Tag: ICC

  • ಮಳೆಯಿಂದ ಆಸ್ಟ್ರೇಲಿಯಾ, ಆಫ್ರಿಕಾ ಪಂದ್ಯ ರದ್ದು

    ಮಳೆಯಿಂದ ಆಸ್ಟ್ರೇಲಿಯಾ, ಆಫ್ರಿಕಾ ಪಂದ್ಯ ರದ್ದು

    ರಾವಲ್ಪಿಂಡಿ: ಐಸಿಸಿ ಚಾಂಪಿಯನ್‌ ಟ್ರೋಫಿಯ (ICC Champions Trophy) ಆಸ್ಟ್ರೇಲಿಯಾ (Australia) ಮತ್ತು ದಕ್ಷಿಣಾ ಆಫ್ರಿಕಾ (South Africa) ನಡುವಣ ಪಂದ್ಯ ಮಳೆಯಿಂದಾಗಿ (Rain) ರದ್ದಾಗಿದೆ.

    ಟಾಸ್‌ ಹಾಕಲು ಮಳೆ ಅವಕಾಶ ನೀಡಲಿಲ್ಲ. ಮೂರು ಗಂಟೆಗಳಿಗೂ ಹೆಚ್ಚು ಕಾಲ ವಾತಾವರಣದಲ್ಲಿ ಬದಲಾವಣೆಯಾಗದ ಕಾರಣ ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು.

    ರದ್ದಾಗಿದ್ದರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು. ಬುಧವಾರ ಇಂಗ್ಲೆಂಡ್‌ ಮತ್ತು ಅಫ್ಘಾನಿಸ್ತಾನ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದಲೇ ನಿರ್ಗಮಿಸಲಿದ್ದಾರೆ.

    ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ 3 ಅಂಕ ಪಡೆದಿದ್ದರೂ ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್‌ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದರೆ ಅಫ್ಘಾನಿಸ್ತಾನ ಆಫ್ರಿಕಾ ವಿರುದ್ಧ ಸೋತಿದೆ.  ಇದನ್ನೂ ಓದಿ: ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

    ಎ ಗುಂಪಿನಲ್ಲಿ ನ್ಯೂಜಿಲೆಂಡ್‌ ಮತ್ತು ಭಾರತ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿವೆ. ಬಾಂಗ್ಲಾದೇಶ ಮತ್ತು ಮತ್ತು ಪಾಕಿಸ್ತಾನ ಟೂರ್ನಿಯಿಂದ ನಿರ್ಗಮಿಸಿದೆ.

  • Champions Trophy 2025 – ಚಾಂಪಿಯನ್ಸ್‌ ಟ್ರೋಫಿ ದಾಲ್ಮೀಯಾರ ಕನಸಿನ ಕೂಸು

    Champions Trophy 2025 – ಚಾಂಪಿಯನ್ಸ್‌ ಟ್ರೋಫಿ ದಾಲ್ಮೀಯಾರ ಕನಸಿನ ಕೂಸು

    • ಚಾಂಪಿಯನ್ಸ್‌ ಟ್ರೋಫಿ ಜನ್ಮತಾಳಿದ್ದು ಹೇಗೆ?

    • ಟಿ20 ಅಬ್ಬರದಿಂದ ಕುಸಿದ ಟೂರ್ನಿ ಮೌಲ್ಯ

    ಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿರುವ ಈ ಬಾರಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಇಂದಿನಿಂದ ಆರಂಭವಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಭಾರತದ ಮಟ್ಟಿಗೆ ತಾರಾಮಣಿಗಳಿಗೆ ತಮ್ಮ ನೈಜ ಸಾಮರ್ಥ್ಯಕ್ಕೆ ಮರಳುವ ಒತ್ತಡ ತಂದೊಡ್ಡಿದ್ದರೆ, ನವಪ್ರತಿಭೆಗಳಿಗೆ ಹೆಜ್ಜೆಗುರುತು ಮೂಡಿಸುವ ತವಕ ಹೆಚ್ಚಾಗಿದೆ. ಈ ಹೊತ್ತಿನಲ್ಲಿ ಚಾಂಪಿಯನ್ಸ್‌ ಟ್ರೋಫಿ ಜನ್ಮ ತಾಳಿದ್ದು ಹೇಗೆ? ಚೊಚ್ಚ ಟ್ರೋಫಿ ಗೆದ್ದವರು ಯಾರು? ಇದೆಲ್ಲ ಇತಿಹಾಸ ತಿಳಿಯುವುದು ಮುಖ್ಯವಾಗಿದೆ.

    ದಾಲ್ಮೀಯಾರ ಕನಸಿನ ಕೂಸು:
    ಚಾಂಪಿಯನ್ಸ್ ಟ್ರೋಫಿ 1990ರ ದಶಕದ ಅಂತ್ಯದಲ್ಲಿ ಐಸಿಸಿ ಅಧ್ಯಕ್ಷರಾಗಿದ್ದ, ಭಾರತದ ಖ್ಯಾತ ಉದ್ಯಮಿ ಜಗಮೋಹನ್ ದಾಲ್ಮೀಯಾರ (Jagmohan Dalmiya) ಕನಸಿನ ಕೂಸು. ಉದಯೋನ್ಮುಖ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಸಲು, ಐಸಿಸಿಗೆ ಹಣ ಸಂಗ್ರಹಿಸಲು ವಿಶ್ವಕಪ್‌ನ ಹೊರತಾಗಿ ಮತ್ತೊಂದು ಐಸಿಸಿ ಟೂರ್ನಿಗೆ ಯೋಜನೆ ರೂಪಿಸಿದ್ದೇ ದಾಲ್ಮೀಯಾ. ಅವರು 1997 ರಿಂದ 2000 ಇಸವಿ ವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲೇ 1998ರಲ್ಲಿ ಟೂರ್ನಿಗೆ ಚಾಲನೆ ಲಭಿಸಿತು. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾಗಲೇ, ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸಲು ಸಲುವಾಗಿ ದಾಲ್ಮಿಯಾ ಹಾಕಿದ್ದ ಐಡಿಯಾ ಇದಾಗಿತ್ತು. ಜೊತೆಗೆ, ಟೆಸ್ಟ್ ಮಾನ್ಯತೆಯನ್ನು ಪಡೆಯದ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶವೂ ಇದರಲ್ಲಿತ್ತು.

