Tag: IAS officer

  • ಸರ್ಕಾರಿ ಕೆಲಸದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕ- ಐಎಎಸ್ ಅಧಿಕಾರಿ ರಾಜೀನಾಮೆ

    ಸರ್ಕಾರಿ ಕೆಲಸದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕ- ಐಎಎಸ್ ಅಧಿಕಾರಿ ರಾಜೀನಾಮೆ

    ಚಂಡೀಗಢ: ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    2014ರ ಬ್ಯಾಚ್‍ನ ಹರಿಯಾಣ ಕೇಡರ್‌ನ ಐಎಎಸ್ ಅಧಿಕಾರಿ ರಾಣಿ ನಗರ್ (35) ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಇವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಹೆಚ್ಚುವರಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ರಾಜೀನಾಮೆಯನ್ನು ಹರಿಯಾಣ ಮುಖ್ಯ ಕಾರ್ಯದರ್ಶಿ ಕೇಶಾನಿ ಆನಂದ್ ಅರೋರಾ ಅವರಿಗೆ ನೀಡಿದ್ದು, ಕೇಂದ್ರ ಸರ್ಕಾರದ ಪ್ರಾಧಿಕಾರಕ್ಕೆ ರವಾನಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಐಎಎಸ್ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರದ ಪ್ರತಿಗಳನ್ನು ಅಧ್ಯಕ್ಷರು, ಪ್ರಧಾನಿ, ಹರಿಯಾಣ ಗವರ್ನರ್ ಮತ್ತು ಮುಖ್ಯಮಂತ್ರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದೇನೆ ಎಂದು ರಾಣಿ ಅವರು ತಿಳಿಸಿದ್ದಾರೆ.

    ಐಎಎಸ್ ಅಧಿಕಾರಿ ಪತ್ರವನ್ನು ತಮ್ಮ ಫೇಸ್‍ಬುಕ್ ಫೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು ಅಂದರೆ ಕಳೆದ ತಿಂಗಳು ತಮ್ಮ ಫೇಸ್‍ಬುಕ್‍ನಲ್ಲಿ ಲಾಕ್‍ಡೌನ್ ನಂತರ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ ಉತ್ತರ ಪ್ರದೇಶದ ಘಜಿಯಾಬಾದ್‍ಗೆ ಹಿಂದಿರುಗುವ ಬಗ್ಗೆ ಹೇಳಿದ್ದರು.

    ಸದ್ಯಕ್ಕೆ ರಾಣಿ ನಗರ್ ಪ್ರಸ್ತುತ ತಮ್ಮ ಸಹೋದರಿಯೊಂದಿಗೆ ಚಂಡೀಗಢದಲ್ಲಿ ವಾಸಿಸುತ್ತಿದ್ದಾರೆ. 2018ರಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಕಿರುಕುಳ ನೀಡಿದ್ದಾರೆ ಎಂದು ರಾಣಿ ನಗರ್ ಆರೋಪಿಸಿದ್ದರು.

  • 1 ತಿಂಗಳ ಕಂದನನ್ನ ಕೈಯಲ್ಲಿ ಹಿಡಿದುಕೊಂಡೇ ಕೆಲಸಕ್ಕೆ IAS ಅಧಿಕಾರಿ ಹಾಜರ್

    1 ತಿಂಗಳ ಕಂದನನ್ನ ಕೈಯಲ್ಲಿ ಹಿಡಿದುಕೊಂಡೇ ಕೆಲಸಕ್ಕೆ IAS ಅಧಿಕಾರಿ ಹಾಜರ್

    – ಮಾತೃತ್ವ ರಜೆ ನಿರಾಕರಣೆ
    – ಮಗು ಹುಟ್ಟಿದ 22 ದಿನಗಳಲ್ಲೇ ಕರ್ತವ್ಯಕ್ಕೆ ವಾಪಸ್

    ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಅನೇಕ ಪೊಲೀಸ್ ಅಧಿಕಾರಿಗಳು, ವೈದ್ಯರು, ನರ್ಸ್ ಗಳು ತಮ್ಮ ಕುಟುಂಬದಿಂದ ದೂರವಿದ್ದು ಜನರ ಜೀವವನ್ನು ಕಾಪಾಡುತ್ತಿದ್ದಾರೆ. ತುಂಬು ಗರ್ಭಿಣಿಯಾಗಿದ್ದರು ಮಹಿಳಾ ವೈದ್ಯೆ ಕೊರೊನಾ ಟೆಸ್ಟ್ ಕಿಟ್ ತಯಾರಿಸಿ ಮರುದಿನ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಐಎಎಸ್ ಅಧಿಕಾರಿಯೊಬ್ಬರು ಮಾತೃತ್ವ ರಜೆಯನ್ನು ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದಾರೆ.

    ಜಿ.ಸೃಜನಾ ಮಾತೃತ್ವ ರಜೆಯನ್ನು ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಾರೆ. ಸೃಜನಾ ಅವರು ಆಂಧ್ರಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೃಜನಾ ಅವರಿಗೆ ಗಂಡು ಮಗು ಜನಿಸಿದೆ. ಆದರೆ ಮಗು ಜನಿಸಿದ 22 ದಿನಗಳಲ್ಲೇ ಕೆಲಸಕ್ಕೆ ವಾಪಸ್ ಆಗಿದ್ದಾರೆ.

    ಸೃಜನಾ ಅವರು 1 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಆರು ತಿಂಗಳ ಕಾಲ ಮಾತೃತ್ವ ರಜೆ ಪಡೆಯುವ ಅವಕಾಶವಿದೆ. ಆದರೆ ದೇಶದಲ್ಲಿ ಕೊರೊನಾ ಹಾಗೂ ಅದನ್ನು ತಡೆಗಟ್ಟಲು ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಉಂಟಾಗಿರುವ ಪರಿಸ್ಥಿತಿಯ ಕಾರಣದಿಂದ ಅವರು ಕೆಲಸಕ್ಕೆ ಹಾಜರಾಗಿದ್ದಾರೆ. ಜೊತೆಗೆ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿದ ಸೃಜನಾ ಅವರು, ತನ್ನ ಪತಿ ಮತ್ತು ತಾಯಿ ನನಗೆ ತುಂಬಾ ಸಂಪೋರ್ಟ್ ಮಾಡುತ್ತಿದ್ದಾರೆ. ನಾನು 4 ಗಂಟೆಗೊಮ್ಮೆ ಮನೆಗೆ ಹೋಗಿ ಮಗುವಿಗೆ ಹಾಲುಣಿಸಿ ಮತ್ತೆ ಕೆಲಸಕ್ಕೆ ಬರುತ್ತೇನೆ. ಈ ವೇಳೆ ತನ್ನ ಪತಿ ಮತ್ತು ತಾಯಿ ಮಗುವನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

    ನಾನೊಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಇಂತಹ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ವೈರಸ್ ಭೀತಿಯನ್ನು ಹೋಗಲಾಡಿಸಲು ಜಿಲ್ಲಾಡಳಿತವು ಒಟ್ಟಾಗಿ ಪ್ರಯತ್ನಿಸುತ್ತಿದೆ. ಕ್ಷೇತ್ರದಲ್ಲಿ ಸ್ವಚ್ಛತೆಯ ಕಾರ್ಯಗಳನ್ನು ಮಾಡುವುದು, ಬಡವರಿಗೆ ಅಗತ್ಯ ಅಗತ್ಯಗಳನ್ನು ಒದಗಿಸುವುದು ಮತ್ತು ವೈರಸ್ ಇರುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದು ನನ್ನ ಕೆಲಸವಾಗಿದೆ ಎಂದು ತಮ್ಮ ಕರ್ತವ್ಯದ ಬಗ್ಗೆ ಮಾತನಾಡಿದರು.

    ಕೊರೊನಾ ಹೋರಾಟದಲ್ಲಿ ನನ್ನ ಪಾತ್ರವು ಒಂದು ಸಣ್ಣ ಭಾಗವಾಗಿದೆ. ಅನೇಕ ಅಧಿಕಾರಿಗಳು ಇದೇ ರೀತಿ ಕೆಲಸ ಮಾಡುತ್ತಿದ್ದಾರೆ. ನಾನು ಕೆಲಸ ಮಾಡಲು ನನ್ನ ಇಡೀ ಕುಟುಂಬವು ನನಗೆ ಶಕ್ತಿಯನ್ನು ನೀಡಿದೆ ಎಂದು ಸಂತೋಷದಿಂದ ಹೇಳಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿ ಮಾತೃತ್ವ ರಜೆಯನ್ನೂ ಲೆಕ್ಕಿಸದೇ ಕರ್ತವ್ಯಕ್ಕೆ ಹಾಜರಾಗಿರುವ ಐಎಎಸ್ ಅಧಿಕಾರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಕೊರೊನಾ ತಪಾಸಣೆ ಮಾಡಿಸಿಕೊಳ್ಳದೆ ಮಾಲ್ ಸುತ್ತಿದ ಐಎಎಸ್ ಅಧಿಕಾರಿ ಮಗ: ಮಮತಾ ತರಾಟೆ

    ಕೊರೊನಾ ತಪಾಸಣೆ ಮಾಡಿಸಿಕೊಳ್ಳದೆ ಮಾಲ್ ಸುತ್ತಿದ ಐಎಎಸ್ ಅಧಿಕಾರಿ ಮಗ: ಮಮತಾ ತರಾಟೆ

    – 500 ಜನರನ್ನು ಪರೀಕ್ಷೆಗೊಳಪಡಿಸಿದ ವೈದ್ಯರು
    – ಕೊರೊನಾ ಪರೀಕ್ಷೆಗೂ ವಿಐಪಿ ಸ್ಥಾನ ಇಲ್ಲ ಎಂದ ಮಮತಾ

    ಕೋಲ್ಕತಾ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಐಎಎಸ್ ಅಧಿಕಾರಿ ಪುತ್ರನಿಗೆ ಕೊರೊನಾ ಕಾಣಿಸಿಕೊಂಡಿದ್ದು, ಪರೀಕ್ಷಿಸಿಕೊಳ್ಳದೆ ನಗರದ ಮಾಲ್ ಸೇರಿದಂತೆ ವಿವಿಧೆಡೆ ಸಂಚರಿಸಿದ್ದಾನೆ. ನಂತರ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ಪತ್ತೆಯಾಗಿದ್ದು, ಇದನ್ನು ಅರಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ವಿಐಪಿಗಳೆಂದು ಬೇಜವಾಬ್ದಾರಿತನದಿಂದ ವರ್ತಿಸಬೇಡಿ, ರೋಗ ಎಲ್ಲರಿಗೂ ಹರಡುತ್ತದೆ. ಕೊರೊನಾ ಪರಿಶೀಲನೆಗೂ ವಿಐಪಿ ದರ್ಜೆಯ ಸ್ಥಾನ ಪಡೆಯಲು ಸಾಧ್ಯವಿಲ್ಲ. ಯಾವ ದೇಶದಿಂದ ಬಂದರೂ ನಾನು ಸ್ವಾಗತಿಸುತ್ತೇನೆ. ಆದರೆ ರೋಗವನ್ನು ಸ್ವಾಗತಿಸುವುದಿಲ್ಲ. ನೀವು ವಿದೇಶದಿಂದ ಬರುತ್ತೀರಿ, ಯಾವುದೇ ಪರೀಕ್ಷೆಗೆ ಒಳಪಡದೆ ಶಾಪಿಂಗ್ ಮಾಲ್‍ಗಳಿಗೆ ಹೋಗುತ್ತೀರಿ. ಇದರಿಂದಾಗಿ 500 ಜನ ತೊಂದರೆಗೊಳಗಾಗಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಪ್ರಕರಣ ನನ್ನ ಕುಟುಂಬದಲ್ಲೇ ನಡೆದಿದ್ದರೆ ನಾನು ಸಹಿಸಿಕೊಳ್ಳುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯುವಕ ಯೂರೋಪ್‍ನಿಂದ ಮರಳಿದ್ದು, ಕೊರೊನಾ ಸೋಂಕು ತಗುಲಿದೆ. ಇದನ್ನು ಪರೀಕ್ಷಿಸಿಕೊಳ್ಳದೆ ಕೋಲ್ಕತ್ತಾಗೆ ಆಗಮಿಸಿ ಶಾಪಿಂಗ್ ಮಾಲ್‍ಗಳಿಗೆ ತೆರಳಿದ್ದಾನೆ. ಅಲ್ಲದೆ ಹಲವು ಜನರನ್ನು ಸಂಪರ್ಕಿಸಿದ್ದಾನೆ. ಇದರಿಂದಾಗಿ 500 ಜನರು ಪರೀಕ್ಷೆಗೆ ಒಳಪಡಬೇಕಾಗಿದೆ. ಗೃಹಬಂಧನದಲ್ಲಿರಬೇಕಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಯುವಕನ ತಾಯಿ ಐಎಎಸ್ ಅಧಿಕಾರಿಯಾಗಿದ್ದು, ಇವರ ತಂದೆ ವೈದ್ಯರಾಗಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಚೇರಿ ಇರುವ ಕಟ್ಟಡದಲ್ಲೇ ಯುವಕನ ತಾಯಿ ಕೆಲಸ ಮಾಡುತ್ತಿದ್ದಾರೆ. ಯುವಕ ಪರೀಕ್ಷೆಗೆ ಒಳಪಡುವುದಕ್ಕೂ ಮೊದಲು ಸಿಎಂ ಜೊತೆ ಹಲವು ಸಭೆಗಳಲ್ಲಿ ಈ ಐಎಎಸ್ ಅಧಿಕಾರಿ ಭಾಗಿಯಾಗಿದ್ದಾರೆ. ಹೀಗಾಗಿ ಸ್ವತಃ ಮಮತಾ ಬ್ಯಾರ್ಜಿ ಸಹ ಭಯಭೀತರಾಗಿದ್ದಾರೆ.

    ಪಶ್ಚಿಮ ಬಂಗಾಳದ ಹೋಮ್ ಸೆಕ್ರೆಟರಿ ಹಾಗೂ ಯುವಕನ ತಾಯಿ ಸೋಮವಾರ ಸಭೆ ನಡೆಸಿದ್ದು, ಅವರ ಕುಟುಂಬವನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತ ವರದಿ ಇನ್ನೂ ಬರಬೇಕಿದೆ.

    ಯುವಕ ಇಂಗ್ಲೆಂಡ್‍ನ ಪ್ರೊಮಿನೆಂಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊರೊನಾ ಹಿನ್ನೆಲೆ ಭಾರತಕ್ಕೆ ಮರಳಿದ್ದಾನೆ. ಆದರೆ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಯುವಕನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಸ್ಕ್ರೀನಿಂಗ್ ವೇಳೆ ಇದು ಸ್ಪಷ್ಟವಾಗಿಲ್ಲ. ನಂತರ ತನ್ನ ಡ್ರೈವರ್‍ನೊಂದಿಗೆ ಯುವಕ ಮನೆಗೆ ತೆರಳಿದ್ದು, ಮನೆಯಲ್ಲಿ ಪೋಷಕರನ್ನು ಭೇಟಿ ಮಾಡಿದ್ದಾನೆ. ಬಳಿಕ ಆತನ ಸ್ನೇಹಿತರು ಯುರೋಪ್‍ನಿಂದ ಕರೆ ಮಾಡಿದ್ದು, ಲಂಡನ್‍ನಲ್ಲಿ ಪಾರ್ಟಿ ಮಾಡಿದ ಗೆಳೆಯರ ಪೈಕಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

    ಯುವಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದು, ವೈದ್ಯರು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆಗ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ವೇಳೆ ಯುವಕನ ತಾಯಿ ಸಹ ಮಗನ ಜೊತೆಗೆ ಆಸ್ಪತ್ರೆಗೆ ತೆರಳಿ, ಬಳಿಕ ಸಿಎಂ ಕಚೇರಿಗೆ ಕೆಲಸಕ್ಕೆ ತೆರಳಿದ್ದರು ಎಂದು ವರದಿಯಾಗಿದೆ.

  • ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ – ಐಎಎಸ್ ಅಧಿಕಾರಿಗೆ ಪ್ರಶಂಸೆ

    ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ – ಐಎಎಸ್ ಅಧಿಕಾರಿಗೆ ಪ್ರಶಂಸೆ

    ರಾಂಚಿ: ಸಾಮಾನ್ಯವಾಗಿ ಉನ್ನತ ಉದ್ದೆಯಲ್ಲಿರುವವರು ಅನಾರೋಗ್ಯ ಉಂಟಾದರೆ ಖಾಸಗಿ ಆಸ್ಪತ್ರೆಗೆ ಹೋಗುವುದು ಅಧಿಕ. ಆದರೆ ಜಾರ್ಖಂಡ್‍ನ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ಮಾದರಿಯಾಗಿದ್ದಾರೆ.

    ಜಾರ್ಖಂಡ್ ನ ಗೊಡ್ಡಾ ಪ್ರದೇಶದ ಮಹಿಳಾ ಐಎಎಸ್ ಅಧಿಕಾರಿ ಕಿರಣ್ ಕುಮಾರ್ ಪಾಸಿ ಅವರು ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಐಎಎಸ್ ಅಧಿಕಾರಿಯನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸಿಸುತ್ತಿದ್ದಾರೆ.

    ಸಾಮಾನ್ಯ ಜನರು ಕೂಡ ಸರ್ಕಾರಿ ಆಸ್ಪತ್ರೆಗೆ ಹೋಗಲು ಯೋಚನೆ ಮಾಡುತ್ತಾರೆ. ಅಂತಹವರಿಗೆ ಐಎಎಸ್ ಅಧಿಕಾರಿ ಪಾಸಿ ಅವರು ಉತ್ತಮ ಉದಾಹರಣೆ ನೀಡಿದ್ದಾರೆ. ಇದೀಗ ಕಿರಣ್ ಕುಮಾರ್ ಪಾಸಿ ಮತ್ತು ಅವರ ಮಗುವಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅವರು ಇಲ್ಲಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಐಎಎಸ್ ಅಧಿಕಾರಿ ಮಾಡಿರುವ ಕೆಲಸದಿಂದ ಖಂಡಿತವಾಗಿಯೂ ಸರ್ಕಾರಿ ವ್ಯವಸ್ಥೆಯಲ್ಲಿ ವಿಶ್ವಾಸ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಸಿವಿಲ್ ಸರ್ಜನ್ ಎಸ್‍.ಪಿ ಮಿಶ್ರಾ ಹೇಳಿದ್ದಾರೆ.

    ಕಿರಣ್ ಕುಮಾರ್ ಪಾಸಿ ಮುಂದಿನ ಎರಡು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರುತ್ತಾರೆ. ಅವರ ಯಶಸ್ವಿ ಹೆರಿಗೆಯ ನಂತರ ಅನೇಕ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಬಂದು ಅವರನ್ನು ಅಭಿನಂದಿಸಿದ್ದಾರೆ.

    ಹೆರಿಗೆಯ ನಂತರ ದಿಯೋಘರ್ ಡಿಸಿ ನ್ಯಾನ್ಸಿ ಸಹಯ್ ವೈಯಕ್ತಿಕವಾಗಿ ಸದರ್ ಆಸ್ಪತ್ರೆಗೆ ಬಂದಿದ್ದರು. ಅವರು ಕೂಡ ಕಿರಣ್ ಕುಮಾರ್ ಪಾಸಿ ಅವರನ್ನು ಶ್ಲಾಘಿಸಿದ್ದು, ನಿಮ್ಮಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಜನರಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಎಂದು ಹೇಳಿದರು.

  • ಪ್ರತಿನಿತ್ಯ ಸರ್ಕಾರಿ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ ಐಎಎಸ್ ಅಧಿಕಾರಿ

    ಪ್ರತಿನಿತ್ಯ ಸರ್ಕಾರಿ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ ಐಎಎಸ್ ಅಧಿಕಾರಿ

    ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಫೌಜಿಯಾ ತರನುಮ್‍ರವರು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡುತ್ತಾ ಮಾದರಿಯಾಗಿದ್ದಾರೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಮ್ಮ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಾಸಾಗಲೇಬೇಕು ಅಂತ ಫೌಜಿಯಾ ಅವರು ಗುರಿ ಇಟ್ಟಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಟೊಂಕ ಕಟ್ಟಿ ನಿಂತು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಫೌಜಿಯಾರವರು ತಾವೇ ಶಿಕ್ಷಕಿಯಾಗಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ಕೊಟ್ಟು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ.

    ಈ ಬಾರಿ ಏನಾದರೂ ಮಾಡಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ತಮ್ಮ ಜಿಲ್ಲೆಯನ್ನ ಟಾಪ್ 10 ಸ್ಥಾನದಲ್ಲಿ ತರಲೇಬೇಕು ಅಂತ ಗುರಿ ಇಟ್ಟುಕೊಂಡಿರೋ ಸಿಇಒ, ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನ ರೂಪಿಸಿದ್ದಾರೆ. ಪ್ರತಿ ದಿನ ತಾವು ಜಿಲ್ಲೆಯ ಯಾವುದೇ ಗ್ರಾಮ್ಕಕ್ಕೆ ಹೋದರೂ ಅಲ್ಲಿನ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ಕೊಟ್ಟು ಪಾಠ ಪ್ರವಚನ ಮಾಡ್ತಿದ್ದು, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳಿಂದ ಆತ್ಮಸ್ಥೈರ್ಯ ತುಂಬುವ ಕಾಯಕ ಮಾಡ್ತಿದ್ದಾರೆ.

    ಸ್ವತಃ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಮಾಡೋ ಸಿಇಒ ಫೌಜಿಯಾ ಅವರು, ಮೊದಲಿಗೆ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ನಡೆಸಿ ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಸಾಗುವಂತೆ ವಿಶೇಷ ತರಗತಿಗಳನ್ನ ಮಾಡುವಂತೆ ಸೂಚಿಸಿದ್ದಾರೆ. ತದನಂತರ ಮನೆಯಲ್ಲಿ ಬೆಳಗಿನ ಜಾವ ಬೇಗ ಎದ್ದು ಮಕ್ಕಳು ಓದುವಂತೆ ಮಾಡಲು ಮಿಸ್ಡ್ ಕಾಲ್ ಕಾರ್ಯಕ್ರಮ ರೂಪಿಸಿದ್ದಾರೆ.

    ವಿದ್ಯಾರ್ಥಿಗಳಲ್ಲೇ 4 ತಂಡಗಳಾಗಿ ಮಾಡಿ ಆ ವಿದ್ಯಾರ್ಥಿಗಳ ಹೊಣೆಯನ್ನ ಆಯಾ ಶಾಲೆಯ ಶಿಕ್ಷಕರಿಗೆ ಹೊರಿಸಿ ದತ್ತು ನಿಯಮ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪರೀಕ್ಷೆ ಅಂದರೆ ಸಾಕು ವಿದ್ಯಾರ್ಥಿಗಳು ಭಯಪಡ್ತಾರೆ ಅಂತ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ತಾವೇ ಮಾಡೆಲ್ ಪಬ್ಲಿಕ್ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನ ಹೋಗಲಾಡಿಸುವ ಕಾಯಕಕ್ಕೆ ಮುಂದಾಗಿದ್ದಾರೆ. ಸಿಇಒ ಕಾರ್ಯ ವೈಖರಿಗೆ ಸ್ವತಃ ಶಿಕ್ಷಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಶಿಕ್ಷಕರು ಸಹ ಹಬ್ಬ ಹರಿದಿನ, ರಜಾ ಅಂತ ಕಾಲ ಕಳೆಯದೆ ವಿದ್ಯಾರ್ಥಿಗಳನ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಘಟ್ಟವಾಗಿದ್ದು, ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳು ಪಾಸಾಗಬೇಕು ಅಂತ ಸಿಇಒ ಗುರಿ ಹೊಂದಿದ್ದಾರೆ. ಆನೇಕ ಕಾರ್ಯಕ್ರಮಗಳನ್ನ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

    ಎರಡು ವರ್ಷದ ಹಿಂದೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಜಾರಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಕಳೆದ ಬಾರಿ 20ನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ಈ ವರ್ಷ ಟಾಪ್ 10 ಜಿಲ್ಲೆಗಳಲ್ಲಿ ತಮ್ಮ ಜಿಲ್ಲೆಯೂ ಬರಬೇಕು ಅಂತ ಫೌಜಿಯಾ ಅವರು ಶ್ರಮ ಪಡುತ್ತಿದ್ದಾರೆ.

  • ಖಡಕ್ ಅಧಿಕಾರಿ ರಶ್ಮಿ ಮಹೇಶ್ ಮತ್ತೆ ಎತ್ತಂಗಡಿ

    ಖಡಕ್ ಅಧಿಕಾರಿ ರಶ್ಮಿ ಮಹೇಶ್ ಮತ್ತೆ ಎತ್ತಂಗಡಿ

    ಬೆಂಗಳೂರು: ಖಡಕ್ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರನ್ನು ರಾಜ್ಯ ಸರ್ಕಾರ ಮತ್ತೆ ಎತ್ತಂಗಡಿ ಮಾಡಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿದ್ದ ರಶ್ಮಿ ಮಹೇಶ್ ಅವರನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

    ನೇರ ನಿಷ್ಠುರ ಅಧಿಕಾರಿ ಎಂದೇ ಹೆಸರು ಗಳಿಸಿರುವ ರಶ್ಮಿ ಅವರನ್ನು ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಉತ್ತಮ ಅಧಿಕಾರಿಯೊಬ್ಬರನ್ನು ಕೆಲಸಕ್ಕೆ ಬಾರದ ಇಲಾಖೆಗೆ ವರ್ಗಾಯಿಸಿ ಮೂಲೆಗುಂಪು ಮಾಡಲು ಹೊರಟಿರುವ ಸರ್ಕಾರದ ಕ್ರಮ ಅಧಿಕಾರಿಗಳ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    ಪಶುಸಂಗೋಪನಾ ಖಾತೆ ಸಚಿವ ಪ್ರಭುಚೌಹಾಣ್ ಅವರಿಗೆ ಅನುಕೂಲವಾಗುಂತೆ ನಡೆದುಕೊಂಡಿಲ್ಲ ಎನ್ನುವುದೇ ರಶ್ಮಿ ವರ್ಗಾವಣೆಗೆ ಕಾರಣ ಎನ್ನಲಾಗಿದೆ. ಇಲಾಖೆಯ ವಿಚಾರದಲ್ಲಿ ನಿಯಮಬಾಹಿರವಾಗಿ ನಿರ್ಧಾರ ತೆಗೆದುಕೊಳ್ಳಬೇಕೆಂಬ ಸಚಿವರ ಒತ್ತಡಕ್ಕೆ ರಶ್ಮಿ ಸಮ್ಮತಿಸಿಲ್ಲ ಎನ್ನಲಾಗಿದೆ. ಇದು ರಶ್ಮಿ ಎತ್ತಂಗಡಿಗೆ ಕಾರಣವಾಗಿದೆ ಎಂದು ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಹಿಂದಿನ ಸರ್ಕಾರದ ಅವಧಿಯಲ್ಲೂ ವಿವಿಧೆಡೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಟ್ಟುನಿಟ್ಟಿನ ಕ್ರಮಕೈಗೊಂಡು ಆಡಳಿತರೂಢರ ಕೆಂಗಣ್ಣಿಗೆ ಗುರಿಯಾಗಿ ರಶ್ಮಿ ಮಹೇಶ್ ಪದೇಪದೇ ವರ್ಗಾವಣೆಯ ಶಿಕ್ಷೆಗೆ ಒಳಗಾಗಿದ್ದರು.

    ವೈದ್ಯಕೀಯ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ವೈದ್ಯಕೀಯ ಕಾಲೇಜುಗಳ ಸೀಟ್ ಬ್ಲಾಕಿಂಗ್ ದಂಧೆ, ಅಕ್ರಮ ಶುಲ್ಕ ವಸೂಲಿ ಮತ್ತು ಅಡ್ಡದಾರಿಯಲ್ಲಿ ಸರ್ಕಾರಕ್ಕೆ ವಂಚಿಸುತ್ತಿದ್ದ ಕಾಲೇಜುಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರು. ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿಗೆ ರಶ್ಮಿ ಎತ್ತಂಗಡಿಯಾಗಿತ್ತು.

    ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿದ್ದಾಗ ಅಲ್ಲಿನ ಸಿಬ್ಬಂದಿ ಗುಂಪೊಂದು ರಶ್ಮಿಯವರ ಮೇಲೆ ಮಾಧ್ಯಮಗಳು ಮತ್ತು ಪೊಲೀಸರ ಮುಂದೆ ದೈಹಿಕ ಹಲ್ಲೆ ನಡೆಸಿತ್ತು. ಆ ಸಂದರ್ಭದಲ್ಲಿ ಅಧಿಕಾರಿಯ ಬಗ್ಗೆ ಅನುಕಂಪ ತೋರಿದ್ದ ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್ ನಾಯಕರನ್ನು ಟೀಕಿಸಿ ಕಾಂಗ್ರೆಸ್ ನಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಅಂತ ಬೊಬ್ಬೆ ಹೊಡೆದಿದ್ದರು. ಈಗ ಕಾಂಗ್ರೆಸ್ ಹಾದಿಯನ್ನೇ ಹಿಡಿದಿರುವ ಬಿಜೆಪಿ ಸರ್ಕಾರ ದಕ್ಷ ಪ್ರಾಮಾಣಿಕ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ನೀಡಿ ಮೂಲೆಗುಂಪು ಮಾಡಲು ಹೊರಟಿರುವುದು ವಿಪರ್ಯಾಸ.

  • ಐಎಎಸ್ ಅಧಿಕಾರಿಗೆ 1 ರೂ.ದಂಡ ವಿಧಿಸಿದ ಕೋರ್ಟ್

    ಐಎಎಸ್ ಅಧಿಕಾರಿಗೆ 1 ರೂ.ದಂಡ ವಿಧಿಸಿದ ಕೋರ್ಟ್

    ಶಿವಮೊಗ್ಗ: ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಹಲವಾರು ಪ್ರಕರಣಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಒಂದೊಂದು ಪ್ರಕರಣಗಳು ಒಂದೊಂದು ರೀತಿಯಲ್ಲಿ ಇರುತ್ತವೆ. ಕೆಲವೊಂದು ಪ್ರಕರಣಗಳು ವಿಶೇಷವಾದರೆ, ಇನ್ನು ಕೆಲವು ಪ್ರಕರಣಗಳು ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ನ್ಯಾಯಾಲಯ ತೀರ್ಪು ನೀಡಿದೆ.

    ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಈ ಹಿಂದೆ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ವಿರುದ್ಧದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೇವಲ 1 ರೂ.ಗೆ ಮಾನನಷ್ಟ ಕೋರಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ತೀರ್ಪು ನೀಡಿದೆ.

    ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ

    2014ರಲ್ಲಿ ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಪ್ರಸ್ತುತ ಕೆಪಿಸಿಎಲ್‍ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೊನ್ನುರಾಜ್ ಅವರ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು,  ಪ್ರಕರಣದಲ್ಲಿ ಅಧಿಕಾರಿ ಪೊನ್ನುರಾಜ್ ಅವರಿಗೆ ಹಿನ್ನೆಡೆಯಾಗಿದೆ.

    ಏನಿದು ಪ್ರಕರಣ?:
    ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದ ವಿನೋಬನಗರ ನಿವಾಸಿ ಕೆ.ಶಿವಪ್ಪ ಅವರು ಐಎಎಸ್ ಅಧಿಕಾರಿ ಪೊನ್ನುರಾಜ್ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹೂಡಿ ರಾಜ್ಯದ ಗಮನ ಸೆಳೆದಿದ್ದರು. 6 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಪೊನ್ನುರಾಜ್ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ ಪೊನ್ನುರಾಜ್ ಅವರು ತಮ್ಮ ವಿರುದ್ಧ ಮಾನನಷ್ಟ ದಾವೆ ಹೂಡಿದ್ದ ಕೆ. ಶಿವಪ್ಪರಿಗೆ ಪೊನ್ನುರಾಜ್ 1 ರೂ. ಪರಿಹಾರ ನೀಡಬೇಕಾಗಿದೆ.

    ಕೆ. ಶಿವಪ್ಪ ವಿರುದ್ಧ 2011ರ ಏಪ್ರಿಲ್ 5ರಂದು ಶಿವಮೊಗ್ಗದವರೇ ಆದ ಎ.ಎಂ.ಮಹದೇವಪ್ಪ ಎಂಬವರು ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಅವರಿಗೆ ದೂರು ನೀಡಿದ್ದರು. ಕೆ.ಶಿವಪ್ಪ ಅವರು ನಿವೃತ್ತರಾಗಿದ್ದರೂ ಕಂದಾಯ ಇಲಾಖೆಯಲ್ಲಿ ಕಾಣಿಸಿಕೊಂಡು ಸಾರ್ವಜನಿಕ ವ್ಯವಹಾರಕ್ಕೆ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

    ಪೊನ್ನುರಾಜ್ ಅವರು ಈ ದೂರಿನ ಬಗ್ಗೆ ವಿಚಾರಣೆ ನಡೆಸದೇ ಶಿವಪ್ಪ ಅವರಿಗೆ ಯಾವುದೇ ನೋಟಿಸ್ ಜಾರಿಗೊಳಿಸದೇ ಆದೇಶವೊಂದನ್ನು ಹೊರಡಿಸಿದ್ದರು. ಅದರ ಪ್ರಕಾರ, ಶಿವಪ್ಪ ಅವರು ಯಾವುದೇ ಇಲಾಖೆಗಳಿಗೆ ಹೋಗಬಾರದೆಂದು ನಿರ್ಬಂಧಿಸಲಾಗಿತ್ತು. ಆದೇಶ ಪ್ರತಿಗಳನ್ನು ಆಯಾ ಇಲಾಖೆ ನೋಟಿಸ್ ಬೋರ್ಡ್ ಗಳಲ್ಲಿಯೂ ಪ್ರಕಟಿಸಲಾಗಿತ್ತು. ತಮ್ಮ ಅರಿವಿಗೆ ಬಾರದೇ ಸುತ್ತೋಲೆ ಹೊರಡಿಸಿ ನಿರ್ಬಂಧಿಸಿದ್ದರ ವಿರುದ್ಧ ಕೆ.ಶಿವಪ್ಪ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆಗ ಪ್ರತಿವಾದ ಮಾಡುವ ಬದಲಾಗಿ ತಮ್ಮ ಸುತ್ತೋಲೆಯನ್ನು ಬೇಷರತ್ ಆಗಿ ಪೊನ್ನುರಾಜ್ ಹಿಂಪಡೆದಿದ್ದರು. ಈ ಸುತ್ತೋಲೆ ಹಿನ್ನೆಲೆಯಲ್ಲಿ ತಮಗೆ ಮಾನನಷ್ಟವಾಗಿದೆ. ಅಲ್ಲದೇ ಸುತ್ತೋಲೆ ಪರಿಣಾಮ ತಮ್ಮ ವ್ಯವಹಾರಿಕ ಬದುಕಿನ ಮೇಲೆ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ ಎಂದು ಶಿವಪ್ಪ ಅವರು ಹೇಳಿದ್ದರು. ಆದರೆ ಅವರು 25 ಲಕ್ಷ ರೂ.ಗೆ ಬದಲಾಗಿ ಕೇವಲ 1 ರೂ.ಗೆ ಸೀಮಿತಗೊಳಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಈ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡ ಮಾನ್ಯ 3ನೇ ಜೆಎಂಎಫ್‍ಸಿ ನ್ಯಾಯಾಲಯವು, ಪೊನ್ನುರಾಜ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿವಪ್ಪ ಅವರಿಗೆ 60 ದಿನದ ಒಳಗೆ 1 ರೂ. ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.

  • ದಕ್ಷ ಐಎಎಸ್ ಅಧಿಕಾರಿ ಭೂಬಾಲನ್ ತುಮಕೂರಿಗೆ ವಾಪಸ್

    ದಕ್ಷ ಐಎಎಸ್ ಅಧಿಕಾರಿ ಭೂಬಾಲನ್ ತುಮಕೂರಿಗೆ ವಾಪಸ್

    ತುಮಕೂರು: ದಕ್ಷ ಐಎಎಸ್ ಅಧಿಕಾರಿ ಭೂಬಾಲನ್ ತುಮಕೂರು ಪಾಲಿಕೆ ಆಯುಕ್ತರಾಗಿ ಎರಡನೇ ಬಾರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಹಿಂದೆ ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆಯುಕ್ತರಾಗಿದ್ದ ಭೂಬಾಲನ್, ಉಪಚುನಾವಣೆ ನಿಮಿತ್ತ ಸರ್ಕಾರ ದಿಢೀರ್ ಬೆಳಗಾವಿಗೆ ವರ್ಗಾವಣೆ ಮಾಡಿತ್ತು.

    ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡು ಆಡಳಿತ ಚುರುಕುಗೊಳಿಸಿದ್ದ ಭೂಬಾಲನರನ್ನ ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಖಂಡಿಸಿ ನಾಗರೀಕರು ಪ್ರತಿಭಟನೆ ನಡೆಸಿದ್ದರು. ನಾಗರಿಕರ ಹೋರಾಟಕ್ಕೆ ಮಣಿದ ಸರ್ಕಾರ ಇದೀಗ ತುಮಕೂರು ಪಾಲಿಕೆ ಆಯುಕ್ತರಾಗಿ ಭೂಬಾಲನ್ ಅವರನ್ನು ವಾಪಸ್ ವರ್ಗಾವಣೆ ಮಾಡಿದೆ. ಹೀಗಾಗಿ ಇಂದು ಭೂಬಾಲನ್ ಅಧಿಕಾರ ಸ್ವೀಕರಿಸಿದ್ದಾರೆ.

    ನಗರದಲ್ಲಿ ಸ್ವಚ್ಛತೆಗೆ ಒತ್ತು ಕೊಟ್ಟ ಭೂಬಾಲನ್, ತೆರಿಗೆ ವಂಚಕರಿಗೂ ಸಿಂಹಸ್ವಪ್ನವಾಗಿ ಕಾಡಿದ್ದರು. ವಸೂಲಾಗದೇ ಇದ್ದ ನೂರಾರು ಕೋಟಿ ತೆರಿಗೆ ವಸೂಲಿ ಮಾಡಿ ಪಾಲಿಕೆ ಬೊಕ್ಕಸ ತುಂಬಿಸಿದ್ದರು. ಸ್ಮಾರ್ಟಿ ಸಿಟಿ ಕಾಮಗಾರಿಯಲ್ಲಿ ಚುರುಕು ಮುಟ್ಟಿಸಿದ್ದರು. ಇವರ ದಿಢೀರ್ ವರ್ಗಾವಣೆಯಿಂದ ಮತ್ತೆ ಪಾಲಿಕೆ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡಿ ನೆಲಕಚ್ಚಿತು. ಈ ಹಿನ್ನೆಲೆಯಲ್ಲಿ ಮತ್ತೆ ಭೂಬಾಲ್ ಪಾಲಿಕೆ ಆಯುಕ್ತರಾಗಿ ಬರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು.

    ಇಂದು ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಆಯುಕ್ತರು, ನಗರದ ಸ್ವಚ್ಛತೆ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಹೆಚ್ಚಿನ ಆಸ್ಥೆವಹಿಸಲಾಗುವು ಎಂದು ಪ್ರತಿಕ್ರಿಯಿಸಿದ್ದಾರೆ.

  • 30 ವರ್ಷಗಳಲ್ಲಿ 53 ಬಾರಿ ವರ್ಗಾವಣೆ- ಪ್ರಧಾನಿಗೆ ಪತ್ರ ಬರೆದ ಐಎಎಸ್ ಅಧಿಕಾರಿ

    30 ವರ್ಷಗಳಲ್ಲಿ 53 ಬಾರಿ ವರ್ಗಾವಣೆ- ಪ್ರಧಾನಿಗೆ ಪತ್ರ ಬರೆದ ಐಎಎಸ್ ಅಧಿಕಾರಿ

    ಚಂಡೀಗಢ: ಸರ್ಕಾರದ ವರ್ಗಾವಣೆಯಿಂದ ಬೇಸರಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೆಮ್ಕಾ, ಭೇಟಿಗೆ ಅವಕಾಶ ಕೋರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

    ಪ್ರಧಾನಿಗಳ ಭೇಟಿಗೆ ಅವಕಾಶ ಕೊಡಿಸುವಂತೆ ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ಪತ್ರ ಬರೆದಿದ್ದಾರೆ. ಪ್ರಾಮಾಣಿಕರಿಗೆ ಇಲ್ಲಿ ಮಾನ್ಯತೆ ಇಲ್ಲ. ವಿಧೇಯ ಮತ್ತು ಭಷ್ಟರು ಸಕ್ರಿಯ ಸೇವೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಪ್ರಾಮಾಣಿಕರಿಗೆ ಸಣ್ಣ, ಅತ್ಯಲ್ಪ ಹುದ್ದೆಗಳು ಮಾತ್ರ ಸಿಗುತ್ತಿವೆ ಅಂತ ಅಸಮಾಧಾನ ಹೊರ ಹಾಕಿದ್ದಾರೆ.

    ಪ್ರಾಮಾಣಿಕತೆಗೆ ಟ್ರಾನ್ಸಫರ್ ಗಿಫ್ಟ್: ಹರ್ಯಾಣದ ಹಿರಿಯ ಐಎಎಸ್ ಅಧಿಕಾರಿ ಆಗಿರುವ ಅಶೋಕ್ ಖೆಮ್ಕಾ ಸೇವೆಗೆ ಸೇರಿದ 30 ವರ್ಷಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 53 ಬಾರಿ ವರ್ಗಾವಣೆಯಾಗಿದ್ದಾರೆ. ಹರ್ಯಾಣ ಸರ್ಕಾರದಲ್ಲಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಖೆಮ್ಕಾ ಅವರಿಗೆ ಪ್ರಾಮಾಣಿಕತೆಯೇ ಮುಳುವಾಗಿದೆ. 1991ರಲ್ಲಿ ಭಾರತೀಯ ಸೇವೆಗೆ ಸೇರಿದ ಅಶೋಕ್ ಖೆಮ್ಕಾ ಪ್ರಾಮಾಣಿಕವಾಗಿ ಮಾಡಿದ ಕೆಲಸಕ್ಕೆ ವರ್ಗಾವಣೆಯೇ ದೊಡ್ಡ ಗಿಫ್ಟ್ ಆಗಿ ಪಡೆದಿದ್ದಾರೆ.

    ಖುದ್ದು ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ಕೇಳಿರುವ ಅಶೋಕ್ ಖೆಮ್ಕಾ, ಪ್ರಧಾನಿ ಅವರ ಬಳಿಯೇ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಲು ಸಿದ್ಧರಾಗಿದ್ದಾರೆ. ಪ್ರಧಾನಿ ಮೋದಿ ಅವರು ಅಶೋಕ್ ಖೆಮ್ಕಾರ ಭೇಟಿಗೆ ಅವಕಾಶ ಕೊಡ್ತಾರಾ? ಪ್ರಾಮಾಣಿಕ ಅಧಿಕಾರಿಗಳ ಬೆಂಬಲಕ್ಕೆ ಮೋದಿ ಕ್ರಮ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕು.

  • ಕಾಶ್ಮೀರದ ಪರಿಸ್ಥಿತಿಗೆ ಬೇಸತ್ತು ಐಎಎಸ್ ಅಧಿಕಾರಿ ರಾಜೀನಾಮೆ

    ಕಾಶ್ಮೀರದ ಪರಿಸ್ಥಿತಿಗೆ ಬೇಸತ್ತು ಐಎಎಸ್ ಅಧಿಕಾರಿ ರಾಜೀನಾಮೆ

    ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಬೇಸತ್ತು ಕೇರಳ ಮೂಲದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ.

    ದಾದ್ರಾ ಮತ್ತು ನಗರ ಹವೇಲಿಯ ಪ್ರಮುಖ ಇಲಾಖೆಗಳ ಕಾರ್ಯದರ್ಶಿಯಾಗಿ ಗೋಪಿನಾಥನ್ ಕಾರ್ಯ ನಿರ್ವಹಿಸಿದ್ದರು. ಉತ್ತಮ ಸೇವೆ ನೀಡಿ ಮೆಚ್ಚುಗೆ ಪಡೆದಿದ್ದ ಗೋಪಿನಾಥನ್ ಅವರು ಈಗ ಕೇಂದ್ರ ಸರ್ಕಾರದ ನಡೆಗೆ ಬೇಸತ್ತಿದ್ದಾರೆ. ಏಳು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿದ್ದ ಗೋಪಿನಾಥನ್ ಆಗಸ್ಟ್ 21ರಂದು ತಮ್ಮ ರಾಜೀನಾಮೆಯನ್ನು ನೀಡಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ರಾಜೀನಾಮೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಸುಮಾರು 20 ದಿನಗಳಿಂದ ಕಾಶ್ಮೀರಿಯರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಿರುವುದು ಬೇಸರವಾಗಿದೆ. ಈ ಬಗ್ಗೆ ಧ್ವನಿಯತ್ತಲು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

    ಜಮ್ಮು ಮತ್ತು ಕಾಶ್ಮೀರದಲ್ಲಿ ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು 20 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಅನೇಕ ಭಾರತೀಯರಿಗೆ ಇದು ಸರಿಯಾದ ನಿರ್ಧಾರ ಅನಿಸಬಹುದು. 370 ನೇ ವಿಧಿ ರದ್ದುಪಡಿಸುವುದು ಸಮಸ್ಯೆಯಲ್ಲ, ಆದರೆ ಇದಕ್ಕೆ ನಾಗರಿಕರು ಪ್ರತಿಕ್ರಿಯಿಸುವ ಹಕ್ಕನ್ನು ನಿರಾಕರಿಸುವುದು ಸರಿಯಲ್ಲ. ಕೇಂದ್ರದ ನಡೆಯನ್ನು ಅನುಸರಿಸುವುದು ಅಥವಾ ಪ್ರತಿಭಟಿಸುವುದು ಅವರ ಹಕ್ಕು. ಆದ್ರೆ ಆ ಹಕ್ಕನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಗೋಪಿನಾಥನ್ ಹೇಳಿದರು.

    ಇದು 1970 ಅಲ್ಲ, ಆಗ ತುರ್ತು ಪರಿಸ್ಥಿತಿ ಘೋಷಿಸಿದಾಗ ಮೂಲಭೂತ ಹಕ್ಕುಗಳ ಬಗ್ಗೆ ಯಾರೂ ಪ್ರಶ್ನಿಸಿರಲಿಲ್ಲ. ಆದರೆ ಇದು 2019, ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು ಸುಲಭದ ಮಾತಲ್ಲ. ಅದನ್ನು ವಿರೋಧಿಸಿ ಧ್ವನಿ ಎತ್ತುವ ಮಂದಿ ಸಾಕಷ್ಟಿದ್ದಾರೆ. ಸರ್ಕಾರಿ ಹುದ್ದೆಯಲಿದ್ದರೆ ಕಾಶ್ಮೀರಿಯರ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವ ಹಕ್ಕು ನಮಗಿರುವುದಿಲ್ಲ. ನಾವು ವಿರೋಧಿಸಿದರೆ ಕ್ರಮ ತೆಗೆದುಕೊಳ್ಳುತ್ತಾರೆ. ಹೀಗಾಗಿ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಒಂದು ವೇಳೆ ನಾನು ಪತ್ರಿಕೆಯನ್ನು ಶುರುಮಾಡಿದರೆ. ನಾಳೆಯ ನನ್ನ ಶೀರ್ಷಿಕೆ ಕೇವಲ 20 ಸಂಖ್ಯೆಗೆ ಸೀಮಿತವಾಗಿರುತ್ತದೆ. ಯಾಕೆಂದರೆ ಕಾಶ್ಮೀರಿಯರು 20 ದಿನಗಳಿಂದ ನಿರ್ಬಂಧಗಳ ನಡುವೆ ಜೀವನ ನಡೆಸುತ್ತಿದ್ದಾರೆ ಎಂದರು.

    ಹಾಗೆಯೇ ಮುಂದಿನ ಜೀವನದ ಬಗ್ಗೆ ಯೋಚಿಸಿಲ್ಲ. ನಾನು ಕೇಂದ್ರದ ನಡೆ ವಿರುದ್ಧ ಹೆಚ್ಚೇನು ಹೋರಾಡಿಲ್ಲ, ಆದರೆ ಮುಂದಿನ 20 ವರ್ಷಗಳ ನಂತರ ಯಾರಾದರೂ ವಾಸ್ತವ ತುರ್ತು ಪರಿಸ್ಥಿತಿಯಲ್ಲಿ ನೀವೇನು ಮಾಡಿದ್ದೀರಾ? ಎಂದು ಪ್ರಶ್ನಿಸಿದರೆ, ನಾನು ಆಗ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೆ ಎನ್ನುತ್ತೇನೆ ಎಂದು ಪ್ರತಿಕ್ರಿಯಿಸಿದರು.