Tag: ibrahim

  • ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ, ಗುಜರಿಯಲ್ಲಿ ಸಾಮಾನು ತಂದು ಮಾಡ್ತೀವಿ: ಸಿಎಂ. ಇಬ್ರಾಹಿಂ

    ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ, ಗುಜರಿಯಲ್ಲಿ ಸಾಮಾನು ತಂದು ಮಾಡ್ತೀವಿ: ಸಿಎಂ. ಇಬ್ರಾಹಿಂ

    ಬೆಳಗಾವಿ: ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ. ಗುಜರಿಯಲ್ಲಿ ಸಾಮಾನು ತಂದು ಕಾರು ಮಾಡ್ತೀವಿ ಎಂದು ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನದೇ ಆದ ಪಕ್ಷ ಕಟ್ಟಲು ನನ್ನ ಹತ್ತಿರ ಶಕ್ತಿಯೂ ಇಲ್ಲ, ದುಡ್ಡೂ ಇಲ್ಲ. ಮಹಾತ್ಮ ಗಾಂಧಿಯನ್ನು ಚುನಾವಣೆಗೆ ನಿಲ್ಲಿಸಿದರೂ ಐದು ಕೋಟಿ ಬೇಕು. ಗಾಂಧಿ ಚುನಾವಣೆಗೆ ನಿಂತಿದ್ದಾರೆ ಅಂತ ಹೇಳೋಕೆ ಐದು ಕೋಟಿ ಬೇಕು. ಆ ವ್ಯವಸ್ಥೆ ಹಾಳು ಮಾಡಿ ಇಟ್ಟಿದ್ದಾರೆ, ಇರೋ ವ್ಯವಸ್ಥೆ ನೋಡಿಕೊಳ್ಳಬೇಕು ಎಂದರು.

    ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು ಬಸವತತ್ವ ಆಧಾರ ಮೇಲೆ ನಾವು ರಾಜಕಾರಣ ಶುರು ಮಾಡಿದವರು ನಾವು. ಅಹಿಂದ ಮಾಡಿದಾಗಲೂ ಬಸವತತ್ವವೇ, ನಾವು ಸಾಬ್ರು ಹೊಸ ಕಾರು ತಗೊಳ್ಳೋಕೆ ಅಲ್ಲ. ಗುಜರಿಯಲ್ಲಿ ಸಾಮಾನು ತಂದು ಕಾರು ಮಾಡ್ತೀವಿ. ಒಳ್ಳೆಯ ಗೇರ್‍ಬಾಕ್ಸ್, ಇಂಜಿನ್, ಬ್ರೇಕ್ ಸೇರಿಸಿ ಒಂದು ಗಾಡಿ ಮಾಡ್ತೀವಿ. ಹೀಗಾಗಿ ಎಲ್ಲಾ ಪಕ್ಷದಲ್ಲಿ ಉತ್ತಮರಿದ್ದು, ಉತ್ತಮರ ಸಂಘಕ್ಕೆ ನಮ್ಮ ಪ್ರಯತ್ನ ಎಂದು ಹೇಳಿದರು.

    ಎಲ್ಲಿ ಕಟ್ಟೆ ಇದೆ ಭದ್ರವಾದ ಬುನಾದಿ ಇದೆ ಅದನ್ನ ನೋಡಿಕೊಳ್ಳಬೇಕು. ಕಾಂಗ್ರೆಸ್ಸಿನವರು ಸರಿಪಡಿಸಿಕೊಳ್ಳಲು ಒಂದು ಅವಕಾಶ ಕೊಟ್ಟಿದ್ದೇವೆ. ಜೆಡಿಎಸ್ ಪಕ್ಷದವರ ಜೊತೆಯೂ ಮಾತನಾಡಿದ್ದೇನೆ. ದೇವೇಗೌಡರು ಹಾನೆಸ್ಟ್ ರಾಜಕಾರಣಿ ಅವರಿಗೂ ಗೌರವ ಕೊಡುತ್ತಾ ಬಂದಿದ್ದೀನಿ ಎಂದು ಹೇಳಿದರು.

