Tag: Ice Cream

  • ಐಸ್‍ಕ್ರೀಮ್ ಸವಿದು, ಜಿಮ್ ಮಾಡಿ ಫುಲ್ ಎಂಜಾಯ್ ಮೂಡ್‍ನಲ್ಲಿ ತಾಲಿಬಾನಿಗಳು

    ಐಸ್‍ಕ್ರೀಮ್ ಸವಿದು, ಜಿಮ್ ಮಾಡಿ ಫುಲ್ ಎಂಜಾಯ್ ಮೂಡ್‍ನಲ್ಲಿ ತಾಲಿಬಾನಿಗಳು

    – ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ ಗೆ ತಯಾರಾಗುತ್ತಿದ್ದಾರೆ ಎಂದ ನೆಟ್ಟಿಗರು

    ಕಾಬೂಲ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಫುಲ್ ಎಂಜಾಯ್ ಮೂಡ್‍ನಲ್ಲಿದ್ದು, ಇತ್ತೀಚೆಗಷ್ಟೇ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಸ್ತ್ ಮಜಾ ಮಾಡಿದ್ದರು. ಇದೀಗ ಐಸ್ ಕ್ರೀಮ್ ಸವಿದು, ಜಿಮ್ ಮಾಡಿದ ವೀಡಿಯೋಗಳು ವೈರಲ್ ಆಗಿವೆ. ಇದು ಅದೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ರಾಜಧಾನಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ದುಃಖಕರ ಸ್ಥಿತಿಯನ್ನು ವ್ಯಂಗ್ಯ ಮಾಡಿದಂತಿದೆ.

    ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನಿಗಳು ಫುಲ್ ಎಂಜಾಯ್ ಮೂಡ್‍ನಲ್ಲಿದ್ದಾರೆ. ಈ ಕುರಿತ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ಈ ಹಿಂದೆ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳ ಆಟದ ಕಾರುಗಳನ್ನು ಹತ್ತಿ, ಆಟವಾಡಿ ಖುಷಿಪಟ್ಟಿದ್ದ ವೀಡಿಯೋಗಳು ವೈರಲ್ ಆಗಿದ್ದವು. ಅದರೆ ಇದೀಗ ಐಸ್ ಕ್ರೀಮ್ ಸವಿದು, ಜಿಮ್ ಮಾಡಿರುವ ವೀಡಿಯೋಗಳು ವೈರಲ್ ಆಗಿವೆ. ಆದರೆ ಪಾರ್ಲರ್ ಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಐಸ್ ಕ್ರೀಮ್ ಸವಿಯುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಾಲಿಬಾನಿಗಳು ಹೇಳಿದ್ದಾರೆ. ಅಲ್ಲದೆ ಐಸ್ ಕ್ರೀಮ್ ಅಂಗಡಿಗೆ ಆಗಮಿಸಿದ ತಾಲಿಬಾನಿಗಳು, ಅವರೇ ವಿವಿಧ ಬಗೆಯ ಐಸ್ ಕ್ರೀಮ್ ಹಾಕಿಕೊಂಡು ಸೇವಿಸಿ ತೆರಳಿದ್ದಾರೆ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು

    ಅಮ್ಯೂಸ್‍ಮೆಂಟ್ ಪಾರ್ಕ್‍ಗಳಲ್ಲಿ ಮಕ್ಕಳಂತೆ ಆಟವಾಡುವುದು, ಐಸ್‍ಕ್ರೀಮ್ ಸವಿಯುವುದು, ಜಿಮ್ ಮಾಡುವುದು ಸೇರಿಂದತೆ ಫುಲ್ ಮಜಾ ಮಾಡುತ್ತಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ ಗೆ ತಯಾರಾಗುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದೃಶ್ಯಗಳನ್ನು ಕಂಡು ಜಗತ್ತು ಭಯದಿಂದಲೇ ನೋಡುತ್ತಿದೆ. ಅಲ್ಲದೆ ತಾಲಿಬಾನ್ ದಂಗೆಕೋರರು ಮನೆಗೆ ಪ್ರವೇಶಿಸುತ್ತಿದ್ದಂತೆ ಮಹಿಳೆಯರ ಆಕ್ರಂದನ ಆಘಾತಕ್ಕೆ ಸಿಲುಕಿಸುತ್ತಿದೆ. ಇಷ್ಟಾದರೂ ತಾಲಿಬಾನಿಗಳು ಮಾತ್ರ ಎಂಜಾಯ್ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.

  • ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಪಿ.ವಿ ಸಿಂಧು ಜೊತೆ ಐಸ್‍ಕ್ರೀಂ ಸವಿಯುವ ಮೂಲಕ ಮೋದಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

    ಮೋದಿ ತಮ್ಮ ನಿವಾಸದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಫೋಟೋ ಹಂಚಿಕೊಂಡು ಧನ್ಯವಾದ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ ಮೋದಿ ಮಾತುಕತೆ ನಡೆಸಿ ಫೋಟೋಗೆ ಫೋಸ್ ನೀಡಿದ್ದಾರೆ. ಮೋದಿ ವಿಶೇಷವಾಗಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೆಚ್ಚಿನ ಚೂರ್ಮಾ ಮಾಡಿಸಿ ಊಟ ಬಡಿಸಿದ್ದಾರೆ. ಭಾರತದ ಕುಸ್ತಿಪಟುಗಳ ಮತ್ತು ಹಾಕಿ ತಂಡದ ಎಲ್ಲ ಆಟಗಾರರೊಂದಿಗೂ ಕೂಡ ಮೋದಿ ಕುಶಲೋಪರಿ ವಿಚಾರಿಸಿ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.

