Tag: IBPS

  • ಐಬಿಪಿಎಸ್ ಪರೀಕ್ಷೆಯಲ್ಲಿ 2014ರ ಮುಂಚೆ ಇದ್ದ ನಿಯಮ ಜಾರಿಗೆ ತನ್ನಿ: ಹೆಚ್‍ಡಿಕೆ ಆಗ್ರಹ

    ಐಬಿಪಿಎಸ್ ಪರೀಕ್ಷೆಯಲ್ಲಿ 2014ರ ಮುಂಚೆ ಇದ್ದ ನಿಯಮ ಜಾರಿಗೆ ತನ್ನಿ: ಹೆಚ್‍ಡಿಕೆ ಆಗ್ರಹ

    ಬೆಂಗಳೂರು: ಐಬಿಪಿಎಸ್ ಪರೀಕ್ಷೆಯಲ್ಲಿ 2014ರ ಮುಂಚೆ ಇದ್ದ ನಿಯಮ ಜಾರಿಗೆ ತರಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನ ಆಗ್ರಹಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಕೇಂದ್ರ ಸರ್ಕಾರ ಕೇವಲ ಕನ್ನಡದಲ್ಲಿ ಪರೀಕ್ಷೆ ನಡೆಸಿದರೆ ಸಾಲದು. ನಿಯಮಗಳನ್ನು ಬದಲಾವಣೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

    ಐಬಿಪಿಎಸ್ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್ (ಆರ್ ಆರ್ ಬಿ) ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡೂ ಈ ಬಾರಿ ಕನ್ನಡದಲ್ಲಿಯೂ ನಡೆಯಲಿವೆ. ಐಬಿಪಿಎಸ್‍ (Institute of Banking Personnel Selection) ನ ನಡೆಯನ್ನು ನಾನು ಸ್ವಾಗತಿಸುತ್ತೇನೆ.ಐಬಿಪಿಎಸ್ ಪರೀಕ್ಷೆ ಕನ್ನಡದಲ್ಲೇ ನಡೆಸುವಂತೆ ಮಾಡಿದ ಕನ್ನಡದ ಮನಸ್ಸುಗಳನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಆದರೆ ಐಬಿಪಿಎಸ್ ಪರೀಕ್ಷೆಗಳಲ್ಲಿನ ಕನ್ನಡಿಗರಾದ ನಮ್ಮ ಬೇಡಿಕೆ ಇಷ್ಟೇ ಅಲ್ಲ. ಐಬಿಪಿಎಸ್ ಆಯ್ಕೆ ಕಟ್ಟಲೆಗಳಲ್ಲಿ ನಮ್ಮದು ಇನ್ನೂ ಆಕ್ಷೇಪಗಳಿವೆ. 2014ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನೇ ಜಾರಿಗೆ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಕರ್ನಾಟಕದಲ್ಲಿ ಕನ್ನಡಿಗನಿಗೇ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ಇದು ಅತ್ಯಗತ್ಯ. 2014ಕ್ಕೆ ಮುನ್ನ ಕರ್ನಾಟಕದಲ್ಲಿನ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಗೊತ್ತಿರಬೇಕೆಂಬ ನಿಯಮವಿತ್ತು. ನಂತರ ಇದನ್ನು ತೆಗೆದು, ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಕನ್ನಡ ಕಲಿಯಬೇಕೆಂದು ಹೇಳಲಾಯಿತು. ಇದರಿಂದಾಗಿ ರಾಜ್ಯದ ಬ್ಯಾಂಕ್‍ಗಳಲ್ಲಿ ಕನ್ನಡ ತಿಳಿಯದವರೇ ತುಂಬಿದ್ದಾರೆ. ಇದು ಕನ್ನಡಿಗರಿಗೆ ಸಮಸ್ಯಾತ್ಮಕವಾಗಿದೆ. ಅಪಮಾನಗಳೂ ಆಗುತ್ತಿವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಕನ್ನಡಿಗರನ್ನು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತನಾಡುವಂತೆ ಒತ್ತಾಯಿಸುವುದು, ಕನ್ನಡಿಗರ ಬಗ್ಗೆ ನಿರ್ಲಕ್ಷ್ಯ ತೋರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. 2014ಕ್ಕೆ ಮೊದಲಿದ್ದ ಐಬಿಪಿಎಸ್ ಕಟ್ಟಲೆಗಳನ್ನು ಮರಳಿ ಜಾರಿಗೆ ತರುವುದೇ ಇದಕ್ಕೆ ಏಕೈಕ ಪರಿಹಾರ. ಅತ್ಯಗತ್ಯ ಸೇವೆಯಾಗಿರುವ ಬ್ಯಾಂಕಿಂಗ್ ವಲಯದಲ್ಲಿ ಕನ್ನಡಿಗರೇ ಇರಬೇಕು. ಈ ಬಾರಿ ಐಬಿಪಿಎಸ್ ನಡೆಸುತ್ತಿರುವ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಒಂದೂ ಹುದ್ದೆ ಇಲ್ಲ. ರಾಜ್ಯದ ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿಯೂ ಕೆವಿಜಿ, ಕೆವಿಜಿಬಿ ಬ್ಯಾಂಕ್‍ಗಳಿವೆ. ಆದರೂ ಒಂದೂ ಹುದ್ದೆ ಇಲ್ಲದಿರುವುದು ಆಶ್ಚರ್ಯ ತಂದಿದೆ. ಹುದ್ದೆಗಳನ್ನು ಮರುನಿಗದಿ ಮಾಡಿ ಹೊಸದಾಗಿ ಅರ್ಜಿ ಆಹ್ವಾನಿಸುವುದು ಅಗತ್ಯವಿದೆ. ಈ ಬಾರಿ ಕನ್ನಡದಲ್ಲಿ ಪರೀಕ್ಷೆ ಬರೆದು ಪಾಸಾಗುವ ಕನ್ನಡಿಗ ಅಭ್ಯರ್ಥಿಗಳು ಅನಿವಾರ್ಯವಾಗಿ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಬೇಕಾದ ಸನ್ನಿವೇಶ ಬರುತ್ತದೆ. ಕರ್ನಾಟಕದಲ್ಲಿಯೂ ಹುದ್ದೆ ನಿಗದಿ ಮಾಡಿ ಮರು ಅರ್ಜಿ ಆಹ್ವಾನಿಸುವುದು ಸೂಕ್ತ. ಈ ಸಂಬಂಧ ರಾಜ್ಯದ ಎಲ್ಲರೂ ದನಿ ಎತ್ತುವುದು ಅಗತ್ಯವಿದೆ. ಕನ್ನಡಿಗ ಅಭ್ಯರ್ಥಿಗಳಿಗೆ ನ್ಯಾಯ ಕಲ್ಪಿಸಬೇಕಿದೆ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

  • ಇನ್ನು ಮುಂದೆ ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆ – ನಿರ್ಮಲಾ ಸೀತಾರಾಮನ್ ಪ್ರಕಟಣೆ

    ಇನ್ನು ಮುಂದೆ ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆ – ನಿರ್ಮಲಾ ಸೀತಾರಾಮನ್ ಪ್ರಕಟಣೆ

    ನವದೆಹಲಿ: ಕೊನೆಗೂ ಕನ್ನಡಿಗರ ಅಂದೋಲನ ಯಶಸ್ವಿಯಾಗಿದ್ದು, ಇನ್ನು ಮುಂದೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಯಲ್ಲಿ ಐಪಿಬಿಎಸ್  ನಡೆಸುವ ಆರ್‌ಆರ್‌ಬಿ ಪರೀಕ್ಷೆಯನ್ನು ಬರೆಯಬಹುದು.

    ಕನ್ನಡ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಐಬಿಪಿಎಸ್ ನಡೆಸುವ ಆರ್‌ಆರ್‌ಬಿ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ನಡೆಸಬೇಕೆಂಬ ಆಗ್ರಹವನ್ನು ಸ್ವೀಕರಿಸಿದ ಕೇಂದ್ರ ಸರ್ಕಾರ ಈಗ ಈ ಭಾಷೆಯಲ್ಲಿ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದೆ.

    ಲೋಕಸಭಾ ಅಧಿಶನದಲ್ಲಿ ಗುರುವಾರ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ 45 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿದ್ದು, 90 ಸಾವಿರ ಜನರು ಉದ್ಯೋಗಿಗಳಿದ್ದಾರೆ. ಇವುಗಳಿಗೆ ಆರ್‌ಆರ್‌ಬಿ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಐಬಿಪಿಎಸ್ ಮೂಲಕ ನೇಮಕಾತಿ ನಡೆಯುತ್ತಿದೆ. ಹೀಗಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಬ್ಯಾಂಕ್‍ನಲ್ಲಿ ಉದ್ಯೋಗ ಪಡೆಯುವ ಅವಕಾಶ ನೀಡುವ ನಿಟ್ಟಿನಲ್ಲಿ 13 ಸ್ಥಳಿಯ ಭಾಷೆಯಲ್ಲೂ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದರು.

    ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲಿ ಹೆಚ್ಚು ಜ್ಞಾನ ಪಡೆದುಕೊಂಡಿರುತ್ತಾರೆ. ಹೀಗಾಗಿ ಪ್ರಾದೇಶಿಕ ಭಾಷೆಯಲ್ಲಿಯೇ  ಆರ್‌ಆರ್‌ಬಿ, ಐಬಿಪಿಎಸ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಆರ್‌ಆರ್‌ಬಿಯ ನೇರ ನೇಮಕಾತಿ ಸ್ಕೇಲ್ 1 ಹಾಗೂ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ ವಿದ್ಯಾರ್ಥಿಗಳು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ಜೊತೆಗೆ ಐಬಿಪಿಎಸ್ ನ  ಆರ್‌ಆರ್‌ಬಿ ಪರೀಕ್ಷೆಗಳ್ನು ಇಂಗ್ಲಿಷ್ ಹಾಗೂ ಹಿಂದಿ ಹೊರತಾಗಿಯೂ ಕನ್ನಡ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲೆಯಾಳಂ, ಮಣಿಪುರಿ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಯಲ್ಲಿ ಬರೆಯಬಹುದು ನಿರ್ಮಲಾ ಸೀತಾರಾಮನ್ ತಿಳಿಸಿದರು.

    ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಜೋರಾಗುತ್ತಿದ್ದಂತೆ ಲೋಕಸಭೆಯ ಶೂನ್ಯ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಈ ವಿಚಾರವನ್ನು ಪ್ರಸ್ತಾಪ ಮಾಡಿ ಕನ್ನಡ ಸೇರಿದಂತೆ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಪ್ರಸ್ತಾಪ ಮಾಡಿದ್ದರು.

    ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆ ಆಗುತ್ತಿಲ್ಲ. ಐಬಿಪಿಎಸ್ ನಡೆಸಿದ ಪರೀಕ್ಷೆಯಲ್ಲಿ ರಾಜ್ಯದ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಮೂರು ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು ಈ ಹಿಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದರು.

  • ಬ್ಯಾಂಕ್ ಉದ್ಯೋಗದಲ್ಲಿ ಕನ್ನಡಿಗರ ಮೀಸಲಾತಿಗೆ ಆಗ್ರಹ-ಕೈ ಕುಯ್ದುಕೊಂಡು ಪರೀಕ್ಷಾರ್ಥಿಗಳ ಅಕ್ರೋಶ

    ಬ್ಯಾಂಕ್ ಉದ್ಯೋಗದಲ್ಲಿ ಕನ್ನಡಿಗರ ಮೀಸಲಾತಿಗೆ ಆಗ್ರಹ-ಕೈ ಕುಯ್ದುಕೊಂಡು ಪರೀಕ್ಷಾರ್ಥಿಗಳ ಅಕ್ರೋಶ

    – ಪರೀಕ್ಷೆ ಬರೆಯದೇ ರಾಜ್ಯದ ವಿವಿಧೆಡೆ ಅಭ್ಯರ್ಥಿಗಳ ಪ್ರತಿಭಟನೆ

    ಬೆಂಗಳೂರು: ಕನ್ನಡ ಭಾಷಾ ಮಾಧ್ಯಮದಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.

    ಬೆಂಗಳೂರು, ಬಳ್ಳಾರಿ, ಕಲಬುರಗಿ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮತ್ತು ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶ ನೀಡ್ತಿರೋದನ್ನ ಖಂಡಿಸಿ ಹುಬ್ಬಳ್ಳಿಯಲ್ಲಿ ಸಲೀಂ ಎಂಬ ವಿದ್ಯಾರ್ಥಿ ತನ್ನ ಕೈಯನ್ನು ಕುಯ್ದುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

    ಧಾರವಾಡದಲ್ಲಿಯೂ ರೂರಲ್ ಬ್ಯಾಂಕ್ ಪರೀಕ್ಷೆಯಿಂದ ಹೊರಗುಳಿದು ಪ್ರತಿಭಟಿಸಿದ ಅಭ್ಯರ್ಥಿಗಳು, ಆಂಧ್ರ ಮೂಲದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಎಸ್.ಡಿ.ಎಂ ಎಂಜಿನಿಯರಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

    ನಮಗೆ ಕನ್ನಡ ಬಂದರೂ ಗ್ರಾಮೀಣ ಬ್ಯಾಂಕ್ ಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಕ್ಕಾಗಿ ಐಬಿಪಿಎಸ್ ನಡೆಸುವ ಪರೀಕ್ಷೆಯಲ್ಲಿ ಲಾಭಿ ಮಾಡಲಾಗುತ್ತಿದೆ ಎಂದು ಅಭ್ಯರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

    ಕಲಬುರಗಿಯಲ್ಲಿ ಪರೀಕ್ಷೆಗೆ ನೆರೆಯ ರಾಜ್ಯ ಆಂಧ್ರಪ್ರದೇಶದಿಂದಲೂ ಅಭ್ಯರ್ಥಿಗಳು ಬಂದಿದ್ದು ಅವರನ್ನ ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದು ಸ್ಥಳೀಯ ಪರೀಕ್ಷಾ ಅಭ್ಯರ್ಥಿಗಳು ಪಟ್ಟು ಹಿಡಿದಿದ್ದಾರೆ. ಶಹಬಾದ್ ರಸ್ತೆಯಲ್ಲಿರುವ ಶೆಟ್ಟಿ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಆದ್ರೆ ನೂರಾರು ಅಭ್ಯರ್ಥಿಗಳು ಕಾಲೇಜು ಆವರಣದಲ್ಲಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

    https://www.youtube.com/watch?v=33Oq19s8_gA