Tag: ICU

  • ಇದು ಭಾರತದ ಚೈತನ್ಯ: ಸಾರ್ವಜನಿಕರ ಕಾರ್ಯಕ್ಕೆ ಮೋದಿ ಮೆಚ್ಚುಗೆ

    ಇದು ಭಾರತದ ಚೈತನ್ಯ: ಸಾರ್ವಜನಿಕರ ಕಾರ್ಯಕ್ಕೆ ಮೋದಿ ಮೆಚ್ಚುಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿತ್ಯವೂ ಹೋರಾಡುತ್ತಿದ್ದಾರೆ. ಈ ಪೈಕಿ ವೈದ್ಯೆಯೊಬ್ಬರಿಗೆ ಸ್ಥಳೀಯರು ತೋರಿದ ಗೌರವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವಿಡಿಯೋವನ್ನು ಟ್ವೀಟ್ ಮಾಡಿದ್ದ ಚಂಡೀಗಢ ಬಿಜೆಪಿ ಕಾರ್ಯದರ್ಶಿ ದೀಪಕ್ ಮಲ್ಹೋತ್ರಾ, ಮಹಿಳಾ ವೈದ್ಯೆಯೊಬ್ಬರು ಕೊರೊನಾ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಬರೋಬ್ಬರಿ 20 ದಿನಗಳ ಕಾಲ ಚಿಕಿತ್ಸೆ ನೀಡಿ ಮನೆಗೆ ವಾಪಸ್ ಆದರು. ಈ ವೇಳೆ ಅವರಿಗೆ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಜನರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂದು ಬರೆದುಕೊಂಡಿದ್ದರು.

    ದೀಪಕ್ ಮಲ್ಹೋತ್ರಾ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ರೀತಿಯ ಕ್ಷಣಗಳು ಹೃದಯವನ್ನು ಸಂತೋಷಪಡಿಸುತ್ತವೆ. ಇದು ಭಾರತದ ಚೈತನ್ಯ, ಸ್ಫೂರ್ತಿ. ಕೋವಿಡ್-19 ವಿರುದ್ಧ ನಾವು ಧೈರ್ಯದಿಂದ ಹೋರಾಟ ನಡೆಸಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೆಲಸ ಮಾಡುವವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 1,993 ಮಂದಿಗೆ ಸೋಂಕು ದೃಢಪಟ್ಟಿದ್ದು, 73 ಮಂದಿ ಸಾನ್ನಪ್ಪಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,147ಕ್ಕೆ ಏರಿಕೆ ಕಂಡಿದೆ.

    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿರುವ ಪ್ರಕಾರ, ಕಳೆದ 14 ದಿನಗಳಲ್ಲಿ ಕೋವಿಡ್-19ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ. ಅದೇ ರೀತಿ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

  • ಕೊರೊನಾದಿಂದ ರೋಗಿ ಗುಣಮುಖರಾದ್ರೆ ಐಸಿಯುನಲ್ಲೇ ಡಾಕ್ಟರ್ಸ್ ಡ್ಯಾನ್ಸ್

    ಕೊರೊನಾದಿಂದ ರೋಗಿ ಗುಣಮುಖರಾದ್ರೆ ಐಸಿಯುನಲ್ಲೇ ಡಾಕ್ಟರ್ಸ್ ಡ್ಯಾನ್ಸ್

    – ನೃತ್ಯದ ಮೂಲಕ ಧೈರ್ಯ ಹೇಳುತ್ತಿರುವ ವೈದ್ಯರು

    ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ರೋಗಿ ಗುಣಮುಖನಾಗಿ ವೆಂಟಿಲೇಟರ್ ನಿಂದ ಎದ್ದರೆ ಐಸಿಯುನಲ್ಲಿರುವ ವೈದ್ಯರ ತಂಡ ಡ್ಯಾನ್ಸ್ ಮಾಡಿ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

    ಕೊರೊನಾ ವೈರಸ್ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಗೆಲವು ಸಾಧಿಸಲು ವಿಶ್ವಾದ್ಯಂತ ವೈದ್ಯರು ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ. ಈ ನಡುವೆ ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‍ನಲ್ಲಿರುವ ರೊನಾಲ್ಡ್ ರೇಗನ್ ಯುಸಿಎಲ್‍ಎ ಆಸ್ಪತ್ರೆಯ ಐಸಿಯುನಲ್ಲಿರುವ ವೈದ್ಯರ ತಂಡವು ಕೊರೊನಾ ವೈರಸ್ ನಿಂದ ರೋಗಿ ಗುಣಮುಖವಾದರೆ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿದೆ.

