Tag: ICU

  • ಹೊಂಬಾಳೆ ಸಮೂಹದ ಆರ್ಥಿಕ ನೆರವು – ಮಂಡ್ಯ ಮೆಡಿಕಲ್ ಕಾಲೇಜ್‍ನಲ್ಲಿ ಅತ್ಯಾಧುನಿಕ ಐಸಿಯು

    ಹೊಂಬಾಳೆ ಸಮೂಹದ ಆರ್ಥಿಕ ನೆರವು – ಮಂಡ್ಯ ಮೆಡಿಕಲ್ ಕಾಲೇಜ್‍ನಲ್ಲಿ ಅತ್ಯಾಧುನಿಕ ಐಸಿಯು

    – ಐಸಿಯು ವೈಶಿಷ್ಟ್ಯಗಳೇನು?

    ಮಂಡ್ಯ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಷ್ಠಿತ ಹೊಂಬಾಳೆ ಸಮೂಹದ ಆರ್ಥಿಕ ನೆರವಿನಿಂದ ಸ್ಥಾಪನೆ ಮಾಡಲಾಗಿರುವ 20 ಹಾಸಿಗೆಗಳ ಅತ್ಯಾಧುನಿಕ ಐಸಿಯು ಘಟಕವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಉದ್ಘಾಟನೆ ನೆರೆವೇರಿಸಿದರು.

    ಕಟ್ಟಡ ನಿರ್ಮಾಣ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಸಮೂಹವು, ಮಂಡ್ಯ ಜಿಲ್ಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸಲು ಸುಮಾರು 2.35 ಕೋಟ ರೂ. ದೇಣಿಗೆ ನೀಡಿದೆ.

    ಈ ನೆರವಿನ ಮೂಲಕ ಜಿಲ್ಲೆಯ ವೈದ್ಯಕೀಯ ಕಾಲೇಜಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಐಸಿಯು ಸ್ಥಾಪಿಸಲಾಗಿದೆ. ಇನ್ನು ತಲಾ 90 ಲಕ್ಷ ರೂ. ವೆಚ್ಚದಲ್ಲಿ ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಘಟಕಗಳನ್ನು ಅಳವಡಿಸಲಾಗುತ್ತಿದೆ.

    ಪಾಂಡವಪುರ ಆಸ್ಪತ್ರೆಯ ಆಕ್ಸಿಜನ್ ಘಟಕಕ್ಕೆ ಭೂಮಿ ಪೂಜೆ ನೆರೆವರಿಸಲಾಗಿದೆ. ಕೆ.ಆರ್.ಪೇಟೆ ಆಸ್ಪತ್ರೆಯಲ್ಲಿ ಈಗಾಗಲೇ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣ ವಾಗಲಿದೆ. ಎರಡೂ ಆಮ್ಲಜನಕ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸಿ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿವೆ.

    ಐಸಿಯು ವೈಶಿಷ್ಟ್ಯಗಳೇನು?
    ಹೊಂಬಾಳೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಅವರು ತಮ್ಮ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಿಸಲು ಸರ್ಕಾರದ ಜತೆ ಕೈ ಜೋಡಿಸಿ ದೇಣಿಗೆ ನೀಡಿದ್ದಾರೆ.

    ಅವರ ಆಶಯದಂತೆ ನೂತನ ಐಸಿಯುನಲ್ಲಿ ಜಾಗತಿಕ ಗುಣಮಟ್ಟದ ವೆಂಟಿಲೇಟರ್‍ಗಳು, ಮಾನಿಟರ್‍ಗಳನ್ನು ಅಳವಡಿಸಲಾಗಿದೆ. ಮುಖ್ಯವಾಗಿ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಇದ್ದು, ವೈದ್ಯರು ಯಾವುದೇ ಭಾಗದಲ್ಲಿದ್ದರೂ ರೋಗಿಗೆ ಅತ್ಯುತ್ತಮ ಚಿಕಿತ್ಸೆ ನೀಡಬಹುದು. ಚತುಷ್ಮುಖಿ (four way communication system) ಸಂಪರ್ಕ ಜಾಲದ ಸೌಲಭ್ಯವನ್ನು ಈ ಐಸಿಯು ಹೊಂದಿದೆ. ಮಂಡ್ಯದಲ್ಲಿ ಇದೇ ಮೊದಲಿಗೆ ಇಂಥ ಆಧುನಿಕ ಐಸಿಯು ಸ್ಥಾಪನೆ ಆಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಕಿರಗಂದೂರು ಅವರು, ಕೋವಿಡ್ ಬಂದು ಇಡೀ ಜಗತ್ತಿನ ಆದ್ಯತೆಗಳು ಬದಲಾಗಿವೆ. ಆರೋಗ್ಯ ಎನ್ನುವುದು ಬಹಳ ಮುಖ್ಯ ಎನ್ನುವ ಅರಿವಾಗಿದೆ. ಹೀಗಾಗಿ ಬಡವ-ಬಲ್ಲಿದನೆಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎನ್ನುವುದು ನನ್ನ ಕಾಳಜಿ. ಆದ್ದರಿಂದ ನನ್ನ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಒಂದು ಅಳಿಲು ಸೇವೆಯನ್ನು ಸಲ್ಲಿಸಿದ್ದೇನೆ ಎಂದರು.

    ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಶಾಸಕರಾದ ಎಂ.ಶ್ರೀನಿವಾಸ, ಕೆ.ಟಿ.ಶ್ರೀಕಂಠೇಗೌಡ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಉಮೇಶ್, ಜಿಲ್ಲಾಧಿಕಾರಿ ಅಶ್ವತಿ, ಹೊಂಬಾಳೆ ಸಮೂಹದ ನಿರ್ದೇಶಕ ಚೆಲುವೇಗೌಡ, ವಿಮ್ಸ್ ನಿರ್ದೇಶಕ ಹರೀಶ ಜಿಲ್ಲೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಐಸಿಯುನಲ್ಲಿದ್ದ ಸೋಂಕಿತನ ಹುಟ್ಟುಹಬ್ಬ ಆಚರಿಸಿ ವೈದ್ಯರಿಂದ ಸರ್ಪ್ರೈಸ್

    ಐಸಿಯುನಲ್ಲಿದ್ದ ಸೋಂಕಿತನ ಹುಟ್ಟುಹಬ್ಬ ಆಚರಿಸಿ ವೈದ್ಯರಿಂದ ಸರ್ಪ್ರೈಸ್

    ಬೆಂಗಳೂರು: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತನ ಹುಟ್ಟುಹಬ್ಬ ಆಚರಿಸುವ ಮೂಲಕ ವೈದ್ಯರು ಕೊರೊನಾ ರೋಗಿಗೆ ಸರ್ಪ್ರೈಸ್ ನೀಡಿದ್ದಾರೆ.

