Tag: Hyderabad

  • ಆನ್‌ಫೀಲ್ಡ್‌ನಲ್ಲಿ ರೈನಾ ನಡೆಗೆ ನೆಟ್ಟಿಗರ ಮೆಚ್ಚುಗೆ

    ಆನ್‌ಫೀಲ್ಡ್‌ನಲ್ಲಿ ರೈನಾ ನಡೆಗೆ ನೆಟ್ಟಿಗರ ಮೆಚ್ಚುಗೆ

    ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ರಿಷಬ್ ಪಂತ್ ಶೂ ಲೇಸ್ ಕಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ ರಿಷಬ್ ಎದುರಾಳಿಗಳಿಗೆ ತಮ್ಮ ಬ್ಯಾಟಿಂಗ್‍ನಿಂದ ಕಾಡಿದ್ದರು. ಚೆನ್ನೈ ವಿರುದ್ಧದ ನಿರ್ಣಯಕ ಪಂದ್ಯದಲ್ಲೂ ಕೂಡ ರಿಷಬ್ ಏಕಾಂಗಿ ಹೋರಾಟ ನಡೆಸಿದ್ದರು. ಈ ಹಂತದಲ್ಲಿ ರಿಷಬ್‍ರ ಶೂ ಲೇಸ್ ಕಳಚಿಕೊಂಡಿತ್ತು. ಇದನ್ನು ಕಂಡ ರೈನಾ ಪಂತ್ ಬಳಿ ಬಂದು ಶೂ ಲೇಸ್ ಕಟ್ಟಿದ್ದರು.

    ಈ ವಿಡಿಯೋವನ್ನು ಐಪಿಎಲ್ ಟ್ಟಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, ಕ್ರೀಡಾಸ್ಫೂರ್ತಿಯನ್ನು ಮೆರೆದ ರೈನಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಪಂದ್ಯದಲ್ಲೂ ಕ್ರಿಸ್‍ಗೆ ಬರುತ್ತಿದ್ದ ರೈನಾರನ್ನು ಅಡ್ಡಪಡಿಸಿ ಪಂತ್ ಕಾಲೆಳೆದಿದ್ದರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಇಬ್ಬರ ಆಟಗಾರರ ನಡುವೆ ಇರುವ ಬಾಂಧವ್ಯವನ್ನು ಮೆಚ್ಚಿ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

    ಇತ್ತ ಪಂದ್ಯದಲ್ಲಿ ಡೆಲ್ಲಿ ಸೋಲು ಕಂಡರೂ ಕೂಡ ಟೂರ್ನಿಯಲ್ಲಿ ಯುವ ಆಟಗಾರ ರಿಷಬ್ ಪಂತ್‍ರ ಬ್ಯಾಟಿಂಗ್ ಕುರಿತು ಹಲವು ಹಿರಿಯ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯ ಆಟಗಾರ ಸಂಜಯ್ ಮಂಜ್ರೇಕರ್ ಅವರು ಪಂತ್‍ರ ಗುಣಗಾನ ಮಾಡಿದ್ದು, ಪ್ರಸಕ್ತ ತಲೆಮಾರಿನ ಸೆಹ್ವಾಗ್ ಎಂದಿದ್ದಾರೆ. ಇತ್ತ ಸೆಹ್ವಾಗ್ ಕೂಡ ಪಂತ್‍ರನ್ನು ಹೊಗಳಿದ್ದು, ‘ಗೇಮ್ ಚೇಂಜಿಂಗ್’ ಆಟಗಾರ ಎಂದು ಕರೆದಿದ್ದಾರೆ.

    https://twitter.com/Rastogi3Sapna/status/1126901981488996353

  • ಲಂಡನ್‍ನಲ್ಲಿ ಭಾರತದ ಪ್ರಜೆಯ ಬರ್ಬರ ಹತ್ಯೆ

    ಲಂಡನ್‍ನಲ್ಲಿ ಭಾರತದ ಪ್ರಜೆಯ ಬರ್ಬರ ಹತ್ಯೆ

    ಲಂಡನ್: ಹೈದರಾಬಾದ್ ಮೂಲದ ವ್ಯಕ್ತಿಯನ್ನು ದುಷ್ಕರ್ಮಿಯೊಬ್ಬ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಲಂಡನ್‍ನಲ್ಲಿ ನಡೆದಿದೆ.

    ಮೊಹಮ್ಮದ್ ನದೀಮುದ್ದೀನ್ ಕೊಲೆಯಾದ ವ್ಯಕ್ತಿ. ನದೀಮುದ್ದೀನ್ ಅವರು ಲಂಡನ್‍ನ ಟೆಸ್ಕೋ ಸೂಪರ್ ಮಾರ್ಕೆಟ್‍ನ ಮಾಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನದೀಮುದ್ದೀನ್ ಕಳೆದ 6 ವರ್ಷದಿಂದ ಲಂಡನ್‍ನಲ್ಲಿ ವಾಸಿಸುತ್ತಿದ್ದರು. ಕಳೆದ 1 ತಿಂಗಳಷ್ಟೇ ಅವರ ಪತ್ನಿ ಲಂಡನ್‍ಗೆ ಆಗಮಿಸಿದ್ದರು.

    ನದೀಮುದ್ದೀನ್ ಬುಧವಾರ ಮನೆಗೆ ಹಿಂತಿರುಗಲಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ಮಾಲ್ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಮಾಲ್ ಸಿಬ್ಬಂದಿ ಕೂಡ ಹುಡುಕಾಟ ನಡೆಸಿದಾಗ ನದೀಮುದ್ದೀನ್ ಪಾರ್ಕಿಂಗ್‍ನಲ್ಲಿ ಶವವಾಗಿ ಪತ್ತೆಯಾಗಿದ್ದರು.

    ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ ನದೀಮುದ್ದೀನ್ ಸಹದ್ಯೋಗಿಗಳ ವಿಚಾರಣೆ ನಡೆಸುತ್ತಿದ್ದಾರೆ. ನದೀಮುದ್ದೀನ್ ಅವರನ್ನು ಏಷ್ಯಾ ಮೂಲದ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಅವರ ಸ್ನೇಹಿತ ಫಹೀಂ ಖುರೇಶಿ ತಿಳಿಸಿದ್ದಾರೆ.

    ಹೈದರಾಬಾದ್‍ನಲ್ಲಿರುವ ನದೀಮುದ್ದೀನ್ ಪೋಷಕರಿಗೆ ಈ ವಿಷಯ ತಿಳಿಸಲಾಗಿದೆ. ನದೀಮುದ್ದೀನ್ ಮೃತದೇಹ ತರಲು ಅವರ ಪೋಷಕರು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಸಹಾಯ ಕೇಳಿದ್ದಾರೆ.

  • ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಹೈದರಾಬಾದ್: ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ ಡೆಲ್ಲಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿತ್ತು. ಪಂದ್ಯದಲ್ಲಿ ತಂಡದ ಸೋಲುತ್ತಿದಂತೆ ತಂಡದ ಕೋಚ್ ಟಾಮ್ ಮೂಡಿ ಕ್ರೀಡಾಂಗಣದಲ್ಲೇ ದುಃಖದಿಂದ ಅತ್ತಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಬಳಗ ರಿಷಬ್ ಪಂತ್, ಪೃಥ್ವಿ ಶಾರ ಅಬ್ಬರ ಬ್ಯಾಟಿಂಗ್ ನಿಂದ 2 ವಿಕೆಟ್ ಅಂತರದಲ್ಲಿ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ತಮ್ಮ ಮುಂದಿನ ಜರ್ನಿಯನ್ನು ಜೀವಂತವಾಗಿರಿಸಿ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು.

