Tag: ID Card

  • ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ – ಐಡಿ ಕಾರ್ಡ್ ವಿತರಣೆಗೆ ಚಿಂತನೆ

    ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ – ಐಡಿ ಕಾರ್ಡ್ ವಿತರಣೆಗೆ ಚಿಂತನೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪಿಜಿಗಳು (PG) ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿವೆ. ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟಿಸುತ್ತಿದ್ದಂತೆ ಪಿಜಿ ಅಸೋಸಿಯೇಷನ್ ಹೊಸ ನಿರ್ಧಾರಕ್ಕೆ ಬಂದಿದೆ. ಪೊಲೀಸರಿಗೆ ನೆರವಾಗಲು ಹಾಗೂ ಪಿಜಿಯಲ್ಲಿದ್ದವರ ಸುರಕ್ಷತೆಗೆ ಐಡಿ ಕಾರ್ಡ್ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿದೆ.

    ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಪಿಜಿ ನಿವಾಸಿಗಳ ಸುರಕ್ಷತೆ, ಭದ್ರತೆಯ ವಿಚಾರಕ್ಕೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿತ್ತು. ಇದೀಗ ಪೊಲೀಸರಿಗೆ ಸಹಾಯಕಾರಿಯಾಗಲು ಪಿಜಿ ಅಸೋಸಿಯೇಷನ್ ಮತ್ತಷ್ಟು ಸ್ಮಾರ್ಟ್ ಪ್ಲ್ಯಾನ್ ಮಾಡಿದೆ. ಪಿಜಿಯಲ್ಲಿ ವಾಸ ಮಾಡುವವರಿಗೆ ಇನ್ಮುಂದೆ ಪಿಜಿ ಅಡ್ಮಿಶನ್‌ನ ಐಡಿ ಕಾರ್ಡ್‌ ನೀಡಲು ಚಿಂತನೆ ನಡೆಸುತ್ತಿದೆ. ಜೊತೆಗೆ ಫ್ಯಾಮಿಲಿ ಹಾಗೂ ಸ್ನೇಹಿತರ ಫೋನ್ ನಂಬರ್‌ಗಳನ್ನು ಸಂಗ್ರಹಿಸಿಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ – ರಾಜ್ಯದ ಹಲವೆಡೆ ಮನೆ, ಕಚೇರಿಗಳ ಮೇಲೆ ದಾಳಿ

    ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪಾಲಿಕೆ, ಬೆಸ್ಕಾಂ, ಜಲಮಂಡಳಿ ಪ್ರಕಾರ 50 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪೊಲೀಸರ ತನಿಖೆ ಹಾಗೂ ಪಿಜಿ ವಾಸಿಗಳ ಸುರಕ್ಷತೆಯ ನಿಟ್ಟಿನಲ್ಲಿ ಆಯಾ ಪಿಜಿಗಳಲ್ಲಿ ಅಡ್ಮಿಷನ್ ಐಡಿ ಕಾರ್ಡ್ ವಿತರಿಸಿ ಅದನ್ನು ಪ್ರತಿ ತಿಂಗಳಿಗೊಮ್ಮೆ ರಿನಿವಲ್ ಮಾಡೋಕೆ ಪಿಜಿ ಅಸೋಸಿಯೇಷನ್ ನಿರ್ಧರಿಸಿದೆ. ನ್ನು ಪಿಜಿ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಪ್ಲ್ಯಾನ್ ಅನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಪಿಜಿ ಮಾಲೀಕರ ಐಡಿ ಕಾರ್ಡ್ ಪ್ಲ್ಯಾನ್, ಪೊಲೀಸರ ತನಿಖೆಗಳಿಗೆ ಮತ್ತಷ್ಟು ಸಹಾಯಕಾರಿಯಾಗಲಿದೆ. ಇದನ್ನೂ ಓದಿ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿ

  • ಜಮೀನಿಗೂ ಆಧಾರ್‌ ರೀತಿಯ ಐಡಿ ಕಾರ್ಡ್‌ – ಯುಎಲ್‌ಪಿಐಎನ್‌ ಜಾರಿಗೆ ಮುಂದಾದ ಕೇಂದ್ರ

    ಜಮೀನಿಗೂ ಆಧಾರ್‌ ರೀತಿಯ ಐಡಿ ಕಾರ್ಡ್‌ – ಯುಎಲ್‌ಪಿಐಎನ್‌ ಜಾರಿಗೆ ಮುಂದಾದ ಕೇಂದ್ರ

    ನವದೆಹಲಿ: ಜಮೀನಿಗೂ ಆಧಾರ್‌ ರೀತಿಯ ಐಡಿಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ದೇಶಾದ್ಯಂತ 2022ರ ಒಳಗಡೆ ಜಮೀನು, ಜಾಗ ಮತ್ತು ಪ್ಲಾಟ್‌ಗಳಿಗೆ 14 ಸಂಖ್ಯೆಗಳಿರುವ ಯನೀಕ್‌ ಲ್ಯಾಂಡ್‌ ಪಾರ್ಸಲ್‌ ಐಡಿಂಟಿಫಿಕೇಶನ್‌ ನಂಬರ್‌(ಯುಎಲ್‌ಪಿಐಎನ್‌) ಅನ್ನು ಭೂ ಮಾಲೀಕರಿಗೆ ನೀಡಲಾಗುವುದು ಎಂದು ಕೇಂದ್ರ ಭೂ ಸಂಪನ್ಮೂಲಗಳ ಇಲಾಖೆ ಗ್ರಾಮೀಣಾಭಿವೃದ್ಧಿ ಸ್ಥಾಯಿ ಸಮಿತಿಗೆ ತಿಳಿಸಿದೆ. ಕಳೆದ ವಾರ ಲೋಕಸಭೆಗೂ ಈ ಮಾಹಿತಿಯನ್ನು ನೀಡಲಾಗಿದೆ.

    ಡಿಜಿಟಲ್‌ ಇಂಡಿಯಾ ಲ್ಯಾಂಡ್‌ ರೆಕಾರ್ಡ್ಸ್‌ ಮಾಡರ್ನ್‌ನೈಷನ್‌ ಪ್ರೋಗ್ರಾಮ್‌ 2008 ರಲ್ಲೇ ಆರಂಭಗೊಂಡಿದ್ದರೂ ಹಲವು ಬಾರಿ ಜಾರಿಗೆಯಾಗದೇ ಮುಂದೂಡಿಕೆಯಾಗಿತ್ತು.

    2019ರಲ್ಲೇ ಇದನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿತ್ತು. ಪ್ರಸ್ತುತ ದೇಶದ 10 ರಾಜ್ಯಗಳಲ್ಲಿ ಈ ಯೋಜನೆ ಜಾರಿಯ ಹಂತದಲ್ಲಿದ್ದು 2022ರ ಮಾರ್ಚ್‌ ಒಳಗಡೆ ಎಲ್ಲ ರಾಜ್ಯಗಳಲ್ಲಿ ಇದು ಜಾರಿಯಾಗಬೇಕೆಂಬ ಗುರಿಯನ್ನು ಹಾಕಲಾಗಿದೆ.

    ಯಾಕೆ ನಂಬರ್‌?
    ಭೂಮಿ ದಾಖಲೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಸಂಖ್ಯೆಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಲಿದೆ. ಭೂಮಿ ಒತ್ತುವರಿ, ವಂಚನೆ ಇತ್ಯಾದಿಗಳು ಕಡಿಮೆಯಾಗಲಿದೆ. ವಿಶೇಷವಾಗಿ ದಾಖಲೆಗಳು ಇಲ್ಲದ ಗ್ರಾಮೀಣ ಭೂ ಮಾಲೀಕರಿಗೆ ಇದರಿಂದ ಲಾಭವಾಗಲಿದೆ. ಬಹಳ ಮುಖ್ಯವಾಗಿ ದೇಶದಲ್ಲಿರುವ ಕೃಷಿ ಭೂಮಿ, ಇನ್ನಿತರ ಭೂ ಒಡೆತನದ ದಾಖಲೆಗಳು ಸರ್ಕಾರಕ್ಕೆ ಸುಲಭವಾಗಿ ಸಿಗಲಿದೆ.

