Tag: IAS officer

  • ಶಿಕ್ಷಕಿಯಾಗಿ ಶಾಲೆಯಲ್ಲಿ ನೆಲದ ಮೇಲೆ ಕೂತು ಐಎಎಸ್ ಅಧಿಕಾರಿಯಿಂದ ಪಾಠ

    ಶಿಕ್ಷಕಿಯಾಗಿ ಶಾಲೆಯಲ್ಲಿ ನೆಲದ ಮೇಲೆ ಕೂತು ಐಎಎಸ್ ಅಧಿಕಾರಿಯಿಂದ ಪಾಠ

    ಚಿಕ್ಕಬಳ್ಳಾಪುರ: ಐಎಎಸ್ ಅಧಿಕಾರಿಯಾದರೂ ಯಾವುದೇ ಅಹಂ ಇಲ್ಲದೆ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ನೆಲದ ಮೇಲೆ ಕೂತು ಪಾಠಪ್ರವಚನ ಮಾಡಿ ಮನಸೆಳೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನೂತನ ಸಿಇಓ ಫೌಸಿಯಾ ತಾರನಮ್ ಪಾಠ ಮಾಡಿದ ಮಹಿಳಾ ಐಎಎಸ್ ಅಧಿಕಾರಿ. ಇವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಳೆದ ವಾರವಷ್ಟೇ ಜಿಲ್ಲೆಗೆ ಆಗಮಿಸಿದ್ದಾರೆ. ಅಂದಹಾಗೆ ಜಿಲ್ಲೆಗೆ ಆಗಮಿಸಿರುವ ಸಿಇಓ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು, ಗ್ರಾಮಪಂಚಾಯ್ತಿ ಕಚೇರಿಗಳು ಸೇರಿ ಸರ್ಕಾರಿ ಆಸ್ಪತ್ರೆ, ಶಾಲೆಗಳನ್ನ ಸುತ್ತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ನಿಗಾವಹಿಸುವ ಕೆಲಸ ಮಾಡುತ್ತಿದ್ದಾರೆ.

    ಅಗಲಗುರ್ಕಿ ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಸಿಇಓ, ಮಕ್ಕಳೊಂದಿಗೆ ಮಕ್ಕಳಂತೆ ನೆಲದ ಮೇಲೆ ಕೂತು ಅವರ ಜೊತೆ ಬೆರೆತು ಪಾಠ ಪ್ರವಚನ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಇಓ ಫೌಸಿಯಾ ತಾರನಮ್, ಜಿಲ್ಲೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಲು ನಾನು ಬಯಸಿದ್ದೇನೆ. ಹೀಗಾಗಿ ನಾನು ಪೂರ್ವ ನಿಗದಿ ಮಾಡದೆ ಧಿಡೀರ್ ಭೇಟಿ ಕೊಟ್ಟಿದ್ದೇನೆ. ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳಿಗೆ ಮುಂದಿನ ದಿನಗಳಲ್ಲಿಯೂ ಭೇಟಿ ನೀಡಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.

  • ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ತಯಾರಿ – 5ನೇ ಪ್ರಯತ್ನದಲ್ಲಿ ಐಎಎಸ್ ಆಫೀಸರ್

    ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ತಯಾರಿ – 5ನೇ ಪ್ರಯತ್ನದಲ್ಲಿ ಐಎಎಸ್ ಆಫೀಸರ್

    ಚಂಡೀಗಢ: ನಿರಂತರ ಪ್ರಯತ್ನ, ಕಠಿಣ ಪರಿಶ್ರಮದಿಂದ ಜನರು ಏನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಿಎಸ್‍ಎಫ್ ಯೋಧರೊಬ್ಬರು ಮಾದರಿಯಾಗಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಜೊತೆ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿ 5ನೇ ಪ್ರಯತ್ನದಲ್ಲಿ ಬಿಎಸ್‍ಎಫ್ ಯೋಧ ಐಎಎಸ್ ಆಫೀಸರ್ ಆಗಿದ್ದಾರೆ.

    ಹರ್‌ಪ್ರೀತ್ ಸಿಂಗ್ ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಹರ್‌ಪ್ರೀತ್ ಅವರು ಗಡಿಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಬಳಿಕ ಬಿಡುವಿನ ಸಮಯದಲ್ಲಿ ಓದಿ 5ನೇ ಬಾರಿಗೆ ಐಎಎಸ್ ಪರೀಕ್ಷೆಯಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲದೆ ಹರ್‌ಪ್ರೀತ್ ಅವರು ದೇಶದ ಟಾಪ್ 20ಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

    2016ರಲ್ಲಿ ಯುಪಿಎಸ್‍ಸಿ ಮೂಲಕ ನಾನು ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಬಿಎಸ್‍ಎಫ್ ಸೇರಿದೆ. ಬಿಎಸ್‍ಎಫ್ ಸೇರಿದ ಬಳಿಕ ನನಗೆ ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಪೋಸ್ಟಿಂಗ್ ಆಯ್ತು. ಗಡಿಯಲ್ಲಿ ನನ್ನ ಡ್ಯೂಟಿ ನನಗೆ ಇಷ್ಟವಾಗುತಿತ್ತು. ನಾನು ಆ ಕಷ್ಟದ ಕೆಲಸವನ್ನು ಇಷ್ಟಪಡಲು ಶುರು ಮಾಡಿದೆ. ಆದರೆ ನಾನು ಐಎಎಸ್ ಆಫೀಸರ್ ಆಗಬೇಕು ಎಂದು ಕನಸು ಕಂಡಿದ್ದೆ. ಹಾಗಾಗಿ ಗಡಿಯಲ್ಲಿ ನನ್ನ ಕೆಲಸ ಮುಗಿದ ನಂತರ ಬಿಡುವಿನ ಸಮಯದಲ್ಲಿ ನನ್ನ ಗುರಿಯತ್ತ ಗಮನ ಹರಿಸಿದೆ ಎಂದು ಹರ್‌ಪ್ರೀತ್ ಹೇಳಿದ್ದಾರೆ.