    2016ರ ಟೈಟಲ್ ಗೆದ್ದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ 2ನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದು, 2017ರಲ್ಲೂ ಪ್ಲೇ ಆಪ್ ಹಂತದಲ್ಲಿ ಚೆನ್ನೈ ವಿರುದ್ಧ ಸೋತು ತಂಡ ಟೂರ್ನಿಯಿಂದ ನಿರ್ಗಮಿಸಿತ್ತು. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಡೆಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಂತಸದಿಂದ ಸಂಭ್ರಮಿಸುತ್ತಿದ್ದರೆ, ಇತ್ತ ಡಗೌಟ್ ನಲ್ಲಿ ಕುಳಿತ್ತಿದ್ದ ಟಾಮ್ ಮೂಡಿ ಮಾತ್ರ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

  • ಪತಿ ಮನೆಯಿಂದ ಚಿಕ್ಕಪ್ಪನ ಮನೆಗೆ ಹೋಗಿ ಮಹಿಳೆ ಆತ್ಮಹತ್ಯೆ

    ಪತಿ ಮನೆಯಿಂದ ಚಿಕ್ಕಪ್ಪನ ಮನೆಗೆ ಹೋಗಿ ಮಹಿಳೆ ಆತ್ಮಹತ್ಯೆ

    ಹೈದರಾಬಾದ್: 32 ವರ್ಷದ ಎನ್‌ಆರ್‌ಐ ಮಹಿಳೆ ಅತ್ತೆ-ಮಾವನ ಕಿರುಕುಳ ತಾಳಲಾರದೇ ಚಿಕ್ಕಪ್ಪನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

    ಜುವ್ವಾಡಿ ಶ್ರೀಲತಾ ಆತ್ಮಹತ್ಯೆಗೆ ಶರಣರಾದ ಎನ್‌ಆರ್‌ಐ ಮಹಿಳೆ. ಪತಿಯ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ. ಪತಿ ಜುವ್ವಾಡಿ ವಂಶಿರಾವ್ ಈಕೆಯನ್ನು ಬಿಟ್ಟು ಹೈದರಾಬಾದ್‍ನಿಂದ ಇಂಗ್ಲೆಂಡ್‍ಗೆ ಹೋಗಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

    ಹೈದರಾಬಾದ್‍ನ ರಾಮಂತಪುರದಲ್ಲಿರುವ ಅತ್ತೆ-ಮಾವ ನಿವಾಸಕ್ಕೆ ಸಂಬಂಧಿಕರು ನ್ಯಾಯ ಕೇಳಲು ಮೃತದೇಹವನ್ನು ತಂದಿದ್ದರು. ಆದರೆ ಅವರು ಬರುವ ಬಗ್ಗೆ ಮೊದಲೇ ತಿಳಿದು ಎರಡೂ ಮನೆಯನ್ನು ಲಾಕ್ ಮಾಡಿಕೊಂಡು ಅಲ್ಲಿಂದ ಓಡಿಹೋಗಿದ್ದರು. ನಂತರ ಸಂಬಂಧಿಕರು ಅವರ ಮನೆಯ ಮುಂದೆ ಮೃತದೇಹವಿಟ್ಟು ನ್ಯಾಯಸಿಗಬೇಕು ಎಂದು ಪ್ರತಿಭಟನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಶ್ರೀಲತಾ ಅವರು 2011ರಲ್ಲಿ ವಂಶಿರಾವ್‍ನನ್ನು ಮದುವೆಯಾಗಿದ್ದರು. ನಂತರ 2012ರಲ್ಲಿ ಇಂಗ್ಲೆಂಡ್‍ಗೆ ಹೋಗಿ ವಾಸಿಸುತ್ತಿದ್ದರು. ಮದುವೆಯಾಗಿ ಹೆಣ್ಣು ಮಗುವಾದ ಬಳಿಕ ವಂಶಿರಾವ್ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈ ಬಗ್ಗೆ ಶ್ರೀಲತಾ ತಮ್ಮ ತಂದೆ ಶ್ರೀನಿವಾಸ್ ರಾವ್ ಮತ್ತು ತಾಯಿ ಚಂದ್ರಕಲಾ ಬಳಿ ಹೇಳಿಕೊಂಡಿದ್ದಾರೆ. ಆದರೆ ಪೋಷಕರು ಮಗಳಿಗೆ ಸಹಾಯ ಮಾಡಲು ಸಾಧ್ಯವಾಗದ ಕಾರಣ ದುಃಖದಲ್ಲಿಯೇ ಮೃತಪಟ್ಟಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

    ಶ್ರೀಲತಾ ತಾಯಿ 2016ರಲ್ಲಿ ನಿಧನರಾದಾಗ ಆಕೆ ಭಾರತಕ್ಕೆ ಬಂದಿದ್ದರು. ಆದರೆ ಒಂದು ತಿಂಗಳೊಳಗೆ ಇಂಗ್ಲೆಂಡ್‍ಗೆ ವಾಪಸ್ ಹೋಗಿದ್ದರು. ಈ ವೇಳೆ ಆಕೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆದರೆ ಈ ಬಗ್ಗೆ ದೂರು ದಾಖಲಾದರೆ ಪತಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದೆಂದು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ.

    ಮೃತ ಶ್ರೀಲತಾ, ವಂಶಿ ಮತ್ತು ಮಗು ಮೂವರು 2018ರಲ್ಲಿ ಹೈದರಾಬಾದ್‍ಗೆ ಬಂದಿದ್ದರು. ಆಗ ವಂಶಿರಾವ್ ಶ್ರೀಲತಾರನ್ನು ತನ್ನ ಪೋಷಕರೊಂದಿಗೆ ಇರಲು ಹೇಳಿ ಬಿಟ್ಟು ಹೋಗಿದ್ದಾನೆ. ಇದೇ ವೇಳೆ ಅತ್ತೆ-ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಆದರೆ ಪತಿಯಿಂದಲೂ ಯಾವುದೇ ಬೆಂಬಲವಿಲ್ಲದೆ ಶ್ರೀಲತಾ ಖಿನ್ನತೆಗೆ ಜಾರಿದ್ದರು. ಸಂಬಂಧಿಕರು ಮಧ್ಯೆ ಪ್ರವೇಶಿಸಿ ಇವರ ಸಂಬಂಧ ಸರಿ ಮಾಡಲು ಪ್ರಯತ್ನಿಸಿದ್ದರು. ಆದರೂ ಏನು ಪ್ರಯೋಜವಾಗಿಲ್ಲ. ಪತಿ ಭಾರತದಲ್ಲಿ ಶ್ರೀಲತಾ ಮತ್ತು ಮಗಳನ್ನು ಬಿಟ್ಟು ಇಂಗ್ಲೆಂಡ್‍ಗೆ ವಾಪಸ್ ಹೋಗಿದ್ದ.

    ಇತ್ತ ಅತ್ತೆ-ಮಾವ ಕಿರುಕುಳ ತಾಳಲಾರದೇ ಹಾಗೂ ಪತಿಯನ್ನು ಬಿಟ್ಟು ಒಂಟಿಯಾಗಿರಲು ಇಷ್ಟವಿಲ್ಲದೆ ಮುಂಬೈಗೆ ತೆರಳಿ ತನ್ನ ತಾಯಿಯ ಚಿಕ್ಕಪ್ಪ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

  • ಸಿಬ್ಬಂದಿಯನ್ನು ಯಾಮಾರಿಸಿ ಕ್ಯಾಶ್ ವ್ಯಾನ್‍ನಿಂದಲೇ ಬರೋಬ್ಬರಿ 58 ಲಕ್ಷ ರೂ. ದೋಚಿದ್ರು!

    ಸಿಬ್ಬಂದಿಯನ್ನು ಯಾಮಾರಿಸಿ ಕ್ಯಾಶ್ ವ್ಯಾನ್‍ನಿಂದಲೇ ಬರೋಬ್ಬರಿ 58 ಲಕ್ಷ ರೂ. ದೋಚಿದ್ರು!

    ಹೈದರಾಬಾದ್: ಎಟಿಎಂಗೆ ಹಾಕಲು ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಬರೋಬ್ಬರಿ 58 ಲಕ್ಷ ರೂ. ಹಣವನ್ನು ಖದೀಮರ ಗುಂಪೊಂದು ಬ್ಯಾಂಕ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಗಮನವನ್ನು ಬೇರೆಡೆಗೆ ತಿರುಗಿಸಿ ದರೋಡೆ ಮಾಡಿದೆ.

    ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಗಮನವನ್ನು ತಿರುಗಿಸುವ ಮೂಲಕ ಸುಮಾರು 58 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಮಂಗಳವಾರ ವನಸ್ಥಳಿಪುರಂ ಪ್ರದೇಶದಲ್ಲಿನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣವನ್ನು ತುಂಬಲು ಬ್ಯಾಂಕ್ ಸಿಬ್ಬಂದಿ ಹೋಗುತ್ತಿದ್ದರು. ಈ ವೇಳೆ ಚಾಲಾಕಿ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.

    ವಾಹನದ ಇನ್ನೊಂದು ಕಡೆಯಲ್ಲಿ ಹಣ ಬಿದ್ದಿದೆ ಎಂದು ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿಯ ಗಮನವನ್ನು ಖದೀಮರ ತಂಡ ಅತ್ತಕಡೆ ತಿರುಗಿಸಿದೆ. ಬಳಿಕ ಅವರ ಕಣ್ತಪ್ಪಿಸಿ ವಾಹನದಿಂದ 58 ಲಕ್ಷ ರೂ. ತುಂಬಿದ್ದ ಬಾಕ್ಸ್ ನ್ನು ಕದ್ದು ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಲ್‍ಬಿ ನಗರ ಡಿಸಿಪಿ ಸುನ್ಪ್ರೀತ್ ಸಿಂಗ್, “ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 5ರಿಂದ 6 ಮಂದಿ ಖದೀಮರು ಹಣವನ್ನು ಕೊಂಡೊಯ್ಯುತ್ತಿದ್ದ ಭದ್ರತಾ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಯಾಮಾರಿಸಿ, ವಾಹನದಿಂದ 58 ಲಕ್ಷ ರೂಪಾಯಿಗಳು ತಿಂಬಿಟ್ಟಿದ್ದ ಪೆಟ್ಟಿಗೆಯನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದರು.

    ಈ ಘಟನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ನಾವು ಘಟನೆ ನಡೆದಿದ್ದ ಸ್ಥಳದ ಹತ್ತಿರದಲ್ಲಿದ್ದ ಸಿ.ಸಿ.ಟಿ.ವಿ ದೃಶ್ಯಗಳನ್ನು ಕೂಡ ಪರಿಶೀಲಿಸಿದ್ದೇವೆ ಎಂದು ಸಿಂಗ್ ಹೇಳಿದರು.

  • ಅನುಮಾನಾಸ್ಪದವಾಗಿ ಅತ್ತೆ, ಸೊಸೆ ಹತ್ಯೆ

    ಅನುಮಾನಾಸ್ಪದವಾಗಿ ಅತ್ತೆ, ಸೊಸೆ ಹತ್ಯೆ

    ಹೈದರಾಬಾದ್: ಮಹಿಳೆ ಮತ್ತು ಆಕೆಯ ಸೊಸೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ಮೈಲಾರ್ ದೇವ್ಪಲ್ಲಿ ಪ್ರದೇಶದಲ್ಲಿ ನಡೆದಿದೆ.

    ಮೃತರನ್ನು ನಬೀನಾ ಬೇಗಮ್ (55) ಮತ್ತು ಅವರ ಸೊಸೆ ತಯಾಬ್(25) ಎಂದು ಗುರುತಿಸಲಾಗಿದೆ. ಇವರು ತಮ್ಮ ನಿವಾಸದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋಮವಾರ ರಾತ್ರಿ ಇಬ್ಬರು ಮಹಿಳೆಯರನ್ನು ಅವರ ಮನೆಯಲ್ಲಿ ಕೊಲೆ ಮಾಡಲಾಗಿದೆ ಎಂದು ನಮಗೆ ಮಾಹಿತಿ ಬಂದಿತ್ತು. ತಕ್ಷಣ ನಾವು ಘಟನೆ ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಪರಿಚಿತ ವ್ಯಕ್ತಿಗಳು ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಷ್ಟೇ ಅಲ್ಲದೇ ಕೊಲೆಯಾದ ಸ್ಥಳದಲ್ಲಿ ಕೆಲವು ಫಿಂಗರ್ ಪ್ರಿಂಟ್(ಬೆರಳಚ್ಚು)ಗಳು ಕಂಡು ಬಂದಿದೆ. ಮಹಿಳೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ನಾವು ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ‘ಸೈರಾ’ ಶೂಟಿಂಗ್ ಸೆಟ್‍ನಲ್ಲಿ ಭಾರೀ ಅಗ್ನಿ ಅವಘಡ

    ‘ಸೈರಾ’ ಶೂಟಿಂಗ್ ಸೆಟ್‍ನಲ್ಲಿ ಭಾರೀ ಅಗ್ನಿ ಅವಘಡ

    ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಸೈರಾ’ ಶೂಟಿಂಗ್ ಸೆಟ್‍ನಲ್ಲಿ ಭಾರೀ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

    ಶುಕ್ರವಾರ ಮುಂಜಾನೆ ಈ ಅಗ್ನಿ ಅವಘಡ ಸಂಭವಿಸಿದೆ. ಹೈದರಾಬಾದಿನ ಕೊಕಾಪೇಟ ಪ್ರದೇಶದ ನಿರ್ಮಾಪಕ ಅಲ್ಲು ಅರವಿಂದ್ ಫಾರ್ಮ್ ಹೌಸಿನಲ್ಲಿ ನಿರ್ಮಿಸಿದ್ದ ವಿಶೇಷ ಸೆಟ್ ನಲ್ಲಿ ಶೂಟಿಂಗ್ ನಡೆಯುತ್ತಿತ್ತು.

    ಸ್ವತಂತ್ರ್ಯ ಹೋರಾಟಗಾರ ನರಸಿಂಹ ರೆಡ್ಡಿ ಜೀವನದ ಕುರಿತು ನಿರ್ಮಾಣವಾಗುತ್ತಿರುವ ಚಿತ್ರವಾದ ಪರಿಣಾಮ ಬೃಹತ್ ಸೆಟ್ ನಿರ್ಮಾಣ ಮಾಡಿ ಶೂಟಿಂಗ್ ನಡೆಸಲಾಗುತ್ತಿತ್ತು. ಅಗ್ನಿ ಪ್ರಮಾದದ ಹಿನ್ನೆಲೆಯಲ್ಲಿ ಸುಮಾರು 2 ಕೋಟಿ ರೂ. ನಷ್ಟ ಸಂಭವಿಸಿಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅಗ್ನಿ ಪ್ರಮಾದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧವಿಸಿ ಬೆಂಕಿಯನ್ನ ನಿಯಂತ್ರಿಸಿದ್ದಾರೆ.

    ಚಿತ್ರದಲ್ಲಿ ನಟ ಚಿರಂಜೀವಿ ಸೈರಾ ನರಸಿಂಹರೆಡ್ಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ಪುತ್ರ ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ಅವರ ಸ್ವತಃ ಕೌಣಿದಲ ಪ್ರೋಡಕ್ಷನ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ಚಿರಂಜೀವಿ ಅವರ ಕನಸಿನ ಪ್ರಾಜೆಕ್ಟ್ ಇದಾಗಿದೆ.

  • 4ನೇ ಮಗುವಿನ ನಿರೀಕ್ಷೆಯಲ್ಲಿ ನಟ -ನೆಟ್ಟಿಗರಿಂದ ದಂಪತಿ ಟ್ರೋಲ್

    4ನೇ ಮಗುವಿನ ನಿರೀಕ್ಷೆಯಲ್ಲಿ ನಟ -ನೆಟ್ಟಿಗರಿಂದ ದಂಪತಿ ಟ್ರೋಲ್

    ಹೈದರಾಬಾದ್: ಟಾಲಿವುಡ್‍ನ ಖ್ಯಾತ ನಟ ಮೋಹನ್ ಬಾಬು ಅವರ ಪುತ್ರ ವಿಷ್ಣು ಮಂಚು ತಮ್ಮ ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಬಗ್ಗೆ ಅವರೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

    ನಟ ವಿಷ್ಣು ಮಂಚು ಮತ್ತು ವಿರಾನಿಕ ರೆಡ್ಡಿ ದಂಪತಿ ಮತ್ತೊಂದು ಮಗುವಿಗೆ ನಿರೀಕ್ಷೆಯಲ್ಲಿರುವ ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಈಗಾಗಲೇ ಮೂರು ಮಕ್ಕಳಿದ್ದಾರೆ. ಈ ಹಿನ್ನೆಲೆಯಲ್ಲಿ ನೆಟ್ಟಿಗರು ‘ಫ್ಯಾಮಿಲಿ ಪ್ಲಾನಿಂಗ್ ಇಲ್ವಾ’ ಎಂದು ದಂಪತಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

    ”ಒಂದು ವಿಶೇಷವಾದ ಸ್ಥಳದಲ್ಲಿ ಸ್ಪೆಷಲ್ ವಿಚಾರವನ್ನು ಹೇಳುತ್ತಿದ್ದೇನೆ. ಇದು ವಿರಾನಿಕ ಅವರ ಹುಟ್ಟೂರಾಗಿದ್ದು, ಇಲ್ಲಿ ನಾವು ಹೇಳುವುದೇನಂದರೆ, ಅರಿ, ವಿವಿ ಮತ್ತು ಅವಿರಾಮ್ ಜೊತೆಗೆ ನಾಲ್ಕನೇ ಏಂಜಲ್ ಬರಲಿದೆ” ಎಂದು ಟ್ವೀಟ್ ಮಾಡಿ ಫೋಟೋ ಹಾಕುವ ಮೂಲಕ ಅಧಿಕೃತವಾಗಿ ವಿಷ್ಣು ತಿಳಿಸಿದ್ದಾರೆ. ವಿಷ್ಣು ಅವರು ಪೋಸ್ಟ್ ಮಾಡಿದ ತಕ್ಷಣ ಅನೇಕರು ಶುಭಕೋರಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಫನ್ನಿ ಫನ್ನಿಯಾಗಿ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

    ನಟ ವಿಷ್ಣು ಮಂಚು ಮತ್ತು ವಿರಾನಿಕ ರೆಡ್ಡಿ 2009ರಲ್ಲಿ ಮದುವೆಯಾಗಿದ್ದರು. ನಂತರ 2011ರಲ್ಲಿ ವಿರಾನಿಕ, ಅರಿಯಾನ ಮತ್ತು ವಿವಿಯಾನ ಎಂಬ ಇಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. 2018 ರಲ್ಲಿ ಅವಿರಾಮ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಇವರ ಜೊತೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಮ್ಮ ಸಂತಸವನ್ನು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರು ಈ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.

  • ಅನೈತಿಕ ಸಂಬಂಧಕ್ಕೆ ಮಹಿಳಾ ಪೇದೆ ಬಲಿ!

    ಅನೈತಿಕ ಸಂಬಂಧಕ್ಕೆ ಮಹಿಳಾ ಪೇದೆ ಬಲಿ!

    ಹೈದರಾಬಾದ್: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳಾ ಪೇದೆಯನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಮಂದಾರಿಕಾ ಮೃತ ಮಹಿಳಾ ಪೊಲೀಸ್ ಕಾನ್ಸ್ಟೇಬಲ್. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂಗರೆಡ್ಡಿ ಜಿಲ್ಲೆಯ ವೆಂಕಟಪುರಂ ಗ್ರಾಮದವರಾಗಿದ್ದು, ಕುತ್ತಿಗೆ ಹಿಸುಕಿ ಆರೋಪಿ ಪ್ರಕಾಶ್ ಕೊಲೆ ಮಾಡಿದ್ದಾನೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ಮಹಿಳಾ ಪೇದೆಯ ತಂದೆ ಸದಾನಂದಂ ಅವರು ಮಂಗಳವಾರ ಪೊಲೀಸ್ ಠಾಣೆಗೆ ಹೋಗಿ ಮಗಳು ಕರ್ತವ್ಯ ಮುಗಿದ ನಂತರ ಮನೆಗೆ ಹಿಂದಿರುಗಲಿಲ್ಲ ಎಂದು ವಿಚಾರಣೆ ಮಾಡಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪ್ರಕಾಶ್ ಮಂದಾರಿಕಾರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಏನಿದು ಪ್ರಕರಣ?
    ಕೆಲವು ತಿಂಗಳುಗಳ ಹಿಂದೆ ಸಂಗರೆಡ್ಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಆರೋಪಿ ಪ್ರಕಾಶ್ ಮತ್ತು ಮಂದಾರಿಕಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈಗಾಗಲೇ ಪ್ರಕಾಶ್‍ಗೆ ಮದುವೆಯಾಗಿತ್ತು. ಇವರಿಬ್ಬರ ಅನೈತಿಕ ಸಂಬಂಧ ಎರಡು ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿದ ನಂತರವೂ ಮುಂದುವರಿದಿತ್ತು.

    ಇತ್ತೀಚೆಗೆ ಮಂದಾರಿಕಾ ಪ್ರಕಾಶ್ ನನ್ನು ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದರು. ಜೊತೆಗೆ ಈ ವಿಚಾರದ ಬಗ್ಗೆ ಇಬ್ಬರ ನಡುವೆ ಜಗಳ ನಡೆಯುತಿತ್ತು. ಇದರಿಂದ ಬೇಸತ್ತ ಆರೋಪಿ ಪ್ರಕಾಶ್ ಕೊಲೆ ಮಾಡಲು ಪ್ಲಾನ್ ಮಾಡಿ ಸೋಮವಾರ ಕಾರಿನಲ್ಲಿ ಹೊರಗಡೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

    ಸದ್ಯಕ್ಕೆ ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕಾಶ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

    ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

    ಹೈದರಾಬಾದ್: ತೆಲಂಗಾಣದ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಕಳೆದ 10 ದಿನಗಳಲ್ಲಿ 23 ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಮೌಲ್ಯಮಾಪನದಲ್ಲಿ ಶಿಕ್ಷಕಿ ಮಾಡಿದ ಎಡವಟ್ಟೊಂದು ಬೆಳಕಿಗೆ ಬಂದಿದೆ.

    ತೆಲುಗು ಭಾಷೆ ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ ಶೂನ್ಯ ಅಂಕ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಲೋಪದ ಬಗ್ಗೆ ಮತ್ತೊಬ್ಬ ಮೌಲ್ಯಮಾಪಕ ಪರಿಶೀಲನೆ ನಡೆಸಬೇಕಿತ್ತು. ಆದರೆ ಆತ ಕೂಡ ನಿರ್ಲಕ್ಷ್ಯ ತೋರಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಮೌಲ್ಯಮಾಪಕರನ್ನು ಅಮಾನತುಗೊಳಿಸಲಾಗಿದೆ.

    12 ನೇ ತರಗತಿ ವಿದ್ಯಾರ್ಥಿಯ ತೆಲುಗು ಪತ್ರಿಕೆಯ ಮೌಲ್ಯಮಾಪನ ಮಾಡುವಾಗ 99 ಅಂಕದ ಬದಲಿಗೆ ಶೂನ್ಯ ಅಂಕಗಳನ್ನು ನೀಡಿದ್ದ ಖಾಸಗಿ ಶಾಲೆಯ ಶಿಕ್ಷಕಿಯ ಮೇಲೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಶಿಕ್ಷಕಿಯನ್ನು ಶಾಲೆಯ ಆಡಳಿತ ಮಂಡಳಿ ವಜಾ ಮಾಡಿದೆ.

    ಪಿಯು ಮಂಡಳಿ ಏಪ್ರಿಲ್ 18 ರಂದು ಫಲಿತಾಂಶವನ್ನು ಪ್ರಕಟಗೊಳಿಸಿತ್ತು. ಪರೀಕ್ಷೆಗಳಲ್ಲಿ ಫೇಲ್ ಆದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆಗಳು ಕೂಡ ಎಲ್ಲೆಡೆ ನಡೆದಿತ್ತು. ಅಲ್ಲದೇ ಫೇಲ್ ಆಗಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಉಚಿತವಾಗಿ ಮರು-ಮೌಲ್ಯಮಾಪನವನ್ನು ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

    ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ, ಪಿಯು ಬೋರ್ಡ್ ಮತ್ತು ಫಲಿತಾಂಶದ ಎಡವಟ್ಟಿಗೆ ಕಾರಣವಾದ ಐಟಿ ಕಂಪನಿ ಗ್ಲೋಬರೆನಾ ಟೆಕ್ನಾಲಜೀಸ್, ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.