    ಈ ಸಂದರ್ಭದಲ್ಲಿ ಭೂಮಿಯ ಒಡೆತನದ ದಾಖಲೆಯ ಜೊತೆ ಜನರ ಆಧಾರ್‌ ಸಂಖ್ಯೆಯನ್ನು ಜೋಡಿಸಲಾಗುತ್ತದೆ. ಆದರೆ ಇದು ಐಚ್ಛಿಕವಾಗಿದ್ದು, ಇದಕ್ಕೆ ಪ್ರತಿ ದಾಖಲೆಗೆ 3 ರೂ., ಆಧಾರ್‌ ದಾಖಲೆಗಳನ್ನು ಸೀಡ್‌ ಮಾಡಲು 5 ರೂ. ಶುಲ್ಕ ವಿಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

  • ದೇಶದ ಪ್ರಜೆಗಳಿಗೆ ಸಿಗಲಿದೆ ಆರೋಗ್ಯ ಐಡಿ ಕಾರ್ಡ್‌

    ದೇಶದ ಪ್ರಜೆಗಳಿಗೆ ಸಿಗಲಿದೆ ಆರೋಗ್ಯ ಐಡಿ ಕಾರ್ಡ್‌

    – ಒಂದೇ ಕ್ಲಿಕ್‌ನಲ್ಲಿ ಸಿಗಲಿದೆ ರೋಗಿಯ ಸಂಪೂರ್ಣ ಆರೋಗ್ಯ ಮಾಹಿತಿ
    – ಎನ್‌ಡಿಎಚ್‌ಎಂ ಆರಂಭಿಸಲು ಸರ್ಕಾರ ಸಿದ್ಧತೆ
    – ಎಲ್ಲ ಪ್ರಜೆಗಳಿಗೆ ಕಾರ್ಡ್‌ ಕಡ್ಡಾಯವಲ್ಲ

    ನವದೆಹಲಿ: ಆಸ್ಪತ್ರೆಗೆ ಅಡ್ಮಿಟ್‌ ಆಗಿರುವ ರೋಗಿಗೆ ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು? ಏನು ಚಿಕಿತ್ಸೆ ನೀಡಲಾಗಿತ್ತು? ಆ ಸಮಯದಲ್ಲಿ ರೋಗಿಯ ಆರೋಗ್ಯ ಹೇಗಿತ್ತು? ಯಾವ ಕಾರಣಕ್ಕೆ ಏನು ಪರೀಕ್ಷೆ ಮಾಡಿಸಲಾಗಿತ್ತು ಎಲ್ಲವೂ ಒಂದೇ ಕ್ಲಿಕ್‌ ನಲ್ಲಿ ಸಿಗಲಿದೆ.

    ಹೌದು, ಕೇಂದ್ರ ಸರ್ಕಾರ ರಾಷ್ಟ್ರೀಯ ಡಿಜಿಟಲ್‌ ಹೆಲ್ತ್‌ ಮಿಷನ್‌(ಎನ್‌ಡಿಎಚ್‌ಎಂ) ಆರಂಭಿಸಲು ಮುಂದಾಗಿದೆ. ಈ ಸೇವೆ ಆರಂಭಗೊಂಡರೆ ದೇಶದ ಪ್ರತಿಯೊಬ್ಬ ಪ್ರಜೆಗೆ ಆರೋಗ್ಯ ಐಡಿ ಕಾರ್ಡ್‌ ಸಿಗಲಿದೆ. ಇದನ್ನೂ ಓದಿ:ಮರಣ ಪ್ರಮಾಣ ಇಳಿಕೆ- 4 ತಿಂಗಳ ಬಳಿಕ ವೆಂಟಿಲೇಟರ್‌ ರಫ್ತಿಗೆ ಅನುಮತಿ

     