    ನನ್ನ ಗುರಿ ನನ್ನ ತಲೆಯಲ್ಲಿ ಸ್ಪಷ್ಟವಾಗಿತ್ತು. ಹಾಗಾಗಿ ನನ್ನ ಗಮನ ಬೇರೆ ಕಡೆ ಹೋಗಲ್ಲ. ಕರ್ತವ್ಯ ಹೊರತಾಗಿ ನಾನು ನನ್ನ ಸಂಪೂರ್ಣ ಸಮಯವನ್ನು ನೋಟ್ಸ್ ಓದುತ್ತಿದ್ದೆ. ಹಾಗಾಗಿ ನಾನು 5ನೇ ಬಾರಿ ಯಶಸ್ಸು ಕಂಡಿದ್ದೇನೆ. ಪಬ್ಲಿಕ್ ಆಡ್ಮಿನಿಸ್ಟ್ರೇಷನ್ ನನ್ನ ಐಚ್ಚಿಕ ವಿಷಯವಾಗಿತ್ತು. ಬಲವಾದ ನಿರ್ಧಾರ ಹಾಗೂ ನನ್ನ ಕಠಿಣ ಪರಿಶ್ರಮ ಈ ಎರಡು ವಿಷಯಗಳನ್ನು ನನ್ನ ಯಶಸ್ಸಿನ ಮೂಲ ಮಂತ್ರ ಎಂದು ನಾನು ಪರಿಗಣಿಸುತ್ತೇನೆ. ನನ್ನ ಪ್ರಕಾರ ನಾವು ನಮ್ಮ ಕನಸ್ಸನ್ನು ಹಿಂದೆ ಬಿಡಬಾರದು. ಎಷ್ಟೇ ಕಷ್ಟ ಆದರೂ ನಾವು ಪ್ರಯತ್ನ ಪಡಬೇಕು ಎಂದರು.

    ನಾನು ಮೂಲತಃ ಪಂಜಾಬ್‍ನವನಾಗಿದ್ದು, ಐಟಿಎಸ್ (ಇಂಡಿಯನ್ ಟ್ರೆಂಡ್ ಸರ್ವೀಸ್) ನಲ್ಲಿ ತೇರ್ಗಡೆಯಾದೆ. ಬಳಿಕ 2007ರಲ್ಲಿ ಸಿವಿಲ್ ಸೇವಾ ಪರೀಕ್ಷೆ ಬರೆದೆ. ಆಗ ನನಗೆ 454 ರ್‍ಯಾಂಕ್ ದೊರೆತಿದ್ದು, ನನ್ನನ್ನು ಭಾರತೀಯ ಟ್ರೆಂಡ್ ಸರ್ವಿಸ್‍ಗೆ ಆಯ್ಕೆ ಮಾಡಲಾಯಿತು. ಆ ಸಂದರ್ಭದಲ್ಲಿ ನಾನು ಬಿಎಸ್‍ಎಫ್ ತೊರೆದು ಐಟಿಎಸ್ ಸೇರಿಕೊಂಡೆ. ಮತ್ತೆ 2018ರಲ್ಲಿ ನಾನು 5ನೇ ಬಾರಿ ಸಿವಿಲ್ ಪರೀಕ್ಷೆ ಬರೆದೆ. ಈ ಬಾರಿ ನನಗೆ 19ನೇ ರ್‍ಯಾಂಕ್ ಬಂತು ಹಾಗೂ ನನ್ನ ಕನಸು ನನಸಾಯಿತು ಎಂದು ಹರ್‌ಪ್ರೀತ್ ಸಂತಸ ವ್ಯಕ್ತಪಡಿಸಿದ್ದಾರೆ.

    ಹರ್‌ಪ್ರೀತ್ ಅವರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಆಕಾಡೆಮಿ ಆಫ್ ಆಡ್ಮಿನಿಸ್ಟ್ರೇಸನ್‍ನಲ್ಲಿ ಟ್ರೈನಿಂಗ್ ನಡೆಯಲಿದೆ. ಹರ್‌ಪ್ರೀತ್ ಗ್ರೀನ್ ಗ್ರೀವ್ ಪಬ್ಲಿಕ್ ಶಾಲೆಯಲ್ಲಿ ಓದಿದ ಬಳಿಕ ಎಲೆಕ್ಟ್ರಾನಿಕ್ಸ್ ನಲ್ಲಿ ಬಿಇ ಪದವಿ ಪಡೆದಿದ್ದಾರೆ. ಹರ್‌ಪ್ರೀತ್ ಅವರ ತಂದೆ ಉದ್ಯಮಿಯಾಗಿದ್ದು ತಾಯಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ಐಎಎಸ್ ಅಧಿಕಾರಿಯಿಂದ 10 ಕೋಟಿ ರೂ. ಬೇಡಿಕೆ: ಮನ್ಸೂರ್ ಬಾಂಬ್

    ಐಎಎಸ್ ಅಧಿಕಾರಿಯಿಂದ 10 ಕೋಟಿ ರೂ. ಬೇಡಿಕೆ: ಮನ್ಸೂರ್ ಬಾಂಬ್

    – ಸಚಿವ ಜಮೀರ್ ಅಹ್ಮದ್‍ಗೆ ಧನ್ಯವಾದ ತಿಳಿಸಿದ ಆರೋಪಿ

    ಬೆಂಗಳೂರು: ಐಎಎಸ್ ಅಧಿಕಾರಿಯೊಬ್ಬರು  10 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಸ್ಫೋಟಕ ಹೇಳಿಕೆ ನೀಡಿದ್ದಾನೆ.

    ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಯೊಂದು ಐಎಂಎನಲ್ಲಿ ಹೂಡಿಕೆ ಮಾಡಲು ಮುಂದಾಗಿತ್ತು. ಈ ಸಂಬಂಧ ಪರವಾನಿಗೆ ನೀಡಲು ಐಎಎಸ್ ಅಧಿಕಾರಿಯೊಬ್ಬರು 10 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಹಣ ಕೊಡುವುದು ವಿಳಂಬವಾಗಿದ್ದಕ್ಕೆ ಪರವಾನಿಗೆ ಪತ್ರವನ್ನು ನೀಡಲಿಲ್ಲ ಎಂದು ತಿಳಿಸಿದ್ದಾನೆ.

    ನಾನು ಒಬ್ಬರನ್ನು ಭೇಟಿಯಾಗಬೇಕಿದೆ. ಟಿಕೆಟ್ ಬುಕ್ ಮಾಡಿಕೊಟ್ಟರೆ ಹೋಗಿ ಆ ವ್ಯಕ್ತಿಯನ್ನು ಭೇಟಿಯಾಗಿ ಭಾರತಕ್ಕೆ ಮರಳುತ್ತೇನೆ. ಇದಕ್ಕೆ ನೀವು ಸಹಾಯ ಮಾಡಬೇಕಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.

