Tag: ICC New Rule

  • ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ದುಬೈ: ಟಿ20 ಪಂದ್ಯದ ವೇಳೆ ನಿಗದಿತ ಸಮಯದ ಒಳಗಡೆ ಓವರ್‌ಗಳನ್ನು ಮುಗಿಸದ ತಂಡಕ್ಕೆ ದಂಡದ ಜೊತೆಗೆ ಪಂದ್ಯ ನಡೆಯುವಾಗಲೇ ಮೈದಾನದಲ್ಲೇ ಶಿಕ್ಷೆಯನ್ನು ವಿಧಿಸಲು ಐಸಿಸಿ ನಿರ್ಧರಿಸಿದೆ.

    ಈ ಹಿಂದೆ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸದ ತಂಡಗಳಿಗೆ ಪಂದ್ಯ ಮುಗಿದ ಮೇಲೆ ದಂಡ ಹಾಕುವ ನಿಯಮ ಚಾಲ್ತಿಯಲ್ಲಿತ್ತು. ಆದರೆ ಈಗ ಆ ನಿಯಮಗಳೊಂದಿಗೆ ಪಂದ್ಯದ ವೇಳೆಯೂ ಶಿಕ್ಷೆ ನೀಡಲು ಐಸಿಸಿ ನಿರ್ಧರಿಸಿದೆ. ಈ ಎಲ್ಲಾ ಹೊಸ ನಿಯಮಗಳು ಈ ತಿಂಗಳಿನಿಂದಲೇ ಜಾರಿಗೆ ಬರಲಿವೆ.

    ಹೊಸ ನಿಯಮದಲ್ಲಿ ಏನಿದೆ?: ಐಸಿಸಿ ನಿಯಮದ ಪ್ರಕಾರ ಒಂದು ಇನ್ನಿಂಗ್ಸ್ ಗರಿಷ್ಠ 85 ನಿಮಿಷದಲ್ಲಿ(2:30 ನಿಮಿಷದ ಎರಡು ಪಾನಿಯ ವಿರಾಮ ಸೇರಿದರೆ 90 ನಿಮಿಷ) ಮುಗಿಯಬೇಕು. ಹೀಗಾಗಿ‌ ಒಂದು ಓವರ್ ಅನ್ನು 4‌ ನಿಮಿಷ 25 ಸೆಕೆಂಡ್ ನಲ್ಲಿ‌ ಮುಗಿಸಬೇಕಾಗುತ್ತದೆ‌.

    ಸದ್ಯ ಐಸಿಸಿಯ ಹೊಸ ನಿಯಮ ಹೇಳುವ ಪ್ರಕಾರ ಬೌಲಿಂಗ್ ತಂಡವೊಂದು ಇನಿಂಗ್ಸ್ ಕೊನೆಯ ಓವರಿನ ಮೊದಲ ಎಸೆತ ಎಸೆಯುವಾಗ ನಿಗದಿತ ಅವಧಿಯಲ್ಲಿ ಇನಿಂಗ್ಸ್ ಮುಗಿಸುವ ಸ್ಥಿತಿಯಲ್ಲಿರಬೇಕು. ಒಂದು ವೇಳೆ ಹೀಗಿರದಿದ್ದಲ್ಲಿ, ಇನಿಂಗ್ಸ್ ಓವರ್‌ಗಳನ್ನು ಎಸೆಯುವಾಗ 30 ಯಾರ್ಡ್ ಹೊರಗಡೆ 5 ಕ್ಷೇತ್ರ ರಕ್ಷಕರ ಬದಲಿಗೆ ಕೇವಲ ನಾಲ್ಕು ಕ್ಷೇತ್ರ ರಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

    ಉದಾಹರಣೆಗೆ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಇನ್ನಿಂಗ್ಸ್ ಮುಗಿಯಬೇಕು ಎಂದಿರುತ್ತದೆ. ಬೌಲಿಂಗ್ ಮಾಡುವ ತಂಡವೊಂದು 81:35 ನಿಮಿಷ ಒಳಗಡೆ 19ನೇ ಓವರ್ ಪೂರ್ಣ ಮಾಡಿರಬೇಕು. ಒಂದು ವೇಳೆ ಆ ಹೊತ್ತಿಗೆ ಇನ್ನೂ 18ನೇ ಓವರ್ ಚಾಲ್ತಿಯಲ್ಲಿದ್ದರೆ, ಅಂಪೈರ್ ಗಳಿಗೆ 30 ಯಾರ್ಡ್ ಹೊರಗಡೆ ಕ್ಷೇತ್ರ ರಕ್ಷಕರನ್ನು ಕಡಿಮೆ ಮಾಡುವ ಅಧಿಕಾರವಿರುತ್ತದೆ.

    ಹಿಂದಿನ ನಿಯಮ ಹೇಗಿತ್ತು?: ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದಿದ್ದಲ್ಲಿ ತಂಡದ ನಾಯಕ ಮತ್ತು ಆಟಗಾರರಿಗೆ ಆರ್ಥಿಕ ದಂಡ ವಿಧಿಸಲಾಗುತ್ತಿತ್ತು. ಈ ನಿಯಮಗಳು ಮುಂದೆನೂ ಚಾಲ್ತಿಯಲ್ಲಿರುತ್ತದೆ. ಇದರ ಜೊತೆಗೆ ಹೊಸ ಶಿಕ್ಷೆಯೂ ಸೇರ್ಪಡೆಯಾಗುತ್ತದೆ.

    ಇತರೆ ಬದಲಾವಣೆ: ದ್ವಿಪಕ್ಷೀಯ ಸರಣಿಯಲ್ಲಿ ಐಪಿಎಲ್ ಮಾದರಿಯಲ್ಲಿ ಇನಿಂಗ್ಸ್ ನಡುವೆ 2:30 ನಿಮಿಷಗಳ ಟೈಮ್ ಔಟ್ ತೆಗೆದುಕೊಳ್ಳಲು ಅನುಮತಿಯಿದೆ. ಆದರೆ ಎರಡು ಕ್ರಿಕೆಟ್ ಮಂಡಳಿಗಳು ಸರಣಿ ಆರಂಭದಲ್ಲೇ ಒಪ್ಪಿಗೆ ಮಾಡಿಕೊಂಡರೆ ಮಾತ್ರ ಸಾಧ್ಯ. ಇದರಿಂದ ಪ್ರಸಾರಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಹೀರಾತು ಪ್ರಸಾರ ಮಾಡಬಹುದಾಗಿದೆ.

    ಬೌಲರ್‌ಗಳು ಸ್ಟಂಪ್ ಔಟ್‍ಗೆ ಮನವಿ ಸಲ್ಲಿಸುವ ವೇಳೆ ಚೆಂಡಿನ ಶೇ.50ರಷ್ಟು ಭಾಗ ಬೇಲ್ಸ್ ಗಳನ್ನು ಆವರಿಸಿಕೊಂಡಿರಬೇಕು. ಈ ಹಿಂದೆ ಬೇಲ್ಸ್ ಗೆ ಚೆಂಡು ತಾಕುವಂತಿದ್ದರೆ ಮಾತ್ರ ಸಾಕಿತ್ತು.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಹಿಂದಿನ ಆವೃತ್ತಿಯಲ್ಲಿ ಪ್ರತಿ ಸರಣಿಗೆ ಒಟ್ಟಾರೆ ಫಲಿತಾಂಶಗಳ ಲೆಕ್ಕಾಚಾರದಲ್ಲಿ ನೀಡಲಾಗುತ್ತಿತ್ತು. ಇದೀಗ ಪ್ರತಿ ಪಂದ್ಯಗಳ ಫಲಿತಾಂಶವನ್ನು ನೋಡಿಕೊಂಡು ಅಂಕ ನೀಡಲಾಗುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ 8,449, ಬೆಂಗಳೂರಿನಲ್ಲಿ 6,812 ಪಾಸಿಟವ್ – 4 ಸಾವು

    ಜನವರಿ 16ರಂದು ಜಮೈಕಾದ ಸಬಿನಾ ಪಾರ್ಕ್‍ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಟಿ-20 ಪಂದ್ಯದಿಂದಲೇ ಈ ಹೊಸ ನಿಯಮಗಳು ಅನ್ವಯಿಸಲಿದೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ

     

  • ಐಪಿಎಲ್ ಪಂದ್ಯಗಳ ವೇಳೆ ಕ್ಯಾಪ್ಟನ್‍ಗಳು 2 ಟೋಪಿ ಧರಿಸಲು ಕಾರಣವೇನು?

    ಐಪಿಎಲ್ ಪಂದ್ಯಗಳ ವೇಳೆ ಕ್ಯಾಪ್ಟನ್‍ಗಳು 2 ಟೋಪಿ ಧರಿಸಲು ಕಾರಣವೇನು?

    ಅಬುಧಾಬಿ: ಸಾಮಾನ್ಯವಾಗಿ ಕ್ರೆಕೆಟ್ ನಡೆಯುತ್ತಿರುವ ವೇಳೆ ಎಲ್ಲ ಆಟಗಾರರು ಒಂದೊಂದು ಟೋಪಿ ಧರಿಸಿರುತ್ತಾರೆ. ಆದರೆ ಈ ಬಾರಿ ಐಪಿಎಲ್‍ನಲ್ಲಿ ನಾಯಕರು ಎರಡು ಟೋಪಿಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ಕೊರೊನಾ ಕಾರಣದಿಂದ ಐಪಿಎಲ್-2020 ಆರು ತಿಂಗಳು ತಡವಾಗಿ ಯುಎಇಯಲ್ಲಿ ಆರಂಭವಾಗಿ ಅರ್ಧಕ್ಕಿಂತ ಹೆಚ್ಚಿನ ಪಯಾಣವನ್ನು ಯಶಸ್ವಿಯಾಗಿ ಮುಗಿಸಿದೆ. ಈಗಾಗಲೇ 43 ಪಂದ್ಯಗಳು ಐಪಿಎಲ್‍ನಲ್ಲಿ ಮುಗಿದಿವೆ. ಈ ನಡುವೆ ಪಂದ್ಯದ ವೇಳೆ ನಾಯಕರ ಎರಡು ಟೋಪಿ ಧರಿಸಲು ಕಾರಣವೇನು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು.

    ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೊರೊನಾ ನಡುವೆಯೂ ಬಿಸಿಸಿಐ ಹಲವಾರು ನಿಯಮಗಳನ್ನು ಮಾಡಿಕೊಂಡು ಐಪಿಎಲ್ ಅನ್ನು ಆರಂಭ ಮಾಡಿದೆ. ಅಂತೆಯೇ ಕೊರೊನಾ ನಡುವೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜನೆ ಮಾಡಿದ್ದ ಐಸಿಸಿ ಕೂಡ ಕೆಲ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಕೊರೊನಾ ಕಾರಣದಿಂದ ಬಾಲಿಗೆ ಎಂಜಲನ್ನು ಹಚ್ಚಬಾರದು ಎಂಬ ನಿಯಮವನ್ನು ಐಸಿಸಿ ಜಾರಿಗೆ ಮಾಡಿತ್ತು.

    ಈ ಮೊದಲು ಪಂದ್ಯದಲ್ಲಿ ಬೌಲರ್ ಬೌಲ್ ಮಾಡುವ ಮೊದಲು ಆತನ ಟೋಪಿ, ಗ್ಲಾಸ್ ಮತ್ತು ಸ್ವೆಟ್ಟರ್ ಇನ್ನಿತರ ವಸ್ತುಗಳನ್ನು ಅಂಪೈರ್ ಕೈಗೆ ಕೊಡುತ್ತಿದ್ದರು. ಈಗ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಐಸಿಸಿ ಹೊಸ ನಿಯಮ ಮಾಡಿದ್ದು, ಈ ನಿಯಮದಂತೆ ಯಾವ ಆಟಗಾರನೂ ಕೂಡ ಪಂದ್ಯದ ವೇಳೆ ತನ್ನ ಯಾವುದೇ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ವಸ್ತುಗಳ ಮೂಲಕ ಯಾವುದೇ ಅಂಪೈರ್ ಅನ್ನು ಸಂಪರ್ಕ ಮಾಡುವಂತಿಲ್ಲ.

    ಐಸಿಸಿ ಈ ನಿಯಮವನ್ನು ಬಿಸಿಸಿಐ ಐಪಿಎಲ್‍ನಲ್ಲೂ ಕೂಡ ಅವಳವಡಿಸಿದ್ದು, ಯಾವುದೇ ಬೌಲರ್ ಬೌಲ್ ಮಾಡುವಾಗ ತನ್ನ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ಅವರನ್ನು ಸಂಪರ್ಕ ಮಾಡುವಂತಿಲ್ಲ. ಹೀಗಾಗಿ ಯಾವುದೇ ತಂಡದ ಬೌಲರ್ ಬೌಲ್ ಮಾಡುವಾಗ ತನ್ನ ಯಾವುದೇ ವಸ್ತುಗಳನ್ನು ಅಂಪೈರಿಗೆ ನೀಡುವುದಿಲ್ಲ. ಆದ್ದರಿಂದ ಬೌಲರ್ ಬೌಲ್ ಮಾಡುವಾಗ ಆತನ ಟೋಪಿಯನ್ನು ನಾಯಕ ಧರಿಸುವ ಕಾರಣ ಕ್ಯಾಪ್ಟನ್‍ಗಳು ಎರಡು ಟೋಪಿ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ.

    ಕೊರೊನಾ ಕಾರಣದಿಂದ ಬಹಳ ಮುಂಜಾಗ್ರತೆವಹಿಸಿ ಐಪಿಎಲ್ ಅನ್ನು ನಡೆಸಲಾಗುತ್ತಿದೆ. ಆದರೂ ಐಪಿಎಲ್ ಆರಂಭಕ್ಕೂ ಮುನ್ನವೇ ಕೊರೊನಾ ಕರಿನೆರಳು ಟೂರ್ನಿಯ ಮೇಲೆ ಬಿದ್ದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ನಂತರ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಐಪಿಎಲ್ ಆರಂಭವಾಗಿ ತನ್ನ ಅರ್ಧ ಜರ್ನಿಯನ್ನು ಯಾವುದೇ ತೊಂದರೆಯಿಲ್ಲದೆ ಮುಗಿಸಿದೆ.