Tag: Hyderabad

  • ಅತ್ತೆಯ 2ನೇ ಪತಿಯೊಂದಿಗೆ ಸೆಕ್ಸ್ ಗೆ ಒತ್ತಾಯಿಸಿದ್ರು – ವಾಟ್ಸಪ್‍ನಲ್ಲಿ ತ್ರಿವಳಿ ತಲಾಕ್ ಪಡೆದ ಮಹಿಳೆ ಹೇಳಿಕೆ

    ಅತ್ತೆಯ 2ನೇ ಪತಿಯೊಂದಿಗೆ ಸೆಕ್ಸ್ ಗೆ ಒತ್ತಾಯಿಸಿದ್ರು – ವಾಟ್ಸಪ್‍ನಲ್ಲಿ ತ್ರಿವಳಿ ತಲಾಕ್ ಪಡೆದ ಮಹಿಳೆ ಹೇಳಿಕೆ

    ಹೈದರಾಬಾದ್: ತ್ರಿವಳಿ ತಲಾಕ್ ನಿಷೇಧದ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ವಾಟ್ಸಪ್‍ನಲ್ಲಿ ಪತಿಯಿಂದ ವಿಚ್ಚೇಧನ ಪಡೆದ ಮಹಿಳೆಯೊಬ್ಬರು ಗಂಡನ ಮನೆಯವರ ಕಿರುಕುಳದ ಬಗ್ಗೆ ಹೇಳಿಕೆ ನೀಡಿದ್ದಾರೆ.

    ಕಳೆದ ವರ್ಷ ನವೆಂಬರ್‍ನಲ್ಲಿ ಸುಮೈನಾ ಎಂಬ ಮಹಿಳೆಗೆ ಆಕೆಯ ಹುಟ್ಟುಹಬ್ಬದ ದಿನದಂದೇ ದುಬೈನಲ್ಲಿ ವಾಸವಿರುವ ಪತಿ ವಾಟ್ಸಪ್‍ನಲ್ಲೇ ಮೂರು ಬಾರಿ ತಲಾಕ್ ಎಂದು ಹೇಳಿ, ಇಲ್ಲಿಗೆ ನಮ್ಮ ಸಂಬಂಧ ಮುಗಿಯಿತು ಎಂದಿದ್ದ. ಈ ಬಗ್ಗೆ ಮಾರ್ಚ್ 16ರಂದು ಸನತ್‍ನಗರ್ ಪೊಲೀಸ್ ಠಾಣೆಯಲ್ಲಿ ಸುಮೈನಾ ದೂರು ನೀಡಿದ್ದರು. ಮಹಿಳೆಯ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 420 ಹಾಗೂ 406 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರೋ ಸುಮೈನಾ, ಅತ್ತೆಯ ಎರಡನೇ ಗಂಡನೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಮೂಲಕ ಆಕೆಗೆ ಬಾಡಿಗೆ ತಾಯಿಯಾಗುವಂತೆ ನನಗೆ ಒತ್ತಾಯಿಸಿದ್ದರು. ಇದಕ್ಕೆ ನನ್ನ ಪತಿ ಕೂಡ ವಿರೋಧ ವ್ಯಕ್ತಪಡಿಸಲಿಲ್ಲ. ನಾನು ನಿರಾಕರಿಸಿದಾಗ ನನಗೆ ಕಿರುಕುಳ ನೀಡಿ 6 ದಿನಗಳವರೆಗೆ ರೂಮಿನಲ್ಲಿ ಕೂಡಿಹಾಕಿದ್ದರು. ನಂತರ ನನ್ನ ತಂದೆ ಬಂದು ಮನೆಗೆ ಕರೆದುಕೊಂಡು ಹೋದ್ರು ಎಂದು ಹೇಳಿದ್ದಾರೆ.

    ಇದಾದ ಬಳಿಕ ನನ್ನ ಪತಿಯೊಂದಿಗೆ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ಆದ್ರೆ ಅವರು ನನ್ನ ಕರೆ ಸ್ವೀಕರಿಸುತ್ತಿರಲಿಲ್ಲ. ಅನಂತರ ವಾಟ್ಸಪ್‍ನಲ್ಲಿ ಮೂರು ಬಾರಿ ತಲಾಕ್ ಎಂದು ಬರೆದು ಸಂದೇಶ ಕಳಿಸಿದ್ರು ಎಂದು ಸುಮೈನಾ ಹೇಳಿದ್ದಾರೆ.

    ನಾನು ನನ್ನ ಪತಿ 1 ತಿಂಗಳವರೆಗೆ ದುಬೈನಲ್ಲಿದ್ದೆವು. ಅಲ್ಲಿಂದ ಬಂದ ನಂತರ ಮನೆಕಲಸದವಳಂತೆ ನನ್ನಿಂದ ಕೆಲಸ ಮಾಡಿಸುತ್ತಿದ್ದರು. ಸರಿಯಾಗಿ ಊಟ ಕೊಡ್ತಿರ್ಲಿಲ್ಲ. ಅತ್ತೆ ಮಾಟ ಮಂತ್ರ ಮಾಡುತ್ತಿದ್ದರು. ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸುಮೈನಾ ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.

  • ನೀರಿನ ಬಾಟಲಿಗೆ 50 ರೂ. ಸ್ವೀಕರಿಸಿದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5,000 ರೂ. ದಂಡ

    ನೀರಿನ ಬಾಟಲಿಗೆ 50 ರೂ. ಸ್ವೀಕರಿಸಿದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5,000 ರೂ. ದಂಡ

    ಹೈದರಾಬಾದ್: ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ ಹೈದರಾಬಾದ್ ಗ್ರಾಹಕರ ವೇದಿಕೆ ಇಲ್ಲಿನ ಬಂಜಾರಾ ಹಿಲ್ಸ್ ನ ಜಿವಿಕೆ ಮಾಲ್‍ನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ರೂ. ದಂಡ ವಿಧಿಸಿದೆ. ಜೊತೆಗೆ ದೂರುದಾರರಿಗೆ 1 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.

    ವಿಜಯ್ ಗೋಪಾಲ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬಳಿಕ ಈ ದಂಡ ವಿಧಿಸಲಾಗಿದೆ. ನನ್ನ ಸ್ವಂತ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಹಾಗೆ ಒಂದು ನೀರಿನ ಬಾಟಲಿಗೆ ಮಲ್ಟಿಪ್ಲೆಕ್ಸ್ ನೊಳಗೆ 50 ರೂ. ತೆಗೆದುಕೊಂಡ್ರು. ಇದೇ ಬಾಟಲಿಗೆ ಹೊರಗಡೆ 20 ರೂ. ಎಂಆರ್‍ಪಿ ಇದೆ ಎಂದು ವಿಜಯ್ ಗ್ರಾಹಕರ ವೇದಿಕೆಗೆ ತಿಳಿಸಿದ್ದರು. ಕಳೆದ ಜೂನ್‍ನಲ್ಲಿ ವಿಜಯ್ ಮಲ್ಟಿಪ್ಲೆಕ್ಸ್ ಗೆ ಭೇಟಿ ನೀಡಿದ್ದು , ಮಾಲ್‍ಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆದು ಜನರನ್ನ ಲೂಟಿ ಮಾಡುತ್ತಿವೆ ಎಂದು ಆರೋಪಿಸಿದ್ದರು.

    ಒಂದೇ ಬಾಟಲಿಗೆ ಎರಡು ಎಂಆರ್‍ಪಿ ಇರಬಾರದು ಎಂಬುದನ್ನು ಸ್ಪಷ್ಟಪಡಿಸಿರುವ ಗ್ರಾಹಕರ ವೇದಿಕೆ, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸದಂತೆ ಐನಾಕ್ಸ್ ಗೆ ಸೂಚಿಸಿದೆ. ಅಲ್ಲದೆ ಗ್ರಾಹಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಥಿಯೇಟರ್ ನಿರ್ವಾಹಕರಿಗೆ ಹೇಳಿದೆ ಎಂದು ವರದಿಯಾಗಿದೆ.

    ಕಳೆದ ತಿಂಗಳಷ್ಟೆ ಹೈದರಾಬಾದ್‍ನ ಶಾಹ್ ಗೌಸ್ ರೆಸ್ಟೊರೆಂಟ್‍ನಲ್ಲಿ ತಂಪು ಪಾನೀಯಕ್ಕೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ ಫೆಬ್ರವರಿಯಲ್ಲಿ ಇಲ್ಲಿನ ಬಂಜಾರಾ ಹಿಲ್ಸ್ ನ ಸಾರ್ವಿ ಹೋಟೆಲ್‍ನಲ್ಲಿ 20 ರೂ. ಎಂಆರ್‍ಪಿ ಇದ್ದ ನೀರಿನ ಬಾಟಲಿಗೆ 40 ರೂ. ಸ್ವೀಕರಿಸಿದ್ದಕ್ಕೆ ಹೋಟೆಲ್‍ನವರಿಗೆ 20 ಸಾವಿರ ರೂ ದಂಡ ವಿಧಿಸಲಾಗಿತ್ತು ಎಂದು ವರದಿಯಾಗಿದೆ.

    ವಿಜಯ್ ಗೋಪಾಲ್ ಈ ಹಿಂದೆ ಹೈದರಾಬಾದ್‍ನ ಕಾಚಿಗುಡದಲ್ಲಿ ವೆಂಕಟರಮಣ ಥಿಯೇಟರ್ ಹಾಗೂ ತಾರಕರಾಮ ಥಿಯೇಟರ್‍ನಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡಿದ್ದಕ್ಕೆ ದೂರು ದಾಖಲಿಸಿದ್ದರು.

  • ಅಪ್ಪ-ಅಮ್ಮನ ಎದುರೇ ಕ್ಯಾಬ್ ಚಾಲಕನಿಂದ ಲೈಂಗಿಕ ಕಿರುಕುಳ: ಕಾಮುಕ ಅರೆಸ್ಟ್

    ಅಪ್ಪ-ಅಮ್ಮನ ಎದುರೇ ಕ್ಯಾಬ್ ಚಾಲಕನಿಂದ ಲೈಂಗಿಕ ಕಿರುಕುಳ: ಕಾಮುಕ ಅರೆಸ್ಟ್

    ಬೆಂಗಳೂರು: ನಗರದ ಯುವತಿಯೊಬ್ಬಳ ಜೊತೆ ಪೋಷಕರ ಎದುರೇ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. 40 ವರ್ಷದ ಮಹಮ್ಮದ್ ಸಲೀಂ ಬಂಧಿತ ಕಾಮುಕ.

    ನಡೆದಿದ್ದೇನು?: ಬೆಂಗಳೂರಿನ ಯುವತಿ ತನ್ನ ಪೋಷಕರ ಜೊತೆ ಹೈದರಾಬಾದ್‍ಗೆ ಪ್ರವಾಸಕ್ಕೆ ತೆರಳಿದ್ದಳು. ಅಂತೆಯೇ ಅಲ್ಲಿ ಆಕೆ ಟ್ರಾವೆಲ್ ಏಜೆಂಟ್ ಮೂಲಕ ಕ್ಯಾಬ್ ಬುಕ್ ಮಾಡಿದ್ದಳು. ಈ ವೇಳೆ ಕ್ಯಾಬ್ ಚಾಲಕ ಅಪ್ಪ ಅಮ್ಮ- ಬಂಧುಗಳ ಸಮ್ಮುಖದಲ್ಲೇ ಯುವತಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಕಡೆಯವರು ದಾರಿ ಮಧ್ಯೆ ಕಾರ್ ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದ್ರೆ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಬೆಂಗಳೂರು ಸೇರಲು ಟ್ರೈನ್ ಮಿಸ್ ಆಗತ್ತೆ ಅಂತಾ ಯುವತಿ ತನ್ನ ಪೋಷಕರೊಂದಿಗೆ ಬೆಂಗಳೂರಿಗೆ ಮರಳಿದ್ದಾಳೆ. ಬಳಿಕ ವಾಟ್ಸಾಪ್ ಮೂಲಕ ಹೈದರಾಬಾದ್ ಪೊಲೀಸ್ ವೆಬ್ ಸೈಟ್ ಷೀ-ಟೀಮ್‍ಗೆ ಘಟನೆಯ ಬಗ್ಗೆ ದೂರು ನೀಡಿದ್ದಾಳೆ.

    ಯುವತಿಯ ವಾಟ್ಸಾಪ್ ದೂರಿಗೆ ಸ್ಪಂದಿಸಿದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಈ ಆಟೋ ಚಾಲಕನ ಹೃದಯವಂತಿಕೆಗೆ ನೀವೂ ಮನಸೋಲಬಹುದು!

    ಈ ಆಟೋ ಚಾಲಕನ ಹೃದಯವಂತಿಕೆಗೆ ನೀವೂ ಮನಸೋಲಬಹುದು!

    ಹೈದರಾಬಾದ್: ಜಗತ್ತಿನಲ್ಲಿ ಒಳ್ಳೆಯ ವ್ಯಕ್ತಿಗಳಿಗೇನೂ ಕೊರತೆಯಿಲ್ಲ ಅನ್ನೋದಕ್ಕೆ ಈ ಘಟನೆಯೇ ಒಂದು ನೈಜ ಉದಾಹರಣೆ.

    ಹೌದು. ವಾರಿಜಶ್ರೀ ವೇಣುಗೋಪಾಲ್ ಎಂಬ ಯುವತಿಯೊಬ್ಬರು ಹೈದರಾಬಾದ್‍ನಲ್ಲಿ ವೀಸಾ ಸಂದರ್ಶನಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಆಕೆಗೆ ಹಣದ ಕೊರೆತೆಯಾಗಿತ್ತು. ಈ ವೇಳೆ ಅಲ್ಲಿನ ಆಟೋ ಚಾಲಕರೊಬ್ಬರು ತನಗೆ ಸಹಾಯ ಮಾಡಿದ ಬಗ್ಗೆ ವಾರಿಜಶ್ರೀ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗಿದೆ.

    ಫೇಸ್ಬುಕ್ ಪೋಸ್ಟ್ ನಲ್ಲೇನಿದೆ?: ಇವರ ಹೆಸರು ಬಾಬಾ. ಆಟೋ ಚಾಲಕರಾಗಿರುವ ಬಾಬಾ ಅವರು ಇಂದು ನನ್ನನ್ನ ರಕ್ಷಿಸಿದ್ರು. ನಾನು ಹೈದರಾಬಾದ್‍ಗೆ ನನ್ನ ವೀಸಾ ಸಂದರ್ಶನಕ್ಕೆಂದು ಬಂದಿದ್ದೆ. ಈ ವೇಳೆ ಅಲ್ಲಿ ನನಗೆ ಹಣದ ಕೊರತೆಯಾಗಿತ್ತು. ವೀಸಾ ಶುಲ್ಕಕ್ಕಾಗಿ 5,000 ರೂ ಬೇಕಿತ್ತು. ಆದ್ರೆ ನನ್ನ ಬಳಿ ಇದ್ದಿದ್ದು ಸುಮಾರು 2000 ರೂ. ಮಾತ್ರ. ನಾವು ಸುಮಾರು 10-15 ಎಟಿಎಂಗಳಿಗೆ ಅಲೆದಾಡಿದೆವು. ಆದ್ರೆ ಎಲ್ಲೂ ಹಣ ಸಿಗಲಿಲ್ಲ. ಹೈದರಾಬಾದ್‍ನಲ್ಲಿ ಅನೇಕ ಕಡೆ ಎಟಿಎಂಗಳಲ್ಲಿ ಸಮಸ್ಯೆ ಇತ್ತು.

    ಈ ವೇಳೆ ನನ್ನ ಪರಿಸ್ಥಿತಿಯನ್ನು ಅರಿತ ಆಟೋ ಚಾಲಕ ಅವರು  ಕೂಡಿಟ್ಟ 3 ಸಾವಿರ ರೂ. ಕೊಟ್ಟರು. “ಮೇಡಂ ಅದನ್ನು ತೆಗೆದುಕೊಳ್ಳಿ. ಬಳಿಕ ಹೊಟೇಲ್ ಹತ್ರ ಬಂದು ವಾಪಾಸ್ ಮಾಡಿ ಪರವಾಗಿಲ್ಲ” ಅಂತಾ ಹೇಳಿದ್ರು.

    ಆಟೋ ಚಾಲಕನ ಈ ಮಾನವೀಯತೆ ನೋಡಿ ನನಗೆ ತುಂಬಾ ಖುಷಿಯಾಯಿತು. ಇವರ ಸಹಾಯ ಮನೋಭಾವಕ್ಕೆ ಕೃತಜ್ಞತೆ ಹೇಳಬೇಕು. ಇಂತಹ ವ್ಯಕ್ತಿಯನ್ನು ಈ ಹಿಂದೆ ಯಾವತ್ತೂ ಭೇಟಿಯಾಗಿಲ್ಲ. ಅಪರಿಚಿತರೊಬ್ಬರಿಗೆ ಅವರು ನಿಸ್ವಾರ್ಥತೆಯಿಂದ ಸಹಾಯ ಮಾಡಿದ್ದು ನನ್ನ ಮನಸ್ಸು ತಟ್ಟಿತು.

    ಹೌದು, ಕೆಲವೊಂದು ಬಾರಿ ದೇವರು ಅತ್ಯಂತ ಚಿತ್ರ ಹಾಗೂ ಸುಂದರ ಸನ್ನಿವೇಶಗಳಲ್ಲಿ ನಮಗೆ ಗೋಚರಿಸುತ್ತಾನೆ. ಪ್ರತಿದಿನವೂ ಹೊಸ ಪಾಠಗಳನ್ನು ಕಲಿಯುತ್ತೇವೆ. ನಿಮ್ಮಂತಹ ಸ್ನೇಹಿತನನ್ನು ಪಡೆದಿದ್ದಕ್ಕೆ ನಾನು ನಿಜಕ್ಕೂ ಧನ್ಯ. ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದನ್ನು ನೆನಪಿಸಿದ್ದಕ್ಕೆ ಧನ್ಯವಾದ ಅಂತಾ ವಾರಿಜಾಶ್ರೀ ಆಟೋ ಚಾಲಕ ಬಾಬ ಅವರ ಫೋಟೋದೊಂದಿಗೆ ಫೇಸ್ಬುಕ್‍ನಲ್ಲಿ ಈ ಪೋಸ್ಟ್ ಹಾಕಿದ್ದಾರೆ.

    ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ಸಹಾಯ ಮನೋಭಾವವನ್ನು ಎಲ್ಲರು ಕೊಂಡಾಡುತ್ತಿದ್ದಾರೆ. ಏಪ್ರಿಲ್ 11ರಂದು ಹಾಕಿರೋ ಈ ಪೋಸ್ಟ್ ಗೆ 31 ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಇಲ್ಲಿಯವರೆಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    https://www.facebook.com/varijashree/posts/10212441979669404

  • ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಸ್ಟ್ರೀಮಿಂಗ್ ಮಾಡಿದ ಟೆಕ್ಕಿ ಬಂಧನ

    ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಸ್ಟ್ರೀಮಿಂಗ್ ಮಾಡಿದ ಟೆಕ್ಕಿ ಬಂಧನ

    ಹೈದರಾಬಾದ್: ಹೆಂಡತಿಯ ಜೊತೆಗೆ ನಡೆಸಿದ ಲೈಂಗಿಕ ಕ್ರಿಯೆಯನ್ನು ಆಕೆಗೆ ಗೊತ್ತಿಲ್ಲದಂತೆ ಪಾರ್ನ್ ಸೈಟ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದ 33 ವರ್ಷದ ಮಾಜಿ ಸಾಫ್ಟ್ ವೇರ್ ಉದ್ಯೋಗಿಯೊಬ್ಬನನ್ನು ಹೈದರಾಬಾದ್‍ನಲ್ಲಿ ಬಂಧಿಸಲಾಗಿದೆ.

    ನಗರದ ಜೀಡಿಮೆಟ್ಲಾದ ನಿವಾಸಿಯಾಗಿರೋ ಬಂಧಿತ ಆರೋಪಿ ತನ್ನ ಬೆಡ್‍ರೂಮಿನಲ್ಲಿಟ್ಟಿದ್ದ ಲ್ಯಾಪ್‍ಟಾಪ್‍ನ ವೆಬ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ವೀಡಿಯೋಗಳನ್ನು ಹಣಕ್ಕಾಗಿ ಪಾರ್ನ್ ಸೈಟ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದ ಎಂದು ಆರೋಪಿಸಲಾಗಿದೆ.

    ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ನಿಗೆ ಕಳೆದ ನವೆಂಬರ್‍ನಲ್ಲಿ ಕೇರಳದಲ್ಲಿರುವ ಸ್ನೇಹಿತರೊಬ್ಬರು ಹೇಳಿದಾಗ ತನ್ನ ಖಾಸಗಿ ವಿಡಿಯೋಗಳು ಪಾರ್ನ್ ಸೈಟ್‍ನಲ್ಲಿದ್ದ ಬಗ್ಗೆ ಗೊತ್ತಾಗಿದೆ ಎಂದು ಸೈಬರ್ ಕ್ರೈಂ ಎಸಿಪಿ ಎಸ್. ಜಯರಾಮ್ ತಿಳಿಸಿದ್ದಾರೆ.

    ನಂತರ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 509 ಹಾಗೂ ಐಟಿ ಕಾಯ್ದೆಯ ಸೂಕ್ತ ಸೆಕ್ಷನ್‍ಗಳಡಿ ಕೇಸ್ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ ಈ ಕೃತ್ಯದ ಹಿಂದಿರುವುದು ಮಹಿಳೆಯ ಗಂಡ ಎನ್ನುವುದು ಗೊತ್ತಾಗಿದೆ. ಏಪ್ರಿಲ್ 7 ರಂದು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಪೊಲೀಸರು ವಿಡಿಯೋ ಲಿಂಕ್‍ನ ಐಪಿ ವಿಳಾಸವನ್ನ ಕೇರಳದ ತಿರುಚಿಯಲ್ಲಿ ಟ್ರೇಸ್ ಮಾಡಿದ್ದರು. ನಂತರ ಆ ಐಪಿ ವಿಳಾಸದ ಮಾಲೀಕನಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕ, ಬೇರೊಂದು ವೆಬ್‍ಸೈಟ್ ನಲ್ಲಿ ವಿಡಿಯೋ ಡೌನ್‍ಲೋಡ್ ಮಾಡಿಕೊಂಡು ಅದನ್ನೇ ಪ್ರಸಾರ ಮಾಡಿದ್ದಾಗಿ ಹೇಳಿದ್ದನೆಂದು ಜಯರಾಮ್ ತಿಳಿಸಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಆರೋಪಿ ತನ್ನ ಹೆಂಡತಿಗೆ ತಿಳಿಯದಂತೆ ಲ್ಯಾಪ್‍ಟಾಪನ್ನು ಬೆಡ್‍ರೂಮಿನಲ್ಲಿರಿಸಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ಈತ ಲ್ಯಾಪ್‍ಟಾಪ್‍ನಲ್ಲಿ ಸಿನಿಮಾ ಪ್ಲೇ ಮಾಡುತ್ತಿದ್ದರಿಂದ ಹೆಂಡತಿಗೆ ಇದರ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಈತ ಪಾರ್ನ್ ವೆಬ್‍ಸೈಟ್‍ವೊಂದರ ಸದಸ್ಯನಾಗಿದ್ದು, ವಿಡಿಯೋ ಪೋಸ್ಟ್ ಮಾಡುವುದಕ್ಕೆ ಈತನಿಗೆ ಹಣ ಸಿಗುತ್ತಿತ್ತು. ಈ ಸೈಟ್‍ನಲ್ಲಿ ಸುಮಾರು 3 ಸಾವಿರ ಸದಸ್ಯರಿದ್ದಾರೆಂದು ವರದಿಯಾಗಿದೆ. ಅಲ್ಲದೆ ಆರೋಪಿ ಲೈಂಗಿಕ ಕ್ರಿಯೆಗಾಗಿ ಮಹಿಳೆಯರಿಗೆ ಪುರಷರನ್ನ ಸಪ್ಲೈ ಮಾಡೋ 3 ವೆಬ್‍ಸೈಟ್ ಗಳಲ್ಲಿ ನೊಂದಾಯಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಈತನ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಪರಿಶೀಲಿಸಿದ್ದು, ಇದಕ್ಕೆ ಪೂರಕವಾದ ಸಾಕ್ಷಿಗಳು ಸಿಕ್ಕಿವೆ. ಹಾಗೂ ಬ್ಯಾಂಕ್ ಅಕೌಂಟ್ ಕೂಡ ಪರಿಶೀಲಿಸಲಾಗಿದ್ದು ತಾಂತ್ರಿಕ ಸಾಕ್ಷಿಗಳು ಸಿಕ್ಕಿವೆ ಎಂದು ಎಸಿಪಿ ಜಯರಾಮ್ ತಿಳಿಸಿದ್ದಾರೆ.

  • ನ್ಯೂಸ್‍ಪೇಪರ್ ಜಾಹಿರಾತಿನಲ್ಲಿ ಪತಿಯಿಂದ ಹೆಂಡ್ತಿಗೆ ತಲಾಖ್

    ನ್ಯೂಸ್‍ಪೇಪರ್ ಜಾಹಿರಾತಿನಲ್ಲಿ ಪತಿಯಿಂದ ಹೆಂಡ್ತಿಗೆ ತಲಾಖ್

    ಹೈದರಾಬಾದ್: ವಾಟ್ಸಪ್‍ನಲ್ಲಿ, ಪೋಸ್ಟ್ ಮೂಲಕ ವಿಚ್ಚೇದನ ನೀಡಿದ ಪ್ರಕರಣಗಳನ್ನ ಈಗಾಗಲೇ ಕೇಳಿದ್ದೀವಿ. ಈಗ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬ ಹೈದರಾಬಾದ್‍ನಲ್ಲಿರುವ ತನ್ನ 25 ವರ್ಷದ ಹೆಂಡತಿಗೆ ನ್ಯೂಸ್‍ಪೇಪರ್ ಜಾಹಿರಾತಿನ ಮೂಲಕ ತಲಾಖ್ ನೀಡಿರೋದು ಸುದ್ದಿಯಾಗಿದೆ.

    ಜಾಹಿರಾತಿನ ಮೂಲಕ ವಿಚ್ಚೇದನ ನೀಡಿದ ಮೊಹಮ್ಮದ್ ಮುಶ್ತಾಕುದ್ದೀನ್‍ನನ್ನು ವಂಚನೆ ಅರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್ 4ರಂದು ಸ್ಥಳೀಯ ಉರ್ದು ಪತ್ರಿಕೆಯೊಂದರಲ್ಲಿ ತನ್ನ ಪತಿ ವಿಚ್ಚೇದನ ನೀಡಿರುವ ಜಾಹಿರಾತನ್ನು ನೋಡಿ ಮಹಿಳೆ ಶಾಕ್ ಆಗಿದ್ರು. ನಂತರ ಆಕೆಗೆ ಗಂಡನ ಪರ ವಕೀಲರಿಂದ ಕರೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಮೊಹಮ್ಮದ್ ಮುಶ್ತಾಕುದ್ದೀನ್ ಮಹಿಳೆಯನ್ನ 2015ರಲ್ಲಿ ಮದುವೆಯಗಿ, 5 ತಿಂಗಳ ಬಳಿಕ ಸೌದಿ ಅರೇಬಿಯಾಗೆ ಕರೆದುಕೊಂಡು ಹೋಗಿದ್ದ. ಕಳೆದ ವರ್ಷ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಎರಡು ತಿಂಗಳ ಹಿಂದೆ ಇಬ್ಬರೂ ಭಾರತಕ್ಕೆ ಬಂದಿದ್ದು, ಗಂಡನೊಂದಿಗೆ ಜಗಳವಾಡಿಕೊಂಡು ಮಹಿಳೆ ತವರು ಮನೆಗೆ ಹೋಗಿದ್ದರು. ಇದಾದ 3 ವಾರಗಳ ಬಳಿಕ ಮುಶ್ತಾಕುದ್ದೀನ್ ಹೆಂಡತಿಗೆ ಒಂದು ಮತನ್ನೂ ತಿಳಿಸದೆ ಸೌದಿ ಅರೇಬಿಯಾಗೆ ಹಿಂದಿರುಗಿದ್ದ. ಎಷ್ಟು ಬಾರಿ ಫೋನ್ ಮಾಡಿದ್ರೂ ಮುಶ್ತಾಕುದ್ದೀನ್ ಪ್ರತಿಕ್ರಿಯಿಸಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ನಂತರ ಆಕೆಯ ಮಾವ ಕೂಡ ಮುಶ್ತಾಕುದ್ದೀನ್ ಸೌದಿ ಅರೇಬಿಯಾಗೆ ಹೋಗಿರೋದಾಗಿ ಹೇಳಿ ಆಕೆಯನ್ನ ಮನೆಗೆ ಸೇರಿಸಿರಲಿಲ್ಲ.

    ನಾನು ಏನಾದ್ರೂ ತಪ್ಪು ಮಾಡಿದ್ದರೆ ನನ್ನೊಂದಿಗೆ ಹಾಗೂ ನನ್ನ ಪೋಷಕರೊಂದಿಗೆ ಮಾತನಾಡಬೇಕಿತ್ತು. ಒಂದು ವೇಳೆ ನನ್ನ ತಪ್ಪಿದ್ದಿದ್ದರೆ ಹೇಗೆ ಎಲ್ಲಾ ಸಂಬಂಧಿಕರ ಮುಂದೆ ನನ್ನನ್ನು ಮದುವೆಯದ್ರೋ ಅದೇ ರೀತಿ ಎಲ್ಲರ ಮುಂದೆಯೇ ತಲಾಖ್ ನೀಡಬೇಕಿತ್ತು. ನನ್ನನ್ನು ಭೇಟಿಯಾಗದೆ ಸೌದಿ ಅರೇಬಿಯಾಗೆ ಯಾಕೆ ಓಡಿಹೋದ್ರು? 10 ತಿಂಗಳ ಮಗು ಇದ್ದರೂ ಜಾಹಿರಾತಿನ ಮೂಲಕ ವಿಚ್ಚೇದನ ನೀಡಿದ್ದಾರಲ್ಲಾ ಎಂದು ಮಹಿಳೆ ಅಲವತ್ತುಕೊಂಡಿದ್ದಾರೆ. ಪೊಲೀಸರು ಹೇಳೋ ಪ್ರಕಾರ ಮುಶ್ತಾಕುದ್ದೀನ್ 20 ಲಕ್ಷ ರೂ. ವರದಕ್ಷಿಣೆಗಾಗಿ ಹೆಂತಿಯನ್ನ ಪೀಡಿಸಿದ್ದ ಎನ್ನಲಾಗಿದೆ.

    ಈ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಷರಿಯಾ(ಇಸ್ಲಾಂ ಕಾನೂನು) ಅಡಿ ನ್ಯೂಸ್‍ಪೇಪರ್ ಜಾಹಿರಾತಿನ ಮೂಲಕ ನೀಡಲಾದ ವಿಚ್ಚೇದನ ಮಾನ್ಯವಾಗುತ್ತಾ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

     

    ಇದನ್ನೂ ಓದಿ: ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

  • ಮೊದಲ ಪಂದ್ಯದಲ್ಲಿ ಆರ್‍ಸಿಬಿಗೆ ಸೋಲು, ಹೈದ್ರಾಬಾದ್‍ಗೆ 35 ರನ್‍ಗಳ ಜಯ

    ಮೊದಲ ಪಂದ್ಯದಲ್ಲಿ ಆರ್‍ಸಿಬಿಗೆ ಸೋಲು, ಹೈದ್ರಾಬಾದ್‍ಗೆ 35 ರನ್‍ಗಳ ಜಯ

    ಹೈದರಾಬಾದ್: ಐಪಿಎಲ್ 10ನೇ ಆವೃತ್ತಿಯ ಮೊದಲ ಪಂದ್ಯವನ್ನು ಹೈದ್ರಾಬಾದ್ ಸನ್ ರೈಸರ್ಸ್ ಬೆಂಗಳೂರು ವಿರುದ್ಧ 35 ರನ್ ಗಳಿಂದ ಗೆದ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    208ರನ್‍ಗಳ ಕಠಿಣ ಗುರಿಯನ್ನು ಬೆನ್ನಟ್ಟಿನ ಆರ್‍ಸಿಬಿ ಅಂತಿಮವಾಗಿ 19.4 ಓವರ್ ಗಳಲ್ಲಿ 172 ರನ್‍ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಕ್ರಿಸ್ ಗೇಲ್ ಮತ್ತು ಮನ್‍ದೀಪ್ ಸಿಂಗ್ ಮೊದಲ ವಿಕೆಟ್‍ಗೆ 5.4 ಓವರ್‍ಗಳಲ್ಲಿ 52 ರನ್ ಜೊತೆಯಾಟವಾಡಿದ್ದರೂ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ಮೊದಲ ಪಂದ್ಯದಲ್ಲಿ ಆರ್‍ಸಿಬಿ ಸೋಲನ್ನು ಅನುಭವಿಸಿದೆ.

    ವಿಂಡೀಸಿನ ಕ್ರೀಸ್ ಗೇಲ್ 32 ರನ್( 21 ಎಸೆತ, 2 ಬೌಂಡರಿ, 3 ಸಿಕ್ಸರ್) ಮನ್‍ದೀಪ್ ಸಿಂಗ್ 24 ರನ್, ಟ್ರಾವಿಸ್ ಹೆಡ್ 30 ರನ್, ಕೇದಾರ್ ಜಾದವ್ 31 ರನ್( 16 ಎಸೆತ, 4 ಬೌಂಡರಿ, 1 ಸಿಕ್ಸರ್), ಸಚಿನ್ ಬೆಬಿ 1 ರನ್, ಶೇನ್ ವಾಟ್ಸನ್ 22 ರನ್‍ಗಳಿಸಿ ಗಳಿಸಿ ಔಟಾದರು.

    100ನೇ ವಿಕೆಟ್: ವೇಗದ ಬೌಲರ್ ಆಶಿಶ್ ನೆಹ್ರಾ ಆರ್‍ಸಿಬಿ ನಾಯಕ ವಾಟ್ಸನ್ ವಿಕೆಟ್ ಪಡೆಯುವ ಮೂಲಕ ಐಪಿಎಲ್‍ನಲ್ಲಿ ನೂರನೇ ವಿಕೆಟ್ ಪಡೆದ ಸಾಧನೆ ಮಾಡಿದರು

    ನೆಹ್ರಾ ಭುವನೇಶ್ವರ್ ಕುಮಾರ್, ರಶೀದ್ ಖಾನ್ ತಲಾ 2 ವಿಕೆಟ್ ಪಡೆದರೆ ಹೂಡಾ ಮತ್ತು ಬಿಪುಲ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದ್ರಾಬಾದ್ ಆರಂಭದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡರೂ ಯುವರಾಜ್ ಸಿಂಗ್ ಮತ್ತು ಮಾರ್ಕ್ ಹೆನ್ರಿಕ್ಸ್ ಅವರ ಅರ್ಧಶತಕದಿಂದಾಗಿ 4 ವಿಕೆಟ್ ನಷ್ಟಕ್ಕೆ 207 ರನ್‍ಗಳಿಸಿತ್ತು.

    ಯುವಿ, ಹೆನ್ರಿಕ್ಸ್ ಜುಗಲ್ ಬಂದಿ: 10.3 ಓವರ್‍ಗೆ 93 ರನ್‍ಗಳಿಸಿದ್ದಾಗ ಶಿಖರ್ ಧವನ್ ಔಟಾದರು. ಕ್ರೀಸ್‍ಗೆ ಆಗಮಿಸಿದ ಯುವಿ ಆರಂಭದಲ್ಲಿ ನಿಧಾನವಾಗಿ ಆಡಿದ್ದರೂ ಬರಬರುತ್ತಾ ಭರ್ಜರಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ಹೆನ್ರಿಕ್ಸ್ ಮತ್ತು ಯುವಿ 3ನೇ ವಿಕೆಟ್‍ಗೆ 29 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು. ಹೆನ್ರಿಕ್ಸ್ 52 ರನ್(37 ಎಸೆತ, 7 ಬೌಂಡರಿ, 2 ಸಿಕ್ಸರ್)ಸಿಡಿಸಿ ಔಟಾದರೆ ಯುವಿ 62 ರನ್(27 ಎಸೆತ, 7ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು.

    ಶಿಖರ್ ಧವನ್ 40 ರನ್(31 ಎಸೆತ, 5 ಬೌಂಡರಿ) ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ 14 ರನ್ ಗಳಿಸಿದರು. ದೀಪಕ್ ಹೂಡಾ 16 ರನ್ ಗಳಿಸಿ ಔಟಾಗದೇ ಉಳಿದರೆ ಕೊನೆಯಲ್ಲಿ ಬೆನ್ ಕಟ್ಟಿಂಗ್ 6 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 16 ರನ್‍ಗಳಿಸಿ ಔಟಾಗದೇ ಉಳಿದರು.

    ಟೈಮಲ್ ಮಿಲ್ಸ್, ಅಂಕಿತ್ ಚೌಧರಿ, ಚಹಲ್, ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್ ಪಡೆದರು.

  • ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

    ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

    ಹೈದರಾಬಾದ್: ತನ್ನ ಪತ್ನಿಗೆ ಅಂಚೆ ಪತ್ರದಲ್ಲಿ ಮೂರು ಬಾರಿ ತಲಾಖ್ ಎಂದು ಬರೆದು ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಹನೀಫ್ (38) ಬಂಧಿತ ವ್ಯಕ್ತಿ. ಹನೀಫ್ ಕುಕಟಪಲ್ಲಿಯ ಟೈಕ್ಸ್ ಟೈಲ್ಸ್ ಶೋರೂಂ ನಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 9 ರಂದು ತಲಾಬ್‍ಕಟ್ಟಾ ಗ್ರಾಮದ 26 ವರ್ಷದ ಯುವತಿಯನ್ನು ಮದುವೆ ಮಾಡಿಕೊಂಡಿದ್ದ.

    ಮದುವೆಯ ಮರುದಿನ ಮನೆಬಿಟ್ಟು ಹೋಗಿದ್ದ ಹನೀಫ್ ತಾನು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೆಂಡತಿಗೆ ಮಾಹಿತಿ ನೀಡಿದ್ದ. ಮಾರ್ಚ್ 19 ರಂದು ಹನೀಫ್ ತನ್ನ ಪತ್ನಿಗೆ ಪೋಸ್ಟ್ ಮುಖಾಂತರ ತಲಾಖ್ ಪತ್ರವನ್ನು ಕಳುಹಿಸಿದ್ದ. ಪತ್ರದಲ್ಲಿ ಮೂರು ಬಾರಿ ತಲಾಖ್ ಎಂದು ಬರೆದು ಈ ನಿರ್ಧಾರವನ್ನು ಇಬ್ಬರ ಸಮ್ಮುಖದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದ. ನಂತರ ಇದೇ ವಿಚಾರದ ಬಗ್ಗೆ ಫೋನ್ ಮಾಡಿ ಮಾತನಾಡಿದ್ದ.

    ಪತಿಯ ತಲಾಖ್ ಪತ್ರ ಪಡೆದ ಯುವತಿ ತವರುಮನೆಗೆ ತೆರಳಿದ್ದು, ಪೋಷಕರಿಗೆ ಈ ವಿಚಾರವನ್ನ ತಿಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹನೀಫ್‍ನನ್ನು ಬಂಧಿಸಿದ್ದಾರೆ.

    ಇಸ್ಲಾಂನ ತ್ರಿವಳಿ ತಲಾಖ್ ಪದ್ಧತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ತ್ರಿವಳಿ ತಲಾಖ್ ನಿಷೇಧಿಸಬೇಕೋ ಬೇಡವೋ ಎಂಬ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದ್ದು ಮೇ 11ರಿಂದ ವಿಚಾರಣೆ ಆರಂಭವಾಗಲಿದೆ.

     

  • ಟ್ರಾಫಿಕ್ ಪೊಲೀಸ್ ಲಂಚ ಸ್ವೀಕರಿಸಿದ ವೀಡಿಯೋ ವೈರಲ್, ಕೆಲಸದಿಂದ ವಜಾ

    ಟ್ರಾಫಿಕ್ ಪೊಲೀಸ್ ಲಂಚ ಸ್ವೀಕರಿಸಿದ ವೀಡಿಯೋ ವೈರಲ್, ಕೆಲಸದಿಂದ ವಜಾ

    ಹೈದರಾಬಾದ್: ಟ್ರಾಫಿಕ್ ಪೊಲೀಸರೊಬ್ಬರು ಲಂಚ ಸ್ವೀಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಪೇದೆಯ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

    ಹೈದರಾಬಾದ್ ನಿವಾಸಿಯಾದ ಶ್ರೀಧರ್ ವೇಮುಲಾ ಎಂಬವರು ಟ್ರಾಫಿಕ್ ಪೊಲೀಸರು ದ್ವಿಚಕ್ರವಾಹನ ಸವಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿರುವ ವೀಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಹೆಲ್ಮೆಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಸವಾರರನ್ನ ತಡೆದಿದ್ದಾರೆ. ಆ ವ್ಯಕ್ತಿ ಪೊಲೀಸರೊಂದಿಗೆ ಸ್ವಲ್ಪ ಹೊತ್ತು ಚರ್ಚೆ ನಡೆಸಿದ ನಂತರ ಪರ್ಸ್ ತೆಗೆದು ಹಣ ನೀಡುವುದು ಕಾಣುತ್ತದೆ. ಹಣ ಸ್ವೀಕರಿಸಿದ ಟ್ರಾಫಿಕ್ ಪೊಲೀಸ್ ಸವಾರನನ್ನು ಬಿಟ್ಟು ಕಳಿಸಿದ್ದಾರೆ.

    ಇದರ ದೃಶ್ಯಾವಳಿಗಳನ್ನ ಶ್ರೀಧರ್ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಮಾರ್ಚ್ 17ರಂದು ಹೈದರಾಬಾದ್ ಪೊಲೀಸರ ಅಧಿಕೃತ ಫೇಸ್‍ಬುಕ್ ಪೇಜ್‍ಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೈದರಾಬಾದ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಈ ನಡುವೆ ಈ ವೀಡಿಯೋ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು ವೈರಲ್ ಆಗಿದೆ. ಇದನ್ನ 10 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ.

    ಮಾರ್ಚ್ 20ರಂದು ಹೈದರಾಬಾದ್ ಪೊಲೀಸರು ಮತ್ತೆ ಕಮೆಂಟ್ ಮಾಡಿದ್ದು, ಟ್ರಾಫಿಕ್ ಇಲಾಖೆಯಿಂದ ಇವರನ್ನು ತೆಗೆದುಹಾಕಲಾಗುತ್ತಿದೆ. ನಿಯಮದ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಟ್ರಾಫಿಕ್ ಪೊಲೀಸರ ವಿರುದ್ಧ ತೆಗೆದುಕೊಂಡಿರುವ ಕ್ರಮವನ್ನ ಕೆಲವರು ಒಪ್ಪಿದ್ದರೆ ಇನ್ನೂ ಕೆಲವರು ಲಂಚ ಕೊಟ್ಟ ವ್ಯಕ್ತಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

    https://www.youtube.com/watch?v=KgRRr8Pwdwc

  • ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ವಾಷಿಂಗ್ಟನ್: ಹೈದರಾಬಾದ್ ಮೂಲದ ಭಾರತೀಯರೊಬ್ಬರು ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

    ಬುಧವಾರ ಸಂಜೆ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ, ಗೆಳೆಯನ ಜೊತೆ ಕಾನ್ಸಾಸ್‍ನ ಬಾರ್‍ನಲ್ಲಿದ್ದರು. ಈ ವೇಳೆ 51 ವರ್ಷದ ಆಡಂ ಪುರಿಂಟನ್ ಎಂಬ ದುಷ್ಕರ್ಮಿ ಶ್ರೀನಿವಾಸ್ ಮತ್ತು ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್(ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿದ್ದಾನೆ.

    ದಾಳಿಯಲ್ಲಿ ಶ್ರೀನಿವಾಸ್ ಸಾವನ್ನಪ್ಪಿದ್ದು, ಅಲೋಕ್ ಮದಾಸಿನಿ ಎಂಬ ಮತ್ತೊಬ್ಬ ಭಾರತೀಯ ಗಾಯಗೊಂಡು ಸದ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ಪ್ರತ್ಯಕ್ಷದರ್ಶಿ ಐಯಾನ್ ಗ್ರಿಲ್ಲೊಟ್ ಎಂಬವರ ಮೇಲೂ ಗುಂಡಿನ ದಾಳಿ ನಡೆದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ನಂತರ ಪರಾರಿಯಾಗಿದ್ದ ದಾಳಿಕೋರ ಆಡಂ ಪುರಿಂಟನ್, ಮಿಸ್ಸೌರಿಯ ಸ್ಥಳೀಯ ಬಾರ್‍ವೊಂದರಲ್ಲಿ ನಾನು ಇಬ್ಬರು ಮಧ್ಯಪ್ರಾಚ್ಯ ವ್ಯಕ್ತಿಗಳನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಘಟನೆ ನಡೆದ 5 ಗಂಟೆಗಳ ಒಳಗೆ ಆಡಂನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರೋ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ನನಗೆ ಆಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಶ್ರೀನಿವಾಸ್ ಅವರ ಕುಟುಂಬಕ್ಕೆ ಅಗತ್ಯವಾದ ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಶ್ರೀನಿವಾಸ್ ಅವರ ಮೃತದೇಹವನ್ನು ಹೈದರಾಬಾದ್‍ಗೆ ತರಲು ಎಲ್ಲಾ ನೆರವು ನೀಡುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಶ್ರೀನಿವಾಸ್ ಅವರು ಜಿಪಿಎಸ್ ಸಿಸ್ಟಮ್ ತಯಾರು ಮಾಡುವ ಅಮೆರಿಕದ ಎಂಎನ್‍ಸಿ ಯಲ್ಲಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ಸಂಸ್ಥೆಯನ್ನು ಸೇರಿದ್ದರು. ಇವರ ಪತ್ನಿ ಸುನಯನ ಕೂಡ ಇದೇ ಪ್ರದೇಶದಲ್ಲಿ ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.