  • ಐಸಿಯುನಲ್ಲಿ ಐಸ್‍ಕ್ರೀಂ ತಿಂದ ಮಹಿಳೆ ಸಾವು

    ಐಸಿಯುನಲ್ಲಿ ಐಸ್‍ಕ್ರೀಂ ತಿಂದ ಮಹಿಳೆ ಸಾವು

    ನವದೆಹಲಿ: ಐಸಿಯುನಲ್ಲಿ ವೈದ್ಯರ ಸಮ್ಮುಖದಲ್ಲೇ ಐಸ್‍ಕ್ರೀಂ ಸೇವಿಸಿದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದನ್ನೂ ಓದಿ:  ಕಾಡು ಹಂದಿಯನ್ನು ಕ್ರಿಮಿ ಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಂಭ: ಗೋವಾ ಸಿಎಂ

    ರೋಸಿ(29) ಮೃತ ಮಹಿಳೆಯಾಗಿದ್ದಾಳೆ. ಮೂಲತಃ ನಾಗಾಲ್ಯಾಂಡ್‍ನ ದಿಮಪುರದ ರೋಸಿ ದೆಹಲಿಯ ಬಿಜ್ವಸನ್ ಪ್ರದೇಶದಲ್ಲಿ ತನ್ನ ಅಕ್ಕನ ಮಗನ ಜೊತೆ ನೆಲೆಸಿದ್ದಳು. ಜೂ. 23ರಂದು ರೋಸಿಯ ಕೈ ಕಾಲುಗಳಿಂದ ರಕ್ತಸ್ರಾವ ಉಂಟಾಗಿ ತೀವ್ರ ನೋವಿನಿಂದ ಬಳಲುತ್ತಿದ್ದರು, ಆಸ್ಪತ್ರೆಗೆ ದಾಖಲಾಗಿರುವ ಈಕೆ ಐಸ್‍ಕ್ರೀಂ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ.

    ರೋಸಿಯ ಕೈ ಕಾಲುಗಳಿಂದ ರಕ್ತಸ್ರಾವ ಉಂಟಾಗಿ ತೀವ್ರ ನೋವಿನಿಂದ ಬಳಲುತ್ತಿದ್ದಳು. ಈ ವೇಳೆ ಆಕೆಯ ಅಕ್ಕನ ಮಗ ಸ್ಯಾಮ್ಯುಯೆಲ್ ಆಸ್ಪತ್ರೆಗೆ ದಾಖಲಿಸಿದ್ದನು. ಆಕೆಯ ಆರೋಗ್ಯ ಸುಧಾರಿಸದ ಹಿನ್ನಲೆ ಜೂ. 24 ರಂದು ಗುರುಗ್ರಾಮದ ಸೆಕ್ಟರ್ 10ರಲ್ಲಿನ ಆಲ್ಫಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಆಕೆಯ ಆರೋಗ್ಯ ಕೂಡ ಸುಧಾರಿಸಿದ್ದು, ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿಯೇ ಆಕೆ ಐಸ್‍ಕ್ರೀಂ ಸೇವಿಸಿದರು. ಇದಾದ ಸ್ಪಲ್ಪ ಹೊತ್ತಿನಲ್ಲಿಯೇ ಆಕೆ ಸಾವನ್ನಪ್ಪಿದ್ದಾಳೆ.

    ಐಸಿಯುನಲ್ಲಿ ಬೇರೆ ರೋಗಿ ಐಸ್‍ಕ್ರೀಂ ತಿನ್ನುವುದನ್ನು ನೋಡಿ ರೋಸಿ ಕೂಡ ಕೇಳಿದರು. ಅವರು ಸ್ಪ ಇಚ್ಛೆಯಿಂದ ಐಸ್ ಕ್ರೀಂ ತಿಂದಿದ್ದು, ಇದಕ್ಕೂ ತಮಗೂ ಸಂಬಂಧವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆಸ್ಪತ್ರೆ ಅದರಲ್ಲೂ ಐಸಿಯುನಲ್ಲಿ ರೋಗಿಗಳಿಗೆ ಅವರು ಐಸ್ ಕ್ರೀಂ ಅನ್ನು ಹೇಗೆ ನೀಡಿದ್ದಾರೆ. ಐಸಿಯುನಲ್ಲಿ ಇಂತಹ ವಸ್ತುಗಳನ್ನು ನೀಡಬಾರದು ಅಲ್ಲವೇ. ಈ ಘಟನೆ ಹಾಗೂ ವೈದ್ಯರ ನಿರ್ಲಕ್ಷ್ಯದ ಕುರಿತು ಸ್ಯಾಮುಯೆಲ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಹರಿಯಬಿಟ್ಟಿದ್ದಾನೆ. ಚಿಕ್ಕಮ್ಮನ ಸಾವಿನ ಕುರಿತು ನ್ಯಾಯಕ್ಕೆ ಆಗ್ರಹಿಸಿ ವೀಡಿಯೋ ಮಾಡಿದ್ದನು.