    ಚೊಚ್ಚಲ ಆವೃತ್ತಿಯಲ್ಲಿ 9 ತಂಡ, ಕೇವಲ 8 ಪಂದ್ಯ
    ಮೊದಲ ಆವೃತ್ತಿಯ ನಾಕೌಟ್ ಟ್ರೋಫಿ ಹೆಸರೇ ಸೂಚಿಸುವಂತೆ ಕಿರು ಟೂರ್ನಿಯಾಗಿತ್ತು. ಭಾರತ ಸೇರಿ 9 ತಂಡಗಳು ಪಾಲ್ಗೊಂಡಿದ್ದವು. 1 ಪ್ರಿ ಕ್ವಾರ್ಟರ್, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್, 1 ಫೈನಲ್ ಸೇರಿ ಒಟ್ಟು 8 ಪಂದ್ಯಗಳು ಮಾತ್ರ ನಡೆದಿದ್ದವು. 2ನೇ ಆವೃತ್ತಿಯಲ್ಲೂ ಹೆಚ್ಚೇನೂ ಬದಲಾವಣೆಗಳಿರಲಿಲ್ಲ. 11 ತಂಡಗಳು ಪಾಲ್ಗೊಂಡರೂ ಕೇವಲ 10 ಪಂದ್ಯಗಳನ್ನು ಆಡಿಸಲಾಗಿತ್ತು. ಟೂರ್ನಿ ನಾಕೌಟ್ ಮಾದರಿಯಲ್ಲೇ ನಡೆದಿತ್ತು.

    ಟಿ20 ಅಬ್ಬರದಿಂದ ಕುಸಿದ ಟೂರ್ನಿ ಮೌಲ್ಯ
    1998, 2000ರ ಟೂರ್ನಿ ಐಸಿಸಿಗೆ ದುಡ್ಡು ಗಳಿಸಿಕೊಟ್ಟರೂ, ಪ್ರೇಕ್ಷಕರನ್ನು ನಿರೀಕ್ಷಿತ ಮಟ್ಟದಲ್ಲಿ ಸೆಳೆಯಲು ಯಶಸ್ವಿಯಾಗಿರಲಿಲ್ಲ. ಬಳಿಕ 2002ರ (ಶ್ರೀಲಂಕಾ ಆತಿಥ್ಯ) ಟೂರ್ನಿಯು 2003ರ ಏಕದಿನ ವಿಶ್ವಕಪ್‌ಗೆ 5 ತಿಂಗಳು ಮೊದಲು ಆಯೋಜನೆಗೊಂಡ ಕಾರಣ, ಪ್ರೇಕ್ಷಕರಿಂದ ನಿರಾಸಕ್ತಿ ಜೊತೆಗೆ ಆದಾಯದ ಕೊರತೆಯನ್ನೂ ಎದುರಿಸುವಂತಾಯಿತು. 2004ರಲ್ಲಿ ಇಂಗ್ಲೆಂಡ್‌ನಲ್ಲಿ ಟೂರ್ನಿ ಆಡಿಸಲಾಯಿತು. ಅಲ್ಲೂ ಪ್ರೇಕ್ಷಕರ ಬೆಂಬಲದ ಕೊರತೆ ಎದುರಾಯಿತು. 2006ರಲ್ಲಿ ಭಾರತದಲ್ಲಿ ಟೂರ್ನಿ ನಡೆದರೂ, ಚಾಂಪಿಯನ್ಸ್ ಟ್ರೋಫಿ ಬಗ್ಗೆಯೇ ಟೀಕೆಗಳು ವ್ಯಕ್ತ ವಾಗತೊಡಗಿದವು. ಈ ನಡುವೆ ಟಿ20 ಮಾದರಿ ಕ್ರಿಕೆಟ್‌ನ ಕ್ಷಿಪ್ರ ಬೆಳವಣಿಗೆಯೂ, ಚಾಂಪಿ ಯನ್ಸ್ ಟ್ರೋಫಿಗೆ ಮತ್ತಷ್ಟು ಹೊಡೆತ ನೀಡಿತು. 2007ರಲ್ಲಿ ಟಿ20 ವಿಶ್ವಕಪ್ ಆಯೋಜನೆ ಕೈಗೆತ್ತಿಗೊಂಡ ಐಸಿಸಿ, ಬಳಿಕ ಕೆಲ ವರ್ಷಗಳಲ್ಲೇ ಚಾಂಪಿಯನ್ಸ್ ಟ್ರೋಫಿಯನ್ನು ಕೈ ಬಿಟ್ಟಿತ್ತು.

    ಹಣ ಸಂಗ್ರಹಕ್ಕಾಗಿ ಐಸಿಸಿ ಆರಂಭಿಸಿದ್ದ ಪಂದ್ಯಾವಳಿ!
    ಕ್ರಿಕೆಟ್ ಈಗ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಯಾವುದೇ ಟೂರ್ನಿ ಇದ್ದರೂ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಆದರೆ 90ರ ದಶಕದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ದುಡ್ಡು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿರಲಿಲ್ಲ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹೊರತಾಗಿ ಇತರ ಕ್ರಿಕೆಟಿಂಗ್ ರಾಷ್ಟ್ರಗಳು ಆದಾಯದ ಕೊರತೆ ಎದುರಿಸುತ್ತಿದ್ದವು. ಐಸಿಸಿಗೆ ಕೂಡಾ ನಿರೀಕ್ಷಿಸಿದಷ್ಟು ದುಡ್ಡು ಸಿಗುತ್ತಿರಲಿಲ್ಲ. ಹೆಚ್ಚುವರಿ ಹಣ ಸಂಪಾದಿಸಲು ಐಸಿಸಿ ಕಂಡುಕೊಂಡ ದಾರಿಯೇ ‘ಚಾಂಪಿಯನ್ಸ್ ಟ್ರೋಫಿ’. ಕ್ರಿಕೆಟ್‌ ಪ್ರಿಯ ದೇಶಗಳಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಐಸಿಸಿಗೆ ಹಣ ಸಂಗ್ರಹಕ್ಕಾಗಿ 1998ರಲ್ಲಿ ಮೊದಲ ಬಾರಿ ಟೂರ್ನಿ ಪರಿಚಯಿಸಲಾಯಿತು. ಇದಕ್ಕಾಗಿ ಮೊದಲೆರಡು ಆವೃತ್ತಿಗಳನ್ನು ಆಗ ಐಸಿಸಿ ಸಹಾಯಕ ರಾಷ್ಟ್ರಗಳಾಗಿದ್ದ ಬಾಂಗ್ಲಾದೇಶ, ಕೀನ್ಯಾದಲ್ಲಿ ನಡೆಸಲಾಯಿತು.