    ಇದೇ ವೇಳೆ ಬಿಜೆಪಿ ಜೊತೆ ಮಾತುಕತೆ ಆಗಿದೆಯಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಎಲ್ಲಾದರೂ ಉಂಟೇ? ಬಿಜೆಪಿಯವರು ಕೇಶವ ಕೃಪಾ, ನಾವು ಬಸವ ಕೃಪಾ. ಬಿಜೆಪಿ ಮುಖಂಡರಷ್ಟೇ ಅಲ್ಲ ಎಲ್ಲರನ್ನೂ ಭೇಟಿಯಾಗುತ್ತಿರುವೆ. ನನಗೆ ಆರ್‍ಎಸ್‍ಎಸ್ ಅಲರ್ಜಿ, ಆ ಅಲರ್ಜಿಯಿಂದ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

  • ಎಚ್‌ಡಿಡಿ ಜೊತೆ ಇಬ್ರಾಹಿಂ ಮಾತುಕತೆ – ಜೆಡಿಎಸ್‌ ಸೇರ್ಪಡೆ ಸನ್ನಿಹಿತ?

    ಎಚ್‌ಡಿಡಿ ಜೊತೆ ಇಬ್ರಾಹಿಂ ಮಾತುಕತೆ – ಜೆಡಿಎಸ್‌ ಸೇರ್ಪಡೆ ಸನ್ನಿಹಿತ?

    ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಮತ್ತೆ ಜೆಡಿಎಸ್‌ಗೆ ಬರುತ್ತಾರೆ ಎಂಬ ಸುದ್ದಿ ಕಳೆದ ವಾರದಿಂದ ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈ ಸುದ್ದಿಗೆ ಪೂರಕ ಎಂಬಂತೆ ಇಂದು ಮಾಜಿ ಪ್ರಧಾನಿ ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಇಬ್ರಾಹಿಂ ಆಗಮಿಸಿ ಮಾತುಕತೆ ನಡೆಸಿದರು.

    ಪಕ್ಷ ಸೇರ್ಪಡೆ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡ ಜೊತೆ ಇಬ್ರಾಹಿಂ ಮಾತುಕತೆ ನಡೆಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಮಾತುಕತೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಉಪಸ್ಥಿತಿ ಇದ್ದರು.

    ಕಳೆದ ವಾರ ಎಚ್‌ಡಿಕೆ ಸಿಎಂ ಇಬ್ರಾಹಿಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಮಾತುಕತೆ ನಡೆದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಶನಿವಾರ ರಾತ್ರಿ ಬೆಂಗಳೂರಿನ ಬೆನ್ಸನ್ ಟೌನ್ ನಿವಾಸದಲ್ಲಿ ಸಿಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

    ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸಿ.ಎಂ ಇಬ್ರಾಹಿಂ ಇತ್ತೀಚೆಗೆ ಸಿದ್ದರಾಮಯ್ಯ ಕುರಿತಾಗಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತದೆ.

    ಕಾಂಗ್ರೆಸ್‌ ಪಕ್ಷದಲ್ಲಿ ಅಸಮಾಧಾನಗೊಂಡು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದರೂ ಇಬ್ರಾಹಿಂ ಅಧಿಕೃತವಾಗಿ ಯಾವುದೇ ವಿಚಾರವನ್ನು ತಿಳಿಸಿಲ್ಲ. ಆದರೆ ಅವರ ಇತ್ತೀಚಿನ ನಡೆ ಗಮನಿಸುವಾಗ ಪರೋಕ್ಷವಾಗಿ ಪಕ್ಷ ತೊರೆಯುವ ಸುಳಿವನ್ನು ನೀಡುತ್ತಿದ್ದಾರೆ.

    ಈ ಹಿಂದೆ ಜೆಡಿಎಸ್‌ನಲ್ಲಿದ್ದ ಸಿಎಂ ಇಬ್ರಾಹಿಂ  2008ರಲ್ಲಿ ದಳ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. ಕೇಂದ್ರ ಸಚಿವರೂ ಆಗಿದ್ದ ಅವರು ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ.

  • ನೀವು ಹುಟ್ಟಿಸಿದ ಮಕ್ಕಳು ಯಾಕೆ ನಿಮ್ಮನ್ನು ಒಪ್ಪಿಕೊಳ್ಳಲಿಲ್ಲ- ಸಿಎಂ ಇಬ್ರಾಹಿಂಗೆ ರೇಣುಕಾಚಾರ್ಯ ಟಾಂಗ್

    ನೀವು ಹುಟ್ಟಿಸಿದ ಮಕ್ಕಳು ಯಾಕೆ ನಿಮ್ಮನ್ನು ಒಪ್ಪಿಕೊಳ್ಳಲಿಲ್ಲ- ಸಿಎಂ ಇಬ್ರಾಹಿಂಗೆ ರೇಣುಕಾಚಾರ್ಯ ಟಾಂಗ್

    ಬೆಂಗಳೂರು: ಇಬ್ರಾಹಿಂ ಒಬ್ಬ ಜೋಕರ್, ನೀವು ಹುಟ್ಟಿಸಿದ ಮಕ್ಕಳು ನಿಮ್ಮನ್ನ ಏಕೆ ಒಪ್ಪಿಕೊಳ್ಳಲಿಲ್ಲ ಅವರನ್ನು ಏಕೆ ನೀವು ಸರಿಯಾಗಿ ನೋಡಿಕೊಳ್ಳಲಿಲ್ಲ, ಏಕೆ ರಕ್ಷಿಸಿಕೊಳ್ಳಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಇಬ್ರಾಹಿಂ ಮಾಡಬಾರದ ನೀಚ ಕೆಲಸ ಮಾಡಿದ್ದಾರೆ. ನೀನು ಮೊದಲು ಯಾವ ಪಕ್ಷದಲ್ಲಿ ಇದ್ದೆ, ಜನತಾದಳದಿಂದ ನೀನು ಕಾಂಗ್ರೆಸ್‍ಗೆ ಬರಲಿಲ್ಲವೇ? ನಿನಗೆ ಏನೆಂದು ಕರೆಯಬೇಕು. ನೀನು ಯಾರ ಮಕ್ಕಳಾದೆ, ನಿನ್ನ ಭಾಷೆಯಲ್ಲೇ ಉತ್ತರಿಸುತ್ತಿದ್ದೆ ಆದರೆ ನೀನು ಬಳಸಿದ ಭಾಷೆ ಬಳಸಿದರೆ ಜನ ಒಪ್ಪಲ್ಲ ಎಂದು ಇಬ್ರಾಹಿಂ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.