    ಈಗಾಗಲೇ ಪ್ರಸ್ತಾಪ ಸಿದ್ಧಗೊಂಡಿದ್ದು, ಈ ವಾರವೇ ಕ್ಯಾಬಿನೆಟ್‌ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿುವರು ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಐಡಿ ಕಾರ್ಡ್‌ ಎಲ್ಲರಿಗೂ ಕಡ್ಡಾಯವಲ್ಲ. ಜನರು ಸ್ವಇಚ್ಛೆಯಿಂದ ಕಾರ್ಡ್‌ ಮಾಡಿಸಬಹುದು. ಆರಂಭದಲ್ಲಿ ಹೆಲ್ತ್‌ ಐಡಿ, ವೈಯಕ್ತಿಕ ಆರೋಗ್ಯ ಮಾಹಿತಿ, ಡಿಜಿ ಡಾಕ್ಟರ್‌ ಮತ್ತು ಹೆಲ್ತ್‌ ರಿಜಿಸ್ಟ್ರಿ ಇರಲಿದೆ. ನಂತರದ ದಿನಗಳಲ್ಲಿ ಇ ಫಾರ್ಮಾಸಿ ಮತ್ತು ಟೆಲಿಮೆಡಿಸಿನ್‌ ಸೇವೆಗಳನ್ನು ಸೇರಿಸಲಾಗುತ್ತದೆ. ಈಗಾಗಲೇ ಹಲವು ದೇಶಗಳಲ್ಲಿ ಸರ್ಕಾರವೇ ಈ ರೀತಿಯ ಆರೋಗ್ಯ ಕಾರ್ಡ್‌ಗಳನ್ನು ನೀಡಿವೆ.

    ಕೆಲಸ ಹೇಗೆ? 
    ಈ ಸೇವೆ ಬೇಕಾದವರು ವೆಬ್‌ಸೈಟ್‌/ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ವಿವರಗಳನ್ನು ನೀಡಬೇಕಾಗುತ್ತದೆ. ಈ ವಿವರಗಳನ್ನು ಆ ವ್ಯಕ್ತಿ ಶೇರ್‌ ಮಾಡಿದರೆ ಮಾತ್ರ ಉಳಿದವರಿಗೆ ಸಿಗುತ್ತದೆ. ಹಣಕಾಸು ಸಚಿವಾಲಯ ಈ ಪ್ರಸ್ತಾಪಕ್ಕೆ 470 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಎನ್‌ಎಚ್‌ಎಯಲ್ಲಿ ಅಂತಿಮಗೊಂಡ ಬಳಿಕ ಈ ಪ್ರಸ್ತಾಪ 400 ಕೋಟಿ ರೂ. ಗಿಂತ ಜಾಸ್ತಿ ಆಗಲಾರದು ಎಂದು ವರದಿಯಾಗಿದೆ.

    ಲಾಭ ಹೇಗೆ? 
    ಈ ಸೇವೆ ದೇಶವ್ಯಾಪಿ ಇರಲಿದೆ. ವ್ಯಕ್ತಿ ಯಾವುದೇ ಮೂಲೆಗೆ ಹೋದಾಗ ಸಮಸ್ಯೆಯಾಗಿ ಆಸ್ಪತ್ರೆ ಸೇರಿದಾಗ ಆತನ ಆರೋಗ್ಯದ ಮಾಹಿತಿ ಕೂಡಲೇ ಸಿಗುವುದಿಲ್ಲ. ಆದರೆ ಈ ಆಪ್‌ನಲ್ಲಿ ವಿವರ ನೀಡಿದ್ದರೆ ಕೂಡಲೇ ವೈದ್ಯರಿಗೆ ಈ ಹಿಂದೆ ರೋಗಿಗೆ ಏನಾಗಿತ್ತು? ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು? ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು ಈ ಎಲ್ಲ ವಿವರಗಳು ಕೂಡಲೇ ಸಿಗಲಿದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