    ಇದಾದ 24 ಗಂಟೆಗಳ ಬಳಿಕ ಸ್ಯಾಮುಯೆಲ್ ಕೂಡ ಸಾವನ್ನಪ್ಪಿದ್ದಾನೆ. ಆತನ ಹೋಟೆಲ್ ರೂಮ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ಆದರೆ, ಸ್ಯಾಮುಯೆಲ್ ಮುಖದ ಮೇಲೆ ಹಲ್ಲೆ ಮಾಡಿದ ಗುರುತುಗಳು ಕಂಡು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ, ಕುರಿತು ಸರ್ಕಾರ ತಮಗೆ ನ್ಯಾಯ ಒದಗಿಸಬೇಕು ಎಂದು ಸ್ಯಾಮುಯೇಲ್ ತಂದೆ ಹೇಳಿದ್ದಾರೆ.

    ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ. ವರದಿ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  • ಪಾಶ್‌ ಶಾಲೆಗಳಲ್ಲಿ ಐಸ್‌ಕ್ರೀಂ, ಹಣ್ಣುಗಳಲ್ಲಿ ಡ್ರಗ್ಸ್  – ಸುರೇಶ್‌ ಕುಮಾರ್‌

    ಪಾಶ್‌ ಶಾಲೆಗಳಲ್ಲಿ ಐಸ್‌ಕ್ರೀಂ, ಹಣ್ಣುಗಳಲ್ಲಿ ಡ್ರಗ್ಸ್ – ಸುರೇಶ್‌ ಕುಮಾರ್‌

    ಚಾಮರಾಜನಗರ: ಸ್ಯಾಂಡಲ್‌ವುಡ್‌ ಡ್ರಗ್ಸ್‌ ತನಿಖೆಯ ನಡೆಸುತ್ತಿರುವ ಹೊತ್ತಿನಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಪಾಶ್‌ ಶಾಲೆಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್‌ ಸೇವಿಸುತ್ತಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸುರೇಶ್‌ ಕುಮಾರ್‌ ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಶ್ರೀಮಂತ ಮಕ್ಕಳು ಓದುವ ಪಾಶ್‌ ಶಾಲೆಗಳಲ್ಲಿ ತಿನ್ನುವ ಐಸ್‍ಕ್ರೀಮ್‍, ಹಣ್ಣುಗಳಿಗೆ ಡ್ರಗ್ಸ್ ಸವರಿ ಕೊಡುವ ದೊಡ್ಡ ಬಗ್ಗೆ ದೊಡ್ಡ ಗುಮಾನಿ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

     

    ಯುವ ಜನತೆಯನ್ನ ಹಾಳು ಮಾಡುವ ಇಂತಹವರನ್ನ ನಾವು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

    ಡ್ರಗ್ಸ್‌ ಮೂಲಕ ಯುವ ಜನಾಂಗವನ್ನ ದುರ್ಬಲ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನ ಬೇರು ಸಮೇತವಾಗಿ ಕಿತ್ತು ಹಾಕಬೇಕು. ಯುವ ಜನತೆ ಡ್ರಗ್ಸ್ ಬಲಿಯಾಗುವುದನ್ನ ಸಮಾಜ ಸಹಿಸುವುದಿಲ್ಲ. ಮೂರು ವರ್ಷದ ಹಿಂದೆಯೇ ಈ ಬಗ್ಗೆ ಬಿಜೆಪಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದೆ ಎಂದು ಹೇಳಿದರು.

  • ಐಸ್‍ಕ್ರೀಮ್‍ನಲ್ಲಿ ವಿಷ ಹಾಕಿ ಸೋದರಿಯನ್ನೇ ಕೊಂದ ಅಣ್ಣ – ತಂದೆ ಸ್ಥಿತಿ ಗಂಭೀರ

    ಐಸ್‍ಕ್ರೀಮ್‍ನಲ್ಲಿ ವಿಷ ಹಾಕಿ ಸೋದರಿಯನ್ನೇ ಕೊಂದ ಅಣ್ಣ – ತಂದೆ ಸ್ಥಿತಿ ಗಂಭೀರ

    – ಮೊದಲು ಚಿಕನ್ ಕರ್ರಿಗೆ ವಿಷ ಹಾಕಿ ಕೊಲೆ ಯತ್ನ

    ತಿರುವನಂತಪುರಂ: ಐಸ್‍ಕ್ರೀಮ್‍ನಲ್ಲಿ ವಿಷ ಹಾಕಿ 16 ವರ್ಷದ ತಂಗಿಯನ್ನೇ ಸಹೋದರ ಕೊಲೆ ಮಾಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.

