ಹೈದರಾಬಾದ್: ಮದುವೆ ನಿಶ್ಚಯ ಮಾಡಿದ್ದಕ್ಕೆ ಸಹೋದರಿಯರಿಬ್ಬರು ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಅದಿಲಾಬಾದ್ ಜಿಲ್ಲೆಯ ನಾರಡಿಗಂಡ ಮಂಡಲಮ್ ನ ಬಂಡಿಡಿ ಗ್ರಾಮದ ಕಮಲ್ ಸಿಂಗ್ ಮಕ್ಕಳಾದ ಅಂಜುಲಾ (18) ಮತ್ತು ಅರ್ಚನಾ (19) ಆತ್ಮಹತ್ಯೆಗೆ ಶರಣಾದ ಸಹೋದರಿಯರು ಎಂದು ಗುರುತಿಸಲಾಗಿದೆ.
ಕಿರಿಯ ಸಹೋದರಿ ಅಂಜುಲಾ 7ನೇ ತರಗತಿವರೆಗೆ ಓದಿದ್ದರೆ, ಅರ್ಚನಾ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇವರ ಪೋಷಕರು ಅಂಜುಲಾಗೆ ವರನನ್ನು ನೋಡಿ ವಿವಾಹ ನಿಶ್ಚಯ ಮಾಡಿದ್ದರು. ಆದರೆ ಅಂಜುಲಾ, ನನಗೆ ಹುಡುಗ ಇಷ್ಟ ಇಲ್ಲ. ನಾನು ಆತನನ್ನು ಮದುವೆ ಆಗುವುದಿಲ್ಲ ಎಂದು ತಂದೆ ಬಳಿ ಹೇಳಿದ್ದಾಳೆ. ಆದರೆ ಪೋಷಕರು ಆಕೆಯ ಮಾತಿಗೆ ಕಿವಿಗೊಡಲಿಲ್ಲ. ಅಷ್ಟೇ ಅಲ್ಲದೇ ನಾನು ನೋಡಿದ ವರನನ್ನು ನೀನು ಮದುವೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಅಂಜುಲಾ ಮದುವೆ ವಿಚಾರದಿಂದ ಖಿನ್ನತೆಗೆ ಒಳಗಾಗಿದ್ದು, ಅರ್ಚನಾ ನನ್ನು ಜೊತೆಗೆ ಕರೆದುಕೊಂಡು ಪೋಷಕರಿಗೆ ಹೊರಗೆ ಹೋಗುತ್ತಿದ್ದೇವೆ ಎಂದು ಹೇಳಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ತುಂಬಾ ಸಮಯವಾದರೂ ಇಬ್ಬರು ಮನೆಗೆ ಹಿಂದಿರುಗಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಮಾಹಿತಿ ತಿಳಿಸಿದ್ದಾರೆ ಎಂದು ಎಸ್.ಐ ವೆಂಕಣ್ಣ ತಿಳಿಸಿದ್ದಾರೆ.
ಪೊಲೀಸರು ಇಬ್ಬರು ಸಹೋದರಿಯರಿಗಾಗಿ ಹುಡುಕಾಟ ಪ್ರಾರಂಭಿಸಿದ್ದು, ಇಬ್ಬರೂ ಸಹೋದರಿಯರು ಹೈದರಾಬಾದ್ ಗೆ ಬಂದು ಅಲ್ಲಿಂದ ಇಕೋಡಾ ಮತ್ತು ಸಿರ್ಕೊಂಡಾಗೆ ಹೋಗಿದ್ದಾರೆ. ಸಿರ್ಕೊಂಡಾದಲ್ಲಿ ಇಬ್ಬರು ಕೀಟನಾಶಕವನ್ನು ಸೇವಿಸಿದ್ದಾರೆ. ಇದನ್ನು ಗ್ರಾಮಸ್ಥರು ನೋಡಿದ್ದು, ತಕ್ಷಣ ಪೋಷಕರು ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಸಮೀಪದ ಆರ್‍ಐಎಂಎಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಘಟನೆ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮಾಡುತ್ತಿದ್ದಾರೆ.


