  • ಸೇನಾ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ- ಗುರು ಪತ್ನಿ

    ಸೇನಾ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ- ಗುರು ಪತ್ನಿ

    – ಭಾರತೀಯ ಸೇನೆಗೆ ಧನ್ಯವಾದ ಸಲ್ಲಿಕೆ

    ಮಂಡ್ಯ: ನನ್ನ ಪತಿಯ ಸಾವಿಗೆ ಕಾರಣನಾದ ಮಾಸ್ಟರ್ ಮೈಂಡ್ ಉಗ್ರನ ಹತ್ಯೆ ಖುಷಿ ತಂದಿದೆ ಎಂದು ಗುಡಿಗೆರೆ ಕಾಲೋನಿಯಲ್ಲಿ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಸೇನೆಗೆ ಧನ್ಯವಾದ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಲಾವತಿ ಅವರು, ಉಗ್ರನ ಹತ್ಯೆಗೆ ಖುಷಿ ಪಡುತ್ತೇನೆ. ಈ ದೇಶದಲ್ಲಿ ಉಗ್ರ ಎಂಬ ಪದ ಇತಿಹಾಸ ಸೇರಬೇಕು. ಉಗ್ರರು ಇದ್ದರು ಎಂಬುದಷ್ಟೇ ಮಾತನಾಡಬೇಕು. ಆದರೆ ಉಗ್ರರು ಇನ್ನೂ ಇದ್ದಾರೆ ಎಂಬ ಪದ ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾವು ಕೆಆರ್‍ಎಸ್‍ಗೆ ಹೋಗಿದ್ದೇವು. ಅಲ್ಲಿ ನಾನು ಕನ್ನಂಬಾಡಿ ಕಟ್ಟೆಯ ಮೇಲೆ ನೋಡಬೇಕು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಕೇಳಿದ್ದೆ. ಅದಕ್ಕೆ ನನ್ನ ಪತಿ ಆ ರೀತಿಯೆಲ್ಲ ಹೋಗಬಾರದು ಎಂದು ಹೇಳಿದ್ದರು. ಈ ವೇಳೆ ನಮ್ಮ ಜೊತೆ ಬಂದಿದ್ದ ಸ್ನೇಹಿತರು ನಿಮ್ಮ ಐಡಿ ಕಾರ್ಡ್ ತೋರಿಸಿ ಕರೆದುಕೊಂಡು ಹೋಗಿ ಎಂದು ಕೇಳಿದ್ದರು. ಆಗ ನನ್ನ ಪತಿ ಸೇನೆಯ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದ್ದರು. ನಾನು ದೇವಸ್ಥಾನಕ್ಕೆ ಹೋದಾಗ ತುಂಬಾ ಜನರಿದ್ದರೂ, ಅಲ್ಲೂ ಕಾರ್ಡ್ ತೋರಿಸುತ್ತಿರಲಿಲ್ಲ. ಲೈನಿನಲ್ಲೇ ನಿಂತು ಹೋಗುತ್ತಿದ್ದರು. ಅವರು ಕುಟುಂಬದವರಿಗಾಗಿ ಸೇನೆ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ ಎಂದು ಪತಿಯ ಕರ್ತವ್ಯ ನಿಷ್ಠೆಯ ಬಗ್ಗೆ ಹೇಳಿದ್ದಾರೆ.

    ದೇಶದ ಜನ ಕೇಳುತ್ತಿದ್ದಾರೆ ಎಂದು ಸೈನಿಕರು ಈಗಷ್ಟೇ ಉಗ್ರರ ವಿರುದ್ಧ ದಾಳಿ ಮಾಡಿ ಸುಮ್ಮನಾಗಬಾರದು. ಉಗ್ರರ ಮೇಲಿನ ದಾಳಿ ಅವರ ನಾಶವಾಗುವವರೆಗೂ ನಿರಂತರವಾಗಿರಬೇಕು. ಉಗ್ರರ ವಿರುದ್ಧ ಹೋರಾಡುತ್ತಿರುವ ಯೋಧರು ಸುರಕ್ಷಿತವಾಗಿರಲಿ. ನನ್ನ ಪರಿಸ್ಥಿತಿ ಅವರ ಮನೆಯವರಿಗೆ ಬಾರದಿರಲಿ. ಸರ್ಕಾರ ನಮ್ಮ ಸೈನಿಕರಿಗೆ ಹೆಚ್ಚಿನ ರಕ್ಷಣೆ ನೀಡಲಿ ಎಂದು ಹುತಾತ್ಮ ಯೋಧನ ಪತ್ನಿ ಕಲಾವತಿ ಹೇಳಿದರು.

    https://www.youtube.com/watch?v=5LubBl3CkXQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಗ್ಗದಿಂದ ಬಿಗಿದು ಚಾಕುವಿನಿಂದ ಕತ್ತು ಕೊಯ್ದು ಯೋಧರಿಂದಲೇ ಯೋಧನ ಕೊಲೆ!