    ನಗರದ ಕಗ್ಗದಾಸಪುರದಲ್ಲಿರುವ ಲಕ್ಷ್ಮಿ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರು ಕೊರೊನಾ ಸೋಂಕಿತನ ಹುಟ್ಟುಹಬ್ಬ ಆಚರಿಸಿದ್ದಾರೆ. ಐಸಿಯುನಲ್ಲೇ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ, ಈ ಮೂಲಕ ಸೋಂಕಿತಬಿಗೆ ಧೈರ್ಯ ತುಂಬಿದ್ದಾರೆ.

    ಕೊರೊನಾ ಸೋಂಕಿತ ವ್ಯಕ್ತಿ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅವರ ಹುಟ್ಟುಹಬ್ಬದ ಕುರಿತು ತಿಳಿದ ವೈದ್ಯರು ಸರ್ಪ್ರೈಸ್ ನೀಡಿದ್ದು, ಐಸಿಯುನಲ್ಲೇ ಕೇಕ್ ಕಟ್ ಮಾಡಿಸಿ ಹ್ಯಾಪಿ ಬರ್ತ್ ಡೇ ಎಂದು ವೈದ್ಯರು ಹಾಗೂ ಇತರೆ ರೋಗಿಗಳಿಂದ ವಿಷ್ ಮಾಡಿಸಿದ್ದಾರೆ. ಈ ಮೂಲಕ ರೋಗಿಯನ್ನು ಖುಷಿಪಡಿಸಿದ್ದು, ಧೈರ್ಯ ತುಂಬಿದ್ದಾರೆ. ವೈದ್ಯರ ಸರ್ಪ್ರೈಸ್ ಸೋಂಕಿತ ಫುಲ್ ಖುಷ್ ಆಗಿದ್ದಾರೆ.

  • ನೀವೂ ಮನೆಯಲ್ಲಿದ್ರೂ ನಿಮ್ಮ ಹೆಸರಲ್ಲಿ ಬುಕ್ ಆಗುತ್ತೆ ಬೆಡ್ – ಬೇಕಾದವರಿಗೆ ಬೆಡ್ ನೀಡುವ ಧನದಾಹಿಗಳು

    ನೀವೂ ಮನೆಯಲ್ಲಿದ್ರೂ ನಿಮ್ಮ ಹೆಸರಲ್ಲಿ ಬುಕ್ ಆಗುತ್ತೆ ಬೆಡ್ – ಬೇಕಾದವರಿಗೆ ಬೆಡ್ ನೀಡುವ ಧನದಾಹಿಗಳು

    – ಸೌಥ್ ಝೋನ್ ವಾರ್ ರೂಂ ಕರ್ಮಕಾಂಡ ಬಯಲು ಮಾಡಿದ ಸಂಸದ ತೇಜಸ್ವಿ ಸೂರ್ಯ
    – ಬೆಂಗಳೂರಿನಲ್ಲಿ ಬೆಡ್‍ಗಾಗಿ ರಾತ್ರೋ ರಾತ್ರಿ ಡೀಲ್

    ಬೆಂಗಳೂರು: ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿರಿಸುವ ಮಹಾದಂಧೆ ಬಯಲಾಗಿದೆ. ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದು, ಸೋಂಕಿತರ ಜೊತೆ ಮಾತನಾಡಿ ಸೀಟ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದಾರೆ. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೋಂ ಐಸೋಲೇಟ್ ನಲ್ಲಿರುವ ಸೋಂಕಿತನ ಹೆಸರಲ್ಲಿ ಬೆಡ್ ಬುಕ್ ಆದ್ರೆ, ಅದು ಯಾರಿಗೆ ನೀಡಲಾಗುತ್ತೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ. ಮಹಾನಗರ ಬೆಂಗಳೂರಿನಲ್ಲಿ ಕೃತಕ ಬೆಡ್ ಅಭಾವದಿಂದಲೇ ಈ ಹೆಲ್ತ್ ಎಮೆರ್ಜೆನ್ಸಿ ಉಂಟಾಗಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿವೆ.

    ಹೇಗೆ ಡೀಲ್ ಆಗುತ್ತೆ ಬೆಡ್?: ಜನರು ತಮಗೆ ಕೊರೊನಾ ಸೋಂಕು ತಗಲುತ್ತಿದ್ದಂತೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಬೆಡ್ ಕೇಳುತ್ತಾರೆ. ಈ ವೇಳೆ ಅಧಿಕಾರಿಗಳು ಎ ಸಿಂಥೆಮೆಟಿಕ್ ಆಗಿದ್ರೆ ಮನೆಯಲ್ಲಿಯೇ ಐಸೋಲೇಟ್ ಆಗುವಂತೆ ತಿಳಿಸಿ, ಅವರಿಂದ ಹೆಸರು, ಬಿಯು ನಂಬರ್ ಪಡೆದುಕೊಂಡು ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿಕೊಳ್ಳಲಾಗುತ್ತದೆ. ಹಾಗಾದ್ರೆ ಬುಕ್ ಮಾಡೋ ದಂಧೆಯಲ್ಲಿ ಕೇವಲ ಅಧಿಕಾರಿಗಳೇ ಭಾಗಿಯಾಗಿದ್ರಾ? ಇದರಲ್ಲಿ ಜನಪ್ರತಿನಿಧಿಗಳು ಶಾಮೀಲಾಗಿದ್ದಾರಾ ಅನ್ನೋದು ತನಿಖೆಯಲ್ಲಿ ತಿಳಿದು ಬರಬೇಕಿದೆ.

    ಇನ್ನು ಪಬ್ಲಿಕ್ ಟಿವಿ ವರದಿ ಬಿತ್ತರಿಸುತ್ತಿದ್ದಂತೆ ವಾರ್ ರೂಂ ಸ್ಥಳಕ್ಕೆ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಸುಮಾರು 4 ಸಾವಿರಕ್ಕೂ ಅಧಿಕ ಬೆಡ್ ಗಳನ್ನು ಅಧಿಕಾರಿಗಳೇ ಬ್ಲಾಕ್ ಮಾಡಿಕೊಂಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬೆಡ್ ಆಡಿಟ್ ಸಿಬ್ಬಂದಿ:– ಹೇಗಿದ್ದಾರೆ ವೆಂಕಟ್‍ಲಕ್ಷ್ಮಮ್ಮ ಅವರು ಈಗ..
    ಸೋಂಕಿತರ ಸಂಬಂಧಿ :- ಅವರನ್ನ ಹಾಸ್ಪಿಟಲ್‍ಗೆ ಅಡ್ಮಿಟ್ ಮಾಡಿದ್ದೇನೆ, ಪ್ರೈವೇಟ್ ಹಾಸ್ಪಿಟಲ್ ಸ್ಪರ್ಶ್‍ನಲ್ಲಿ ಆಡ್ಮಿಟ್ ಮಾಡಿದ್ದೇವೆ

    ಬೆಡ್ ಆಡಿಟ್ ಸಿಬ್ಬಂದಿ :- ನಾನು ಬಿಬಿಎಂಪಿ ಕಡೆಯಿಂದ ಫೋನ್ ಮಾಡ್ತಿರೋದು.. ನಿಮಗೆ ಬಿಬಿಎಂಪಿ ಕಡೆಯಿಂದ ಕಿಮ್ಸ್ ಹಾಸ್ಪಿಟಲ್ ಕಡೆಗೆ ಕಾಂಟ್ಯಾಕ್ಟ್ ಬಂದಿತ್ತಾ..? ಬಿಬಿಎಂಪಿ ಕಡೆಯಿಂದ ಫೋನ್ ಬಂದಿತ್ತಾ..?
    ಸೋಂಕಿತರ ಸಂಬಂಧಿ :- ಬಿಬಿಎಂಪಿ ಕಡೆಯಿಂದ ಫೋನ್ ಬರಲಿಲ್ಲ..