    ಸಚಿವ ಜಮೀರ್ ಅಹ್ಮದ್‍ಖಾನ್ ಅವರು ಹೇಳಿರುವ ಒಂದು ವಿಡಿಯೋವನ್ನು ನಾನು ನೋಡಿದ್ದೇನೆ. ನೀವು ವಾಪಸ್ ಬನ್ನಿ. ನಿಮ್ಮ ಬೆಂಬಲಕ್ಕೆ ನಾನು ಇರುವೆ ಎಂದು ಭರವಸೆ ನೀಡಿದ್ದಾರೆ. ಅವರನ್ನು ಹೊರತುಪಡಿಸಿ ನನ್ನ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ಮುಜ್ಜಾಯಿದೀನ್ ಕೂಡ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಹೇಳುವ ಮೂಲಕ ಮನ್ಸೂರ್ ಖಾನ್ ಸಚಿವರಿಗೆ ಧನ್ಯವಾದ ತಿಳಿಸಿದ್ದಾನೆ.

    ಹೂಡಿಕೆದಾರರ ಹಣ ಯಾರ ಬಳಿಯಿದೆ ಎನ್ನುವ ಪಟ್ಟಿ ನನ್ನ ಬಳಿಯಿದೆ. ಅವರ ಜೊತೆ ಬೇಕಾದರೆ ನೀವು ಹೋರಾಡಿ ಹಣ ಪಡೆದುಕೊಳ್ಳಿ. ನಾನು ಭಾರತಕ್ಕೆ ಬಂದರೆ ನನ್ನನ್ನು ಮುಗಿಸುವುದಕ್ಕೆ ಎಲ್ಲಾ ಪ್ಲಾನ್ ನಡೆದಿದೆ. ನನ್ನ ಮುಗಿಸುವುದಕ್ಕೂ ಮುನ್ನ ಎಲ್ಲಾ ಸಾಕ್ಷಾಧಾರಗಳನ್ನು ಅಧಿಕಾರಿಗಳ ಮುಂದಿಡುವೆ. ಹಣ ವಸೂಲಿಗೆ ನೀವೂ ನೀವಾಗಿಯೇ ಹೋರಾಡುತ್ತೀರೋ? ಅಧಿಕಾರಿಗಳಿಗಳ ಮೂಲಕ ಹೋರಾಡುತ್ತೀರೋ ನನಗೆ ಗೊತ್ತಿಲ್ಲ. ಅಲೋಕ್ ಕುಮಾರ್ ಸರ್ ನನಗೆ 2-3 ದಿನ ಕಾಲಾವಕಾಶ ಕೊಡಿ. ನಾನು ಮಾನಸಿಕವಾಗಿ ತಯಾರಾಗಿ ಬರುವೆ. ನೀವು ಯಾರ ಮುಂದೆ ಹೇಳುತ್ತೀರೋ ಅವರನ್ನು ಭೇಟಿಯಾಗುವೆ. ವಿಮಾನ ನಿಲ್ದಾಣದಲ್ಲಿ ಟಿಕೆಟ್ ತಗೆದುಕೊಳ್ಳಬೇಕೋ, ಬೇಡವೋ ಎನ್ನುವುದನ್ನು ನೀವೇ ಹೇಳಿ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ

    ಮನ್ಸೂರ್ ಖಾನ್‍ಗೆ ಬ್ಯಾಂಕಿಂದ ಲೋನ್ ಕೊಡಿಸಲು ಯತ್ನ – ಎನ್‍ಒಸಿ ಕೊಡಿಸಲು ಸಚಿವರ ದುಸ್ಸಾಹಸ

    – ಐಎಎಸ್ ಅಧಿಕಾರಿ ದಿಟ್ಟತನಕ್ಕೆ ಉಳೀತು ಬ್ಯಾಂಕ್ ಕಾಸು

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಸಚಿವರನ್ನೇ ಮರಳು ಮಾಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯಲು ಮುಂದಾಗಿದ್ದನು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮನ್ಸೂರ್ ಖಾನ್ ತನ್ನ ಕಂಪನಿಯನ್ನು ಅಭಿವೃದ್ಧಿಗೊಳಿಸಲು 600 ಕೋಟಿ ಸಾಲ ಪಡೆಯುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದನು. 600 ಕೋಟಿ ಸಾಲಕ್ಕಾಗಿ ಮನ್ಸೂರ್ ಬ್ಯಾಂಕ್‍ಗಳ ಮೊರೆ ಹೋಗಿದ್ದನು. ಆದರೆ ಬ್ಯಾಂಕ್ ಗಳು ಮಾತ್ರ ನಿನ್ನ ಕಂಪನಿಯ ಮೇಲೆ ನಮಗೆ ನಂಬಿಕೆ ಇಲ್ಲ. ನಿನ್ನದು ದೋಖಾ ಕಂಪನಿ ಎಂದು ಈಗಾಗಲೇ ಆರ್ ಬಿಐ ನೋಟಿಸ್ ನೀಡಿದೆ. ನಿನ್ನ ಕಂಪನಿಗೆ ಸಾಲ ಕೊಡುವುದಕ್ಕೆ ಆಗುವುದಿಲ್ಲ. ಸಾಲ ಕೊಡಬೇಕೆಂದರೆ ರಾಜ್ಯ ಸರ್ಕಾರದಿಂದ ಎನ್‍ಓಸಿ ತರಬೇಕು ಎಂದು ಹೇಳಿದ್ದರು.

    ತಕ್ಷಣ ಮನ್ಸೂರ್ ಮುಸ್ಲಿಂ ಸಮುದಾಯದ ಸಚಿವರೊಬ್ಬರ ಮುಖಾಂತರ ಫೀಲ್ಡ್ ಗೆ ಇಳಿದಿದ್ದನು. ಹೇಗಾದರೂ ಮಾಡಿ 600 ಕೋಟಿ ಪಡೆಯಲೇಬೇಕು ಎನ್ನುವುದು ಆತನ ಹೆಬ್ಬಯಕೆ ಆಗಿತ್ತು. ಮುಸ್ಲಿಂ ಸಚಿವರು ಮನ್ಸೂರ್ ಪರ ಲಾಭಿ ನಡೆಸಿ ಹಿರಿಯ ಸಚಿವರಿಗೆ ದುಂಬಾಲು ಬಿದ್ದಿದ್ದರು. ಪ್ರತಿ ಬಾರಿಯೂ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭರವಸೆಯಲ್ಲಿದ್ದ ಸಚಿವರೇ ಮನ್ಸೂರ್ ಗೆ ಮರುಳಾಗಿದ್ದರು. ಮನ್ಸೂರ್ ಕಂಪನಿಗೆ ಸಾಲ ಕೊಡಿಸೋಣ, ಸಾಲ ಕೊಡೋದಕ್ಕೆ ಎನ್‍ಓಸಿ(ನಿರಾಕ್ಷೇಪಣಾ ಪತ್ರ) ಕೊಡಿ ಎಂದು ಐಎಎಸ್ ಅಧಿಕಾರಿಗೆ ಸೂಚನೆ ನೀಡಿದ್ದರು.


    ಸಚಿವರು ಸೂಚನೆಯನ್ನೇ ಧಿಕ್ಕರಿಸಿದ ಅಧಿಕಾರಿ, ಇಲ್ಲ ಸಾರ್ ಎನ್‍ಓಸಿ ಕೊಡುವುದಕ್ಕೆ ಆಗೋದಿಲ್ಲ. ಮನ್ಸೂರ್ ಮೇಲೆ ಸಾಕಷ್ಟು ಆರೋಪ ಇದೆ. ಈಗ ಎನ್‍ಓಸಿ ಕೊಟ್ಟರೆ ಮುಂದೆ ನಾನು ಜೈಲಿಗೆ ಹೋಗುತ್ತೇನೆ. ಏನೇ ಆದರೂ ನಾನು ಎನ್‍ಓಸಿ ನೀಡೋದಿಲ್ಲ ಎಂದು ಖಡಕ್ ಅಧಿಕಾರಿ ಧಿಕ್ಕರಿಸಿ ನಿಂತಿದ್ದರು. ಅಧಿಕಾರಿಯ ಧಿಕ್ಕಾರದಿಂದ ಬ್ಯಾಂಕ್ ಗಳ 600 ಕೋಟಿ ಹಣ ಉಳಿಯಿತು. ಇಲ್ಲದೇ ಇದ್ದಿದ್ರೆ ಈತ ಕೂಡ ಮಲ್ಯನ ರೀತಿ ಬ್ಯಾಂಕ್‍ಗೆ ದೋಖಾ ಮಾಡಿ ಎಸ್ಕೇಪ್ ಆಗುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

  • ಮಗನ ಮದುವೆಗೆ ಕೇವಲ 18 ಸಾವಿರ ರೂ. ವೆಚ್ಚ – ಐಎಎಸ್ ಅಧಿಕಾರಿ ನಿರ್ಧಾರ

    ಮಗನ ಮದುವೆಗೆ ಕೇವಲ 18 ಸಾವಿರ ರೂ. ವೆಚ್ಚ – ಐಎಎಸ್ ಅಧಿಕಾರಿ ನಿರ್ಧಾರ

    -ಒರ್ವ ಅತಿಥಿಗೆ 10 ರೂ. ಖರ್ಚು

    ವಿಶಾಖಪಟ್ಟಣಂ: ವಿವಾಹವನ್ನು ಅದ್ಧೂರಿಯಾಗಿ ಮಾಡಲು ಅನೇಕರು ಲಕ್ಷಾಂತರ ರೂ. ವೆಚ್ಚ ಮಾಡುತ್ತಾರೆ. ಆದರೆ ಐಎಎಸ್ ಅಧಿಕಾರಿಯೊಬ್ಬರು ಕೇವಲ 18 ಸಾವಿರ ರೂ. ವೆಚ್ಚದಲ್ಲಿ ಮಗನ ಮದುವೆಯನ್ನು ಮಾಡಲು ನಿರ್ಧರಿಸಿದ್ದಾರೆ.

    ಆಂಧ್ರಪ್ರದೇಶದ ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ವಿಎಂಆರ್ ಡಿಎ) ಆಯುಕ್ತ ಪಿ. ಬಸಂತ್ ಕುಮಾರ್ ಅವರು ಇಂತಹ ಸರಳ ವಿವಾಹಕ್ಕೆ ಮುಂದಾಗಿದ್ದಾರೆ. ಈ ವಿವಾಹ ವಿಶಾಖಪಟ್ಟಣದಲ್ಲಿ ಫೆಬ್ರವರಿ 10 ರಂದು ನಡೆಯಲಿದೆ.

    ಪಿ. ಬಸಂತ್ ಕುಮಾರ್ ಅವರು 2017ರ ಸೆಪ್ಟೆಂಬರ್ ನಲ್ಲಿ ನಡೆದ ಪುತ್ರಿ ವಿವಾಹಕ್ಕೂ ಕೇವಲ 16,100 ಖರ್ಚು ಮಾಡಿದ್ದರು. ಅಷ್ಟೇ ಅಲ್ಲದೆ 1988ರಲ್ಲಿ ತಮ್ಮ ಮದುವೆಗೂ ಬಸಂತ್ ಅವರು 2,345 ರೂ. ವೆಚ್ಚ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ಈ ರೀತಿಯ ಸರಳ ಮದುವೆ ಮಾಡುವ ಮೂಲಕ ಬಸಂತ್ ಅವರು ಅನೇಕರಿಗೆ ಮಾದರಿಯಾಗಿದ್ದಾರೆ.

    1988ರಲ್ಲಿ ನಾನು ಸರಳ ವಿವಾಹವಾಗುತ್ತೇನೆ ಎಂದು ಪತ್ನಿಯ ಪೋಷಕರಿಗೆ ತಿಳಿಸಿದ್ದೆ. ಅವರು ಕೆಲವು ವಾರಗಳ ಕಾಲ ಸಮಯ ತೆಗೆದುಕೊಂಡು ಯೋಚಿಸಿ ಒಪ್ಪಿಗೆ ಸೂಚಿಸಿದರು. ಹೀಗಾಗಿ ನಾನು ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದೆ. ಆಗ ಕೇವಲ 25 ಅತಿಥಿಗಳು ಭಾಗವಹಿಸಿದ್ದರಿಂದ 2,345 ರೂ. ಖರ್ಚು ಮಾಡಿದ್ದೇವು ಎಂದು ಪಿ.ಬಸಂತ್ ಕುಮಾರ್ ತಮ್ಮ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ.

