Tag: ICC

  • ಐಸಿಸಿ ಮುಖ್ಯಸ್ಥರಾಗಿ ಜಯ್‌ ಶಾ ಅವಿರೋಧ ಆಯ್ಕೆ

    ಐಸಿಸಿ ಮುಖ್ಯಸ್ಥರಾಗಿ ಜಯ್‌ ಶಾ ಅವಿರೋಧ ಆಯ್ಕೆ

    ನವದೆಹಲಿ: ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಮುಂದಿನ ಐಸಿಸಿ (ICC) ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವರ್ಷದ ಡಿಸೆಂಬರ್ 1 ರಂದು ಅವರು ಐಸಿಸಿ ಮುಖ್ಯಸ್ಥ ಸ್ಥಾನ ಅಲಂಕರಿಸಲಿದ್ದಾರೆ.

    ಪ್ರಸ್ತುತ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಯನ್ನು ಬಯಸದಿರಲು ನಿರ್ಧರಿಸಿದ ನಂತರ ಜಯ್‌ ಶಾ ಆ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದರು. ಇದನ್ನೂ ಓದಿ: ಲಕ್ನೋದಲ್ಲೇ ರಾಹುಲ್‌ ಉಳಿಸಿಕೊಳ್ಳಲು ಗೋಯೆಂಕಾ ಪ್ರಯತ್ನ

    ಐಸಿಸಿ ಮುಖ್ಯಸ್ಥರಾಗಿ ನಾಮನಿರ್ದೇಶನಗೊಳಿಸಿದ್ದಕ್ಕೆ ವಿನಮ್ರ. ಕ್ರಿಕೆಟ್ ಜಾಗತೀಕರಣಕ್ಕೆ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧ ಎಂದು ಜಯ್‌ ಶಾ ಪ್ರತಿಕ್ರಿಯಿಸಿದ್ದರು.

    ಕ್ರಿಕೆಟ್ ಅನ್ನು ಮತ್ತಷ್ಟು ಜಾಗತೀಕರಣಗೊಳಿಸಲು ಐಸಿಸಿ ತಂಡ ಮತ್ತು ನಮ್ಮ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಬಹು ಸ್ವರೂಪಗಳ ಸಹಬಾಳ್ವೆಯನ್ನು ಸಮತೋಲನಗೊಳಿಸುವುದು, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಹೊಸ ಜಾಗತಿಕ ಮಾರುಕಟ್ಟೆಗಳಿಗೆ ನಮ್ಮ ಮಾರ್ಕ್ಯೂ ಈವೆಂಟ್‌ಗಳನ್ನು ಪರಿಚಯಿಸವ ಮುಖ್ಯವಾದ ನಿರ್ಣಾಯಕ ಘಟ್ಟದಲ್ಲಿ ನಾವು ನಿಂತಿದ್ದೇವೆ. ಕ್ರಿಕೆಟ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ಅಂತರ್ಗತ ಮತ್ತು ಜನಪ್ರಿಯಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್‌ ಬ್ಯಾನ್‌ ಮಾಡಿ – ಬಾಂಗ್ಲಾ ಕ್ರಿಕೆಟ್ ‌ಮಂಡಳಿಗೆ ನೋಟಿಸ್‌

    ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡೆಯನ್ನು ಸೇರಿಸುವುದು ಕ್ರಿಕೆಟ್‌ನ ಬೆಳವಣಿಗೆಗೆ ಗಮನಾರ್ಹವಾದ ತಿರುವು ನೀಡುತ್ತದೆ. ಇದು ಕ್ರೀಡೆಯನ್ನು ಅಭೂತಪೂರ್ವ ರೀತಿಯಲ್ಲಿ ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದರು.

  • ಟೆಸ್ಟ್‌ ಕ್ರಿಕೆಟ್‌ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?

    ಟೆಸ್ಟ್‌ ಕ್ರಿಕೆಟ್‌ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?

    ಅಭುದಾಬಿ: ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನತ್ತ ಆಟಗಾರರ ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಟೆಸ್ಟ್ ಕ್ರಿಕೆಟ್‌ಗೆ (Test Cricket) ಉತ್ತೇಜನ ನೀಡುವ ಸಲುವಾಗಿ, ಯುವ ಕ್ರಿಕೆಟಿಗರನ್ನು ಸೆಳೆಯವ ನಿಟ್ಟಿನಲ್ಲಿ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. 125 ಕೋಟಿ ರೂ. (15 ಮಿಲಿಯನ್ USD) ಮೊತ್ತದ ನಿಧಿ ಮೀಸಲಿಡಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ನಿರ್ಧರಿಸಿದೆ.

    ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ (Cricket Australia) ಐಸಿಸಿಗೆ ಈ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಐಸಿಸಿ ಟೆಸ್ಟ್‌ ಕ್ರಿಕೆಟ್‌ ಉತ್ತೇಜಿಸಲು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿ ಆಯೋಜಿಸಿದೆ. 2019 ರಿಂದ 2023ರ ವರೆಗೆ ಎರಡು ಆವೃತ್ತಿಗಳೂ ಕಳೆದು, ಇದೀಗ 3ನೇ ಆವೃತ್ತಿಗೆ ಕಾಲಿಟ್ಟಿದೆ. ಈ ನಡುವೆ ಐಸಿಸಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

    ಈ ನಿಧಿಯ ಮೂಲಕ ಟೆಸ್ಟ್ ಕ್ರಿಕೆಟ್ ಆಡಲಿರುವ ಆಟಗಾರರ ಪಂದ್ಯದ ಕನಿಷ್ಠ ಸಂಭಾವನೆಯನ್ನು ಹೆಚ್ಚಿಸುವ ಜೊತೆಗೆ ವಿದೇಶಿ ಸರಣಿಗಳಿಗೆ ತಂಡಗಳನ್ನು ಕಳುಹಿಸುವ ತಂಡದ ಪ್ರವಾಸ ಶುಲ್ಕದ ಜೊತೆಗೆ ಟೆಸ್ಟ್ ಕ್ರಿಕೆಟ್ ಆಡಲಿರುವ ಪ್ರತಿ ಆಟಗಾರರರಿಗೆ ಕನಿಷ್ಠ 8 ಲಕ್ಷ ರೂ. ಸಂಭಾವನೆ ನೀಡಲು ಇದು ನೆರವಾಗಲಿದೆ. ಇದನ್ನೂ ಓದಿ: ಮಾಜಿ ಪ್ರಧಾನಿ ಶೇಖ್‌ ಹಸೀನಾ, ಬಾಂಗ್ಲಾದ ಆಲ್‌ರೌಂಡರ್‌ ಶಕೀಬ್‌ ವಿರುದ್ಧ ಕೊಲೆ ಪ್ರಕರಣ ದಾಖಲು

    ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡುವ ಜೊತೆಗೆ ಆಟಗಾರರನ್ನು ಪ್ರೋತ್ಸಾಹಿಸಲು ಬಿಸಿಸಿಐ ಹೊಸ ಯೋಜನೆಯ ಅಡಿಯಲ್ಲಿ ಈಗಾಗಲೇ ಭಾರತದ ಟೆಸ್ಟ್ ಕ್ರಿಕೆಟಿಗರಿಗೆ ಬೋನಸ್ ರೂಪದಲ್ಲಿ ಹೆಚ್ಚಿನ ಸಂಭಾವನೆ ನೀಡುತ್ತಿದೆ. ವಾರ್ಷಿಕ ಶೇ.75 ಟೆಸ್ಟ್ ಪಂದ್ಯಗಳಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಲಿರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ತಲಾ 45 ಲಕ್ಷ ರೂ. ಜೊತೆಗೆ ಪಂದ್ಯದ ಶುಲ್ಕ 15 ಲಕ್ಷ ರೂ. ನೀಡಲಿದ್ದು, ಶೇ.50-70 ಪಂದ್ಯಗಳನ್ನು ಆಡಲಿರುವ ಆಟಗಾರರು ಪ್ರತಿ ಪಂದ್ಯಕ್ಕೆ ತಲಾ 30 ಲಕ್ಷ ಬೋನಸ್ ಪಡೆದುಕೊಳ್ಳಲಿದ್ದಾರೆ.

    ಭಾರತಕ್ಕೆ ಈ ಲಾಭವಿಲ್ಲ?
    ಐಸಿಸಿಯ ಈ ನಿಧಿ ಯೋಜನೆಯ ಲಾಭ, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ದೇಶಗಳಿಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ರಾಷ್ಟ್ರಗಳು ಈಗಾಗಲೇ ತಮ್ಮ ತಂಡದ ಆಟಗಾರರಿಗೆ ಉತ್ತಮ ಸಂಭಾವನೆ ನೀಡುತ್ತಿದೆ. ಜೊತೆಗೆ ಶ್ರೀಮಂತ ಕ್ರಿಕೆಟ್‌ ಸಂಸ್ಥೆಗಳೆಂದು ಗುರುತಿಸಿಕೊಂಡಿವೆ. ಆದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆಸ್ಟ್ ಇಂಡೀಸ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಂತಹ ಸಂಸ್ಥೆಗಳ ಚೇತರಿಕೆ ಈ ನಿಧಿ ಸಹಕಾರಿಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಶಿಖರ್‌ ಧವನ್‌

  • ಜಯ್‌ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್‌, ಇಂಗ್ಲೆಂಡ್‌ ಬೆಂಬಲ

    ಜಯ್‌ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್‌, ಇಂಗ್ಲೆಂಡ್‌ ಬೆಂಬಲ

    ಮುಂಬೈ/ಅಬುಧಾಬಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿಯೂ ಆಗಿರುವ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ (Jay Shah) ಅವರು ತಮ್ಮ ಈ ಹುದ್ದೆ ತೊರೆಯಲಿದ್ದಾರೆ ಎಂಬ ಸುದ್ದಿ ಕೆಲವೇ ದಿನಗಳಲ್ಲಿ ನಿಜವಾಗುವ ಸಾಧ್ಯತೆ ಕಂಡು ಬಂದಿದೆ. ಏಕೆಂದರೆ ಐಸಿಸಿ ಹಾಲಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ (Greg Barclay) 3ನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಮುಂದಿನ ಅಧ್ಯಕ್ಷರಾಗಿ ಜಯ್‌ ಶಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಐಸಿಸಿಯ (ICC) ನೂತನ ಅಧ್ಯಕ್ಷರ ಚುನಾವಣೆಗೆ ಜಯ್ ಶಾ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಮುಂದಿನ ನವೆಂಬರ್‌ ತಿಂಗಳಲ್ಲಿ ಐಸಿಸಿ ಚುನಾವಣೆ ಇದೇ ನವೆಂಬರ್‌ ತಿಂಗಳಲ್ಲಿ ನಡೆಯಲಿದೆ. ಜಯ್‌ ಶಾ ಅವರು ಮುಂದಿನ ಐಸಿಸಿ ಅಧ್ಯಕ್ಷರಾಗಲು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗಳೂ ಬೆಂಬಲ ನೀಡಿವೆ ಎಂದು ವರದಿಗಳು ಉಲ್ಲೇಖಿಸಿವೆ. ಒಂದೊಮ್ಮೆ ಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೇ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾದ ಗೌರವಕ್ಕೆ ಜಯ್‌ ಶಾ ಪಾತ್ರರಾಗಲಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 39 ರನ್ – ಯುವರಾಜ್ ಸಿಂಗ್ ದಾಖಲೆ ಮುರಿದ ಡೇರಿಯಸ್

    2020ರಲ್ಲಿ ಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿಗೆ ನೇಮಕವಾಗಿದ್ದ ಬಾರ್ಕ್ಲೇ, 2022 ರಲ್ಲಿ ಮರು ಆಯ್ಕೆ ಮಾಡಲಾಗಿತ್ತು. ನ್ಯೂಜಿಲೆಂಡ್‌ ಮೂಲದ ವಕೀಲ ಗ್ರೆಗ್ ಬಾರ್ಕ್ಲೇ ಕಳೆದ 4 ವರ್ಷಗಳಿಂದ ಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ವರ್ಷ ಅವರ ಅಧಿಕಾರವಧಿ ಅಂತ್ಯವಾಗಲಿದ್ದು, 3ನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಜಯ್‌ ಶಾ ಅವರೇ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡವನ್ನು ರಿವೀಲ್ ಮಾಡಿದ ಕೊಹ್ಲಿ

    35 ವರ್ಷ ವಯಸ್ಸಿನ ಜಯ್‌ ಶಾ 2019ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು. ಈಗಾಗಲೇ ಐಸಿಸಿ ಸಮಿತಿಯಲ್ಲಿ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಏಷ್ಯನ್‌ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷರೂ ಆಗಿದ್ದಾರೆ. ಇದೀಗ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆಯೂ ಹಲವು ಬಾರಿ ಜಯ್​ ಶಾ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಸ್ಪಧಿಸಿರಲಿಲ್ಲ. ಆದ್ರೆ ಈ ಬಾರಿ ಜಯ್‌ ಶಾ ಸ್ಪರ್ಧಿಸುವುದು ಖಚಿತವಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು-ಗದಗ ವೋಲ್ವೋ ಬಸ್ ಪುನಃ ಆರಂಭಿಸುವಂತೆ ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ ಮನವಿ

  • ಭಾರತ ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಆಯೋಜಿಸಲ್ಲ: ಜಯ್‌ ಶಾ

    ಭಾರತ ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಆಯೋಜಿಸಲ್ಲ: ಜಯ್‌ ಶಾ

    ಮುಂಬೈ: ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ (Women’s T20 World Cup) ಟೂರ್ನಿ ಆತಿಥ್ಯವನ್ನು ಭಾರತ (India) ವಹಿಸಲು ನಿರಾಕರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (BCCI Secretary Jay Shah) ಹೇಳಿದ್ದಾರೆ.

    ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿ ಅಕ್ಟೋಬರ್ 3 ರಿಂದ 20ರ ಒಳಗಡೆ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿತ್ತು. ಆದರೆ ಈಗ ಅಲ್ಲಿ ಅಸ್ಥಿರತೆ ಇರುವ ಕಾರಣ ಟೂರ್ನಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಐಸಿಸಿ ಮುಂದಾಗಿದೆ.

    ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಯ್‌ ಶಾ, ಐಸಿಸಿ (ICC) ವಿಶ್ವಕಪ್‌ ಟೂರ್ನಿ ಆಯೋಜಿಸುತ್ತೀರಾ ಎಂದು ನಮ್ಮನ್ನು ಕೇಳಿತ್ತು. ನಾವು ಆಯೋಜಿಸುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಆರ್‌ಸಿಬಿ – ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಔಟ್?

    ಈಗ ನಮ್ಮಲ್ಲಿ ಮುಂಗಾರು ಮಳೆಯಾಗುತ್ತಿದೆ. ಮುಂದಿನ ವರ್ಷ ಮಹಿಳಾ ಏಕದಿನ ವಿಶ್ವಕಪ್‌ ಆಯೋಜಿಸುತ್ತೇವೆ. ಸತತ ವಿಶ್ವಕಪ್‌ಗಳನ್ನು ಆಯೋಜಿಸಲು ನಾವು ಬಯಸುವುದಿಲ್ಲ ಎಂದು ಹೇಳಿದರು.

    ಬಾಂಗ್ಲಾದೇಶದ (Bangladesh) ಬೆಳವಣಿಗೆಗಳ ಮೇಲೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಆದರೆ ತಮ್ಮ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳುತ್ತಿದ್ದೇವೆ ಎಂದು ಐಸಿಸಿ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಸಂಭ್ರಮ – ದೇಶಭಕ್ತಿ ಮೆರೆದ ಟೀಂ ಇಂಡಿಯಾ ಸ್ಟಾರ್ಸ್‌!

    ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಸಲಹೆಗಳನ್ನು ನೀಡಿವೆ. ಬಾಂಗ್ಲಾದೇಶ ಟೆಸ್ಟ್ ತಂಡವು ಪ್ರಸ್ತುತ ಪಾಕಿಸ್ತಾನದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ತಯಾರಿ ನಡೆಸುತ್ತಿದೆ, ಹಿಂಸಾಚಾರವು ತವರಿನಲ್ಲಿ ಅವರ ತಯಾರಿಗೆ ಅಡ್ಡಿಯಾಗಿದೆ.

     

  • ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಇಸ್ಲಾಮಾಬಾದ್‌: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗಾಗಿ ಭಾರತ ಕ್ರಿಕೆಟ್‌ ತಂಡವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಹೇಳಿದೆ. ಭಾರತ ಸರ್ಕಾರ ಭದ್ರತಾ ಕಾರಣಗಳಿಗಾಗಿ ಭಾರತ ತಂಡವನ್ನು ಕಳುಹಿಸಲು ಅನುಮತಿ ನಿರಾಕರಿಸಿದ್ದರೆ. ಬಿಸಿಸಿಐ (BCCI) ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಒತ್ತಾಯಿಸಿದೆ.

    ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದರೆ, ಅದನ್ನು ಲಿಖಿತ ರೂಪದಲ್ಲಿ ಬರೆದುಕೊಡಬೇಕು. ಜೊತೆಗೆ ಆ ಪತ್ರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ (ಐಸಿಸಿ) ಸಲ್ಲಿಸಬೇಕು. ಈಗಾಗಲೇ ಕರಡು ವೇಳಾಪಟ್ಟಿ ಸಿದ್ಧಗೊಂಡಿರುವುದರಿಂದ ಟೂರ್ನಿ ಪ್ರಾರಂಭವಾಗುವ 5-6 ತಿಂಗಳಿಗೆ ಮುಂಚಿತವಾಗಿಯೇ ಐಸಿಸಿಗೆ ತಿಳಿಸಬೇಕು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹೇಳಿದೆ. ಇದನ್ನೂ ಓದಿ: ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಪ್ಲ್ಯಾನ್‌!

    2025ರ ಫೆಬ್ರವರಿ 19ರಿಂದ ಮಾರ್ಚ್‌ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಪಾಕ್‌ ಆತಿಥ್ಯದಲ್ಲಿ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮಾರ್ಚ್‌ 10 ರಂದು ಮೀಸಲು ದಿನ ಇರಲಿದೆ. ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಇದನ್ನೂ ಓದಿ: IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೊಕ್​!

    ಈಗಾಗಲೇ ಪಿಸಿಬಿ ತನ್ನ ಕರಡು ವೇಳಾಪಟ್ಟಿಯನ್ನ ಐಸಿಸಿಗೆ ಸಲ್ಲಿಸಿದೆ. ಸಂಭವನೀಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಿಗದಿಪಡಿಸಲಾಗಿದೆ. ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವ ಅಗತ್ಯವಿದ್ದಲ್ಲಿ ಐಸಿಸಿ ಮ್ಯಾನೇಜ್‌ಮೆಂಟ್ ಹೆಚ್ಚುವರಿ ವೆಚ್ಚವನ್ನು ಶಿಫಾರಸು ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Paris Olympics | ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ

  • Champions Trophy 2025: ಭಾರತ ಕ್ರಿಕೆಟ್‌ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್‌ ನಿರ್ಧಾರ!

    Champions Trophy 2025: ಭಾರತ ಕ್ರಿಕೆಟ್‌ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್‌ ನಿರ್ಧಾರ!

    ಮುಂಬೈ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗಾಗಿ ಭಾರತ ಕ್ರಿಕೆಟ್‌ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ಭಾರತದ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈನಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ಕೇಳಿದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.

    2025ರ ಫೆಬ್ರವರಿ 19ರಿಂದ ಮಾರ್ಚ್‌ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಪಾಕ್‌ ಆತಿಥ್ಯದಲ್ಲಿ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮಾರ್ಚ್‌ 10 ರಂದು ಮೀಸಲು ದಿನ ಇರಲಿದೆ. ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಸದ್ಯ ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಲಾಹೋರ್‌ನಲ್ಲಿ ನಿಗದಿಯಾಗಿದೆ. ಆದ್ರೆ ಪಾಕಿಸ್ತಾನಕ್ಕೆ ತೆರಳಲು ಬಿಸಿಸಿಐ ಹಿಂದೇಟು ಹಾಕಿದೆ. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!

    ತನ್ನ ಎಲ್ಲಾ ಪಂದ್ಯಗಳನ್ನು ಒಂದೇ ನಗರದಲ್ಲಿ ಆಡುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಭಾರತಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕಾಗಿ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ ಮೈದಾನದಲ್ಲೇ ನಿಗದಿಪಡಿಸಲಾಗಿತ್ತು. ಆದ್ರೆ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ದುಬೈ ಅಥವಾ ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸುವಂತೆ ಐಸಿಸಿಗೆ ಕೇಳಿಕೊಂಡಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಕಳೆದ ಮೇ ತಿಂಗಳಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲಿದೆ ಎಂದು ಹೇಳಿದ್ದರು. ಇದೀಗ ಪಾಕ್‌ಗೆ ತೆರಳುವುದಿಲ್ಲ ಎಂದು ಬಿಸಿಸಿಐ ಖಚಿತಪಡಿಸಿದೆ.

    ಹೈಬ್ರಿಡ್‌ ಮಾದರಿಯಲ್ಲಿ ಆಯೋಜನೆಯಾಗುತ್ತಾ?
    ಕಳೆದ ವರ್ಷ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಈ ಬಾರಿಯೂ ಅದೇ ರೀತಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಗಿಲ್‌, ಗಾಯಕ್‌ವಾಡ್‌ ಸ್ಫೋಟಕ ಆಟ – ಟೀಂ ಇಂಡಿಯಾಗೆ 23 ರನ್‌ಗಳ ಜಯ

    ಪಾಕ್‌ಗೆ ಪ್ರಯಾಣಿಸಲು ಭಾರತ ಹಿಂದೇಟು ಏಕೆ?
    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡ ಪಾಲ್ಗೊಂಡಿತ್ತು. ಇದನ್ನೂ ಓದಿ: ವಿಶ್ವ ಚಾಂಪಿಯನ್ಸ್‌ಗೆ 125 ಕೋಟಿ ರೂ. ಬಹುಮಾನ – ರೋಹಿತ್‌, ಕೊಹ್ಲಿ, ದ್ರಾವಿಡ್‌ಗೆ ಸಿಕ್ಕಿದ್ದೆಷ್ಟು? 

  • ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ದುಬೈ: ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಮುಗಿದಿದ್ದು ಭಾರತ (Team India) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಟೂರ್ನಿ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್‌ 2024 ರ ಕನಸಿನ ತಂಡವನ್ನು ಐಸಿಸಿ ಬಿಡುಗಡೆ ಮಾಡಿದೆ.

    ಈ ಆಟಗಾರರ ಪಟ್ಟಿಯಲ್ಲಿ ಫೈನಲ್‌ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್‌ ಕೊಹ್ಲಿಗೆ (Virat Kohli) ಸ್ಥಾನ ನೀಡಿಲ್ಲ. ಟೀಂ ಇಂಡಿಯಾದ 6 ಆಟಗಾರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಎರಡು ಮಹತ್ವದ ಜವಾಬ್ದಾರಿ – ಆರ್‌ಸಿಬಿಗೆ ದಿನೇಶ್‌ ಕಾರ್ತಿಕ್‌ ರಿಎಂಟ್ರಿ

    ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್‌ ಸಿಂಗ್‌ ಸ್ಥಾನ ಪಡೆದಿದ್ದಾರೆ.

    ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್ಹಕ್ ಫಾರೂಕಿ ಆಸ್ಟ್ರೇಲಿಯಾ ಮಾರ್ಕಸ್ ಸ್ಟೊಯಿನಿಸ್ ಮತ್ತು ವಿಂಡೀಸಿನ ನಿಕೋಲಸ್ ಪೂರನ್ ಸ್ಥಾನ ಪಡೆದಿದ್ದಾರೆ. 12ನೇ ಆಟಗಾರನಾಗಿ ಆಫ್ರಿಕಾ ಆನ್ರಿಚ್ ನಾರ್ಟ್ಜೆ ಆಯ್ಕೆಯಾಗಿದ್ದಾರೆ.

    ಪ್ರತಿ ಕ್ರಿಕೆಟ್‌ ಟೂರ್ನಿ ಮುಗಿದ ಬಳಿಕ ಐಸಿಸಿ ಡ್ರೀಮ್‌ ತಂಡವನ್ನು ಪ್ರಕಟಿಸುತ್ತದೆ. ಟೂರ್ನಿಯುದ್ಧಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪೈಕಿ ಕೇವಲ 12 ಮಂದಿಯನ್ನು ಮಾತ್ರ ಅಂತಿಮವಾಗಿ ಐಸಿಸಿ ಆಯ್ಕೆ ಮಾಡುತ್ತದೆ.

  • ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

    ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

    ನ್ಯೂಯಾರ್ಕ್‌: 2024ರ ಟಿ20 ವಿಶ್ವಕಪ್‌ಗಾಗಿ (T20 World Cup) ಕೇವಲ 5 ತಿಂಗಳಲ್ಲಿ ನಿರ್ಮಿಸಲಾಗಿದ್ದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣವನ್ನು (Nassau County Stadium) ಟೂರ್ನಿಯ ಬಳಿಕ ನೆಲಸಮಗೊಳಿಸಲು‌ ಆಯೋಜಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    ಈ ಕ್ರೀಡಾಂಗಣವನ್ನು 40 ಎಕರೆ ಭೂ ಪ್ರದೇಶದಲ್ಲಿ 30 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 250 ಕೋಟಿ ರೂ.) ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.

    ಭಾರತ – ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ಸೇರಿದಂತೆ ಟೂರ್ನಿಯ ಒಟ್ಟು 8 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಬುಧವಾರ ಭಾರತ-ಅಮೆರಿಕ (Ind vs USA) ಪಂದ್ಯ ಇಲ್ಲಿ ನಡೆದ ಕೊನೆಯ ಲೀಗ್‌ ಸುತ್ತಿನ ಪಂದ್ಯ ಎಂದು ಹೇಳಲಾಗುತ್ತಿದೆ. ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್‌ ಇನ್‌ ಪಿಚ್‌ಗಳನ್ನು ಅಳವಡಿಸಲಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ

    ಶುಕ್ರವಾರ ನೆಲಸಮ?
    ಈಗಾಗಲೇ 8 ಲೀಗ್‌ ಪಂದ್ಯಗಳು ಕೌಂಟಿ ಸ್ಟೇಡಿಯಂನಲ್ಲಿ ನಡೆದಿದ್ದು, ಜೂನ್‌ 14ರಂದೇ ಕ್ರೀಡಾಂಗಣ ಧ್ವಂಸಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ‌ಹತ್ತಾರು‌ ಬುಲ್ಡೋಜರ್‌ಗಳನ್ನು ಕ್ರೀಡಾಂಗಣದ ಹೊರಗೆ ನಿಲ್ಲಿಸಲಾಗಿದೆ. ಈ ಕುರಿತ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕ್ರೀಡಾಂಗಣದ ಮಾಡ್ಯುಲರ್ ಘಟಕಗಳನ್ನು ಕಿತ್ತುಹಾಕಿ ಮರುಬಳಕೆ ಮಾಡಲಾಗುತ್ತದೆ, ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಅಭಿಮಾನಿಗಳು ಉನ್ನತ-ಶ್ರೇಣಿಯ ಟರ್ಫ್ ಮತ್ತು ಮೂಲಸೌಕರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

    ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ನಸ್ಸೌ ಕೌಂಟಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಕೇವಲ 119 ರನ್‌ಗಳಿಗೆ ಭಾರತ ಆಲೌಟ್‌ ಆಗಿತ್ತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಪಾಕ್‌ ಕೇವಲ 113 ರನ್‌ಗಳಿಸಿ ಸೋಲೊಪ್ಪಿಕೊಂಡಿತ್ತು. ಅಲ್ಲದೇ ಬುಧವಾರ ಯುಎಸ್‌ಎ ತಂಡ ನೀಡಿದ್ದ 111 ರನ್‌ಗಳ ತಲುಪುವುದಕ್ಕೂ ಭಾರತ ತಿಣುಕಾಡಿತ್ತು. ಇದನ್ನೂ ಓದಿ:  ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

  • T20 World Cup: ವಿಶ್ವಚಾಂಪಿಯನ್​ ತಂಡದ ಮೇಲೆ ಹಣದ ಮಳೆ ಸುರಿಸಲಿದೆ ICC

    T20 World Cup: ವಿಶ್ವಚಾಂಪಿಯನ್​ ತಂಡದ ಮೇಲೆ ಹಣದ ಮಳೆ ಸುರಿಸಲಿದೆ ICC

    ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸೋಮವಾರ T20 ವಿಶ್ವಕಪ್ (T 20 World Cup) ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಪ್ರಸ್ತುತ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸುತ್ತಿದೆ. ಈ ಬಾರಿಯ ವಿಶ್ವಕಪ್ ವೇಳೆ ಐಸಿಸಿ ಮಾಡಿರುವ ಘೋಷಣೆಯು ಇದೀಗ ತಂಡಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

    ಹೌದು. ಐಸಿಸಿ ಟೂರ್ನಿಯ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಈ ಬಹುಮಾನದ ಮೊತ್ತವು ಇಲ್ಲಿಯವರೆಗಿನ ಅತ್ಯಧಿಕ ಬಹುಮಾನವಾಗಿದೆ. T-20 ವಿಶ್ವಕಪ್‌ಗಾಗಿ ICC ಸುಮಾರು ರೂ 93 ಕೋಟಿ 51 ಲಕ್ಷ (11.25 ಮಿಲಿಯನ್ ಡಾಲರ್ ) ದಾಖಲೆಯ ಬಹುಮಾನವನ್ನು ಘೋಷಿಸಿದೆ. ಇದರಲ್ಲಿ ವಿಜೇತ ತಂಡಕ್ಕೆ ಸುಮಾರು 20.36 ಕೋಟಿ ($ 2.45 ಮಿಲಿಯನ್) ಹಾಗೂ ರನ್ನರ್ ಅಪ್ ಗೆ ಸುಮಾರು 10.63 ಕೋಟಿ ರೂ.(1.28 ಮಿಲಿಯನ್ ಡಾಲರ್) ಸಿಗಲಿದೆ.

    ಸೆಮಿಫೈನಲ್‌ಗೆ ತಲುಪುವ ಉಳಿದ ಎರಡು ತಂಡಗಳಿಗೆ 6.54 ಕೋಟಿ ರೂ. (787,500 ಡಾಲರ್) ಮೊತ್ತವನ್ನು ನೀಡಲಾಗುತ್ತದೆ. ಈ ಬಾರಿ T20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡಕ್ಕೂ ಐಸಿಸಿ ಒಂದಷ್ಟು ಮೊತ್ತವನ್ನು ನೀಡಲಿದೆ. ಸೂಪರ್-8 (ಎರಡನೇ ಸುತ್ತು) ಹಂತದಲ್ಲಿ ಸೋಲುವ ಪ್ರತಿಯೊಂದು ತಂಡಗಳು ಅಂದಾಜು ರೂ.3.17 ಕೋಟಿ (382,500 ಡಾಲರ್) ಪಡೆಯುತ್ತವೆ.

    ಈ ಬಾರಿ ಟಿ20 ವಿಶ್ವಕಪ್ ಪಂದ್ಯಗಳು 9 ಮೈದಾನಗಳಲ್ಲಿ ನಡೆಯುತ್ತಿವೆ. ಇವುಗಳಲ್ಲಿ 6 ವೆಸ್ಟ್ ಇಂಡೀಸ್ ಮತ್ತು 3 ಅಮೆರಿಕದಲ್ಲಿವೆ. ಟೆಕ್ಸಾಸ್, ಗಯಾನಾ, ಬಾರ್ಬಡೋಸ್‌, ನ್ಯೂಯಾರ್ಕ್, ಆ್ಯಂಟಿಗಾ, ಫ್ಲೋರಿಡಾ, ಟ್ರಿನಿಡಾಡ್, ಕಿಂಗ್ಸ್‌ಟೌನ್ ಹಾಗೂ ಸೇಂಟ್‌ ಲೂಸಿಯಾದಲ್ಲಿ ಪಂದ್ಯಗಳು ನಡೆಯುತ್ತವೆ. ಇದನ್ನೂ ಓದಿ: ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ

    ಕಳೆದ ಬಾರಿ ಒಟ್ಟು ಬಹುಮಾನದ ಮೊತ್ತ 5.6 ಮಿಲಿಯನ್ ಡಾಲರ್ ಆಗಿತ್ತು, ಅದರಲ್ಲಿ ವಿಜೇತ ಇಂಗ್ಲೆಂಡ್ ‌ 1.6 ಮಿಲಿಯನ್ ಡಾಲರ್ ಪಡೆದಿತ್ತು. ವಿಶ್ವಕಪ್‌ನ ಒಂಬತ್ತನೇ ಆವೃತ್ತಿಯಲ್ಲಿ 20 ತಂಡಗಳ ಪಂದ್ಯಾವಳಿಯ ವಿಜೇತರಿಗೆ ನೀಡಲಾದ ಬಹುಮಾನ ಮೊತ್ತವು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಧಿಕ ಮೊತ್ತವಾಗಿದೆ ಎಂದು ಐಸಿಸಿ ಹೇಳಿದೆ. ಇದಲ್ಲದೇ ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆಯುವ ಫೈನಲ್ ಪಂದ್ಯದ ನಂತರ ಟ್ರೋಫಿಯನ್ನು ಸಹ ನೀಡಲಾಗುವುದು ಎಂದಿದೆ.

  • T20 World Cup 2024: ಅಫ್ಘಾನಿಸ್ತಾನದ ಬೌಲಿಂಗ್‌ ಕೋಚ್‌ ಆಗಿ ಡ್ವೇನ್‌ ಬ್ರಾವೋ ನೇಮಕ

    T20 World Cup 2024: ಅಫ್ಘಾನಿಸ್ತಾನದ ಬೌಲಿಂಗ್‌ ಕೋಚ್‌ ಆಗಿ ಡ್ವೇನ್‌ ಬ್ರಾವೋ ನೇಮಕ

    ಕಾಬೂಲ್‌: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಗಾಗಿ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ (Dwayne Bravo) ಅವರನ್ನ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವು ಬೌಲಿಂಗ್‌ ಕೋಚ್‌ ಆಗಿ ನೇಮಿಸಿಕೊಂಡಿದೆ.

    ಮುಂದಿನ ಜೂನ್‌ ತಿಂಗಳಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ (USA and West Indies) ಆತಿಥ್ಯದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ. 40 ವರ್ಷದ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ 295 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 6,423 ರನ್‌ ಗಳಿಸಿದ್ದು, 363 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. 573 T20 ಪಂದ್ಯಗಳಲ್ಲಿ 6,500 ರನ್‌ಗಳೊಂದಿಗೆ ಒಟ್ಟು 625 ವಿಕೆಟ್‌ ಉರುಳಿಸಿದ್ದಾರೆ. ಇದರೊಂದಿಗೆ 100 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳು, ಲಿಸ್ಟ್‌-ಎ ನಲ್ಲಿ 227 ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 161 ಪಂದ್ಯಗಳನ್ನೂ ಆಡಿದ್ದಾರೆ.

    ಬ್ರಾವೋ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಂತರ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದನ್ನೂ ಓದಿ: 2024ರ ಐಪಿಎಲ್‌ಗೆ ವಿದಾಯ; ಅಭಿಮಾನಿಗಳೊಂದಿಗೆ ಸಿಹಿ-ಕಹಿ ನೆನಪು ಹಂಚಿಕೊಂಡ ಆರ್‌ಸಿಬಿ!

    ವಿಶ್ವಕಪ್‌ ಟೂರ್ನಿ ಎಲ್ಲಿ? ಯಾವಾಗ?
    ಜೂನ್‌ 1 ರಿಂದ ಜೂನ್‌ 29ರ ವರೆಗೆ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್‌-12 ಹಂತವನ್ನು ಸೂಪರ್‌-8ಗೆ ಇಳಿಸಲಾಗಿದೆ. ಸೂಪರ್‌-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿಲ್ಲ: ಜಯ್‌ಶಾ

    ಯಾವ ಗುಂಪಿನಲ್ಲಿ-ಯಾವ ತಂಡಗಳು?
    ಗುಂಪು-ಎ:
    ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ

    ಗ್ರೂಪ್‌-ಬಿ:
    ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌

    ಗ್ರೂಪ್‌-ಸಿ:
    ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ

    ಗ್ರೂಪ್‌-ಡಿ:
    ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