    ಬೆಡ್ ಆಡಿಟ್ ಸಿಬ್ಬಂದಿ – ಬರಲಿಲ್ವಾ, ಈಗ ನಿಮ್ಮಷ್ಟಕ್ಕೆ ನೀವೇ ಅಡ್ಮಿಟ್ ಆಗಿರೋದಾ ಸ್ಪರ್ಶ್ ಹಾಸ್ಪಿಟಲ್‍ನಲ್ಲಿ
    ಸೋಂಕಿತರ ಸಂಬಂಧಿ :- ನಿನ್ನೆ ನಾವು ಸುಮಾರು ಹೊತ್ತು ಪ್ರಯತ್ನ ಮಾಡಿದ್ವಿ ಆಮೇಲೆ ಅಡ್ಮಿಟ್ ಮಾಡಿದ್ವಿ.

    ಬೆಡ್ ಆಡಿಟ್ ಸಿಬ್ಬಂದಿ :- ಹೇಗಿದ್ದಾರೆ ಅವರು..? ಏನಾಗಬೇಕು ಅವರು ನಿಮಗೆ..?
    ಸೋಂಕಿತರ ಸಂಬಂಧಿ :- ಅವರು ನಮ್ಮ ತಾಯಿಯಾಗಬೇಕು

    ಬೆಡ್ ಆಡಿಟ್ ಸಿಬ್ಬಂದಿ :- ಎಷ್ಟು ವರ್ಷದವರು ಅವರು
    ಸೋಂಕಿತರ ಸಂಬಂಧಿ :- 76 ವರ್ಷದವರು ಅವರು

    ಬೆಡ್ ಆಡಿಟ್ ಸಿಬ್ಬಂದಿ :– ಹಾಗಾದ್ರೆ ಎಷ್ಟು ದಿನ ನೀವು ಬಿಬಿಎಂಪಿಗೆ ಪ್ರಯತ್ನ ಪಟ್ರಿ
    ಸೋಂಕಿತರ ಸಂಬಂಧಿ :– ನನಗೂ ಕೂಡ ಪಾಸಿಟಿವ್ ಇದೆ ನಾನು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿದ್ದೇನೆ, ನಮ್ಮ ಅಕ್ಕ ನಿನ್ನೆ ಮತ್ತೆ ಮೊನ್ನೆ ಟ್ರೈ ಮಾಡಿದ್ದಾರೆ.

    ಬೆಡ್ ಆಡಿಟ್ ಸಿಬ್ಬಂದಿ :- ಹೌದಾ.. ಬಿಬಿಎಂಪಿ ಕಡೆಯಿಂದ ಯಾವುದೇ ಬೆಡ್ ಆಗಿಲ್ಲಾ ಅಲ್ವಾ ಹಾಗಾದ್ರೆ…
    ಸೋಂಕಿತರ ಸಂಬಂಧಿ :- ಇಲ್ಲಾ ಆಗಿಲ್ಲ, ನಮಗೆ ಯಾವುದೇ ಕಾಲ್ ಬರಲಿಲ್ಲ

    ಬೆಡ್ ಆಡಿಟ್ ಸಿಬ್ಬಂದಿ :- ಸರ್.. ನಾನು ಬಿಬಿಎಂಪಿ ಕಡೆಯಿಂದಾನೇ ಮಾಡ್ತಾ ಇರೋದು.. ಈ ಬೆಡ್ ಬುಕ್ಕಿಂಗ್‍ನಲ್ಲಿ ಸ್ವಲ್ಪ ಸಮಸ್ಯೆಯಾಗಿದೆ. ಅದಕ್ಕೆ ಈಗ ಆಡಿಟಿಂಗ್ ಮಾಡ್ತಾ ಇದ್ದೇನೆ, ನಿಮಗೆ ಮತ್ತೆ ನಾನು ಫೋನ್ ಮಾಡ್ತೇನೆ ತಪ್ಪು ತಿಳಿದುಕೊಳ್ಳಬೇಡಿ ಬೇರೆಯವರಿಗೂ ಕೂಡ ಹೆಲ್ಪ್ ಮಾಡೋದಕ್ಕೆ ಟ್ರೈ ಮಾಡ್ತಾ ಇದಿವಿ.

    ಸೋಂಕಿತರ ಸಂಬಂಧಿ :- ಓಕೆ

    ಬೆಡ್ ಆಡಿಟ್ ಸಿಬ್ಬಂದಿ:– ಬೇಗ ಅವರು ಹುಷಾರಾಗೋಕೆ ನಾವು ಆಶಿಸುತ್ತೇವೆ.

  • ಕೋವಿಡ್ ವಾರ್ಡ್‍ಗೆ ತೆರಳಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಡಿಸಿಎಂ

    ಕೋವಿಡ್ ವಾರ್ಡ್‍ಗೆ ತೆರಳಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದ ಡಿಸಿಎಂ

    – ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಹೊಸ ಒಪಿಡಿ ಸ್ಥಾಪನೆಗೆ ಕ್ರಮ

    ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭಾನುವಾರ ಬೆಳಗ್ಗೆ ಕೆ.ಸಿ.ಜನರಲ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಘಟಕಗಳಿಗೆ ಭೇಟಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು.

    ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರೊಂದಿಗೆ ಆಸ್ಪತ್ರೆಗೆ ಬಂದ ಅವರು ಪಿಪಿಎ ಕಿಟ್ ಧರಿಸಿ ಸೋಂಕಿತರನ್ನು ಭೇಟಿ ಮಾಡಿ ಮಾತನಾಡಿದರು. ಚಿಕಿತ್ಸೆಯ ಬಗ್ಗೆ ಅವರೊಂದಿಗೆ ಮಾಹಿತಿ ಪಡೆದುಕೊಂಡರು. ಮೋಹನ್ ಅವರೂ ಪಿಪಿಇ ಕಿಟ್ ಧರಿಸಿಯೇ ವಾರ್ಡ್ ಪರಿಶೀಲಿಸಿದರು.

    ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಮಾಡ್ಯೂಲರ್ ಕೋವಿಡ್ ಐಸಿಯು ಘಟಕಗಳ ಒಳಕ್ಕೂ ಅವರು ತೆರಳಿ ಅಲ್ಲಿನ ವ್ಯವಸ್ಥೆಯನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿದರು.

