುಣ ಸಾವು

    ಟೆಲ್‌ ಅವೀವ್‌: ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Hamas Terrorist) ಇಸ್ರೇಲ್‌ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಪಹರಣಕ್ಕೊಳಗಾದ 19 ವರ್ಷದ ಮಹಿಳಾ ಯೋಧೆಯೊಬ್ಬರು (Israel Soldier) ಕೊಲೆಯಾಗಿರುವುದು ಪತ್ತೆಯಾಗಿದೆ. ಇಸ್ರೇಲ್‌ ರಕ್ಷಣಾ ಪಡೆ ಈ ಬಗ್ಗೆ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

    ಕಾರ್ಪೋರಲ್ ನೋವಾ ಮಾರ್ಸಿಯಾನೊ (19) ಅವರ ಮೃತದೇಹವು ಗಾಜಾಪಟ್ಟಿಯಲ್ಲಿರುವ ಶಿಫಾ ಹಾಸ್ಪಿಟಲ್‌ ಪಕ್ಕದಲ್ಲಿ ಪತ್ತೆಯಾಗಿದೆ. ಹಮಾಸ್‌ ಉಗ್ರರ ಗುಂಪು ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಶಾಲೆಗಳು, ಆಸ್ಪತ್ರೆಗಳಂತಹ ನಾಗರಿಕ ಕಟ್ಟಡಗಳನ್ನು ಹಮಾಸ್‌ ಬಳಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ರಕ್ಷಣಾ ಪಡೆ (IDF) ಅನೇಕ ವೀಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ನಡುವೆಯೇ ಇಸ್ರೇಲ್‌ ಮಹಿಳಾ ಸೈನಿಕರೊಬ್ಬರು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

    ನೋವಾ ಮಾರ್ಸಿಯಾನೊ ಅವರನ್ನ ಅಕ್ಟೋಬರ್‌ 7ರಂದು ಅಪಹರಿಸಿ ಹಮಾಸ್‌ ಉಗ್ರರು ಹತ್ಯೆಗೈದಿದ್ದಾರೆ. ಆಕೆಯ ದೇಹವನ್ನು ಗಾಜಾದ ಶಿಫಾ ಆಸ್ಪತ್ರೆ ಸಮೀಪದಲ್ಲಿ ಬಿಸಾಡಿದ್ದಾರೆ. ಇದನ್ನು ಇಸ್ರೇನ್‌ ಸೇನೆ ಪತ್ತೆಮಾಡಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ. ಅಲ್ಲದೇ ಇಂದು ಗಾಜಾ ಆಸ್ಪತ್ರೆಯ ಸಮೀಪದಲ್ಲೇ ಒತ್ತಾಯಾಳಾಗಿದ್ದ 5 ಮಕ್ಕಳ ತಾಯಿ ಹಮಾಸ್‌ ಉಗ್ರರಿಂದ ಕೊಲ್ಲಲ್ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

    ಹಮಾಸ್‌ ತನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆಸ್ಪತ್ರೆಗಳನ್ನು ಹಮಾಸ್ ಬಳಸುತ್ತದೆ ಎಂಬುದಕ್ಕೆ ತನ್ನ ಪಡೆಗಳು ಪುರಾವೆಗಳನ್ನು ಕಂಡುಕೊಂಡಿವೆ. ಅಲ್ ಶಿಫಾ ಆಸ್ಪತ್ರೆಯ (Al-Shifa Hospital) ಎಂಆರ್‌ಐ ಯೂನಿಟ್‌ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಇಸ್ರೇಲ್‌ ತಿಳಿಸಿದೆ. ಹಮಾಸ್‌ಗೆ ಸೇರಿದ ಬ್ಯಾಗ್‌ಗಳಲ್ಲಿ ಎಕೆ 47, ಗ್ರೆನೇಡ್ ಸೇರಿ ಹಲವು ಶಸ್ತ್ರಾಸ್ತ್ರ ಸಿಕ್ಕಿವೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಇಸ್ರೇಲ್ ಸೇನೆ (Israeli Defence Force) ಬಿಡುಗಡೆ ಮಾಡಿದೆ. ಅಲ್ ಶಿಫಾ ಆಸ್ಪತ್ರೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇಸ್ರೇಲ್ ಸೇನೆ, ಆಸ್ಪತ್ರೆಯ ಇಂಚಿಂಚನ್ನೂ ಜಾಲಾಡುತ್ತಿದೆ. ಅಷ್ಟೇ ಅಲ್ಲ, ಅಲ್ ಶಿಫಾ ಆಸ್ಪತ್ರೆ ಮೇಲೆ ಬುಲ್ಡೋಜರ್‌ಗಳು ನುಗ್ಗಿವೆ ಎಂದು ವರದಿಯಾಗಿದೆ.

  • ಗಾಜಾ ನಗರವನ್ನೇ ವಿಭಜಿಸಿದ ಇಸ್ರೇಲ್‌ – 2 ನಗರಗಳ ಮಧ್ಯೆ ಸಂಪರ್ಕ ಕಡಿತ

    ಗಾಜಾ ನಗರವನ್ನೇ ವಿಭಜಿಸಿದ ಇಸ್ರೇಲ್‌ – 2 ನಗರಗಳ ಮಧ್ಯೆ ಸಂಪರ್ಕ ಕಡಿತ

    ಟೆಲ್‌ ಅವೀವ್‌/ ಅಂಕಾರಾ: ಹಮಾಸ್ ಉಗ್ರರನ್ನು (Hamas Terrorist) ಸರ್ವನಾಶ ಮಾಡುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಇಸ್ರೇಲ್ (Israel) ಗಾಜಾ ಮೇಲೆ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ಹೊತ್ತಲ್ಲಿಯೇ ಮಹತ್ವದ ಬೆಳವಣಿಗೆ ನಡೆದಿದ್ದು ಗಾಜಾ ನಗರವನ್ನು ಎರಡಾಗಿ ವಿಭಜಿಸಿರುವುದಾಗಿ (Split Gaza in Two) ಇಸ್ರೇಲ್ ಸೇನೆ ಘೋಷಿಸಿದೆ.

    ಇದು ಅತ್ಯಂತ ಪ್ರಮುಖ ಘಟ್ಟ. ನಾವು ಇನ್ನಷ್ಟು ಜೋರಾಗಿ ದಾಳಿ ಮಾಡಲಿದ್ದೇವೆ ಎಂದು ಪ್ರಕಟಿಸಿದೆ. ಈಗಾಗಲೇ ದಕ್ಷಿಣ ಗಾಜಾ ಪ್ರಾಂತ್ಯವನ್ನು ತಲುಪಿರುವ ಐಡಿಎಫ್ (IDF) ಮುಂದಿನ 48 ಗಂಟೆಯಲ್ಲಿ ಉತ್ತರ ದಿಕ್ಕಿನಿಂದಲೂ ಗಾಜಾವನ್ನು ಪ್ರವೇಶಿಸುವ ಸಾಧ್ಯತೆಯಿದೆ. ನಾವು ಗೆಲ್ಲುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಘೋಷಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಿಯರ್‌ ಅಡ್ಮಿರಲ್‌ ಡೆನಿಯಲ್‌ ಹಗರಿ, ಇಸ್ರೇಲ್ ಸೇನೆಯು ಗಾಜಾ ನಗರವನ್ನು ಸುತ್ತುವರೆದಿದೆ. ಮುತ್ತಿಗೆ ಹಾಕಿದ ನಂತರ ಉತ್ತರ ಗಾಜಾ ಮತ್ತು ದಕ್ಷಿಣ ಗಾಜಾ ಎಂದು ವಿಭಜಿಸಲಾಗಿದೆ. ಎರಡು ನಗರಗಳ ಮಧ್ಯೆ ಸಂಪರ್ಕ ಕಡಿತ ಮಾಡಲಾಗಿದೆ. ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇದು ಮಹತ್ವದ ಹಂತ ಎಂದು ಹೇಳಿದರು.

