Tag: Hyderabad

  • ಐಪಿಎಲ್ ನಲ್ಲಿ 30 ದಾಖಲೆಗಳು ಉಡೀಸ್!

    ಐಪಿಎಲ್ ನಲ್ಲಿ 30 ದಾಖಲೆಗಳು ಉಡೀಸ್!

    ಮುಂಬೈ: 2018ರ ಐಪಿಎಲ್ ಗೆ ಮುಬೈನಲ್ಲಿ ಅದ್ಧೂರಿಯಾಗಿ ತೆರೆ ಬಿದ್ದಿದ್ದು, ಚೆನ್ನೈ ತಂಡ ಮೂರನೇ ಬಾರಿಗೆ ಕಪ್ ತನ್ನದಾಗಿಸಿಕೊಂಡಿದೆ. ಅಲ್ಲದೇ ಟೂರ್ನಿಯಲ್ಲಿ 30 ಹೊಸ ದಾಖಲೆಗಳು ನಿರ್ಮಾಣವಾಗಿದ್ದು, ಈ ಬಾರಿಯ ಐಪಿಎಲ್ ದಾಖಲಾದ ಪ್ರಮುಖ ದಾಖಲೆಗಳು ಇಂತಿದೆ.

    ಟೂರ್ನಿಯ ಆರಂಭಿಕ ಎರಡನೇ ಪಂದ್ಯದಲ್ಲಿಯೇ ಕನ್ನಡಿಗ ಕೆಎಲ್ 14 ಎಸೆಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ಹಿಂದಿನ ದಾಖಲೆ ಮುರಿದಿದ್ದರು. ಡೆಲ್ಲಿ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅಜೇಯ 128(63) ರನ್ ಬಾರಿಸಿ ಐಪಿಎಲ್ ನಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಬೆಂಗಳೂರು, ಚೆನ್ನೈ ನಡುವಿನ ಪಂದ್ಯವೊಂದರಲ್ಲಿ 33 ಸಿಕ್ಸರ್ ಮೂಡಿ ಬಂದು ಐಪಿಎಲ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿದ ಪಂದ್ಯಕ್ಕೆ ಸಾಕ್ಷಿಯಾಗಿತ್ತು.

    ಚೆನ್ನೈ ತಂಡದ ನಾಯಕ ಧೋನಿ ಐಪಿಎಲ್ ನಲ್ಲಿ 150 ಪಂದ್ಯ ಪೂರ್ಣಗೊಳಿಸಿದ ಆಟಗಾರರಾದರೆ, ಮತ್ತೊಂದೆಡೆ ನಾಯಕನಾಗಿ ಅತೀ ಹೆಚ್ಚು ರನ್ ಸಿಡಿಸಿದ ಗಂಭೀರ್ ದಾಖಲೆ ಮುರಿದರು. ಅಲ್ಲದೇ ಟಿ20 ಮಾದರಿಯಲ್ಲಿ ಅತೀ ಹೆಚ್ಚು (144) ಕ್ಯಾಚ್, 73 ಸ್ಟಪಿಂಗ್ ಹಾಗೂ 186 ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ಐಪಿಎಲ್ ನಲ್ಲಿ 150 ಪಂದ್ಯಗಳನ್ನು ಗೆದ್ದ ಸಾಧನೆಯನ್ನು ಮಾಡಿದರು. ಅಲ್ಲದೇ ಕೀಪರ್ ಆಗಿ 8 ಬಾರಿಗೆ ಐಪಿಎಲ್ ಫೈನಲ್ ಪ್ರವೇಶ ಪಡೆದರು. ಆದರೆ ಹೈದರಾಬಾದ್ ತಂಡದ ಬೌಲರ್ ತಂಪಿ ಪಂದ್ಯವೊಂದರಲ್ಲಿ 70 ರನ್ ನೀಡಿ ಬೇಡದ ದಾಖಲೆ ಪಡೆದರು. ಈ ಬಾರಿಯ ಐಪಿಎಲ್ ನಲ್ಲಿ ಒಟ್ಟಾರೆ 872 ಸಿಕ್ಸರ್ ಬಾರಿಸಲಾಗಿದ್ದು, ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸರ್ ದಾಖಲಾಯಿತು.

    ಅಫ್ಘನ್ ನ ಮುಜೀಬ್ ಪಂಜಾಬ್ ಪರ 17 ವರ್ಷಕ್ಕೆ ಕಣಕ್ಕೆ ಇಳಿದು ಐಪಿಎಲ್ ಪಂದ್ಯದಲ್ಲಿ ವಿಕೆಟ್ ಪಡೆದ ಯುವ ಆಟಗಾರ ಎನಿಸಿಕೊಂಡರು. ಅಲ್ಲದೇ ಡೆಲ್ಲಿ ತಂಡದ ಸಂದೀಪ್ ಲಾಮಿಚ್ಚನೆ ಐಪಿಎಲ್ ಆಡಿದ ಮೊದಲ ನೇಪಾಳ ಆಟಗಾರ ಎಂಬ ಇತಿಹಾಸ ಬರೆದರು. ಆಸೀಸ್ ಆಟಗಾರ ಆರೋನ್ ಫಿಂಚ್ ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ತಂಡದ ಪರ ಕಣಕ್ಕೆ ಇಳಿಯುವುದರೊಂದಿಗೆ ಐಪಿಎಲ್ ನಲ್ಲಿ 7 ತಂಡಗಳ ಪರ ಭಾಗವಹಿಸಿದ ಆಟಗಾರನಾಗಿ ಹೊರ ಹೊಮ್ಮಿದರು.

    ಪಂದ್ಯವೊಂದರಲ್ಲಿ ಎರಡು ತಂಡದ ನಾಯಕರು ಸಹ 90ಪ್ಲಸ್ ರನ್ ಸಿಡಿಸಿದ ಹೆಗ್ಗಳಿಕೆಗೆ ಮುಂಬೈನ ರೋಹಿತ್, ಆರ್ ಸಿಬಿ ಕೊಹ್ಲಿ ಪಾತ್ರರಾದರು. ಅಲ್ಲದೇ ಕೊಹ್ಲಿ 54 ಅರ್ಧಶತಕ ಸಿಡಿಸಿ ಐಪಿಎಲ್ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಬ್ಯಾಟ್ಸ್ ಮನ್ ಎನ್ನುವ ಗಿರಿಮೆಗೆ ಪಾತ್ರರಾದರು.

    51 ದಿನಗಳ ಕಾಲ ನಡೆದ ದೇಶಿಯ ಕ್ರಿಕೆಟ್ ಹಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಅಲ್ಲದೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಹಾಗೂ ಅನುಭವಿ ಆಟಗಾರರಿಗೂ ತಮ್ಮ ಸಾಮಥ್ರ್ಯ ಪ್ರದರ್ಶಿಸುವ ವೇದಿಕೆಯಾಗಿ ನಿರ್ಮಾಣವಾಗಿತ್ತು.

  • 2018 ಐಪಿಎಲ್ ವಿನ್ನರ್, ರನ್ನರ್ ತಂಡಕ್ಕೆ ಸಿಗುತ್ತೆ ಕೋಟಿ ಕೋಟಿ ಹಣ!

    2018 ಐಪಿಎಲ್ ವಿನ್ನರ್, ರನ್ನರ್ ತಂಡಕ್ಕೆ ಸಿಗುತ್ತೆ ಕೋಟಿ ಕೋಟಿ ಹಣ!

    ಮುಂಬೈ: 50 ದಿನಗಳ ಐಪಿಎಲ್ ಕ್ರಿಕೆಟ್ ಹಬ್ಬ ಮುಕ್ತಾಯದ ಹಂತ ತಲುಪಿದ್ದು ಟೂರ್ನಿಯಲ್ಲಿ ಕಪ್ ಗೆಲ್ಲುವ ತಂಡ ಕಳೆದ ಬಾರಿಗಿಂತ ಅಧಿಕ ಮೊತ್ತದ ಹಣ ಪಡೆಯಲಿದೆ.

    ಟೂರ್ನಿಯಲ್ಲಿ ಹ್ಯಾಟ್ರಿಕ್ ಕಪ್ ಕನಸು ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ವಿಶ್ವಾಸದಲ್ಲಿದೆ. ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಹೈದರಾಬಾದ್ ತಂಡ ಎರಡನೇ ಬಾರಿಗೆ ಕಪ್ ಗೆಲ್ಲುವ ಆತ್ಮ ವಿಶ್ವಾಸಹೊಂದಿದೆ.

    ಈ ಬಾರಿ ಟೂರ್ನಿಯಲ್ಲಿ ಗೆದ್ದ ತಂಡ ಕಳೆದ ಬಾರಿಗಿಂತ 5 ಕೋಟಿ ರೂ. ಅಧಿಕ ಹಣ ಪಡೆಯಲಿದ್ದು, ಒಟ್ಟಾರೆ 20 ಕೋಟಿ ರೂ. ಪಡೆಯಲಿದೆ. ಟೂರ್ನಿಯ ರನ್ನರ್ ಅಪ್ 12.5 ಕೋಟಿ ರೂ. ಪಡೆಯಲಿದೆ. ಇದರೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

    ಇದರೊಂದಿಗೆ ವೈಯಕ್ತಿಕವಾಗಿ ನೀಡುವ ಅತ್ಯುತ್ತಮ ಆಟಗಾರ (ಎಂವಿಪಿ) ಪ್ರಶಸ್ತಿ ಸೇರಿದಂತೆ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಹಾಗೂ ರನ್ ಗಳಿಸಿದ ಆಟಗಾರರಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಟೂರ್ನಿಯ ವಿಶೇಷ ಬಹುಮಾನ ಎಂದೇ ಕರೆಯಲಾಗುವ ಯುವ ಉದಯೋನ್ಮುಖ ಆಟಗಾರರ ಸಹ 10 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ.

    ಉಳಿದಂತೆ ಟೂರ್ನಿಯಲ್ಲಿ ನೀಡಲಾಗುವ ಉತ್ತಮ ಕ್ಯಾಚ್ ಪಡೆದ ಆಟಗಾರನಿಗೆ 10 ಲಕ್ಷ ರೂ. ಎಫ್‍ಬಿಬಿ ಸ್ಟೈಲಿಷ್ ಆಟಗಾರನಿಗೆ 10 ಲಕ್ಷ ರೂ., ಸ್ಟಾರ್ ಪ್ಲಸ್ ನಯಿ ಸೋಚ್ ಸೀಸನ್ ಆವಾರ್ಡ್ ಸಹ 10 ಲಕ್ಷ ರೂ. ಹೊಂದಿದೆ.

  • 4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆ!

    4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆ!

    (ಸಾಂದರ್ಭಿಕ ಚಿತ್ರ)

    ಮುಂಬೈ: ನಗರದ ಹೋಟೆಲ್‍ವೊಂದರಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಿ ನಿಷೇಧಿತ 4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿಗಳನ್ನು ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದ್ದು, ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಣವನ್ನು ನೀಡಲು ಬಂದಿದ್ದರು ಎನ್ನಲಾಗುತ್ತಿದೆ.

    ರದ್ದಾದ ನೋಟುಗಳ ಮಾಹಿತಿ ಪೊಲೀಸರು ಪಡೆದ ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವೆಲಪ್‍ಮೆಂಟ್ ಕಾರ್ಪೋರೆಷನ್ (ಎಂಐಡಿಸಿ) ಪ್ರದೇಶದಲ್ಲಿನ ಹೋಟೆಲ್‍ಗೆ ಭೇಟಿ ನೀಡಿದ್ದಾರೆ. ಆರೋಪಿಗಳು ಉಳಿದುಕೊಂಡಿದ್ದ ರೂಮ್ ಬಾಗಿಲನ್ನು ಬಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತಮ್ಮ ಬ್ಯಾಗ್‍ಗಳಿಗೆ ಹಣ ತುಂಬಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾರೆ. ರೂಮ್‍ನಲ್ಲಿ 500 ರೂ. ಹಾಗೂ 1000 ರೂ. ಮೌಲ್ಯದ ರದ್ದಾದ ನೋಟುಗಳು ದೊರೆತಿದ್ದು, ನವೆಂಬರ್ ನಿಂದಲೂ ಆರೋಪಿಗಳು ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

    ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಣವನ್ನು ನೀಡಲು ಬಂದಿದ್ದು, ಪ್ರಕರಣದಲ್ಲಿ ಹಲವರು ಭಾಗಿಯಾಗಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪೊಲೀಸ್ ಕಸ್ಟಡಿಗೆ ನೀಡಿದೆ.

  • `ಪದ್ಮಾವತ್’ ಆಯ್ತು, ಈಗ `ಲವ್ ರಾತ್ರಿ’ ವಿರುದ್ಧ ವಿಎಚ್‍ಪಿಯಿಂದ ಪ್ರತಿಭಟನೆ!

    `ಪದ್ಮಾವತ್’ ಆಯ್ತು, ಈಗ `ಲವ್ ರಾತ್ರಿ’ ವಿರುದ್ಧ ವಿಎಚ್‍ಪಿಯಿಂದ ಪ್ರತಿಭಟನೆ!

    ಹೈದರಾಬಾದ್: ಈಗಾಗಲೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ `ಪದ್ಮಾವತ್’ ವಿರುದ್ಧ ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಈಗ ಸಲ್ಮಾನ್ ಖಾನ್ ಅವರ ಸೋದರ ಅಳಿಯ ಆಯುಶ್ ಶರ್ಮಾ ಅವರ ಚೊಚ್ಚಲ ಚಿತ್ರವಾದ `ಲವ್ ರಾತ್ರಿ’ಯ ವಿರುದ್ಧ ಪ್ರತಿಭಟಿಸಲು ಮುಂದಾಗಿದೆ.

    ಈ ಹಿಂದೆ ವಿಎಚ್‍ಪಿ `ಪದ್ಮಾವತ್’ ಸಿನಿಮಾದಲ್ಲಿ ರಜಪೂತರ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿತ್ತು. ಆದರೆ ಆ ಸಿನಿಮಾ ಟೈಟಲ್ ಬದಲಾಯಿಸಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಈಗ `ಲವ್ ರಾತ್ರಿ’ ಸಿನಿಮಾದಲ್ಲಿ ಹಿಂದೂ ಹಬ್ಬದ ಅರ್ಥವನ್ನು ವಿರೂಪಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಸಿನಿಮಾ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದೆ.

    ಈ ಪ್ರೀತಿ-ಪ್ರಯಣದ ನಾಟಕ ಹಿಂದೂಗಳ ಭಾವನೆಗಳಿಗೆ ದಕ್ಕೆಯುಂಟುಮಾಡುತ್ತದೆ. ಆದ್ದರಿಂದ ಈ ಸಿನಿಮಾ ಪ್ರದರ್ಶನ ಕಾಣಲು ನಾವು ಅನುಮತಿ ನೀಡುವುದಿಲ್ಲ ಎಂದು ವಿಎಚ್‍ಪಿ ವಿರೋಧ ವ್ಯಕ್ತಪಡಿಸುತ್ತಿವೆ.

    ನಾವು ದೇಶದಾದ್ಯಂತ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಬಿಡುವುದಿಲ್ಲ. ಇದು ಹಿಂದೂಗಳ ಭಾವನೆಗಳನ್ನು ನೋಯಿಸುವಂತಹ ಕೆಲಸ. ಆದ್ದರಿಂದ ನಾವು ನೋಯಿಸುವಂತಹ ಕೆಲಸವನ್ನು ಬಯಸುವುದಿಲ್ಲ ಎಂದು ವಿಎಚ್‍ಪಿಯ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಈ ಸಿನಿಮಾ ಹಿಂದೂ ಹಬ್ಬವಾದ ನವರಾತ್ರಿ ಹಿನ್ನೆಲೆಯ ವಿರುದ್ಧವಾಗಿ ಮಾಡಲಾಗಿದೆ. ಜೊತೆಗೆ ಅದರ ಅರ್ಥವು ನವರಾತ್ರಿ ಅರ್ಥವನ್ನು ವಿರೂಪಗೊಳಿಸುತ್ತದೆ ಎಂದು ಅಲೋಕ್ ಕುಮಾರ್ ಆರೋಪಿಸಿದ್ದಾರೆ.

    `ಲವ್ ರಾತ್ರಿ’ ಸಿನಿಮಾ ಗುಜರಾತಿ ಹಿನ್ನೆಲೆಯ ವಿರುದ್ಧ ಮಾಡಲಾಗಿದ್ದು, ಇದು ಒಂಬತ್ತು ರಾತ್ರಿಯ ಅವಧಿಯಲ್ಲಿ ದಂಪತಿಗಳ ಪ್ರೇಮ ಕಥೆಯನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಆಯುಶ್ ಶರ್ಮಾ ಮತ್ತು ವಾರಿನಾ ಹುಸೇನ್ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ಸುಲ್ತಾನ್’ ಮತ್ತು `ಶಾರುಖ್ ಖಾನ್ ಫ್ಯಾನ್’ ನಂತಹ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಭಿರಾಜ್ ಮಿನವಾಲಾರವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

    `ಲವ್ ರಾತ್ರಿ’ ಸಿನಿಮಾ ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರವಾಗಿದೆ. ವಿಶ್ವ ಹಿಂದೂ ಪರಿಷತ್ ನಿಂದ ಈಗಾಗಲೇ ಕಂಗನಾ ರಣಾವತ್ ಅಭಿನಯದ `ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇತಿಹಾಸ ತಿರುಚಲಾಗುತ್ತಿದೆ ಎಂದು ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ.

  • 21ಕ್ಕೆ ಹೃದಯಾಘಾತ: ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯಗೆ ಪುತ್ರ ವಿಯೋಗ

    21ಕ್ಕೆ ಹೃದಯಾಘಾತ: ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯಗೆ ಪುತ್ರ ವಿಯೋಗ

    ಹೈದರಾಬಾದ್: ಮಾಜಿ ಕೇಂದ್ರ ಸಚಿವ, ಹಾಲಿ ಬಿಜೆಪಿಯ ಸಂಸದ ಬಂಡಾರು ದತ್ತಾತ್ರೇಯ ಅವರ ಪುತ್ರ ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ತೃತೀಯ ವರ್ಷದ ವೈದ್ಯಕೀಯ ವಿದ್ರ್ಯಾಥಿಯಾಗಿದ್ದ ಬಂಡಾರು ವೈಷ್ಣವ್(21) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಹೈದರಾಬಾದಿನ ರಾಮನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದವರೊಂದಿಗೆ ಊಟ ಮಾಡುತ್ತಿದ್ದಾಗ ವೈಷ್ಣವ್ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು.

    ಕೂಡಲೇ ವೈಷ್ಣವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು 12.30ರ ನಸುಕಿನ ವೇಳೆ ಮೃತಪಟ್ಟಿದ್ದಾರೆ.

    ಮಾಧ್ಯಮಗಳಲ್ಲಿ ವೈಷ್ಣವ್ ಸಾವಿನ ಬಗ್ಗೆ ತಿಳಿದ ಅರ್ಧ ಗಂಟೆಯಲ್ಲಿ ಹೈದರಾಬಾದ್ ಮೇಯರ್ ಬಾನ್ತು ರಾಮಮೋಹನ್ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಲಕ್ಷ್ಮಣ್ ಮತ್ತು ಅನೇಕ ಬಿಜೆಪಿ ನಾಯಕರು ಸುಮಾರು ಮುಂಜಾನೆ 3 ಗಂಟೆಗೆ ಆಸ್ಪತ್ರೆಗೆ ಹೋಗಿದ್ದರು.

    ಬಂಡಾರು ದತ್ತಾತ್ರೇಯ ಅವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಕಾರಣ ಇಂದು ಬೆಳಗ್ಗೆ ಮಗ ಮೃತಪಟ್ಟ ವಿಚಾರವನ್ನು ತಿಳಿಸಲಾಗಿದೆ. ಇತ್ತ ವೈಷ್ಣವ್ ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

    ಬಂಡಾರು ದತ್ತಾತ್ರೇಯ ಅವರು 2014ರ ನವೆಂಬರ್ ನಿಂದ 2017ರ ಸೆಪ್ಟೆಂಬರ್ ವರಗೆ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

  • ತಿರುಪತಿ ಪ್ರಧಾನ ಅರ್ಚಕ ವಜಾ – ತಿರುಮಲದ ವಜ್ರಾಭರಣಗಳನ್ನು ನೀವೂ ನೋಡ್ಬಹುದು!

    ತಿರುಪತಿ ಪ್ರಧಾನ ಅರ್ಚಕ ವಜಾ – ತಿರುಮಲದ ವಜ್ರಾಭರಣಗಳನ್ನು ನೀವೂ ನೋಡ್ಬಹುದು!

    ಹೈದರಾಬಾದ್: ತಿಮ್ಮಪ್ಪನ ಚಿನ್ನಾಭರಣಗಳು ನಾಪತ್ತೆಯಾಗುತ್ತಿವೆ ಎಂದು ತಿರುಮಲ ತಿರುಪತಿ ದೇವಾಸ್ಥಾನ ಮಾಜಿ ಪ್ರಧಾನ ಅರ್ಚಕರಾದ ರಮಣ ದೀಕ್ಷಿತುಲು ಆರೋಪ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಟಿಡಿ ಕಮಿಟಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಧಾರ್ಮಿಕ ನಿಯಮಗಳ ಪ್ರಕಾರ ತಿಮ್ಮಪ್ಪನ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶವಿದ್ದರೆ ಅವುಗಳನ್ನು ಪ್ರದರ್ಶಿಸಲು ಸಿದ್ಧ. ಒಂದು ವೇಳೆ ದೇವರ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶ ಇಲ್ಲ ಅಂತಾದ್ರೆ ಅವುಗಳನ್ನು ಅಧುನಿಕ ತಂತ್ರಜ್ಞಾನ ಬಳಸಿ 3ಡಿ ಮಾದರಿಯಲ್ಲಿ ಮುದ್ರಣ ಮಾಡಿ ವಸ್ತುಸಂಗ್ರಾಹಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡುವುದಾಗಿ ಹೇಳಿದ್ದು, ಈ ಕುರಿತು ನಿರ್ಣಯವನ್ನು ಮೇಲಾಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಏನಿದು ಆರೋಪ: ದೇವರ ಆಭರಣಗಳಲ್ಲಿದ್ದ ವಜ್ರಾಭರಣ ನಾಪತ್ತೆಯಾಗಿದೆ ಎಂದು ಕೆಲ ದಿನಗಳ ಹಿಂದೆ ದೇವಾಲಯದ ಮಾಜಿ ಪ್ರಧಾನ ಅರ್ಚಕರು ಆರೋಪಿಸಿದ್ದರು. ಅಲ್ಲದೇ ದೇವಾಲಯದ ಸಮಿತಿ ಹಲವು ಆಕ್ರಮಗಳನ್ನು ನಡೆಸುತ್ತಿದ್ದು, ಈ ಕುರಿತು ತನಿಖೆ ಆಗಬೇಕು ಎಂದು ಹೇಳಿಕೆ ನೀಡಿದ್ದರು.

    ಈ ಹೇಳಿಕೆ ಬೆನ್ನಲ್ಲೇ ಟಿಟಿಡಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ದೇವಾಲಯದ ಕುರಿತು ಈ ರೀತಿ ಹೇಳಿಕೆ ನೀಡುವುದರ ವಿರುದ್ಧ ಕ್ರಮಕೈಗೊಳ್ಳುವ ದೃಷ್ಟಿಯಿಂದ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಈ ಹಿಂದೆ ತೆಗೆದುಕೊಂಡ ನಿರ್ಧಾರದ ಪ್ರಕಾರ ತಿರುಮಲ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ವಯಸ್ಸು 65 ವರ್ಷ ಪೂರ್ಣಗೊಂಡಿದ್ದರೆ ಸೇವೆಯಿಂದ ನಿವೃತ್ತಿ ಆಗಬೇಕಿದೆ. ಈ ನಿಯಮಗಳ ಆನ್ವಯ ಈಗಾಗಲೇ ರಮಣ ದೀಕ್ಷಿತುಲು ಅವರು ನಿವೃತ್ತಿಯಾಗಿದ್ದಾರೆ.

    ಅರ್ಚಕರ ನಿವೃತ್ತಿ: ಟಿಟಿಡಿ ಆಡಳಿತ ಮಂಡಳಿಯ ಸಭೆಯಲ್ಲಿ 2012 ರಲ್ಲಿ ಜಾರಿಯಾಗಿದ್ದ ನಿಯಮಗಳ ಅನ್ವಯ 65 ವರ್ಷ ಮೀರಿದ ಅರ್ಚಕರು ಸೇವೆಯಿಂದ ತಕ್ಷಣವೇ ನಿವೃತ್ತಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರಮಣ ದೀಕ್ಷಿತುಲು ಆಗಮ ಶಾಸ್ತ್ರಗಳಿಗೆ ಟಿಟಿಡಿ ಅಸಡ್ಡೆ ತೋರುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಂಡಳಿ ನಿರ್ಣಯ ರದ್ದು ಮಾಡುವಂತೆ ನ್ಯಾಯಾಲಯದ ಮೇರೆ ಹೋಗುವುದಾಗಿ ತಿಳಿಸಿದ್ದಾರೆ.

  • ಶಟ್ಲರ್ ಶ್ರೀಕಾಂತ್‍ಗೆ ಕೊಟ್ಟ ಮಾತು ಉಳಿಸಿಕೊಂಡ ಧೋನಿ!

    ಶಟ್ಲರ್ ಶ್ರೀಕಾಂತ್‍ಗೆ ಕೊಟ್ಟ ಮಾತು ಉಳಿಸಿಕೊಂಡ ಧೋನಿ!

    ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಭಾರತದ ಟಾಪ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ತಮ್ಮ ಹಸ್ತಾಕ್ಷರ ಹೊಂದಿರುವ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಧೋನಿ ಹಸ್ತಾಕ್ಷರ ಹೊಂದಿರುವ ಬ್ಯಾಟನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಅವರು ಶ್ರೀಕಾಂತ್ ಅವರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ವಿಶ್ವ ಬ್ಯಾಡ್ಮಿಂಟನ್ ನಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಶ್ರೀಕಾಂತ್, ಧೋನಿಯವರ ಕೊಡುಗೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

    ಅಂದಹಾಗೇ ಶ್ರೀಕಾಂತ್ ಈ ಹಿಂದೆ ಧೋನಿಯ ಬಳಿ ಬ್ಯಾಟ್ ಕೊಡುಗೆ ನೀಡುವಂತೆ ಕೇಳಿದ್ದರು. ಅದಕ್ಕೆ ಬ್ಯಾಡ್ಮಿಂಟನ್ ನಲ್ಲಿ ನಂ.1 ಸ್ಥಾನಕ್ಕೆ ತಲುಪಿದರೆ ಗಿಫ್ಟ್ ಕೊಡುವುದಾಗಿ ಧೋನಿ ಭರವಸೆ ನೀಡಿದ್ದರು. ಇದರಂತೆ ಕಳೆದ ಏಪ್ರಿಲ್ ನಲ್ಲಿ ಶ್ರೀಕಾಂತ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದರು. ಅಲ್ಲದೇ ಭಾರತದಿಂದ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಸದ್ಯ ಧೋನಿ ತಾವು ಕೊಟ್ಟ ಮಾತಿನಂತೆ ಶ್ರೀಕಾಂತ್ ಅವರಿಗೆ ಗಿಫ್ಟ್ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಕಾಂತ್, ಧೋನಿ ಅವರು ಬ್ಯಾಟ್ ಗಿಫ್ಟ್ ನೀಡಿರುವುದು ಹೆಚ್ಚು ಸಂತಸ ತಂದಿದೆ. ಇದು ತನ್ನ ಜೀವನದ ಅತ್ಯಂತ ಸ್ಮರಣೀಯ ದಿನ ಎಂದು ತಿಳಿಸಿದ್ದಾರೆ.

    ಸದ್ಯ ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಆಕಾಡೆಮಿಯಲ್ಲಿ ತರಬೇತಿಯಲ್ಲಿ ನಿರತರಾಗಿರುವ ಶ್ರೀಕಾಂತ್ ಅವರಿಗೆ ಎಂಎಎಸ್‍ಕೆ ಪ್ರಸಾದ್ ಅವರು ಬ್ಯಾಟ್ ಹಸ್ತಾಂತರಿಸುವ ವೇಳೆ ಬ್ಯಾಡ್ಮಿಂಟನ್ ರಾಷ್ಟ್ರೀಯ ತಂಡದ ಕೋಚ್ ಗೋಪಿಚಂದ್, ಶ್ರೀಕಾಂತ್ ಅವರ ತಂದೆ ಕೆವಿಎಸ್ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

  • ಐಪಿಎಲ್ ನಲ್ಲಿ ಕೆಟ್ಟ ದಾಖಲೆ ಬರೆದ ಬಾಸೀಲ್ ತಂಪಿ

    ಐಪಿಎಲ್ ನಲ್ಲಿ ಕೆಟ್ಟ ದಾಖಲೆ ಬರೆದ ಬಾಸೀಲ್ ತಂಪಿ

    ಬೆಂಗಳೂರು: ಆರ್ ಸಿಬಿ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ಬೌಲರ್ ಬಾಸೀಲ್ ತಂಪಿ ಪಂದ್ಯವೊಂದರಲ್ಲಿ 70 ರನ್ ನೀಡುವ ಮೂಲಕ ಇಶಾಂತ್ ಶರ್ಮಾ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯನ್ನು ಮುರಿದ್ದಾರೆ.

    ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ತಂಪಿ 17.50 ಎಕಾನಮಿಯಲ್ಲಿ 70 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ದಾಖಲೆ ಬರೆದರು. ಈ ಹಿಂದೆ 2013 ಹೈದರಾಬಾದ್ ತಂಡದ ಇಶಾಂತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ಓವರ್ ಎಸೆದು 66 ರನ್ ನೀಡಿದ್ದರು.

    ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಯಶಸ್ವಿ ಡೆತ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ತಂಪಿ, ಆರ್ ಸಿಬಿ ವಿರುದ್ಧ ನಿರಸ ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಆರ್ ಸಿಬಿ ವಿರುದ್ಧ ಅತೀ ಹೆಚ್ಚು ರನ್ ನೀಡಿದವರ ಪಟ್ಟಿಯಲ್ಲಿ ಸಂದೀಪ್ ಶರ್ಮಾ(1/40), ಸಿದ್ದಾರ್ಥ್ ಕೌಲ್ (2/44) ಸ್ಥಾನ ಪಡೆದಿದ್ದಾರೆ.

    ಹೈದರಾಬಾದ್ ಬೌಲರ್ ಗಳನ್ನು ನಿರಂತರವಾಗಿ ದಂಡಿಸಿದ ಆರ್ ಸಿಬಿ ಬ್ಯಾಟಿಂಗ್ ಪಡೆಯ ಎಬಿ ಡಿವಿಲಿಯಸ್ಸ್ (69), ಮೊಯಿನ್ ಅಲಿ (65), ಕಾಲಿನ್ ಡೇ (40) ರನ್ ಸಿಡಿಸಿ ಮಿಂಚಿದರು. ಆರ್ ಸಿಬಿ ಬೃಹತ್ ಮೊತ್ತ ಬೆನ್ನತಿದ ಹೈದರಾಬಾದ್ ಕೇನ್ ವಿಲಿಯಮ್ಸ್ (81 ರನ್, 42 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಮನೀಷ್ ಪಾಂಡ್ಯ (ಅಜೇಯ 62 ರನ್) ಬ್ಯಾಟಿಂಗ್ ನೆರವಿನಿಂದ ಗೆಲುವಿನ ಸನಿಹದಲ್ಲಿ ಎಡವಿತು. ಆರ್ ಚಿಬಿ ವಿರುದ್ಧ ಸೋಲಿನ ಬಳಿಕವೂ ಹೈದರಾಬಾದ್ 18 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

  • ನಾವೇನು ತಪ್ಪಿಸಿಕೊಂಡು ಹೋಗ್ತಿದ್ವಾ  ಕಾಂಗ್ರೆಸ್-ಜೆಡಿಎಸ್‍ ಶಾಸಕರಲ್ಲಿ ಭುಗಿಲೆದ್ದ ಅಸಮಾಧಾನ

    ನಾವೇನು ತಪ್ಪಿಸಿಕೊಂಡು ಹೋಗ್ತಿದ್ವಾ ಕಾಂಗ್ರೆಸ್-ಜೆಡಿಎಸ್‍ ಶಾಸಕರಲ್ಲಿ ಭುಗಿಲೆದ್ದ ಅಸಮಾಧಾನ

    ಬೆಂಗಳೂರು: ಮಧ್ಯರಾತ್ರಿಯೇ ನಮ್ಮನ್ನ ಹೈದ್ರಾಬಾದ್‍ಗೆ ಕರೆತಂದಿದ್ದೀರಿ, ನಾವೇನು ತಪ್ಪಿಸಿಕೊಂಡು ಹೋಗಿತ್ತಿದ್ವಾ ಎಂದು ಪ್ರಶ್ನಿಸುವ ಮೂಲಕ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.

    ಅಡ್ಡ ಮತದಾನ ಹಾಗೂ ಕುದುರೆ ವ್ಯಾಪಾರದ ಭೀತಿಯಿಂದ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಪಕ್ಷದ ಮುಖಂಡರು ಹೈದರಾಬಾದ್ ಹೊಟೇಲ್ ಗೆ ಕರೆ ತಂದಿದ್ದಾರೆ. ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕೆಲ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಸುಪ್ರೀಂ ಕೋರ್ಟ್ ಆದೇಶದವರೆಗೂ ಕಾಯಬಹುದು ಅಂತಾ ನಾವು ನಿಮಗೆ ಹೇಳಿದ್ದೇವು. ಆದರೂ ನೀವು ಕೇಳಲೇ ಇಲ್ಲ. ರಸ್ತೆ ಮಾರ್ಗವಾಗಿ ನಮ್ಮನ್ನ ಕರೆ ತಂದಿದ್ದೀರಿ. ದೂರ ಪ್ರಯಾಣ ಮಾಡಿ ಬೇಸತ್ತಿದ್ದೇವೆ. ನಮಗೆ ನಮ್ಮ ಮೊಬೈಲ್ ನೀಡಿ ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಲವು ಕಾಂಗ್ರೆಸ್ ನಾಯಕರು ಹೊಟೇಲ್ ಗೆ ಕರೆದುಕೊಂಡು ಹೋಗುವ ಏಕ ಪಕ್ಷೀಯ ನಿರ್ಧಾರ ಕೆಲ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    ನಮಗೆ ಆತಂಕ ಇತ್ತು, ನೀವು ಏನು ಹೇಳಿದರೂ ನಾನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ನಿಮ್ಮನ್ನ ಕರೆದುಕೊಂಡು ಬಂದಿದ್ದೇವೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ ನಡೆಯಲಿದೆ. ಹೀಗಾಗಿ, ಇಂದು ಸಂಜೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಮರಳಿ, ತಡರಾತ್ರಿ ಹೊತ್ತಿಗೆ ಹೊಟೇಲ್‍ಗೆ ಹೋಗಿ ಅಲ್ಲಿಂದ ಬೆಳಿಗ್ಗೆ ನೇರವಾಗಿ ವಿಧಾನ ಸೌಧಕ್ಕೆ ಹೋಗೋಣ ಎಂದು ಡಿ.ಕೆ.ಶಿವಕುಮಾರ್ ಹೊಟೇಲ್‍ನಲ್ಲಿ ಸಭೆ ನಡೆಸಿ ಹೇಳಿದ್ದಾರೆ.

    ಕೊನೆಯ ಕ್ಷಣದವರೆಗೂ ನಿಮಗೆ ಬಿಜೆಪಿ ನಾಯಕರಿಂದ ಕರೆ ಬರಹುದು. ನೀವು ಎಚ್ಚರಿಕೆಯಿಂದ ಇರಬೇಕು. ಬಹುಮತ ಸಾಬೀತು ಪಡಿಸುವ ವೇಳೆ ಬಿಎಸ್‍ವೈ ಸರ್ಕಾರದ ವಿರುದ್ಧ ಇರುವಂತೆ ಶಾಸಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

  • ಗೋದಾವರಿ ನದಿಗೆ ಜಿಗಿದು ಅಪ್ರಾಪ್ತೆ ಜೊತೆ ಯುವಕ ಆತ್ಮಹತ್ಯೆ!

    ಗೋದಾವರಿ ನದಿಗೆ ಜಿಗಿದು ಅಪ್ರಾಪ್ತೆ ಜೊತೆ ಯುವಕ ಆತ್ಮಹತ್ಯೆ!

    ಹೈದರಾಬಾದ್: ಗೋದಾವರಿ ನದಿಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಪಾಶಾರ್ಲಪೂಡಿಯಲ್ಲಿ ನಡೆದಿದೆ.

    ನಾಗಸುಚಿತಾ(14) ಹಾಗೂ ಶಿವ ಆತ್ಮಹತ್ಯೆಗೈದ ಪ್ರೇಮಿಗಳು. ನಾಗಸುಚಿತಾ 9ನೇ ತರಗತಿ ಓದುತ್ತಿದ್ದು, ಶಿವ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದನು.

    ನಾಗ ಸುಚಿತಾಳಿಗೆ ಶಿವನ ಮೇಲೆ ಪ್ರೀತಿಯಾಗಿತ್ತು. ಕ್ರಮೇಣ ಇವರಿಬ್ಬರ ಪ್ರೀತಿ ಮನೆಯವರಿಗೆ ತಿಳಿಯಿತು. ಪರಿಣಾಮ ಇಬ್ಬರ ಮನೆಯಲ್ಲಿಯೂ ವಿರೋಧ ವ್ಯಕ್ತವಾಗಿದ್ದು, ಮನೆಯವರು ಇಬ್ಬರಿಗೂ ಬೈದಿದ್ದರು.

    ತನ್ನ ಪ್ರೀತಿಯನ್ನು ಮನೆಯವರು ನಿರಾಕರಿಸಿದ್ದರಿಂದ ಮನನೊಂದ ನಾಗಸುಚಿತಾ ತನ್ನ ಸೈಕಲ್ ತೆಗೆದುಕೊಂಡು ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಳು. ಹೀಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ಶಿವ ಸಿಕ್ಕಿದ್ದಾನೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅವರಿಬ್ಬರೂ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದು, ಗೋದಾವರಿ ಬ್ರಿಡ್ಜ್ ನಿಂದ ನದಿಗೆ ಜಿಗಿದಿದ್ದಾರೆ.