    ಇನ್ನೊಂದು ಒಪಿಡಿ
    ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೆಚ್ಚು ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಅತ್ಯುತ್ತಮ ಸೌಲಭ್ಯಗಳು ಕೂಡ ಇವೆ. ಹೀಗಾಗಿ ಇಲ್ಲಿಯೇ ಇನ್ನೊಂದು ದೊಡ್ಡ ಪ್ರಮಾಣದ ಹೊರ ರೋಗಿಗಳ ವಿಭಾಗ (ಒಪಿಡಿ)ವನ್ನು ತೆರೆಯಲು ಸರಕಾರ ನಿರ್ಧರಿಸಿದೆ ಎಂದು ಡಿಸಿಎಂ ಹೇಳಿದರು.

    ಪಿಎಂ ಮೆಚ್ಚುಗೆ
    ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಖಾ ಎಂಬ ನರ್ಸ್ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ‘ಮನ್ ಕೀ ಬಾತ್’ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದು ಅತ್ಯಂತ ಸಂತೋಷದ ಸಂಗತಿ. ಅವರಿಗೆ ಸರಕಾರದ ಮೆಚ್ಚುಗೆ ಇದೆ. ಹಾಗೆಯೇ ಆಸ್ಪತ್ರೆಯ ಎಲ್ಲ ವೈದ್ಯರು, ನರ್ಸ್‍ಗಳು ಹಾಗೂ ಪ್ಯಾರಾ ಮಡಿಕಲ್ ಸಿಬ್ಬಂದಿ ತಮ್ಮ ಜೀವವನ್ನು ಒತ್ತೆ ಇಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಬೆಡ್ ಕೊರತೆ ನೀಗಿಸುತ್ತೇವೆ
    ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆಗಳ ಕೊರತೆ ಇದೆ. ಅದನ್ನು ಇಲ್ಲ ಎಂದು ಹೇಳುತ್ತಿಲ್ಲ. ಆದರೆ, ಆ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ. ಒಂದು ವೇಳೆ ಬೆಡ್ ಸಿಗದಿದ್ದರೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಯಾರೇ ಬಂದರೂ ಅವರನ್ನು ತಪಾಸಣೆ ಮಾಡಿ ಉತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಈ ಆಸ್ಪತ್ರೆಯಲ್ಲಿ 450 ಬೆಡ್ ಇದೆ. ಸಾಕಾಗುತ್ತಿಲ್ಲ ನಿಜ, ಆದರೆ ದಿನಕ್ಕೆ ಕೊನೆಪಕ್ಷ 2,000 ಜನರಿಗೆ ಚಿಕಿತ್ಸೆ ಸಿಗುವ ವ್ಯವಸ್ಥೆ ಆಗಬೇಕು. ಅದಕ್ಕೆ ಅಗತ್ಯವಾದ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ಒಪಿಡಿಗೆ ಬಂದು ಚಿಕಿತ್ಸೆ ಪಡೆದು ಮನೆಯಲ್ಲೇ ಹೋಮ್ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು. ಉತ್ತಮ ಔಷಧಿಯನ್ನು ನೀಡಲಾಗುತ್ತಿದೆ. ರೋಗ ಲಕ್ಷಣಗಳಿದ್ದವರೆಲ್ಲ ಬಂದು ಆಸ್ಪತ್ರೆಗೆ ದಾಖಲಾಗಬೇಕು ಎಂದಲ್ಲ, ಮನೆಯಲ್ಲೇ ಇದ್ದು ಉತ್ತಮ ಚಿಕಿತ್ಸೆ ಪಡೆಯಬಹುದು ಎಂದರು ಉಪ ಮುಖ್ಯಮಂತ್ರಿ.

    ರೆಮಿಡಿಸ್ವಿರ್ ಕೊರತೆ ಆಗಲ್ಲ
    ರಾಜ್ಯದಲ್ಲಿ ರೆಮಿಡಿಸ್ವಿರ್ ಕೊರತೆ ಬಹತೇಕ ನೀಗುತ್ತಿದೆ. ಕೇಂದ್ರ ಸರಕಾರದಿಂದ ಇವತ್ತು 1,50,000ಕ್ಕಿಂತ ಹೆಚ್ಚಿನ ರೆಮಿಡಿಸ್ವಿರ್ ವೇಲ್ಸ್ ರಾಜ್ಯಕ್ಕೆ ಹಂಚಿಕೆಯಾಗಿದೆ. ಇನ್ನು ಕೊರತೆಯಾಗಲ್ಲ, ಅಗತ್ಯ ಇರುವವರಿಗೆ ನೀಡಲಾಗುವುದು. ಅದಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

  • ಬೆಡ್ ಸಮಸ್ಯೆ ಸೃಷ್ಟಿ – ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ದರ ಫಿಕ್ಸ್

    ಬೆಡ್ ಸಮಸ್ಯೆ ಸೃಷ್ಟಿ – ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ದರ ಫಿಕ್ಸ್

    ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಸೃಷ್ಟಿಯಾಗಿದೆ. ಸರ್ಕಾರಿ ಆಸ್ಪತ್ರೆಗಳು ಮಾತ್ರ ಅಲ್ಲ ಖಾಸಗಿ ಆಸ್ಪತ್ರೆಗಳೂ ಭರ್ತಿಯಾಗಿವೆ. ತುಂಬಾ ಸೀರಿಯಸ್ ಇದೆ ಎಂದು ಗೋಗರೆದ್ರೂ ಬೆಡ್ ಸಿಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಪಾಲಿಕೆ ನೌಕರನ ತಾಯಿಗೂ ಬೆಡ್ ಸಿಗದೆ ಪರದಾಡುವಂತಾಯಿತು.

    ವಯಸ್ಸಾದ ತಾಯಿಗೆ ಐಸಿಯು ಬೆಡ್‍ಗಾಗಿ ರಾತ್ರಿಯಿಂದ 50ಕ್ಕೂ ಹೆಚ್ಚು ಬಾರಿ ಫೋನ್ ಮಾಡಿ ಮನವಿ ಮಾಡಿಕೊಂಡ್ರೂ ಬೆಡ್ ಸಿಗಲಿಲ್ಲ. ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ವರದಿ ಪ್ರಸಾರವಾಗ್ತಿದ್ದಂತೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಆಗಿದೆ. ಆದರೆ, ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್‍ಗಳು ಹೆಚ್ಚಾಗ್ತಿರೋ ಕಾರಣ ಬೆಡ್‍ಗಳ ಸಮಸ್ಯೆ ಶುರುವಾಗಿದೆ ಅಂತ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಬೆಡ್ ಎಮರ್ಜೆನ್ಸಿ ಇದೆ ಅನ್ನೋದಕ್ಕೆ ಸಾಲು ಸಾಲು ಸಾಕ್ಷಿ ಕಣ್ಣ ಮುಂದಿದ್ರೂ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಇಲ್ಲ. ಯಾರಿಗೆ ಬೇಕಾದ್ರೂ ನಾನು ಆಸ್ಪತ್ರೆಯಲ್ಲಿ ಬೆಡ್ ಕೊಡಿಸಲಾಗುವುದು ಎಂದಿದ್ದಾರೆ.

    ಆರೋಗ್ಯ ಸಚಿವ ಸುಧಾಕರ್ ಅವರು, ಖಾಸಗಿ ಆಸ್ಪತ್ರೆಗಳು ಶೇ.15, ಶೇ.20 ರಷ್ಟು ಮಾತ್ರ ಹಾಸಿಗೆ ಬಿಟ್ಟು ಕೊಟ್ಟಿದ್ದಾರೆ. ಕೂಡಲೇ ನಿಗದಿ ಪಡಿಸಿದ ಬೆಡ್ ಗಳನ್ನು ನೀಡಲೇಬೇಕು. ಇಲ್ಲದಿದ್ರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.

    ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿಯಾಗಿದೆ. ಕಳೆದ ವರ್ಷದ ಆದೇಶವನ್ನೇ ಮರು ಅನುಷ್ಠಾನ ಮಾಡಲಾಗಿದೆ.

    ಕೊರೋನಾ ಚಿಕಿತ್ಸೆಗೆ ‘ಖಾಸಗಿ’ ದರ
    ಜನರಲ್ ವಾರ್ಡ್ : 5,200 ರೂ.
    ಆಕ್ಸಿಜನ್ ವಾರ್ಡ್ : 7,000 ರೂ.
    ಐಸಿಯು ವಾರ್ಡ್ : 8,500 ರೂ.
    ಐಸಿಯು ವಿತ್ ವೆಂಟಿಲೇಟರ್ : 10,000 ರೂ.

     

  • ರಮೇಶ್ ಜಾರಕಿಹೊಳಿಗೆ 3-4 ದಿನ ಐಸಿಯುನಲ್ಲಿ ಚಿಕಿತ್ಸೆ

    ರಮೇಶ್ ಜಾರಕಿಹೊಳಿಗೆ 3-4 ದಿನ ಐಸಿಯುನಲ್ಲಿ ಚಿಕಿತ್ಸೆ

    – ಆಕ್ಸಿಜನ್ ಪ್ರಮಾಣ ಕಡಿಮೆ, ಕೃತಕವಾಗಿ ಆಕ್ಸಿಜನ್ ಪೂರೈಕೆ

    ಬೆಳಗಾವಿ: ಸಿಡಿ ಕೇಸ್‍ನಲ್ಲಿ ಅತ್ಯಾಚಾರ ಆರೋಪ ಹೊತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಆರೋಗ್ಯ ಏರುಪೇರಾಗಿದ್ದು, ಆಕ್ಸಿಜನ್ ಶಾಚುರೇಶನ್ ಲೆವಲ್ ತುಂಬಾ ಕಡಿಮೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್ ಜಾರಕಿಹೊಳಿ, ರಕ್ತದಲ್ಲಿ ಆಮ್ಲಜನಕ ಪ್ರಮಾಣ ನಿಗದಿತ ಪ್ರತಿಶತಕ್ಕಿ ಕಡಿಮೆ ಆಗಿದೆ. ಕೃತಕ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರ ನಿರಂತರ ನಿಗಾ ವಹಿಸಿದ್ದಾರೆ. ಆಕ್ಸಿಜನ್ ಪ್ರಮಾಣ ಶೇ.90 ಕಡಿಮೆ, ಕೃತಕವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ರಮೇಶ್ ಜಾರಕಿಹೊಳಿ ಕೊಮಾರ್ಬಿಡ್ ರೋಗಿ, ಮಧುಮೇಹ ರಕ್ತದೊತ್ತಡ ಉಲ್ಬಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಈ ಕುರಿತು ಗೋಕಾಕ್ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಮಾಹಿತಿ ನೀಡಿದ್ದು, ಬೇರೆ ರಾಜ್ಯಕ್ಕೆ ಹೋಗಿ ಬಂದಿದ್ದರಿಂದ ಜ್ವರ ಬಂದಿದೆ ಎಂದರು. ಏಪ್ರಿಲ್ 1ರಂದು ಆರ್ ಟಿಪಿಸಿಆರ್ ಟೆಸ್ಟ್ ಮಾಡಿದೆವು, ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂತು. ಬಳಿಕ ರಮೇಶ್ ಜಾರಕಿಹೊಳಿ ಭಾನುವಾರ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದಾರೆ. ಉಸಿರಾಟದ ಸಮಸ್ಯೆ ಎಂದು ಆಸ್ಪತ್ರೆಗೆ ಆಗಮಿಸಿದ್ದು, ದಾಖಲಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

    ರಮೇಶ್ ಜಾರಕಿಹೊಳಿಯವರಿಗೆ ಪರೀಕ್ಷೆ ನಡೆಸಿದಾಗ ಶುಗರ್, ಬಿಪಿ ಜಾಸ್ತಿ ಇರುವುದು ಕಂಡುಬಂತು. ಸದ್ಯ ಐಸಿಯುನಲ್ಲಿದ್ದಾರೆ ಆರೋಗ್ಯದಲ್ಲಿ ಸ್ಥಿರವಾಗಿದೆ. ಉಸಿರಾಟದ ತೊಂದರೆ ಇದೆ, ಬಿಪಿ ಜಾಸ್ತಿ ಇತ್ತು. ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಡಿಸ್ಚಾರ್ಜ್ ಮಾಡುತ್ತೇವೆ. ಕನಿಷ್ಠ ಮೂರ್ನಾಲ್ಕು ದಿನವಾದರೂ ಅವರು ಐಸಿಯುನಲ್ಲಿರಬೇಕು. ಮಹಾರಾಷ್ಟ್ರ ಮತ್ತು ಬೆಂಗಳೂರಿಗೆ ಹೋಗಿ ಬಂದಿದ್ದರಿಂದ ಕೊರೊನಾ ಸೋಂಕು ತಗುಲಿರಬಹುದು. ಕೊವಿಡ್ ವಾರ್ಡ್ ನ ಐಸಿಯುನಲ್ಲಿ ತಜ್ಞ ವೈದ್ಯರಿಂದ ರಮೇಶ್ ಜಾರಕಿಹೊಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

    ರಮೇಶ್ ಜಾರಕಿಹೊಳಿಯವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಅವರ ಮನೆಯ ಅಡುಗೆ ಭಟ್ಟನಿಗೂ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

    ಜಾರಕಿಹೊಳಿ ಟ್ರಾವೆಲ್ ಹಿಸ್ಟರಿ
    ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಹಿನ್ನಲೆ ಆತಂಕ ಶುರುವಾಗಿದ್ದು, ಬೆಂಗಳೂರು, ಮಹಾರಾಷ್ಟ್ರ ಹಾಗೂ ಗೋಕಾಕ್‍ನಲ್ಲಿ ಅವರು ಸಂಚರಿಸಿದ್ದಾರೆ. ಹೀಗಾಗಿ ಅವರ ಟ್ರಾವೆಲ್ ಹಿಸ್ಟರಿ ಆತಂಕ ಹುಟ್ಟಿಸಿದೆ. ಮಾರ್ಚ್ 29ರ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದು, ರಸ್ತೆ ಮಾರ್ಗವಾಗಿ ಗೋಕಾಕ್ ನಿವಾಸಕ್ಕೆ ಬಂದಿದ್ದರು. ಮಾರ್ಚ್ 30ರಂದು ಗೋಕಾಕ್ ನಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೋಗಿದ್ದರು. ರಸ್ತೆ ಮಾರ್ಗವಾಗಿ ಆಪ್ತರೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮೀ ದೇವಿ ದರ್ಶನ ಪಡೆದುಕೊಂಡು ವಾಪಸ್ ಆಗಿದ್ದರು.