  • ಇಂದಿನಿಂದ ಚಾಂಪಿಯನ್ಸ್ ಟ್ರೋಫಿ – ಭಾರತದ ಮೂವರು ʻಚಾಂಪಿಯನ್ಸ್‌ʼಗೆ ಕೊನೇ ಟೂರ್ನಿ!

    ಇಂದಿನಿಂದ ಚಾಂಪಿಯನ್ಸ್ ಟ್ರೋಫಿ – ಭಾರತದ ಮೂವರು ʻಚಾಂಪಿಯನ್ಸ್‌ʼಗೆ ಕೊನೇ ಟೂರ್ನಿ!

    ಇಸ್ಲಾಮಾಬಾದ್‌: 8 ರಾಷ್ಟ್ರಗಳು ಭಾಗವಹಿಸಿರುವ ಐಸಿಸಿ ಪ್ರಾಯೋಜಿತ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರೀಡಾಕೂಟ ಇಂದಿನಿಂದ ಶುರುವಾಗುತ್ತಿದೆ. ಮೊದಲ ಪಂದ್ಯ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ (Pak vs NZ) ವಿರುದ್ಧ ಕರಾಚಿ ಮೈದಾನದಲ್ಲಿ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.

    ಎ- ಗುಂಪಿನಲ್ಲಿ ಭಾರತ, ನ್ಯೂಜಿಲೆಂಡ್‌, ಪಾಕಿಸ್ತಾನ, ಬಾಂಗ್ಲಾದೇಶ ಇದ್ದರೆ, ಬಿ-ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್‌ ತಂಡಗಳಿವೆ. ಭಾರತ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ ಮತ್ತು ಪಾಕಿಸ್ತಾನದ ವಿರುದ್ದದ ಹೈವೋಲ್ಟೇಜ್ ಪಂದ್ಯ ಫೆ.23ರ ಸೂಪರ್‌ ಸಂಡೇನಲ್ಲಿ ನಡೆಯಲಿದೆ.

    ನೇರ ಪ್ರಸಾರ ಎಲ್ಲಿ?
    ಸ್ಟಾರ್ ಸ್ಫೋಟ್ಸ್‌ ವಾಹಿನಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ. ಜಿಯೋಹಾಟ್‌ಸ್ಟಾರ್ (ಆಪ್‌) ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಮಾಡಲಿದೆ.

    ಭಾರತದ ಮೂವರಿಗೆ ಕೊನೆಯ ಆಟ?
    ಹೌದು. ಏಕದಿನ ಮಾದರಿಯ ಚಾಂಪಿಯನ್ಸ್‌ ಟ್ರೋಫಿ ಟೀಂ ಇಂಡಿಯಾ (Team India) ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರಿಗೆ ಕೊನೆಯ ಟೂರ್ನಿ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಕಳೆದ ವರ್ಷಾಂತ್ಯದಲ್ಲಿ ಆಸೀಸ್‌ ವಿರುದ್ಧ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲು ಕಂಡ ಬಳಿಕ ರೋಹಿತ್‌ ಟೆಸ್ಟ್‌, ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳೋದಕ್ಕೆ ಮುಂದಾಗಿದ್ದರು. ಆದ್ರೆ ಬಿಸಿಸಿಐ ಒತ್ತಾಯದ ಮೇರೆಗೆ ಮುಂದುವರಿದಿದ್ದಾರೆ ಎಂದು ವರದಿಯಾಗಿದೆ. 2013ರಲ್ಲಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಭಾರತ ಟ್ರೋಫಿಗೆ ಮುತ್ತಿಟ್ಟಾಗಲೂ ಈ ಮೂವರು ಟೂರ್ನಿಯಲ್ಲಿದ್ದರು. ಈ ಬಾರಿ ಟ್ರೋಫಿ ಗೆದ್ದು ಗೆಲುವಿನ ವಿದಾಯ ಹೇಳುವರೇ ಎಂಬುದನ್ನು ಕಾದುನೋಡಬೇಕಿದೆ.

    ಕೊಹ್ಲಿ, ರೋಹಿತ್‌ ಫಾರ್ಮ್‌ನದ್ದೇ ಚಿಂತೆ:
    2024ರ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ರೋಹಿತ್‌, ಕೊಹ್ಲಿ, ಜಡ್ಡು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದ್ರೆ ಏಕದಿನ, ಟೆಸ್ಟ್‌ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದಾರೆ. ಜಡೇಜಾ ಎಂದಿನಂತೆ ತಮ್ಮ ಬೌಲಿಂಗ್‌, ಬ್ಯಾಟಿಂಗ್‌ನಲ್ಲಿ ಸಾಮರ್ಥ್ಯ ಪ್ರದರ್ಶನ ತೋರಿದ್ದಾರೆ. ಆದ್ರೆ ಕಳೆದ ವರ್ಷಾಂತ್ಯದಲ್ಲಿ ಆಸೀಸ್‌ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಬಳಿಕ ಕಳಪೆ ಫಾರ್ಮ್‌ ಮುಂದುವರಿಸಿದ್ರು. ರಣಜಿ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಮತ್ತೊಂದೆಡೆ ಆಸೀಸ್‌ ವಿರುದ್ಧದ ಟೆಸ್ಟ್‌ನಿಂದ ನಿರಂತರ ಕಳಪೆ ಫಾರ್ಮ್‌ ಮುಂದುವರಿಸಿದ್ದರು. ಆದ್ರೆ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ರು, ಅದೇ ರೀತಿ ಸರಣಿಯ 3ನೇ ಪಂದ್ಯದಲ್ಲಿ ಕೊಹ್ಲಿ ಕೂಡ ಅರ್ಧಶತಕ ಸಿಡಿಸಿ ಟೀಕೆಗಳಿಗೆ ಬ್ಯಾಟ್‌ ಮೂಲಕ ಉತ್ತರ ಕೊಟ್ಟರು. ಇದೀಗ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅದೇ ಫಾರ್ಮ್‌ ಮುಂದುವರಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

