Tag: Hyderabad

  • ಡ್ರೈವಿಂಗ್ ಮಾಡ್ತಾ ಕಾರಿನಲ್ಲೇ ಪಾರ್ಟಿ ಮಾಡ್ತಿದ್ದ ಯುವತಿ- ಬೈಕಿಗೆ ಕಾರ್ ಡಿಕ್ಕಿಯಾಗಿ 20ರ ಯುವಕ ಸಾವು

    ಡ್ರೈವಿಂಗ್ ಮಾಡ್ತಾ ಕಾರಿನಲ್ಲೇ ಪಾರ್ಟಿ ಮಾಡ್ತಿದ್ದ ಯುವತಿ- ಬೈಕಿಗೆ ಕಾರ್ ಡಿಕ್ಕಿಯಾಗಿ 20ರ ಯುವಕ ಸಾವು

    ಹೈದರಾಬಾದ್: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡ್ತಿದ್ದ ಯುವತಿಯೊಬ್ಬಳು ತನ್ನ ಕಾರಿನಿಂದ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಯುವಕ ಸಾವನ್ನಪ್ಪಿದ ಘಟನೆ ರಾಯದುರ್ಗಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

    ಬೋರಬಂದಾ ನಿವಾಸಿಯಾದ ಚಿರಂಜೀವಿ(20) ಮೃತ ದುರ್ದೈವಿ. ಘಟನೆಯಲ್ಲಿ ರಮಾನಾತಿ ಸಾಯಿ ಕುಮಾರ್ ಎಂಬವರು ಗಾಯಗೊಂಡಿದ್ದಾರೆ. ಜೆನ್ನಿ ಜೇಕಬ್(26) ವಾಹನ ಚಾಲನೆ ಮಾಡುತ್ತಲೇ ಕಾರಿನೊಳಗೆ ತನ್ನ ಸ್ನೇಹಿತೆ ಲೀಸಾ ಜೊತೆ ಪಾರ್ಟಿ ಮಾಡಿದ್ದು, ಈ ವೇಳೆ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾಳೆ. ಜೆನ್ನಿ ಹಾಗೂ ಲೀಸಾ ದೆಹಲಿ ಮೂಲದವರಾಗಿದ್ದು, ಮಾಧಾಪುರ ಬಳಿಯ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗಿಗಳಾಗಿದ್ದಾರೆ. ಕೊಕಪೇಟ್ ನ ಬ್ಲಾಸಮ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಇಬ್ಬರೂ ನಗರದಲ್ಲಿ ಝೂಮ್ ಕಾರ್ ನಿಂದ ಹೂಂಡೈ ಕ್ರೇಟಾ ಕಾರ್ ಬಾಡಿಗೆಗೆ ಪಡೆದಿದ್ದರು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು, ಜೆನ್ನಿ ಮಾಧಾಪುರ ದಿಂದ ರಾಯದುರ್ಗಂ ಕಡೆಗೆ ಹೊರಟಿದ್ದಳು. ಅತೀ ವೇಗವಾಗಿ ಕಾರ್ ಚಾಲನೆ ಮಾಡ್ತಿದ್ದ ಜೆನ್ನಿ, ಹೊಂಡಾ ಆ್ಯಕ್ಟೀವಾದಲ್ಲಿ ಬರ್ತಿದ್ದ ಚಿರಂಜೀವಿ ಹಾಗೂ ಸಾಯಿ ಕುಮಾರ್‍ಗೆ ಡಿಕ್ಕಿ ಹೊಡೆದಿದ್ದಾಳೆ.

    ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಿರಂಜೀವಿ ಹಾಗೂ ಸಾಯಿ ಕುಮಾರ್ ಅವರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ವೇಳೆ ಚಿರಂಜೀವಿ ಸಾವನ್ನಪ್ಪಿದ್ದು, ಸಾಯಿ ಕುಮಾರ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಬೈಕಿಗೆ ಡಿಕ್ಕಿ ಹೊಡೆದ ಬಳಿಕ ಕಾರ್ ಮೂರು ಬಾರಿ ಪಲ್ಟಿಯಾಗಿದೆ. ಆದ್ರೆ ಕಾರಿನ ಏರ್‍ಬ್ಯಾಗ್ಸ್‍ನಿಂದ ಜೆನ್ನಿ ಹಾಗೂ ಲೀಸಾಳ ಪ್ರಾಣ ಉಳಿದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

  • ರಸ್ತೆ ಗುಂಡಿಗಳನ್ನು ಮುಚ್ಚಿ ಯುಗಾದಿ ಆಚರಿಸಿದ ಪೊಲೀಸ್ ಪೇದೆ

    ರಸ್ತೆ ಗುಂಡಿಗಳನ್ನು ಮುಚ್ಚಿ ಯುಗಾದಿ ಆಚರಿಸಿದ ಪೊಲೀಸ್ ಪೇದೆ

    ಹೈದರಾಬಾದ್: ಯುಗಾದಿಯ ಸಂಭ್ರಮಾಚರಣೆಯ ವೇಳೆ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ.

    ಟ್ರಾಫಿಕ್ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಾಯಿ ರೆಡ್ಡಿ ಎಂಬವರು ತಾವು ಕಾರ್ಯ ನಿರ್ವಹಿಸುವ ಜೆಜೆ ನಗರ ರಸ್ತೆಯಲ್ಲಿನ ಗುಂಡಿ ಮುಚ್ಚಿದ್ದಾರೆ.

    ಎಲ್ಲರೂ ಯುಗಾದಿ ಸಂಭ್ರಮದಲ್ಲಿರುವ ವೇಳೆ ದಿನ ಪೂರ್ತಿ ಬಿಸಿಲನ್ನು ಲೆಕ್ಕಿಸದೆ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದ ಇವರ ಫೋಟೋ ಗಳನ್ನು ಜನರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇವರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಹಲವರು ತಮ್ಮ ಅಭಿಪ್ರಾಯವನ್ನು ತಿಳಿಸಿ ಅಭಿನಂದನೆ ಸಲ್ಲಿಸಿದ್ದಾರೆ.

  • ಹಬ್ಬಕ್ಕೆ ಸ್ನಾನ ಮಾಡಲು ಕೆರೆಗೆ ತೆರಳಿದ ಐವರು ಬಾಲಕರ ದುರ್ಮರಣ!

    ಹಬ್ಬಕ್ಕೆ ಸ್ನಾನ ಮಾಡಲು ಕೆರೆಗೆ ತೆರಳಿದ ಐವರು ಬಾಲಕರ ದುರ್ಮರಣ!

    ಹೈದರಾಬಾದ್: ಯುಗಾದಿ ಹಬ್ಬದ ದಿನದಂದೇ ಕೆರೆಯಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟಿರುವ ಘಟನೆ ನಾಲ್ಗಾಂಡ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಸಂತೋಷ್ (7), ರಾಕೇಶ್ (5), ನವ್ದೀಪ್ (6), ಸತ್ವಿಕ್ (7) ಮತ್ತು ಸರ್ದಾರ್ ಎಂದು ಗುರುತಿಸಲಾಗಿದೆ. ಈ ಐವರು ಬಾಲಕರು ಕೋಂಡಮಲ್ಲೆಪಲ್ಲಿ ಮಂಡಲ್ ದಲ್ಲಿರುವ ಕೆರೆಗೆ ಸ್ನಾನ ಮಾಡಲು ತೆರಳಿದ್ದರು.

    ಸ್ನಾನ ಮಾಡಲು ಹೋದ ಮಕ್ಕಳು ತುಂಬಾ ಸಮಯವಾದರೂ ಮನೆಗೆ ಹಿಂದಿರುಗಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ತಮ್ಮ ಮಕ್ಕಳು ಸಿಗದೇ ಇದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸ್ನಾನ ಮಾಡಲು ಹೋದಾಗ ಕೆರೆಯ ಆಳದ ಜಾಗದಲ್ಲಿ ಮುಳುಗಿ ಬಾಲಕರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಬಾಲಕರ ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ ಎಂದು ನಲ್ಗೊಂಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎ. ರಂಗನಾಥ್ ಹೇಳಿದರು.

  • ಊಟ ಮಾಡಿ ಬರುತ್ತೇನೆಂದು ಹೇಳಿ – ಸ್ವಲ್ಪ ಸಮಯದ ನಂತ್ರ ಮಕ್ಕಳು ಪತ್ನಿಯೊಂದಿಗೆ ಶವವಾಗಿ ಪತ್ತೆ

    ಊಟ ಮಾಡಿ ಬರುತ್ತೇನೆಂದು ಹೇಳಿ – ಸ್ವಲ್ಪ ಸಮಯದ ನಂತ್ರ ಮಕ್ಕಳು ಪತ್ನಿಯೊಂದಿಗೆ ಶವವಾಗಿ ಪತ್ತೆ

    ಹೈದರಾಬಾದ್: ಇಬ್ಬರು ಹೆಣ್ಣು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಕಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಂಡೋಜಿ ಬಜಾರ್ ನಲ್ಲಿ ನಡೆದಿದೆ.

    ಪಶ್ಚಿಮ ಬಂಗಾಳದ ಘೋಷ್ಪಾರಾ ಗ್ರಾಮದ ಸ್ವರೂಪ್ (37), ಪತ್ನಿ ದೀಪಾ (30) ಥಿತ್ಲಿ ದಾಸ್(5) ಮತ್ತು 5 ತಿಂಗಳ ಮಗು ಆತ್ಮಹತ್ಯೆಗೆ ಶರಣಾದವರು. ಸ್ವರೂಪ್ ಸಿಕಂದರಾಬಾದ್‍ನ ಜನರಲ್ ಬಜಾರ್ ನಲ್ಲಿ ಚಿನ್ನದ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಕಂಡೋಜಿ ಬಜಾರ್ ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?
    ಶುಕ್ರವಾರ ಸ್ವರೂಪ್ ಮಧ್ಯಾಹ್ನ ಸುಮಾರು 1.30 ಗಂಟೆಗೆ ತನ್ನ ಗ್ರಾಹಕರಿಗೆ ಕರೆ ಮಾಡಿ ನಾನು ಊಟ ಮಾಡಿ ಬರುವವರೆಗೂ ಅಂಗಡಿಯನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ತುಂಬಾ ಸಮಯವಾದರೂ ಸ್ವರೂಪ್ ಬಂದಿರಲಿಲ್ಲ. ಗ್ರಾಹಕರು ಸ್ವರೂಪ್ ಮನೆಗೆ ಹೋಗಿ ನೋಡಿದ್ದಾರೆ. ಆದರೆ ಮನೆಯ ಬಾಗಿಲು ಹೊರಗಿನಿಂದ ಲಾಕ್ ಮಾಡಲಾಗಿತ್ತು.

    ಗ್ರಾಹಕ ನಂತರ ಅವರು ಮತ್ತೆ ರಾತ್ರಿ 8 ಗಂಟೆಗೆ ಮನೆಯ ಬಳಿ ಹೋಗಿ ನೋಡಿದ್ದಾರೆ. ಆಗಲೂ ಬಾಗಿಲು ತೆರೆದಿರಲಿಲ್ಲ. ಆದರೆ ಮನೆಯಿಂದ ಟಿವಿ ಶಬ್ದ ಕೇಳಿಸುತ್ತಿತ್ತು. ಕೊನೆಗೆ ಅನುಮಾನಗೊಂಡು ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಕೂಡಲೆ ಧಾವಿಸಿದ್ದು, ಮನೆಯ ಬಾಗಿಲುಗಳನ್ನು ಮುರಿದು ಒಳಗೆ ಹೋಗಿದ್ದಾರೆ. ಆದರೆ ಕುಟುಂಬದ ಎಲ್ಲಾ ಸದಸ್ಯರು ನೆಲದ ಮೇಲೆ ಬಿದ್ದಿದ್ದನ್ನು ನೋಡಿ ಆಘಾತಗೊಂಡಿದ್ದಾರೆ.

    ನಾವು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದೇವು. ಆದರೆ ವೈದ್ಯರು ಪರೀಕ್ಷೆ ಮಾಡಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ಮೇಲೆ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನನ್ನ ಸಾವಿನಿಂದ ಅಪ್ಪ, ಸಹೋದರಿ ಖುಷಿಯಾಗ್ತಾರೆ- ಡೆತ್‍ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ನನ್ನ ಸಾವಿನಿಂದ ಅಪ್ಪ, ಸಹೋದರಿ ಖುಷಿಯಾಗ್ತಾರೆ- ಡೆತ್‍ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ಕ್ಷುಲ್ಲಕ ಕಾರಣಕ್ಕೆ ಮನನೊಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಾಗೊಳೆಯ ಜೈಪುರ ಕಾಲೋನಿಯಲ್ಲಿ ಗುರುವಾರ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು 18 ವರ್ಷದ ಸಾಯಿ ಪ್ರಿಯಾ ಎನ್ನಲಾಗಿದೆ. ಈಕೆ ಭೋಪಾಲ್ ರೆಡ್ಡಿ ಮಗಳು. ಸಾಯಿ ಪ್ರಿಯಾ ಇತ್ತೀಚೆಗೆಷ್ಟೇ ತನ್ನ ಪಿಯುಸಿ ಪರೀಕ್ಷೆ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.

    ಏನಿದು ಘಟನೆ?: ಗುರುವಾರ ಸಂಜೆ ಸಾಯಿ ಪ್ರಿಯಾ ತನ್ನ ಸಹೋದರಿ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಿದ್ದಳು. ಈ ವೇಳೆ ಮೊಬೈಲ್ ಜಾಸ್ತಿ ಬಳಕೆ ಮಾಡುತ್ತಿದ್ದೀಯಾ ಅಂತ ತಂದೆ ಬೈದಿದ್ದಾರೆ. ಹಾಗೂ ಅದರ ಬಳಕೆ ಕಡಿಮೆ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಪರಿಣಾಮ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

    ಇದರಿಂದ ಮನನೊಂದ ಪ್ರಿಯಾ, ನೇರವಾಗಿ ತನ್ನ ಬೆಡ್ ರೂಂ ಗೆ ತೆರಳಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಮಗಳ ಕೃತ್ಯವನ್ನು ಗಮನಿಸಿದ ಹೆತ್ತವರು ಕೋಣೆಯ ಬಾಗಿಲು ಒಡೆದು, ಮಗಳನ್ನು ತಕ್ಷಣವೇ ಸುಪ್ರಜಾ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದ್ರೆ ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಪ್ರಿಯಾ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತಾನು ಪರೀಕ್ಷೆಯನ್ನು ಚೆನ್ನಾಗಿಯೇ ಎದುರಿಸಿದ್ದೇನೆ ಅಂತ ಹೇಳಿದ್ದಾಳೆ. ಸದ್ಯ ಪ್ರಿಯಾಳ ತಂದೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    `ನಾನು ಎಲ್ಲರೊಂದಿಗೂ ಸಿಟ್ಟು ಮಾಡಿಕೊಳ್ಳುತ್ತಿದ್ದೇನೆ. ಹೀಗಾಗಿ ನಾನ್ಯಾಕೆ ಇನ್ನೂ ಬದುಕಿರಬೇಕು ಅನಿಸಿದೆ. ಕ್ಷಮಿಸಿ ಅಪ್ಪ… ಐ ಲವ್ ಯೂ ಅಮ್ಮ, ಅಪ್ಪ. ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆದಿದ್ದೇನೆ. ಹೀಗಾಗಿ ಆ ಕಾರಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ… ನನ್ನ ಸಾವಿನಿಂದ ಅಪ್ಪ ಹಾಗೂ ಸಹೋದರಿ ಖುಷಿ ಪಡುತ್ತಾರೆ ಅಂತ ತನ್ನ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದು, ಇದೀಗ ಪೊಲೀಸರು ಪತ್ರವನ್ನು ವಶಪಡಿಸಿಕೊಂಡಿದ್ದಾರೆ.

  • ಲವ್ವರ್ ಜೊತೆ ಮದ್ವೆಯಾಗುವಂತೆ ಪತ್ನಿಗೆ ಹೇಳಿ ಪತಿ ಆತ್ಮಹತ್ಯೆ!

    ಲವ್ವರ್ ಜೊತೆ ಮದ್ವೆಯಾಗುವಂತೆ ಪತ್ನಿಗೆ ಹೇಳಿ ಪತಿ ಆತ್ಮಹತ್ಯೆ!

    ಹೈದರಾಬಾದ್: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಶಮೀರ್‍ಪೆಟ್ ನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 24 ವರ್ಷದ ಕೆ ಆಚಾರ್ಯ ಎಂದು ಗುರುತಿಸಲಾಗಿದ್ದು, ಇವರು ಯದಾದ್ರಿ ಭೊಂಗಿರ್ ಜಿಲ್ಲೆಯ ಅಲೈರ್ ಮಂಡಲ್ ನಿವಾಸಿ. ಆತ್ಮಹತ್ಯೆಗೂ ಮುನ್ನ ಆಚಾರ್ಯ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯತಮನ ಜೊತೆ ಮದುವೆ ಮಾಡಿಸಿ ಅಂತ ಹೆತ್ತವರಿಗೆ ಹೇಳಿದ್ದಾರೆ.

    ಏನಿದು ಘಟನೆ?:
    ಎರಡು ವರ್ಷದ ಹಿಂದೆ ಆಚಾರ್ಯ ಅವರು ಉಷಾ ರಾಣಿ ಎಂಬಾಕೆಯನ್ನು ವರಿಸಿದ್ದರು. ದಂಪತಿಗೆ ಈಗಾಗಲೇ 1 ವರ್ಷದ ಮಗುವೂ ಇದೆ. ಕಳೆದ ವರ್ಷವಷ್ಟೇ ಆಚಾರ್ಯ ತನ್ನ ಪತ್ನಿ ಹಾಗೂ ಮಗುವಿನ ಜೊತೆ ಶಮೀರ್ ಪೆಟ್ ನ ತುರ್ಕಪಲ್ಲಿ ಎಂಬಲ್ಲಿ ಬಂದು ನೆಲೆಸಿದ್ದರು. ಅಲ್ಲದೇ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

    ಬುಧವಾರ ತಂದೆ ಕೆ ಸತ್ಯನಾರಾಯಣ್ ಅವರ ಮೊಬೈಲ್ ಗೆ ಆಚಾರ್ಯ ಮೆಸೇಜ್ ಮಾಡಿದ್ದಾರೆ. ಅದರಲ್ಲಿ ನೆರೆಯಮನೆಯ ಶ್ರೀಕಾಂತ್ ಎಂಬಾತನಿಂದಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿದ್ದಾರೆ. ಕೂಡಲೇ ಸತ್ಯನಾರಾಯಣ್ ಅವರು ಮಗನಿಗೆ ಕರೆ ಮಾಡಿದ್ದಾರೆ. ಆದ್ರೆ ಆಚಾರ್ಯ ಅದಾಗಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಹೆತ್ತವರು ಆಚಾರ್ಯ ಮನೆಗೆ ದೌಡಾಯಿಸಿದ್ದಾರೆ. ಈ ವೇಳೆ ಮಗ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವುದು ಕಂಡುಬಂದಿದೆ.

    ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿದ್ದು, ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಬಂದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಿದ್ರು. ಈ ಸಂಬಂಧ ಇನ್ಸ್ ಪೆಕ್ಟರ್ ಡಿ ಭಾಸ್ಕರ್ ರೆಡ್ಡಿ ಪ್ರತಿಯಿಸಿದ್ದು, ಆಚಾರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಪತ್ನಿಗೆ ಶ್ರೀಕಾಂತ್ ಎಂಬಾತನ ಜೊತೆ ಅನೈತಿಕ ಸಂಬಂಧವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ನನ್ನಂತಹ ಮಗ ಯಾವ ತಂದೆ-ತಾಯಿಗೂ ಹುಟ್ಟಬಾರದು. ಜೀವನದಲ್ಲಿ ಸೋತಿದ್ದೇನೆ ಅಂತ ತಂದೆ-ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗೆಯೇ ಶ್ರೀಕಾಂತ್ ಜೊತೆ ಪತ್ನಿ ಉಷಾಳಿಗೆ ಮದುವೆ ಮಾಡಿಕೊಡಿ. ಇದು ನನ್ನ ಕೊನೆಯ ಆಸೆ ಆಗಿದೆ. ಅವಳ ಹೆತ್ತವರು ಈ ಬಗ್ಗೆ ಏನೂ ಹೇಳಲಾರರು ಅಂತ ಬರೆದಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಆಚಾರ್ಯ ತಂದೆಯ ದೂರಿನಂತೆ ಪೊಲೀಸರು ಶಂಕಾಸ್ಪದ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಆಚಾರ್ಯ ಮೃತದೇಹವನ್ನು ಗುರುವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಲೈವ್ ವಿಡಿಯೋ ಕರೆ ಮಾಡಿ ಪ್ರೇಮಿ ಆತ್ಮಹತ್ಯೆ- ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರೂ ನಗುತ್ತಿದ್ದ ಯುವತಿ!

    ಲೈವ್ ವಿಡಿಯೋ ಕರೆ ಮಾಡಿ ಪ್ರೇಮಿ ಆತ್ಮಹತ್ಯೆ- ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರೂ ನಗುತ್ತಿದ್ದ ಯುವತಿ!

    ಹೈದರಾಬಾದ್: ಪ್ರೀತಿ ವಿಫಲವಾಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಹೈದರಾಬಾದ್ ನ ಮುಲ್ಕಾಜ್‍ಗಿರಿ ವಿನಾಯಕ್ ನಗರದಲ್ಲಿ ನಡೆದಿದೆ.

    ಸಾಗರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಸಾಗರ್ ಕೆಲ ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ತನ್ನ ಪ್ರೀತಿಯ ವಿಚಾರವನ್ನು ಆಕೆಗೆ ತಿಳಿಸಿದ್ದ. ಆದರೆ ಆ ಯುವತಿ ಸಾಗರ್ ಪ್ರೀತಿಯನ್ನು ನಿರಾಕರಿಸಿದ್ದಳು. ಅಲ್ಲದೇ ಈ ವಿಷಯ ಯುವತಿ ಕುಟುಂಬಸ್ಥರಿಗೂ ತಿಳಿದು ಸಾಗರ್‍ಗೆ ಎಚ್ಚರಿಕೆ ನೀಡಿದ್ದರು.

    ಇತ್ತ ಮಗನ ಪ್ರೀತಿಯ ವಿಷಯವನ್ನು ತಿಳಿದ ಸಾಗರ್ ಪೋಷಕರು ಆತನಿಗೆ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದರಿಂದ ತೀವ್ರವಾಗಿ ಮನನೊಂದ ಸಾಗರ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

    ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಪ್ರೇಯಸಿಗೆ ಮೆಸೇಜ್ ಕಳುಹಿಸಿ, ಇದನ್ನು ನೋಡಬೇಕಾದರೆ ವಿಡಿಯೋ ಕಾಲ್ ಮಾಡಲು ತಿಳಿಸಿದ್ದ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಯುವತಿ ಸಾಗರ್ ತಮಾಷೆ ಮಾಡುತ್ತಿದ್ದಾನೆ ಎಂದು ತಿಳಿದು ತನ್ನ ಇತರೇ ಸ್ನೇಹಿತರಿಗೆ ಮೇಸೆಜ್ ತೋರಿಸಿ ವಿಡಿಯೋ ಕಾಲ್ ಮಾಡಿದ್ದಾಳೆ.

    ಪ್ರೇಯಸಿ ವಿಡಿಯೋ ಕಾಲ್ ಮಾಡಿದ ಬಳಿಕ ಸಾಗರ್ ತನ್ನ ರೂಮಿನ ಸಿಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈ ವೇಳೆ ಸಾಗರ್ ತಮಾಷೆ ಮಾಡುತ್ತಿದ್ದಾನೆ ಎಂದು ತಿಳಿದು ಬಿದ್ದು ಬಿದ್ದು ನಗಲು ಆರಂಭಿಸಿದ್ದಾಳೆ. ಆದರೆ ಸ್ವಲ್ಪ ಸಮಯದ ಬಳಿಕ ಸಾಗರ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

  • ಪರೀಕ್ಷೆಗೆಂದು ಹೋಗ್ತಿದ್ದ ಯುವಕನನ್ನ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿ, ಚಾಕುವಿನಿಂದ ಇರಿದು ಕೊಂದ್ರು

    ಪರೀಕ್ಷೆಗೆಂದು ಹೋಗ್ತಿದ್ದ ಯುವಕನನ್ನ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿ, ಚಾಕುವಿನಿಂದ ಇರಿದು ಕೊಂದ್ರು

    ಹೈದರಾಬಾದ್: ಬೋರ್ಡ್ ಪರೀಕ್ಷೆ ಬರೆಯಲು ಹೋಗುತ್ತಿದ್ದ 17 ವರ್ಷದ ಯುವಕನನ್ನ ಹಾಡಹಗಲೇ ಕೊಲೆ ಮಾಡಿರುವ ಘಟನೆ ಇಂದು ಹೈದರಾಬಾದ್‍ನಲ್ಲಿ ನಡೆದಿದೆ.

    ಮೃತ ಯುವಕನನ್ನು ಸುಧೀರ್ ಎಂದು ಗುರುತಿಸಲಾಗಿದೆ. ಕುಕಟ್‍ಪಲ್ಲಿ ಸಂಚಾರಿ ಪೊಲೀಸ್ ಠಾಣೆಯ ಎದುರಿನಲ್ಲೇ ಇರುವ ಮೆಟ್ರೋ ನಿಲ್ದಾಣದ ಬಳಿ ಇಂದು ಬೆಳಗ್ಗೆ 8.20ರ ವೇಳೆಗೆ ಈ ಘಟನೆ ನಡೆದಿದೆ.

    ಸುಧೀರ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳ ತಂಡ ಅವರನ್ನು ತಡೆದಿದೆ. ಚಾಕು ಹಿಡಿದಿದ್ದ ತಂಡವನ್ನ ನೋಡಿದ ಬಳಿಕ ಸುಧೀರ್ ತನ್ನ ಪ್ರಾಣ ಉಳಿಸಿಕೊಳ್ಳಲು ಮುಖ್ಯರಸ್ತೆಯಲ್ಲೇ ಓಡಿದ್ದಾನೆ. ಈ ವೇಳೆ ಆತ ಶಾಲಾ ಬಸ್‍ವೊಂದನ್ನ ಏರಿದ್ದಾನೆ. ಆದ್ರೆ ದುಷ್ಕರ್ಮಿಗಳು ಆತನನ್ನ ಬಸ್‍ನಿಂದ ಹೊರಗೆಳೆದು ಮೆಟ್ರೋ ನಿಲ್ದಾಣದ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

    ಘಟನೆ ಬಳಿಕ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದು, ಓರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

    ವರದಿಗಳ ಪ್ರಕಾರ ಮೃತ ಯುವಕ ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಜಗಳ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸುಧೀರ್ ಸ್ನೇಹಿತರಾದ ನವೀನ್, ಕೃಷ್ಣ, ಮಹಿ, ತೇಜಾ ಹಾಗೂ ಇನ್ನಿತರರ ಮೇಲೆ ಅನುಮಾನ ವ್ಯಕ್ತವಾಗಿದೆ. ಘಟನೆಯಿಂದಾಗಿ ಕುಕಟ್‍ಪಲ್ಲಿ ಪ್ರದೇಶದ ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

    ಯುವಕನ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

  • ಅಪ್ರಾಪ್ತ ಮಕ್ಕಳ ವಾಹನ ಚಾಲನೆಗೆ ಅನುಮತಿ ನೀಡಿದ್ದಕ್ಕೆ 69 ಪೋಷಕರಿಗೆ ಜೈಲು

    ಅಪ್ರಾಪ್ತ ಮಕ್ಕಳ ವಾಹನ ಚಾಲನೆಗೆ ಅನುಮತಿ ನೀಡಿದ್ದಕ್ಕೆ 69 ಪೋಷಕರಿಗೆ ಜೈಲು

    ಹೈದರಾಬಾದ್: ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಆರೋಪದಡಿ ಕಳೆದ ಒಂದು ತಿಂಗಳಿನಲ್ಲಿ 69 ಪೋಷಕರು ಆಂಧ್ರಪ್ರದೇಶ ರಾಜಧಾನಿ ಹೈದರಾಬಾದ್ ನಗರದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಕಳೆದ ಕೆಲ ತಿಂಗಳಿನಿಂದ ಹೈದರಾಬಾದ್ ಟ್ರಾಫಿಕ್ ಪೊಲೀಸರು ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದರ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದರು. ಈ ವೇಳೆ 14 ರಿಂದ 16 ವರ್ಷದ ಮಕ್ಕಳು ಬೈಕ್, ಸ್ಕೂಟರ್, ತ್ರಿಚಕ್ರ ವಾಹನ ಮತ್ತು ಕಾರು ಚಾಲನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 69 ಅಪ್ರಾಪ್ತರ ಪೋಷಕರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ದಿನದಿಂದ ಮೂರು ದಿನಗಳ ವರೆಗೆ ಪೋಷಕರಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ರಂಗನಾಥ್ ಮಾಹಿತಿ ನೀಡಿದ್ದಾರೆ.

    ಜನವರಿ ಮೊದಲ ವಾರದಲ್ಲಿ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಅಪ್ರಾಪ್ತರು ಸಾವನ್ನಪ್ಪಿದ್ದ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ದಂಡ ಮಾತ್ರ ಪಡೆಯಲಾಗುತ್ತಿತ್ತು. ಆದರೆ ಇದು ಹೆಚ್ಚು ಪರಿಣಾಮಕಾರಿ ಆಗದ ಕಾರಣ ಕಠಿಣ ಕ್ರಮಕೈಗೊಳ್ಳಲು ಮುಂದಾಗಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.

    ಅಪ್ರಾಪ್ತರು ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೇ ಇಂತಹ ಘಟನೆಗಳಲ್ಲಿ ಅಪ್ರಾಪ್ತರು ತಮ್ಮ ಜೀವ ಕಳೆದುಕೊಳ್ಳುವುದರೊಂದಿಗೆ ಇತರರ ಜೀವಕ್ಕೂ ಅಪಾಯಕಾರಿಯಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ ಈ ಕುರಿತ ಪ್ರಕರಣಗಳ ಬಗ್ಗೆ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯಗಳು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿವೆ.

    ಇಂತಹ ಪ್ರಕರಣಗಳನ್ನು ವಾಹನ ಕಾಯ್ದೆಯ 180 (ಅನಧಿಕೃತ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅನುಮತಿ) ಮತ್ತು 181 (ಚಾಲನ ಪರವಾನಗಿ ಇಲ್ಲದೆ ಚಾಲನೆ) ಸೆಕ್ಷನ್ ಅಡಿಯಲ್ಲಿ ಪರಿಗಣಿಸಲಾಗುತ್ತಿದೆ. ಅಲ್ಲದೇ ಈ ಅಭಿಯಾನವನ್ನು ವರ್ಷದ ಕೊನೆಯವರೆಗೂ ಮುಂದುವರೆಸುವುದಾಗಿ ಡಿಜಿಪಿ ತಿಳಿಸಿದ್ದಾರೆ.

    10 ದಿನಗಳ ಹಿಂದೆ 10 ಜನ ಪೋಷಕರಿಗೆ ಶಿಕ್ಷೆಯಾಗಿತ್ತು. ಈಗ ಈ ಸಂಖ್ಯೆ ಏರಿಕೆಯಾಗಿದ್ದು, ಹೈದರಾಬಾದ್ ಪೊಲೀಸರ ಈ ಕಠಿಣ ನಿರ್ಧಾರಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳು ಬೈಕ್ ಹಾಗೂ ವಾಹನ ಚಾಲನೆ ಮಾಡಿ ಉಂಟು ಮಾಡಬಹುದಾದ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ರೈಲ್ವೇ ಟ್ರ್ಯಾಕ್ ಬಳಿ ಶವವಾಗಿ ಪತ್ತೆಯಾದ ಪ್ರೇಮಿಗಳು!

    ರೈಲ್ವೇ ಟ್ರ್ಯಾಕ್ ಬಳಿ ಶವವಾಗಿ ಪತ್ತೆಯಾದ ಪ್ರೇಮಿಗಳು!

    ಹೈದರಾಬಾದ್: ರೈಲ್ವೇ ಹಳಿಯಲ್ಲಿ ಪ್ರೇಮಿಗಳಿಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಭೋಂಗೀರ್ ಜಿಲ್ಲೆಯಲ್ಲಿ ನಡೆದಿದೆ.

    ಗಣೇಶ್(22) ಮತ್ತು ಪೂಜಿತಾ(16) ಶವವಾಗಿ ಪತ್ತೆಯಾದ ಪ್ರೇಮಿಗಳು. ಇಬ್ಬರು ಶನಿವಾರ ರಾಮಣ್ಣಪೇಟ್ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಟ್ರ್ಯಾಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೋಷಕರು ಮದುವೆಗೆ ಒಪ್ಪದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಗಣೇಶ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇವನು 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪೂಜಿತಾಳನ್ನು ಪ್ರೀತಿಸುತ್ತಿದ್ದನು. ಇಬ್ಬರು ನಲ್ಗೊಂಡ ಜಿಲ್ಲೆಯ ನರ್ಕೆಪಲ್ಲಿಯ ಪಾಲೆಪಾಹದ್ ಗ್ರಾಮದವರು. ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಈ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಆದರೆ ಜಾತಿ ಬೇರೆ ಎಂದು ಮದುವೆಗೆ ನಿರಾಕರಿಸಿದ್ದಾರೆ.

    ಮದುವೆಗೆ ಪೋಷಕರು ತಿರಸ್ಕರಿಸಿದ ನಂತರ ಇಬ್ಬರು ಮನೆ ಬಿಟ್ಟು ತಮ್ಮ ಗ್ರಾಮದ ಸಮೀಪದ ದೇವಸ್ಥಾನವೊಂದರಲ್ಲಿ ಭೇಟಿಯಾಗಿದ್ದಾರೆ. ಆದರೆ ಪುಜಿತಾಳ ಪೋಷಕರು ಮಗಳನ್ನು ಅಪಹರಣ ಮಾಡಿದ್ದಾನೆ ಎಂದು ಗಣೇಶ್ ವಿರುದ್ಧ ದೂರು ನೀಡಿದ್ದರು. ನಂತರ ಇಬ್ಬರು ದೇವಸ್ಥಾನದಲ್ಲಿರುವುದು ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಆದರೆ ಈ ಜೋಡಿ ಪೊಲೀಸರನ್ನು ನೋಡಿ ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಇಬ್ಬರು ರಾಮಣ್ಣಪ್ಪೆಯ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಈ ಬಗ್ಗೆ ರೈಲ್ವೆ ಗಾರ್ಡ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.