    ವಿಶಾಖಪಟ್ಟಣನಲ್ಲಿ ಫೆಬ್ರವರಿ 10ರಂದು ನಡೆಯುತ್ತಿರುವ ಪುತ್ರನ ಮದುವೆಯನ್ನು ಸಹೋದ್ಯೋಗಿಗಳು ಹಾಗೂ ರಾಧಾ ಸೋಮಿ ಸತ್ಯಂಗ ಸಭಾ ಸದಸ್ಯರ ಸಹಾಯದಿಂದ ಮಾಡುತ್ತಿರುವೆ. ಒಂದು ವೇಳೆ ಅವರ ಸಹಾಯವಿಲ್ಲದಿದ್ದರೆ 18 ಸಾವಿರ ರೂ. ವೆಚ್ಚದಲ್ಲಿ ವಿವಾಹ ನೆರವೇರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

    ಮದುವೆಗೆ ಬೇಕಾಗುವ ತರಕಾರಿಯನ್ನು ವಿಶಾಖಪಟ್ಟಣದ ದಯಾಳ್‍ಬಾಗ್ ನಗರದ ತೋಟದಿಂದ ತರಲಾಗುತ್ತದೆ. ಮದುವೆ ನಿಮಿತ್ತ ಫೆಬ್ರವರಿ 8ರಂದು ಸತ್ಸಂಗ ನೆಡೆಸುತ್ತೇವೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಕೇವಲ 10 ರೂ. ವೆಚ್ಚ ಮಾಡಲಾಗುತ್ತದೆ. ಮದುವೆಯ ದಿನ 200 ಜನ ಸಂಬಂಧಿಕರು ಸೇರಲಿದ್ದು, ತಲಾ 7 ರೂ. ವೆಚ್ಚದಲ್ಲಿ ಅವರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಆಂಧ್ರಪ್ರದೇಶದ ಗವರ್ನರ್ ಇಎಸ್‍ಎಲ್ ನರಸಿಂಹನ್ ಅವರು ವಿವಾಹಕ್ಕೆ ಆಗಮಿಸಲಿದ್ದಾರೆ ಎಂದು ಆಯುಕ್ತ ಪಿ. ಬಸಂತ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ಬೆಂಗಳೂರು: ನಟ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಇದು ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಜೀವನದ ಕಥೆ ಆಧಾರಿತ ಸಿನಿಮಾವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟ ಸತೀಶ್ ನೀನಾಸಂ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಸತೀಶ್ ನೀನಾಸಂ, ‘ಚಂಬಲ್’ ಸಿನಿಮಾ ಒಬ್ಬ ಐಎಎಸ್ ದಕ್ಷ ಅಧಿಕಾರಿ ಕಥೆಯಾಗಿದೆ. ನಾನು ಈ ಸಿನಿಮಾದಲ್ಲಿ ಸುಭಾಶ್ ಎಂಬ ಪಾತ್ರ ಮಾಡುತ್ತಿದ್ದೇನೆ. ನಾನು ಮಾಡಿದ ಸಿನಿಮಾದಲ್ಲಿ ನನಗೆ ಶಿಕ್ಷಣ ಇರುತ್ತಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಒಳ್ಳೆಯ ಶಿಕ್ಷಣ ಇದ್ದು, ಐಎಎಸ್ ಅಧಿಕಾರಿಯಾಗಿದ್ದೇನೆ. ನಾನು ಎಸ್‍ಎಸ್‍ಎಲ್‍ಸಿ ಮಾಡಿ, ಡಿಪ್ಲೋಮಾ ಮಾಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ನಾನು ಓದಿರುವುದಕ್ಕೂ, ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ರು.

    ಚಿತ್ರದ ಕಥೆಗಾಗಿ ಕೆಲವು ಅಧಿಕಾರಿಗಳಿಂದ ಸ್ಪೂರ್ತಿ ಪಡೆದುಕೊಂಡಿದ್ದೇವೆ. ಆದರೆ ಯಾರು ಏನು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಒಬ್ಬ ಐಎಎಸ್ ಅಧಿಕಾರಿಯ ಕಥೆಯಾಗಿದೆ. ನಮ್ಮಲ್ಲಿ ಒಳ್ಳೆಯ ಅಧಿಕಾರಿಗಳಿದ್ದು, ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಸಿನಿಮಾ ಮಾಡಿದ್ದೇವೆ. ಲೂಸಿಯಾ ನಂತರ ಇದು ಒಂದೊಂದು ಅದ್ಭುತವಾದ ಸಿನಿಮಾವಾಗಿದೆ. ನಾವು ಕಾಣುವ ಸತ್ಯಕ್ಕಿಂತ, ನೀವು ಕಾಣುವ ಸತ್ಯವೇ ಮುಖ್ಯವಾಗಿದೆ. ಟ್ರೇಲರ್ ನೋಡಿ, ಬಳಿಕ ಸಿನಿಮಾ ನೋಡಿ ಎಂದು ಸತೀಶ್ ಹೇಳಿದ್ದಾರೆ.

    ಚಂಬಲ್ ಅನ್ನೋ ಹೆಸರಿನ ಸುತ್ತಾ ನಾನಾ ನಿಗೂಢಗಳು ಅಡಗಿಕೊಂಡಿವೆ. ಒಂದಷ್ಟು ಕ್ರೈಮುಗಳ ಸರಣಿಯೂ ಕಣ್ಮುಂದೆ ಸುಳಿದಾಡುತ್ತೆ. ಅದೇ ಹೆಸರನ್ನು ಶೀರ್ಷಿಕೆಯಾಗಿಸಿಕೊಂಡಿರೋ ಚಂಬಲ್ ಚಿತ್ರದ ಬಗ್ಗೆ ನಾನಾ ಕುತೂಹಲಗಳಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರದ ಟೃಲರ್ ಬಿಡುಗಡೆ ಮಾಡಿದ್ದಾರೆ.