    ವೈದ್ಯರು ಡ್ಯಾನ್ಸ್ ಮಾಡುವ ವಿಡಿಯೋವನ್ನು ಅಮೆರಿಕದ ವೈದ್ಯೆ ಡಾ. ನಿಡಾ ಖಾದಿರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು, ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖವಾದರೆ, ವೆಂಟಿಲೇಟರ್ ನಿಂದ ಎದ್ದು ಬಂದರೆ ನಮ್ಮ ಐಸಿಯು ಸಿಬ್ಬಂದಿ ಡ್ಯಾನ್ಸ್ ಮಾಡುತ್ತಾರೆ. ಈ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://twitter.com/HungryDes/status/1247369358705176577

    ಈ ಪೋಸ್ಟ್ ಅನ್ನು ಶೇರ್ ಮಾಡಿರುವ ಖಾದಿರ್ ಅವರು ಸಹೋದ್ಯೋಗಿ, ಕೊರೊನಾ ವಿರುದ್ಧ ಹೋರಾಟದಲ್ಲಿ ನಮ್ಮ ಸಿಬ್ಬಂದಿ ಸಣ್ಣ ಗೆಲುವನ್ನು ಕೂಡ ಆಚರಣೆ ಮಾಡುತ್ತಿದ್ದಾರೆ. ನಿನ್ನೆ ನಮ್ಮ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ವೆಂಟಿಲೇಟರ್ ನಿಂದ ಎದ್ದು ಸ್ವತಃ ತಾವೇ ಉಸಿರಾಡುತ್ತಿದ್ದಾರೆ. ಇದರಿಂದ ನಮಗೆ ಸಂತೋಷವಾಗಿ ಸ್ವಲ್ಪ ಡ್ಯಾನ್ಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋವನ್ನು 8 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಜೊತೆ 30 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಎಲ್ಲರೂ ಆರೋಗ್ಯ ಯೋಧರ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅಮೆರಿಕದ ಜನರಿಗೆ ನೀವು ಮಾಡಿದ ಕೆಲಸಕ್ಕೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ನೀವು ನಿಜವಾದ ಹೀರೋಗಳು ಎಂದು ಜನ ಕಮೆಂಟ್ ಮಾಡಿದ್ದಾರೆ.

  • ಸರಿಯಾದ ಸಮಯಕ್ಕೆ ಸಿಗದ ಆಸ್ಪತ್ರೆ ಐಸಿಯು ಕೀ – ವೃದ್ಧೆ ಸಾವು

    ಸರಿಯಾದ ಸಮಯಕ್ಕೆ ಸಿಗದ ಆಸ್ಪತ್ರೆ ಐಸಿಯು ಕೀ – ವೃದ್ಧೆ ಸಾವು

    – ಐಸಿಯು ಬೀಗ ಮುರಿದು ಚಿಕಿತ್ಸೆ

    ಭೋಪಾಲ್: ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಕೀ ಸಿಗದೇ ಹೋಗಿದ್ದಕ್ಕೆ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

    ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ ವೃದ್ಧೆಯನ್ನು ಗುರುವಾರ ರಾತ್ರಿ ಉಜ್ಜಯಿನಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದರಿಂದ ಅಲ್ಲಿನ ವೈದ್ಯರು ಆಕೆಯ ಕೊರೊನಾ ಪರೀಕ್ಷೆಗೆ ಮಾದರಿಯನ್ನು ತೆಗೆದುಕೊಂಡ ನಂತರ ಮಾಧವ್ ನಗರದ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

    ಆಕೆಯನ್ನು ಅಲ್ಲಿನಿಂದ ಆರ್.ಡಿ ಗಾರ್ಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ ಎಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 55 ವರ್ಷ ವಯಸ್ಸಿನ ವೃದ್ಧೆಯನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಲಾಕ್ ಆಗಿದ್ದು, ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ.

    ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಕೀಯನ್ನು ಹುಡುಕಿದ್ದಾರೆ ಆದರೆ ಸಿಕ್ಕಿಲ್ಲ. ಹಾಗಾಗಿ ಐಸಿಯುನ ಬೀಗ ಮುರಿಯಲಾಗಿದೆ. ಬೀಗ ಮುರಿಯಲು ತಡವಾದ ಕಾರಣ ರೋಗಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬೀಗ ಮುರಿದ ನಂತರ ಆಕೆಯನ್ನು ಐಸಿಯುಗೆ ಸ್ಥಳಾಂತರಿಸಿ ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಜ್ಜಯಿನಿ ಮುಖ್ಯ ವೈದ್ಯಾಧಿಕಾರಿ ಅನುಸುಯಾ ಗವ್ಲಿ ಅವರು, ವೃದ್ಧೆ ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದರು. ನಮ್ಮ ತಜ್ಞರು ಕೊರೊನಾ ಪರೀಕ್ಷೆಗಾಗಿ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದ ಕಾರಣ ವೃದ್ಧೆ ನಿಧನರಾಗಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ಐಸಿಯುನಲ್ಲೇ ಪ್ರಿಯತಮೆಯನ್ನು ವರಿಸಿ ಎಸ್ಕೇಪ್ ಆದ

    ಐಸಿಯುನಲ್ಲೇ ಪ್ರಿಯತಮೆಯನ್ನು ವರಿಸಿ ಎಸ್ಕೇಪ್ ಆದ

    ಮುಂಬೈ: ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಯುವತಿಯನ್ನು ಆಕೆಯ ಪ್ರಿಯತಮ ಮದುವೆಯಾಗಿ ನಂತರ ಪರಾರಿಯಾದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

    ಪ್ರಿಯತಮ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದು ಆಕೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧಾರ ಮಾಡಿದಳು. ಹಾಗೆಯೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಲ್ಲಿಗೆ ಯುವಕನನ್ನು ಕರೆತಂದು ಆಕೆಯ ಜೊತೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಡಲಾಯಿತು. ಆದರೆ ಮದುವೆಯಾದ ಕೂಡಲೇ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

    ಇತ್ತ ಯುವತಿ, ಯುವಕನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಆರೋಪಿ ಸೂರಜ್ ನಲ್ವಾಡೆ ವಿರುದ್ಧ ಎಫ್‍ಐ ಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿ ಪ್ರಕಾಶ್ ರಾಥೋರ್ ತಿಳಿಸಿದ್ದಾರೆ.

    ದೂರಿನಲ್ಲೇನಿದೆ?
    ಸೂರಜ್ ನನ್ನ ಮೇಲೆ ಒತ್ತಾಯಪೂರ್ವಕವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೆ ಆ ಬಳಿಕ ನಾನು ಕೆಳಜಾತಿಯವಳೆಂದು ಹೇಳಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

    ಯುವತಿ ನವೆಂಬರ್ 27ರಂದು ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

  • ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಮೋದಿ ಹುಟ್ಟುಹಬ್ಬ – ಬೆಂಬಲಿಗರೊಂದಿಗೆ ಐಸಿಯುಗೆ ನುಗ್ಗಿ ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವ ಪ್ರಭು ಚೌವ್ಹಾಣ್

    ಬೀದರ್: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಅದೇ ರೀತಿ ರೋಗಿಗಳಿಗೆ ಹಣ್ಣು ಹಂಚುವ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಎಡವಟ್ಟು ಮಾಡಿದ್ದು, ಹತ್ತಾರು ಬೆಂಬಲಿಗರೊಂದಿಗೆ ತುರ್ತುನಿಗಾ ಘಟಕ(ಐಸಿಯು)ಕ್ಕೆ ನುಗ್ಗಿ ಹಣ್ಣು ಹಂಚಿದ್ದಾರೆ.

    ಮೋದಿ ಜನ್ಮ ದಿನ ಆಚರಣೆ ಅಂಗವಾಗಿ ಇಂದು ಬೀದರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಚುತ್ತಿದ್ದರು. ಈ ವೇಳೆ ಕೇವಲ ವಾರ್ಡ್‍ನಲ್ಲಿರುವ ರೋಗಿಗಳಿಗೆ ಹಣ್ಣುಗಳನ್ನು ಹಂಚದೆ, ಐಸಿಯುನಲ್ಲಿರುವ ರೋಗಿಗಳಿಗೂ ಹಣ್ಣುಗಳನ್ನು ಹಂಚಿದ್ದು, ಈ ಮೂಲಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರೋಗಿಗಳಿಗೆ ಸಚಿವರು ತೊಂದರೆ ಕೊಟ್ಟಿದ್ದಾರೆ.

