ಹೈದರಾಬಾದ್/ಉಡುಪಿ: ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ತಾವೇ ಬಸ್ ಚಾಲಕರಾಗಿರುವ ಫೋಟೋ ಟ್ವೀಟ್ ಮಾಡಿ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಬಸ್ ಖರೀದಿಗೆ ಯೋಚನೆ ಮಾಡಿದ್ದ ರಾಜರಾಮ್ ಅವರು ತಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳ, ಶಿಕ್ಷಕರ ಸಹಾಯ ಪಡೆದು ಖರೀದಿ ಮಾಡಿದ್ದಾರೆ. ಖರೀದಿ ಏನೋ ಆಯ್ತು ಚಾಲಕನನನ್ನು ನೇಮಿಸಬೇಕಾದರೆ ಪ್ರತಿ ತಿಂಗಳು 7 ಸಾವಿರ ರೂ. ಸಂಬಳ ನೀಡಬೇಕಿತ್ತು. ಸದ್ಯದ ಆರ್ಥಿಕ ಸಂಪನ್ಮೂಲದಲ್ಲಿ ಇದು ಕಷ್ಟವಾದ ಕಾರಣ ರಾಜರಾಮ್ ಅವರೇ ಚಾಲಕರಾಗಿದ್ದಾರೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರು ಒಳಗೊಂಡಂತೆ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಲೆಯ ಅವಧಿ ಮುಕ್ತಾಯವಾಗುತ್ತಿದ್ದಂತೆ ರಾಜರಾಮ್ ತಾವೇ ಶಾಲಾ ಬಸ್ಸನ್ನು ಚಲಾಯಿಸಿಕೊಂಡು ಪ್ರತಿ ವಿದ್ಯಾರ್ಥಿಯನ್ನು ಮನೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಶಾಲೆಯ ಬಸ್ಸಿನ ಇಂಧನ ಹಾಗೂ ಇತರೇ ಖರ್ಚುಗಳನ್ನು ಅವರೇ ಭರಿಸುತ್ತಿದ್ದಾರೆ.

ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ಪಾಠ ಮಾಡುವುದರೊಂದಿಗೆ ದೈಹಿಕ ಶಿಕ್ಷಕರು ಸಹ ಆಗಿದ್ದಾರೆ. ಬೆಳಗ್ಗೆ 5.30ಕ್ಕೆ ಕಾರ್ಯ ಪ್ರವೃತ್ತರಾಗುವ ರಾಜರಾಮ್ 6 ಗಂಟೆಯಿಂದ ವಿದ್ಯಾರ್ಥಿಗಳಿಗೆ ಹೈಜಂಪ್, ಬ್ಯಾಡ್ಮಿಂಟನ್ ತರಬೇತಿ ನೀಡುತ್ತಾರೆ. ಬಳಿಕ 7.30ಕ್ಕೆ ಸಿದ್ಧರಾಗಿ 8 ಗಂಟೆಗೆ ಬಸ್ಸಿನ ಚಾಲಕನ ಸೀಟ್‍ನಲ್ಲಿ ಕೂತರೇ ಮತ್ತೆ ಮನೆಗೆ ಹಿಂದಿರುಗುವುದು ಸಂಜೆ 5.30ಕ್ಕೆ. ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ.
ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದು, ಶಾಲೆಯಲ್ಲಿ 90 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