    ಗಂಭೀರ್‌ ನಾಯಕತ್ವಕ್ಕೂ ಸವಾಲು:
    2024ರ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಟೀಂ ಇಂಡಿಯಾ ಮುಖ್ಯಕೋಚ್‌ ಆಗಿ ಗೌತಮ್‌ ಗಂಭೀರ್‌ ಅಧಿಕಾರ ವಹಿಸಿಕೊಂಡನಂತರ ಭಾರತ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಂಪೂರ್ಣ ನೆಲ ಕಚ್ಚಿತ್ತು. ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ನ್ಯೂಜಿಲೆಂಡ್‌, ಆಸೀಸ್‌ ವಿರುದ್ಧದ ಸರಣಿಗಳನ್ನು ಸೋತಿತ್ತು. ಬಿಸಿಸಿಐ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದ ಬಳಿಕ ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ನಡೆಸಿದ್ದ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಇನ್ನೂ ಗಂಭೀರ್‌ ನೇತೃತ್ವದಲ್ಲಿ ಭಾರತ ಎದುರಿಸುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಟ್ರೋಫಿ ಗೆಲುವು ಅನಿವಾರ್ಯವೂ ಆಗಿದೆ.

  • Champions Trophy | ವಿಜೇತ ತಂಡಕ್ಕೆ ಸಿಗಲಿದೆ 19.45 ಕೋಟಿ – ಗೆದ್ದ ಪ್ರತಿ ಪಂದ್ಯಕ್ಕೂ ಸಿಗುತ್ತೆ ಹಣ

    Champions Trophy | ವಿಜೇತ ತಂಡಕ್ಕೆ ಸಿಗಲಿದೆ 19.45 ಕೋಟಿ – ಗೆದ್ದ ಪ್ರತಿ ಪಂದ್ಯಕ್ಕೂ ಸಿಗುತ್ತೆ ಹಣ

    ದುಬೈ: ಚಾಂಪಿಯನ್ಸ್‌ ಟ್ರೋಫಿ (ICC Champions Trophy) ವಿಜೇತ ತಂಡ 2.24 ಮಿಲಿಯನ್‌ ಡಾಲರ್‌ (19.45 ಕೋಟಿ ರೂ.) ನಗದು ಬಹುಮಾನವನ್ನು ಪಡೆಯಲಿದೆ.

    ಇಂದು ಐಸಿಸಿ (ICC) ಚಾಂಪಿಯನ್‌ ಟ್ರೋಫಿ ನಗದು ಬಹುಮಾನ ಮೊತ್ತವನ್ನು ಪ್ರಕಟಿಸಿದೆ. ಈ ಬಾರಿ ವಿಜೇತ ತಂಡ 2.24 ದಶಲಕ್ಷ ಡಾಲರ್‌ ಪಡೆದರೆ ರನ್ನರ್-ಅಪ್‌ ತಂಡ 1.12 ದಶಲಕ್ಷ ಡಾಲರ್‌ (9.75 ಕೋಟಿರೂ.) ಪಡೆಯಲಿದೆ.

    ಈ ಬಾರಿ ಟೂರ್ನಿಯ ಒಟ್ಟು ನಗದು ಬಹುಮಾನ ಮೊತ್ತ 6.9 ದಶಲಕ್ಷ ಡಾಲರ್‌ಗೆ (60  ಕೋಟಿ ರೂ,) ಏರಿಕೆಯಾಗಿದೆ. 2017ಕ್ಕೆ ಹೋಲಿಸಿದರೆ ಒಟ್ಟು ನಗದು ಬಹುಮಾನದ ಮೊತ್ತ 53% ಏರಿದೆ. 2017 ರಲ್ಲಿ ಒಟ್ಟು ಬಹುಮಾನದ ಮೊತ್ತ 4.5 ದಶಲಕ್ಷ ಡಾಲರ್‌ ಆಗಿದ್ದರೆ ವಿಜೇತ ತಂಡಕ್ಕೆ 2.22 ದಶಲಕ್ಷ ಡಾಲರ್‌ ಸಿಕ್ಕಿತ್ತು. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

    ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ 5,60,000 ಡಾಲರ್‌ (4.86 ಕೋಟಿ ರೂ.) ನೀಡಲಾಗುತ್ತದೆ. ತಂಡಗಳು ಆಡುವ ಪ್ರತಿಯೊಂದು ಪಂದ್ಯವು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖ್ಯವಾಗಿರುತ್ತದೆ. ಪ್ರತಿ ಪಂದ್ಯ ಗೆದ್ದರೂ 34,000 ಡಾಲರ್‌ (29.52 ಲಕ್ಷ ರೂ.) ನೀಡಲಾಗುತ್ತದೆ. ಐದನೇ ಅಥವಾ ಆರನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3,50,000 ಡಾಲರ್‌ ನೀಡಲಾಗುತ್ತದೆ. ಏಳನೇ ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳಿಗೆ 1,40,000 ಡಾಲರ್‌ ನೀಡಲಾಗುತ್ತದೆ.

    1996 ರ ನಂತರ ಪಾಕಿಸ್ತಾನ (Pakistan) ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸುತ್ತಿದ್ದು ಹೈಬ್ರಿಡ್‌ ಮಾದರಿಯಲ್ಲಿ ನಡೆಯಲಿದೆ. ಪಾಕಿಸ್ತಾನ ಹಾಗೂ ಯುಎಇನಲ್ಲಿ ಟೂರ್ನಿ ಆಯೋಜನೆಯಾಗಲಿದೆ. ಭಾರತ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ.

    ಫೆ.19 ರಿಂದ  ಟೂರ್ನಿ ಆರಂಭಗೊಂಡರೆ ಮಾ.9 ರಂದು ಫೈನಲ್‌ ಪಂದ್ಯ ನಡೆಯಲಿದೆ. 2025 ರ ಆವೃತ್ತಿಯಲ್ಲಿ ಎಂಟು ತಂಡಗಳು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದೆ.

    2027 ರಲ್ಲಿ ಟಿ20 ಮಾದರಿಯಲ್ಲಿ ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುವುದಾಗಿ ಐಸಿಸಿ ತಿಳಿಸಿದೆ.

  • ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ನಾಯಕ – ಭಾರತದ ನಾಲ್ವರಿಗೆ ಸ್ಥಾನ

    ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ನಾಯಕ – ಭಾರತದ ನಾಲ್ವರಿಗೆ ಸ್ಥಾನ

    ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ (Cricket) ಮಂಡಳಿ (ICC) ಪ್ರಕಟಿಸಿರುವ 2024ರ ವರ್ಷದ ಪುರುಷರ ಟಿ20 ಕ್ರಿಕೆಟ್ ತಂಡಕ್ಕೆ ಭಾರತದ ರೋಹಿತ್ ಶರ್ಮಾ (Rohit Sharma) ನಾಯಕರಾಗಿ ಆಯ್ಕೆಯಾಗಿದ್ದಾರೆ.

    ನಾಯಕ ರೋಹಿತ್ ಸೇರಿದಂತೆ ನಾಲ್ವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಅರ್ಷದೀಪ್ ಸಿಂಗ್ ತಂಡದಲ್ಲಿದ್ದಾರೆ. ಈ ಮೂಲಕ ಐಸಿಸಿ ವರ್ಷದ ಪುರುಷರ ಟಿ20 ತಂಡದಲ್ಲಿ ಭಾರತೀಯ ಆಟಗಾರರು ಅಧಿಪತ್ಯ ಸ್ಥಾಪಿಸಿದ್ದಾರೆ.

    ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಇಂಗ್ಲೆಂಡ್‌ನ ಫಿಲ್ ಸಾಲ್ಫ್, ಪಾಕಿಸ್ತಾನದ ಬಾಬರ್ ಅಜಂ, ವೆಸ್ಟ್‌ ಇಂಡೀಸ್‌ನ ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಶ್ರೀಲಂಕಾದ ವನಿಂದು ಹಸರಂಗ ತಂಡದಲ್ಲಿದ್ದಾರೆ.

    ರೋಹಿತ್ ಶರ್ಮಾ ನಾಯಕತ್ವದಲ್ಲೇ ಭಾರತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಜಯಿಸಿತ್ತು. ಈ ಅವಧಿಯಲ್ಲಿ ರೋಹಿತ್ 11 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ (160.16) 378 ರನ್ ಗಳಿಸಿದ್ದರು. ಒಂದು ಶತಕವನ್ನು (121) ಸಿಡಿಸಿದ್ದರು.

    ಹಾರ್ದಿಕ್ ಪಾಂಡ್ಯ 17 ಪಂದ್ಯಗಳಲ್ಲಿ 352 ರನ್ ಮತ್ತು 16 ವಿಕೆಟ್‌ಗಳನ್ನು ಗಳಿಸಿದ್ದಾರೆ. ಬಲಗೈ ವೇಗದ ಬೌಲ‌ರ್ ಜಸ್‌ಪ್ರೀತ್ ಬೂಮ್ರಾ 8 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಗಮನಾರ್ಹ ಪ್ರದರ್ಶನ ನೀಡಿರುವ ಅರ್ಷದೀಪ್ ಸಿಂಗ್ 18 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಗಳಿಸಿದ್ದಾರೆ.

    ಐಸಿಸಿ ವರ್ಷದ ಪುರುಷರ ಟಿ20 ತಂಡ
    ರೋಹಿತ್ ಶರ್ಮಾ (ನಾಯಕ),
    ಟ್ರಾವಿಸ್ ಹೆಡ್,
    ಫಿಲ್ ಸಾಲ್ಟ್.
    ಬಾಬ‌ರ್ ಅಜಂ
    ನಿಕೋಲಸ್ ಪೂರನ್ (ವಿಕೆಟ್ ಕೀಪರ್),
    ಸಿಕಂದ‌ರ್ ರಾಜಾ,
    ಹಾರ್ದಿಕ್ ಪಾಂಡ್ಯ,
    ರಶೀದ್ ಖಾನ್,
    ವನಿಂದು ಹಸರಂಗ,
    ಜಸ್‌ಪ್ರೀತ್ ಬೂಮ್ರಾ,
    ಅರ್ಷದೀಪ್ ಸಿಂಗ್.

  • ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

    ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನೂತನ ಕಾರ್ಯದರ್ಶಿಯಾಗಿ ಅಸ್ಸಾಂನ ಮಾಜಿ ಕ್ರಿಕೆಟಿಗ ದೇವಜಿತ್‌ ಸೈಕಿಯಾ (Devajit Saikia) ನೇಮಕವಾಗಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾಗಿ ಜಯ್‌ ಶಾ (Jay Shah) ಆಯ್ಕೆಯಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಒಂದು ತಿಂಗಳ ಬಳಿಕ ಸೈಕಿಯಾ ನೇಮಕಗೊಂಡಿದ್ದಾರೆ ಎಂದು ವರದಿಯಾಗಿದೆ.

    ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಇಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ (Roger Binny), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಭೆಯಲ್ಲಿ ಇತ್ತೀಚಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಟೀಂ ಇಂಡೀಯಾ ಸೋಲಿಗೆ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಾಯಿತು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣಗಳೇನೆಂಬುದನ್ನು ಚರ್ಚಿಸಲಾಯಿತು. ಜೊತೆಗೆ ಮುಂದಿನ ಸವಾಲುಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆಯೂ ಮಾತುಕತೆ ನಡೆಸಲಾಯಿತು.

    ದೇವಜಿತ್ ಸೈಕಿಯಾ ಯಾರು?
    ಸೈಕಿಯಾ ಅಸ್ಸಾಂ ಮೂಲದ ಮಾಜಿ ಕ್ರಿಕೆಟರ್‌. 1990 – 1991ರ ನಡುವೆ‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4 ಪಂದ್ಯಗಳನ್ನಾಡಿದ್ದ ಸೈಕಿಯಾ ವಿಕೆಟ್‌ ಕೀಪರ್‌ ಆಗಿದ್ದರು. ಈ ಪಂದ್ಯದಲ್ಲಿ 53 ರನ್‌ ಗಳಿಸಿದ್ದ ಅವರು 9 ವಿಕೆಟ್‌ ಪಡೆದಿದ್ದರು. ಬಳಿಕ ಕಾನೂನು ವೃತ್ತಿಯಲ್ಲಿ ಮುಂದುವರಿಯಲು ಪ್ರಾರಂಭಿಸಿದರು. 28ನೇ ವಯಸ್ಸಿನಲ್ಲಿ ಗುವಾಹಟಿ ಹೈಕೋರ್ಟ್‌ ವಕೀಲರಾಗಿ ಅಭ್ಯಾಸ ಆರಂಭಿಸಿದರು. ಇದಕ್ಕೂ ಮುನ್ನ ಸ್ಪೋರ್ಟ್ಸ್‌ ಕೋಟಾ ಮೂಲಕ ಉತ್ತರ ಗಡಿನಾಡು ರೈಲ್ವೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಸೇವೆ ಸಲ್ಲಿಸಿದ್ದರು.