    ಸಚಿವರು ಹಾಗೂ ಅವರೊಂದಿಗೆ 50ಕ್ಕೂ ಹೆಚ್ಚು ಬೆಂಬಲಿಗರು ಶೂ ಹಾಕಿಕೊಂಡೇ ಐಸಿಯುಗೆ ನುಗ್ಗಿದ್ದು, ತುರ್ತುನಿಗಾ ಘಟಕಕ್ಕೆ ಒಂದೇ ಸಮಯಕ್ಕೆ ಹತ್ತಾರು ಮಂದಿ ನುಗ್ಗಿದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಐಸಿಯುನಲ್ಲಿರುವ ರೋಗಿಗಳನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ, ಒಂದು ವೇಳೆ ಹೋದರೂ ಸಹ ಒಬ್ಬಿಬ್ಬರು ಮಾತ್ರ ತೆರಳಬೇಕು. ಆದರೆ, ಸಚಿವರು ಇದಾವುದನ್ನೂ ಲೆಕ್ಕಿಸದೆ ಹತ್ತಾರು ಬೆಂಬಲಿಗರೊಂದಿಗೆ ನುಗ್ಗಿದ್ದಾರೆ.

    ಈ ಮೂಲಕ ಆಸ್ಪತ್ರೆಯ ನಿಯಮವನ್ನು ಗಾಳಿಗೆ ತೂರಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ಹಣ್ಣು ವಿತರಣೆ ಮಾಡದೆ, ಐಸಿಯುಗೂ ನುಗ್ಗಿ ವೈದ್ಯರಿಗೂ ಸಹ ಇರುಸುಮುರುಸು ಉಂಟುಮಾಡಿದ್ದಾರೆ.

  • 74ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ಜಗತ್ತಿನ ಹಿರಿಯ ಪೋಷಕರು’ ಐಸಿಯುನಲ್ಲಿ

    74ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ಜಗತ್ತಿನ ಹಿರಿಯ ಪೋಷಕರು’ ಐಸಿಯುನಲ್ಲಿ

    ಹೈದರಾಬಾದ್: 74ರ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ‘ಜಗತ್ತಿನ ಹಿರಿಯ ಪೋಷಕರು’ ಎಂದು ಖ್ಯಾತಿ ಪಡೆದ ಎರ್ರಮಟ್ಟಿ ಮಂಗಯಮ್ಮ ಹಾಗೂ ಅವರ ಪತಿ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಭಾನುವಾರದಂದು ಮಂಗಯಮ್ಮ(74) ಹಾಗೂ ಎರ್ರಾಮಟಿ ರಾಜ ರಾವ್(80) ದಂಪತಿಯ ಅವಳಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅತ್ತ ರಾಜರಾವ್ ಅವರಿಗೆ ಹೃದಯಾಘಾತವಾದ ಕಾರಣಕ್ಕೆ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಂಗಯಮ್ಮ ಅವರಿಗೆ ಸಿಸೇರಿಯನ್ ಮಾಡಿರುವ ಕಾರಣಕ್ಕೆ ಯಾವುದೇ ಇನ್ಫೆಕ್ಷನ್ ಆಗದಿರಲಿ ಎಂದು ಇನ್ನೂ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಹೀಗಾಗಿ ಅವಳಿ ಮಕ್ಕಳನ್ನು ಅವರ ಸಂಬಂಧಿಗಳು ನೋಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿ, ಶ್ವಾಸಕೋಶದ ಇನ್ಫೆಕ್ಷನ್ ಹಾಗೂ ಲಘು ಹೃದಯಾಘಾತವಾದ ಕಾರಣಕ್ಕೆ ರಾಜರಾವ್ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಇತ್ತ ಮಂಗಯಮ್ಮ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಈಗ ಅವರು ಸ್ಪಲ್ಪ ಸ್ವಲ್ಪ ಓಡಾಡುತ್ತಿದ್ದಾರೆ. ಅವಳಿ ಮಕ್ಕಳು ಕೂಡ ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದ ನಿವಾಸಿಯಾದ ಎರ್ರಮಟ್ಟಿ ಮಂಗಯಮ್ಮ ಅವರು ಸೆ. 5 ರಂದು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿ ಹೊಸ ದಾಖಲೆ ಬರೆದಿದ್ದರು. ಜಗತ್ತಿನ ಹಿರಿಯ ಪೋಷಕರು ಎಂಬ ಖ್ಯಾತಿಗೆ ಪಾತ್ರರಾದರು.