    ಜನತಾ ಪರಿವಾರದಲ್ಲಿದ್ದಾಗ ಮಾಡಬಾರದ್ದನ್ನು ಮಾಡಿ ಸರ್ವಜ್ಞ ವಚನ ಹೇಳಿದೆ. ನಿನ್ನ ಜನ್ಮಕ್ಕೆ ಯಾರು ಕಾರಣ? ಜನ್ಮ ಕೊಟ್ಟ ಪಕ್ಷ ಯಾವುದು? ಇಂದಿರಾ ಗಾಂಧಿ ಬಗ್ಗೆ ಮಾತಾಡಬಾರದನ್ನು ಮಾತನಾಡಿದೆ. ಕಡೆಗೆ ನೀನು ಅದೇ ಪಕ್ಷಕ್ಕೆ ಸೇರಿದೆ. ನಿಮ್ಮಂತ ಅಯೋಗ್ಯರಿಂದ ಬಿಜೆಪಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಮಾಜಿ ಸಚಿವ ಶ್ರೀನಿವಾಸ್ ಕೂಡ ಯಡಿಯೂರಪ್ಪನವರ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ಈ ರೀತಿ ಮೋದಿ ಹಾಗೂ ಯಡಿಯೂರಪ್ಪನವರ ವಿರುದ್ಧ ಏಕವಚನ ಬಳಸಿದರೆ ನಮಗೂ ಆ ರೀತಿ ಭಾಷೆ ಬಳಸಲು ಬರುತ್ತದೆ, ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ನಮ್ಮ ಸಂಸದರು, ಕೇಂದ್ರ ಸಚಿವರು ನಮ್ಮ ಪ್ರಧಾನಿಗೆ ನೆರೆ ಪರಿಹಾರದ ಮನವರಿಕೆ ಮಾಡಿಕೊಟ್ಟಿದ್ದು, ಹಾದಿ ಬೀದಿಯಲ್ಲಿ ಯಾರೂ ಚರ್ಚೆ ಮಾಡಬೇಡಿ, ಪಕ್ಷಕ್ಕೂ, ಸರ್ಕಾರಕ್ಕೂ ಮುಜುಗರ ತರಬೇಡಿ. ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಯಾವುದೇ ಅಸಮಾಧನವಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಣ ಲೂಟಿ ಮಾಡಿ ಖಜಾನೆ ಖಾಲಿ ಮಾಡಿದ್ದಕ್ಕೆ ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪನ್ಮೂಲ ಕ್ರೂಢೀಕರಣ ಮಾಡುತ್ತಿದ್ದಾರೆ. ನೆರೆ ಪರಿಹಾರಕ್ಕೆ ನಮಗೆ ತೊಂದರೆ ಆಗಿಲ್ಲ. ಖಜಾನೆ ಖಾಲಿಯಿಂದ ತಾತ್ಕಾಲಿಕವಾಗಿ ಸಮಸ್ಯೆಯಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹಣಕಾಸು ಸಚಿವರಾಗಿದ್ದಾಗ ಏನ್ ಮಾಡಿದರು? ಅವರ ಕಾಲದಲ್ಲಿ ಹಣಕಾಸು ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಲೆಕ್ಕ ಕೊಡಲಿ ಎಂದು ಹರಿಹಾಯ್ದರು.

    ನಿನ್ನ ಬಳಿ ಸಾವಿರ ಕೋಟಿ ಇರಲಿ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೀಗೆ ಮಾತನಾಡಬಾರದು. ಜನರ ಸಂಕಷ್ಟಗಳನ್ನು ಮೊದಲು ಕೇಳಬೇಕು ಎಂದು ಜನ ಅಧಿಕಾರ ಕೊಟ್ಟಿರುವುದು ಅವರ ಕಷ್ಟ ಆಲಿಸುವುದನ್ನು ಬಿಟ್ಟು ನನ್ನದೇ 100 ಎಕರೆ ಹೋಗಿದೆ ಅಂದರೆ ಹೇಗೆ ಎಂದು ಡಿಸಿಎಂ ಲಕ್ಷ್ಮಣ ಸವದಿಗೆ ತಿರುಗೇಟು ನೀಡಿದ್ದಾರೆ.

  • ಕೋಟ್ಯಾಂತರ ರೂ. ಸಿಗುತ್ತೆ ಅಂತ 20 ಮಂದಿಯ ಪಟಾಲಂ ದಾಳಿ ಮಾಡ್ತು- ಐಟಿ ದಾಳಿಗೆ ಇಬ್ರಾಹಿಂ ವ್ಯಂಗ್ಯ

    ಕೋಟ್ಯಾಂತರ ರೂ. ಸಿಗುತ್ತೆ ಅಂತ 20 ಮಂದಿಯ ಪಟಾಲಂ ದಾಳಿ ಮಾಡ್ತು- ಐಟಿ ದಾಳಿಗೆ ಇಬ್ರಾಹಿಂ ವ್ಯಂಗ್ಯ