    ಬಳಿಕ ಗೋಕಾಕ್ ನಿವಾಸಕ್ಕೆ ಆಗಮಿಸಿದೇ ರಹಸ್ಯ ಸ್ಥಳದಲ್ಲಿದ್ದರು. ಇದಾದ ಮೇಲೆ ಎರಡು ದಿನಗಳ ಬಳಿಕ ಏಪ್ರಿಲ್ 1ರಂದು ಗೋಕಾಕ್ ನ ತಾಲೂಕು ಆಸ್ಪತ್ರೆಗೆ ಆಗಮಿಸಿದ್ದಾರೆ. ಜ್ವರ ಮತ್ತು ಕೆಮ್ಮು ಇದೆ ಎಂದು ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಕೊರೊನಾ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದಾರೆ. ಟೆಸ್ಟ್ ಬಳಿಕ ಕೊರೊನಾ ದೃಢವಾಗಿದೆ, ಈ ಹಿನ್ನಲೆ ಹೋಮ್ ಐಸೋಲೇಷನ್ ಆಗಿದ್ದರು. ಭಾನುವಾರ ರಾತ್ರಿ ಉಸಿರಾಟದ ಸಮಸ್ಯೆ ಹಿನ್ನಲೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೀಪಿ ಮತ್ತು ಶುಗರ್ ಕಡಿಮೆ ಇದೆ ಎಂಬ ಕಾರಣಕ್ಕೆ ಐಸಿಯುನಲ್ಲಿಟ್ಟು ರಮೇಶ್ ಜಾರಕಿಹೊಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ಕೋವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ – ಐವರು ಸೋಂಕಿತರು ದಾರುಣ ಸಾವು

    ಕೋವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ – ಐವರು ಸೋಂಕಿತರು ದಾರುಣ ಸಾವು

    ಗಾಂಧಿನಗರ: ಕೋವಿಡ್ 19 ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಐವರು ಕೊರೊನಾ ರೋಗಿಗಳು ದಾರುಣವಾಗಿ ಮೃತಪಟ್ಟ ಘಟನೆ ಗುಜರಾತ್ ನಲ್ಲಿ ನಡೆದಿದೆ.

    ರಾಜ್‍ಕೋಟ್‍ನ ಉದಯ ಶಿವಾನಂದ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವಘಡ ಸಂಭವಿಸಿದ ಸಮಯದಲ್ಲಿ ಆಸ್ಪತ್ರೆಯಲ್ಲಿ 33 ಮಂದಿ ಕೊರೊನಾ ಸೋಂಕಿತರಿದ್ದರು. ಈ ಪೈಕಿ ಐವರು ಅಗ್ನಿ ದುರಂತಕ್ಕೆ ತುತ್ತಾಗಿದ್ದಾರೆ.

    ಘಟನೆ ನಡೆಯುತ್ತಿದ್ದಂತೆಯೇ ಮಾಹಿತಿ ಅರಿತ ಅಗ್ನಿಶಾಮದಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಿಟಕಿ ಮೂಲಕ ಉಳಿದವರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಅವರನ್ನು ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಘಟನೆ ಸಂಬಂಧ ತನಿಖೆ ನಡೆಸುವಂತೆ ಹಾಗೂ ಘಟನೆಗೆ ಕಾರಣವೇನು ಎಂಬುದನ್ನು ತಿಳಿದು ವರದಿ ನೀಡುವಂತೆ ಆದೇಶಿಸಿದ್ದಾರೆ.

    ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸುವುದು ಇದೇ ಮೊದಲಲ್ಲ. ಈ ಹಿಂದೆಯೂ ಗುಜರಾತ್ ನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ನಡೆದಿವೆ. ಆಗಸ್ಟ್ 6 ರಂದು ಅಹಮ್ಮದಾಬಾದ್ ಆಸ್ಪತ್ರೆ, ಆಗಸ್ಟ್ 25ರಂದು ಜಾಮ್ ನಗರ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

  • ಹೆಚ್ಚಾಗುತ್ತಿದೆ ಕೊರೊನಾ ಐಸಿಯು ರೋಗಿಗಳ ಸಂಖ್ಯೆ- ಒಂದೇ ದಿನ 173 ಮಂದಿ ಐಸಿಯುಗೆ ಶಿಫ್ಟ್

    ಹೆಚ್ಚಾಗುತ್ತಿದೆ ಕೊರೊನಾ ಐಸಿಯು ರೋಗಿಗಳ ಸಂಖ್ಯೆ- ಒಂದೇ ದಿನ 173 ಮಂದಿ ಐಸಿಯುಗೆ ಶಿಫ್ಟ್

    – ಬುಧವಾರದ ವರೆಗೆ 452 ಸೋಂಕಿತರು ಐಸಿಯುಗೆ ಶಿಫ್ಟ್

    ಬೆಂಗಳೂರು: ರೋಗ ಲಕ್ಷಣ ಇಲ್ಲದ, ಕಡಿಮೆ ರೋಗ ಲಕ್ಷಣ ಇರುವ ರೋಗಿಗಳ ನಿಯಂತ್ರಣವೇ ಸರ್ಕಾರಕ್ಕೆ ಸವಾಲಾಗಿದ್ದು, ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರ ಗತಿ ಏನು ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ದಿನೇ ದಿನೇ ಐಸಿಯುಗೆ ಶಿಫ್ಟ್ ಆಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಭರ್ತಿಯಾಗುವ ಆತಂಕ ಕಾಡುತ್ತಿದೆ.

    ರಾಜ್ಯದಲ್ಲಿ ಕೊರೊನಾ ಐಸಿಯು ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಬುಧವಾರ ಒಂದೇ ದಿನ 173 ಸೋಂಕಿತರು ಐಸಿಯುಗೆ ಶಿಫ್ಟ್ ಆಗಿದ್ದಾರೆ. ಐಸಿಯುಗೆ ಶಿಫ್ಟ್ ಆಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳವಾರ 279 ಸೋಂಕಿತರು ಐಸಿಯುನಲ್ಲಿದ್ದರು. ಬುಧವಾರದ ಹೊತ್ತಿಗೆ ಇದು ಡಬಲ್ ಆಗಿದ್ದು, ಐಸಿಯುನಲ್ಲಿರುವ ಸೋಂಕಿತರ ಸಂಖ್ಯೆ 452ಕ್ಕೆ ಏರಿಕೆಯಾಗಿದೆ.