    ಸುಮಾರು 3 ದಶಕಗಳಿಂದ ಮಕ್ಕಳು ಪಡೆಯಲು ದಂಪತಿ ಸಾಕಷ್ಟು ವೈದ್ಯರ ಮೊರೆಹೋಗುತ್ತಲೇ ಇದ್ದರು. ಆದರೆ 2018ರ ನವೆಂಬರ್ ತಿಂಗಳಲ್ಲಿ ಅವರು ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಂಗೆ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಹೋಗಿದ್ದರು. ಅಲ್ಲಿ ಡಾ. ಶಾನಕ್ಯಾಲ ಉಮಾಶಂಕರ್ ಅವರು ದಂಪತಿಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸವಾಲಿನ ಪ್ರಕರಣವನ್ನು ತಮ್ಮ ಕೈಗೆ ತೆಗೆದುಕೊಂಡು ಯಶಸ್ವಿಯಾದರು.

    ಈ ಬಗ್ಗೆ ಮಾತನಾಡಿದ ಡಾ. ಶಾನಕ್ಯಾಲ ಉಮಾಶಂಕರ್ ಅವರು, ಮಂಗಯಮ್ಮ ಅವರಿಗೆ ಬಿಪಿ, ಸಕ್ಕರೆ ಕಾಯಿಲೆ ಅಥವಾ ಯಾವುದೇ ಆರೋಗ್ಯದ ತೊಂದರೆ ಇಲ್ಲ. ಅವರ ಆನುವಂಶಿಕ ರೇಖೆಯು ತುಂಬಾ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರು, ಶ್ವಾಸಕೋಶ ಶಾಸ್ತ್ರಜ್ಞರು ಸೇರಿದಂತೆ ಇತರೆ ವಿಶೇಷ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಮಂಗಮ್ಮ ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿ, ನಂತರ ನಾವು ಅವರ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದೆವು. ಬಹಳ ವರ್ಷಗಳ ಹಿಂದೆಯೇ ಅವರು ಋತುಬಂಧದ ಹಂತವನ್ನು ತಲುಪಿದ್ದರು. ಆದರೆ ಐವಿಎಫ್(ವಿಟ್ರೊ ಫಲೀಕರಣ ಅಥವಾ ವಿಟ್ರೋ ಫರ್ಟಿಲೈಸೇಷನ್) ಮೂಲಕ ನಾವು ಕೇವಲ ಒಂದು ತಿಂಗಳಲ್ಲಿ ಅವರು ಮತ್ತೆ ಋತುಮತಿಯಾಗುವಂತೆ ಚಿಕಿತ್ಸೆ ಕೊಟ್ಟೆವು ಎಂದು ತಿಳಿಸಿದ್ದರು.

    ನಂತರ ಐವಿಎಫ್ ವಿಧಾನದಿಂದ ಮಂಗಯಮ್ಮ ಅವರು ಗರ್ಭ ಧರಿಸುವಂತೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಜಾಗೃತೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿದ್ದ ಕಾರಣಕ್ಕೆ ದಂಪತಿಯನ್ನು ಆಸ್ಪತ್ರೆಯಲ್ಲಿಯೇ ಉಳಿಯಲು ಸೂಚಿಸಿದೆವು. ಮಂಗಯಮ್ಮ ಅವರಿಗೆ ಅಗತ್ಯ ಪೋಷ್ಠಿಕಾಂಶ, ಆರೈಕೆ, ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿಯೇ ನೋಡಿಕೊಳ್ಳಲಾಗುತ್ತಿತ್ತು. ಅವರ ವಯಸ್ಸಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟದ ವಿಚಾರವಾಗಿದ್ದ ಕಾರಣಕ್ಕೆ ಸಿಸೇರಿಯನ್ ಮಾಡಬೇಕಾಯಿತು. ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

  • ಐಸಿಯುನಲ್ಲಿದ್ದ ಮಹಿಳಾ ರೋಗಿಯ ಮೇಲೆ ಸಿಬ್ಬಂದಿಯಿಂದ್ಲೇ ಗ್ಯಾಂಗ್ ರೇಪ್!

