Tag: Hyderabad

  • Viral Video: ರಸ್ತೆಯಲ್ಲೇ 1 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಸುಟ್ಟು ಹಾಕಿದ್ರು!

    Viral Video: ರಸ್ತೆಯಲ್ಲೇ 1 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಸುಟ್ಟು ಹಾಕಿದ್ರು!

    ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ನಡುರಸ್ತೆಯಲ್ಲಿಯೇ ವಾಹನಗಳು ಬೆಂಕಿಗಾಹುತಿಯಾಗುವ ಪ್ರಕರಣಗಳು ನಡೆಯುತ್ತವೆ. ಆದರೆ ಹೈದರಾಬಾದ್‌ನಲ್ಲಿ ಮಾತ್ರ 1 ಕೋಟಿ ಮೌಲ್ಯದ ಕಾರಿಗೆ ರಸ್ತೆಯಲ್ಲಿಯೇ ಬೆಂಕಿ ಹಚ್ಚಿರುವ ವಿಚಿತ್ರ ಘಟನೆಯೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಹೈದರಾಬಾದ್ ಹೊರವಲಯದ ಮಾಮಿಡಿಪಲ್ಲಿ ರಸ್ತೆಯಲ್ಲಿ ಏಪ್ರಿಲ್‌ 13 ರಂದು ನಡೆದಿದೆ. ಕಾರಿಗೆ ಬೆಂಕಿಯಿಟ್ಟವನನ್ನು ಅಹ್ಮದ್‌ ಎಂದು ಗುರುತಿಸಲಾಗಿದೆ. ಸದ್ಯ ರಸ್ತೆಯಲ್ಲಿಯೇ 1 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ (Lamborghini) ಸ್ಪೋರ್ಟ್ಸ್‌ ಕಾರು (Luxury Sports Car) ಧಗಧಗಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ

    ನಡೆದಿದ್ದೇನು..?: ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟಗಾರ ನೀರಜ್ ಎಂಬಾತ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್‌ ಕಾರನ್ನು ಮಾರಲು ನಿರ್ಧರಿಸಿದ್ದರು. ಹೀಗಾಗಿ ಅವರು ತನ್ನ ಸ್ನೇಹಿತರಿಗೆ ಖರೀದಿದಾರರನ್ನು ಹುಡುಕುವಂತೆ ಹೇಳಿದ್ದರು. ಅಂತೆಯೇ ಸ್ನೇಹಿತ ಅಮನ್‌ ಮತ್ತೊಬ್ಬ ಸ್ನೇಹಿತನ ಜೊತೆ ಅಹ್ಮದ್‌ ಎಂಬಾತನಿಗೆ ಕಾರು ತೋರಿಸಲೆಂದು ತೆಗೆದುಕೊಂಡು ಹೋಗಿದ್ದನು.

    ಕಾರು ಖರೀದಿ ವಿಚಾರದ ಕುರಿತು ಅಮನ್‌ ಸ್ನೇಹಿತ ಹಾಗೂ ಅಹ್ಮದ್ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಇಬ್ಬರ ನಡುವಿನ ಹಣದ ಚರ್ಚೆ ವಿಕೋಪಕ್ಕೆ ಹೋಗಿದೆ. ಆಗ ಇಬ್ಬರನ್ನು ಸಮಾಧಾನಪಡಿಸಲು ಅಮನ್ ಮುಂದಾಗಿದ್ದಾರೆ. ಆದರೆ‌ ಮಾತಿನ ಚಕಮಕಿ ತಾರಕ್ಕೇರಿ ಗುಂಪೊಂದು ಅಮನ್ ನನ್ನು ತಳ್ಳಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ ಎಂಬುದಾಗಿ ಆರೋಪಿಸಲಾಗಿದೆ.