    ಅನ್ ಮೇರಿ (16) ಮೃತ ಸಹೋದರಿ. ಇದೀಗ ಪೊಲೀಸರು ಆರೋಪಿ ಅಲ್ಬಿನ್ ಬೆನ್ನಿಯನ್ನು ಕೊಲೆ ಆರೋಪದಡಿ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಅಲ್ಬಿನ್ ಮೊದಲು ಚಿಕನ್ ಕರ್ರಿಗೆ ವಿಷ ಬೆರೆಸಿ ಕುಟುಂಬದವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದನು. ನಂತರ ಐಸ್‍ಕ್ರೀಮ್‍ನಲ್ಲಿ ವಿಷವನ್ನು ಬೆರೆಸುವ ಮೂಲಕ ಸಹೋದರಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

    ಆಗಸ್ಟ್ 3 ರಂದು ಆರೋಪಿ ಅಲ್ಬಿನ್ ತಯಾರಿಸಿದ್ದ ಐಸ್ ಕ್ರೀಮ್ ತಿಂದು ತಂದೆ ಮತ್ತು ಸಹೋದರಿಗೆ ಫುಡ್ ಪಾಯಿಸನ್ ಆಗಿದೆ. ತಕ್ಷಣ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 6 ರಂದು ಮೇರಿ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವು ಅಸ್ವಾಭಾವಿಕ ಎಂದು ಬಂದಿದೆ. ಆದರೆ ಮೇರಿ ದೇಹದಲ್ಲಿ ವಿಷ ಇರುವುದು ಕಂಡು ಬಂದಿದೆ. ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರ್ಕಲ್ ಇನ್‍ಸ್ಪೆಕ್ಟರ್ ಪ್ರೇಮ್ ಸದನ್ ತಿಳಿಸಿದ್ದಾರೆ.

    ಐಸ್‍ಕ್ರೀಮ್ ತಿಂದ ನಂತರ ಮೇರಿ ಮತ್ತು ಅವಳ ತಂದೆಯ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರಿದೆ. ಆದರೆ ಐಸ್‍ಕ್ರೀಮ್ ತಿಂದ ನಂತರವೂ ತಾಯಿ ಮತ್ತು ಅಲ್ಬಿನ್ ಇಬ್ಬರೂ ಬದುಕಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ಆಗ ಅವರ ಮೇಲೆಗೆ ಹೋಗಿ ಪರಿಶೀಲನೆ ನಡೆಸಿದ್ದು, ಈ ವೇಳೆ ತಾಯಿ ಐಸ್‍ಕ್ರೀಮ್ ತಿಂದಿಲ್ಲ ಎಂಬುದು ತಿಳಿದು ಬಂದಿದೆ. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಚಿಕನ್ ಕರ್ರಿಯಲ್ಲಿ ವಿಷ:
    ಐಸ್ ಕ್ರೀಮ್ ತಯಾರಿಸುವ ಒಂದು ವಾರದ ಮೊದಲು ಚಿಕನ್ ಕರ್ರಿಯಲ್ಲಿ ವಿಷವನ್ನು ಬೆರೆಸಿದ್ದನು. ಆದರೆ ವಿಷ ಯಾರ ಮೇಲೂ ಪರಿಣಾಮ ಬೀರಲಿಲ್ಲ. ಹೀಗಾಗಿ ಜುಲೈ 29 ರಂದು ಮತ್ತೆ ವಿಷವನ್ನು ಖರೀದಿಸಿದ್ದಾನೆ. ಅಲ್ಲದೇ ವಿಷದ ಬಗ್ಗೆ ತನ್ನ ಫೋನ್‍ನಲ್ಲಿ ಹುಡುಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಂತೆಯೇ ಜುಲೈ 30 ರಂದು ಅಲ್ಬಿನ್ ಐಸ್ ಕ್ರೀಮ್ ತಯಾರಿಸಿ ಅದನ್ನು ಫ್ರಿಜ್‍ನಲ್ಲಿ ಇಟ್ಟುಕೊಂಡಿದ್ದನು. ಆಗಸ್ಟ್ 3 ರಂದು ವಿಷಪೂರಿತ ಐಸ್‍ಕ್ರೀಮ್ ಕೊಟ್ಟಿದ್ದಾನೆ. ಅದನ್ನ ತಿಂದ ಬೆನ್ನಿ ಮತ್ತು ಆನ್‍ಗೆ ಫುಡ್ ಪಾಸಿಯನ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಗುರುವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಅಲ್ಬಿನ್ ಏಕಾಂಗಿಯಾಗಿ ವಾಸಿಸಲು ಬಯಸಿದ್ದರಿಂದ ಇಡೀ ಕುಟುಂಬವನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾನೆಂದು ತಿಳಿದು ಬಂದಿದೆ. ಅಲ್ಲದೇ ಆತ ಮಾದಕ ವಸ್ತುವಿನ ವ್ಯಸನಿಯಾಗಿದ್ದನು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