    ಐಸಿಯುನಲ್ಲಿದ್ದ ಮಹಿಳಾ ರೋಗಿಯ ಮೇಲೆ ಸಿಬ್ಬಂದಿಯಿಂದ್ಲೇ ಗ್ಯಾಂಗ್ ರೇಪ್!

    ಲಕ್ನೋ: ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಸಿಬ್ಬಂದಿಯೇ ಸಾಮೂಹಿಕ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ನಡೆದಿದೆ.

    ಈ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ಭಾನುವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    ಮಹಿಳೆ ಉಸಿರಾಟದ ತೊಂದರೆಯಿಂದ ಬಳುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಭಾನುವಾರ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ಸೇರಿಕೊಂಡು ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹರಿಮೋಹನ್ ಸಿಂಗ್ ತಿಳಿಸಿದ್ದಾರೆ.

    ಪತ್ನಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಅಲ್ಲಿ ಆಕೆಗೆ ಇಂಜೆಕ್ಷನ್ ಕೊಟ್ಟು ಸ್ಪಲ್ಪ ಮಲಗುವಂತೆ ವೈದ್ಯರು ಹೇಳಿದ್ದರು. ಹೀಗಾಗಿ ಆಕೆ ನಿದ್ದೆ ಮಾಡುತ್ತಿದ್ದಳು. ಈ ವೇಳೆ ಅಲ್ಲಿಯೇ ಆಕೆಯ ಮೇಲೆ ಮೂವರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆಯ ಪತಿ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲು ಹೋದಾಗ, ಘಟನೆ ನಡೆದ ಸಂದರ್ಭದಲ್ಲಿ ಸಿಸಿಟಿವಿ ಆಫ್ ಮಾಡಲಾಗಿದೆ. ಹೀಗಾಗಿ ಸದ್ಯ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

  • ಮಾತೆ ಮಹಾದೇವಿ ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ಮಾತೆ ಮಹಾದೇವಿ ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ಬೆಂಗಳೂರು: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ, ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇನ್ನೂ ಒಂದು ವಾರ ಸಿದ್ದಗಂಗಾ ಶ್ರೀಗಳಿಗೆ ಐಸಿಯುನಲ್ಲೇ ಚಿಕಿತ್ಸೆ

    ಇನ್ನೂ ಒಂದು ವಾರ ಸಿದ್ದಗಂಗಾ ಶ್ರೀಗಳಿಗೆ ಐಸಿಯುನಲ್ಲೇ ಚಿಕಿತ್ಸೆ

    ಚೆನ್ನೈ: ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ನ್ಯೂಟ್ರೀಷನ್‍ಗಳನ್ನು ನೀಡಲಾಗುತ್ತಿದ್ದು ಇನ್ನೂ ಒಂದು ವಾರಗಳ ಕಾಲ ಐಸಿಯುನಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ರೇಲಾ ಆಸ್ಪತ್ರೆಯ ಡಾ. ಪರಮೇಶ್ವರ್ ತಿಳಿಸಿದ್ದಾರೆ.

    ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಸುಮಾರು 9 ದಿನಗಳು ಕಳೆದಿದೆ. ಅವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ, ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ. ಎಂದಿನಂತೆ ರಕ್ತನಾಳ ಮೂಲಕವೇ ನ್ಯೂಟ್ರೀಷನ್‍ಗಳನ್ನು ನೀಡಲಾಗುತ್ತಿದೆ. ಶ್ರೀಗಳಿಗೆ ಇನ್ನೂ ಒಂದು ವಾರಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಪರಮೇಶ್ವರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಸಿದ್ದಗಂಗಾ ಶ್ರೀಗಳಿಗೆ ಯಾವುದೇ ಸೋಂಕು ತಗಲದಂತೆ ನೋಡಿಕೊಳ್ಳಲಾಗುತ್ತಿದೆ. ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳಿಗೆ ಪ್ರೋಟೀನ್ ಹಾಗೂ ನ್ಯೂಟ್ರಿಷನ್ ಕೊರತೆ ಇದ್ದು, ಸರಿಯಾದ ಪ್ರಮಾಣದಲ್ಲಿ ನ್ಯೂಟ್ರೀಷನ್‍ನನ್ನು ನೀಡಲಾಗುತ್ತಿದೆ. ಈಗ ಶ್ರೀಗಳು ಆರೋಗ್ಯವಾಗಿದ್ದಾರೆ ಎಲ್ಲರೊಡನೆ ಮಾತನಾಡುತ್ತಿದ್ದಾರೆ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಶ್ರೀಗಳು ಗುಣಮುಖರಾದ ಮೇಲೆ ಐಸಿಯುನಿಂದಾನೇ ನೇರವಾಗಿ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗೆ ಐಸಿಯೂನಲ್ಲೇ ಚಿಕಿತ್ಸೆ ಮುಂದುವರಿಕೆ

    ಸಿದ್ದಗಂಗಾ ಶ್ರೀಗಳಿಗೆ ಐಸಿಯೂನಲ್ಲೇ ಚಿಕಿತ್ಸೆ ಮುಂದುವರಿಕೆ

    ಚೆನ್ನೈ: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆದು 9 ದಿನಗಳು ಆಗಿದ್ದು, ನಿಧಾನವಾಗಿ ಗಾಯ ವಾಸಿಯಾಗುತ್ತಿದೆ. ಆದರೆ ಅವರಿಗೆ ನ್ಯೂಟ್ರಿಷನ್ ಕೊರತೆ ಇರುವುದರಿಂದ ಐಸಿಯೂನಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ವೈದ್ಯ ಡಾ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯರು, ಶ್ರೀಗಳ ಆರೋಗ್ಯ ಉತ್ತಮವಾಗಿದೆ. ಶಸ್ತ್ರ ಚಿಕಿತ್ಸೆಯಿಂದ ಆಗಿರುವ ಗಾಯ ವಾಸಿಯಾಗುತ್ತಿದೆ. ಶ್ರೀಗಳಿಗೆ ನ್ಯೂಟ್ರಿಷನ್ ಕೊರತೆ ಇದೆ. ಈ ಕುರಿತು ಹೆಚ್ಚಿನ ಗಮನ ನೀಡಲಾಗುತ್ತಿದೆ. ಅಲ್ಲದೇ ಫಿಸಿಯೋಥೆರಪಿ ಚಿಕಿತ್ಸೆಯ ಅಗತ್ಯವಿದ್ದು, ಸದ್ಯ ಶ್ರೀಗಳಿಗೆ ವಾಕ್ ಕೂಡ ಮಾಡಿಸಲಾಗುತ್ತಿದೆ. ಅವರಿಗೆ ಯಾವುದೇ ಬೇಯಿಸಿದ ಆಹಾರ ನೀಡದೆ ವೈದ್ಯರ ಸೂಚನೆ ಮೇರೆಗೆ ನ್ಯೂಟ್ರಿಷನ್ ನೀಡಲಾಗುತ್ತಿದೆ. ಶ್ರೀಗಳು ಆತ್ಮಲಿಂಗ ಪೂಜೆಯನ್ನು ಮಾಡುತ್ತಿದ್ದು, ಬಹುಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಸೂಚನೆಯಂತೆ ಚಿಕಿತ್ಸೆ ಹಾಗೂ ಆಹಾರವನ್ನು ನೀಡಲಾಗುತ್ತಿದೆ ಎಂದರು.

    ಇಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಳಿಕ ಮಾತನಾಡಿದ ಅವರು, ಶ್ರೀಗಳು ಆರೋಗ್ಯವಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗುತ್ತಾರೆ. ನನ್ನನ್ನು ಗುರುತು ಹಚ್ಚಿ ಮಾತನಾಡಿಸಿದ್ದಾರೆ. ಯಾವಾಗ ಬಂದಿದ್ದು, ಪ್ರಸಾದ ಸ್ವೀಕರಿಸಿದೆಯಾ ಎಂದು ವಿಚಾರಿಸಿದರು ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv