Tag: Hyderabad

  • ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕದ್ದ ಅಳಿಯ

    ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕದ್ದ ಅಳಿಯ

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಹೈದರಾಬಾದ್‍ನ ಸಂಜೀವರೆಡ್ಡಿ ನಗರದ ತುಳಸಿ ನಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ ಈ ಘಟನೆ ಡಿಸೆಂಬರ್ 31ರಂದು ನಡೆದಿದೆ. ಆರೋಪಿ ಹ್ಯಾರಿ ತುಳಸಿ ನಗರದಲ್ಲಿನ ತನ್ನ ಅತ್ತೆಯ ಮನೆಗೆ ಕಳ್ಳನ ವೇಷದಲ್ಲಿ ನುಗ್ಗಿದ್ದಾನೆ. ನಂತರ ನಿದ್ದೆ ಮಾಡುತ್ತಿದ್ದ ತನ್ನ ಅತ್ತೆ ಅಂಟೋನಮ್ಮ ಅವರನ್ನ ಥಳಿಸಿದ್ದಾನೆ. ಇದನ್ನ ಅವರು ತಡೆಯಲು ಯತ್ನಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ನಂತರ ಮನೆಯಲ್ಲಿದ್ದ ಚಿನ್ನದ ಆಭರಣಗಳನ್ನ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

    ಈ ಹಿನ್ನೆಲೆಯಲ್ಲಿ ಅಂಟೋನಮ್ಮ ಮರುದಿನ ಬೆಳಗ್ಗೆ ಎಸ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಪೊಲೀಸರು ಹ್ಯಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹ್ಯಾರಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

  • ಸಿನಿಮಾ ಥಿಯೇಟರ್ ಗೇಟ್ ಹಾರಿದ ನಟ ಸೂರ್ಯ

    ಸಿನಿಮಾ ಥಿಯೇಟರ್ ಗೇಟ್ ಹಾರಿದ ನಟ ಸೂರ್ಯ

    ಹೈದರಾಬಾದ್: ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ತಮ್ಮ ‘ಗ್ಯಾಂಗ್’ ಚಿತ್ರದ ಪ್ರಮೋಷನ್ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಥಿಯೇಟರ್ ಗೇಟ್ ಹಾರಿದ್ದಾರೆ.

    ಕಳೆದ ವಾರ ಬಿಡುಗಡೆಯಾಗಿರುವ ಸೂರ್ಯ ಅವರ `ಗ್ಯಾಂಗ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು. ತಮಿಳು, ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್‍ಗೆ ಮಂಗಳವಾರ ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಗೆ ಸೂರ್ಯ ತೆರಳಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಗ್ಯಾಂಗ್ ಚಿತ್ರದ ಬಗ್ಗೆ ಮಾತನಾಡಿ ಧನ್ಯವಾದ ತಿಳಿಸಿದ್ರು.

    ಆದರೆ ತಮ್ಮ ನೆಚ್ಚಿನ ನಟ ಬಂದ ಸುದ್ದಿ ತಿಳಿದ ಜನರು ಅವರನ್ನು ನೋಡಲು ಚಿತ್ರ ಮಂದಿರದ ಬಳಿ ಜಮಾಯಿಸಿದ್ದರು. ಹೀಗಾಗಿ ಸಕ್ಸಸ್ ಮೀಟ್ ಮುಗಿಸಿ ಸೂರ್ಯ ಥಿಯೇಟರ್‍ನಿಂದ ತೆರಳಲು ಆಗದೇ ಕಷ್ಟ ಪಟ್ಟಿದ್ದಾರೆ. ಅಭಿಮಾನಿಗಳಿಂದ ಪಾರಾಗಲು ಯತ್ನಿಸಿದ ಸೂರ್ಯ, ಬಂದ್ ಆಗಿದ್ದ ಗೇಟ್ ಹಾರಿ, ತಮ್ಮ ಕಾರಿನ ಬಳಿ ಬಂದು ಅಲ್ಲಿಂದ ಹೋಗಿದ್ದಾರೆ. ನಟ ಸೂರ್ಯ ಚಿತ್ರ ಮಂದಿರದ ಗೇಟ್ ಹಾರುತ್ತಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಅಭಿಮಾನಿಗಳು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗ್ಯಾಂಗ್ ಚಿತ್ರದಲ್ಲಿ ಸೂರ್ಯ ಅವರ ಜೊತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಹುಬಲಿ ಖ್ಯಾತಿಯ ರಮ್ಯಾಕೃಷ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.youtube.com/watch?v=GFtOm2JrV2Y

  • ಜಸ್ಟ್ 500 ರೂ. ಕೊಟ್ರೆ ಪಾರ್ಕ್ ಗಳಲ್ಲಿ ಪ್ರೇಮಿಗಳಿಗೆ ಸಿಗುತ್ತೆ ರಹಸ್ಯ ಸ್ಥಳ!

    ಜಸ್ಟ್ 500 ರೂ. ಕೊಟ್ರೆ ಪಾರ್ಕ್ ಗಳಲ್ಲಿ ಪ್ರೇಮಿಗಳಿಗೆ ಸಿಗುತ್ತೆ ರಹಸ್ಯ ಸ್ಥಳ!

    ಹೈದರಾಬಾದ್: ಪಾರ್ಕ್ ಗಳಲ್ಲಿ ಪ್ರೇಮಿಗಳ ಅಕ್ರಮಗಳಿಗೆ ತಡೆ ಹಾಕಬೇಕಾದ ಭದ್ರತಾ ಸಿಬ್ಬಂದಿ ಈಗ ಅವರಿಂದಲೇ ಹಣವನ್ನು ಪಡೆದು ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ತೆಲಂಗಾಣ ರಾಜಧಾನಿ ಹೈದರಾಬಾದ್‍ನಲ್ಲಿರುವ ಪ್ರಮುಖ ಪಾರ್ಕ್ ಗಳಾದ ಇಂದಿರಾ, ಸಂಜಿವಯ್ಯ, ದುರ್ಗಂ ಚೆರುವು ಪಾರ್ಕ್ ಗಳಲ್ಲಿ ಆಕ್ರಮ ಚಟುವಟಿಕೆಗಳು ರಾಜರೋಷವಾಗಿ ನಡೆಯುತ್ತಿವೆ. ಅಕ್ರಮ ಚಟುವಟಿಕೆಗಳಿಗೆ ಭದ್ರತಾ ಸಿಬ್ಬಂದಿ ಹೇಗೆ ಸಾಥ್ ನೀಡುತ್ತಾರೆ ಎಂದರೆ, 500 ರೂ. ಕೊಟ್ಟರೆ ಅವರೇ ಪಾರ್ಕ್ ನ ರಹಸ್ಯ ಸ್ಥಳವನ್ನು ತೋರಿಸುತ್ತಾರೆ ಎಂದು ಪ್ರತಿಕೆಯೊಂದು ವರದಿ ಮಾಡಿದೆ.

    500 ರೂ. ನೀಡಿದರೆ ಯಾರಿಗೂ ಕಾಣದ ಸ್ಥಳದಲ್ಲಿ ಒಂದು ಗಂಟೆಯ ಅವಧಿವರೆಗೆ ಪ್ರೇಮಿಯ ಜೊತೆ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತದೆ. ಪಾರ್ಕ್ ನ ಪ್ರತಿಯೊಂದು ಸ್ಥಳಕ್ಕೂ ಒಂದು ದರ ನಿಗದಿ ಮಾಡಲಾಗಿದ್ದು, 50 ರೂ. ನಿಂದ 200ರೂ. ವರೆಗೂ ಅಕ್ರಮವಾಗಿ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

    ಸಾರ್ವಜನಿಕ ಪಾರ್ಕ್ ಗಳ ಈ ವ್ಯವಸ್ಥೆಗೆ ಸೆಕ್ಯೂರಿಟಿ ಸಿಬ್ಬಂದಿ ಆಕ್ರಮವಾಗಿ ಅವಕಾಶ ನೀಡುತ್ತಿರುವುದರಿಂದ ಸಂಜೆಯ ವೇಳೆಗೆ ಪಾರ್ಕ್ ಗಳು ಯುವ ಜೋಡಿಗಳಿಂದ ತುಂಬಿ ತುಳುಕುತ್ತಿವೆ. ರಾತ್ರಿ 11 ಗಂಟೆಯಾದರೂ ಜೋಡಿಗಳು ಪಾರ್ಕ್ ಗಳನ್ನು ಬಿಟ್ಟು ತೆರಳುತ್ತಿಲ್ಲ ಎಂದು ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಪಾರ್ಕ್ ಗಳ ಯಾವ ಪ್ರದೇಶವನ್ನು ನೋಡಿದರು ಸಹ ಕಾಂಡೋಮ್ ಪ್ಯಾಕೆಟ್ ಗಳ ದರ್ಶನವಾಗುತ್ತಿದ್ದು, ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ಹಲವು ವರದಿಗಳನ್ನು ಬಿತ್ತರಿಸಿದ ಪರಿಣಾಮ ಅಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ಕೆಲ ದಿನಗಳ ನಂತರ ಅಧಿಕಾರಿಗಳು ಇತ್ತ ಗಮನಿಸದ ಕಾರಣ ಮತ್ತೆ ಅಕ್ರಮ ಚಟುವಟಿಕೆಗಳು ತಲೆ ಎತ್ತಿದೆ.

    ನಗರದ ಜನರು ಕುಟುಂಬ ಸದಸ್ಯರೊಂದಿಗೆ ಸೇರಿ ಸಾರ್ವಜನಿಕ ಪಾರ್ಕ್ ಗಳಿಗೆ ಭೇಟಿ ನೀಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾರ್ಕ್ ಗಳಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಪ್ರೇಮಿಗಳ ವರ್ತನೆಗೆ ಬೇಸತ್ತ ಜನರು ಪಾರ್ಕ್ ಗಳಿಗೆ ಭೇಟಿ ನೀಡುವುದನ್ನೇ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

  • ಪ್ರೀತಿಸಿ ಓಡಿಹೋಗಿ ಮದ್ವೆಯಾದವರು ಪೋಷಕರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ರು!

    ಪ್ರೀತಿಸಿ ಓಡಿಹೋಗಿ ಮದ್ವೆಯಾದವರು ಪೋಷಕರಿಂದ ತಪ್ಪಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ರು!

    ಹೈದರಾಬಾದ್: ಪ್ರೇಮಿಗಳಿಬ್ಬರು ಯುವತಿಯ ಪೋಷಕರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಅಪಘಾತವಾಗಿರುವ ಘಟನೆ ಕಮ್ಮಮ್ ಜಿಲ್ಲೆಯ ಗೋಪಾಲಪುರಂನಲ್ಲಿ ನಡೆದಿದೆ.

    ಸುಮಾ ಹಾಗೂ ತರುಣ್ ಇಬ್ಬರು ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರು ಶನಿವಾರ ಬೆಳಗ್ಗೆ ಭದ್ರಚಲಂಗೆ ಹೋಗಿ ಮದುವೆ ಆಗಿದ್ದರು. ಭದ್ರಚಲಂನಲ್ಲಿ ಮದುವೆಯಾಗಿ ಹಿಂತಿರುಗುತ್ತಿದ್ದಾಗ ಯುವತಿಯ ಸಂಬಂಧಿಕರು ಅವರನ್ನು ಸಿನಿಮಿಯ ರೀತಿಯಲ್ಲಿ ಚೇಸ್ ಮಾಡಿದ್ದರು.

    ಈ ಸಂದರ್ಭದಲ್ಲಿ ಯುವತಿ ಸುಮಾ ಅವರ ಪೋಷಕರಿಂದ ತಪ್ಪಿಸಿಕೊಳ್ಳಲು, ಪ್ರೇಮಿಗಳು ಹಾಗೂ ಇನ್ನೂ ಇಬ್ಬರು ಇದ್ದ ಕಾರನ್ನು ವೇಗವಾಗಿ ಚಲಿಸಿದ್ದರು. ಅಂತೆಯೇ ಕಾರ್ ಗೋಪಾಲಪುರಂ ಬಳಿ ಬರುತ್ತಿದ್ದಾಗ ಕಲ್ವರ್ಟ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ.

    ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನೆಯಲ್ಲಿ ಪ್ರೇಮಿಗಳು ಹಾಗೂ ಮತ್ತೊಬ್ಬ ಸ್ನೇಹಿತ ಗಾಯಗೊಂಡಿದ್ದು, ಕೂಡಲೇ ಅವರನ್ನು ಕಮ್ಮಮ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ತರುಣ್ ನ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ವರದಿಯಾಗಿದೆ.

  • ಡಿವೈಡರ್ ಗೆ ಡಿಕ್ಕಿ ಹೊಡೆದು-10 ಅಡಿ ಚಿಮ್ಮಿ ಮತ್ತೊಂದು ಕಾರಿಗೆ ಡಿಕ್ಕಿ

    ಡಿವೈಡರ್ ಗೆ ಡಿಕ್ಕಿ ಹೊಡೆದು-10 ಅಡಿ ಚಿಮ್ಮಿ ಮತ್ತೊಂದು ಕಾರಿಗೆ ಡಿಕ್ಕಿ

    ಹೈದರಾಬಾದ್: ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು, ಎದುರಿಗೆ ಬರುತ್ತಿದ್ದ ಮತ್ತೊಂದು ಕಾರ್‍ಗೆ ಡಿಕ್ಕಿ ಹೊಡೆದಿರುವ ಘಟನೆ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಹೈದರಾಬಾದ್- ನಿಜಾಮಾಬಾದ್ ನಡುವಿನ ಮೆದಕ್ ಜಿಲ್ಲೆ ನಾರ್ಸಿಂಗ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಘಟನೆ ನಡೆದಿದೆ. ನಿಜಾಮಾಬಾದ್ ನಿಂದ ಹೈದರಾಬಾದ್ ಗೆ ಹೋಗುತ್ತಿದ್ದ ಕಾರು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ 10 ಅಡಿ ಮೇಲಕ್ಕೆ ಚಿಮ್ಮಿ, ಮತ್ತೊಂದು ಬದಿಯಲ್ಲಿ ಎದುರಿಗೆ ಬರುತ್ತಿದ್ದ ಕಾರ್ ಮೇಲೆ ಬಿದ್ದಿದೆ.

    ಅತಿ ವೇಗವಾಗಿ ಕಾರು ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

  • ಕೌನ್ ಬನೇಗಾ ಕರೋಡ್‍ಪತಿಯಲ್ಲಿ ಗೆದ್ದ ಹಣವನ್ನ ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿವಿ ಸಿಂಧು

    ಕೌನ್ ಬನೇಗಾ ಕರೋಡ್‍ಪತಿಯಲ್ಲಿ ಗೆದ್ದ ಹಣವನ್ನ ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿವಿ ಸಿಂಧು

    ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ, ಪದ್ಮಶ್ರೀ ಪುರಸ್ಕೃತೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಖ್ಯಾತ ಟಿವಿ ಶೋವೊಂದರಲ್ಲಿ ಗೆದ್ದ ಸುಮಾರು 25 ಲಕ್ಷ ರೂಪಾಯಿ ಹಣವನ್ನು ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

    ಬಾಲಿವುಡ್ ಹಿರಿಯ ನಟ, ಬಿಗ್ ಬಿ, ಅಮಿತಾಬ್ ಬಚ್ಚನ್ ನಿರೂಪಣೆಯ `ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧು, 25 ಲಕ್ಷ ರೂ. ಹಣವನ್ನು ಗೆದ್ದಿದ್ದರು. ಅದನ್ನು ಬಸವತಾರಕಂ ಇಂಡೋ-ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ಸಿಂಧು ದಾನ ಮಾಡಿದ್ದಾರೆ.

    ಆಸ್ಪತ್ರೆಯ ಮುಖ್ಯಸ್ಥ, ಟಾಲಿವುಡ್‍ನ ಖ್ಯಾತ ನಟ ಎನ್.ಬಾಲಕೃಷ್ಣ ಅವರಿಗೆ ಸಿಂಧು 25 ಲಕ್ಷ ರೂ. ಚೆಕ್ ನೀಡಿದ್ದಾರೆ. ಕ್ಯಾನ್ಸರ್ ಆಸ್ಪತ್ರೆಗೆ ಹಣ ದಾನ ಮಾಡಿರುವ ಸಿಂಧು ಅವರನ್ನು ಬಾಲಕೃಷ್ಣ ಅಭಿನಂದಿಸಿ ಸಿಂಧು ಮಾಡಿದ ಕಾರ್ಯ ಇತರರಿಗೆ ಮಾದರಿಯಾಗುತ್ತದೆ ಎಂದು ಹೇಳಿದ್ದಾರೆ.

     

  • ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದೇ ಬಿಟ್ಟ!

    ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದೇ ಬಿಟ್ಟ!

    ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದಿರುವ ಅಮಾನವೀಯ ಘಟನೆ ನಗರದ ಮೋಸಾಪೇಟ್‍ನಲ್ಲಿ ನಡೆದಿದೆ.

    ಶ್ರೀಕಾಕುಲಂನ ಬೋನು ಜಾನಕಿ ಕೊಲೆಯಾದ ದುರ್ದೈವಿ. ಈಕೆ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಹಬಿಬ್‍ನಗರದಲ್ಲಿ ವಾಸವಿದ್ದಳು. ಅದೇ ನಗರದಲ್ಲಿ ವಾಸವಿದ್ದ ಆನಂದ್. ಪ್ರೀತಿ ಹೆಸರಲ್ಲಿ ಆಕೆಯ ಹಿಂದೆ ಸುತ್ತಾಡುತ್ತ ತೊಂದರೆ ಕೊಡುತ್ತಿದ್ದನು.

    ಆನಂದ್ ಒಂದು ದಿನ ತನ್ನ ಪ್ರೀತಿಯನ್ನು ಹೇಳಿದ್ದಾನೆ. ಆದರೆ ಜಾನಕಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆನಂದ್ ಜಾನಕಿಗೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಜಾನಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು ಈ ಬಗ್ಗೆ ಕಠಿಣವಾದ ಕ್ರಮವನ್ನು ತೆಗೆದುಕೊಂಡಿಲ್ಲ.

    ಮಂಗಳವಾರ ಸಂಜೆ ಜಾನಕಿ ತನ್ನ ಮನೆಯಲ್ಲಿ ಒಬ್ಬಳೆ ಇದ್ದಳು. ಈ ಸಂದರ್ಭದಲ್ಲಿ ಆನಂದ್ ಮನೆಗೆ ಬಂದು ಏಕಾಏಕಿ ಜಾನಕಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಆರೋಪಿ ಆನಂದ್ ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದನು. ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಅಪಘಾತ- ವಿದ್ಯಾರ್ಥಿನಿ ಸಾವು

    ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಅಪಘಾತ- ವಿದ್ಯಾರ್ಥಿನಿ ಸಾವು

    ಹೈದರಾಬಾದ್: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ಹೊರವಲಯದ ಶಂಶಾಬಾದ್ ರಸ್ತೆಯಲ್ಲಿ ನಡೆದಿದೆ.

    ಅನನ್ಯ ಗೋಯಲ್ ಮೃತ ದುರ್ದೈವಿ. ಈಕೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅನನ್ಯ ತನ್ನ ಇಬ್ಬರು ಸ್ನೇಹಿತರ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಶಾಂಶಬಾದ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

    ಮಂಗಳವಾರದಂದು ಅನನ್ಯ ಮತ್ತು ಸ್ನೇಹಿತರಾದ ನಿಖಿತಾ ಹಾಗೂ ಜತಿನ್ ಪೆದ್ದ ಅಂಬೆರ್‍ಪೇಟ್‍ನಿಂದ ಶಾದ್‍ನಗರಕ್ಕೆ ಪ್ರಯಾಣಿಸುತ್ತಿದ್ದರು. ಜತಿನ್ ಕಾರು ಓಡಿಸುತ್ತಿದ್ದ. ನಿಖಿತಾ ಮತ್ತು ಜತಿನ್ ಸೀಟ್‍ಬೆಲ್ಟ್ ಧರಿಸಿದ್ದರು. ಆದರೆ ಅನನ್ಯ ಹಿಂದಿನ ಸೀಟ್‍ನಲ್ಲಿ ಕುಳಿತಿದ್ದಳು. ಮುಂಜಾನೆ ಸುಮಾರು 3 ಗಂಟೆಯಲ್ಲಿ ಒಂದು ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಡೈವರ್ ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಇನ್ನೊಂದು ರಸ್ತೆಗೆ ಹೋಗಿ ಬಿದ್ದಿದೆ ಎಂದು ಶಾಂಶಬಾದ್‍ನ ಡಿಸಿಪಿ ಹೇಳಿದ್ದಾರೆ.

    ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅನನ್ಯ ಬದುಕುಳಿಯಲಿಲ್ಲ. ನಿಖಿತಾ ಮತ್ತು ಜತಿನ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅನನ್ಯ ಮೂಲತಃ ಉತ್ತರ ಪ್ರದೇಶದವಳಾಗಿದ್ದು, ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಬ್ಲೂವೇಲ್ ಗೇಮ್ ಚಾಲೆಂಜ್ : ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಯುವಕ ಆತ್ಮಹತ್ಯೆ

    ಬ್ಲೂವೇಲ್ ಗೇಮ್ ಚಾಲೆಂಜ್ : ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಯುವಕ ಆತ್ಮಹತ್ಯೆ

    ಹೈದರಾಬಾದ್: ದೇಶಾದ್ಯಂತ ಬ್ಲೂ ವೇಲ್ ಗೇಮ್ ಚಾಲೆಂಜ್ ಕುರಿತು ಎಷ್ಟೇ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರು, ಈ ಗೇಮ್ ಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಸಂಶಯಾಸ್ಪದ ಘಟನೆ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ.

    ನಗರದ 19 ವರ್ಷದ ಯುವಕನೊಬ್ಬ ಬ್ಲೂ ವೇಲ್ ಗೇಮ್ ಚಟಕ್ಕೆ ಬಿದ್ದು, ತನ್ನ ಮುಖವನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಟಿ.ವರುಣ್ ಎಂದು ತಿಳಿದು ಬಂದಿದೆ. ವರುಣ್ ನಗರದ ಹೊರವಲಯದ ಗಾಂಡಿಪೇಟ್ ಬಳಿಯ ಮ್ಯಾಪಲ್ ಟೌನ್ ವಿಲ್ಲಾಸ್ ನಲ್ಲಿ ಕುಟುಂಬದೊಂದಿಗೆ ವಾಸವಿದ್ದನು.

    ಮೃತ ವರುಣ್ ತಂದೆ ಶನಿವಾರ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ವರುಣ್ ಬಿ.ಟೆಕ್ ವಿದ್ಯಾರ್ಥಿಯಾಗಿದ್ದು, ಎಲ್ಲರೊಂದಿಗೂ ಉತ್ತಮವಾಗಿ ಮಾತನಾಡಿಕೊಂಡು ಸಾಮಾನ್ಯವಾಗಿದ್ದ, ಆದರೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

    ಘಟನೆ ಕುರಿತು ಮಾಹಿತಿ ನೀಡಿರುವ ಎಸ್ಪಿ ಉಮೇಂದರ್, ವರುಣ್ ಬ್ಲೂ ವೇಲ್ ಗೇಮ್ ಚಾಲೆಂಜ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅನುಮಾನ ವ್ಯಕ್ತ ಪಡಿಸಿದ್ದು, ಆತ ಬಳಕೆ ಮಾಡುತ್ತಿದ್ದ ಲ್ಯಾಪ್ ಟಾಪ್ ಅನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

    ಈ ಹಿಂದೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬ್ಲೂ ವೇಲ್ ಗೇಮ್ ಕುರಿತು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲು ಪೋಷಕರು ಹಾಗೂ ಶಾಲೆಗಳಲ್ಲಿ ಮನವಿ ಮಾಡಿದ್ದರು.

  • ಕಾಲಿನಿಂದಲೇ ವಿಶ್ವದ ಅತೀ ದೊಡ್ಡ ಪೇಂಟಿಂಗ್ ರಚಿಸಿದ ಯುವತಿ

    ಕಾಲಿನಿಂದಲೇ ವಿಶ್ವದ ಅತೀ ದೊಡ್ಡ ಪೇಂಟಿಂಗ್ ರಚಿಸಿದ ಯುವತಿ

    ಹೈದರಾಬಾದ್: ಮುತ್ತಿನನಗರಿ ಹೈದರಾಬಾದ್‍ನ ಯುವತಿಯೊಬ್ಬರು ವಿಶಿಷ್ಟ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಇಲ್ಲಿನ 18 ವರ್ಷದ ಜಾಹ್ನವಿ ಮಗಂಟಿ ಕಾಲಿನಿಂದಲೇ ವಿಶ್ವದ ಬೃಹತ್ ಪೇಂಟಿಂಗ್ ಮಾಡಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟ ಸೇರಲು ಯತ್ನಿಸಿದ್ದಾರೆ.

    ಇದುವರೆಗೂ ವೈಕ್ತಿಕವಾಗಿ ಕಾಲಿನಿಂದ ಮಾಡಿದ 100 ಚದರ ಮೀಟರ್ ಪೇಂಟಿಂಗ್ ಗಿನ್ನಿಸ್ ದಾಖಲೆಯ ಪುಟ ಸೇರಿದೆ. ಆದರೆ ಜಾಹ್ನವಿ ಅವರು 140 ಚದರ ಮೀಟರ್ ಪೇಂಟಿಂಗ್ ಮಾಡುವ ಮೂಲಕ ಈ ದಾಖಲೆಯನ್ನ ಮುರಿದಿದ್ದಾರೆ.

    ನಗರದ ಗಚ್ಚಿಬೌಲಿಯ ಕ್ಲಬ್ ಹೌಸ್‍ನಲ್ಲಿ ಶುಕ್ರವಾರ ವಿಶ್ವ ದಾಖಲೆಯ 140 ಚದರ ಮೀಟರ್ ಪೇಂಟಿಂಗ್ ಬಿಡಿಸಿದ್ದಾರೆ. ಗಿನ್ನಿಸ್ ರೆಕಾರ್ಡ್ ಪ್ರತಿನಿಧಿಗಳ ಮುಂದೆ ಜಾಹ್ನವಿ ಪೇಂಟಿಂಗ್ ಮಾಡಿದ್ದಾರೆ. ಕಾಲಿನಿಂದ ಬಣ್ಣಗಳ ಅದ್ಭುತ ಚಿತ್ರವನ್ನು ಬಿಡಿಸಿದ್ದಾರೆ.

    ಬಿಟ್ರನ್‍ ನ ವಾರ್ವಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಜಾಹ್ನವಿ ಅವರು ಪೇಂಟಿಂಗ್‍ನಲ್ಲಿ ಮಾತ್ರವಲ್ಲದೇ, ನೃತ್ಯ, ಸಂಗೀತದಲ್ಲೂ ಪರಿಣಿತಿ ಹೊಂದಿದ್ದಾರೆ. ಡ್ಯಾನ್ಸ್ ಮಾಡುತ್ತಾ ಪೇಂಟಿಂಗ್ ಮಾಡುವುದರಲ್ಲೂ ಜಾಹ್ನವಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಕ್ರೀಡೆಯಲ್ಲೂ ಮುಂದಿರುವ ಇವರು ರಾಷ್ಟ್ರೀಯ ತಂಡದ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಇತ್ತೀಚೆಗೆ ಜಾಹ್ನವಿ ಅವರು ನೃತ್ಯ ಮಾಡುತ್ತಾ ಕಮಲ ಹಾಗೂ ನವಿಲುಗರಿಯ ಚಿತ್ರವನ್ನು ಬಿಡಿಸಿದ್ದಾರೆ.