    ಸದ್ಯ ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ನೀರಜ್ ಸ್ಥಳಿಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಮದುವೆ ನಂತರ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ನಟಿ ರಕುಲ್

    ಮದುವೆ ನಂತರ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ನಟಿ ರಕುಲ್

    ಗಾಗಲೇ ಅನೇಕ ನಟ ನಟಿಯರು ನಟನೆಯ ಜೊತೆ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಅನೇಕರು ಹೋಟೆಲ್ (Hotel) ಉದ್ಯಮದತ್ತ ಮುಖ ಮಾಡಿದ್ದಾರೆ. ಆ ಸಾಲಿಗೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಸೇರಿಕೊಂಡಿದ್ದಾರೆ. ಮದುವೆ ನಂತರ ಅವರು ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.

    ಏಪ್ರಿಲ್ 16ರಿಂದ ರಕುಲ್ ಅವರ ಹೋಟೆಲ್ ಹೈದರಾಬಾದ್ (Hyderabad) ನಲ್ಲಿ ಆರಂಭವಾಗಲಿದ್ದು, ಆ ರೆಸ್ಟೋರೆಂಟ್ ಗೆ ಆರಂಭಮ್ ಎಂದು ಹೆಸರಿಟ್ಟಿದ್ದಾರೆ. ಹೋಟೆಲ್ ಗಿಂತ ಮೊದಲು ಅವರು ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ಜಿಮ್ ಕೂಡ ಹೊಂದಿದ್ದಾರೆ.

    ಇತ್ತೀಚೆಗಷ್ಟೇ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ (Jackky Bhagnani) ಜೋಡಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. 5 ವರ್ಷಗಳ ಡೇಟಿಂಗ್‌ ನಂತರ ಮದುವೆಯ ಮುದ್ರೆ ಒತ್ತಿದ್ದರು.

     

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದು, ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಕುಲ್ ಶೇರ್ ಮಾಡಿದ್ದರು. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಕುಲ್ ದಂಪತಿ ಮಿಂಚಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಈ ಜೋಡಿಗೆ ಶುಭಾಶಯ ಕೋರಿದ್ದರು.

  • ಓವೈಸಿ ವಿರುದ್ಧ ಸ್ಪರ್ಧಿಸ್ತಿರೋ ಬಿಜೆಪಿ ಅಭ್ಯರ್ಥಿಗೆ Y+ ಭದ್ರತೆ

    ಓವೈಸಿ ವಿರುದ್ಧ ಸ್ಪರ್ಧಿಸ್ತಿರೋ ಬಿಜೆಪಿ ಅಭ್ಯರ್ಥಿಗೆ Y+ ಭದ್ರತೆ

    ಹೈದರಾಬಾದ್:‌ ಇಲ್ಲಿನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ (Madhavi Latha) ಅವರಿಗೆ ವೈ+ ಭದ್ರತೆ ಒದಗಿಸಲಾಗಿದೆ. ಅವರು ಅಸಾದುದ್ದೀನ್ ಓವೈಸಿ (Asaduddin Owaisi) ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

    ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಬೆದರಿಕೆ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯವು ಮಾಧವಿ ಲತಾ ಅವರಿಗೆ ಈ ಭದ್ರತೆಯನ್ನು ನೀಡುತ್ತಿದೆ. ಮಾಹಿತಿ ಪ್ರಕಾರ, Y+ ಕೆಟಗರಿಯ ಭದ್ರತೆಗಾಗಿ 11 ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಇನ್ನು ವಿಐಪಿಯ ಮನೆಯ ಸುತ್ತಲೂ ಐದು ಸ್ಟಾಟಿಕ್ ಪೊಲೀಸ್ ಸಿಬ್ಬಂದಿ ಅವರ ಭದ್ರತೆಗಾಗಿ ಹಾಜರಿರುತ್ತಾರೆ. ಜೊತೆಗೆ 6 ಮಂದಿ ಪಿಎಸ್‌ಒಗಳು ಆಯಾ ವಿಐಪಿಗಳಿಗೆ ಮೂರು ಪಾಳಿಯಲ್ಲಿ ಭದ್ರತೆಯನ್ನು ಒದಗಿಸುತ್ತಾರೆ.