    ಬುಧವಾರ ಒಂದೇ ದಿನ ಬೆಂಗಳೂರಿನಲ್ಲಿ 115 ಮಂದಿ ಐಸಿಯುಗೆ ಸ್ಥಳಾಂತರವಾಗಿದ್ದಾರೆ. ಮಂಗಳವಾರದ ವರೆಗೆ ಬೆಂಗಳೂರಿನಲ್ಲಿ ಐಸಿಯುನಲ್ಲಿದ್ದ ಸೋಂಕಿತರ ಸಂಖ್ಯೆ 175, ಬುಧವಾರದ ಹೊತ್ತಿಗೆ ಈ ಸಂಖ್ಯೆ 290ಕ್ಕೆ ಹೆಚ್ಚಿದೆ.

    ಐಸಿಯುನಲ್ಲಿರುವ ಸೋಂಕಿತರ ಜಿಲ್ಲಾವಾರು ಅಂಕಿಅಂಶ
    ಬೆಂಗಳೂರು 290, ಧಾರವಾಡದಲ್ಲಿ 21, ರಾಯಚೂರು 18, ಬಳ್ಳಾರಿ 14, ಕಲಬುರಗಿ 13, ಮೈಸೂರು 11, ಬೀದರ್ 11, ಮಂಡ್ಯ 10, ಬೆಳಗಾವಿ 9, ಗದಗ, ತುಮಕೂರು, ದಕ್ಷಿಣ ಕನ್ನಡ, ಹಾಸನ ತಲಾ 7, ಶಿವಮೊಗ್ಗ 5, ಬಾಗಲಕೋಟೆ 4, ದಾವಣಗೆರೆ 3, ಚಿಕ್ಕಬಳ್ಳಾಪುರ 3, ಚಾಮರಾಜನಗರ 2, ಕೊಪ್ಪಳ 2, ಉಡುಪಿ 2 ಹಾಗೂ ಕೊಡಗು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ವಿಜಯಪುರ, ಹಾವೇರಿ, ರಾಮನಗರಗಳಲ್ಲಿ ತಲಾ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಬೆಂಗಳೂರಿನಲ್ಲಿ ಇಂದು ಕೊರೊನಾಗೆ 6 ಬಲಿ, 150ಕ್ಕೇರಿದ ಸಾವಿನ ಸಂಖ್ಯೆ

    ಬೆಂಗಳೂರಿನಲ್ಲಿ ಇಂದು ಕೊರೊನಾಗೆ 6 ಬಲಿ, 150ಕ್ಕೇರಿದ ಸಾವಿನ ಸಂಖ್ಯೆ

    -120 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸಾವಿನ ಓಟ ಮುಂದುವರಿದಿದ್ದು, ಇಂದು 8 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 150ಕ್ಕೇರಿದೆ. ಉಳಿದಂತೆ ಅನ್ಯ ಕಾರಣಗಳಿಂದ ನಾಲ್ವರು ಮೃತ ಪಟ್ಟಿದ್ದಾರೆ.

    ಬೆಂಗಳೂರು ನಗರದಲ್ಲಿ ಇಂದು 6 ಮಂದಿ ಸಾವನ್ನಪ್ಪಿದ್ದು, ದಕ್ಷಿಣ ಕನ್ನಡ, ಬಳ್ಳಾರಿಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಇತ್ತ ರಾಜ್ಯದಲ್ಲಿ 120 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಸಂಖ್ಯೆ ಒಂದೇ ದಿನ 40 ಪ್ರಕರಣಗಳು ಹೆಚ್ಚಾಗಿದೆ. ಉಳಿದಂತೆ ಒಟ್ಟು 3,563 ಕೋವಿಡ್ ಸೋಂಕಿತ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದೆ.

    ಸಾವನ್ನಪ್ಪಿದವರ ವಿವರ:
    1.ರೋಗಿ 6282: ದಕ್ಷಿಣ ಕನ್ನಡ ಜಿಲ್ಲೆಯ 70 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ ಜ್ವರ, ಮೈಕೈ ನೋವಿನಿಂದ ಬಳಲುತ್ತಿದ್ದ ಇವರು ಜೂನ್ 10 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 23 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

    2. ರೋಗಿ 7623: ಬೆಂಗಳೂರಿನ 47 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಜೂನ್ 14ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಜ್ವರ, ಉಸಿರಾಟದ ತೊಂದರೆ, ಕೆಮ್ಮು, ಡಯಾಬಿಟಿಸ್ ಮತ್ತು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 20ರಂದು ನಿಧನರಾಗಿದ್ದಾರೆ.

    3. ರೋಗಿ 8870: ಬೆಂಗಳೂರಿನ 85 ವರ್ಷದ ವದ್ಧೆ. ವಿಷಮ ಶೀತ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ, ಹೃದಯ ಸಂಬಂಧ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಯಿಂದ ವೃದ್ಧೆ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 22 ರಂದು ನಿಧನರಾಗಿದ್ದಾರೆ.

    4. ರೋಗಿ 8996: ಬೆಂಗಳೂರಿನ 81 ವರ್ಷದ ವೃದ್ಧ. ವಿಷಮಶೀತ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದವು. ಜೂನ್ 19ರಂದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಜೂನ್ 22ರಂದು ನಿಧನರಾಗಿದ್ದಾರೆ. ವೃದ್ಧ ರಕ್ತದೊತ್ತಡದಿಂದ ಬಳಲುತ್ತಿದ್ದರು.

    5. ರೋಗಿ 9503: ಬೆಂಗಳೂರಿನ 32 ವರ್ಷದ ಪುರುಷ, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 18 ರಂದು ಆಸ್ಪತ್ರೆ ಗೆ ದಾಖಲಾಗಿದ್ದರು. ಅಂದೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ, ಜ್ವರ, ಉಸಿರಾಟದ ತೊಂದರೆ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು.

    6. ರೋಗಿ 9508: ಬೆಂಗಳೂರಿನ 67 ವರ್ಷದ ಪುರುಷ, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 20 ರಂದು ಆಸ್ಪತ್ರೆ ಗೆ ದಾಖಲಾಗಿದ್ದರು. ಜೂನ್ 21ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜ್ವರ, ಉಸಿರಾಟದ ತೊಂದರೆ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು.

    7. ರೋಗಿ 9518: ಬೆಂಗಳೂರಿನ 40 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 20 ರಂದು ಆಸ್ಪತ್ರೆ ಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 21ರಂದು ಸಾವನ್ನಪ್ಪಿದ್ದಾರೆ. ರಕ್ತದೊತ್ತಡದಿಂದ ಬಳಲುತ್ತಿದ್ದರು.

    8. ರೋಗಿ 9679: ಬಳ್ಳಾರಿಯ 85 ವರ್ಷದ ವೃದ್ಧೆ. ತೀವ್ರ ಉಸಿರಾಟದ ತೊಂದರೆ ಮತ್ತು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಜೂನ್ 17ರಂದು ಆಸ್ಪತ್ರೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 22ರಂದು ನಿಧನರಾಗಿದ್ದಾರೆ.

  • ನವೆಂಬರ್‌ನಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ – ಐಸಿಎಂಆರ್‌ ನೀಡಿದ ವರದಿಯಲ್ಲಿ ಏನಿದೆ?

    ನವೆಂಬರ್‌ನಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ – ಐಸಿಎಂಆರ್‌ ನೀಡಿದ ವರದಿಯಲ್ಲಿ ಏನಿದೆ?

    – ಲಾಕ್‌ಡೌನ್‌ ಘೋಷಣೆಯಿಂದ ಸೋಕು ಹರಡುವ ವೇಗ ಇಳಿಕೆ
    – ಐಸಿಯು, ವೆಂಟಿಲೇಟರ್‌ ಕೊರತೆ ಕಾಡಬಹುದು

    ನವದೆಹಲಿ: ನವೆಂಬರ್‌ ವೇಳೆಗೆ ಭಾರತ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ.

    ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಶೋಧಕರ ತಂಡವನ್ನು ರಚಿಸಿತ್ತು. ಐಸಿಎಂಆರ್ ರಚನೆ ಮಾಡಿರುವ ‘ಆಪರೇಷನ್ಸ್ ರಿಸರ್ಚ್ ಗ್ರೂಪ್‌’ ನಡೆಸಿದ ಸಾಂಖ್ಯಿಕ ಅಧ್ಯಯನ ತಿಳಿಸಿದೆ.

    ವರದಿಯಲ್ಲಿ ಏನಿದೆ?
    ಸದ್ಯ ಈಗ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿದೆ. ಮುಂದೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಲಾಕ್‌ಡೌನ್‌ ಘೋಷಣೆಯಿಂದಾಗಿ ಸೋಂಕು ಹರಡುವ ವೇಗ ಇಳಿಕೆಯಾಗಿದೆ.

    ಭಾರತದಲ್ಲಿ ಜುಲೈ ವೇಳೆಗೆ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟ ತಲುಪಬೇಕಿತ್ತು. ಆದರೆ 8 ವಾರಗಳ ಲಾಕ್‌ಡೌನ್‌ ಘೋಷಣೆಯಿಂದಾಗಿ ಸೋಂಕು ಗರಿಷ್ಠ ಮಟ್ಟಕ್ಕೆ ಹೋಗುವುದು 34ರಿಂದ 76 ದಿನಗಳಷ್ಟು ಮುಂದಕ್ಕೆ ಹೋಗಿದೆ. ಮುಂದಕ್ಕೆ ಹೋಗಿರುವ ಕಾರಣ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಮಯ ಸಿಕ್ಕಿದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಸೋಂಕಿತರ ಸಂಖ್ಯೆ ಶೇ.69ರಿಂದ ಶೇ.97ರಷ್ಟು ಕಡಿಮೆಯಾಗಿದೆ.

    ಗರಿಷ್ಠ ಮಟ್ಟ ತಲುಪುವ ಸಂದರ್ಭದಲ್ಲಿ ತೀವ್ರ ನಿಗಾ ಘಟಕ(ಐಸಿಯು), ವೆಂಟಿಲೇಟರ್‌, ಐಸೋಲೇಷನ್‌ ಹಾಸಿಗೆಗಳ ಕೊರತೆ ಕಾಡಬಹುದು. ಹೀಗಾಗಿ ಲಸಿಕೆ ಬರುವವರೆಗೂ ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್, ಐಸೊಲೇಷನ್ ಮಾಡುತ್ತಲೇ ಇರಬೇಕು ಎಂದು ಎಂದು ತಿಳಿಸಿದೆ.

    17 ಹೈ ರಿಸ್ಕ್‌ ವರ್ಗಗಳನ್ನ ಸಮೀಕ್ಷೆ ನಡೆಸಿ:
    17 ವರ್ಗದ ಜನರನ್ನು ಹೈ ರಿಸ್ಕ್‌ ಜನರೆಂದು ಐಸಿಎಂಆರ್‌ ಹೇಳಿದ್ದು ಅವರನ್ನು ತಪಸಾಣೆಗೆ ಒಳಪಡಿಸಿ ಎಂದು ಐಸಿಎಂಆರ್‌ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಎಚ್‌ಐವಿ, ಉಸಿರಾಟ ತೊಂದರೆ, ಕ್ಷಯ, ಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳು, ಕಂಟೈನ್ಮೆಂಟ್‌ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ, ವೈದ್ಯಕೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮದ ವರದಿಗಾರರು, ಛಾಯಾಗ್ರಾಹಕರು, ಪೊಲೀಸರು, ನಗರದಿಂದ ವಲಸೆ ಬಂದ ಗ್ರಾಮೀಣ ಜನ, ಮಾರುಕಟ್ಟೆಗೆ ಭೇಟಿ ನೀಡುತ್ತಿರುವ ರೈತರು, ವ್ಯಾಪಾರಿಗಳು, ಚಾಲಕರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್‌, ಅಂಚೆ, ದೂರವಾಣಿ ಸಿಬ್ಬಂದಿ, ವಿಮಾನಯಾನ ಸಿಬ್ಬಂದಿ, ವೃದ್ಧಾಶ್ರಮ, ಅನಾಥಶ್ರಮಗಳಲ್ಲಿರುವ ಸಿಬ್ಬಂದಿ, ಜೈಲಿನಲ್ಲಿರುವ ಕೈದಿಗಳನ್ನು ಸಮೀಕ್ಷೆ ನಡೆಸುವಂತೆ ಸೂಚಿಸಿದೆ.

    ಸದ್ಯ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಗಿಂದ ಡಿಸ್ಚಾರ್ಜ್‌ ಆದವರ ಸಂಖ್ಯೆಯೇ ಹೆಚ್ಚಿದೆ. 3,33,012 ಮಂದಿಗೆ ಸೋಂಕು ಬಂದಿದ್ದರೆ 1,69,691 ಮಂದಿ ಗುಣಮುಖರಾಗಿದ್ದಾರೆ. 1,53,762 ಸಕ್ರಿಯ ಪ್ರಕರಣಗಳಿದ್ದು, 9,520 ಮಂದಿ ಮೃತಪಟ್ಟಿದ್ದಾರೆ. ಆತಂಕದ ಸಂಗಂತಿ ಏನೆಂದರೆ ಪ್ರತಿ ದಿನವೂ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಒಂದೇ ದಿನ 14,718 ಮಂದಿಗೆ ಸೋಂಕು ತಗಲಿದ್ದು, 408 ಮಂದಿ ಮೃತಪಟ್ಟಿದ್ದಾರೆ.

    ಕರ್ನಾಟಕದಲ್ಲಿಒಟ್ಟು 7,000 ಮಂದಿಗೆ ಮಂದಿಗೆ ಸೋಂಕು ಬಂದಿದ್ದರೆ, 3,955 ಮಂದಿ ಗುಣಮುಖರಾಗಿದ್ದಾರೆ. 2,956 ಸಕ್ರಿಯ ಪ್ರಕರಣಗಳಿದ್ದು, 86 ಮಂದಿ ಮೃತಪಟ್ಟಿದ್ದಾರೆ.