  • ಫ್ರೀಯಾಗಿ ಐಸ್ ಕ್ರೀಂ ಕೊಡದಕ್ಕೆ ಗಾಡಿ ತೊಗೊಂಡು ಹೋದ ಪೊಲೀಸರು

    ಫ್ರೀಯಾಗಿ ಐಸ್ ಕ್ರೀಂ ಕೊಡದಕ್ಕೆ ಗಾಡಿ ತೊಗೊಂಡು ಹೋದ ಪೊಲೀಸರು

    – ವಿಡಿಯೋ ವೈರಲ್ ಬಳಿಕ ಎಸ್‍ಪಿ ಸ್ಪಷ್ಟನೆ

    ಲಕ್ನೋ/ಕಾನ್ಪುರ: ಉಚಿತವಾಗಿ ಐಸ್ ಕ್ರೀಂ ನೀಡದಕ್ಕೆ ಕೋಪಗೊಂಡ ಪೊಲೀಸರಿಬ್ಬರು ಗಾಡಿಯನ್ನು ತೆಗೆದುಕೊಂಡು ಹೋದ ಘಟನೆ ಉತ್ತರ ಪ್ರದೇಶದ ಬರ್ರಾದಲ್ಲಿ ನಡೆದಿದೆ. ಕರ್ತವ್ಯ ನಿರತ ಪೊಲೀಸ್ ಗಾಡಿಯನ್ನು ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?: ಓರ್ವ ಪೊಲೀಸ್ ಐಸ್ ಕ್ರೀಂ ಗಾಡಿಯನ್ನು ತೆಗೆದುಕೊಂಡು ಹೋಗ್ತಿದ್ದರೆ, ಮತ್ತೋರ್ವ ಪೊಲೀಸ್ ಬೈಕಿನಲ್ಲಿ ಹೋಗ್ತಿರೋದನ್ನ ಕಾಣಬಹುದು. ಐಸ್ ಕ್ರೀಂ ಗಾಡಿಯ ಹಿಂದೆ ಅದರ ಮಾಲೀಕ ಓಡುತ್ತಿದ್ದಾನೆ.

    ಈ ವಿಡಿಯೋ ವೈರಲ್ ಬಳಿಕ ಸ್ಪಷ್ಟನೆ ನೀಡಿರುವ ಎಸ್.ಪಿ. ಅಪರ್ಣಾ ಗುಪ್ತಾ, ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಐಸ್ ಕ್ರೀಂ ಮಾರಾಲಾಗುತ್ತಿತ್ತು. ಹಾಗಾಗಿ ಗಸ್ತಿನಲ್ಲಿದ್ದ ಪೊಲೀಸರು ಗಾಡಿಯನ್ನು ತೆಗೆದುಕೊಂಡು ಹೋಗುವಂತೆ ನಾಟಕ ಮಾಡಿದ್ದಾರೆ. ಕೊನೆಗೆ ಐಸ್ ಕ್ರೀಂ ಮಾರುವ ವ್ಯಕ್ತಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲ- ನಗರ ಪ್ರದೇಶದಲ್ಲಿಯೂ ಕಟ್ಟಡ ನಿರ್ಮಾಣಕ್ಕೆ ಅನುಮತಿ

    ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲ- ನಗರ ಪ್ರದೇಶದಲ್ಲಿಯೂ ಕಟ್ಟಡ ನಿರ್ಮಾಣಕ್ಕೆ ಅನುಮತಿ

    – ಐಸ್‍ಕ್ರೀಂ, ಜ್ಯೂಸ್, ಪುಸ್ತಕ ಮಾರಾಟಕ್ಕೆ ಗ್ರೀನ್ ಸಿಗ್ನಲ್

    ಬೆಂಗಳೂರು: ಕೇಂದ್ರ ಸರ್ಕಾರದ ಬುಧವಾರ ನೀಡಿದ್ದ ಮಾರ್ಗಸೂಚಿಗಳ ಅನ್ವಯ ಒಂದಿಷ್ಟು ಕೊರೊನಾ ಲಾಕ್‍ಡೌನ್ ನಿಯಮಗಳನ್ನು ಸಡಿಲ ಮಾಡಿದ್ದ ರಾಜ್ಯ ಸರ್ಕಾರ, ಇವತ್ತು ಇನ್ನೊಂದಿಷ್ಟು ವಿನಾಯಿತಿ ನೀಡಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

    ಬೆಂಗಳೂರು ಸೇರಿದಂತೆ ನಗರ ಹಲವು ನಗರಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆಗದಿದ್ದರೂ ರಾಜ್ಯ ಸರ್ಕಾರ ರಿಸ್ಕ್ ತೆಗೆದುಕೊಂಡಂತೆ ಕಾಣುತ್ತಿದೆ. ಮೊಬೈಲ್ ಅಂಗಡಿ, ಜ್ಯೂಸ್ ಅಂಗಡಿ, ಕಟ್ಟಡ ನಿರ್ಮಾಣ ಹೀಗೆ ಹಲವುಗಳಿಗೆ ಮಹಾನಗರ, ನಗರಸಭೆಗಳ ವ್ಯಾಪ್ತಿಯಲ್ಲಿ ಷರತ್ತುಬದ್ಧ ಅನುಮತಿ ನೀಡಿದೆ.

    ಬೆಂಗಳೂರು ಸೇರಿದಂತೆ ಮಹಾನಗರ, ನಗರಸಭೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬುಧವಾರ ಅವಕಾಶ ನೀಡಿರಲಿಲ್ಲ. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ನೇತೃತ್ವದ ಸರ್ಕಾರ ಮಣಿದಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ಇವತ್ತು ನೀಡಿರುವ ಲಾಕ್‍ಡೌನ್ ವಿನಾಯ್ತಿಗಳನ್ನು ಘೋಷಿಸಿದೆ.

    ಲಾಕ್‍ಡೌನ್‍ನಿಂದ ಮತ್ತಷ್ಟು ವಿನಾಯ್ತಿ..!
    * ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ
    * ಕಾರ್ಮಿಕರು ಸೈಟ್‍ನಲ್ಲಿಯೇ ಇರಬೇಕು (ಕಾರ್ಮಿಕರಿಗೆ ಅಲ್ಲಿಯೇ ಉಳಿದುಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸಬೇಕು, ಹೊರಗಿನಿಂದ ಕಾರ್ಮಿಕರನ್ನು ಕರೆಸುವಂತಿಲ್ಲ)
    * ನೀರು ಪೂರೈಕೆ ಮತ್ತು ಒಳಚರಂಡಿ ರಿಪೇರಿ
    * ಟೆಲಿಕಾಮ್, ಕೇಬಲ್ ಸಂಬಂಧಿ ಕೆಲಸಗಳು

    * ಬ್ಯಾಂಕೇತರ ಹಣಕಾಸು ಸಂಸ್ಥೆಗಳು
    * ಸಹಕಾರ ಬ್ಯಾಂಕ್/ಸೊಸೈಟಿಗಳು
    * ಸ್ಟೇಷನರಿ ಮತ್ತು ಬುಕ್ ಶಾಪ್
    * ಎಲೆಕ್ಟ್ರಿಕ್ ಅಂಗಡಿ (ಫ್ಯಾನ್ ಮಾರಲು ಅವಕಾಶ)
    * ನಗರ ಪ್ರದೇಶದಲ್ಲಿ ಆಹಾರ ಸಂಸ್ಕರಣೆ ಘಟಕ (ಬ್ರೆಡ್, ಹಾಲು, ಬೇಳೆ, ಫ್ಲೋರ್‍ಮಿಲ್)
    * ಪ್ರಿಪೇಡ್ ಮೊಬೈಲ್ ರಿಚಾರ್ಜ್‍ಗೆ ಅಂಗಡಿ
    * ಐಸ್ ಕ್ರರೀಂ, ಡ್ರೈ ಫ್ರೂಟ್ಸ್, ಜ್ಯೂಸ್ ಅಂಗಡಿ (ಪಾರ್ಸಲ್‍ಗಷ್ಟೇ ಅವಕಾಶ)
    * ಹಿರಿಯ ನಾಗರಿಕರು ಇರುವ ಮನೆಗಳಿಗೆ ಸಹಾಯಕಿಯರು

  • ಐಸ್ ತಿಂದು ಅಮ್ಮನಿಗೆ ಕೆಲಸ ಕೊಟ್ಟ ಐರಾ

    ಐಸ್ ತಿಂದು ಅಮ್ಮನಿಗೆ ಕೆಲಸ ಕೊಟ್ಟ ಐರಾ

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ಮಗಳು ಐರಾಳ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಬೇಸಿಗೆಯ ಸಮಯದಲ್ಲಿ ಹೇಗೆ ಕಾಲ ಕಳೆಯುತ್ತಿದ್ದೇವೆ ಎಂದು ಮಗಳ ಫೋಟೋ ಶೇರ್ ಮಾಡಿದ್ದಾರೆ.

    ಐರಾ ಐಸ್ ಕ್ರೀಮ್ ತಿನ್ನುತ್ತಿರುವ ಫೋಟೋವನ್ನು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ “ಬೇಸಿಗೆ ಕಾಲದಲ್ಲಿ ನಾವು ಹೇಗೆ ಕಾಲ ಕಳೆಯುತ್ತಿದ್ದೇವೆ ನೋಡಿ, ಅಮ್ಮನೊಂದಿಗೆ ಐರಾ ಕಲ್ಲಂಗಡಿ ಐಸ್ ಕ್ಯಾಂಡಿಯನ್ನು ತಿನ್ನುತ್ತಿದ್ದಾಳೆ. ಐಸ್‍ಕ್ಯಾಂಡಿ ತಿಂದ ನಂತರ ನಾನು ನೆಲವನ್ನು ಸ್ವಚ್ಛ ಮಾಡಬೇಕಾಯಿತು” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಐರಾ ಐಸ್ ತಿಂದು ಅಮ್ಮನಿಗೆ ಕೆಲಸ ಕೊಟ್ಟಿದ್ದಾಳೆ.

    ಲಾಕ್‍ಡೌನ್‍ನಿಂದಾಗಿ ಚಿತ್ರೋದ್ಯಮ ಬಂದ್ ಆದ ಹಿನ್ನೆಲೆಯಲ್ಲಿ ಮನೆಯಲ್ಲಿ ಸ್ಟಾರ್ಸ್ ಬಂಧಿಯಾಗಿದ್ದು, ಸ್ಟೇ ಹೋಮ್- ಸ್ಟೇ ಸೇಫ್ ಎಂದು ಹೇಳುತ್ತಿದ್ದಾರೆ. ಅಲ್ಲದೇ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ರಾಧಿಕಾ ಪಂಡಿತ್ ಮೋದಿ ಕರೆ ನೀಡಿದ್ದ ದೀಪ ಬೆಳಗಿಸುವ ಅಭಿಮಾನಕ್ಕೆ ಸಾಥ್ ನೀಡಿದ್ದು, ಏಪ್ರಿಲ್ 5ರಂದು ದೀಪ ಬೆಳಗಿದ್ದರು. ಈ ವೇಳೆ ಮಗಳು ಐರಾ ಬೆಳಗುತ್ತಿದ್ದ ದೀಪಗಳನ್ನ ನೋಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು.

    https://www.instagram.com/p/B-xGByRAJvE/

    ಇದಕ್ಕೂ ಮುನ್ನ ನಟ ಯಶ್ ಮಗಳು ಐರಾ ಜೊತೆ ಕಾಲಕಳೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಐರಾ ಹೇಳಿದ ಹಾಗೇ ಯಶ್ ಕೇಳುತ್ತಿದ್ದರು. ಅಪ್ಪನಿಗೆ ಐರಾ ಸ್ಪೂನ್ ಫೀಡ್ ಮಾಡಿಸುತ್ತಿದ್ದಳು. ನೀನು ತಿಂದರೆ ಮಾತ್ರ ತಿನ್ನುತ್ತೇನೆ ಎಂದು ಯಶ್ ಹೇಳುತ್ತಿದ್ದರು. ಆದರೆ ಐರಾಗೆ ತಿನ್ನಿಸೋಕೆ ಯಶ್ ಹರಸಾಹಸ ಪಟ್ಟರೂ ವರ್ಕೌಟ್ ಆಗಿಲ್ಲ. ಐರಾ ಮಾತ್ರ ಅಪ್ಪನಿಗೆ ಮತ್ತೆ ಮತ್ತೆ ತುತ್ತು ತಿನ್ನಿಸಿದ್ದಳು.

  • ಸೂಪರ್ ಮಾರ್ಕೆಟ್‍ನಲ್ಲಿ ಐಸ್‍ಕ್ರೀಮ್ ನೆಕ್ಕಿ ಮತ್ತೆ ಫ್ರಿಜ್‍ನಲ್ಲಿ ಇಟ್ಟ ಉದ್ಯೋಗಿ

    ಸೂಪರ್ ಮಾರ್ಕೆಟ್‍ನಲ್ಲಿ ಐಸ್‍ಕ್ರೀಮ್ ನೆಕ್ಕಿ ಮತ್ತೆ ಫ್ರಿಜ್‍ನಲ್ಲಿ ಇಟ್ಟ ಉದ್ಯೋಗಿ

    – ವಿಡೀಯೊ ವೈರಲ್ ಆಗುತ್ತಿದ್ದಂತೆ ಯುವಕ ಅರೆಸ್ಟ್
    – 30 ದಿನ ಜೈಲು, 73 ಸಾವಿರ ರೂ. ದಂಡ ವಿಧಿಸಿದ ಕೋರ್ಟ್

    ವಾಷಿಂಗ್ಟನ್: ಸೂಪರ್ ಮಾರ್ಕೆಟ್‍ನಲ್ಲಿ ಉದ್ಯೋಗಿಯೊಬ್ಬ ಐಸ್‍ಕ್ರೀಮ್ ನೆಕ್ಕಿ ಮತ್ತೆ ಫ್ರಿಜ್‍ನಲ್ಲಿ ಇಟ್ಟ ಘಟನೆ ಅಮೆರಿಕದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

    ಅಮೆರಿಕದ ಹ್ಯೂಸ್ಟನ್ ನಗರದ ಸಮೀಪ ನಿವಾಸಿ ಆಂಡರ್ಸನ್ (24) ಜೈಲು ಸಿಕ್ಷೆಗೆ ಗುರಿಯಾದ ಆರೋಪಿ. ಹೂಸ್ಟನ್ ನಗರದಿಂದ 145 ಕಿಲೋಮೀಟರ್ ದೂರದಲ್ಲಿರುವ ಪೋರ್ಟ್ ಅರ್ಥರ್ ನ ವಾಲ್ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಕಳೆದ ವರ್ಷ ಆಗಸ್ಟ್ 26ರಂದು ಘಟನೆ ನಡೆದಿದೆ. ಆರೋಪಿಯು ಅದೇ ಸೂಪರ್ ಮಾರ್ಕೆಟ್‍ನ ಉದ್ಯೋಗಿ ಆಗಿದ್ದ.

    ಆರೋಪಿ ಆಂಡರ್ಸನ್ ಆಗಸ್ಟ್ 26ರಂದು ಸೂಪರ್ ಮಾರ್ಕೆಟ್‍ನಲ್ಲಿದ್ದ ಫ್ರಿಜ್‍ನಿಂದ ಐಸ್‍ಕ್ರೀಮ್ ಎತ್ತಿಕೊಂಡು ನೆಕ್ಕಿ ಮತ್ತೆ ಅದರಲ್ಲೇ ಇಟ್ಟಿದ್ದ. ಈ ದೃಶ್ಯವು ಸೂಪರ್ ಮಾರ್ಕೆಟ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಇದಕ್ಕೂ ಮುನ್ನ ಸೂಪರ್ ಮಾರ್ಕೆಟ್ ಅಧಿಕಾರಿಗಳು ವಿಡಿಯೋ ನೋಡಿ ಆರೋಪಿಯನ್ನು 6 ತಿಂಗಳು ವಜಾಗೊಳಿಸಿತ್ತು. ಅಷ್ಟೇ ಅಲ್ಲದೆ 100 ಗಂಟೆಗಳ ಕಾಲ ಉಚಿತವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿತ್ತು. ಆರೋಪಿಯ ಕೃತ್ಯದಿಂದಾಗಿ ಸೂಪರ್ ಮಾರ್ಕೆಟ್‍ನಲ್ಲಿದ್ದ ಸುಮಾರು 1,15,363 ರೂಪಾಯಿ ಮೌಲ್ಯದ ಐಸ್ ಕ್ರೀಮ್ ಅನ್ನು ಕಸಕ್ಕೆ ಹಾಕಿದ್ದರು.

    ಮತ್ತೊಂದು ವಿಡಿಯೋ ವೈರಲ್:
    ಆಂಡರ್ಷನ್ ವಿಡಿಯೋವನ್ನು ಹೋಲುವ ಮತ್ತೊಂದು ವಿಡಿಯೋ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಅಪ್ರಾಪ್ತ ಹುಡುಗಿ ವಾಲ್ಮಾರ್ಟ್ ಅಂಗಡಿಯಿಂದ ಐಸ್‍ಕ್ರೀಮ್ ಟಬ್ ತೆಗೆದುಕೊಂಡು ಅದನ್ನು ನೆಕ್ಕುತ್ತಾ ಮತ್ತೆ ಅದೇ ಸ್ಥಳದಲ್ಲಿ ಇಟ್ಟಿದ್ದಳು.

  • ಕಳಪೆ ಐಸ್‍ಕ್ರೀಂ ಸೇವಿಸಿ ಆರು ಮಕ್ಕಳು ಅಸ್ವಸ್ಥ

    ಕಳಪೆ ಐಸ್‍ಕ್ರೀಂ ಸೇವಿಸಿ ಆರು ಮಕ್ಕಳು ಅಸ್ವಸ್ಥ

    ರಾಯಚೂರು: ಕಳಪೆ ಐಸ್‍ಕ್ರೀಂ ಸೇವಿಸಿ ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಆರು ಮಕ್ಕಳು ಅಸ್ವಸ್ಥರಾಗಿದ್ದಾರೆ.

    ತೆಲಂಗಾಣದ ಜುಲೈಕಲ್ ಗ್ರಾಮದ ಆಂಜನೇಯ ಬೈಕ್‍ನಲ್ಲಿ ಐಸ್‍ಕ್ರೀಂ ಮಾರಾಟಕ್ಕಾಗಿ ಸಿಂಗನೋಡಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಐಸ್‍ಕ್ರೀಂ ತಿಂದ ಮೀನಾಕ್ಷಿ, ವೆನ್ನೆಲ್ಲಾ, ಶ್ರಾವಣಿ, ಅಕ್ಷತಾ, ಶಿವಕುಮಾರ್ ಹಾಗೂ ಶ್ರಾವಣಿ ಅಸ್ವಸ್ಥರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಆಂಜನೇಯ ಮ್ಯಾಂಗೋ ಬಾರ್ ಹೆಸರಿನ ಕಳೆಪ ಹಾಗೂ ಎಕ್ಸ್ ಪೈರಿ ದಿನಾಂಕ ಇಲ್ಲದ ಐಸ್‍ಕ್ರೀಂಗಳನ್ನು ತಂದಿದ್ದ. ಆದರೆ ಇದನ್ನು ಅರಿಯ ಮಕ್ಕಳು ಐಸ್‍ಕ್ರೀಂ ಬಾರ್ ಗಳನ್ನು ಖರೀದಿಸಿ ತಿಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಮೂರ್ಛೆ ಹೊಗಿದ್ದಾರೆ. ತಕ್ಷಣ ಅಸ್ವಸ್ಥ ಮಕ್ಕಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಐಸ್‍ಕ್ರೀಂ ಮಾರಾಟ ಮಾಡಿದ ಆಂಜನೇಯನನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನನ್ನು ಯಾಪಲದಿನ್ನಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.