    ಮಾಧವಿ ಲತಾ ಯಾರು?: ಕೋಟಿ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಮಾಧವಿಯವರು ಹಿಂದುತ್ವದ ಪರವಾಗಿ ಧ್ವನಿ ಎತ್ತುತ್ತಾರೆ. ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಮಾಧವಿ ಲತಾ, ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಅವರು ಹೈದರಾಬಾದ್‌ನಲ್ಲಿ ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಲೋಪಾಮುದ್ರಾ ಚಾರಿಟೇಬಲ್ ಟ್ರಸ್ಟ್ ಮತ್ತು ಲತಾಮಾ ಫೌಂಡೇಶನ್ ಮುಖ್ಯಸ್ಥರಾಗಿದ್ದು, ಈ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳು ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ.

    ಬಿಜೆಪಿಯಿಂದ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿ ಕಣಕ್ಕೆ: ಇದೇ ಮೊದಲ ಬಾರಿಗೆ ಹೈದರಾಬಾದ್‌ನ ಮಹಿಳಾ ಅಭ್ಯರ್ಥಿಯ ಮೇಲೆ ಬಿಜೆಪಿ ತನ್ನ ಪಣತೊಟ್ಟಿದೆ. ಈ ಹಿಂದೆ ಪಕ್ಷವು ಭಾಗವತ್ ರಾವ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ಭಾಗವತ್ ಅವರು ಓವೈಸಿಯಿಂದ ಸುಮಾರು 3 ಲಕ್ಷ ಮತಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಬಾರಿ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸ್ಪರ್ಧೆಯನ್ನು ಕಠಿಣಗೊಳಿಸಲು ಪ್ರಯತ್ನಿಸಿದೆ.

  • ಕ್ಷಮಿಸಿ ದೀದಿ ನಾನು ಹೋಗ್ತಿದ್ದೀನಿ; ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    ಕ್ಷಮಿಸಿ ದೀದಿ ನಾನು ಹೋಗ್ತಿದ್ದೀನಿ; ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    – ಲೈಂಗಿಕ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿನಿ

    ಹೈದರಾಬಾದ್: ತಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದು, ಆ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕುತ್ತಿದ್ದರು ಎಂದು ಪೋಷಕರಿಗೆ ಸಂದೇಶ ಕಳಿಸಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು (Student) ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನಲ್ಲಿ (Visakhapatnam) ನಡೆದಿದೆ.

    ಮೃತ ವಿದ್ಯಾರ್ಥಿನಿ ವಿಶಾಖಪಟ್ಟಣಂನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಆಕೆಯ ಕುಟುಂಬವು ನೆರೆಯ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನೆಲೆಸಿದೆ ಎಂದು ಹೇಳಲಾಗಿದೆ.

    ಮೃತ ಬಾಲಕಿ ಕಳುಹಿಸಿದ್ದ ಸಂದೇಶದಲ್ಲಿ, ತಾನು ಕಾಲೇಜಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನನಗೆ ಕಿರುಕುಳ ನೀಡಿದ್ದನ್ನು ಫೋಟೋ ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಸಂಸ್ಥೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ಕಾಲೇಜಿನಲ್ಲಿ ಕೆಲ ಸಹ ವಿದ್ಯಾರ್ಥಿನಿಯರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾಳೆ. ಹಾಗಾಗಿ ತನ್ನ ಅಕ್ಕನನ್ನು ಉದ್ದೇಶಿಸಿ, ಕ್ಷಮಿಸಿ ದೀದಿ, ನಾನು ಹೋಗಬೇಕು ಎಂದು ಭಾವುಕವಾಗಿ ಬರೆದಿದ್ದಾಳೆ.