    ನಂತರ 2019ರಲ್ಲಿ ಮತ್ತೆ ಕ್ರೀಡಾಲೋಕಕ್ಕೆ ಮರಳಿದರು. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ​​(ACA)ನ ಆರು ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದರು. 2019ರಲ್ಲಿ ಅಸ್ಸಾಂ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ಬಳಿಕ 2022ರಲ್ಲಿ ಬಿಸಿಸಿಐ ಹಂಟಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇದೀಗ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

  • ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ದುಬೈ: ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ (ICC T20i Cricketer Of The Year) ನಾಲ್ವರು ಆಟಗಾರರ ಹೆಸರು ನಾಮನಿರ್ದೇಶನಗೊಂಡಿದೆ. ಈ ನಾಲ್ವರು ಆಟಗಾರರ ಪೈಕಿ ಭಾರತದ ಚಾಂಪಿಯನ್‌ ಬೌಲರ್‌ ಅರ್ಷ್‌ದೀಪ್‌ ಸಿಂಗ್‌ (Arshdeep Singh), ಆಸೀಸ್‌ ದೈತ್ಯ ಬ್ಯಾಟರ್‌ ಟ್ರಾವಿಸ್‌ಹೆಡ್‌, ಜಿಂಬಾಬ್ವೆ ಆಟಗಾರ ಸಿಖಂದರ್‌ ರಾಜಾ (Sikandar Raza) ಹಾಗೂ ಪಾಕ್‌ ತಂಡದ ಮಾಜಿ ನಾಯಕ ಬಾಬರ್‌ ಆಜಂ ಸ್ಥಾನ ಪಡೆದುಕೊಂಡಿದ್ದಾರೆ.

    ಪ್ರಸಕ್ತ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ನಾಲ್ವರು ಆಟಗಾರರ ನಾಮನಿರ್ದೇಶನ ಮಾಡಲಾಗಿದೆ. ಈ ನಾಲ್ವರು ಆಟಗಾರರ ಪೈಕಿ ಯಾರಿಗೆ 2024ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಸಿಗಬಹುದು ಅನ್ನೋದನ್ನ ಕಾದುನೋಡಬೇಕಿದೆ.

    ಯಾರು ಆ ನಾಲ್ವರು ಆಟಗಾರರು?

    1. ಟ್ರಾವಿಸ್‌ ಹೆಡ್‌
    ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಬ್ಯಾಟರ್ ಟ್ರಾವಿಸ್‌ ಹೆಡ್ 2024ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದಾರೆ. 2024ರಲ್ಲಿ ಆಸ್ಟ್ರೇಲಿಯಾ ಪರ ಒಟ್ಟು 15 ಟಿ20 ಪಂದ್ಯಗಳನ್ನಾಡಿ 178.47ರ ಸ್ಟ್ರೈಕ್‌ರೇಟ್‌ನಲ್ಲಿ 539 ರನ್ ಸಿಡಿಸಿ ಮಿಂಚಿದ್ದಾರೆ.

    2. ಸಿಖಂದರ್ ರಾಜಾ
    ಜಿಂಬಾಬ್ವೆ ಮೂಲದ ಸ್ಟಾರ್ ಆಲ್ರೌಂಡರ್ ಸಿಖಂದರ್ ರಾಜಾ ಅವರ ಪಾಲಿಗೆ 2024ರ ವರ್ಷ ಅವಿಸ್ಮರಣೀಯವಾಗಿದೆ. ಈ ವರ್ಷ ರಾಜಾ ಜಿಂಬಾಬ್ವೆ ಪರ 24 ಟಿ20 ಪಂದ್ಯಗಳನ್ನು ಆಡಿ 573 ರನ್ ಸಿಡಿಸಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ ರಾಜಾ 24 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

    3. ಬಾಬರ್ ಆಜಂ
    ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಾಬರ್ ಅಜಂ ಕೂಡಾ 2024ರಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. 2024ರಲ್ಲಿ ಬಾಬರ್ ಅಜಂ ಪಾಕಿಸ್ತಾನ ಪರ 24 ಟಿ20 ಪಂದ್ಯಗಳನ್ನಾಡಿ 738 ರನ್ ಸಿಡಿಸಿದ್ದಾರೆ.

    4. ಅರ್ಷ್‌ದೀಪ್‌ ಸಿಂಗ್
    ಟೀಂ ಇಂಡಿಯಾ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್, ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಯ ರೇಸ್‌ನಲ್ಲಿರುವ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅರ್ಶದೀಪ್ ಸಿಂಗ್ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಅರ್ಷ್‌ದೀಪ್‌ ಭಾರತ ಪರ 18 ಟಿ20 ಪಂದ್ಯಗಳನ್ನಾಡಿ 36 ವಿಕೆಟ್ ಕಬಳಿಸಿದ್ದಾರೆ. 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಅರ್ಷ್‌ದೀಪ್‌ ಗರಿಷ್ಠ 17 ವಿಕೆಟ್‌ ಪಡೆದ ದಾಖಲೆ ಬರೆದಿದ್ದರು.

  • ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC

    ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC

    ಮುಂಬೈ: ICC ಚಾಂಪಿಯನ್ಸ್ ಟ್ರೋಫಿ 2025 ರ ಪಂದ್ಯಗಳ ಆಯೋಜನೆ ಸ್ಥಳದ ಕುರಿತು ಎದ್ದಿದ್ದ ಗೊಂದಲ ಕೊನೆಗೊಂಡಿದೆ. ತಿಂಗಳ ವಿಳಂಬದ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂತಿಮವಾಗಿ ಸ್ಥಳಗಳನ್ನು ಅಧಿಕೃತವಾಗಿ ಘೋಷಿಸಿದೆ.

