Tag: Hyderabad

  • ತಮ್ಮನ ಜೊತೆ ಕ್ಷುಲ್ಲಕ ಜಗಳ: ಮನನೊಂದು ನೇಣಿಗೆ ಶರಣಾದ ಬಿಟೆಕ್ ವಿದ್ಯಾರ್ಥಿನಿ

    ತಮ್ಮನ ಜೊತೆ ಕ್ಷುಲ್ಲಕ ಜಗಳ: ಮನನೊಂದು ನೇಣಿಗೆ ಶರಣಾದ ಬಿಟೆಕ್ ವಿದ್ಯಾರ್ಥಿನಿ

    ಹೈದರಾಬಾದ್: ಮನೆಯಲ್ಲಿ ತಮ್ಮನೊಂದಿಗೆ ನಡೆದ ಕ್ಷುಲ್ಲಕ ಜಗಳಕ್ಕೆ ಮನನೊಂದ ಯುವತಿ ಮನೆಯಲ್ಲೇ ಆತ್ಮಹತ್ಯಗೆ ಶರಣಾಗಿರುವ ಘಟನೆ ಸುರಾರಂ ಬಳಿ ನಡೆದಿದೆ.

    ಚಂದ್ರಂ ಮತ್ತು ರೇಣುಕಾ ದಂಪತಿಯ ಮಗಳು ಮೌನಿಕಾ(21) ಆತ್ಮಹತ್ಯಗೆ ಶರಣಾದ ಯುವತಿ. ಮೌನಿಕಾ ಮಲ್ಲಾರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಫೈನಲ್ ಇಯರ್ ಓದುತ್ತಿದ್ದಳು.

    ಬುಧವಾರ ಮಧ್ಯಾಹ್ನ 3 ಗಂಟೆಗೆ ತಮ್ಮನ ಜೊತೆ ಜಗಳವಾಡಿದ ನಂತರ ಈಕೆ ನೇಣಿಗೆ ಶರಣಾಗಿದ್ದಾಳೆ. ಕುಟುಂಬದವರು ರಾತ್ರಿ 9 ಗಂಟೆಗೆ ಪೊಲೀಸರಿಗೆ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

    ಬುಧವಾರ ಮೌನಿಕಾ ತಮ್ಮ ತಮ್ಮನೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದಳಂತೆ. ಇದಕ್ಕೆ ಸಂಬಂಧಿಸಿದಂತೆ ತಾಯಿ ರೇಣುಕಾ ಮೌನಿಕಾಳನ್ನು ಗದರಿಸಿದ್ದರು. ಈ ವಿಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶಂಕಿಸಲಾಗಿದೆ.

    ಮೌನಿಕಾ ತನ್ನ ವಾಟ್ಸಪ್‍ನಲ್ಲಿ ತನ್ನ ಜೀವನವೇ ದುರ್ಭರವಾಗಿದೆ ಸಾಯುತ್ತೇನೆ ಎಂದು ವಿವರಿಸುವ ಸ್ಟೇಟಸ್ ಹಾಕಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

    ದುಂಡಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೌನಿಕಾಳನ್ನು ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಕೊನೆ ಉಸಿರೆಳೆದಿದ್ದಾಳೆ. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಗಾಂಧಿ ಆಸ್ಪತ್ರೆಗೆ ಕಳುಸಿದ್ದಾರೆ.

     

  • ಗಂಡು ಮಗುವಿನ ತಂದೆಯಾದ ನಟ, ರಾಜಕಾರಣಿ ಪವನ್ ಕಲ್ಯಾಣ್

    ಗಂಡು ಮಗುವಿನ ತಂದೆಯಾದ ನಟ, ರಾಜಕಾರಣಿ ಪವನ್ ಕಲ್ಯಾಣ್

    ಹೈದರಾಬಾದ್: ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಇಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ.

    ಹೌದು. ನಟಿ ರೇಣು ದೇಸಾಯಿಗೆ ವಿಚ್ಚೇದನ ನೀಡಿದ ಬಳಿಕ ನಟ ಪವನ್ ಕಲ್ಯಾಣ್ ರಷ್ಯಾದ ಅನ್ನಾ ಲೆಜ್ನೆವಾ ಅವರನ್ನು ವರಿಸಿದ್ದರು. ಕಳೆದ 2011ರಲ್ಲಿ ಟೀನ್ ಮಾರ್ ಎಂಬ ಚಿತ್ರದ ಶೂಟಿಂಗ್ ವೇಳೆ ಪವನ್ ಅವರು ಅನ್ನಾರನ್ನು ಭೇಟಿಯಾಗಿದ್ದರು. ಆ ಬಳಿಕ ಇಬ್ಬರು ಡೇಟಿಂಗ್ ಮಾಡಿದ್ದು, ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯೂ ಆದ್ರು. ಈಗಾಗಲೇ ದಂಪತಿಗೆ ಪೊಲೆನಾ ಎಂಬ ಹೆಸರಿನ ಹೆಣ್ಣು ಮಗುವಿದೆ. ಇದೀಗ ಮತ್ತೆ ಗಂಡು ಮಗುವಿಗೆ ಅನ್ನಾ ಜನ್ಮ ನಿಡಿದ್ದು, ಎರಡೂ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ.

    ಚಿತ್ರವೊಂದರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೂ ಪವನ್ ಹೈದರಾಬಾದ್ ಗೆ ಬಂದು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ. ಸದ್ಯ ತಾಯಿ- ಮಗು ಆರೋಗ್ಯವಾಗಿದ್ದಾರೆ.

    ಒಟ್ಟಿನಲ್ಲಿ ನಿರೀಕ್ಷೆಯಂತೆ ಸಂಕ್ರಾತಿಗೆ ತನ್ನ 25ನೇಯ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ತಾಯಿ-ಮಗುವಿನ ಜೊತೆ ಪವನ್ ಕಲ್ಯಾಣ್ ತನ್ನ ಜೊತೆ ತನ್ನ ಅಮೂಲ್ಯ ಕ್ಷಣಗಳನ್ನು ಕಳೆಯಲಿದ್ದಾರೆ. ಪವನ್ ಈ ಮೊದಲು ಮದುವೆಯಾದ ರೇಣು ದೇಸಾಯಿಗೆ ಇಬ್ಬರು ಮಕ್ಕಳಿದ್ದು, ಮಗ ಅಕಿರ ಹಾಗೂ ಮಗಳು ಸದ್ಯ ಇದೀಗ ತಾಯಿಯ ಜೊತೆಗಿದ್ದಾರೆ.

  • ವಿಚಾರಣೆ ನೆಪದಲ್ಲಿ ಪೊಲೀಸರಿಂದ ಯುವತಿಯರ ಮೇಲೆ ದೌರ್ಜನ್ಯ!

    ವಿಚಾರಣೆ ನೆಪದಲ್ಲಿ ಪೊಲೀಸರಿಂದ ಯುವತಿಯರ ಮೇಲೆ ದೌರ್ಜನ್ಯ!

    ಹೈದರಾಬಾದ್: ತಾಯಿಯ ಅನುಮಾನಾಸ್ಪದ ಸಾವಿನ ತನಿಖೆಯ ವಿಚಾರಣೆ ನೆಪದಲ್ಲಿ ಇಬ್ಬರೂ ಸಹೋದರಿಯರಿಗೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ತೆಲಂಗಾಣ ರಾಜ್ಯದ ಮಂಚೆರಿಯಾಲ್ ಜಿಲ್ಲೆಯ ಮಂದಮರ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ರುಕ್ಸನಾ (17) ಮತ್ತು ರಿಜ್ವನಾ (18) ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಸಹೋದರಿಯರು. ರುಕ್ಸನಾ ಮತ್ತು ರಿಜ್ವನಾರ ತಾಯಿ ಪರ್ವಿನ್ ಬಿ ಅವರ ಶವ ಒಂದು ವಾರದ ಹಿಂದೆ ದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಪರ್ವೀನ್ ಶವದ ಕುತ್ತಿಗೆ ಭಾಗದಲ್ಲಿ ಬಟ್ಟೆ ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು.

    ಪ್ರಕರಣ ದಾಖಲಿಸಿಕೊಂಡ ದೇವಪುರ ಠಾಣಾ ಪೊಲೀಸರು ತನಿಖೆಯ ವಿಚಾರಣೆ ಸಂಬಂಧಿಸಿದಂತೆ ಶನಿವಾರ ಇಬ್ಬರೂ ಸಹೋದರಿಯರನ್ನು ಠಾಣೆಗೆ ಕರೆಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಇಬ್ಬರನ್ನು ಮಂದಮರ್ರಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಮಂದಮರ್ರಿ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ನಿಮ್ಮ ತಾಯಿಯನ್ನು ಏಕೆ ಕೊಲೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

    ಪೊಲೀಸರ ಪ್ರಶ್ನೆಗೆ ಉತ್ತರಿಸಿದ ಸಹೋದರಿಯರು, ನಮ್ಮ ಸ್ವಂತ ತಾಯಿಯನ್ನು ನಾವೇಕೆ ಕೊಲ್ಲುತ್ತೇವೆ. ಕೊಲ್ಲುವ ಉದ್ದೇಶವಾದರೂ ನಮಗೆ ಏನಿದೆ ಎಂದು ತಿಳಿಸಿದ್ದಾರೆ. ವಿಚಾರಣೆಗಾಗಿ ಸಹೋದರಿಯರನ್ನು ಪೊಲೀಸರು ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ. ಈ ವೇಳೆ ಮೂರರಿಂದ ನಾಲ್ಕು ಮಹಿಳಾ ಪೊಲೀಸ್ ಪೇದೆಗಳಿಂದ ನಮ್ಮನ್ನು ಮೊಣಕಾಲಿನ ಮೇಲೆ ಕೂರಿಸಿ ಲಾಠಿಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಸಹೋದರಿಯರು ಈಗ ಆರೋಪಿಸಿದ್ದಾರೆ.

    ವಿಮೆಯ ಹಣ: ಯುವತಿಯರ ತಂದೆ ನಾಲ್ಕು ತಿಂಗಳ ಹಿಂದೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದರು. ತಂದೆ ಸಾವಿನ ಬಳಿಕ 4 ಲಕ್ಷ ರೂ. ವಿಮೆಯ ಹಣ ತಾಯಿ ಪರ್ವಿನ್ ಕೈ ಗೆ ಸೇರಿತ್ತು. ವಿಮೆಯ ಹಣಕ್ಕಾಗಿ ಪರ್ವೀನ್ ಸಹೋದರ ಉಮನ್ ಪಾಶಾ ನೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಪರ್ವಿನ್ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪೊಲೀಸರು ಉಮನ್ ಆಜ್ಞೆಯ ಮೇರೆಗೆ ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ.

    ಪೊಲೀಸರು ಯುವತಿಯರಿಗೆ ಯಾವುದೇ ಕಿರುಕುಳ ನೀಡಿಲ್ಲ. ಕೇವಲ ಅವರ ತಾಯಿಯ ಸಾವಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲಾಗಿದೆ. ಪರ್ವಿನ್ ಸಾವಿನ ವಿಚಾರಣೆಯಲ್ಲಿ ಇವರ ಹೇಳಿಕೆಗಳು ತನಿಖೆಗೆ ಸಹಾಯ ಮಾಡಲಿವೆ. ಪರ್ವಿನ್ ಕೊಲೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಪತ್ತೆಯಾಗಿಲ್ಲ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಿದ್ದೇವೆ ಎಂದು ಡಿಸಿಪಿ ಜಾನ್ ವೆಸ್ಲೇ ತಿಳಿಸಿದ್ದಾರೆ.

     

  • ಕಿಡ್ನ್ಯಾಪ್ ಆಗಿದ್ದ ಮಗುವನ್ನ 15 ಗಂಟೆಯಲ್ಲಿ ರಕ್ಷಿಸಿದ ಪೊಲೀಸರು- ಕಂದಮ್ಮನ ನಗುವಿನ ಫೋಟೋ ವೈರಲ್

    ಕಿಡ್ನ್ಯಾಪ್ ಆಗಿದ್ದ ಮಗುವನ್ನ 15 ಗಂಟೆಯಲ್ಲಿ ರಕ್ಷಿಸಿದ ಪೊಲೀಸರು- ಕಂದಮ್ಮನ ನಗುವಿನ ಫೋಟೋ ವೈರಲ್

    ಹೈದರಾಬಾದ್: ಅಪಹರಣಕ್ಕೊಳಗಾಗಿದ್ದ ನಾಲ್ಕು ತಿಂಗಳ ಮಗುವನ್ನು 15 ಗಂಟೆಯೊಳಗೆ ನಗರದ ಸಿಟಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

    ನಾಂಪಲ್ಲಿಯಲ್ಲಿ ಪಾದಚಾರಿ ಮಾರ್ಗದಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ 4 ತಿಂಗಳ ಫೈಝಾನ್ ಖಾನ್ ಎಂಬ ಗಂಡು ಮಗುವನ್ನು ಅಪಹರಣ ಮಾಡಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರರನ್ನು ಟ್ರ್ಯಾಕ್ ಮಾಡಿ ಆರೋಪಿಗಳಾದ ಮುಷ್ತಾಕ್ ಮತ್ತು ಮೊಹಮ್ಮದ್ ಯೂಸುಫ್‍ನನ್ನು ಬಂಧಿಸಿದ್ದಾರೆ. ಮಗುವನ್ನ ಪೋಷಕರಿಗೆ ಒಪ್ಪಿಸಿದ್ದಾರೆ.

    ಪೊಲೀಸರು ಮಗುವನ್ನು ಎತ್ತಿಕೊಂಡಿರುವ ಫೋಟೋಗಳನ್ನು ಹೆಚ್ಚುವರಿ ಕಮಿಷನರ್ ಸ್ವಾತಿ ಲಕ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 14 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಫೋಟೋದಲ್ಲಿ 4 ತಿಂಗಳ ಮಗು ಮುದ್ದಾಗಿ ನಗುತ್ತಿದ್ದು, ಅದರ ಜೊತೆ ಪೊಲೀಸರು ಕೂಡ ನಗುತ್ತಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    https://twitter.com/AddlCPCrimesHyd/status/916685135885377536

  • ದೇವತೆಗಳ ಸಮ್ಮುಖದಲ್ಲಿ ನಡೆಯಿತು ಮದುವೆ! ಫೋಟೋ ಗಳಲ್ಲಿ ನೋಡಿ

    ದೇವತೆಗಳ ಸಮ್ಮುಖದಲ್ಲಿ ನಡೆಯಿತು ಮದುವೆ! ಫೋಟೋ ಗಳಲ್ಲಿ ನೋಡಿ

    ಹೈದರಾಬಾದ್: ಹಿಂದೆ ರಾಜರೆಲ್ಲ ತಲೆ ಮೇಲೆ ಕಿರೀಟ ಹಾಗೂ ಆಭರಣವನ್ನೆ ಮೈ ಮೇಲೆ ಹೊತ್ತುಕೊಂಡು ವಿವಾಹವಾಗಿದ್ದನ್ನು ನೀವು ಟೀವಿಗಳಲ್ಲಿ ನೋಡಿರಬಹುದು. ಆದರೆ ಈಗ ಕಾಲ ಬದಲಾಗಿದೆ. ಕೋಟು, ಬೂಟು, ಸೂಟು, ಕುರ್ತಾ, ಪಂಚೆ, ಸಾವಿರಾರು ರೂ. ಬೆಲೆ ಬಾಳುವ ಸೀರೆ, ಇನ್ನಿತ್ಯಾದಿ ಬಟ್ಟೆಗಳನ್ನು ತೊಟ್ಟು ಮದುವೆಗಳು ನಡೆಯುತ್ತವೆ. ಆದರೆ ಇಲ್ಲೊಂದು ಮದುವೆ ಮಾತ್ರ ದೇವತೆಗಳ ಸಮ್ಮುಖದಲ್ಲಿ ಆಗಿದೆ.

    ಅರೇ ಇದೇನಪ್ಪ ಅಂತೀರಾ ಹೌದು. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಕ್ಕ ಪಟ್ಟಣವಾದ ತನುಕದಲ್ಲಿ ನಡೆದ ಮದುವೆ ತುಂಬಾ ವಿಶೇಷತೆಯಿಂದ ಕೂಡಿತ್ತು. ತಲೆ ಮೇಲೆ ಕಿರೀಟ, ಮೈ ತುಂಬಾ ಆಭರಣಗಳು ಹಾಕಿ ವಿಷ್ಣು, ಲಕ್ಷ್ಮೀ, ರಾಮ ಸೀತೆ ಮದುವೆನಾ ಎಂದು ಬಂದವರೆಲ್ಲಾ ಅನ್ನೋ ರೀತಿಯಲ್ಲಿ ವಧು ವರರು ಕಾಣುತ್ತಿದ್ದರು.

    ತನುಕು ಸಮೀಪದ ಮುಖ್ಯಮಾಲಾ ಆಶ್ರಮದ ಪೀಠಾಧಿಪತಿಯಾಗಿರುವ ಶ್ರೀಧರ್ ಸ್ವಾಮಿಯ ಮಗಳ ಮದುವೆಯಲ್ಲಿ‌ ಈ ‌ವಿಶೇಷತೆ ಕಂಡುಬಂದಿತ್ತು.ವಧು ಲಕ್ಷ್ಮೀ ದೇವಿಯಂತೆ ವಸ್ತ್ರ ಧರಿಸಿದ್ದರೆ, ವರನೂ ಕೂಡ ವಿಷ್ಣುವಿನಂತೆ ದಿರಿಸು ತೊಟ್ಟು ಹಸೆಮಣೆ ಏರಿದ್ದಾರೆ.

    ವಧು ಮತ್ತು ವರನ ಪೋಷಕರು ನಿಜವಾದ ದೇವತೆಗಳ ರೀತಿ ರಾಜ, ರಾಣಿಯಂತೆ ಅಲಂಕಾರ ಮಾಡಿಕೊಂಡು ಮದುವೆ ಕಾರ್ಯಕ್ರಮದ ಪ್ರಮುಖ ಕೇಂದ್ರ ಬಿಂದುವಾಗಿದ್ದರು. ರಾಜ ರಾಣಿಯರು ಧರಿಸುವಂತಹ ಆಭರಣಗಳು ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ಇವರನ್ನು‌ ನೋಡಿ ಅತಿಥಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಇವರಷ್ಟೇ ಅಲ್ಲದೇ ಇವರ ಆತ್ಮೀಯ ಸಂಬಂದಿಗಳು ದೇವತೆಗಳ ಉಡುಪನ್ನು ಧರಿಸಿ ಮದುವೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

    ಈ ವಿಶೇಷ ಉಡುಪುಗಳನ್ನು ಹಾಕಿ ಮದುವೆಯಾಗಿದ್ದು ಆಂಧ್ರದಲ್ಲಿ ಈಗ ಭಾರೀ ಸುದ್ದಿಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಒಂದು ಟ್ರೆಂಡ್ ಆಗಬಹುದು ಎನ್ನುವ ಮಾತುಗಳು ಕೇಳಿಬಂದಿದೆ.

     

  • ಮಹಿಳಾ ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

    ಮಹಿಳಾ ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

    ಹೈದರಾಬಾದ್: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಹಿಳಾ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಆನಂದ್(19) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ಮಧುರಾನಗರ್ ನಿವಾಸಿಯಾಗಿದ್ದು, ನಗರದ ಹೊರವಲಯದಲ್ಲಿರುವ ಮಲ್ಲ ರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಟೆಕ್ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಶನಿವಾರ ಚಂದ್ರಶೇಖರ್ ಮಗ ಆನಂದ್ ತಮ್ಮ ಮನೆ ಹತ್ತಿರವಿರುವ ರಾಜಧೂತ್ ಅಪಾರ್ಟ್‍ಮೆಂಟ್‍ಗೆ ತೆರಳಿದ್ದಾನೆ. ಕಟ್ಟಡದಲ್ಲಿ ಮಹಿಳೆಯರ ಹಾಸ್ಟೆಲ್ ಕೂಡ ಇತ್ತು. ಆನಂದ್ ಅಪಾರ್ಟ್‍ಮೆಂಟ್‍ನ ಮೇಲೆ ಹೋಗಿ ಅಲ್ಲಿಂದ ಜಿಗಿದಿದ್ದಾನೆ ಎಂದು ತಿಳಿಸಿದ್ದಾರೆ.

    ಮೇಲಿನಿಂದ ಜಿಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆನಂದ್‍ನನ್ನು ತಕ್ಷಣವೇ ಹತ್ತಿರದ ಅಪೊಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರವಾಗಿ ಪೆಟ್ಟು ಬಿದ್ದ ಕಾರಣ ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ ಎಂದು ವಿವರಿಸಿದ್ದಾರೆ.

    ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬಾಲ್ಯಸ್ನೇಹಿತೆಯ ಮರಣದಿಂದ ಮನನೊಂದ ತರಬೇತಿನಿರತ ಮಹಿಳಾ ಪೇದೆ ಆತ್ಮಹತ್ಯೆ!

    ಬಾಲ್ಯಸ್ನೇಹಿತೆಯ ಮರಣದಿಂದ ಮನನೊಂದ ತರಬೇತಿನಿರತ ಮಹಿಳಾ ಪೇದೆ ಆತ್ಮಹತ್ಯೆ!

    ಹೈದರಾಬಾದ್: ಇಲ್ಲಿನ ಗಂಡಿಪೇಟೆಯಲ್ಲಿರೋ ರಾಜ್ಯ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಮಹಿಳಾ ಪೇದೆಯೊಬ್ಬರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

    ಮೃತ ಮಹಿಳಾ ಪೇದೆಯನ್ನು ನಲ್ಗೊಂಡ ನಿವಾಸಿ ನವೀನ ಎಂಬುವುದಾಗಿ ಗುರುತಿಸಲಾಗಿದ್ದು, ಇವರು ತಾನು ಉಳಿದುಕೊಂಡಿದ್ದ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಆತ್ಮಹತ್ಯೆಗೆ ಕಾರಣವೇನು?: ಕಳೆದ ರಾತ್ರಿ ಈಕೆಯ ಗೆಳತಿ ಮಾಧವಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾಧವಿಗೆ ಮದುವೆ ಇಷ್ಟವಿರಲಿಲ್ಲ. ಆದ್ರೆ ಪೋಷಕರು ಒತ್ತಾಯದಿಂದ ಆಕೆಗೆ ಮದುವೆ ಮಾಡಿಸಲು ತಯಾರಿ ನಡೆಸುತ್ತಿದ್ದರು. ಅಲ್ಲದೇ ಹುಡುಗನನ್ನು ಹುಡುಕಿದ್ದರು. ಇದರಿಂದ ಮನನೊಂದ ಮಾಧವಿ ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ತಿಳಿದ ಬಳಿಕ ನವೀನ ಖಿನ್ನತೆಗೊಳಗಾಗಿದ್ದರು.

    ಮಾಧವಿ ಹಾಗೂ ನವೀನ ಬಾಲ್ಯದಿಂದಲೇ ಸ್ನೇಹಿತರಾಗಿದ್ದರು. ಹೀಗಾಗಿ ತನ್ನ ಬಾಲ್ಯ ಸ್ನೇಹಿತೆಯನ್ನು ಕಳೆದುಕೊಂಡ ದುಃಖದಲ್ಲಿ ನವೀನ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಬೆಳಗ್ಗೆ ಹಾಸ್ಟೆಲ್ ಕೋಣೆಯಿಂದ ನವೀನ ಹೊರಬಾರದ್ದನ್ನು ಗಮನಿಸಿದ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ನವೀನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ನವೀನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ರಸ್ತೆಯಲ್ಲಿ ಕಸಗುಡಿಸುವ ಮಂದಿ ಎಚ್ಚರವಾಗಿರಿ! ವಿಡಿಯೋ ನೋಡಿ

    ರಸ್ತೆಯಲ್ಲಿ ಕಸಗುಡಿಸುವ ಮಂದಿ ಎಚ್ಚರವಾಗಿರಿ! ವಿಡಿಯೋ ನೋಡಿ

    ಹೈದರಾಬಾದ್: ತೆಲಂಗಾಣದ ವಾರಂಗಲ್ ಜಿಲ್ಲೆಯ ಪರ್ಕಳದ ರಸ್ತೆಯೊಂದರಲ್ಲಿ ಕಸಗುಡಿಸುತ್ತಿದ್ದ ಮಹಿಳೆ ಕಾರ್ಮಿಕರೊಬ್ಬರಿಗೆ ಲಾರಿಯೊಂದು ಏಕಾಏಕಿ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

    ವಿಡಿಯೋದಲ್ಲಿ ಮುಂಜಾನೆ ಇಬ್ಬರು ಮಹಿಳಾ ಕಾರ್ಮಿಕರು ಎಂದಿನಂತೆ ರಸ್ತೆಯನ್ನು ಶುಚಿ ಮಾಡುತ್ತಿದ್ದರು. ಈ ವೇಳೆ ಓರ್ವ ಕಾರ್ಮಿಕರ ಪೊರಕೆ ಸಡಿಲ ಗೊಂಡಿದ್ದು, ಅದನ್ನು ರಸ್ತೆಯಲ್ಲಿ ನಿಂತುಕೊಂಡು ಸರಿಪಡಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯೊಂದು ಸ್ವಲ್ಪ ದೂರದಿಂದ ಬರುತ್ತಿತ್ತು.

    ಲಾರಿ ಚಾಲಕ ಅಡ್ಡ ದಿಡ್ಡಿಯಾಗಿ ಓಡಿಸುತ್ತಾ ಮಹಿಳೆಯ ನಿಂತಿದ್ದ ಕಡೆ ಬಂದು ಏಕಾಏಕಿ ಡಿಕ್ಕಿ ಹೊಡೆದು ವೇಗವಾಗಿ ಲಾರಿಯನ್ನು ಓಡಿಸಿಕೊಂಡು ಪರಾರಿಯಾಗಿದ್ದಾನೆ. ಇತ್ತ ಲಾರಿ ಗುದ್ದಿದ್ದ ರಭಸಕ್ಕೆ ಅವರು ಮೇಲೆ ಹಾರಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಏಟು ಬಿದ್ದಿದ್ದರೂ ಅವರು ತಕ್ಷಣ ಮೇಲೆ ಎದ್ದು ಕುಳಿತುಕೊಂಡಿದ್ದಾರೆ. ಇದನ್ನು ನೋಡಿದ ಸಹೋದ್ಯೋಗಿ ತಕ್ಷಣ ಅವರ ಸಹಾಯಕ್ಕೆ ಬಂದಿದ್ದಾರೆ.

    ಈ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

    https://www.youtube.com/watch?v=YeRBvV2GXsE

  • ಬಸ್ ಲಾರಿಗೆ ಡಿಕ್ಕಿ ಸ್ಥಳದಲ್ಲಿಯೇ 6 ಮಂದಿ ಸಾವು 16 ಮಂದಿ ಗಂಭೀರ ಗಾಯ

    ಬಸ್ ಲಾರಿಗೆ ಡಿಕ್ಕಿ ಸ್ಥಳದಲ್ಲಿಯೇ 6 ಮಂದಿ ಸಾವು 16 ಮಂದಿ ಗಂಭೀರ ಗಾಯ

    ಹೈದರಾಬಾದ್: ಸರ್ಕಾರಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದ್ದು, 16 ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸುರ್ಯಾಪೇಟ್ ಜಿಲ್ಲೆಯ ಮುನಗಾಲ ಮಂಡಲ್ ಗ್ರಾಮದ ಬಳಿ ನಡೆದಿದೆ.

    ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‍ಆರ್‍ಟಿಸಿ) ಬಸ್ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಸ್ಟೇಷನರಿ ಲಾರಿಗೆ ಡಿಕ್ಕಿ ಹೊಡೆದಿದೆ. ಆಂಧ್ರ ಪ್ರದೇಶದ ಅವನಿಗಡ್ಡ ಡಿಪೋಯಿಂದ ಬಸ್ ಹೈದರಾಬಾದ್ ಕಡೆಗೆ ಹೊರಟಿದ್ದು, ಮೊಡುಗುಲಾ ಸಮೀಪದ ರಾಷ್ಟ್ರೀಯ ಹೆದ್ದಾರಿ 65 ರಸ್ತೆಯಲ್ಲಿ ಬೆಳಗ್ಗೆ 3 ಗಂಟೆಗೆ ಈ ಅಪಘಾತ ಸಂಭವಿಸಿದೆ.

    ರಸ್ತೆಯ ಪಕ್ಕ ಲಾರಿ ನಿಲ್ಲಿಸಿ ಚಾಲಕ ವರಪ್ರಸಾದ್ ಟಯರ್ ಬದಲಾಯಿಸುತ್ತಾ ಲಾರಿ ಕೆಳಗೆ ಇದ್ದನು. ಬಸ್ ಡ್ರೈವರ್ ಮುನಗಾಲ ಮಂಡಲ್‍ನಲ್ಲಿ ನಿಂತಿದ್ದ ಲಾರಿಯನ್ನು ಗಮನಿಸದೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕಾಲುಗಳು ಲಾರಿ ಕೆಳಗೆ ಸಿಲುಕಿಕೊಂಡಿದೆ. ನಂತರ ಸ್ಥಳಕ್ಕೆ ಕ್ರೇನ್ ಅನ್ನು ಕರೆಸಿ ಮೂರು ಗಂಟೆಯ ನಂತರ ಆತನನ್ನು ಹೊರ ತೆಗೆಲಾಗಿದೆ. ನಂತರ ಚಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುಲಾಯಿತು. ಆದರೆ ಮಾರ್ಗ ಮಧ್ಯೆದಲ್ಲಿಯೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

    ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‍ನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಬಸ್‍ನಲ್ಲಿ ಸುಮಾರು 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಲಾರಿ ಚಾಲಕ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.

  • ಬಾಹುಬಲಿ ಪ್ರಭಾಸ್ ಮೆಸೇಜ್ ನೋಡಿ ಅಭಿಮಾನಿಗಳು ಫಿದಾ!

    ಬಾಹುಬಲಿ ಪ್ರಭಾಸ್ ಮೆಸೇಜ್ ನೋಡಿ ಅಭಿಮಾನಿಗಳು ಫಿದಾ!

    ಹೈದರಾಬಾದ್: ಬಾಹುಬಲಿಯ ನಟ ಪ್ರಭಾಸ್ ಫೇಸ್‍ಬುಕ್‍ನಲ್ಲಿ ಗಾಂಧೀಜಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತದ ಬಗ್ಗೆ ಉತ್ತಮ ಸಂದೇಶವನ್ನು ಪೋಸ್ಟ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮಹಾತ್ಮ ಗಾಂಧೀಜಿಯವರು ದೇಶದ ಸ್ವಚ್ಛತೆಗಾಗಿ ಶ್ರಮಿಸಿದ್ದರು. ಈ ಬಾರಿ ನಡೆಯಲಿರುವ ಸ್ವಚ್ಛ ಭಾರತ್‍ನಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಕೆಲವೊಮ್ಮೆ ವೈಯಕ್ತಿಕವಾಗಿ ಈ ವಿಷಯದ ಬಗ್ಗೆ ಯೋಚಿಸುತ್ತೇನೆ. ದೇಶದ ನಾಗರಿಕನಾಗಿ ಇದು ನಮ್ಮ ಕರ್ತವ್ಯ ಮಾತ್ರ ಅಲ್ಲ ಇದು ಹವ್ಯಾಸ ಆಗಬೇಕೆಂದು ಅವರು ಹೇಳಿದ್ದಾರೆ.

    ಈ ರೀತಿಯ ಯೋಚನೆ ಮಾಡುವ ನಾವೆಲ್ಲ ಸೇರಿಕೊಂಡಿ ಭಾರತವನ್ನು ಸ್ವಚ್ಛವಾಗಿ ಇಡೋಣ ಹಾಗೂ ನಾವೆಲ್ಲರೂ ಜೊತೆಯಾಗಿದ್ದರೆ ಭಾರತವನ್ನು ಇನ್ನಷ್ಟು ಸುಂದರವಾಗಿಸಬಹುದು ಎಂದು ಪ್ರಭಾಸ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದಿದ್ದಾರೆ.