Tag: Iceland Cricket

  • ಐಸ್‍ಲ್ಯಾಂಡ್ ಕ್ರಿಕೆಟಿನಿಂದ ಆಫರ್ ಬಂದ ಮರುದಿನ ರಾಯುಡು ನಿವೃತ್ತಿ

    ಐಸ್‍ಲ್ಯಾಂಡ್ ಕ್ರಿಕೆಟಿನಿಂದ ಆಫರ್ ಬಂದ ಮರುದಿನ ರಾಯುಡು ನಿವೃತ್ತಿ

    ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಆಡಲು ಅವಕಾಶ ಪಡೆಯುವಲ್ಲಿ ವಿಫಲರಾದ ಅಂಬಟಿ ರಾಯುಡು ಅವರಿಗೆ ಐಸ್‍ಲ್ಯಾಂಡ್ ಕ್ರಿಕೆಟ್ ಆಫರ್ ನೀಡಿದೆ.

    ಆಂಧ್ರಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಅಂಬಟಿ ರಾಯುಡು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಟೀಂ ಇಂಡಿಯಾ 15ರ ಬಳಗದಲ್ಲಿ ರಾಯುಡು ಬದಲಿಗೆ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಅವರಿಗೆ ಬಿಸಿಸಿಐ ಮಣೆ ಹಾಕಲಿಲ್ಲ. ಈ ಮಧ್ಯೆ ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಅಂಬಟಿ ರಾಯುಡು ಅವರಿಗೆ ಭರ್ಜರಿ ಆಫರ್ ನೀಡಿದೆ.

    ವಿಶ್ವಕಪ್ ಟೂರ್ನಿಯಲ್ಲಿ ಬಿಸಿಸಿಐ ರಾಯುಡು ಅವರನ್ನು ಕಡೆಗಣಿಸಿದ್ದನ್ನು ಅವಕಾಶವಾಗಿ ಪಡೆದ ಐಸ್‍ಲ್ಯಾಂಡ್ ಆಫರ್ ನೀಡಿದೆ. ಈ ಕುರಿತು ಟ್ವೀಟ್ ಮಾಡಿ, ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ಟ್ವೀಟ್ ಬೆನ್ನಲ್ಲೇ ರಾಯುಡು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

    ಮಯಾಂಕ್ ಅಗರ್ವಾಲ್ 3 ವಿಕೆಟ್ ಹೊಂದಿದ್ದಾರೆ. ಹೀಗಾಗಿ ಅಂಬಟಿ ರಾಯುಡು ನೀವು 3ಡಿ ಗ್ಲಾಸ್ ಪಕ್ಕಕ್ಕೆ ಇರಿಸಿ. ಸಾಮಾನ್ಯ ಕನ್ನಡಕ ಬಳಸಿ ಈ ದಾಖಲೆಗಳನ್ನು ಓದಿ. ನಮ್ಮ ಜೊತೆ ಬಂದು ಕೈ ಜೋಡಿಸಿ. ನಾವು ನಿಮ್ಮನ್ನು ಇಷ್ಟಪಡುತ್ತೇವೆ ಎಂದು ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ. ಟ್ವೀಟ್ ಜೊತೆಗೆ ಐಸ್‍ಲ್ಯಾಂಡ್ ಪೌರತ್ವ ಪಡೆಯಲು ಯಾವ ದಾಖಲೆಗಳನ್ನು ನೀಡಬೇಕು ಎಂದು ಕೂಡ ತಿಳಿಸಲಾಗಿದೆ.

    4ನೇ ಸ್ಥಾನಕ್ಕೆ ತ್ರಿ ಡೈಮೆನ್ಶನ್ ಪ್ಲೇಯರ್ ಅಗತ್ಯವಿತ್ತು. ಹೀಗಾಗಿ ಅಂಬಟಿ ರಾಯುಡು ಬದಲು ವಿಜಯ್ ಶಂಕರ್ ಗೆ ಸ್ಥಾನ ನೀಡಲಾಗಿತ್ತು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಪ್ರಸಾದ್ ಅವರ ಹೇಳಿಕೆ ರಾಯುಡು ಅವರನ್ನು ಕೆರಳಿಸಿತ್ತು. ಹೀಗಾಗಿ ರಾಯುಡು ‘3ಡಿ ಗ್ಲಾಸ್ (ತ್ರಿ ಡೈಮೆನ್ಶನ್) ಖರೀದಿಸಿ ವಿಶ್ವಕಪ್ ಪಂದ್ಯ ನೋಡುವುದಾಗಿ ಟ್ವೀಟ್ ಮಾಡಿದ್ದರು.

    ಅಂಬಾಟಿ ರಾಯುಡು ಟ್ವೀಟ್ ಸಖತ್ ಟ್ರೋಲ್ ಆಗಿತ್ತು. ಟೂರ್ನಿ ನಡುವೆ ವಿಜಯ್ ಶಂಕರ್ ಗಾಯಗೊಂಡಾಗ ರಾಯುಡು ಬದಲು ಮಯಾಂಕ್ ಅಗರ್ವಾಲ್‍ಗೆ ಅವಕಾಶ ನೀಡಲಾಯಿತು. ಈ ವೇಳೆ ಮತ್ತೆ ರಾಯುಡು 3ಡಿ ಗ್ಲಾಸ್ ವಿಚಾರ ಟ್ರೋಲ್ ಆಯಿತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಕೂಡ ಪರೋಕ್ಷವಾಗಿ ರಾಯುಡು ಕಾಲೆಳೆದಿದೆ.

    ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಜುಲೈ 2 ರಂದು ಟ್ವೀಟ್ ಮಾಡಿದ್ದು, ಇದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 3 ಮಧ್ಯಾಹ್ನದ ವೇಳೆಗೆ 402 ರೀ ಟ್ವೀಟ್ ಆಗಿದ್ದು, 1,400ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

    ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ಈ ರೀತಿ ಟ್ವೀಟ್ ಮಾಡಬಾರದಿತ್ತು ಎಂದು ನೆಟ್ಟಿಗರು ಹೇಳಿದ್ದಾರೆ. ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ ವಿದೇಶಿ ಆಟಗಾರರ ಕಾಲೆಳೆದಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ಬಗ್ಗೆ ವ್ಯಂಗ್ಯವಾಡಿ, ಕ್ಷಮೆ ಕೇಳಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ 110 ರನ್ ಬಿಟ್ಟುಕೊಟ್ಟಿದ್ದರು. ಈ ಕುರಿತು ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದ ಐಸ್‍ಲ್ಯಾಂಡ್ ಕ್ರಿಕೆಟ್ ಮಂಡಳಿ, ರಶೀದ್ ಖಾನ್ ಅಫ್ಘಾನಿಸ್ತಾನದ ಪರವಾಗಿ ಮೊದಲ ಶತಕ ಬಾರಿಸಿದ್ದಾರೆ ಎಂಬ ವಿಚಾರ ಈಗ ತಾನೇ ತಿಳಿಯಿತು. 56 ಎಸೆತಗಳಲ್ಲಿ 110 ರನ್‍ಗಳು! ಬೌಲರ್ ಒಬ್ಬರು ಇಷ್ಟು ಸ್ಕೋರ್ ಮಾಡಿದ್ದು ಇದೇ ಮೊದಲು. ಒಳ್ಳೆಯ ಬ್ಯಾಟಿಂಗ್ ಮಾಡಿದ್ದೀರಾ ಎಂದು ಹೇಳಿತ್ತು.

    ಐಸ್‍ಲ್ಯಾಂಡ್  ಕ್ರಿಕೆಟ್ ಮಂಡಳಿ ಟ್ವೀಟ್‍ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ದಿಗ್ಗಜ ಕ್ರಿಕೆಟಿಗರೂ ಕೂಡ ಅಸಮಾಧಾನ ಹೊರ ಹಾಕಿದ್ದರು. ಭಾರೀ ಟೀಕೆ ವ್ಯಕ್ತವಾಗಿದ್ದರಿಂದ ಐಸ್‍ಲೆಂಡ್ ಕ್ಷಮೆಯಾಚಿಸಿತ್ತು.