    ಸತೀಶ್ ನೀನಾಸಂ ಈ ಚಿತ್ರದಲ್ಲಿ ಭ್ರಷ್ಟಾಚಾರಿಗಳನ್ನ ಕಂಡ್ರೆ ಬೆಂಕಿಯುಂಡೆಯಂತಾಡೋ ಖಡಕ್ ಅಧಿಕಾರಿಯಾಗಿ ನಟಿಸಿರೋದರ ಸುಳಿವೂ ಕೂಡಾ ಸಿಕ್ಕಿದೆ. ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನ ನಿಗಿ ನಿಗಿಸೋ ಕ್ಯೂರಿಯಾಸಿಟಿಯ ಕೆಂಡದ ಮೇಲೆ ತಂದು ಕೂರಿಸುವಂತೆ ಇಡೀ ಚಿತ್ರ ಮೂಡಿ ಬಂದಿದೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿಯೊದಗಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಗಳನ್ನು ಅಂಗನವಾಡಿಗೆ ಸೇರಿಸಿದ್ರು ಐಎಎಸ್ ಅಧಿಕಾರಿ- ಕನ್ನಡತಿಯ ನಿರ್ಧಾರಕ್ಕೆ ಜನರ ಮೆಚ್ಚುಗೆ

    ಮಗಳನ್ನು ಅಂಗನವಾಡಿಗೆ ಸೇರಿಸಿದ್ರು ಐಎಎಸ್ ಅಧಿಕಾರಿ- ಕನ್ನಡತಿಯ ನಿರ್ಧಾರಕ್ಕೆ ಜನರ ಮೆಚ್ಚುಗೆ

    ಚೆನ್ನೈ: ಕರ್ನಾಟಕ ಮೂಲದವರಾದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರು ತಮ್ಮ ಮಗಳನ್ನು ದುಬಾರಿ ಖಾಸಗಿ ಶಾಲೆಗೆ ಸೇರಿಸದೇ ಅಂಗನವಾಡಿಗೆ ಸೇರಿಸಿ ಸರಳತೆ ಮೆರೆದು ಜನರ ಮೆಚ್ಚುಗೆ ಪಡೆದಿದ್ದಾರೆ.

    ಈಗಿನ ಕಾಲದಲ್ಲಿ ಜನರು ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಒಳ್ಳೆಯದು ಅಂತ ಆರಂಭದಲ್ಲೇ ದುಬಾರಿ ಶಿಕ್ಷಣದತ್ತ ಮುಖ ಮಾಡ್ತಾರೆ. ಆದರೆ ತಮಿಳುನಾಡಿನ ಜಿಲ್ಲಾಧಿಕಾಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಲ್ಪಾ ಪ್ರಭಾಕರ್ ಅವರು ತಮ್ಮ ಮಗು ಎಲ್ಲರೊಂದಿಗೆ ಬೆರೆತು ಸಾಮಾಜವನ್ನು ತಿಳಿಯಲಿ ಎಂದು ಅಂಗನವಾಡಿಗೆ ಸೇರಿಸಿದ್ದಾರೆ.

    ಉನ್ನತ ಸ್ಥಾನದಲ್ಲಿದ್ದು ಮಗಳನ್ನು ದುಬಾರಿ ಖಾಸಗಿ ಶಾಲೆಗಳಲ್ಲಿ ಓದಿಸುವುದು ಶಿಲ್ಪಾ ಅವರಿಗೆ ಕಷ್ಟವೇನಲ್ಲ. ಆದ್ರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಹಾಗೂ ಉತ್ತಮ ಪರಿಸರ ದೊರಕುವಾಗ ದುಬಾರಿ ಶಿಕ್ಷಣದ ಮೊರೆ ಯಾಕೆ ಹೋಗಬೇಕು ಅಂತ ಸರಳವಾಗಿ ತಮ್ಮ ಮಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸಮೀಪವಿರುವ ಪಲಾಯಕಮೊಟ್ಟಿಯ ಅಂಗನವಾಡಿಗೆ ಸೇರಿಸಿದ್ದಾರೆ. ಇದನ್ನೂ ಓದಿ: ನೆರೆ ವೇಳೆ 8 ದಿನಗಳ ಕಾಲ ಪರಿಚಯ ತಿಳಿಸದೇ ಸ್ವಯಂಸೇವಕರಂತೆ ಕೆಲ್ಸ ಮಾಡಿದ್ರು ಐಎಎಸ್ ಅಧಿಕಾರಿ!

    ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಮೂಲದ ಶಿಲ್ಪಾ ಪ್ರಭಾಕರ್ 2009ರ ಐಎಎಸ್ ಅಧಿಕಾರಿಯಾಗಿದ್ದು, ಯಾಕೆ ಅಂಗನವಾಡಿಗೆ ಸೇರಿಸಿದ್ದು ಎಂದು ಕೇಳಿದ್ದಕ್ಕೆ, ಅಂಗನವಾಡಿಗೆ ಸೇರಿಸಿದ ಮೇಲೆ ತನ್ನ ಮಗಳ ತಮಿಳು ಸುಧಾರಿಸಿದೆ. ಸಮಾಜದಲ್ಲಿರುವ ಎಲ್ಲಾ ರೀತಿಯ ಜನರೊಂದಿಗೆ ನನ್ನ ಮಗಳು ಸೇರಬೇಕು. ಅವರ ಜೊತೆ ಸೇರಿ ಕಲಿಯಬೇಕು. ಹೀಗಾಗಿ ಖಾಸಗಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ ಎಂದು ಉತ್ತರಿಸಿದ್ದಾರೆ.

    ಅಂಗನವಾಡಿ ಕೇಂದ್ರಗಳು ಮೊದಲಿನಂತಿಲ್ಲ, ಬಹಳಷ್ಟು ಬದಲಾಗಿವೆ. ಅಲ್ಲಿ ಮಕ್ಕಳಿಗೆ ಸಕಲ ಪೌಷ್ಟಿಕ ಆಹಾರ ನೀಡುತ್ತಾರೆ. ಮಕ್ಕಳ ಸವರ್ತೋಮುಖ ಬೆಳವಣಿಗೆಗೆ ಬೇಕಾಗುವ ಉತ್ತಮ ಪರಿಸರವನ್ನು ಕಲ್ಪಸಿಕೊಡಲಾಗುತ್ತದೆ. ತಮ್ಮ ಮಗಳನ್ನು ಸೇರಿಸಿರುವ ಅಂಗನವಾಡಿ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ, ಅಲ್ಲಿರುವ ಶಿಕ್ಷಕಿಯರು ತುಂಬಾ ಸಕ್ರಿಯರಾಗಿದ್ದಾರೆ. ತಿರುನೆಲ್ವೇಲಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳೂ ಸ್ಮಾರ್ಟ್ ಫೋನ್ ಹೊಂದಿವೆ. ಅಲ್ಲಿ ಮಕ್ಕಳ ಎತ್ತರ – ತೂಕ ಹಾಗೂ ಅವರು ತಿಂದ ಆಹಾರದ ಪ್ರಮಾಣ ಕೂಡ ಅಳತೆ ಮಾಡಲಾಗುತ್ತದೆ. ಆದರಿಂದ ಜಿಲ್ಲೆಯಲ್ಲಿ ಅಂಗನವಾಡಿಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಾವು ನಿರ್ಧರಿಸಿದ್ದೇವೆ. ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಅಂಗನವಾಡಿಗಳು ಒಳ್ಳೆಯ ಅಡಿಪಾಯ ಹಾಕಿಕೊಡುತ್ತದೆ ಎಂದು ಶಿಲ್ಪಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಎಎಸ್ ಅಧಿಕಾರಿ, ಪತ್ನಿಯಿಂದ ಯುವಕನಿಗೆ ಹಿಗ್ಗಾಮುಗ್ಗ ಥಳಿತ..!