    ಶುಕ್ರವಾರ ಮಧ್ಯರಾತ್ರಿ 12:50ರ ಸುಮಾರಿಗೆ ಬಾಲಕಿ ಸಂದೇಶದಲ್ಲಿ, ಟೆನ್ಶನ್ ಆಗಬೇಡಿ, ನನ್ನ ಮಾತು ಕೇಳಿ, ನಾನು ಯಾಕೆ ಹೋಗುತ್ತಿದ್ದೇನೆ ಎಂದು ನಾನು ನಿಮಗೆ ಹೇಳಲಾರೆ. ನಾನು ಹೋದರೂ ನಿಮಗೆ ಅರ್ಥವಾಗುವುದಿಲ್ಲ. ದಯವಿಟ್ಟು ನನ್ನನ್ನು ಮರೆತುಬಿಡಿ, ನನ್ನನ್ನು ಕ್ಷಮಿಸಿ. ಅಮ್ಮ ಮತ್ತು ಅಪ್ಪ, ನೀವು ನನಗೆ ಜನ್ಮ ನೀಡಿ ನನ್ನನ್ನು ಬೆಳೆಸಿದ್ದಕ್ಕಾಗಿ ನಾನು ಕೃತಜ್ಞಳಾಗಿರಬೇಕು, ಆದರೆ ನನ್ನ ಅಧ್ಯಾಯವು ಕೊನೆಗೊಳ್ಳುತ್ತಿದೆ ಎಂದು ಆಕೆ ತೆಲುಗಿನಲ್ಲಿ ಬರೆದಿದ್ದಾಳೆ.

    ತನ್ನ ತಂದೆಯನ್ನೂ ಉದ್ದೇಶಿಸಿ ಸಂದೇಶ ಕಳುಹಿಸಿರುವ ವಿದ್ಯಾರ್ಥಿನಿ, ಲೈಂಗಿಕ ಕಿರುಕುಳಕ್ಕೊಳಗಾದ ಕಾರಣ ನಾನು ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ನನ್ನ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅದನ್ನಿಟ್ಟುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಯಾರಿಗೂ ಹೇಳಲು ಸಾಧ್ಯವಿಲ್ಲ. ಇದರಿಂದ ಕಾಲೇಜಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಪೊಲೀಸ್ ದೂರು ದಾಖಲಿಸಿದರೆ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅವರು ನನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಸಂದೇಶದಲ್ಲಿ ಹೇಳಿಕೊಂಡಿದ್ದಾಳೆ.

    ಕೂಡಲೇ ಕುಟುಂಬಸ್ಥರು ಫೋನ್ ಮೂಲಕ ಬಾಲಕಿಯನ್ನು ಸಂಪರ್ಕಿಸಿ ದುಡುಕದಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ರವಾನಿಸಿದೆ. ಅಷ್ಟರಲ್ಲಾಗಲೇ ಬಾಲಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಧ್ಯಾಪಕರು ಮತ್ತು ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮನೆಯಲ್ಲಿ ಬಾಯ್‌ಫ್ರೆಂಡ್‌ ಜೊತೆ ಇದ್ದ ಮಗಳನ್ನು ಹತ್ಯೆಗೈದ ತಾಯಿ

    ಮನೆಯಲ್ಲಿ ಬಾಯ್‌ಫ್ರೆಂಡ್‌ ಜೊತೆ ಇದ್ದ ಮಗಳನ್ನು ಹತ್ಯೆಗೈದ ತಾಯಿ

    ಹೈದರಾಬಾದ್‌: ಮಗಳು ಮನೆಯಲ್ಲಿ ತನ್ನ ಬಾಯ್‌ಫ್ರೆಂಡ್‌ ಜೊತೆ ಇರುವುದನ್ನು ಕಂಡು ಕೋಪಗೊಂಡ ತಾಯಿ, ಮಗಳನ್ನು ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಇಬ್ರಾಹಿಂಪಟ್ಟಣದ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗಳು ಭಾರ್ಗವಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಜಂಗಮ್ಮ ನೋಡಿದ್ದಾರೆ. ಇದರಿಂದ ಕೋಪಗೊಂಡು ತಾಯಿ ಕತ್ತು ಹಿಸುಕಿ ಮಗಳ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರ ಜಂಗಮ್ಮ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದರು. ಈ ವೇಳೆ ಅವರ ಪುತ್ರಿ ಭಾರ್ಗವಿ ತನ್ನ ಪ್ರಿಯಕರನ ಜೊತೆಯಲ್ಲಿದ್ದಳು. ಮಗಳ ಪ್ರಿಯಕರನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ನಂತರ ಮಗಳ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

    ಕೊಲೆಯಾದ ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ. ತಾಯಿ ತನ್ನ ಸಹೋದರಿಯ ಮೇಲೆ ಹಲ್ಲೆ ಮಾಡುವುದನ್ನು ಕಿಟಕಿಯಿಂದ ನೋಡಿದ್ದಾನೆ ಎಂದು ಇಬ್ರಾಹಿಂಪಟ್ಟಣಂ ಪೊಲೀಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.

    ಪುತ್ರಿ ಭಾರ್ಗವಿಗೆ ಮದುವೆ ಮಾಡಬೇಕು ಎಂದು ಜಂಗಮ್ಮ ಯೋಚಿಸಿದ್ದರು. ಮಗಳಿಗೆ ಸೂಕ್ತ ವರನ ಅನ್ವೇಷಣೆಯಲ್ಲಿದ್ದರು. ಅದರ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.

  • ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ

    ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ

    ಹೈದರಾಬಾದ್/ಕ್ಯಾನ್ಬೆರಾ: ಆಸ್ಟ್ರೇಲಿಯಾದ (Australia) ವಿಕ್ಟೋರಿಯಾದ ಬಕ್ಲಿಯಲ್ಲಿ ರಸ್ತೆ ಬದಿಯ ಡಬ್ಬಿಯೊಂದರಲ್ಲಿ ಹೈದರಾಬಾದ್ (Hyderabad) ಮೂಲದ ಮಹಿಳೆಯೊಬ್ಬಳ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಚೈತನ್ಯ ಮದಗಣಿ (Chaithanya Madhagani) ಅಲಿಯಾಸ್ ಶ್ವೇತಾ ಎಂದು ಗುರುತಿಸಲಾಗಿದೆ.

    ಮಹಿಳೆ ಪತಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದರು. ಇದೀಗ ಪತಿಯೇ ಮಹಿಳೆಯನ್ನು ಹತ್ಯೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶ್ವೇತಾಳನ್ನು ಹತ್ಯೆಗೈದ ಬಳಿಕ ಪುತ್ರನೊಂದಿಗೆ ಹೈದರಾಬಾದ್‍ಗೆ ಬಂದಿರಬಹುದು ಎಂದು ವರದಿಯಾಗಿದೆ. ಇದನ್ನೂ ಓದಿ: ಕಾರಿನಲ್ಲಿ ಮಲಗಿದ್ದ ವ್ಯಾಪಾರಿ; ಆಚೆಗೆಳೆದು 35 ಸುತ್ತು ಗುಂಡು ಹಾರಿಸಿ ಕೊಂದ ದುರುಳರು!

    ಮಹಿಳೆಯ ಪೋಷಕರ ಕೋರಿಕೆಯ ಮೇರೆಗೆ ಆಕೆಯ ಮೃತದೇಹವನ್ನು ಹೈದರಾಬಾದ್‍ಗೆ ತರಲು ವಿದೇಶಾಂಗ ಕಚೇರಿಗೆ ಸ್ಥಳೀಯ ಶಾಸಕರು ಪತ್ರ ಬರೆದಿದ್ದಾರೆ. ಅಲ್ಲದೇ ಮಹಿಳೆಯ ಪೋಷಕರು ನೀಡಿದ ಮಾಹಿತಿಯ ಪ್ರಕಾರ, ಅವರ ಅಳಿಯನೇ ತಮ್ಮ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

    ಮಹಿಳೆಯ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಕ್ಟೋರಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಾಗಲ್ ಪ್ರೇಮಿಯಿಂದ ಯುವತಿಯ ಕಿಡ್ನ್ಯಾಪ್ – ಪೊಲೀಸರಿಂದ ರಕ್ಷಣೆ

  • 140 ಕೋಟಿ ಜನರೇ ನನ್ನ ಕುಟುಂಬ: ಲಾಲೂಗೆ ಮೋದಿ ತಿರುಗೇಟು

    140 ಕೋಟಿ ಜನರೇ ನನ್ನ ಕುಟುಂಬ: ಲಾಲೂಗೆ ಮೋದಿ ತಿರುಗೇಟು

    ಹೈದರಾಬಾದ್:‌ ದೇಶದ 140 ಕೋಟಿ ಜನರೇ ನನ್ನ ಕುಟುಂಬ ಎಂದು ಹೇಳುವ ಮೂಲಕ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

    ತೆಲಂಗಾಣದ ಆದಿಲಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ಟಾಂಗ್‌ ನೀಡಿದರು. ನನ್ನ ಜೀವನ ತೆರೆದ ಪುಸ್ತಕ, ದೇಶದ 140 ಕೋಟಿ ಜನರು ನನ್ನ ಕುಟುಂಬ. ಇಂದು ದೇಶದ ಕೋಟ್ಯಂತರ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರು ಮೋದಿಯವರ ಕುಟುಂಬ. ದೇಶದ ಪ್ರತಿಯೊಬ್ಬ ಬಡವರೂ ನನ್ನ ಕುಟುಂಬ. ನನಗಾಗಿ ಅವರು, ಅವರಿಗಾಗಿ ನಾನು ಇದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ

    ಪಾಟ್ನಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ (Narendra Modi) ಕುಟುಂಬದ ಬಗ್ಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav), ನಮ್ಮದು ಕುಟುಂಬ ರಾಜಕಾರಣ ಅಂತ ಮೋದಿ ಹೇಳುತ್ತಾರೆ. ಮೋದಿಗೆ ಸ್ವಂತ ಕುಟುಂಬ ಇಲ್ಲದಿದ್ದರೆ ನಾವೇನು ಮಾಡೋಕೆ ಸಾಧ್ಯ?, ಅವರಿಗೇಕೆ ಮಕ್ಕಳಿಲ್ಲ?. ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನಿಜವಾದ ಹಿಂದೂ ಕೂಡ ಅಲ್ಲಾ. ಹಿಂದೂ ಸಂಪ್ರದಾಯದಲ್ಲಿ ತಂದೆ-ತಾಯಿ ಸತ್ತರೆ ತಲೆ ಕೂದಲು ಬೋಳಿಸಬೇಕು. ಆದರೆ ತಾಯಿ ಮೃತಪಟ್ಟಾಗ ಮೋದಿ ಆ ರೀತಿ ಮಾಡಲಿಲ್ಲ ಎಂದು ಹೇಳಿದ್ದರು.

    ಲಾಲೂ ಹೇಳಿಕೆಯಿಂದ ಸಿಡಿದೆದ್ದ ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ʼಮೋದಿ ಕಾ ಪರಿವಾರ್ʼ ಎಂಬ ಅಭಿಯಾನವನ್ನು ಆರಂಭಿಸಿದೆ. ಅಮಿತ್‌ ಶಾ, ನಡ್ಡಾ, ಪುಷ್ಕರ್ ಸಿಂಗ್ ಧಾಮಿ, ಮನ್ಸುಕ್ ಮಾಂಡವೀಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ತಮ್ಮ ಹೆಸರಿನ ಮುಂದೆ ʼಮೋದಿ ಪರಿವಾರ್ʼ ಎಂದು ಬರೆದುಕೊಂಡಿದ್ದಾರೆ.