    ಹಗ್ಗದಿಂದ ಬಿಗಿದು ಚಾಕುವಿನಿಂದ ಕತ್ತು ಕೊಯ್ದು ಯೋಧರಿಂದಲೇ ಯೋಧನ ಕೊಲೆ!

    ಬೆಂಗಳೂರು: ಯೋಧರೊಬ್ಬರನ್ನು ಹಗ್ಗದಿಂದ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತು ಕೊಯ್ದು ಇಬ್ಬರು ಯೋಧರೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ವಿವೇಕನಗರದ ಎಎಸ್‍ಸಿ ಸೆಂಟರ್ ಮತ್ತು ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಪಂಕಜ್ ಕೊಲೆಯಾದ ಯೋಧ. ಮೂರು ದಿನಗಳ ಹಿಂದೆ ಪಂಕಜ್ ರನ್ನು ಮುರಳಿಕೃಷ್ಣ ಹಾಗೂ ಧನರಾಜ್ ಎಂಬ ಯೋಧರೇ ಕೊಲೆ ಮಾಡಿದ್ದರು. ಪಂಕಜ್ ಮೂಲತ ಉತ್ತರಪ್ರದೇಶದವರಾಗಿದ್ದು, ಆರೋಪಿಗಳಿಬ್ಬರು ಆಂಧ್ರಪ್ರದೇಶದವರು ಎಂದು ತಿಳಿದು ಬಂದಿದೆ.

    ಇದೇ ತಿಂಗಳು 23ರಂದು ಘಟನೆ ನಡೆದಿದ್ದು, ಪಂಕಜ್ ಕೊಠಡಿಯಲ್ಲಿ ಮಲಗಿದ್ದಾಗ ಹಗ್ಗದಿಂದ ಪಂಕಜ್ ನ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತು ಕೊಯ್ದು ಆರೋಪಿಗಳಾದ ಮುರುಳಿಕೃಷ್ಣ ಮತ್ತು ಧನರಾಜ್ ಕೊಲೆಗೈದಿದ್ದಾರೆ ಎಂದು ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ.

    ಏನಿದು ಪ್ರಕರಣ?
    ಮುರುಳಿಕೃಷ್ಣ ಕೊಲೆಯಾದ ಪಂಕಜ್ ಐಡಿ ಕಾರ್ಡ್ ನನ್ನು ಕದ್ದಿದ್ದ. ಐಡಿ ಕಾರ್ಡ್ ಕದ್ದ ನಂತರ ಈ ಬಗ್ಗೆ ಸೇನೆಯಲ್ಲಿ ಆಂತರಿಕ ತನಿಖೆ ಎದುರಿಸುತ್ತಿದ್ದ. ಕದ್ದಿರುವ ಬಗ್ಗೆ ಸಾಕ್ಷಿ ಹೇಳದಂತೆ ಪಂಕಜ್ ಅವರಿಗೆ ಧಮ್ಕಿ ಹಾಕಿದ್ದ. ಈ ಪ್ರಕರಣದಿಂದ ಹಿಂದೆ ಸರಿಯುವಂತೆ ಸಹ ಇಬ್ಬರು ಬೆದರಿಕೆ ಹಾಕಿದ್ದರು. ಆದರೆ ಪಂಕಜ್ ಇದಕ್ಕೆ ಒಪ್ಪದೇ ಇದ್ದಾಗ ಒಂದೇ ಊರಿನ ಸ್ನೇಹಿತನ ಜೊತೆ ಸೇರಿ ಮುರುಳಿಕೃಷ್ಣ ಕೊಲೆ ಮಾಡಿದ್ದಾನೆ.

    ಮುರುಳಿಕೃಷ್ಣ ಹಾಗೂ ಧನರಾಜ್, ಪಂಕಜ್ ರನ್ನು ಕೊಲೆ ಮಾಡಿದ ನಂತರ ಮೃತದೇಹವನ್ನು ಆರ್ಮಿ ಟ್ರಕ್ ನಲ್ಲಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾರೆ. ನಂತರ ಏನು ತಿಳಿಯದಂತೆ ನಾಟಕವಾಡಿ ಕೊಠಡಿಗೆ ಬಂದು ಮಲಗಿಕೊಂಡಿದ್ದಾರೆ ಎಂದು ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ.

    ಈ ಬಗ್ಗೆ ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.