    ಬಾಗಲಕೋಟೆ: ಕೋಟ್ಯಾಂತರ ರೂ. ಹಣ ಸಿಗುತ್ತೆ ಎಂದು ಪಟಾಲಂ ಇಪ್ಪತ್ತು ಜನ ಅಧಿಕಾರಿಗಳು ದಾಳಿ ಮಾಡಿದ್ರು. ಆದ್ರೆ ಬಳಿಕ ಅಧಿಕಾರಿಗಳು ನಿರಾಸೆಯಾಗಿದ್ದು, ಕ್ಷಮೆ ಕೇಳಿ ಹೊರಟು ಹೋದ್ರು ಅಂತ ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ಬದಮಿಯಲ್ಲಿ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಎಷ್ಟೇ ಏನೇಯಾದ್ರೂ ಸಿದ್ದರಾಮಯ್ಯ ಸರ್ಕಾರ ಬರುತ್ತೆ. ನಾವೆಲ್ಲ ಕಂಕಣಬದ್ಧರಾಗಿ ಕೆಲಸ ಮಾಡಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದಾಳಿ ವೇಳೆ ಅಧಿಕಾರಿಗಳು ಅಸಹಾಯಕರಾದ್ರು. ಏನ್ಮಾಡೋದು ನಮ್ಮ ಡ್ಯೂಟಿ ನಾವು ಮಾಡ್ತಿದ್ದೇವೆ. ಎಪ್ಪತ್ತು ವರ್ಷದಿಂದ ಚುನಾವಣೆ ನಡೀತಿವೆ. ಇಂತಹ ವಾತಾವರಣ ದೇಶದಲ್ಲಿ ಎಂದೂ ಬಂದಿದ್ದಿಲ್ಲವೆಂದು ಐಟಿ ಅಧಿಕಾರಿಗಳು ಅಸಹಾಯಕತೆ ತೋರಿಸಿದ್ರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!

    ನಮ್ಮನೇನು ವಿಚಾರಣೆ ಮಾಡಿಲ್ಲ. ನಮ್ಮ ಬಳಿ ಜುಬ್ಬಾ ಪೈಜಾಮ ಬಿಟ್ಟು ಏನಿಲ್ಲ. ಸಿದ್ದರಾಮಯ್ಯ ಕಂಪನಿಯಲ್ಲಿ ಹುಡುಕಿ ತೆಗೆದ್ರೂ ತಿನ್ನೋಕೆ ಏನೂ ಸಿಗಲ್ಲ. ದಾಳಿ ವೇಳೆ ಹಣ ಸಿಕ್ಕ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪಾರಸ್ಮಲ್ ಜೈನ್ ಖರ್ಚಿಗೆ ಒಂದಿಷ್ಟು ಹಣ ಇಟ್ಟುಕೊಂಡಿರೋದ್ರಲ್ಲಿ ತಪ್ಪೇನಿಲ್ಲ. ಅವರು ಶ್ರೀಮಂತರಿದ್ದಾರೆ ಎರಡು ಮೂರು ಲಕ್ಷ ಖರ್ಚಿಗೆ ಇಟ್ಟುಕೊಳ್ಳುದಲ್ಲಿ ತಪ್ಪೇನಿಲ್ಲ. ಅದಕ್ಕೆ ಲೆಕ್ಕ ಕೊಡ್ತಾರೆ ಅಂತ ಅವರು ತಿಳಿಸಿದ್ರು.

    ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರುಗಳು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಬದಾಮಿಯಲ್ಲಿ ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿತ್ತು. ಸೋಮವಾರ ರಾತ್ರಿ ಬದಾಮಿ ಹೊರವಲಯದಲ್ಲಿರುವ ಶಾಸಕ ಆನಂದ್‍ಸಿಂಗ್‍ಗೆ ಸೇರಿದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ರಾತ್ರಿ 11ರ ಸುಮಾರಿಗೆ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಲಗ್ಗೆಯಿಟ್ಟು, ದಾಖಲೆಗಳ ಪರಿಶೀಲನೆ ನಡೆಸಿತ್ತು.