  • ಪೊಲೀಸ್ ಜೊತೆ ನಟಿಯ ರಂಪಾಟ: ಸೌಮ್ಯ ವಿರುದ್ಧ ದೂರು ದಾಖಲು

    ಪೊಲೀಸ್ ಜೊತೆ ನಟಿಯ ರಂಪಾಟ: ಸೌಮ್ಯ ವಿರುದ್ಧ ದೂರು ದಾಖಲು

    ರಾಂಗ್ ರೂಟ್ ನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಪೊಲೀಸರ (Police) ಜೊತೆಯೇ ಕಿರಿಕ್ ಮಾಡಿಕೊಂಡಿದ್ದ ತೆಲುಗು ನಟಿ ಸೌಮ್ಯ ಜಾನು (Soumya Janu) ವಿರುದ್ಧ ಹೈದರಾಬಾದ್ (Hyderabad)ನ ಬಂಜಾರ (Banjara Hills) ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತುರ್ತು ಕಾರಣದಿಂದಾಗಿ ರಾಂಗ್ ರೂಟ್ ನಲ್ಲಿ ಬಂದೆ. ಪೊಲೀಸರಿಗೆ ನನಗೆ ಕೆಟ್ಟದಾಗಿ ನಿಂದಿಸಿದರು ಎಂದು ನಟಿ ಹೇಳಿಕೊಂಡಿದ್ದಾರೆ.

    ತಾಯಿಗೆ ಮೆಡಿಷನ್ ತರಬೇಕಿತ್ತು ಎನ್ನುವ ಕಾರಣಕ್ಕಾಗಿ ಸೌಮ್ಯ, ತಮ್ಮ ಕಾರನ್ನು ರಾಂಗ್ ರೂಟ್ ನಲ್ಲಿ ಚಲಾಯಿಸಿದ್ದಾರೆ. ಇವರ ಕಾರನ್ನು ತಡೆದ ಟ್ರಾಫಿಕ್ ಹೋಮ್ ಗಾರ್ಡ್ ದಂಡ ಕಟ್ಟುವಂತೆ ಹೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಹೋಮ್ ಗಾರ್ಡ್ ಸಮವಸ್ತ್ರ ಹರಿದಿದೆ. ಈ ವಿಡಿಯೋ ವೈರಲ್ ಆಗಿದೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೌಮ್ಯ ಜಾನು ಕುಡಿದು ಕಾರು ಚಲಾಯಿಸುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಸೌಮ್ಯಗೆ ಕುಡಿಯುವ ಅಭ್ಯಾಸವಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. ಪೊಲೀಸ್ ತಮ್ಮೊಂದಿಗೆ ಅನುಚಿತ ವರ್ತನೆ ಮಾಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದಿದ್ದಾರೆ.

    ಲಯನ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಸೌಮ್ಯ ಕೂಡ ಹೋಮ್ ಗಾರ್ಡ್ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಸದ್ಯ ಬಂಜಾರ್ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿ ಪೊಲೀಸರ ಅತಿಥಿಯಾದ ಮಹಿಳಾ ಉದ್ಯಮಿ

    ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿ ಪೊಲೀಸರ ಅತಿಥಿಯಾದ ಮಹಿಳಾ ಉದ್ಯಮಿ

    ಹೈದರಾಬಾದ್: ಮಹಿಳಾ ಉದ್ಯಮಿಯೊಬ್ಬಳು ಮದುವೆ ಪ್ರಸ್ತಾಪ ತಿರಸ್ಕರಿಸಿದ ಟಿವಿ ನಿರೂಪಕನನ್ನು ಅಪಹರಿಸಿ ಜೈಲು ಸೇರಿದ ಪ್ರಕರಣ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ

    ಬಂಧಿತ ಆರೋಪಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದೆ. ಆಕೆ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ಎಂದು ತಿಳಿದು ಬಂದಿದೆ. ತ್ರಿಶಾ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ಟಿವಿ ಆಂಕರ್ ಪ್ರಣವ್ ಎಂಬವರ ಪ್ರೊಫೈಲ್ ನೋಡಿ ಮದುವೆ ಪ್ರಸ್ತಾಪ ಮಾಡಿದ್ದಳು. ಈ ಪ್ರಸ್ತಾಪಕ್ಕೆ ಪ್ರಣವ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಇದಾದ ಬಳಿಕ ಚಾಟಿಂಗ್ ಆರಂಭಿಸಿ ಹಲವು ತಿಂಗಳ ಬಳಿಕ ಅದು ನಕಲಿ ಪ್ರೊಫೈಲ್ ಎಂದು ತ್ರಿಶಾಗೆ ಗೊತ್ತಾಗಿದೆ. ಇದನ್ನೂ ಓದಿ: ರಾತ್ರಿ ವೇಳೆ ಕಸ ಎಸೆಯಲು ಹೋಗಿದ್ದ ಯುವತಿಯ ಮೈ ಮುಟ್ಟಿ ಪುಂಡರ ಕಿರುಕುಳ!