    ಇಸ್ರೇಲ್‌ ಮಾಧ್ಯಮಗಳ ಪ್ರಕಾರ ಮುಂದಿನ 48 ಗಂಟೆಯಲ್ಲಿ ಇಸ್ರೇಲ್‌ ಸೇನೆ ಗಾಜಾ ನಗರದ ಮೇಲೆ ದಾಳಿ ನಡೆಸಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ಟರ್ಕಿಯಲ್ಲಿ ದಾಳಿ: ಹಮಾಸ್-ಇಸ್ರೇಲ್ ಯುದ್ಧದ ಪ್ರಭಾವ ಟರ್ಕಿಯಲ್ಲಿ (Turkey) ಕಾಣಿಸತೊಡಗಿದೆ. ಟರ್ಕಿಯಲ್ಲಿ ಪ್ಯಾಲೆಸ್ತೇನ್ ಬೆಂಬಲಿಗರು ಅಮೆರಿಕಾದ ವಾಯುನೆಲೆ (USA Airbase) ಮೇಲೆ ದಾಳಿಗೆ ಯತ್ನಿಸಿದ್ದಾರೆ. ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಏರ್‌ಬೇಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

     

    ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸುತ್ತಾ, ಪೊಲೀಸರ ಮೇಲೆ ಕಲ್ಲು, ಕುರ್ಚಿಗಳನ್ನು ಎಸೆದಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್, ಜಲಫಿರಂಗಿ ಬಳಸಿದ್ದಾರೆ. ಅಮೆರಿಕ ವಿದೇಶಾಂಗ ಮಂತ್ರಿ ಆಂಟನಿ ಬ್ಲಿಂಕನ್ ಅಂಕಾರಾಗೆ ಕಾಲಿಡುವ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದು ವಿಶೇಷ.

  • ಹಮಾಸ್ ರಾಕೆಟ್ ಲಾಂಚರ್‌ಗಳು ಧ್ವಂಸ – ಇಸ್ರೇಲ್ ಬಳಸಿದ Iron Sting ಬಾಂಬ್ ಎಷ್ಟು ಪವರ್‌ಫುಲ್?

    ಹಮಾಸ್ ರಾಕೆಟ್ ಲಾಂಚರ್‌ಗಳು ಧ್ವಂಸ – ಇಸ್ರೇಲ್ ಬಳಸಿದ Iron Sting ಬಾಂಬ್ ಎಷ್ಟು ಪವರ್‌ಫುಲ್?

    ಟೆಲ್ ಅವೀವ್: ತನ್ನನ್ನು ಕೆಣಕಿದ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಬಾಂಬ್ (Israel Bomb) ದಾಳಿಯನ್ನು ಮುಂದುವರಿಸಿದೆ. ಈ ನಡುವೆ ಇಸ್ರೇಲ್ ವಾಯುಪಡೆಯು ಇದೇ ಮೊದಲ ಬಾರಿಗೆ ಅತ್ಯಂತ ಶಕ್ತಿಶಾಲಿ `ಐರನ್ ಸ್ಟಿಂಗ್’ (Iron Sting) ಬಾಂಬ್ ಅನ್ನು ಪ್ರಯೋಗಿಸಿ ದಾಳಿ ಮಾಡಿದೆ.

    ಇಸ್ರೇಲ್ ವಾಯುಪಡೆಯ ಮ್ಯಾಗ್ಲಾನ್ ಘಟಕವು ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ರಾಕೆಟ್ ಲಾಂಚರ್‌ಗಳನ್ನ ಗುರಿಯಾಗಿಸಲು ಮತ್ತು ಉಗ್ರರನ್ನ ಹತ್ಯೆಗೈಯಲು ಇಸ್ರೇಲ್ ಈ ಅಸ್ತ್ರ ಪ್ರಯೋಗಿಸಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದ ಅಗ್ನಿವೀರ್‌ ಹುತಾತ್ಮ – ಸೇನೆಯಿಂದ ಗೌರವ

    ವಾಯುಪಡೆಯ ಸಹಕಾರದೊಂದಿಗೆ ಮ್ಯಾಗ್ಲಾನ್ ಘಟಕವು `ಸ್ಟೀಲ್ ಸ್ಟಿಂಗ್’ ಹೆಸರಿನಿಂದ ಕರೆಯಲ್ಪಡುವ ಮೋರ್ಟರ್ ಬಾಂಬ್ ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಡಜನ್‌ಗಟ್ಟಲೇ ಭಯೋತ್ಪಾದಕರನ್ನು ಹತ್ಯೆಗೈದಿದೆ. ಅಲ್ಲದೇ ಹಮಾಸ್ ಉಗ್ರರ (Hamas Terrorists) ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿಯೂ ಯಶಸ್ವಿಯಾಗಿದೆ. ಇದರೊಂದಿಗೆ `ಸ್ಟೀಲ್ ಸ್ಟಿಂಗರ್’ ಬಳಸಿಕೊಂಡು ರಾಕೆಟ್ ಲಾಂಚರ್ ಮೇಲಿನ ದಾಳಿಯನ್ನು ಚಿತ್ರೀಕರಿಸಿ ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

    ಕೇವಲ 14 ಸೆಕೆಂಡುಗಳ ವೀಡಿಯೋದಲ್ಲಿ 120 MM ಪವರ್‌ಫುಲ್ ಮಾರ್ಟರ್ ಶತ್ರು ಸೇನೆಯ ರಾಕೆಟ್ ಲಾಂಚರ್‌ಗಳನ್ನ (Rocket Launchers) ಬ್ಲಾಸ್ಟ್ ಮಾಡುತ್ತಿರುವುದನ್ನು ತೋರಿಸಿದೆ. ಸದ್ಯ ಈ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: 25 ವರ್ಷಗಳ ಒಡನಾಟಕ್ಕೆ ಬ್ರೇಕ್‌ – BJPಗೆ ನಟಿ ಗೌತಮಿ ತಡಿಮಲ್ಲ ಗುಡ್‍ಬೈ

    ಮುಖ್ಯವಾಗಿ `ಐರನ್ ಸ್ಟಿಂಗ್’ ಎಂಬುದು 120 MM ಯುದ್ಧ ಸಾಮಗ್ರಿಯಾಗಿದ್ದು, ಲೇಸರ್ ಮತ್ತು ಜಿಪಿಎಸ್ ನಿಂದ ಮಾರ್ಗದರ್ಶನ ಮಾಡಬಹುದಾಗಿದೆ (ಕಮಾಂಡಿಂಗ್ ಅಥವಾ ಗೈಡ್). 12 ಕಿಮೀವರೆಗಿನ ದಾಳಿ ಸಾಮರ್ಥ್ಯಗಳನ್ನು ಹೊಂದಿದೆ. 2021ರಲ್ಲಿ ಅಮೆರಿಕದ ಪ್ರತಿಷ್ಠಿತ ಎಲ್ಬಿಟ್ ಸಿಸ್ಟಮ್ಸ್ ಕಂಪನಿ ಈ ಅಸ್ತ್ರವನ್ನು ಅಭಿವೃದ್ಧಿಪಡಿಸಿ, ಮೊದಲಬಾರಿಗೆ ಬಹಿರಂಗಪಡಿಸಿತ್ತು. ಇದೀಗ ಇಸ್ರೇಲ್ ದಾಳಿಯಲ್ಲೂ ಈ ಪವರ್ ಫುಲ್ ಅಸ್ತ್ರವನ್ನು ಬಳಸಲಾಗುತ್ತಿದೆ. ಇದನ್ನೂ ಓದಿ: Israel Hamas War: ಸಂಕಷ್ಟದಲ್ಲಿರುವ ಪ್ಯಾಲೆಸ್ತೀನಿಯರಿಗೆ ಭಾರತದಿಂದ ಮಾನವೀಯ ನೆರವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]