Tag: ICC Test ranking

  • ICC Test Ranking | ಆರಕ್ಕೇರಿದ ಪಂತ್, ಟಾಪ್‌-20 ಪಟ್ಟಿಯಿಂದಲೂ ಕೊಹ್ಲಿ ಔಟ್‌

    ICC Test Ranking | ಆರಕ್ಕೇರಿದ ಪಂತ್, ಟಾಪ್‌-20 ಪಟ್ಟಿಯಿಂದಲೂ ಕೊಹ್ಲಿ ಔಟ್‌

    ಮುಂಬೈ: ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಐಸಿಸಿ ಟೆಸ್ಟ್ ರ‍್ಯಾಕಿಂಗ್‌ನಲ್ಲಿ (ICC Test Ranking) 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

    ಇನ್ನೂ 3ನೇ ಸ್ಥಾನದಲ್ಲಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal) 4ನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದರೆ, 8 ಸ್ಥಾನ ಕುಸಿತ ಕಂಡಿರುವ ವಿರಾಟ್‌ ಕೊಹ್ಲಿ (Virat Kohli) ಕಳೆದ 10 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಟಾಪ್‌-20 ರ‍್ಯಾಂಕ್‌ನಿಂದಲೇ ಹೊರಬಿದ್ದಿದ್ದಾರೆ. 750 ರೇಟಿಂಗ್ಸ್‌ ಪಡೆದಿರುವ ರಿಷಬ್‌ ಪಂತ್‌ 5 ಸ್ಥಾನಗಳಲ್ಲಿ ಏರಿಕೆ ಕಂಡು 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನೂ 3ನೇ ಸ್ಥಾನದಲ್ಲಿರುವ ಯಶಸ್ವಿ ಜೈಸ್ವಾಲ್‌ 777 ರೇಟಿಂಗ್ಸ್‌ನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದ್ರೆ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ವಿರಾಟ್‌ 655 ರೇಟಿಂಗ್ಸ್‌ನೊಂದಿಗೆ 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದನ್ನೂ ಓದಿ: WTC Points Table | ಹೀನಾಯ ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ – ಆಸೀಸ್‌ಗೆ ಅಗ್ರಸ್ಥಾನ

    ಬಿದ್ದು ಎದ್ದು ಗೆದ್ದ ಪಂತ್‌:
    2022 ಡಿಸೆಂಬರ್‌ 31ರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಪಂಥ್‌ ಬದುಕುಳಿದಿದ್ದೇ ಪವಾಡವಾಗಿತ್ತು. ಅವರ ಸ್ಥಿತಿ ನೋಡಿ ಪಂತ್‌ಗೆ ಮುಂದೆ ನಡೆದಾಡಲು ಆಗಬಹುದೇ ಎಂಬ ಸಂದೇಹವೂ ಕೆಲವರಲ್ಲಿ ಮೂಡಿತ್ತು. ಛಲಬಿಡದ ಪಂತ್‌ ನಿರೀಕ್ಷೆ ಮೀರಿ ಚೇತರಿಸಿಕೊಂಡರು. ಒಂದೂವರೆ ವರ್ಷ ಆಗುವುದರೊಳಗೆ ಕ್ರೀಡಾಂಗಣಕ್ಕೆ ಮರಳಿದರು. 2024ರ ಐಪಿಎಲ್‌ ಟೂರ್ನಿಮೂಲಕ ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಮರಳಿದ ಪಂತ್‌ ಬಳಿಕ ಟೀಂ ಇಂಡಿಯಾ ಪರವಾಗಿ ಪ್ರತಿನಿಧಿಸಿದ್ದು ಟಿ20 ವಿಶ್ವಕಪ್‌ನಲ್ಲಿ. ಆ ನಂತರ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಅಡಿದರು. ಪುನರಾಗಮನದ ಬಳಿಕ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಸರಣಿ ಆಡಿದರು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    ನ್ಯೂಜಿಲೆಂಡ್‌ ವಿರುದ್ಧ ನಡೆದ 3ನೇ ಟೆಸ್ಟ್‌ನ 2ನೇ ದಿನ ಮೊದಲ ಇನಿಂಗ್ಸ್‌ನಲ್ಲಿ ಪಂತ್ ಆಡಲು ಕಣಕ್ಕಿಳಿದಾಗ, ಭಾರತ ಸಂಕಷ್ಟದಲ್ಲಿತ್ತು. ಆಗ ಎದುರಾಳಿಗಳ ಅಸ್ತ್ರ ಆಜಾಜ್ ಪಟೇಲ್ ಅವರನ್ನೂ ಲೆಕ್ಕಿಸಲಿಲ್ಲ. ಅವರ 60 ರನ್‌ಗಳ ನೆರವಿನಿಂದ ಭಾರತಕ್ಕೆ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು. 2ನೇ ಇನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ ಕಿವೀಸ್‌ 147 ರನ್‌ಗಳ ಸಣ್ಣ ಗುರಿ ನೀಡಿತ್ತು. ಆದ್ರೆ ಭಾರತ 18 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇಂಥ ಪರಿಸ್ಥಿತಿಯಲ್ಲೂ ಬೌಲರ್‌ಗಳನ್ನು ಬೆಂಡೆತ್ತಲು ಪಂತ್‌ ಮುಂದಾದರು. ಇದರಿಂದ ಭಾರತದ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಅರ್ಧಶತಕ ಗಳಿಸಿದ್ದ ಪಂತ್‌ ವಿವಾದಾತ್ಮಕ ಡಿಆರ್‌ಎಸ್‌ ತೀರ್ಪಿಗೆ ಔಟಾದರು. ಪಂತ್‌ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಉಳಿದ ಆಟಗಾರರು ಬ್ಯಾಕ್‌ ಟು ಬ್ಯಾಕ್‌ ಪೆವಿಲಿಯನ್‌ ಸೇರಿಕೊಂಡರು.

  • ICC Test Ranking: 14 ಸ್ಥಾನ ಜಿಗಿದು ಟಾಪ್‌-20ಯಲ್ಲಿ ಸ್ಥಾನ ಪಡೆದ ಯಶಸ್ವಿ!

    ICC Test Ranking: 14 ಸ್ಥಾನ ಜಿಗಿದು ಟಾಪ್‌-20ಯಲ್ಲಿ ಸ್ಥಾನ ಪಡೆದ ಯಶಸ್ವಿ!

    ರಾಂಚಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ (Team India) ಯುವ ಆರಂಭಿಕ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (ICC Test Ranking) 14 ಸ್ಥಾನ ಜಿಗಿದು, ಟಾಪ್‌-20 ಸ್ಥಾನಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    29ನೇ ಸ್ಥಾನದಲ್ಲಿದ್ದ 22 ವರ್ಷದ ಯಶಸ್ವಿ ಜೈಸ್ವಾಲ್‌ (Yashasvi Jaiswal) 699 ಅಂಕಗಳೊಂದಿಗೆ 14 ಸ್ಥಾನ ಮೇಲಕ್ಕೆ ಜಿಗಿದು 15ನೇ ಸ್ಥಾನ ಪಡೆದುಕೊಂಡಿದ್ದಾರೆ. 12ನೇ ಸ್ಥಾನದಲ್ಲಿದ್ದ ರಿಷಭ್‌ ಪಂತ್‌ 706 ಅಂಕಗಳೊಂದಿಗೆ 14ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೂ 13ನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) 731 ಅಂಕಗಳೊಂದಿಗೆ 12ನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಟಾಪ್‌-10 ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹೊರತುಪಡಿಸಿ ಮತ್ಯಾರು ಸ್ಥಾನ ಗಳಿಸಿಲ್ಲ. 752 ಅಂಕ ಗಳಿಸಿರುವ ವಿರಾಟ್‌ 7ನೇ ಸ್ಥಾನದಲ್ಲಿದ್ದರೆ, 893 ಅಂಕ ಪಡೆದಿರುವ ಕಿವೀಸ್‌ನ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಫೋಟೋ ಶೂಟ್‌ನಲ್ಲಿ ಮಿಂಚಿದ RCB ಸ್ಟಾರ್ಸ್‌ – ʻಈ ಸಲ ಕಪ್‌ ನಮ್ದೇʼ ಮತ್ತೆ ಶುರುವಾಯ್ತು ಟ್ರೆಂಡ್‌!

    ಕೊಹ್ಲಿ ದಾಖಲೆ ಮುರಿಯುವ ಸನಿಹ:
    ಭಾರತ ಹಾಗೂ ಇಂಗ್ಲೆಂಡ್ (Ind vs Eng) ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚುತ್ತಿರುವ ಜೈಸ್ವಾಲ್‌ ಸದ್ಯದಲ್ಲೇ ವಿರಾಟ್‌ ಕೊಹ್ಲಿ ಅವರ ಅಪರೂಪದ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ. ಟೆಸ್ಟ್‌ ಸರಣಿಯೊಂದರಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್‌ ಗಳಿಸಿದ ಟೀಂ ಇಂಡಿಯಾದ 3ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸನಿಹದಲ್ಲಿ ಜೈಸ್ವಾಲ್‌ ಇದ್ದಾರೆ. ವೈಯಕ್ತಿಕವಾಗಿ ಗರಿಷ್ಠ ರನ್‌ ಗಳಿಸಿದ ಬ್ಯಾಟರ್‌ಗಳ ಪೈಕಿ 774 ರನ್‌ ಗಳಿಸಿರುವ ಸುನೀಲ್‌ ಗವಾಸ್ಕರ್‌ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್‌ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ 3 ಪಂದ್ಯಗಳಲ್ಲಿ 545 ರನ್‌ ಗಳಿಸಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಕೊಹ್ಲಿ ದಾಖಲೆ ಮುರಿಯಲು ಇನ್ನೂ 147 ರನ್‌ಗಳ ಅಗತ್ಯವಿದೆ. ಇದನ್ನೂ ಓದಿ: ಕಿಂಗ್ ಕೊಹ್ಲಿಯ ಅಪರೂಪದ ದಾಖಲೆ ಮುರಿಯುವ ಸನಿಹದಲ್ಲಿ ಯಶಸ್ವಿ!

    2023-25ರ WTCನಲ್ಲಿ ಯಶಸ್ವಿ ಸಾಧನೆ:
    ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್‌ ಸದ್ಯ 2023-25ರ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿಲ್ಲಿ ಟಾಪ್‌ನಲ್ಲಿದ್ದಾರೆ. ಅತಿಹೆಚ್ಚು ಸ್ಕೋರರ್‌, ಉತ್ತಮ ಸರಾಸರಿ, ಅತಿಹೆಚ್ಚು ರನ್‌, ಅತಿಹೆಚ್ಚು ಸ್ಟ್ರೈಕ್‌ರೇಟ್‌, ಹೆಚ್ಚು ಬಾರಿ 50+ ರನ್‌ ಗಳಿಸಿದವರು, ಹೆಚ್ಚು ಬಾರಿ ಶತಕ ಸಿಡಿಸಿದವರು, ಹೆಚ್ಚು ಬೌಂಡರಿ, ಸಿಕ್ಸರ್‌ ಬಾರಿಸಿದವರ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್‌ ಅಗ್ರಸ್ಥಾನದಲ್ಲಿರುವುದು ವಿಶೇಷ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಪಂದ್ಯಕ್ಕೆ ಕೆ.ಎಲ್‌ ರಾಹುಲ್‌ ಕಂಬ್ಯಾಕ್‌ – ಸುಳಿವು ಕೊಟ್ಟ ರೋಹಿತ್‌

    ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್-5 ಲಿಸ್ಟ್
    * ಡಾನ್ ಬ್ರಾಡ್ಮನ್ – 974 ರನ್ (5 ಪಂದ್ಯ, 7 ಇನ್ನಿಂಗ್ಸ್)
    * ವಾಲಿ ಹ್ಯಾಮಂಡ್ – 905 ರನ್ (5 ಪಂದ್ಯ, 9 ಇನ್ನಿಂಗ್ಸ್)
    * ರಾಸ್ ಟೇಲರ್ – 839 ರನ್ (6 ಪಂದ್ಯ, 11 ಇನ್ನಿಂಗ್ಸ್)
    * ನೀಲ್ ಹಾರ್ವೆ – 834 ರನ್ (5 ಪಂದ್ಯ, 9 ಇನ್ನಿಂಗ್ಸ್)
    * ವಿವ್ ರಿಚರ್ಡ್ಸ್ – 829 (4 ಪಂದ್ಯ, 7 ಇನ್ನಿಂಗ್ಸ್)

    ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯರು
    * ಸುನೀಲ್‌ ಗವಾಸ್ಕರ್‌ – 774 (4 ಪಂದ್ಯ, 8 ಇನ್ನಿಂಗ್ಸ್) – 1970-71 ರಲ್ಲಿ
    * ಸುನೀಲ್‌ ಗವಾಸ್ಕರ್‌ – 732 (6 ಪಂದ್ಯ, 9 ಇನ್ನಿಂಗ್ಸ್) – 1978/79 ರಲ್ಲಿ
    * ವಿರಾಟ್‌ ಕೊಹ್ಲಿ – 692 – (4 ಪಂದ್ಯ, 8 ಇನ್ನಿಂಗ್ಸ್) – 2014/15 ರಲ್ಲಿ

  • ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಮೆಚ್ಚುಗೆ!

    ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಮೆಚ್ಚುಗೆ!

    ಸಿಡ್ನಿ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿ ಬಳಿಕ ಭಾರತ ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಳೆದುಕೊಂಡಿದೆ. ‌ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಟೀಂ ಇಂಡಿಯಾದ ಕನಸನ್ನು ಭಗ್ನಗೊಳಿಸಿದ್ದ ಆಸ್ಟ್ರೇಲಿಯಾ (Australia) ತಂಡ ಇದೀಗ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ದೀರ್ಘಾಧಿಯವರೆಗೆ ನಂ.1 ಸ್ಥಾನದಲ್ಲಿದ್ದ ಭಾರತವನ್ನು (Taam India) ನಂ.1 ಸ್ಥಾನದಿಂದ ಕೆಳಗಿಳಿಸಿದೆ.

    ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ (Test Series) ಈಗಾಗಲೇ 2-0 ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿರುವ ಆಸೀಸ್‌ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (ICC Test Ranking) ನಂ.1 ಸ್ಥಾನಕ್ಕೇರಿದೆ. ಇದರಿಂದ ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವದ ಬಗ್ಗೆಯೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಆದ್ರೆ 3ನೇ ಆವೃತ್ತಿಯ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಪಾಯಿಂಟ್ಸ್‌ ಪಟ್ಟಿಯಲ್ಲಿ ಭಾರತವೇ ನಂ.1 ಇರುವುದು ವಿಶೇಷ.

    ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ಸರಣಿಯು 1-1ರಲ್ಲಿ ಸಮಬಲ ಸಾಧಿಸಿತು. ಇನ್ನು ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸೀಸ್‌ 2-0 ಮುನ್ನಡೆ ಸಾಧಿಸಿದೆ. 3ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 313 ರನ್‌ ಗಳಿಸಿದ್ದ ಪಾಕ್‌, ಅಂತಿಮ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 68 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 299 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ಸದ್ಯ 82 ರನ್‌ಗಳ ಹಿನ್ನಡೆಯಲ್ಲಿದೆ. ಮತ್ತೊಂದು ಇನ್ನಿಂಗ್ಸ್‌ ಬಾಕಿ ಇರುವುದರಿಂದ 3ನೇ ಪಂದ್ಯದಲ್ಲೂ ಸುಲಭ ಜಯ ಸಾಧಿಸುವ ಉತ್ಸಾಹ ಹೊಂದಿದೆ.

    ಮುಂದಿನ ದಿನಗಳಲ್ಲಿ ಭಾರತ, ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. 2024ರ ಟಿ20 ವಿಶ್ವಕಪ್‌ ಹಾಗೂ ಶ್ರೀಲಂಕಾ ವಿರುದ್ಧ ದ್ವಿಪಕ್ಷೀಯ ಸರಣಿ ಬಳಿಕ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌ ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಆ ನಂತರ ಕಿವೀಸ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿ, 2024ರ ವರ್ಷಾಂತ್ಯದ ವೇಳೆಗೆ ಆಸೀಸ್‌ ವಿರುದ್ಧ 4 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ.

    ಟಾಪ್-5ನಲ್ಲಿರುವ ತಂಡಗಳು ಯಾವುವು?
    ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 30 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 3,534 ಅಂಕಗಳು ಹಾಗೂ 118 ರೇಟಿಂಗ್ಸ್‌ ಪಡೆದು ನಂ.1 ಸ್ಥಾನದಲ್ಲಿದ್ದರೆ, 32 ಪಂದ್ಯಗಳಲ್ಲಿ 3,746 ಅಂಕಗಳು ಹಾಗೂ 117 ರೇಟಿಂಗ್ಸ್‌ ಪಡೆದಿರುವ ಭಾರತ 2ನೇ ಸ್ಥಾನಕ್ಕೆ ಕುಸಿದಿದೆ. 43 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ 4,941 ಅಂಕ ಪಡೆದಿದ್ದರೂ 115 ರೇಟಿಂಗ್ಸ್‌ ಪಡೆದು 3ನೇ ಸ್ಥಾನ, 24 ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ 2,536 ಅಂಕಗಳು ಹಾಗೂ 106 ರೇಟಿಂಗ್ಸ್‌ಗಳೊಂದಿಗೆ 4ನೇ ಸ್ಥಾನ ಹಾಗೂ 26 ಪಂದ್ಯಗಳನ್ನಾಡಿರುವ ಕಿವೀಸ್ 2,471 ಅಂಕಗಳು ಹಾಗೂ 95 ರೇಟಿಂಗ್ಸ್‌ಗಳೊಂದಿಗೆ 5ನೇ ಸ್ಥಾನದಲ್ಲಿವೆ.

  • ಕಿವೀಸ್ ವಿರುದ್ಧ ವೈಟ್‍ವಾಶ್ ಆದ್ರೂ ಟೆಸ್ಟ್ ಸಾಮ್ರಾಜ್ಯದಲ್ಲಿ ಭಾರತವೇ ರಾಜ

    ಕಿವೀಸ್ ವಿರುದ್ಧ ವೈಟ್‍ವಾಶ್ ಆದ್ರೂ ಟೆಸ್ಟ್ ಸಾಮ್ರಾಜ್ಯದಲ್ಲಿ ಭಾರತವೇ ರಾಜ

    ದುಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ವೈಟ್‍ವಾಶ್ ಕಂಡರೂ ಭಾರತ ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದೆ.

    ತಾಯ್ನಾಡಿನಲ್ಲಿ ಭಾರತದ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ತಲುಪಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ನಡವಳಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನ ಚಳಿ ಬಿಡಿಸಿದ ವಿರಾಟ್

    ಭಾರತದ ವಿರುದ್ಧ ಗೆದ್ದು ಬೀಗಿರುವ ನ್ಯೂಜಿಲೆಂಡ್ ತಂಡವು ಟೆಸ್ಟ್ ಶ್ರೇಯಾಂಕದಲ್ಲಿ ಎರಡು ಸ್ಥಾನ ನೆಗೆತ ಕಂಡಿದೆ. ಟೀಂ ಇಂಡಿಯಾ 116 ಅಂಕ ಪಡೆದಿದ್ದರೆ, ಕಿವೀಸ್ 110 ಅಂಕ ಗಳಿಸಿದೆ. 108 ಅಂಕಗಳಿಂದ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದನ್ನೂ ಓದಿ: ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ – ಭಾರತಕ್ಕೆ ಹೀನಾಯ ಸೋಲು

    2019ರ ಡಿಸೆಂಬರ್- 2020ರ ಜನವರಿಯಲ್ಲಿ ಆಸ್ಟ್ರೇಲಿಯಾ ತಂಡವು 3-0 ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿತ್ತು. ಇದರಿಂದಾಗಿ ಕಿವೀಸ್ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಈಗ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ. ಇದೇ ಸಮಯದಲ್ಲಿ ಇಂಗ್ಲೆಂಡ್ 105 ಅಂಕಗಳಿಂದ ನಾಲ್ಕನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾ 98 ಅಂಕಗಳಿಂದ ಐದನೇ ಸ್ಥಾನದಲ್ಲಿವೆ.

    ಟೆಸ್ಟ್ ಚಾಂಪಿಯನ್‍ಶಿಪ್:
    2019-21ರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2019ರಿಂದ ಒಟ್ಟು ನಾಲ್ಕು ಸರಣಿಯ 9 ಪಂದ್ಯಗಳನ್ನು ಟೀಂ ಇಂಡಿಯಾ ಆಡಿದೆ. ಈ ಪೈಕಿ 7 ಪಂದ್ಯ ಗೆದ್ದಿದ್ದು, 2ರಲ್ಲಿ ಸೋಲು ಕಂಡು 3 ಸರಣಿಯನ್ನು ಗೆದ್ದು ಬೀಗಿದೆ. ಈ ಮೂಲಕ ಭಾರತವು 360 ಪಾಯಿಂಟ್ಸ್ ಗಳಿಸಿದೆ.

    ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಇದುವರೆಗೂ 3 ಸರಣಿಯಲ್ಲಿ 10 ಪಂದ್ಯಗಳನ್ನು ಆಡಿದೆ. ಈ ಪೈಕಿ 7 ಪಂದ್ಯಗಳಲ್ಲಿ ಗೆದ್ದರೆ, ಎರಡರಲ್ಲಿ ಸೋಲು ಕಂಡು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು ಎರಡು ಸರಣಿ ಗೆದ್ದಿರುವ ಆಸೀಸ್ ಪಡೆ 296 ಪಾಯಿಂಟ್ಸ್ ಗಳಿಸಿದೆ. ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 3 ಸರಣಿಯಲ್ಲಿ 7 ಪಂದ್ಯ ಆಡಿದ್ದು, ಮೂರು ಪಂದ್ಯ ಗೆದ್ದು ಬೀಗಿದರೆ, 4ರಲ್ಲಿ ಸೋಲು ಕಂಡಿದೆ. ಒಂದು ಸರಣಿಯನ್ನು ತನ್ನ ಕೈವಶ ಮಾಡಿಕೊಂಡ ಕಿವೀಸ್ 180 ಪಾಯಿಂಟ್ಸ್ ಗಳಿಸಿದೆ. ಉಳಿದಂತೆ ಇಂಗ್ಲೆಂಡ್ 146 ಪಾಯಿಂಟ್ಸ್ ಗಳಿಂದ 4ನೇ ಸ್ಥಾನ, 140 ಪಾಯಿಂಟ್ಸ್ ಗಳಿಸಿರುವ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.