Tag: Hyderabad

  • ಪುಟ್ಟ ಮನೆಯ ಮಹಿಳೆಗೆ 3.8 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ ಅಧಿಕಾರಿಗಳು

    ಪುಟ್ಟ ಮನೆಯ ಮಹಿಳೆಗೆ 3.8 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ ಅಧಿಕಾರಿಗಳು

    ಹೈದರಾಬಾದ್: ಮಹಿಳೆಯೊಬ್ಬರಿಗೆ ಬರೊಬ್ಬರಿ 3.8 ಲಕ್ಷ ರೂ ಪಾವತಿಸುವಂತೆ ವಿದ್ಯುತ್ ಮಂಡಳಿ ಬಿಲ್ ನೀಡಿದೆ.

    ಹೈದರಾಬಾದ್ ನ ಬೊದುಪ್ಪಳದ ಶ್ರೀನಿವಾಸ್ ನಗರದ ನಿವಾಸಿಯಾದ ಡಿ ಸ್ವರೂಪಾ ರವರಿಗೆ ಈ ರೀತಿ ಬಿಲ್ ನೀಡಲಾಗಿದೆ. ಸ್ವರೂಪಾರಿಗೆ ಮೇ 10 ರಿಂದ ಜೂನ್ 9 ರವರೆಗೆ ಒಂದು ತಿಂಗಳ ಬಿಲ್ ನೀಡಲಾಗಿದ್ದು, 3.8 ಲಕ್ಷ ಪಾವತಿಸುವಂತೆ ಹೇಳಿದೆ.

    ಡಿ ಸ್ವರೂಪಾ ಗೃಹೋಪಯೋಗಿ ವಿದ್ಯುತ್ ಸಂಪರ್ಕ ಹೊಂದಿದ್ದಾರೆ. ಅವರಿಗೆ 40,059 ಯುನಿಟ್ ವಿದ್ಯುತ್ ಬಳಕೆ ಮಾಡಿದ್ದೀರಿ. ಹಾಗಾಗಿ 3,79,087 ರೂ ಹಾಗೂ ಕಸ್ಟಮರ್ ಸರ್ವಿಸ್ ಚಾರ್ಜ್ 2,403 ರೂ ಇತರೆ ಸೇರಿದಂತೆ ಒಟ್ಟು 3.8 ಲಕ್ಷ ಪಾವತಿಸುವಂತೆ ಬಿಲ್ ನೀಡಿದ್ದಾರೆ. ಅಲ್ಲದೇ ಜೂನ್ 24 ರೊಳಗೆ ಪಾವತಿಸುವಂತೆ ಅಧಿಕಾರಿಗಳು ಹೇಳಿದ್ದಾರೆ.

    ಈ ಬಿಲ್ ಮೊತ್ತ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಂದೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೇ ಬಿಲ್ ಮೊತ್ತ ಹೆಚ್ಚಳಕ್ಕೆ ಕಾರಣವನ್ನು ಪತ್ತೆಹಚ್ಚಿ ಡಿ ಸ್ವರೂಪಾ ರವರಿಗೆ ಹೊಸ ಬಿಲ್ ನೀಡಿದ್ದಾರೆ. ಹೊಸ ಬಿಲ್ ಪ್ರಕಾರ ಆ ತಿಂಗಳಲ್ಲಿ ಸ್ವರೂಪಾ 63 ಯುನಿಟ್ ವಿದ್ಯುತ್ ಬಳಕೆ ಮಾಡಿದ್ದು 134 ರೂ ಮಾತ್ರ ಬಿಲ್ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ತೆಲಂಗಾಣ ವಿದ್ಯುತ್ ಪ್ರಸಾರ ಮಂಡಳಿ ಅಧಿಕಾರಿಯೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ ವಿದ್ಯುತ್ ಬಿಲ್ ನೀಡುವ ವ್ಯಕ್ತಿಯು ವಿದ್ಯುತ್ ಬಳಕೆಯ ಬಿಲ್ ನೀಡುವಾಗ 4 ಡಿಜಿಟ್‍ಗಳ ಬದಲಾಗಿ 5 ಡಿಜಿಟ್‍ಗಳನ್ನು ಹಾಕಿದ್ದರಿಂದ ಈ ರೀತಿಯಾದ ಬಿಲ್ ಮೊತ್ತ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸ್ಪಸ್ಟನೆ ನೀಡಿದ್ದಾರೆ.

    ಈ ರೀತಿಯ ಘಟನೆಗಳು ತುಂಬಾ ಕಡಿಮೆ. ಆದರೆ ತೆಲಂಗಾಣ ವಿದ್ಯುತ್ ಪ್ರಸಾರ ಮಂಡಳಿ ಕಳೆದ ವರ್ಷ ಅಗಸ್ಟ್ ನಲ್ಲಿ ಗ್ರಾಹಕರೊಬ್ಬರಿಗೆ 572 ರೂ ಬಿಲ್ ಬದಲಾಗಿ 1.27 ಲಕ್ಷ ಬಿಲ್ ನೀಡಿತ್ತು. ಅದನ್ನು ಪ್ರಶ್ನಿಸಿದ ಹೈದ್ರಾಬಾದ್ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ವಿದ್ಯತ್ ಮಂಡಳಿ ಗ್ರಾಹನಿಗೆ 1 ಲಕ್ಷ ರೂ ನೀಡುವಂತೆ ಆದೇಶಿಸಿತ್ತು.

  • ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ, 16ರಲ್ಲಿ ಎಂಜಿನಿಯರಿಂಗ್: ಪೋರಿಯಿಂದ ವಿಶೇಷ ಸಾಧನೆ

    ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ, 16ರಲ್ಲಿ ಎಂಜಿನಿಯರಿಂಗ್: ಪೋರಿಯಿಂದ ವಿಶೇಷ ಸಾಧನೆ

    ಹೈದರಾಬಾದ್: ಸಾಮಾನ್ಯವಾಗಿ ಕೆಲವು ಮಕ್ಕಳು ಬಾಲ್ಯದಲ್ಲಿಯೇ ಅನೇಕ ಪ್ರತಿಭೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಆದರೆ ನಾವು ಅದನ್ನು ಗುರುತಿಸಿ ಮಕ್ಕಳನ್ನು ಉತ್ತೇಜಿಸಬೇಕು. ಆಗ ಅವರು ಏನ್ನಾದರೂ ಸಾಧನೆ ಮಾಡುತ್ತಾರೆ. ಇದಕ್ಕೆ ತೆಲಂಗಾಣದ 16 ವರ್ಷದ ಈ ಬಾಲಕಿಯೇ ಸಾಕ್ಷಿಯಾಗಿದ್ದಾಳೆ.

    ತೆಲಂಗಾಣದ ಕಾಸಿಬಟ್ಟ ನಿವಾಸಿ ಸಂಹಿತಾ ವಿಶೇಷವಾದ ಸಾಧನೆ ಮಾಡಿದ್ದಾಳೆ. ಈಕೆ ತನ್ನ 10ನೇ ವಯಸ್ಸಿನಲ್ಲಿಯೇ 10ನೇ ತರಗತಿಯನ್ನು ಪಾಸ್ ಮಾಡಿದ್ದಳು. ಈಗ ಸಂಹಿತಾಗೆ 16 ವರ್ಷವಾಗಿದ್ದು, ಈಗ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾಳೆ.

    ನಾನು 10ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್ ಮಾಡಿದ್ದೇನೆ. ಈಗ ಎಂಜಿನಿಯರಿಂಗ್ 10ನೇ ಸ್ಥಾನದಲ್ಲಿ 8.8 ಜಿಡಿಪಿ ಪಡೆದಿದ್ದು, ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಶೇ.89 ಅಂಕ ಬಂದಿತ್ತು ಎಂದು ಸಂಹಿತಾ ಹೇಳಿದ್ದಾಳೆ. ಸದ್ಯ ತಮ್ಮ ಮುಂದಿನ ಗುರಿಯ ಕುರಿತು ಸ್ಪಷ್ಟನೆ ನೀಡಿರುವ ಸಂಹಿತಾ, ಸೇವಾ ವಲಯದಲ್ಲಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದು, ದೇಶದ ಬಡ ಜನರಿಗೆ ಉತ್ತಮ ಆಡಳಿತ ನೀಡಿ ವಿಶ್ವ ಮಟ್ಟದಲ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡುವುದಾಗಿ ತಿಳಿಸಿದ್ದಾಳೆ.

    ಸಂಹಿತಾ ಮೂರು ವರ್ಷದವಳಿದ್ದಾಗ ವಿವಿಧ ದೇಶಗಳ ರಾಜಧಾನಿಯ ಹೆಸರನ್ನು ಹೇಳುತ್ತಿದ್ದಳು. ಇದನ್ನು ನೋಡಿ ಪೋಷಕರಲ್ಲಿ ಆಶ್ಚರ್ಯ ಪಟ್ಟಿದ್ದರು. ಆಗ ಈಕೆಯ ಪ್ರತಿಭೆಯನ್ನು ಗುರುತಿಸಿ ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದಾಳೆ.

    ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಸಂಹಿತಾ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾಳೆ. ಈ ಮೂಲಕ ತೆಲಂಗಾಣದ ಅತಿ ಕಿರಿಯ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

  • ಪತ್ನಿಯನ್ನು ಭೇಟಿ ಮಾಡಲು ಪೊಲೀಸರ ವಾಹನವನ್ನು ಕದ್ದ!

    ಪತ್ನಿಯನ್ನು ಭೇಟಿ ಮಾಡಲು ಪೊಲೀಸರ ವಾಹನವನ್ನು ಕದ್ದ!

    ಹೈದರಾಬಾದ್: ಪತ್ನಿಯನ್ನು ಭೇಟಿಯಾಗಲು ಪತಿಯೊಬ್ಬ ಪೊಲೀಸರ ವಾಹವನ್ನು ಕದ್ದು ಅಲ್ಲಿಂದ ಪರಾರಿಯಾದ ಘಟನೆ ಸೋಮವಾರ ಆಂಧ್ರ ಪ್ರದೇಶದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ.

    ತಿರುಪತಿ ಲಿಂಗರಾಜು(30) ಪೊಲೀಸರ ವಾಹನವನ್ನು ಕದ್ದ ಪತಿ. ಲಿಂಗರಾಜು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದು, ಪತ್ನಿ ತಕ್ಷಣ ಭೇಟಿಯಾಗುವಂತೆ ಲಿಂಗರಾಜುಗೆ ತಿಳಿಸಿದ್ದಳು. ಆಗ ಲಿಂಗರಾಜು ಪೊಲೀಸರ ವಾಹನವನ್ನು ಕದ್ದು ಪತ್ನಿಯನ್ನು ಭೇಟಿ ಮಾಡಲು ಹೋಗಿದ್ದಾನೆ.

    ಲಿಂಗರಾಜು ನಮ್ಮ ಗಮನ ಬೇರೆಡೆ ಸೆಳೆಯುವ ಹಾಗೇ ಮಾಡಿ ನಮ್ಮ ವಾಹನವನ್ನು ಕದ್ದು ತನ್ನ ಪತ್ನಿಯನ್ನು ಭೇಟಿ ಮಾಡಲು ಪರಾರಿಯಾಗಿದ್ದ. ನಂತರ ಆತನನ್ನು ನಾವು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಲಿಂಗರಾಜು ಕಾರನ್ನು ಕದ್ದು ಪರಾರಿಯಾಗುತ್ತಿದ್ದಂತೆ ನಾವು ಪಕ್ಕದ ಜಿಲ್ಲೆಗೆ ಕರೆ ಮಾಡಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದೇವು. ನಂತರ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಕಮ್ಮಮ್‍ವರೆಗೂ ಆತನನ್ನು ಫಾಲೋ ಮಾಡಿ ಹಿಡಿದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಲಿಂಗರಾಜು ವಿಜಯ್‍ವಾಡದತ್ತ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದನು. ಆಗ ಕೃಷ್ಣ ಜಿಲ್ಲೆಯ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ನಾವು ಆತನನ್ನು ಬಂಧಿಸಿದ್ದೇವೆ. ನಂತರ ನಾವು ವಿಚಾರಿಸಿದ್ದಾಗ ಜಗನ್ನಾಥ್‍ಪುರಂ ಗ್ರಾಮದಲ್ಲಿರುವ ತನ್ನ ಪತ್ನಿಯನ್ನು ಭೇಟಿಯಾಗಲು ಈ ವಾಹನವನ್ನು ಕದ್ದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

    ಲಿಂಗರಾಜು ತನ್ನ ನಾಲ್ಕು ಸ್ನೇಹಿತರ ಜೊತೆ ಪೊಲೀಸರ ವಾಹನದಲ್ಲಿ ಪ್ರಯಾಣಿಸುತ್ತಿದ್ದನು. ಸದ್ಯ ಐವರು ಆರೋಪಿಗಳನ್ನು ಸೂರ್ಯಪೇಟ್‍ಗೆ ವಾಪಸ್ ಕರೆತಂದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ಪ್ರಕಾಶ್ ಜಾದವ್ ತಿಳಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 379(ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲವ್ ಫೆಲ್ಯೂರ್ ಆಗಿದ್ದಕ್ಕೆ ಮರಕ್ಕೆ ನೇಣು ಬಿಗಿದು ಟೆಕ್ಕಿ ಆತ್ಮಹತ್ಯೆ!

    ಲವ್ ಫೆಲ್ಯೂರ್ ಆಗಿದ್ದಕ್ಕೆ ಮರಕ್ಕೆ ನೇಣು ಬಿಗಿದು ಟೆಕ್ಕಿ ಆತ್ಮಹತ್ಯೆ!

    ಹೈದರಾಬಾದ್: ಪ್ರೇಮ ವೈಫಲ್ಯ ಆಗಿದ್ದಕ್ಕೆ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಯತೀಶ್ ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಯತೀಶ್ ಬಾಂದ್ಲಾಗುಡದಲ್ಲಿ ವಾಸವಿದ್ದು, ವಿಪ್ರೋ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬುಧವಾರ ರಾತ್ರಿ ಉಪ್ಪಲ್ ಎಚ್‍ಎಂಡಿಎ ಲೇಔಟ್‍ನ ಮರವೊಂದರಲ್ಲಿ ಯತೀಶ್‍ನ ಮೃತದೇಹ ಪತ್ತೆಯಾಗಿದೆ. ಅದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಯತೀಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾಗ ಡೆತ್‍ನೋಟ್ ದೊರೆತಿದೆ. ಲವ್ ಫೆಲ್ಯೂರ್ ಆಗಿದ್ದಕ್ಕೆ ಯತೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಡೆತ್‍ನೋಟ್‍ನಿಂದ ತಿಳಿದು ಬಂದಿದೆ.

    ಯತೀಶ್ ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಲವ್ ಮ್ಯಾರೇಜ್ ಆಗಿ ಮೂರು ತಿಂಗಳಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

    ಲವ್ ಮ್ಯಾರೇಜ್ ಆಗಿ ಮೂರು ತಿಂಗಳಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

    ಹೈದರಾಬಾದ್: ಮದುವೆಯಾದ ಮೂರು ತಿಂಗಳಿಗೆ ನವವಿವಾಹಿತೆಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಜಮ್ಮಲಮಡುಗು ನಗರದಲ್ಲಿ ನಡೆದಿದೆ.

    ಮಾಬುಚಾನ್ ಮೃತ ನವವಿವಾಹಿತೆ. ಪತಿ ಇಮ್ತಿಯಾಜ್ ವರದಕ್ಷಿಣೆಗಾಗಿ ಕೊಲೆ ಮಾಡಿ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾನೆ ಎಂದು ಮೃತ ಮಾಬುಚಾನ್ ಪೋಷಕರು ಆರೋಪಿಸಿದ್ದಾರೆ.

    ಇವರಿಬ್ಬರು ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೀತಿಸಿ ಮದುವೆಯಾಗಲು ನಿರ್ಧಸಿದ್ದರು. ಇವರಿಬ್ಬರ ಪ್ರೀತಿ ಮನೆಯವರಿಗೆ ತಿಳಿದು ಪೋಷಕರು ಎಚ್ಚರಿಕೆ ಸಹ ನೀಡಿದ್ದರು. ಆದರೆ ಪೋಷಕರ ವಿರೋಧದ ನಡುವೆಯೂ ಇಬ್ಬರು ವಿವಾಹವಾಗಲು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು. ಈ ಬಗ್ಗೆ ಪೋಷಕರು ತಿಳಿದುಕೊಂಡು ಎರಡು ಕುಟುಂಬಸ್ಥರ ಒಪ್ಪಿಗೆ ಮೆರೆಗೆ ಫೆಬ್ರವರಿ 8 ರಂದು ಮದುವೆ ಮಾಡಿಸಿದ್ದರು.

    ಮದುವೆ ಸಂದರ್ಭದಲ್ಲಿ ಮೃತ ಮಾಬುಚಾನ್ ಪೋಷಕರು ವರದಕ್ಷಿಣೆಯಾಗಿ 10 ತೊಲಾ ಬಂಗಾರ ಮತ್ತು ನಗದು ಹಣವನ್ನು ನೀಡಿದ್ದರು. ಮದುವೆ ನಂತರ ಪತಿ, ಮಾವ ಬಾಶ್ಮಾಹುದ್ದಿನ ಮತ್ತು ಚಿಕ್ಕಮ್ಮ ಹಬೀಬೂನ್ ವರದಕ್ಷಿಣೆ ತರುವಂತೆ ಹಿಂಸೆ ನೀಡಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

    ವರದಕ್ಷಿಣೆ ತರಲು ಮಗಳಿಗೆ ಹಿಂಸೆ ನೀಡುವುದನ್ನು ನೋಡಲು ಸಾಧ್ಯವಾಗದೆ 50 ಸಾವಿರ ರೂ. ಹೆಚ್ಚುವರಿ ನಗದು ನೀಡಿದ್ದಾರೆ. ಆದರೆ ಬಳಿಕವೂ ಪತಿಯ ಮನೆಯವರು ಮತ್ತೆ ಹಣ ತರುವಂತೆ ಬಲವಂತ ಮಾಡಿದ್ದು, ಇದಕ್ಕೆ ವಿರೋಧಿಸಿದ್ದಕ್ಕೆ ಮಾಬುಚಾನ್ ಮೇಲೆ ಹಲ್ಲೆ ಮಾಡಿ ಕೊಂದು ಬಳಿಕ ನೇಣು ಬಿಗಿದಿದ್ದಾರೆ. ರಾತ್ರಿ ನಾವು ಮನೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಮ್ಮ ಮಗಳ ಮೃತ ದೇಹ ಪತ್ತೆಯಾಗಿದೆ ಎಂದು ಮೃತಾಳ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯಕ್ಕೆ ಈ ಘಟನೆ ಸಂಬಂಧ ಜಮ್ಮಲಮಡುಗು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಅಮ್ಮನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ಮಗ ದುರ್ಮರಣ!

    ಅಮ್ಮನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ಮಗ ದುರ್ಮರಣ!

    ಹೈದರಾಬಾದ್: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಮಗ ಮೃತಪಟ್ಟಿರುವ ಮಲಕಲಕುವಂತಹ ಘಟನೆ ತೆಲಂಗಾಣದ ಕೊಡದ್ ನಗರದಲ್ಲಿ ನಡೆದಿದೆ.

    ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿರುವ ಅರುಮಿಲ್ಲಿ ವೀರಾ ವೆಂಕಟ ಸತ್ಯನಾರಾಯಣ(32) ಮತ್ತು ಸತ್ಯನಾರಾಯಣ ಅವರ ನಾದಿನಿ ಗುಲ್ಲಾಪಳ್ಳಿ ವೆಂಕಟ ಮಾಧುರಿ ಮೃತ ದುರ್ದೈವಿಗಳು. ಈ ಘಟನೆ ಕೊಡದ್ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದೆ.

    ಮೃತ ಸತ್ಯನಾರಾಯಣ ಕುಟುಂಬವು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗಾಂಟದಲ್ಲಿ ಸಿದ್ದಂತನ್ ನಲ್ಲಿ ವಾಸವಾಗಿತ್ತು. ಇವರ ತಾಯಿ ಭಾನುವಾರ ಸುಮಾರು 12.15 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸತ್ಯನಾರಾಯಣ ಕ್ಯಾಬ್ ಬುಕ್ ಮಾಡಿ ಪತ್ನಿ ಮತ್ತು ನಾದಿನಿ ಜೊತೆ ಹೈದರಾಬಾದ್ ನಿಂದ ಗೋದಾವರಿ ಜಿಲ್ಲೆಗೆ ಹೊರಟಿದ್ದರು.

    ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸತ್ಯನಾರಾಯಣನ ಮತ್ತು ನಾದಿನಿ ಮಾಧುರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಪತ್ನಿ ಗರ್ಭಿಣಿಯಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕ್ಯಾಬ್ ಚಾಲಕನಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಧರಿಸಿದ್ದು, ಉಳಿದವರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಆದ್ದರಿಂದ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ವಿಜಯ್ ಪ್ರಕಾಶ್ ಹೇಳಿದ್ದಾರೆ.

    ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆ ಕುರಿತು ಮೃತ ಸತ್ಯನಾರಾಯಣ ಚಿಕ್ಕಪ್ಪ ದೂರು ನೀಡಿದ್ದು, ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ಪತಿ ಕಳೆದುಕೊಂಡ ಪತ್ನಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

    ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

    ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಅವರು ಸದ್ಯ ರಾಷ್ಟ್ರೀಯ ತಂಡದ ತರಬೇತುದಾರ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಕೋಚ್ ಇಬ್ಬರಿಗೂ ಬೇರೆ ಬೇರೆ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಿಚಂದ್, ಇದು ತರಬೇತಿ ತಂಡದ ನಿರ್ಧಾರವಾಗಿದ್ದು, ಇಬ್ಬರು ಆಟಗಾರ್ತಿಯರ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಪ್ರತ್ಯೇಕ ತರಬೇತಿ ನೀಡಿದ್ದು, ಇಬ್ಬರು ಆಟಗಾರ್ತಿಯರ ಕುರಿತು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಸದ್ಯ ಈ ತೀರ್ಮಾನದ ಹಿನ್ನೆಲೆಯಲ್ಲಿ ಗೋಪಿಚಂದ್ ಅವರ ಆಕಾಡೆಮಿಯ ತರಬೇತಿ ಸಮಯವನ್ನು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಗೋಪಿಚಂದ್ ಹೇಳಿದ್ದಾರೆ.

    ಸದ್ಯ ಗೋಪಿಚಂದ್ ಅವರು ಎರಡು ಆಕಾಡೆಮಿಗಳನ್ನು ಹೊಂದಿದ್ದು, ಅರ್ಧ ಕಿಮೀ ಅಂತರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಇದ್ದ ಹಳೆಯ ತರಬೇತಿ ಕೇಂದ್ರದ ಅಲ್ಪ ದೂರದಲ್ಲೇ ಮತ್ತೊಂದು ಹೊಸ ಕೇಂದ್ರ ಸ್ಥಾಪನೆ ಕೆಲ ವರ್ಷಗಳ ಹಿಂದೆ ಆರಂಭ ಮಾಡಲಾಗಿತ್ತು.

    2014 ರಲ್ಲಿ ಗೋಪಿಚಂದ್ ತರಬೇತಿ ಕೇಂದ್ರದಿಂದ ಹೊರ ನಡೆದಿದ್ದ ಸೈನಾ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ಮತ್ತೆ ಸೈನಾ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದಿರುಗಿದ್ದರು. ವಿಶ್ವ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದ ನಂತರ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದುರುಗಿ ಪಿವಿ ಸಿಂಧೂ ರನ್ನು ಮಣಿಸಿ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

    ತರಬೇತಿ ತಂಡದ ಈ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಧೂ ತಂದೆ, ಸದ್ಯ ನಿಗಧಿ ಮಾಡಿರುವ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೋಪಿಚಂದ್ ಅವರು ಎಲ್ಲಾ ಆಟಗಾರರಿಗೂ ಒಂದೇ ಸಮಯವನ್ನು ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ಏನನ್ನು ಕೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಪ್ರತ್ಯೇಕ ತರಬೇತಿ ಯಾಕೆ?
    ಸೈನಾ ಮತ್ತು ಸಿಂಧೂಗೆ ಪ್ರತ್ಯೇಕ ತರಭೇತಿ ನೀಡುತ್ತಿರುವುದು ಯಾಕೆ ಎನ್ನುವುದನ್ನು ಯಾರು ಅಧಿಕೃತವಾಗಿ ತಿಳಿಸಿಲ್ಲ. ಇಬ್ಬರಿಗೆ ಪ್ರತ್ಯೇಕ ಅವಧಿಯಲ್ಲಿ ತರಬೇತಿ ನೀಡುತ್ತಿರುವುದರ ಹಿಂದೆ ಆಟಗಾರ್ತಿಯರ ಹಿತಾದೃಷ್ಟಿಯೂ ಕಾರಣವಾಗಿದೆ ಎನ್ನಲಾಗಿದೆ. ಇಬ್ಬರು ಒಂದೇ ಕಡೆ ಅಭ್ಯಾಸ ನಡೆಸಿದರೆ ದೌರ್ಬಲ್ಯಗಳು ತಿಳಿಯುವ ಕಾರಣ ಇಬ್ಬರನ್ನು ದೂರ ಇಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • ಮಗಳಿಗಾಗಿ ಪೋಷಕರು, ಅಪ್ಪ-ಅಮ್ಮನಿಗಾಗಿ ಪುತ್ರಿ ರೈಲಿನಿಂದ ಹಾರಿದ್ರು!

    ಮಗಳಿಗಾಗಿ ಪೋಷಕರು, ಅಪ್ಪ-ಅಮ್ಮನಿಗಾಗಿ ಪುತ್ರಿ ರೈಲಿನಿಂದ ಹಾರಿದ್ರು!

    ಹೈದರಾಬಾದ್: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಗುಂಟೂರಿನ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶ ಗುಂಟೂರ್ ಜಿಲ್ಲೆಯಲ್ಲಿ ನಡೆದಿದೆ.

    ದುಂಗಾ ವೆಂಕಯ್ಯ (45), ಪತ್ನಿ ರಜನಿ (39) ಈ ದಂಪತಿಯ ಮಗಳು ಕೃಷ್ಣ ವೇಣಿ (19) ಆತ್ಮಹತ್ಯೆಗೆ ಶರಣಾದ ಕುಟುಂಬದವರಾಗಿದ್ದು, ಖಮ್ಮಂ ಜಿಲ್ಲೆಯ ಮಾಧೀರಾದಲ್ಲಿ ಈ ಘಟನೆ ಸಂಭವಿಸಿದೆ.

    ಕೃಷ್ಣ ವೇಣಿ ಫ್ಯಾಷನ್ ಟೆಕ್ನಾಲಜಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕುಟುಂಬದ ಸದಸ್ಯರು ರೈಲಿನಲ್ಲಿ ಹೋಗುತ್ತಿದ್ದಾಗ ಪೋಷಕರು ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆಗ ಕೃಷ್ಣ ವೇಣಿ ತಾನು ಪ್ರೀತಿಸಿದ ಹುಡುಗನ ಬಗ್ಗೆ ಹೇಳಿದ್ದಾಳೆ. ಆದರೆ ಪೋಷಕರು ಆಕೆಯ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಾವು ನೋಡಿದ ಹುಡುಗನನ್ನೆ ಮದುವೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಪೋಷಕರ ಮಾತಿಗೆ ಒಪ್ಪದ ಕೃಷ್ಣ ವೇಣಿ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಇದಕ್ಕೆ ಪೋಷಕರು ನಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮುಂದೆ ಅವಮಾನವಾಗುತ್ತದೆ. ನೀನು ಮದುವೆಗೆ ಒಪ್ಪದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕೊನೆಗೆ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪೋಷಕರು ಮುಂದಾಗುತ್ತಾರೆ.

    ಪೋಷಕರ ಆತ್ಮಹತ್ಯೆಯನ್ನು ತಡೆಯಲು ಕೃಷ್ಣವೇಣಿ ಪ್ರಯತ್ನ ಮಾಡುತ್ತಾಳೆ. ಆದರು ಅದು ಸಾಧ್ಯವಾಗದೇ ಅವರ ಜೊತೆ ಆಕೆಯೂ ರೈಲಿನಿಂದ ಜಿಗಿಯುತ್ತಾಳೆ. ರೈಲಿನಿಂದ ಬಿದ್ದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಟುಂಬದಲ್ಲಿನ ಮದುವೆ ಚರ್ಚೆಯ ಬಗ್ಗೆ ಪೊಲೀಸರಿಗೆ ಕೃಷ್ಣವೇಣಿಯ ತಮ್ಮ ಮಾಹಿತಿ ನೀಡಿದ್ದಾನೆ.

    ಪೋಷಕರ ಜೊತೆ ಮಗನು ರೈಲಿನಲ್ಲಿ ಪ್ರಯಾಣಿಸಿದ್ದು, ಆತ ಕಾಲೇಜಿನಲ್ಲಿ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೂವರ ಮೃತದೇಹಗಳನ್ನು ಮಂಗಳವಾರ ಗುಂಟೂರಿಗೆ ರವಾನಿಸಿದ್ದಾರೆ.

  • ಪ್ರೀತಿಸದಿದ್ದರೆ ಕೊಲೆ ಮಾಡ್ತೀನಿ ಅಂತ ಹೇಳಿ ಪ್ರೇಯಸಿಯನ್ನು ಕೊಂದೇಬಿಟ್ಟ!

    ಪ್ರೀತಿಸದಿದ್ದರೆ ಕೊಲೆ ಮಾಡ್ತೀನಿ ಅಂತ ಹೇಳಿ ಪ್ರೇಯಸಿಯನ್ನು ಕೊಂದೇಬಿಟ್ಟ!

    ಹೈದರಾಬಾದ್: ತನ್ನನ್ನು ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ತನ್ನ ಪ್ರೇಯಸಿಯನ್ನೇ ಕೊಲೆ ಮಾಡಿದ ಘಟನೆ ಸೋಮವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿರುವ ಯೂಸಫ್‍ಗೂಡಾದಲ್ಲಿ ನಡೆದಿದೆ.

    ವೆಂಕಟಾ ಲಕ್ಷ್ಮೀ(19) ಕೊಲೆಯಾದ ಯುವತಿ. ಸಾಗರ್ ಎಂಬ ಯುವಕ ಲಕ್ಷ್ಮೀಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ತನ್ನನ್ನು ಪ್ರೀತಿಸುವಂತೆ ಆತ ಲಕ್ಷ್ಮೀಯನ್ನು ದಿನನಿತ್ಯ ಪೀಡಿಸುತ್ತಿದ್ದನು. ಆದರೆ ಲಕ್ಷ್ಮೀ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಸಾಗರ್ ಆಕೆಯನ್ನು ಕೊಲೆ ಮಾಡಿದ್ದಾನೆ.

    ವೆಂಕಟಾ ಲಕ್ಷ್ಮೀ 10 ವರ್ಷದಿಂದ ಹೈದರಾಬಾದ್ ನಲ್ಲೇ ವಾಸಿಸುತ್ತಿದ್ದಳು. ಸೋಮವಾರ ಸಂಜೆ ಸುಮಾರು 5.30ಕ್ಕೆ ಚಿನ್ನ ಖರೀದಿಸಲು ಚಿನ್ನದ ಅಂಗಡಿಗೆ ಹೋದಾಗ ಸಾಗರ್ ಆಕೆಯನ್ನು ಕೊಲೆ ಮಾಡಿದ್ದಾನೆ.

    ಲಕ್ಷ್ಮೀ ಜೋರಾಗಿ ಕಿರುಚುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದರು. ಆಗ ಲಕ್ಷ್ಮೀ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಳು. ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದರು. ವಿಷಯ ತಿಳಿದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತಲುಪಿದ್ದರು.

    ಸಾಗರ್ ಲಕ್ಷ್ಮೀಯನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನನ್ನು ಹಿಡಿಯಲು ಪೊಲೀಸರು 6 ತಂಡ ರಚಿಸಿತ್ತು. ಸದ್ಯ ಪೊಲೀಸರು ಸಾಗರ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

  • ಅತಿ ವೇಗದ ಚಾಲನೆಗೆ ಟೆಕ್ಕಿ ಬಲಿ, ಕೋಮಾಕ್ಕೆ ಜಾರಿದ ಪತ್ನಿ!

    ಅತಿ ವೇಗದ ಚಾಲನೆಗೆ ಟೆಕ್ಕಿ ಬಲಿ, ಕೋಮಾಕ್ಕೆ ಜಾರಿದ ಪತ್ನಿ!

    ಹೈದರಾಬಾದ್: ಬೈಕ್ ಗಳೆರೆಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಟೆಕ್ಕಿ ದುರ್ಮರಣಕ್ಕೀಡಾಗಿದ್ದು, ಪತ್ನಿ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಂಜಾರಾ ಹಿಲ್ಸ್ ನ ಇಂದಿರಾ ನಗರದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮೃತ ದುರ್ದೈವಿಯನ್ನು 33 ವರ್ಷದ ಜಿ. ರಾಜೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಸಾಫ್ಟ್ ವೇರ್ ಎಂಜಿನಿಯರ್ ಆಗಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಇವರ ಪತ್ನಿ 30 ವರ್ಷದ ಭುವನ ಹಾಗೂ ಇನ್ನೊಬ್ಬ ಬೈಕ್ ಸವಾರ 32 ವರ್ಷದ ವಿಜಯ್ ಮುದಿರಾಜ್ ಗಂಭೀರ ಗಾಯಗೊಂಡಿದ್ದಾರೆ.

    ಘಟನೆ ವಿವರ:
    ಪ್ರಸಾದ್ ಹಾಗೂ ಭುವನ ಭಾನುವಾರ ಬೆಳಗ್ಗೆ ಕೃಷ್ಣ ನಗರದಲ್ಲಿರೋ ಆಂಜನೇಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಪೂಜೆ ಮುಗಿಸಿ ಮನೆಗೆ ವಾಸಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಗ್ರೀನ್ ಬವಾರ್ಚಿ ಎಂಬಲ್ಲಿ ಅಡ್ಡ ರಸ್ತೆಯಾಗಿ ಹೋಗಲೆಂದು ತನ್ನ ಪಲ್ಸರ್ ಬೈಕ್ ಟರ್ನ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಬಂದಿಯಿಂದ ಬಂದ ಬೈಕ್, ವೇಗವಾಗಿ ಬಂದು ಪ್ರಸಾದ್ ಬೈಕ್ ಗೆ ಗುದ್ದಿದೆ.

    ಪ್ರಸಾದ್ ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಪ್ರಸಾದ್ ಹಾಗೂ ಭುವನ ಹಾಗೂ ಇನ್ನೊಂದು ಬೈಕ್ ಸವಾರ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಪ್ರಸಾದ್ ತಲೆಯಿಂದ ಹೆಲ್ಮೆಟ್ ಹಾರಿದೆ. ಹೀಗಾಗಿ ರಸ್ತೆಗೆ ತಲೆ ಹೊಡೆದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇನ್ನು ಭುವನ ಹಾಗೂ ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಭುವನ ಅವರು ಕೋಮಾದಲ್ಲಿದ್ದಾರೆ. ಬೈಕ್ ಸವಾರ ಮುದಿರಾಜ್ ನನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೂ ಕೂಡ ಕೋಮಾದಲ್ಲಿದ್ದಾರೆ ಅಂತ ಬಂಜಾರಾ ಹಿಲ್ಸ್ ಇನ್ಸ್ ಪೆಕ್ಟರ್ ಕೆ ಶ್ರೀನಿವಾಸ್ ತಿಳಿಸಿದ್ದಾರೆ.

    ಘಟನೆ ನಡೆದ ಸ್ಥಳ ಇಳಿಜಾರು ಪ್ರದೇಶವಾಗಿದ್ದರಿಂದ ಮುದಿರಾಜ್ ತನ್ನ ಬೈಕನ್ನು ವೇಗವಾಗಿ ಚಲಾಯಿಸಿದ ಪರಿಣಾಮ, ಬೈಕ್ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಈ ಅವಘಡ ಸಂಭವಿಸಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಘಟನೆ ಸಂಬಂಧ ಐಪಿಸಿ ಸೆಕ್ಷನ್ 304 ಹಾಗೂ 338ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.