    ICC ಪುರುಷರ ಚಾಂಪಿಯನ್ಸ್ ಟ್ರೋಫಿ 2025 ಅನ್ನು ಪಾಕಿಸ್ತಾನ ಮತ್ತು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುವುದು ಎಂದು ICC ಹೇಳಿಕೆಯಲ್ಲಿ ತಿಳಿಸಿದೆ. ಇದರರ್ಥ ಭಾರತವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುವುದು ಎಂದು ಜಯ್ ಶಾ ನೇತೃತ್ವದ ಮಂಡಳಿ ಘೋಷಿಸಿದೆ.

    2024-2027 ರ ಐಸಿಸಿ ಈವೆಂಟ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಾಗುವುದು ಎಂದು ಐಸಿಸಿ ಮಂಡಳಿಯು ಇಂದು ದೃಢಪಡಿಸಿದೆ.

  • ಬೌಲಿಂಗ್‌ಗೆ ಬ್ಯಾನ್‌ – ಬಾಂಗ್ಲಾ ಬೌಲರ್‌ ಶಕೀಬ್‌ಗೆ ಐಸಿಸಿ ಶಾಕ್‌

    ಬೌಲಿಂಗ್‌ಗೆ ಬ್ಯಾನ್‌ – ಬಾಂಗ್ಲಾ ಬೌಲರ್‌ ಶಕೀಬ್‌ಗೆ ಐಸಿಸಿ ಶಾಕ್‌

    ದುಬೈ: ಬಾಂಗ್ಲಾದೇಶದ (Bangladesh) ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ (Shakib Al Hasan) ಬೌಲಿಂಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ICC) ನಿಷೇಧ ಹೇರಿದೆ.

    ಬೌಲಿಂಗ್‌ ವೇಳೆ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿದ ಹಿನ್ನೆಲೆಯಲ್ಲಿ ಶಕೀಬ್‌ ಬೌಲಿಂಗ್‌ಗೆ ನಿಷೇಧ ಹೇರಲಾಗಿದೆ. ಇದು ಐಸಿಸಿಯ ದೇಶೀಯ ಮತ್ತು ವಿದೇಶದಲ್ಲಿ ನಡೆಯಲಿರುವ ಪಂದ್ಯಗಳಿಗೆ ಅನ್ವಯವಾಗಲಿದೆ.

    ಡಿಸೆಂಬರ್‌ನಲ್ಲಿ ಇಂಗ್ಲೆಂಡಿನ ಲೌಬರೋ ವಿಶ್ವವಿದ್ಯಾನಿಲಯದಲ್ಲಿ ದಿನನಿತ್ಯದ ಮೌಲ್ಯಮಾಪನದ ನಂತರ, ಬೌಲಿಂಗ್ ಮಾಡುವಾಗ ಶಕೀಬ್ ಮೊಣಕೈಯನ್ನು 15 ಡಿಗ್ರಿಗಳಿಗಿಂತ ಹೆಚ್ಚು ವಿಸ್ತರಿಸಿರುವುದು ಕಂಡುಬಂದಿದೆ. ಐಸಿಸಿ ನಿಯಮದ ಪ್ರಕಾರ ಬೌಲಿಂಗ್‌ ವೇಳೆ ಮೊಣಕೈ ವಿಸ್ತರಣೆಯು 15 ಡಿಗ್ರಿ ಮಿತಿಯನ್ನು ಮೀರುವಂತಿಲ್ಲ.ಯಾವುದೇ ಬೌಲರ್‌ನ ಮೊಣಕೈ ಈ ಮಿತಿಯನ್ನು ಮೀರಿ ವಿಸ್ತರಿಸಿದರೆ ಕಾನೂನುಬಾಹಿರ ಬೌಲಿಂಗ್ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್‌ ಬ್ಯಾನ್‌ ಮಾಡಿ – ಬಾಂಗ್ಲಾ ಕ್ರಿಕೆಟ್ ‌ಮಂಡಳಿಗೆ ನೋಟಿಸ್‌

    ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸ್ವತಂತ್ರವಾಗಿ ಮೌಲ್ಯಮಾಪನ ನಡೆಸಿ ಶಕೀಬ್ ಅವರ ಬೌಲಿಂಗ್‌ ಐಸಿಸಿ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಖಚಿತಪಡಿಸಿದೆ. ವರದಿ ಬಂದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳನ್ನು ಒಳಗೊಂಡಿರುವ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಟೂರ್ನಿಗಳಲ್ಲಿ ಬೌಲಿಂಗ್‌ನಿಂದ ಅವರನ್ನು ಅಮಾನತುಗೊಳಿಸುವುದಾಗಿ ಇಸಿಬಿ ಘೋಷಿಸಿತು.

    ಬಾಂಗ್ಲಾದೇಶದ ಹೊರಗೆ ಐಸಿಸಿ-ಅನುಮೋದಿತ ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬೌಲಿಂಗ್‌ನಿಂದ ಶಕೀಬ್ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ದೃಢಪಡಿಸಿದೆ.‌ ಇದನ್ನೂ ಓದಿ: ಸಿಂಗ್‌ ಬದಲು ಪ್ರಣಬ್‌ರನ್ನು ಪ್ರಧಾನಿ ಮಾಡುತ್ತಿದ್ದರೆ ಯುಪಿಎ-3 ಅಧಿಕಾರಕ್ಕೆ ಬರುತ್ತಿತ್ತು: ಮಣಿಶಂಕರ್‌ ಅಯ್ಯರ್‌

    37 ವರ್ಷದ ಶಕೀಬ್‌ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಎಡಗೈ ಬ್ಯಾಟ್ಸ್‌ಮ್ಯಾನ್‌ ಮತ್ತು ಎಡಗೈ ಬೌಲರ್‌ ಆಗಿರುವ ಬಾಂಗ್ಲಾ ಪರವಾಗಿ 71 ಟೆಸ್ಟ್‌, 247 ಏಕದಿನ, 129 ಟಿ20 ಪಂದ್ಯವಾಡಿದ್ದಾರೆ.

  • ಭಾರತಕ್ಕೂ ಮೊದಲೇ ಚಾಂಪಿಯನ್ಸ್‌ ಟ್ರೋಫಿ ಬಾಯ್ಕಾಟ್‌ ಮಾಡ್ಬೇಕು – ಪಾಕ್ ಹೊಸ ಕ್ಯಾತೆ

    ಭಾರತಕ್ಕೂ ಮೊದಲೇ ಚಾಂಪಿಯನ್ಸ್‌ ಟ್ರೋಫಿ ಬಾಯ್ಕಾಟ್‌ ಮಾಡ್ಬೇಕು – ಪಾಕ್ ಹೊಸ ಕ್ಯಾತೆ

    ಇಸ್ಲಾಮಾಬಾದ್‌: ತೀವ್ರ ಕುತೂಹಲ ಮೂಡಿಸಿರುವ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರಿಕೆಟ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಒಮ್ಮತದ ನಿರ್ಣಯ ಕೈಗೊಂಡಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಟ್ರೋಫಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುವುದಕ್ಕೆ ಐಸಿಸಿ ಅನುಮತಿ ನೀಡಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್‌ ರಶೀದ್ ಲತೀಫ್ (Rashid Latif) ಹೊಸ ಕ್ಯಾತೆ ತೆಗೆದಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲತೀಫ್‌, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮುಂದಿನ ಹೆಜ್ಜೆ ಇಡುವ ಮೊದಲು ಪಾಕಿಸ್ತಾನ ಚಾಂಪಿಯನ್ಸ್‌ ಟ್ರೋಫಿಯನ್ನ ಬಾಯ್ಕಾಟ್‌ ಮಾಡಬೇಕು. ಇನ್ಮುಂದೆ ಚಾಂಪಿಯನ್‌ ಟ್ರೋಫಿ ನಡೆಯಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಸಿ ಅಂಗಳ ತಲುಪಿದ ಸಿರಾಜ್‌ vs ಹೆಡ್‌ ವಾಗ್ವಾದ – ಇಬ್ಬರಿಗೂ ಬ್ಯಾನ್‌ ಭೀತಿ?

    ಚಾಂಪಿಯನ್ಸ್‌ ಟ್ರೋಫಿ ಪೂರ್ಣ ಪಂದ್ಯಗಳು ಪಾಕಿಸ್ತಾನದಲ್ಲಿ (Pakistan) ನಡೆಯಬೇಕಿತ್ತು. ಆದ್ರೆ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ, ಭಾರತ ತನ್ನ ಪಂದ್ಯಗಳನ್ನಾಡಲು ನಿರಾಕರಿಸಿದೆ. ಐಸಿಸಿ ಹೈಬ್ರಿಡ್‌ ಮಾದರಿಗೆ ಒಪ್ಪಿಗೆ ಸೂಚಿಸಿದ್ದರೂ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮ್ಮನ್ನು ಯಾವಾಗಲೂ ಬಲಿಪಶುಗಳಾಗಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂದು ಹ್ಯಾಟ್ರಿಕ್‌ ಶಾಕ್‌ – ಸತತ 2ನೇ ಬಾರಿಗೆ ಬಾಂಗ್ಲಾಗೆ U19 ಏಷ್ಯಾಕಪ್‌ ಕಿರೀಟ

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (PCB), ಅಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ (ACB) ಆಗಿರಲಿ ಅಥವಾ ಐಸಿಸಿ ಆಗಿರಲಿ, ಬಿಸಿಸಿಐ ಎದುರು ಫೈಟ್‌ ಮಾಡೋಕೆ ಸಾಧ್ಯವಿಲ್ಲ. ಭಾರತ ಬಹಿಷ್ಕರಿಸಿದ್ರೆ, ನಾವು ಎಲ್ಲಿಗೆ ಹೋಗಿ ನಿಲ್ಲಬೇಕಾಗುತ್ತೆ ಅನ್ನೋ ಭಯ ಇದೆ. ಅದಕ್ಕಾಗಿ ಪಾಕಿಸ್ತಾನವನ್ನು ಬಲಿಪಶುಗಳಾಗಿ ಮಾಡ್ತಾರೆ. ಆದ್ದರಿಂದ ಬಿಸಿಸಿಐ ಮುಂದಿನ ನಡೆದ ತೆಗೆದುಕೊಳ್ಳುವ ಮೊದಲು ಪಾಕಿಸ್ತಾನ ಟೂರ್ನಿಯನ್ನ ಬಹಿಷ್ಕರಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಹೀನಾಯ ಸೋಲು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ, ಫೈನಲ್‌ ಹಾದಿ ಕಠಿಣ

    2025ರ ಫೆಬ್ರವರಿ- ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟವಾಗಲಿದೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ತಾನು ಹೈಬ್ರಿಡ್ ಮಾದರಿಗೆ ಸುತಾರಾಂ ಒಪ್ಪುವುದಿಲ್ಲ ಎಂದು ಕಳೆದ ವಾರ ಹಠ ಹಿಡಿದಿದ್ದ ಪಾಕಿಸ್ತಾನ, ಬಹಿಷ್ಕಾರದ ಬೆದರಿಕೆ ಹಿಂಪಡೆದು, ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿರುವುದಲ್ಲದೆ, ಈ ವ್ಯವಸ್ಥೆ 2031ರವರೆಗೂ ಮುಂದುವರಿಯಬೇಕು ಎಂದು ಆಗ್ರಹಿಸಿತ್ತು. ಅಲ್ಲದೇ ಫೈನಲ್‌ ಪಂದ್ಯ ಲಾಹೋರ್‌ನಲ್ಲೇ ನಡೆಯಬೇಕು ಎಂದು ಷರತ್ತು ವಿಧಿಸಿದೆ. ಸದ್ಯಕ್ಕೆ ಐಸಿಸಿ ತನ್ನ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲಿ 2027ರ ವರೆಗೆ ನಡೆಸಲು ಒಪ್ಪಿಕೊಂಡಿದೆ. ಆದ್ರೆ ಫೈನಲ್‌ ಪಂದ್ಯವನ್ನು ಲಾಹೋರ್‌ನಲ್ಲೇ ನಡೆಸುವ ಬಗ್ಗೆ ಒಪ್ಪಿಗೆ ಸೂಚಿಸಿಲ್ಲ.