    ಐಎಎಸ್ ಅಧಿಕಾರಿ, ಪತ್ನಿಯಿಂದ ಯುವಕನಿಗೆ ಹಿಗ್ಗಾಮುಗ್ಗ ಥಳಿತ..!

    ಕೋಲ್ಕತ್ತಾ: ಯುವಕನೊಬ್ಬನಿಗೆ ಐಎಎಸ್ ಅಧಿಕಾರಿಯೊಬ್ಬರು ಇತರ ಪೊಲೀಸರ ಎದುರೇ ಮನಬಂದಂತೆ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಇದೀಗ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ.

    ನಿಖಿಲ್ ನಿರ್ಮಲ್, ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿಯಾಗಿದ್ದಾರೆ. ಸದ್ಯ ಇವರನ್ನು ಜನವರಿ 16ರ ವರೆಗೆ ಸರ್ಕಾರಿ ರಜೆಯ ಮೇಲೆ ಕಳುಹಿಸಲಾಗಿದೆ. ಹೀಗಾಗಿ ನಿಖಿಲ್ ಜಾಗಕ್ಕೆ ಚಿರಂಜಿಬ್ ಘೋಷ್ ಎಂಬವರನ್ನು ನೇಮಿಸಲಾಗಿದೆ. ಥಳಿತಕ್ಕೊಳಗಾದ ಯುವಕನನ್ನು ವಿನೋದ್ ಸರ್ಕಾರ್ ಎಂದು ಗುರುತಿಸಲಾಗಿದೆ.

    ವೈರಲ್ ಆದ ವಿಡಿಯೋದಲ್ಲೇನಿದೆ..?
    ನಿರ್ಮಲ್ ಹಾಗೂ ಅವರ ಪತ್ನಿ ಸ್ಥಳೀಯ ಯುವಕನೊಬ್ಬನಿಗೆ ಫಲಕಟ ಪೊಲೀಸ್ ಠಾಣೆಯ ಒಳಗಡೆ ಚೆನ್ನಾಗಿ ಥಳಿಸಿದ್ದಾರೆ. ಇದೇ ವೇಳೆ ಇನ್ಸ್ ಪೆಕ್ಟರ್ ಸೌಮ್ಯಜಿತ್ ರೇ ಕೂಡ ಅಲ್ಲೇ ಇದ್ದರು.

    ಥಳಿಸಿದ್ದು ಯಾಕೆ..?
    ಯುವಕನೊಬ್ಬ ನಿರ್ಮಲ್ ಪತ್ನಿಯ ಫೇಸ್ ಬುಕ್ ಪ್ರೊಫೈಲ್ ಫೋಟೋಗೆ ಅಶ್ಲೀಲ ಕಮೆಂಟ್ ಮಾಡಿದ್ದಾನೆ. ಕೂಡಲೇ ಆ ಯುವಕನ್ನು ಗುರುತಿಸಿ ಠಾಣೆಗೆ ಬರುವಂತೆ ಸೂಚಿಸಲಾಯಿತು. ಹೀಗೆ ಬಂದ ಯುವಕನಿಗೆ, ಹಿರಿಯ ಇನ್ಸ್ ಪೆಕ್ಟರ್ ಎದುರೇ ಐಎಎಸ್ ಅಧಿಕಾರಿ ಹಾಗೂ ಪತ್ನಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಅಚ್ಚರಿಯ ವಿಚಾರವೆಂದರೆ, ನನ್ನ ಜಿಲ್ಲೆಯಲ್ಲಿ ನನ್ನ ವಿರುದ್ಧ ಯಾವುದೇ ಕೆಲಸವನ್ನು ಮಾಡಲು ನಾನು ಬಿಡಲ್ಲ. ನಿನ್ನ ಮನೆಗೆ ಬಂದು ನಿನ್ನನ್ನು ಕೊಲ್ಲುತ್ತೇನೆ ಎಂದು ಯುವಕನಿಗೆ ಬೆದರಿಕೆ ಹಾಕುತ್ತಲೇ ಪತಿ, ಪತ್ನಿ ಇಬ್ಬರೂ ಮನಬಂದಂತೆ ಥಳಿಸಿದ್ದಾರೆ. ಇದೇ ವೇಳೆ ಪತ್ನಿ ಕೂಡ, ನಿನ್ನ ಇಂತಹ ನೀಚ ಕಮೆಂಟ್ ಮಾಡುವ ಹಿಂದೆ ಯಾರಿದ್ದಾರೆ ಹೇಳು ಎಂದು ಪ್ರಶ್ನಿಸಿ ಗದರಿಸಿದ್ದಾರೆ.

    ಪತಿ ಹಾಗೂ ಪತ್ನಿಯ ಥಳಿತದಿಂದ ಬೇಸತ್ತ ಯುವಕ ಹೊಡೆಯದಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಮಾತ್ರವಲ್ಲದೇ ಅಧಿಕಾರಿಯ ಕಾಲಿಗೆ ಬಿದ್ದು, ತಪ್ಪಾಯ್ತು ಅಂತ ಕ್ಷಮೆ ಕೇಳಿದ್ದಾನೆ. ಆದ್ರೂ ಬಿಡದೇ ಅಧಿಕಾರಿ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಪ್ರಕರಣ ಸಂಬಂಧ ಅಧಿಕಾರಿಯಾಗಲಿ ಆಥವಾ ಅವರ ಪತ್ನಿಯಾಗಲಿ ಯಾವುದೇ ದೂರುಗಳನ್ನು ದಾಖಲಿಸಿಲ್ಲ. ದೂರು ದಾಖಲಿಸದೆಯೇ ಯುವಕನನ್ನು ಠಾಣೆಗೆ ಕರೆಸಿ ಥಳಿಸಲಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಚೇರಿಯಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸಿದೆ- ರಾಜಕಾರಣಿಗಳ ವಿರುದ್ಧ ಐಎಎಸ್ ಅಧಿಕಾರಿ ಅಸಮಾಧಾನ

    ಕಚೇರಿಯಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸಿದೆ- ರಾಜಕಾರಣಿಗಳ ವಿರುದ್ಧ ಐಎಎಸ್ ಅಧಿಕಾರಿ ಅಸಮಾಧಾನ

    ಕಲಬುರಗಿ: ಕಚೇರಿಯಲ್ಲಿ ಇಂದು ಅತ್ಯಂತ ಕೆಟ್ಟ ದಿನಗಳನ್ನು ಎದುರಿಸಿದೆ ಅಂತಾ ವ್ಯವಸ್ಥೆಯ ವಿರುದ್ಧ ಪ್ರಾದೇಶಿಕ ಆಯುಕ್ತರೊಬ್ಬರು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ್ದಾರೆ.

    ಹೈದ್ರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಖಡಕ್ ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಅವರನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿ ಸರ್ಕಾರ ನೇಮಿಸಿದೆ. ಆದರೆ ಸುಭೋದ್ ಯಾದವ್ ಅವರು ಇದೇ ತಿಂಗಳ 15ರಂದು ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ವತಂತ್ರವಾಗಿ ಕೆಲಸ ಮಾಡಲು ಸ್ಥಳೀಯ ರಾಜಕಾರಣಿಗಳು ಬಿಡುತ್ತಿಲ್ಲವೇ ಎಂಬ ಪ್ರಶ್ನೆ ಇದೀಗ ಮೂಡಿದೆ.

    ಟ್ವೀಟ್‍ನಲ್ಲಿ ಏನಿದೆ?:
    ಕಚೇರಿಯಲ್ಲಿ ಇಂದು ಅತ್ಯಂತ ಕೆಟ್ಟ ದಿನ ಎದುರಿಸಿದೆ. ಕೆಲವು ಸಲ ನೀವು ಏನೇ ಮಾಡಿದರೂ ಅದು ಗಣನೆಗೆ ಬರುವುದಿಲ್ಲ. ಕೆಲ ಅನಗತ್ಯ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೋಗಲಿ ಬಿಡಿ ಅದೇ ಜೀವನ, ಸದಾ ಸಿಹಿಯಾಗಿರುವುದಿಲ್ಲ ಎಂದು ಬರೆದು ಸುಬೋಧ್ ಯಾದವ್ ಟ್ವಿಟ್ ಮಾಡಿದ್ದಾರೆ.

    ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಡೆದ ಬಹುಕೋಟಿ ಹಗರಣವನ್ನು ಬಯಲಿಗೆ ತರಲು ಸುಭೋದ ಯಾದವ ಪ್ಲಾನ್ ಮಾಡಿದ್ದರು. ಆದರೆ ಇದನ್ನು ತಡೆಯಲು ಕೆಲ ರಾಜಕಾರಣಿಗಳು ಒತ್ತಡ ಹೇರಿದ್ದಾರೆ. ಇದರಿಂದ ಮನನೊಂದ ಸುಬೋಧ್ ಯಾದವ್ ಟ್ವಿಟ್ಟರ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಎಎಸ್ ಅಧಿಕಾರಿ ಪಲ್ಲವಿ ಮಾಡಿರೋ ಆರೋಪದ ಕಾಮಗಾರಿ ನಮ್ಮ ಇಲಾಖೆಗೆ ಬರಲ್ಲ: ರೇವಣ್ಣ

    ಐಎಎಸ್ ಅಧಿಕಾರಿ ಪಲ್ಲವಿ ಮಾಡಿರೋ ಆರೋಪದ ಕಾಮಗಾರಿ ನಮ್ಮ ಇಲಾಖೆಗೆ ಬರಲ್ಲ: ರೇವಣ್ಣ

    ಬೆಂಗಳೂರು: ಐಎಎಸ್ ಅಧಿಕಾರಿ ಪಲ್ಲವಿ ಆಕುರಾತಿ ದೂರಿನ ಪ್ರಕರಣ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ ಅವರು ಆರೋಪ ಮಾಡಿರುವ ಕಾಮಗಾರಿ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರೋಪ ಮಾಡಿರುವ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅದು ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ ಅಂತ ಸ್ಪಷ್ಟಪಡಿಸಿದ ಸಚಿವರು, ಕಾರ್ ಶೆಡ್ ನಿರ್ಮಿಸುವಂತೆ ಪಲ್ಲವಿ ಅವರು ಪತ್ರ ಬರೆದಿದ್ದರು. ಆದರೆ ಚುನಾವಣೆ ಹಿನ್ನಲೆಯಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಅಂತ ಹೇಳಲಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಎಸ್‍ಗೆ ವರದಿ ನೀಡಲು ಸೂಚನೆ ನೀಡಿರುವೆ. ಹಣ ಕೊಟ್ಟರೆ ಕೆಲಸ ಆಗುತ್ತದೆ ಎನ್ನುವ ಆರೋಪಕ್ಕೆ ನನಗೆ ಮಾಹಿತಿ ಇಲ್ಲ ಎಂದು ಹೇಳಿ ಜಾರಿಕೊಂಡರು.  ಇದನ್ನು ಓದಿ: PWDಯಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲಸ- ಪತ್ರ ಬರೆದು ದೂರು ಕೊಟ್ಟ ಮಹಿಳಾ ಅಧಿಕಾರಿ

    ಅರಣ್ಯದಲ್ಲಿ ಆನೆ ಸಾವು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಇದು ಲೋಕೋಪಯೋಗಿ ಇಲಾಖೆಗೆ ಬರುವುದಿಲ್ಲ. ಪ್ರಕರಣವು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಅರಣ್ಯ ಮಾರ್ಗದಲ್ಲಿ ರಸ್ತೆಯ ಉಬ್ಬು ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv