Tag: Hyderabad

  • ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಗೆಸ್ಟ್ ಹೌಸ್‍ಗೆ ಒಬ್ಳೇ ಬಾ ಅಂತಾ ಕರೀತಿದ್ರು: ನಟಿ ಆಮನಿ

    ಹೈದರಾಬಾದ್: ವೃತ್ತಿ ಜೀವನದ ಆರಂಭದಲ್ಲಿ ನನಗೂ ಸಹ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಕನ್ನಡದ ‘ಅಪ್ಪಾಜಿ’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಆಮನಿ ಹೇಳಿದ್ದಾರೆ.

    ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಆಮನಿ, ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಕುರಿತ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ. ಮೊದಲು ಫೋಟೋ ನೋಡಿ ಸಿನಿಮಾ ಚಾನ್ಸ್ ನೀಡುತ್ತಿದ್ದರು. ಆದರೆ ಬಳಿಕ ಫೋನ್ ಮಾಡಿ ಗೆಸ್ಟ್ ಹೌಸ್ ಗೆ ಬನ್ನಿ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.

    ಮೊದಲು ಅವರು ಕರೆಯುತ್ತಿದ್ದ ಉದ್ದೇಶ ತಿಳಿಯುತ್ತಿರಲಿಲ್ಲ, ಆದರೆ ಅವರು ಅಮ್ಮನ ಜೊತೆ ಬರಬೇಡ ಎಂದು ಸೂಚನೆ ನೀಡಿ ಒಬ್ಬಳನ್ನೇ ಕರೆಯುತ್ತಿದ್ದ ವೇಳೆ ಅವರ ಉದ್ದೇಶ ನನಗೆ ಅರ್ಥವಾಗುತ್ತಿತ್ತು. ಇಂತಹ ಘಟನೆಗಳು ಸಾಮಾನ್ಯವಾಗಿ ಹೊಸ ಸಂಸ್ಥೆಗಳಲ್ಲಿ ಮಾತ್ರ ನಡೆಯುತ್ತದೆ. ತಮಿಳು ಚಿತ್ರ ರಂಗದಲ್ಲೂ ಇಂತಹ ಘಟನೆಗಳು ನಡೆದಿದೆ. ದೊಡ್ಡ ದೊಡ್ಡ ಬ್ಯಾನರ್ ಹೊಂದಿರುವ ಸಂಸ್ಥೆಗಳಲ್ಲಿ ಇಂತಹ ಅನುಭವ ಎದುರಿಸಿಲ್ಲ, ಸಣ್ಣ ಸಂಸ್ಥೆಗಳಲ್ಲಿ ಮಾತ್ರ ಇಂತಹವುಗಳು ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ವೃತ್ತಿ ಜೀವನದ ಆರಂಭದಲ್ಲಿ ಹೀರೋಯಿನ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಆಮನಿ ಅವರು, ಮದುವೆಯ ಬಳಿಕ ಕೆಲ ಕಾಲ ಬಣ್ಣದ ಬದುಕಿಗೆ ಬ್ರೇಕ್ ನೀಡಿದ್ದರು. ಆದರೆ ಕೆಲ ಸಮಯದ ಬಳಿಕ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಸದ್ಯ ಪೋಷಕ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಲ್ಲಿ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ನಟಿ ಶ್ರೀ ರೆಡ್ಡಿ ಪ್ರತಿಭಟನೆಯ ಬಳಿಕ ಹಲವು ನಟಿಯರು ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ತುಟಿ ಬಿಚ್ಚಿದ್ದರು.

  • ಜಮೀನಿನಲ್ಲಿ ಕಾಜಲ್ ಅಗರ್ವಾಲ್ ಕಟೌಟ್ -ಯಶಸ್ವಿಯಾಯ್ತು ರೈತನ ಪ್ರಯೋಗ

    ಜಮೀನಿನಲ್ಲಿ ಕಾಜಲ್ ಅಗರ್ವಾಲ್ ಕಟೌಟ್ -ಯಶಸ್ವಿಯಾಯ್ತು ರೈತನ ಪ್ರಯೋಗ

    ಹೈದರಾಬಾದ್: ಬೆಳೆ ಹಾಳಾಗುವುದನ್ನು ತಡೆಯಲು ಜಮೀನಿನಲ್ಲಿ ರೈತರೊಬ್ಬರು ಕಾಜಲ್ ಅಗರ್ವಾಲ್  ಕಟೌಟ್ ಹಾಕಿದ್ದು, ಈ ಪ್ರಯೋಗ ಈಗ ಯಶಸ್ವಿಯಾಗಿದೆ.

    ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 30 ವರ್ಷದ ರೈತ ಅನ್ವರ್ ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಜಮೀನಿನಲ್ಲಿ ಶ್ರಮ ಹಾಕಿ ತರಕಾರಿ ಬೆಳೆ ಚೆನ್ನಾಗಿ ಬಂದರೂ ಕೊನೆ ಹಂತದಲ್ಲಿ ಒಣಗಿ ಹೋಗುತ್ತಿತ್ತು.

    ಬೆಳೆ ಒಣಗುತ್ತಿರುವುದು ಯಾಕೆ ಎಂದು ಮನಸ್ಸಿನಲ್ಲೇ ಪ್ರಶ್ನಿಸಿದಾಗ, ರಸ್ತೆಯಲ್ಲಿ ಹೋಗುವ ಮಂದಿ ಪದೇ ಪದೇ ತನ್ನ ಜಮೀನಿನತ್ತ ನೋಡುವುದರಿಂದ ದೃಷ್ಟಿ ತಾಗಿ ಬೆಳೆ ಒಣಗುತ್ತಿದೆ ಎನ್ನುವ ಉತ್ತರ ಅನ್ವರ್ ಅವರಿಗೆ ಸಿಕ್ಕಿದೆ.

    ಈ ಸಮಸ್ಯೆಗೆ ಪರಿಹಾರ ಏನು ಎಂದು ಆಲೋಚಿಸುತ್ತಿದ್ದಾಗ ಅವರಿಗೆ ಕಾಜಲ್ ಅಗರ್ವಾಲ್  ಕಟೌಟ್ ಹಾಕಿದರೆ ಹೇಗೆ ಎನ್ನುವ ಉಪಾಯ ಹೊಳೆದಿದೆ. ಐಡಿಯಾ ಹೊಳೆದಿದ್ದೆ ತಡ ಜಮೀನಿನ ಮಧ್ಯದಲ್ಲಿ ನೆಚ್ಚಿನ ನಟಿ ಕಾಜರ್ ಅಗರ್‍ವಾಲ್ ಕಟೌಟ್ ಹಾಕಿದ್ದಾರೆ. ಮೊದಲೆಲ್ಲ ಬೆಳೆಗಳನ್ನು ನೋಡುತ್ತಿದ್ದ ಜನ ಈಗ ಕಟೌಟ್ ನೋಡುತ್ತಿದ್ದಾರೆ. ಹೀಗಾಗಿ ಈಗ ಜಮೀನಿನ ಮೇಲೆ ಕೆಟ್ಟ ದೃಷ್ಟಿ ಬೀಳದ ಕಾರಣ ಬೆಳೆ ಒಣಗುತ್ತಿಲ್ಲ ಎಂದು ಅನ್ವರ್ ಹೇಳಿದ್ದಾರೆ.

    ಹೊಲದಲ್ಲಿ ಕೆಲ ದಿನಗಳ ಹಿಂದೆ ಕಾಜಲ್ ಅಗರ್ವಾಲ್  ಅವರ ಎರಡು ಕಟೌಟ್ ಗಳನ್ನು ನಿಲ್ಲಿಸಿದ್ದೇನೆ. ಈಗ ಬೆಳೆಯಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತಿದ್ದೇನೆ. ಮೊದಲು ಬೆಳೆಗಳು ಒಣಗಿ ಹೋಗುತ್ತಿದ್ದವು. ಇದರಿಂದ ನಾನು ಹಾಕಿದ ಸಾಕಷ್ಟು ಹಣ ಹಾಗೂ ಶ್ರಮ ನಷ್ಟವಾಗುತ್ತಿತ್ತು. ಆದರೆ ಕಾಜಲ್ ಅಗರ್ವಾಲ್  ಕಟೌಟ್ ನಿಲ್ಲಿಸಿದಾಗಿನಿಂದ ಬೆಳೆಗಳು ಚೆನ್ನಾಗಿವೆ ಅಂತಾರೆ ರೈತ ಅನ್ವರ್.

    ಈಗ ಎಲ್ಲರೂ ನನ್ನ ಬೆಳೆಗಳನ್ನು ನೋಡುವುದನ್ನು ಮರೆತು ಕಟೌಟ್ ನೋಡುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳುತ್ತಿಲ್ಲ ಎಂದು ತನ್ನ ಉಪಾಯವನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಈ ವಿಚಾರವನ್ನು ನೋಡಿ ಮೊದಲು ನಗುತ್ತಿದ್ದವರೆಲ್ಲ ಇಂದು ನನ್ನ ಬೆಳೆಗಳ ಕಡೆಗೆ ನೋಡದೇ ಕಟೌಟ್‍ಗಳನ್ನೇ ನೋಡುತ್ತಿದ್ದಾರೆ ಎಂದಿದ್ದಾರೆ.

    ಯಾಕೆ ಕಾಜಲ್ ಅಗರ್ವಾಲ್  ಕಟೌಟ್ ಹಾಕಿದ್ದು ಎಂದು ಪ್ರಶ್ನಿಸಿದ್ದಕ್ಕೆ, ನಾನು ಕಾಜಲ್ ಅಗರ್ವಾಲ್  ರ ದೊಡ್ಡ ಅಭಿಮಾನಿ ಎನ್ನುವುದು ನನ್ನ ತಂದೆಯವರಿಗೆ ಗೊತ್ತಿತ್ತು. ಹಾಗಾಗಿ ನನ್ನ ತಂದೆಯೇ ಕಾಜಲ್ ಅವರ ಕಟೌಟ್‍ಗಳನ್ನು ಜಮೀನಿನಲ್ಲಿ ಇಡುವಂತೆ ಸಲಹೆ ನೀಡಿದರು ಎಂದು ಅನ್ವರ್ ಉತ್ತರಿಸಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆನ್ನಾರೆಡ್ಡಿ ಎಂಬ ರೈತ ತನ್ನ ಜಮೀನಿಲ್ಲಿ ಬೆಳೆದ ಬೆಳೆಗಳಿಗೆ ದೃಷ್ಟಿ ತಾಗದಿರಲಿ ಎಂದು ಸನ್ನಿಲಿಯೋನ್ ರ ಅರೆನಗ್ನ ಕಟೌಟ್ ನ್ನು ಜಮೀನಿನಲ್ಲಿ ನಿಲ್ಲಿಸಿದ್ದರು.

  • ದಕ್ಷಿಣಕ್ಕೊಂದು ತಿರುಪತಿ, ಉತ್ತರಕ್ಕೊಂದು ತಿರುಪತಿ – ಭಕ್ತರಿಗಾಗಿ ಟಿಟಿಡಿಯಿಂದ ಹೊಸ ಪ್ಲಾನ್

    ದಕ್ಷಿಣಕ್ಕೊಂದು ತಿರುಪತಿ, ಉತ್ತರಕ್ಕೊಂದು ತಿರುಪತಿ – ಭಕ್ತರಿಗಾಗಿ ಟಿಟಿಡಿಯಿಂದ ಹೊಸ ಪ್ಲಾನ್

    ಹೈದರಾಬಾದ್: ದೇಶದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪ ದೇವಸ್ಥಾನ ಮತ್ತರೆಡು ಆಗಲಿದ್ದು, ಇನ್ನೊಂದು ತಿಂಗಳಿನಲ್ಲಿ ದೇವಾಲಯ ಕಾರ್ಯಪೂರ್ಣಗೊಳ್ಳುವ ಸಾಧ್ಯತೆ ಇದೆ.

    ಆಂಧ್ರಪ್ರದೇಶದಲ್ಲಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿರುವ ಭಕ್ತಗಣ ಹೆಚ್ಚಾಗ್ತಿದ್ದು, ತಿಮ್ಮಪ್ಪನ ದರ್ಶನಕ್ಕಾಗಿ ದಿನಗಟ್ಟಲೆ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ, ಟಿಟಿಡಿ ಈಗ ಹೊಸ ಪ್ಲಾನ್ ಮಾಡಿದ್ದು, ಅದರಂತೆ ಉತ್ತರ ಭಾರತದ ಹರ್ಯಾಣದ ಕುರುಕ್ಷೇತ್ರದಲ್ಲೂ, ದಕ್ಷಿಣ ಭಾರತೀಯರಿಗಾಗಿ ಕನ್ಯಾಕುಮಾರಿಯಲ್ಲಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣ ನಡೆಯುತ್ತಿದೆ. ಕುರುಕ್ಷೇತ್ರದಲ್ಲಿ 2012 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಯೋಜನೆ ಚಾಲನೆ ನೀಡಿತ್ತು, ಅಂದು ಸಿಎಂ ಆಗಿದ್ದ ಭೂಪಿಂದರ್ ಸಿಂಗ್ ಹೂಡಾ ದೇವಾಲಯ ನಿರ್ಮಾಣ ಮಾಡುವ ಕ್ಷೇತ್ರವನ್ನು ಪ್ರಮುಖ ಪ್ರವಾಸಿ ಧಾರ್ಮಿಕ ಕೇಂದ್ರವಾಗಿ ರೂಪಿಸಲಾಗುವುದು ಎಂದು ಹೇಳಿದ್ದರು.

    ಕುರುಕ್ಷೇತ್ರದಲ್ಲೇ ನಿರ್ಮಾಣ ಮಾಡುವ ಹಿಂದಿನ ಉದ್ದೇಶ ಬಿಚ್ಚಿಟ್ಟ ಟಿಟಿಡಿ ಸಮಿತಿ ವಕ್ತಾರರು, ಶ್ರೀ ಕೃಷ್ಣನ ಜನ್ಮಸ್ಥಾನವಾಗಿರುವ ಈ ಪ್ರದೇಶ ದೇವಾಲಯ ನಿರ್ಮಾಣ ಮಾಡಲು ಸೂಕ್ತವಾಗಿದ್ದು ಎಂಬ ಉದ್ದೇಶದಿಂದ ಈ ಕಾರ್ಯ ನಡೆಸುತ್ತಿರುವುದುದಾಗಿ ತಿಳಿಸಿದ್ದರು.

    ಈ ಕುರಿತು ಈಗಾಗಲೇ ಕಾರ್ಯ ಪ್ರವೃತ್ತವಾಗಿರುವ ಟಿಟಿಡಿ ಕುರುಕ್ಷೇತ್ರದಲ್ಲಿ ನಿರ್ಮಾಣ ಮಾಡುತ್ತಿರುವ ದೇಗುಲ ಅಂತಿಮ ಹಂತಕ್ಕೆ ಬಂದಿದೆ. ನೋಡಲು ತಿರುಪತಿ ತಿರುಮಲ ದೇಗುಲದಂತೆಯೇ ಈ ದೇವಾಲಯಗಳು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ದಕ್ಷಿಣ ಭಾರತದ ಕಲ್ಲುಗಳನ್ನು ಬಳಸಿ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದೆ.

    ಭಾರತದ ಪ್ರಮುಖ ನಗರಗಳಲ್ಲಿಯೂ ಟಿಟಿಡಿ ಸಮಿತಿ ದೇವಾಲಯಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಪ್ರಮುಖವಾಗಿ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ದೇವಾಲಯ ನಿರ್ಮಾಣ ನಡೆಸುವ ಕುರಿತು ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

  • ಪ್ರಧಾನಿ ಮೋದಿಯವರೇ ಧೈರ್ಯವಿದ್ದರೆ ಇಲ್ಲಿ ಸ್ಪರ್ಧಿಸಿ – ಅಸಾದುದ್ದೀನ್ ಓವೈಸಿ!

    ಪ್ರಧಾನಿ ಮೋದಿಯವರೇ ಧೈರ್ಯವಿದ್ದರೆ ಇಲ್ಲಿ ಸ್ಪರ್ಧಿಸಿ – ಅಸಾದುದ್ದೀನ್ ಓವೈಸಿ!

    ಹೈದರಾಬಾದ್: ಎಐಎಂಐಎಂ ಅಧ್ಯಕ್ಷ ಹಾಗೂ ಹಾಲಿ ಹೈದರಾಬಾದ್‍ನ ಸಂಸದರಾದ ಅಸಾದುದ್ದೀನ್ ಓವೈಸಿರವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ನೇರವಾಗಿ ಸವಾಲು ಹಾಕಿದ್ದಾರೆ.

    ಹೈದರಾಬಾದನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅಸಾದುದ್ದೀನ್ ಓವೈಸಿ ಮಾತನಾಡಿ, ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರ ಸವಾಲು ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಿ ಎಂದು ಸವಾಲು ಎಸೆದಿದ್ದಾರೆ.

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿ ಬಂದು ಸ್ಪರ್ಧಿಸಲಿ ಎಂದು ತಿಳಿಸಿದ ಅವರು ಕಾಂಗ್ರೆಸ್ ಮುಖಂಡರಿಗೂ ಇದೇ ಸವಾಲನ್ನು ಹಾಕಿದ್ದಾರೆ.

    ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಮೋದಿಯವರನ್ನು ಪ್ರಖ್ಯಾತ ಜಾದೂಗಾರರಾದ ಪಿ.ಸಿ.ಸೋರ್ಕರ್ ಹೋಲಿಸಿ, ಮೋದಿಯವರು ಕೇವಲ ಜನರಿಗೆ ಮೋಡಿ ಮಾಡುತ್ತಾರೆ. ಒಂದು ವೇಳೆ ಇವರು ಟಿವಿ ಕಾರ್ಯಕ್ರಮಗಳಲ್ಲಿ ಜಾದೂ ಪ್ರದರ್ಶನ ಮಾಡಿದ್ರೆ, ಟಿವಿ ಸಂಸ್ಥೆಗಳಿಗೆ ಒಳ್ಳೆಯ ಟಿಆರ್‍ಪಿ ಬರುತ್ತದೆ ಎಂದು ಕಿಚಾಯಿಸಿದ್ದಾರೆ.

    ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ದೇಶದಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ನಿರುದ್ಯೋಗ ತಾಂಡವವಾಡುತ್ತಿದೆ. ಇದರ ವಿರುದ್ಧ ಮೋದಿ ಸರ್ಕಾರ ಏನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • 5 ಲಕ್ಷಕ್ಕೆ ಪತ್ನಿ, ಮಕ್ಕಳನ್ನು ಮಾರಾಟ ಮಾಡಲು ಡೀಲ್ ಮಾಡ್ಕೊಂಡ ಪತಿ!

    5 ಲಕ್ಷಕ್ಕೆ ಪತ್ನಿ, ಮಕ್ಕಳನ್ನು ಮಾರಾಟ ಮಾಡಲು ಡೀಲ್ ಮಾಡ್ಕೊಂಡ ಪತಿ!

    ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವ್ಯಕ್ತಿಯೊಬ್ಬ ಸಾಲ ತೀರಿಸುವ ಸಲುವಾಗಿ ತನ್ನ ಪತ್ನಿ ಹಾಗೂ ಮಕ್ಕಳನ್ನು 5 ಲಕ್ಷಕ್ಕೆ ಮಾರಿದ ಅಚ್ಚರಿಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

    ನಂದ್ಯಾಳ್ ನಗರದ ನಿವಾಸಿ 35 ವರ್ಷದ ವೆಂಕಟಮ್ಮ ಅವರು ಕೊಯಿಲಕುಂಟ್ಲಾ ನಿವಾಸಿ 30 ವರ್ಷದ ಪಸುಪೊಲ್ಟಿ ಮಡ್ಡಿಲೆಟಿ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ 4 ಹೆಣ್ಣು ಹಾಗೂ ಓರ್ವ ಪುತ್ರನಿದ್ದಾನೆ. ಮಡ್ಡಿಲೆಟಿ ಜೂಜಾಟ ಹಾಗೂ ಮದ್ಯವ್ಯಸನಿಯಾಗಿದ್ದನು.

    ಅತಿಯಾಗಿ ಸಾಲ ಮಾಡಿಕೊಂಡಿದ್ದ ಮಡ್ಡಿಲೆಟಿ, ವಯಸ್ಸಿಗೆ ಬಂದ ತನ್ನ ಮಗಳನ್ನು ಮಾರಾಟ ಮಾಡಲು ಯೋಜನೆ ಹಾಕಿದ್ದನು. ಅಂತೆಯೇ ಕಳೆದ ವರ್ಷವೇ 1.5 ಲಕ್ಷಕ್ಕೆ ಸಂಬಂಧಿಯೊಬ್ಬರ ಮಗನಿಗೆ ಕೊಡುವುದಾಗಿ ಪ್ಲಾನ್ ಮಾಡಿದ್ದನು. ಆದ್ರೆ ಆ ಸಮಯದಲ್ಲಿ ಆಕೆಗೆ ಮದುವೆ ವಯಸ್ಸು ಆಗಿರಲಿಲ್ಲ. ಹೀಗಾಗಿ ಮದುವೆಯ ವಯಸ್ಸು ಬಂದಾಗ ಕೊಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದನು. ಆ ಹಣ ಖರ್ಚಾದ ಬಳಿಕ ಆತ ಹಣ ಪಡೆಯುವ ಸುಲಭ ಉಪಾಯಗಳನ್ನು ಹುಡುಕುತ್ತಿದ್ದನು. ಉಳಿದ ಹೆಣ್ಣು ಮಕ್ಕಳಿಗೆ ಇದೀಗ 10, 8 ಮತ್ತು 6 ಆದ್ರೆ ಮಗನಿಗೆ 4 ವರ್ಷ ವಯಸ್ಸು.

    ಇದೇ ವೇಳೆ ಈತನ ಸಹೋದರ ಬುಸ್ಸಿ, ಪತ್ನಿ ಹಾಗೂ ಉಳಿದ ಹೆಣ್ಣು ಮಕ್ಕಳು ಹಾಗೂ ಪುತ್ರನನ್ನು 5 ಲಕ್ಷಕ್ಕೆ ಮಾರಟ ಮಾಡುವಂತೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಮಾತುಕತೆ ನಡೆಸಿ ಡೀಲ್ ಮಾಡಿಕೊಂಡಿದ್ದು, ಪೇಪರ್‍ಗೆ ಸಹಿ ಮಾಡುವಂತೆ ಪತ್ನಿಗೆ ಮಡ್ಡಿಲೆಟ್ ಹೇಳಿದ್ದಾನೆ. ಈ ವೇಳೆ ಪತ್ನಿ ಸಹಿ ಹಾಕಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಮಡ್ಡಿಲೆಟ್ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಗಂಡನ ಕಿರುಕುಳದಿಂದ ಬೇಸತ್ತ ಪತ್ನಿ, ನಾನು ಈತನೊಂದಿಗೆ ಜೀವನ ನಡೆಸಲ್ಲ ಅಂತ ಹೇಳಿ ತವರು ಮನೆಗೆ ತೆರಳಿದ್ದರು.

    ಈ ವೇಳೆ ಆಕೆಯ ಪೋಷಕರು ಮೆಡಿಲೆಟ್ ವಿರುದ್ಧ ನಂದ್ಯಾಳ್ ತಾಲೂಕ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡುವುದಾಗಿ ದೂರು ನೀಡಿದ್ದಾರೆ. ಈ ವೇಳೆ ಪತ್ನಿ ಮಕ್ಕಳ ಮಾರಾಟ ಮಾಡಲು ತಯಾರಿ ನಡೆಸಿರುವ ಪ್ಲಾನ್ ಬೆಳಕಿಗೆ ಬಂದಿದೆ.

    ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಾರಾಟ ಮಾಡಿದ ಕುರಿತು ದೂರೊಂದು ಬಂದಿತ್ತು. ಆದ್ರೆ ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರಾಕರಿಸಿದ್ದೇವೆ. ಯಾಕಂದ್ರೆ ಮೆಡ್ಡಿಲೆಟ್ ಬುಡಗ ಜಂಗಲು ಸಮುದಾಯಕ್ಕೆ ಸೇರಿದವನಾಗಿದ್ದು, ಅಲ್ಲಿ ಪತ್ನಿಯರ ಖರೀದಿ ಸಾಮಾನ್ಯ ಅಂತ ಸುಮ್ಮನಾದ್ವಿ. ಆದ್ರೆ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಮೇಶ್ ಬಾಬು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಬುಡಗ ಜಂಗಲು ಸಮುದಾಯದಲ್ಲಿ ಪತಿಯೊಬ್ಬ ಮೊದಲು ತನ್ನ ಪತ್ನಿಯನ್ನು ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆತ ಯಾರಿಗೂ ಗೊತ್ತಾಗದಂತೆ ತನ್ನ ಕುಟುಂಬವನ್ನೇ ಮಾರಾಟ ಮಾಡಲು ತಯಾರಿ ನಡೆಸಿರುವುದು ತಿಳಿದುಬಂತು ಎಂದು ಐಸಿಡಿಎಸ್(Integrated Child Development Services)ಯ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಮಕ್ಕಳನ್ನು ರಕ್ಷಿಸಲಾಗಿದೆ ಅಂತ ಅವರು ಹೇಳಿದ್ದಾರೆ.

  • ದೆವ್ವದ ಭಯ ಹೋಗಿಸಲು ಸ್ಮಶಾನದಲ್ಲೇ ಮಲಗಿದ ಶಾಸಕ!

    ದೆವ್ವದ ಭಯ ಹೋಗಿಸಲು ಸ್ಮಶಾನದಲ್ಲೇ ಮಲಗಿದ ಶಾಸಕ!

    ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪಲಕೋಳೆಯ ಜನರಲ್ಲಿ ದೆವ್ವದ ಭಯ ಹೋಗಿಸಲು ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡುರವರು ಸ್ಮಶಾನದಲ್ಲೇ ಮಲಗಿದ್ದಾರೆ.

    ಪಶ್ಚಿಮ ಗೋದಾವರಿಯ ಪಲಕೋಳೆ ಎಂಬಲ್ಲಿರುವ ಸ್ಮಶಾನದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ತೆಲಂಗಾಣ ಸರ್ಕಾರ 3 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಹೀಗಾಗಿ ಸ್ಮಶಾನದಲ್ಲಿ ಅಭಿವೃದ್ಧಿ ಹಾಗೂ ಕಟ್ಟಡ ನಿರ್ಮಾಣ ಕಾರ್ಯವನ್ನು ಶಾಸಕ ನಾಯ್ಡುರವರು ಹಮ್ಮಿಕೊಂಡಿದ್ದರು. ಆದರೆ ಯಾವೊಬ್ಬ ಊರಿನವರು ಕಾಮಗಾರಿಗೆ ಬರಲು ಸಿದ್ಧರಿರಲಿಲ್ಲ. ರುದ್ರಭೂಮಿಯಲ್ಲಿ ದಿನನಿತ್ಯ ಹೆಣ ಸುಡುತ್ತಾರೆ, ಅಲ್ಲಿ ಭೂತ ಪ್ರೇತಗಳು ಇವೆ ಎಂಬ ಭಯದಿಂದ ದೂರ ಸರಿದಿದ್ದರು.

    ಜನರಲ್ಲಿದ್ದ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡುರವರು ಸ್ಮಶಾನದಲ್ಲೇ ಮಲಗುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಜೂನ್ 22ರಿಂದ ಮೂರು ದಿನಗಳ ಕಾಲ ಸ್ಮಶಾನದಲ್ಲೇ ಫೋಲ್ಡಿಂಗ್ ಕಾಟ್ ಮತ್ತು ಸೊಳ್ಳೆ ಪರದೆ ಸಹಾಯದಿಂದ ಮಲಗಿದ್ದಾರೆ. ನಿರಂತರವಾಗಿ ಮೂರು ದಿನ ಸ್ಮಶಾನದಲ್ಲೇ ಬೀಡುಬಿಟ್ಟಿದ್ದ ಶಾಸಕರು ಜನರಿಗೆ, ಸ್ಮಶಾನದ ಒಳಗಾಗಲೀ ಅಥವಾ ಹೊರಗಾಗಲೀ ಯಾವುದೇ ಭೂತ-ಪ್ರೇತಗಳಿಲ್ಲ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಶಾಸಕರ ಧೈರ್ಯಕ್ಕೆ ಮೆಚ್ಚಿದ ಊರಿನವರು, ಯಾವುದೇ ಭೂತ-ಪ್ರೇತಗಳು ಇಲ್ಲವೆಂದು ತಿಳಿದು, ಕಾಮಗಾರಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರು ಶಾಸಕ ನಿಮ್ಮಲ ರಾಮ ನಾಯ್ಡುರವರ ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮುಸ್ಲಿಮರು ಮುಸ್ಲಿಮರಿಗೆ ಮತ ಹಾಕ್ಬೇಕು: ಅಸಾದುದ್ದಿನ್ ಓವೈಸಿ

    ಮುಸ್ಲಿಮರು ಮುಸ್ಲಿಮರಿಗೆ ಮತ ಹಾಕ್ಬೇಕು: ಅಸಾದುದ್ದಿನ್ ಓವೈಸಿ

    ಹೈದರಾಬಾದ್: ಮುಸ್ಲಿಮ್ ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ, ಹೈದರಬಾದಿನ ಸಂಸದ ಅಸಾದುದ್ದಿನ್ ಓವೈಸಿ ಹೇಳಿಕೆಯೊಂದನ್ನು ನೀಡಿದ್ದು ಈಗ ವಿವಾದಕ್ಕೆ ಗುರಿಯಾಗಿದೆ.

    ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸಮುದಾಯದ ಸದಸ್ಯರಿಗೆ ಒತ್ತಾಯ ಮಾಡಿದ್ದಾರೆ.

    ಹಪೂರ್ ನಲ್ಲಿ ನಡೆದ ಕಾಸಿಂ ಹತ್ಯೆ ನಮ್ಮನ್ನು ಚಿಂತೆಗೀಡುಮಾಡಿದೆ. ಆದರೆ ನಾನು ನಿಮಗೆ ಈ ವಿಚಾರಕ್ಕೆ ಕಣ್ಣೀರು ಸುರಿಸಿ ಎಂದು ಹೇಳುತ್ತಿಲ್ಲ. ಆದರೆ ನಿಮ್ಮ ಆತ್ಮಸಾಕ್ಷಿ ಅನುಗುಣವಾಗಿ ನಡೆಯುವಂತೆ ಎಚ್ಚರಿಸುತ್ತಿದ್ದೇನೆ. ಜಾತ್ಯಾತೀತತೆಯ ಕುರಿತು ಮಾತನಾಡುತ್ತಿರುವ ಜನರು ದೊಡ್ಡ ಡಕಾಯಿತರು ಮತ್ತು ಅವಕಾಶವಾದಿಗಳಾಗಿದ್ದಾರೆ. ಅವರು ಮುಸ್ಲಿಮರನ್ನು 70 ವರ್ಷಗಳಿಂದ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ನಮಗೆ ಬೆದರಿಕೆ ಹಾಕಿ ನಮ್ಮನ್ನು ಸುಮ್ಮನಿರುವಂತೆ ಮಾಡಿದ್ದಾರೆ ಎಂದು ದೂರಿದರು.

    ಈಗ ಮುಸ್ಲಿಮರು ಅವರ ಹಕ್ಕಿಗಾಗಿ ಹೋರಾಡಬೇಕಿದೆ. ನೀವು ಜ್ಯಾತ್ಯಾತೀತೆಯನ್ನು ಬದುಕಿಸಬೇಕೆಂದಿದ್ದರೆ ನಿಮಗಾಗಿ ಹೋರಾಡಿ. ಅದನ್ನು ತಿಳಿಯಲು ರಾಜಕೀಯ ಶಕ್ತಿಯಾಗಿ ಮುಸ್ಲಿಮ್ ನಾಯಕರು ಗೆಲ್ಲುವಂತೆ ಮಾಡಿ ಎಂದಿದ್ದಾರೆ.

    ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಓವೈಸಿ ಹಪೂರ್ ಘಟನೆ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳನ್ನ ಬಳಸಿದ್ದಾರೆ. ಅಲ್ಲದೇ ಎಷ್ಟೋ ಮುಸ್ಲಿರನ್ನು ಬಂಧಿಸಲಾಗಿದೆ. ಇದೇನಾ ನಿಮ್ಮ ಸಬ್ ಕಿ ಸಾಥ್, ಸಬ್ ಕಿ ವಿಕಾಸ್ ಎಂದು ಮೋದಿಯವರ ವಿರುದ್ಧ ಹರಿಹಾಯ್ದಿದರು.

    ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಹಿಂದೂ ಮತ ಬ್ಯಾಂಕ್ ಗಾಗಿ ಹಾತೊರೆಯುತ್ತಿವೆ. ಆದರೆ ಮುಸ್ಲಿಂರನ್ನು ಮತಬ್ಯಾಂಕ್ ಎಂದು ಹೇಳುತ್ತ ಎರಡೂ ಪಕ್ಷಗಳು ವಂಚಿಸುತ್ತಿವೆ ಎಂದು ದೂರಿದರು.

    ಉತ್ತರಪ್ರದೇಶದ ಹಪೂರ್ ದಲ್ಲಿ ಹಸು ಕಳ್ಳಸಾಗಾಣಿಗೆ ಶಂಕೆಯ ಹಿನ್ನೆಲೆಯಲ್ಲಿ ಗುಂಪೊಂದು ಕಾಸೀಂ(38) ಹತ್ಯೆಗೈದರೆ, ಶಾಮಿಯುದ್ದೀನ್(65) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.

  • ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

    ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

    ಹೈದರಾಬಾದ್: ಬಾಲಿವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ಅವರ ಏಕೈಕ ಪುತ್ರಿ ಆರಾಧ್ಯ ಮುಂದೊಂದು ದಿನ ಪ್ರಧಾನಿಯಾಗ್ತಾಳೆ ಅಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಡಿ. ಜ್ಞಾನೇಶ್ವರ್ ಅವರು ಭವಿಷ್ಯ ನುಡಿದ ಜ್ಯೋತಿಷಿಯಾಗಿದ್ದು, ಆರಾಧ್ಯಾ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಅಂತ ಹೇಳಿದ್ದಾರೆ. ಮುನ್ನೋಟ 2018 ಎನ್ನುವ ವಿಚಾರದ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿ ಜ್ಯೋತಿಷಿ ಡಿ. ಜ್ಞಾನೇಶ್ವರ್ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಆರಾಧ್ಯ ತನ್ನ ಹೆಸರನ್ನು ರೋಹಿಣಿ ಎಂದು ಬದಲಿಸಿಕೊಂಡರೆ ಅವಳು ದೇಶದ ಪ್ರಧಾನ ಮಂತ್ರಿ ಆಗಬಹುದು ಎಂದು ಸಲಹೆ ನೀಡಿದ್ರು.

    ನಟರಾದ ಚಿರಂಜೀವಿ ಮತ್ತು ರಜನಿಕಾಂತ್ ಅವರು ರಾಜಕೀಯಕ್ಕೆ ಬರುತ್ತಾರೆ. 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದರು.

    ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರವನ್ನು ಏರಲಿದ್ದಾರೆ. ಮುಂದೆ ತಮಿಳುನಾಡಿನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ರಜನಿಕಾಂತ್ ಪಕ್ಷ ವಿಜಯ ಸಾಧಿಸುವುದರೊಂದಿಗೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯ ಯುದ್ಧ ನಡೆಯಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮಾಲೀಕ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮದುವೆ 2019ರಲ್ಲಿ ನಡೆದರೆ ಉತ್ತಮ ಎನ್ನುವ ಸಲಹೆಯನ್ನು ನೀಡಿದ್ದಾರೆ.

  • ಆಳವಾದ ಹಳ್ಳಕ್ಕೆ ಉರುಳಿದ ಟ್ರ್ಯಾಕ್ಟರ್-15 ಸಾವು, 10 ಜನ ಗಂಭೀರ

    ಆಳವಾದ ಹಳ್ಳಕ್ಕೆ ಉರುಳಿದ ಟ್ರ್ಯಾಕ್ಟರ್-15 ಸಾವು, 10 ಜನ ಗಂಭೀರ

    ಹೈದರಾಬಾದ್: ಆಳವಾದ ಹಳ್ಳಕ್ಕೆ ಟ್ರ್ಯಾಕ್ಟರ್ ಉರುಳಿಬಿದ್ದ ಪರಿಣಾಮ 15 ಮಂದಿ ಸಾವನ್ನಪ್ಪಿ, 10 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಯಡದ್ರಿ ಭುವನಗಿರಿ ಜಿಲ್ಲೆಯ ವಲಿಗೊಂಡ ಗ್ರಾಮದ ಬಳಿ ಸಂಭವಿಸಿದೆ.

    ಮೃತರು ವೇಮುಲಕೊಂಡ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಹತ್ತಿ ಬಿಡಿಸುವ ಕೆಲಸದ ನಿಮಿತ್ತ ದಿನಗೂಲಿ ಕಾರ್ಮಿಕರು ಲಕ್ಷ್ಮೀಪುರಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

    ಏನಿದು ಘಟನೆ?
    ಭಾನುವಾರ ಬೆಳಗ್ಗೆ ಕೂಲಿ ಕೆಲಸದ ನಿಮಿತ್ತ ವೇಮುಲಕೊಂಡ ಗ್ರಾಮದಿಂದ ಒಟ್ಟು 25 ಮಂದಿ ಟ್ರ್ಯಾಕ್ಟರ್ ನಲ್ಲಿ ಲಕ್ಷ್ಮೀಪುರಕ್ಕೆ ಪ್ರಯಾಣ ಬೆಳಸಿದ್ದರು. ಈ ವೇಳೆ ವಲಿಗೊಂಡ ಎಂಬಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಿದ್ದ ಹಳ್ಳಕ್ಕೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಸ್ಥಳದಲ್ಲೇ 4 ವರ್ಷದ ಬಾಲಕ ಸೇರಿದಂತೆ 15 ಮಂದಿ ಮೃತಪಟ್ಟು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

    ಘಟನೆ ತಿಳಿಯುತ್ತಿದ್ದಂತೆ ಹತ್ತಿರದ ವೇಮುಲಗೊಂಡ ಪೊಲೀಸರು ಮತ್ತು ರಕ್ಷಣಾ ತಂಡಗಳ ಆಗಮಿಸಿ ರಕ್ಷಣಾ ಕಾರ್ಯಚರಣೆ ನಡೆಸಿದ್ದು, ಮೃತ ದೇಹಗಳನ್ನು ಹಳ್ಳದಿಂದ ಹೊರಕ್ಕೆ ತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡ 10 ಮಂದಿಯನ್ನು ರಾಮನಾಥಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯನ್ನು ವೇಮುಲಗೊಂಡ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ವೆಮುಲಗೊಂಡ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಂ.ಡಿ. ಇದ್ರಿಸ್ ಅಲಿ, ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್ ನಲ್ಲಿದ್ದ 25 ಮಂದಿಯೂ ನೀರು ಪಾಲಗಿದ್ದು, ಹಳ್ಳದಲ್ಲಿ ಮುಳುಗಿ ಕೆಲವರು ಮೃತಪಟ್ಟಿದ್ದರೆ ಟ್ರ್ಯಾಕ್ಟರ್ ಮಗುಚಿ ಇನ್ನುಳಿದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಚಾಲಕ ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದ್ದಾರೆ.

    ಘಟನೆ ಸಂಬಂಧ ವೇಮುಗೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಿಕ್ ನಿಕ್ ಹೋದ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಜಲಸಮಾಧಿ!

    ಪಿಕ್ ನಿಕ್ ಹೋದ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಜಲಸಮಾಧಿ!

    ಅಮರಾವತಿ: ಮೋಜಿಗಾಗಿ ಗೆಳೆಯರೆಲ್ಲ ಸೇರಿ ಪಿಕ್ ನಿಕ್ ಗೆ ತೆರಳಿದ್ದ ವೇಳೆ ಪವಿತ್ರ ಸಂಗಮದಲ್ಲಿ ನೀರುಪಾಲಾಗಿದ್ದ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.

    ಭಾರತೀಯ ನೇವಿ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳು ಕಾರ್ಯಾಚರಣೆ ನಡೆಸಿ, ಮೃತ ದೇಹಳನ್ನು ಹೊರತೆಗೆದಿದ್ದಾರೆ ಎಂದು ಆಂಧ್ರಪ್ರದೇಶ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

    ಈ ವಿದ್ಯಾರ್ಥಿಗಳು ಕೃಷ್ಣಾ ಜಿಲ್ಲೆಯ ಕಂಚಿಕಚರ್ಲಾದ ಖಾಸಗಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಒದುತ್ತಿದ್ದರು. ರಂಗಾರೆಡ್ಡಿ ಜಿಲ್ಲೆಗೆ ಪಟ್ನಮಸ್‍ಸ ಪವಿತ್ರ ಸಂಗಮಕ್ಕೆ 5 ಮಂದಿ ಸ್ನೇಹಿತರು ಪಿಕ್‍ನಿಕ್ ಗೆ ಅಂತಾ ನದಿಗೆ ಬಂದಿದ್ದರು. ಅಲ್ಲಿ ಗೆಳೆಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ಯಾರಿಕೇಡ್ ದಾಟುವ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾನೆ.

    ಇದನ್ನು ನೋಡಿ ಆತನ ಮೂವರು ಸ್ನೇಹಿತರು ತಮ್ಮ ಸ್ನೇಹಿತನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಪರಿಸ್ಥಿತಿ ಪ್ರತಿಕೂಲವಾಗಿದ್ದು ಆತನ ಜೊತೆಗೆ ಮೂವರೂ ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ನೀರಿಗೆ ಹಾರದೇ ಅಲ್ಲಿಯೇ ಉಳಿದುಕೊಂಡಿದ್ದ.

    ತನ್ನ ಸ್ನೇಹಿತರೆಲ್ಲ ಈ ರೀತಿ ನೀರಿನಲ್ಲಿ ಮುಳುಗಿಹೋದ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದ್ದ. ಆಗ ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡದೊಂದಿಗೆ ಆಗಮಿಸಿದ ಪೊಲೀಸರು ಸುಮಾರು 100 ಜನ ಮುಳುಗು ತಜ್ಞರನ್ನು ಒಳಗೊಂಡು ಮುಳುಗಿ ಹೋದವರ ಪತ್ತೆಗೆ ತೀವೃ ಶೋಧ ನಡೆಸಿದ್ದರು.