    ಇದಾದ ಬಳಿಕ ಆಕೆ ಪ್ರಣವ್ ಅವರ ನಿಜವಾದ ಮೊಬೈಲ್ ನಂಬರ್ ಪಡೆದು ನಡೆದ ವಿಚಾರವನ್ನು ಹೇಳಿಕೊಡಿದ್ದಳು. ಅಲ್ಲದೇ ಮದುವೆ ವಿಚಾರ ಪ್ರಸ್ತಾಪಿಸಿದ್ದಳು. ಇದಕ್ಕೆ ಪ್ರಣವ್ ಒಪ್ಪಿರಲಿಲ್ಲ. ಇದರಿಂದ ಬೇಸತ್ತ ತ್ರಿಶಾ ಸ್ನೇಹಿತರ ಸಹಾಯದಿಂದ ಪ್ರಣವ್ ಅವರನ್ನು ಹುಡುಕಿ ಅಪಹರಿಸಿದ್ದಳು.

    ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಪ್ರಣವ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ತ್ರಿಶಾ ಹಾಗೂ ಆಕೆಯ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನು ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ನಲ್ಲಿ ಪ್ರಣವ್ ಪ್ರೊಫೈಲ್ ನೋಡಿ ಮದುವೆಯ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಇದಕ್ಕೆ ಆತ ಒಪ್ಪದಿದ್ದಾಗ ಆತನನ್ನು ಅಪಹರಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣದ ಆರೋಪಿಗಳಿಂದ ಜೈಲಿನಲ್ಲಿ ಗಲಾಟೆ- ಮಾರಾಕಾಸ್ತ್ರ, ಮೊಬೈಲ್, ನಗದು ವಶಕ್ಕೆ

  • ತಡೆಗೋಡೆಗೆ ಕಾರು ಡಿಕ್ಕಿ- BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ

    ತಡೆಗೋಡೆಗೆ ಕಾರು ಡಿಕ್ಕಿ- BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ

    ಹೈದರಾಬಾದ್:‌ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ (BRS) ಶಾಸಕಿ ಜಿ ಲಾಸ್ಯ ನಂದಿತಾ (G Lasya Nanditha) (37) ದುರ್ಮರಣಕ್ಕೀಡಾಗಿದ್ದಾರೆ.

    ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ಹೈದರಾಬಾದ್‌ನ (Hyderabad) ಹೊರವಲಯದಲ್ಲಿರುವ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಎಂಬಲ್ಲಿ ಸಂಭವಿಸಿದೆ.

    ನಂದಿತಾ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಎಕ್ಸ್‌ಪ್ರೆಸ್‌ವೇಯ ಎಡಭಾಗದಲ್ಲಿರುವ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಶಾಸಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಕಾರು ಚಾಲಕನನ್ನು ಸಮೀಪದ ಪಟಂಚೇರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ನಿಧನ

    ನಂದಿತಾ ಅವರು ಫೆಬ್ರವರಿ 13 ರಂದು ಬಿಆರ್‌ಎಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮರ್ರಿಗುಡ ಜಂಕ್ಷನ್‌ನಲ್ಲಿ ಇದೇ ರೀತಿಯ ರಸ್ತೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದರು.

    ಬಿಆರ್‌ಎಸ್‌ನ ಮಾಜಿ ಶಾಸಕ ದಿವಂಗತ ಜಿ ಸಾಯಣ್ಣ ಅವರ ಪುತ್ರಿಯಾಗಿರುವ ನಂದಿತಾ ಅವರು ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಜಿ ವೆನ್ನೆಲ ಅವರನ್ನು ಸೋಲಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದರು.